" ಯತ್ರ ನಾರ್ಯಸ್ತು ಪೂಜ್ಯಂತೆ, ರಮಂತೇ ತತ್ರ ದೇವತಾ "
ನೀವು ಏನೇ ಅನ್ನಿ, ಇಂದಿಗೂ ಸ್ತ್ರೀ ಅಂದರೆ ಒಂದು ವಿಶೇಷ ಸ್ಥಾನ, ಗೌರವ, ಪೂಜ್ಯನೀಯ ಭಾವ ಮನದಲಿ. "ಯತ್ರ ನಾರ್ಯಸ್ತು ಪೂಜ್ಯಂತೆ, ರಮಂತೆ ತತ್ರ ದೇವತಾ, ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ." ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಸ್ತ್ರೀಯರನ್ನೆಲ್ಲಿ ಅವಮಾನಗೊಳಿಸಲಾಗುತ್ತದೋ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ ಎಂಬುದು ಈ ಶ್ಲೋಕದ ಅರ್ಥ. ಕಾರ್ಯೇಷು ದಾಸಿ, ಕರಣೇಷು ಮಂತ್ರಿ, ಪೂಜ್ಯೇಷು ಮಾತಾ, ಭೋಗೇಷು ಲಕ್ಷ್ಮೀ, ಶಯನೇಷು ರಂಭಾ, ಕ್ಷಮಯಾಧರಿತ್ರಿ ಎಂದು ಭಾರತೀಯ ಮಹಿಳೆಯನ್ನು ಅವಳ ಗುಣಗಳು/ಹೋಲಿಕೆಗಳಿಂದ ವರ್ಣಿಸಲಾಗುತ್ತಿದೆ ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ಮತ್ತು ಆಗಬೇಕಾದ ಮನ್ವಂತರಗಳನ್ನು ನೆನೆಯಲಾಗುತ್ತದೆ.
ಈ ದಿನದ ಹಿನ್ನಲೆ :
೧ನೇ ವಿಶ್ವ ಯುದ್ಧದ ನೀತಿಯನ್ನ ತಡೆಗಟ್ಟುವ ವೇಳೆಯಲ್ಲಿ ಶಾಂತಿ ಚಳುವಳಿಯ ಅಂಗವಾಗಿ ರಷ್ಯಾದ ಮಹಿಳೆಯರು ಫೆಬ್ರವರಿಯ ಕೊನೆಯವಾರದಲ್ಲಿ (ಇದು ಗ್ರೆಗೊರಿಯನ್ ಕ್ಯಾಲೆಂಡರಿನ ಪ್ರಕಾರ ಮಾರ್ಚ್ 8 ) ವಿಶ್ವ ಮಹಿಳಾ ದಿನವನ್ನ ಆಚರಿಸಿ ಗಮನಸೆಳೆದರು. ಅದರ ಪರಿಣಾಮವಾಗಿ ನಾಲ್ಕು ವಾರಗಳ ನಂತರ ಅಲ್ಲಿಯ ರಾಜ ಮನೆತನದ ಆಳ್ವಿಕೆಯನ್ನು ನಿಲ್ಲಿಸಿ ಮಹಿಳೆಯರಿಗೂ ಸಹ ಮತ ಚಲಾಯಿಸುವ ಅಧಿಕಾರವನ್ನ ಸರ್ಕಾರ ನೀಡಿತು.
ಅದೇ ಸಮಯದಲ್ಲಿ ಬ್ರಿಟಿಷ್ ಮಹಿಳೆ ಎಂಪಿಜೋನ್ ಸ್ವಾರ್ಟ್ಮಿಲ್ ಎಂಬಾಕೆ ಮಹಿಳಾ ಮತದಾನ ಹಕ್ಕಿಗಾಗಿ ಹೋರಾಟ ಆರಂಭಿಸಿ ಯಶ್ವಸಿಯಾದರು. ಅಲ್ಲದೆ ನ್ಯೂಜಿಲ್ಯಾಂಡ್ 1983ರ ಸೆಪ್ಟೆಂಬರ್ 19ರಂದು ಮತದಾನದ ಹಕ್ಕು ನೀಡಿದ ಮೊದಲ ದೇಶವಾಯಿತು. ಜರ್ಮನಿಯ ಕ್ಲಾರಾ ಝೆಟ್ಕಿನ್ (Clara Zetkin) ಮಹಿಳಾ ದಿನ ಆಚರಣೆ ಮಾಡಬೇಕೆಂದು ಕೋಪನ್ಹೆಗ್ ಸಮಾವೇಶದಲ್ಲಿ ಪ್ರತಿಪಾದಿಸಿದರು. ಇದೆಲ್ಲದರ ಪರಿಣಾಮವಾಗಿ ಪ್ರತಿ ವರ್ಷ ಮಾರ್ಚ್ 8 ರಂದು ವಿಶ್ವದೆಲ್ಲೆಡೆ ಅಂತರಾಷ್ಟ್ರೀಯ ಮಹಿಳೆಯರ ದಿನಾಚರಣೆ ಆಚರಿಸಲಾಗುತ್ತದೆ. ಅಂದಹಾಗೆ ಈ ಬಾರಿಯ ಅಂತರರಾಷ್ಟ್ರೀಯ ಮಹಿಳಾ ದಿನ ಘೋಷ ವಾಕ್ಯ "Equality for women is progress for all. "
ಪ್ರಚೀನತೆ ಮತ್ತು ಪ್ರಸ್ತುತತೆ:
ಭಾರತದ ಮಣ್ಣಿನ ಗುಣವು ಪ್ರತಿ ಸ್ತ್ರೀ ಯಲ್ಲಿ ದೇವರನ್ನು ಕಂಡಿದೆ. ಹೆಣ್ಣು ಯಾವ ಕ್ಷೇತ್ರದಲ್ಲೂ ತಾನು ಕಡಿಮೆಯಿಲ್ಲ ಎಂದು ಬದುಕುತಿದ್ದಾಳೆ.. ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ಮಲ್ಲಮ್ಮ, ಕೆಳದಿ ಚನ್ನಮ್ಮ ಹೀಗೆ ಹೇಳುತ್ತಾ ಹೋದರೆ ಸಾಲು ಸಾಲು ವೀರ ಮಹಿಳೆಯರು ನೂರಾರು ಮಹಿಳೆಯರು ನಮ್ಮ ನಾಡಿಗಾಗಿ ಅದರ ಉಳಿವಿಗಾಗಿ ವಿರೋದಿಗಳ ಎದುರು ವೀರಾ ವೇಷದಿಂದ ಹೋರಾಡಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ಇತಿಹಾಸ ಸೇರಿದ್ದಾರೆ..ಅಂದಿನ ಯುಗದಿಂದಲೂ ಇಂದಿನ ಯುಗದವರೆಗೂ ಮಹಿಳೆಯು ತನ್ನ ಸಾಧನೆಯನ್ನು ಮೆರೆದಿದ್ದಾಳೆ.. ತನ್ನ ಗಂಡನ ಪ್ರಾಣವನ್ನು ಮತ್ತೆ ಪಡೆದ ಸತಿ ಸಾವಿತ್ರಿ, ಗಂಡನಿಗಾಗಿ ಕಾಡು ಸೇರಿ ಅನೇಕ ಕಷ್ಟ ಅನುಭವಿಸಿ ಗೆದ್ದು ಬಂದ ಸೀತೆ, ರಾಮನ ಬರುವಿಕೆಗಾಗಿ ಎಷ್ಟೋ ವರ್ಷ ಕಾದು ತನ್ನ ಜನ್ಮ ಸಾರ್ಥಕ ಗೊಳಿಸಿದ ಶಬರಿ, ಪ್ರೀತಿಗೆ ಹೆಸರಾದ ರಾಧೇ, ಭಕ್ತಿಗೆ ಮನೆಮಾತದ ಮೀರಾ, ಸಕುಭಾಯಿ, ಅಕ್ಕಮಹಾದೇವಿ, ಹೀಗೆ ಎಷ್ಟೋ ಮಹಿಳೆಯರು ಸಾಧನೆಯ ತುತ್ತ ತುದಿಗೆರಿದ್ದರೆ..ಆಧುನಿಕ ಕಾಲಕ್ಕೆ ಬಂದಂತೆ ಮಹಿಳೆಯು ತನ್ನ ಜೀವನ ಶೈಲಿಯನ್ನು ಬದಲಿಸುತ್ತಾ, ಹೊರಗಿನ ಜಗತ್ತಲ್ಲಿ ತಾನು ಯಾವ ಪುರುಷನಿಗೂ ಕಮ್ಮಿ ಎಲ್ಲ ಎಂದು ಸಾಧಿಸಿ ತೋರಿದ್ದಾಳೆ..ಮಹಿಳೆಯು ರಾಜಕೀಯವಾಗಿ, ಕ್ರೀಡಾ ಕ್ಷೇತ್ರದಲ್ಲಿ, ಸಾಹಿತ್ಯದಲ್ಲಿ, ಸಂಗೀತ, ಸಾಂಸ್ಕೃತಿಕ ಕ್ಷೇತ್ರ, ವೈಜ್ಞಾನಿಕ, ರಕ್ಷಣಾ ವಿಭಾಗದಲ್ಲಿ ಹೀಗೆ ಮಹಿಳೆ ಪ್ರತಿ ಕ್ಷೇತ್ರದಲ್ಲೂ ತಾನು ಸೇವೆ ಸಲ್ಲಿಸುತ್ತಾ ಸಾಧನೆ ಮಾಡುತಿದ್ದಾಳೆ. ಉದಾಹರಣೆಗೆ ಮದರ್ ಥೇರೆಸಾ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್, ಸೈನಾ ನೆಹ್ವಾಲ್, ಮೀರಾ ಕುಮಾರ್, ಸಾನಿಯಾ ಮಿರ್ಜಾ, ಕಿರಣ್ ಬೇಡಿ, ಇಂದ್ರಾನೂಯಿ, ಕಿರಣ್ ಮಜುಂದಾರ್, ನಿರುಪಮಾ ರಾಯ್.. ಹೀಗೆ ಪಟ್ಟಿ ಸಾಗುತ್ತದೆ.. ಇವರೆಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರತಿಭೆ ಪ್ರದರ್ಶಿಸುತ್ತಿರುವುದು ಅರ್ಹತೆಯ ಬಲದಿಂದಲೇ ಅಲ್ಲವೇ? ಇಂಥವರು ಸಮಾಜಕ್ಕೆ ಸ್ಫೂರ್ತಿ.
ಸಮಾಜದ ಇನ್ನೊಂದು ಮುಖ :
ನಮ್ಮ ಹೆಣ್ಣುಮಕ್ಕಳನ್ನು " ಭಾರತೀಯ ನಾರಿ " ಎಂದು ಕರೆಯುವಲ್ಲೇ ಅವಳನ್ನು ಸಾಂಸ್ಕೃತಿಕ, ಸಾಮಾಜಿಕ ಕಟ್ಟುಪಾಡುಗಳ ಚೌಕಟ್ಟಿನಲ್ಲಿ ಬಂಧಿಸಿಡುತ್ತದೆ ಸಮಾಜ. ಸಮಾಜವೆಂದರೆ ಅಲ್ಲಿ ಪುರುಷರದ್ದೇ ಪ್ರಾಧಾನ್ಯ. ಮಹಿಳೆಯ ಪಾತ್ರ ಏನೇ ಇದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ! ಇಂದು ಹೆಣ್ಣು ಮಕ್ಕಳನ್ನು ನಮ್ಮದೆ ಸಮಾಜ ಅಮಾನವಿಯವಾಗಿ ನೋಡಿಕೋಳ್ಳುತ್ತಿದೆ. ಒಂದು ಕಡೆ ವೇತನ ತಾರತಮ್ಯವಾದರೆ ಇನ್ನೊಂದೆಡೆ ಮಹಿಳಾ ದೌರ್ಜನ್ಯ ಪ್ರಕರಣಗಳು.ಲಿಂಗ ತಾರತಮ್ಯ , ಅಮಾಯಕ ಬಾಲಕಿಯರ ಅತ್ಯಾಚಾರ, ಅಪ್ರಾಪ್ತ ವಯಸ್ಸಿನ ವಿವಾಹಗಳು, ವರದಕ್ಷಿಣೆ ಸಾವುಗಳು, ಹೆಣ್ಣು ಭ್ರೂಣ ಹತ್ಯೆ, ಕುಡುಕ ಗಂಡನ ಶೋಷಣೆ, ಆಸಿಡ್ ದಾಳಿಗಳು, ಅವಿದ್ಯಾವಂತರ ದೈಹಿಕ ಶೋಷಣೆಯಾದರೆ, ವಿದ್ಯಾವಂತರ ಮಾನಸಿಕ ಕಿರುಕುಳಗಳು.ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ.It is "a bed of thorns with posion". .ನಿಮ್ಮ ಹಾಗು ಕಂಡವರ ಹೆಣ್ಣು ಮಕ್ಕಳ ಮೇಲೆ ಆಗುವ ದೌರ್ಜನ್ಯ ಕಂಡು ಸುಮ್ಮನೆ ಕುಳಿತಿದೆ. ಛೀ..!. .Shame on you.
ಬೀchiಯವರು ತಮ್ಮ 'ಹುಚ್ಚು-ಹುರುಳು' ಕೃತಿಯಲ್ಲಿ 'ಹೆಂಡತಿಯನ್ನು ಯಾವಾಗ ಹೊಡೆಯಬೇಕು?' ಎಂಬ ಪ್ರಶ್ನೆಯೊಂದನ್ನು ರೂಪಿಸಿ ಬಹಳ ಚೆನ್ನಾಗಿ ವಿಡಂಬನೆ ಮಾಡಿದ್ದಾರೆ. - ಬಜಾರದಲಿ ಬೆಲ್ಲ ದೊರೆಯದಿದ್ದರೆ, ಆಫೀಸಿನಲ್ಲಿ ಆಟ ಸಾಗದಿದ್ದರೆ, ಮಲಗಿದಾಗ ತಿಗಣೆ ಕಡಿದರೆ, ಮಗನು ಶಾಲೆಯಲ್ಲಿ ನಪಾಸಾದರೆ, ಮಳೆಯಾಗಿ ರಸ್ತೆ ಕೆಸರಾದರೆ, ಸಾಲಕೊಟ್ಟವರು ಕಾಟ ಕೊಟ್ಟರೆ, ಗಂಡನೆಂಬ ಸಾಧು ಪ್ರಾಣಿಯು ತನ್ನ ಹೆಂಡತಿಯನ್ನಲ್ಲದೇ ಬೇರಾರನ್ನು ಹೊಡೆಯಲು ಸಾಧ್ಯ? ಯಾರೂ ನಿಷ್ಕಾರಣವಾಗಿ ಹೊಡೆಯುವುದಿಲ್ಲ. ತಾನು ಅವಳ ಗಂಡನೆಂಬುದೇ ಮೊದಲ ಕಾರಣ! ಶೋಷಣೆಯೆಂಬುದು ದೈಹಿಕ ಹಿಂಸೆಗೆ ಸೀಮಿತವಲ್ಲ. ಮಾನಸಿಕ ಪ್ರಹಾರವೂ ಶೋಷಣೆಯ ಒಂದು ರೂಪವೇ. ಕೆಲವೊಮ್ಮೆ ಅಭಿವ್ಯಕ್ತವಾಗುವುದಿಲ್ಲ, ಆಲೋಚನೆಗಳಲ್ಲಿರುತ್ತದೆ. ತೆರೆ ಮರೆಯ ಕೃತಿಗಳಲ್ಲಿರುತ್ತದೆ. ನೀವು ಮಹಿಳೆಯರನ್ನು ಸಂರಕ್ಷಿಸುವ ಅಗತ್ಯವಿಲ್ಲ, ರಕ್ಷಣೆಗಾಗಿ ಪರದಾಡುವಂತೆ ಮಾಡದಿದ್ದರೇ ಅದೇ ದೊಡ್ಡ ಸಂರಕ್ಷಣೆ. ಒಳಿತನ್ನು ಮಾಡಲಾಗದಿದ್ದರೆ, ಕೆಡುಕನ್ನಂತೂ ಮಾಡಬೇಡಿ.
ನಿಮ್ಮ ಬೆಂಬಲವಿಲ್ಲದೆ ನಾವು ತ್ರಣ ಸಮಾನರು :
ನಿಮ್ಮ ಪ್ರೀತಿ, ವಾತ್ಸಲ್ಯ, ತ್ಯಾಗ, ದೈರ್ಯ, ಸ್ವಾಭಿಮಾನಗಳಿಗೆ ನಿಮಗೆ ನೀವೇ ಸಾಟಿ ಕೇವಲ ನಮ್ಮ ಮನೆಯ ಹೆಣ್ಣು ಮಕ್ಕಳು ಮಾತ್ರ ಸುಖ, ಸಂತೋಷ, ನೆಮ್ಮದಿಯಿಂದ ಇರಬೇಕು ಎಂಬ ಭಾವನೆ ಬಿಟ್ಟು, ಈ ಜಗತ್ತಿನ ಪ್ರತಿಯೊಂದು ಹೆಣ್ಣುಮಗುವೂ ಸುಖ, ಸಂತೋಷ ಮತ್ತು ನೆಮ್ಮದಿಯಿಂದ ಇರುವೆಂತೆ ಈ ಸಮಾಜ, ಪರಿಸರ ನಡೆದುಕೊಂಡರೆ ಸಾಕು. ಇದು ನಾವು ನಿಮಗೆ ನೀಡುವ ಗೌರವ ಅಂತ ನನ್ನ ಭಾವನೆ. ಬಾಳಿನ ಪ್ರತಿಯೊಂದು ಹಂತದಲ್ಲಿ ನಿಮ್ಮ ಕಾಣಿಕೆ ಇಲ್ಲದಿದ್ದರೆ ನಾವು ಎನಾಗುತ್ತಿದ್ದೆವೋ ಎಂದು ಊಹಿಸಿಕೊಳ್ಳುವುದೂ ಕಷ್ಟ. ನಮಗೆ ದೊರೆತಿರುವ ವಿದ್ಯೆಯ ಸದುಪಯೋಗವಾಗಲಿ. ಸ್ತ್ರೀ ಎನ್ನುವುದು ಕೇವಲ ಭೋಗದ ವಸ್ತುವಲ್ಲ. ಸೂತ್ರದ ಬೊಂಬೆಯಲ್ಲ. ಸ್ತ್ರೀ ಎನ್ನುವುದೊಂದು ಶಕ್ತಿ. ಇದು ಕೇವಲ ಪುರಾಣ, ಇತಿಹಾಸಗಳು, ಕಥೆ ಕವನಗಳಲ್ಲಿರದೆ ನಮ್ಮ ಕೃತಿಗಳಲ್ಲಿರಲಿ. ಯಾರಾದರು ಕೇವಲ ಹೆಣ್ಣು ಎನ್ನುವ ಕಾರಣಕ್ಕೆ ಬೆಲೆ ಕೊಡುವುದರ ಬದಲಾಗಿ ನಮ್ಮ ವ್ಯಕ್ತಿತ್ವಕ್ಕೆ ಬೆಲೆ ಕೊಡುವಂತಾಗಲಿ.
ಪ್ರಕೃತಿ - ಪುರುಷ ಎಂಬ ಸೂತ್ರದ ಸಂಸ್ಕೃತಿ ನಮ್ಮದು. ಒಬ್ಬರಿಗೊಬ್ಬರು ಪೂರಕವೇ ಹೊರತು ಎದುರಾಳಿಗಳಲ್ಲ, ಇಬ್ಬರಿಗೂ ಅವರದೇ ಆದ ಉದ್ದೇಶಗಳಿವೆ, ಜವಾಬ್ದಾರಿಗಳಿವೆ, ಗುಣಗಳಿವೆ, ಸಾಮರ್ಥ್ಯಗಳಿವೆ. ಸಮಾಜದ ಪ್ರಗತಿಯಲ್ಲಿ ಇಬ್ಬರು ಸಹವರ್ತಿಗಳು. ಪರಸ್ಪರ ಗೌರವವಿರಲಿ. ಸಹಬಾಳ್ವೆಯಿರಲಿ. ಅರ್ಥಮಾಡಿಕೊಳ್ಳುವ, ಅರಿತುಕೊಳ್ಳುವ ವಿಶಾಲ ದೃಷ್ಟಿಕೋನ ನಮ್ಮದಾಗಲಿ. ಈ ಎಲ್ಲ ಚಿಂತನೆಗಳು ಕೇವಲ ಎರಡುದಿನದ ಕೆಸರೆರಚಾಟದ ಭಾಗಗಳಾಗದಿರಲಿ. ನಮ್ಮ ನಿತ್ಯ ಜೀವನದಲ್ಲಿ ಅಳವಡಿಕೆಯಾಗಲಿ. ತೋರಿಕೆಯಾಗದೆ, ಮನಪೂರ್ವಕವಾಗಿ ಆಚರಿಸ್ಪಡಲಿ.
"ಅಮ್ಮಾ.. ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು.. ಮಿಡುಕಾಡುತಿರುವೆ ನಾನು..."ಕವಿ ಬಿ.ಆರ್.ಲಕ್ಷ್ಮಣ್ ರಾವ್ ಅಮ್ಮನ ಬಗ್ಗೆ ಬರೆದ ಕವನ ನೆನಪಾಗುತ್ತಿದೆ .ಅಮ್ಮ ಅಂದ್ರೆ ಮಮತೆಯ ಕಡಲು, ನನ್ನ ಹೆಸರು ಪ್ರಫುಲ್ ಚಂದ್ರ ಎಸ್. ಬಿ. ಹುಟ್ಟುತ್ತಲೇ ಅಂಗವಿಕಲನಾಗಿ ಹುಟ್ಟಿದೆ. ಈ ಸಮಾಜ " ನಾನು ಹೋದ ಜನ್ಮದಲ್ಲಿ ಪಾಪ ಮಾಡಿದ್ದೇನೆ" ಅಂತು. ನನಗೆ ಎರಡು ಕಾಲುಗಳು ಇಲ್ಲ. ಮತ್ತೊಬ್ಬರ ಆಸರೆ ಇಲ್ಲದೆ ಬದುಕು ಅಸಹನೀಯ. ಕಾಲು ಹಚ್ಚಿ ತವುಳುತ್ತ ನಡೆಯಬೇಕಾದ ಅನಿವಾರ್ಯ ಕರ್ಮ ನನಗೆ . ಆದರೆ ಅಮ್ಮ ನನ್ನನ್ನು ಬೆಳಸಿದ ರೀತಿ ನನ್ನನ್ನು ನನ್ನ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಬಲ್ಲೆ. ಎದ್ದು ನಿಂತು ಬಟ್ಟೆ ಓಣ್ ಹಾಕಲು ಸಾದ್ಯವಾಗುವುದಿಲ್ಲವಸ್ಟೆ. ಆದರೆ ಅಮ್ಮನ ಸಹನೆ, ತಾಳ್ಮೆ, ನಾನು ಎಲ್ಲರಂತೆ ಬದುಕ ಬಲ್ಲೆ ಎಂದು ಕಲಿಸಿಕೊಟ್ಟಿತು. ಕಷ್ಟ ಪಟ್ಟು ನನ್ನನ್ನು ಓದಿಸಿದಳು.
ಬದುಕಿನ ಒಂದು ಹಂತದಲ್ಲಿ ಸಾವು ಮತ್ತು ಬದುಕು ಇವರೆಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಬದುಕನ್ನು ಬದುಕಿ ಸಾಧಿಸಿಸಬೇಕು ಎಂದು ಹೇಳಿ ತಾಳ್ಮೆ ಕಲಿಸಿದಳು ನನ್ನ ಅಮ್ಮ. ಆಕೆಯ ಪ್ರೇಮದಾಗರದ ಮುಂದೆ ನಾನು ಓರ್ವ ಅಂಗವಿಕಲ ಎನ್ನುವುದನ್ನು ಮರೆತು ಕಷ್ಟ ಪಟ್ಟು ಓದಿದೆ ತದನಂತರ ಸರ್ಕಾರಿ ನೌಕರಿ ಸಿಕ್ಕಿತು. ನೌಕರಿಗೆ ಪರರ ಊರಿಗೆ ಹೋಗಬೇಕಾದ ಸಂದರ್ಭದಲ್ಲಿ ನನ್ನ ಸ್ವಂತ ತಂಗಿ ಆಸರೆಯಾಗಿ ಬಂದಳು. ನೌಕರಿ ಸಿಗುವ ಮೊದಲು ಅಮ್ಮ ತೋರಿಸಿದ ಕಾಳಜಿ ಮತ್ತು ಸಹನೆಯನ್ನು ಈಗ ತಂಗಿ ತೋರಿಸುತ್ತಿದ್ದಾಳೆ. ದೇವರು ತಾನು ಎಲ್ಲಡೆ ಇರಲಾರನೆಂದು ಅಮ್ಮನನ್ನು ಭೂಮಿಗೆ ಕಳುಹಿಸಿದನು. ಎಂದು ಹಿರಿಯರು ಹೇಳಿದರು ಆದರೆ ನನ್ನ ವಿಷಯದಲ್ಲಿ ದೇವರು ತಾನು ಎಲ್ಲಡೆ ಇರಲಾರನೆಂದು ಅಮ್ಮನನ್ನು ಮತ್ತು ತಂಗಿಯನ್ನು ಭೂಮಿಗೆ ಕಳುಹಿಸಿದನು. ಇವರ ಋಣ ನನ್ನಿಂದ ತೀರಿಸಲು ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ . ನನ್ನ ಎಲ್ಲಾ ಯಶಸ್ಸಿನ ಹಿಂದೆ ನನ್ನ ಅಮ್ಮ ಮತ್ತು ತಂಗಿ ಇದ್ದಾರೆ. ಅಮ್ಮನಿಗೆ ಮಿಗಿಲಾದ ನಿಸ್ವಾರ್ಥ ಮನೋಭಾವ ಬೇರೆಲ್ಲಿದ್ದೀತು? ಅಂಥ ಅಮ್ಮನಿಗೆ... ಅಂಥ ಅಮ್ಮನ ಹೃದಯವಂತಿಕೆಯಿರುವ ತಂಗಿಗೂ ವಿಶ್ವ ಮಹಿಳಾ ದಿನವನ್ನು ಅರ್ಪಿಸುತ್ತೇನೆ.
No comments:
Post a Comment
If you have any doubts. please let me know...