March 10, 2021

ದಾನದ ಮಹಿಮೆ

ಮಹಾಭಾರತದಲ್ಲಿನ ಉಪಕಥೆ  :- ದಾನದ ಮಹಿಮೆ

ಕುರುಕ್ಷೇತ್ರದ ಯುದ್ಧ ಮುಗಿದಿದೆ. ಯುಧಿಷ್ಠಿರನಿಗೆ ಬಹಳ ನೋವಾಗಿದೆ. ನಾನು ರಾಜನಾಗುವ ಸಲುವಾಗಿ ಎಷ್ಟೊಂದು ಜೀವಗಳನ್ನು ಬಲಿ ಕೊಟ್ಟಾಯಿತು. ಅವರು ನನ್ನ  ಕುಟುಂಬದವರು ಮತ್ತು ಬಂಧು-ಬಾಂಧವರು ಎಲ್ಲರನ್ನು ಕಳೆದುಕೊಂಡ  ನನಗೆ ಈ ರಾಜ್ಯ ಬೇಕಿತ್ತಾ? ಎಂದು ಅವನೂಳಗೆ ಪಾಪಪ್ರಜ್ಞೆ ಕಾಡತೊಡಗಿತು. ಆನಂತರ ಈ ವಿಷಯ ವೇದವ್ಯಾಸರಿಗೆ ತಿಳಿದು  ನಿನ್ನ ನೆಮ್ಮದಿಗಾಗಿ ಅಶ್ವಮೇಧಯಾಗವನ್ನು ಮಾಡು ಎಂದು ಯುಧಿಷ್ಠಿರನಿಗೆ ಸಲಹೆಯನ್ನು ಕೊಟ್ಟರು. 

ವೇದವ್ಯಾಸರ ಆಣತಿಯಂತೆ ಅಶ್ವಮೇಧ ಯಾಗಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿ ಪ್ರಪಂಚದಲ್ಲೇ ಹಿಂದೆ ಯಾರೂ ಮಾಡಿಲ್ಲ ಮುಂದೆ ಯಾರು ಮಾಡಲಾರದಷ್ಟು ಚೆನ್ನಾಗಿ ಯಾಗ ಮಾಡಿದ. ಯಥೇಚ್ಛವಾಗಿ ಧನಕನಕ, ವಸ್ತು, ವಾಹನಾದಿಗಳನ್ನು ದಾನ ಮಾಡಿದ. ಯಥೋಚಿತ ಸತ್ಕಾರ ಪಡೆದವರೆಲ್ಲ ಹಾಡಿ ಹೊಗಳಿದರು. ಬೇಕಾದಷ್ಟು ದಾನ ಪಡೆದ  ಬ್ರಾಹ್ಮಣರು ಇಂತಹ  ದಾನವನ್ನು ಯಾರೂ ಮಾಡಿರಲಿಲ್ಲ ನೀನು ಮಾಡಿದೆ  ಎಂದು ಕೊಂಡಾಡಿ ಅವನನ್ನು ಆಶೀರ್ವದಿಸಿದರು. ಅಶ್ವಮೇಧಯಾಗ ಯಶಸ್ವಿಯಾಗಿ ಬಂದವರೆಲ್ಲ ಸಂತೋಷವಾಗಿ ಹೊರಟರು. 

ಯುಧಿಷ್ಠೀರನು  ಯಾಗ ಶಾಲೆಯಲ್ಲಿ ನಿಶ್ಚಿಂತೆಯಾಗಿ  ಒಬ್ಬನೇ ಯೋಚಿಸುತ್ತಾ ಕುಳಿತಿದ್ದ. ಆ ಸಮಯಕ್ಕೆ ಎಲ್ಲಿಂದಲೋ ಮುಂಗುಸಿಯೊಂದು ಬಂದಿತು. ಅದರ ಅರ್ದ  ಮೈ  ಬಂಗಾರದಿಂದ ಹೊಳೆಯುತ್ತಿತ್ತು. ಸೀದಾ ಬಂದಿದ್ದೆ ಯಜ್ಞಕುಂಡದ ಬೂದಿಯಲ್ಲಿ ಬಿದ್ದು ಹೊರಳಾಡಿತು. ಹೊರಗೆ ಬಂದು ಮೈಯ್ಯನ್ನು ಕೊಡ್ಹವಿಕೊಂಡು ನೋಡುತ್ತಾ, ಥೂ ಇದೆಂಥಾ ಯಜ್ಞ , ಇದೆಂಥಾ ದಾನ, ಏನೂ ಉಪಯೋಗವಿಲ್ಲ ಎಂದು ಹೇಳಿತು. ಧರ್ಮರಾಜನಿಗೆ ಆಶ್ಚರ್ಯವಾಯಿತು. ಅಲ್ಲಾ ಯಾಗಕ್ಕೆ ಬಂದಿದ್ದ  ಋಷಿಮುನಿಗಳು, ವೇದ ಪಂಡಿತರು, ಬ್ರಾಹ್ಮಣರು ಎಲ್ಲರೂ ಎಷ್ಟು ಹೊಗಳಿ ಹೋಗಿದ್ದಾರೆ. ಇಂಥ ಯಜ್ಞ ಹಾಗೂ ದಾನವನ್ನು ಹಿಂದೆಂದೂ ಕಂಡಿರಲಿಲ್ಲ ಎಂದಿದ್ದಾರೆ ಹೀಗಿರುವಾಗ ಇದು ದಾನ ಅಲ್ಲವೇ? ಎಂದು ಕೇಳಿದಾಗ , ಮುಂಗುಸಿ "ಆ ಬಡ ಬ್ರಾಹ್ಮಣ ಮಾಡಿದ ದಾನದ ಮುಂದೆ ಇದೆಲ್ಲ ಯಾವ ಲೆಕ್ಕ" ಎಂದಿತು. 

ಧರ್ಮರಾಯ ಕುತೂಹಲದಿಂದ, ಯಾವ ಬ್ರಾಹ್ಮಣ, ಎಂತಹ ಯಜ್ಞ, ಅದ್ಯಾವ ದಾನ, ಎಂದು ಕೇಳಿದಾಗ, ಮುಂಗುಸಿಯು ಈ ಕಥೆ ಹೇಳಿತು. ಬಹಳ ವರ್ಷಗಳ ಹಿಂದೆ ಈ ಕುರುಕ್ಷೇತ್ರದಲ್ಲಿ  ಒಂದು ಬಡ ಬ್ರಾಹ್ಮಣನ ಸಂಸಾರವಿತ್ತು. ಬ್ರಾಹ್ಮಣ, ಅವನ ಹೆಂಡತಿ, ಮತ್ತು ಮಗ, ಸೊಸೆ ಇದ್ದುದರಲ್ಲಿ ಬಹಳ ತೃಪ್ತಿಯಿಂದ ಭಗವಂತನ ಮೇಲೆ ನಂಬಿಕೆ ಇಟ್ಟು ಸಾತ್ವಿಕ ಜೀವನ ನಡೆಸುತ್ತಿದ್ದರು, ಆ ಹೊತ್ತಿಗೆ ಎಲ್ಲಾ ಕಡೆಯೂ ಇನ್ನಿಲ್ಲದಂಥ ಬರಗಾಲ ಬಂದಿತು. ಇವರು ಮೊದಲೇ ಬಡವರು, ಈ ಬರಗಾಲದಿಂದ ಎರಡು ದಿನಕ್ಕೊಮ್ಮೆ ಕೂಡಾ ತಿನ್ನಲು ಕಷ್ಟ ಆಯಿತು. ಹಾಗೆಯೇ ಕಾಲ ಕಳೆಯುತ್ತಿದ್ದ ಬ್ರಾಹ್ಮಣನಿಗೆ ಆ ದಿನ ಒಂದು ಹಿಡಿ ಅಕ್ಕಿ ಭಿಕ್ಷೆ ಸಿಕ್ಕಿತು. ಅಷ್ಟೇ ಅಕ್ಕಿಯಲ್ಲಿ ಆತನ ಪತ್ನಿ ಅಡುಗೆ ಮಾಡಿ ಮನೆಯವರಿಗೆಲ್ಲ ಆಗುವಂತೆ ಬಾಳೆ ಎಲೆಯಲ್ಲಿ ನಾಲ್ಕು ತುತ್ತು ಸಮವಾಗಿ ಭಾಗ ಮಾಡಿ ಇಟ್ಟಳು. ಎಲ್ಲರೂ ಊಟಕ್ಕೆ ಕುಳಿತು ಇನ್ನೇನು ತುತ್ತನ್ನು ಬಾಯಿಗೆ ಇಟ್ಟುಕೊಳ್ಳಬೇಕು ಎನ್ನುವಷ್ಟರಲ್ಲಿ  ಹಸಿವಿನಿಂದ ಬಳಲಿದ್ದ ಅತಿಥಿಯೊಬ್ಬ ಬಂದು ಆಹಾರ ಬೇಡಿದನು. ಬ್ರಾಹ್ಮಣನು ತನ್ನ  ತುತ್ತನ್ನು ಅತಿಥಿಗೆ ಕೊಟ್ಟನು.ಅದನ್ನು ತಿಂದ ಅತಿಥಿ ಇನ್ನೂ ಹಸಿವಿಗಾಗಿ  ಹಪಹಪಿಸಿದನು.  ಆತನ ಪತ್ನಿಯು ತನ್ನ ತುತ್ತನ್ನು ಕೊಟ್ಟಳು. ಅದನ್ನು ತಿಂದು ಸಾಕಾಗಲಿಲ್ಲ. ಆಗ ಮಗನು ಮತ್ತು ಸೊಸೆಯು ತಮ್ಮ ತುತ್ತನ್ನು ಕೊಟ್ಟರು.  ಆದರೆ ಅತಿಥಿಗೆ ಇನ್ನೊ ಹಸಿವು ನೀಗಿರಲಿಲ್ಲ. ಆಗ, ಬ್ರಾಹ್ಮಣನು ಕೈಮುಗಿಯುತ್ತಾ, ಸ್ವಾಮಿ ನಮ್ಮಲ್ಲಿ ಇರುವ ಆಹಾರ ಇಷ್ಟೇ ಇನ್ನು ಕೊಡಲು ಸಾಧ್ಯವಿಲ್ಲ ಕ್ಷಮಿಸಿರಿ ಎಂದು ಬೇಡಿಕೊಂಡನು. ಬಂದ ಅತಿಥಿಯು ಸಾಕ್ಷಾತ್ ಯಮಧರ್ಮನೆ ಆಗಿದ್ದು ತನ್ನ ನಿಜ ರೂಪವನ್ನು ತೋರಿಸಿ ನಾನು ನಿಮ್ಮ ಅತಿಥಿ ಸತ್ಕಾರದಿಂದ ತೃಪ್ತನಾದೆ. ಇನ್ನು ನಿಮಗೆ ಈ ಬಡತನದ  ಬವಣೆ ಸಾಕು ನೀವು ನನ್ನ ಜೊತೆ ಸ್ವರ್ಗಕ್ಕೆ ಬನ್ನಿ ಎಂದು ಪುಷ್ಪಕ ವಿಮಾನದಲ್ಲಿ ಕರೆದೊಯ್ದುನು. 

ಅವರೆಲ್ಲ ಹೊರಟ ಸ್ವಲ್ಪಹೊತ್ತಿನಲ್ಲೇ ನಾನು ಪೊದೆಯೊಳಗಿಂದ ಹೊರಗೆ ಬಂದು ಅಳಿದುಳಿದ ಆಹಾರವಿದ್ದ ಬಾಳೆ ಎಲೆಯ ಮೇಲೆ ಹೊರಳಾಡಿದೆ. ಏನಾಶ್ಚರ್ಯ ನನ್ನ ದೇಹದ ಒಂದು ಭಾಗ ಬಂಗಾರದ ವರ್ಣ ಬಂದಿತು.
ಇನ್ನೊಂದು ಭಾಗಕ್ಕೆ ಆಹಾರ ಸಾಕಾಗದೆ, ಬಣ್ಣ ಬಂಗಾರವಾಗಲಿಲ್ಲ. ಉಳಿದ ಭಾಗವನ್ನು ಬಂಗಾರ ವರ್ಣ ಮಾಡಿಕೊಳ್ಳಬೇಕೆಂದು ಎಲ್ಲೆಲ್ಲಿ ಶ್ರೇಷ್ಠವಾದ ಯಾಗ, ದಾನ ಇರುತ್ತದೆಯೋ ಅಲ್ಲೆಲ್ಲಾ ಹೋಗಿ ಹೊರಳಾಡುತ್ತಿದೆ. ಆದರೆ ಎಲ್ಲಿಯೂ ಆಗಲಿಲ್ಲ. ನೀನು ಬಹಳ ಶ್ರೇಷ್ಠ ಯಜ್ಞ ಮಾಡಿ ಬೇಕಾದಷ್ಟು ದಾನ ಮಾಡಿದೆ  ಎಂದು ಎಲ್ಲರಿಂದಲೂ  ತಿಳಿಯಲ್ಪಟ್ಟಿತು. ಹಾಗಾಗಿ ಇಲ್ಲಿ ಬಂದು ಹೊರಳಾಡಿದೆ. ಆದರೆ ನೀನು ಮಾಡಿದ ದಾನ ಬ್ರಾಹ್ಮಣನ ದಾನಕ್ಕೆ ಸಮನಲ್ಲ  ಎಂದು ಹೇಳಿ ಮುಂಗುಸಿ ಹೊರಟುಹೋಯಿತು. 

ತಾನೇ ಶ್ರೇಷ್ಠ ಯಾಗ, ದಾನ ಮಾಡಿದೆ ಎಂಬ ಯುಧಿಷ್ಠಿರನ ನಂಬಿಕೆ ಸುಳ್ಳಾಯಿತು. ಹಾಗೆಯೇ, ಯಾವುದೇ ಪದಾರ್ಥ ನಮಗೆ ಹೆಚ್ಚಾಗಿದೆ ಎಂದು ದಾನ ಕೊಟ್ಟರೆ ಅದು ಶ್ರೇಷ್ಠ ದಾನವಾಗುವುದಿಲ್ಲ. ನಮಗಾಗಿ ಎಂದು  ತೆಗೆದಿರಿಸಿಕೊಂಡಿದ್ದನ್ನು ಸೂಕ್ತವಾದವರಿಗೆ ಕೊಟ್ಟರೆ ಅದು ಶ್ರೇಷ್ಠದಾನವಾಗುತ್ತದೆ. 

ಸದ್ವಿಚಾರ ಸಂಗ್ರಹ

No comments:

Post a Comment

If you have any doubts. please let me know...