March 18, 2021

ಕಲಿಯುಗಾಬ್ದ ನಮ್ಮದಲ್ಲವೇ?

 

ಕ್ರಿಸ್ತಶಕದ ೭೮ ವರ್ಷಗಳ ನಂತರ ಆರಂಭವಾಗುವ ಶಾಲಿವಾಹನ ಶಕವೇ ನಮಗಿಂದು ಪ್ರಾಚೀನವೆನ್ನಿಸುತ್ತದೆ. ಆದರೆ ಅದಕ್ಕೂ  ಮೊದಲಿನಿಂದಲೇ ನಾವು ಶಕವರ್ಷವನ್ನು ಗಣಿಸಬೇಕಾಗುತ್ತದೆ. ನಮ್ಮ ಯುಗದ ಆರಂಭದಿಂದ ನಾವು ಗಣಿಸಿದಾಗ ಈ ಶಾಲಿವಾಹನ ಶಕವರ್ಷದ ಸಮಸ್ಯೆಯೇ ಇರುವುದಿಲ್ಲ. ಅದೂ ಅಲ್ಲದೇ ಶ್ರಿ ಟಿ ಎಸ್ ನಾರಾಯಣ ಶಾಸ್ತ್ರಿ ಯವರು ತಮ್ಮ ಪುಸ್ತಕ ಏಜ್ ಆಫ್ ಶಂಕರದಲ್ಲಿ ಪುಟ ಸಂಖ್ಯೆ ೨೨೪ರ ಪೂಟ್ ನೋಟಿನಲ್ಲಿ ಈ ಶಾಲಿವಾಹನ ಶಕವರ್ಷ ಕ್ರಿ ಶ ೭೮ ಎನ್ನುವುದನ್ನೆ ತಿರಸ್ಕರಿಸುತ್ತಾರೆ. ಐಹೊಳೆಯ ರವಿಕೀರ್ತಿ ಶಾಸನವನ್ನು ನಾವು ಸರಿಯಾಗಿ ಅಧ್ಯಯನ ಮಾಡಿದರೆ ನಮ್ಮ ಶಕವರ್ಷ ಇನ್ನೂ ಪ್ರಾಚೀನಕ್ಕೆ ಹೋಗುತ್ತದೆ ಎನ್ನುತ್ತಾರೆ. ವರಾಹಮಿಹಿರರ ಕಾಲವನ್ನು ಶಕ ಪೂರ್ವದ ೧೨೩ ಎಂದು ನಂಬಿಕೊಳ್ಳುತ್ತೇವೆ. ಆದರೆ ಅದು ಇನ್ನೂ ಪ್ರಾಚೀನ ಎಂದರೆ ಪರ್ಷಿಯಾದ ಸೈರಸ್ ದ ಗ್ರೇಟ್ ಆಳುತ್ತಿದ್ದ ಕಾಲಕ್ಕೆ ಸರಿಯುತ್ತದೆ. ಅಂದರೆ ೫೫೦ರ ಸುಮಾರಿಗೆ ಎಂದು ಹೇಳಬಹುದು ಎನ್ನುತ್ತಾರೆ. 
 
ನಮ್ಮ ಶಕವರ್ಷ ಮಹಾಭಾರತ ಯುದ್ಧದ ನಂತರ ಆರಂಭವಾಗುವ ಕಲಿಯುಗಾಬ್ದವೇ ಆಗಿರಬೇಕಿತ್ತು.  ಅದನ್ನು ಶಾಸನಗಳ ಇತಿಹಾಸದಲ್ಲಿ ಮೊದಲಿಗೆ ಕಟ್ಟಿಕೊಡುವುದು ಬಾದಾಮಿ ಚಳುಕ್ಯರ ಎರಡನೇ ಪೊಲೆಕೇಶಿಯ ಕಾಲದ ರವಿಕೀರ್ತಿಯು ಐಹೊಳೆಯ ಮೇಗುಟಿಯ ಜಿನದೇವಾಲಯದ ಶಾಸನ. ಇಲ್ಲಿ ಕಲಿಯುಗಾಬ್ದವನ್ನು ನೆನಪಿಸಿಕೊಡಲಾಗಿದೆ. ಮಹಾಭಾರತ ಯುದ್ಧದ ಕಾಲವನ್ನು ನಮ್ಮೆದುರಿಗೆ ತಂದಿಡುತ್ತದೆ.
ತ್ರಿಂಶತ್ಸು ತ್ರಿಸಹಸ್ರೇಷು ಭಾರತಾದಾಹವಾದಿತಃ | ಸಪ್ತಾಬ್ದ ಶತಯುಕ್ತೇಷು ಶ(ಗ)ತೇಷ್ವಬ್ದೇಷು ಪಂಚಸು ||
ಪಂಚಾಶತ್ಸು ಕಲೌ ಕಾಲೇ ಷಟ್ಸು ಪಂಚಶತಾಸು ಚ | ಸಮಾಸು ಸಮತೀತಾಸು ಶಕಾನಾಮಪಿ ಭೂಭುಜಾಮ್ ||
ರವಿಕೀರ್ತಿ ಬಾದಾಮಿ ಚಲುಕ್ಯರ ಕಾಲದಲ್ಲಿದ್ದ ಅಪ್ರತಿಮ ಸಾಹಿತ್ಯ ಸಾಹಸಿಗ, ಮಹಾಕೂಟದ ಸ್ತಂಭ ಶಾಸನದ ನಂತರದ ಚಳುಕ್ಯರ ಸಾಹಿತ್ಯದ ರುಚಿಯನ್ನು ಕೊಡುವ ಸಾಲಿನಲ್ಲಿ ಇದು ಇದೆ. ಕಾಳಿದಾಸನ ಕಾವ್ಯದ ಸೊಬಗನ್ನು ಮತ್ತು ಉಲ್ಲೇಖವನ್ನು ಈ ಎರಡು ಶಾಸನಗಳಲ್ಲಿ ಗಮನಿಸಬಹುದು. ರಘುವಂಶದ ಕಾವ್ಯದ ಸಾಲು ಮಹಾಕೂಟದಲ್ಲಿದ್ದರೆ, ಐಹೊಳೆಯಲ್ಲಿ ತಾನು ಕಾಳಿದಾಸ ಅತ್ತು ಭಾರವಿಗೆ ಸಮನಾಗಿದ್ದೇನೆ ಎನ್ನುವ ರವಿಕೀರ್ತಿಯ ದೃಢವಿಶ್ವಾಸ ನೆಚ್ಚಲೇ ಬೇಕು. ಪ್ರತಿಯೊಂದು ಸಾಲುಗಳನ್ನು ಅತ್ಯಂತ ಮುತುವರ್ಜಿಯಿಂದ ಕವಿತಾ ಜಾಣ್ಮೆಯಿಂದ ಬರೆದ ಕವಿ ಈತ. ಈತನ ಕೆಲವು ಆಯ್ದ ಸಾಲುಗಳನ್ನು ನಾನಿಲ್ಲ್ಲಿ ಬರೆದಿದ್ದೆ. ಈತನ ಶಾಸನದ ೧೬ನೇ ಸಾಲಿನಲ್ಲಿನ ಈ ಶ್ಲೋಕ ಬಹಳ ಮಹತ್ವವನ್ನು ಪಡೆಯುತ್ತದೆ.

ಈ ಶಾಸನ ಎರಡು ಕಾಲವನ್ನು ಕೊಡುತ್ತದೆ. ಒಂದು ಮಹಾಭಾರತ ಯುದ್ಧ ನಂತರದ ೩೭೩೫ ವರ್ಷಗಳ ನಂತರದ್ದು.  ಇನ್ನೊಂದು ಶಕ ರಾಜರಿಂದ ೫೫೫ ವರ್ಷಗಳನ್ನು ಹೇಳಿದ್ದಾನೆ. ಅಂದರೆ ೩೭೩೫ ರಲ್ಲಿ ೫೫೫ ನ್ನು ಕಳೆದಾಗ ೩೧೮೦ ವರ್ಷ ಬರುತ್ತದೆ. ಅಂದರೆ ಮಹಾಭಾರತ ಯುದ್ಧವಾಗಿ ೩೧೮೦ವರ್ಷಗಳಾದ ನಂತರ ಈ ಶಾಸನ ಹಾಕಿಸಿದ್ದು ಎಂದು. ಇಲ್ಲಿ ಒಂದು ಪ್ರಮುಖ ಜಿಜ್ಞಾಸೆ ಎಂದರೆ ಕಾಲ ಗಣನೆಯನ್ನು ೩೧೩೯ರಲ್ಲಿ ನಡೆದ ಭಾರತ ಯುದ್ಧದಿಂದ ತೆಗೆದುಕೊಲ್ಳಬೇಕೋ ಅಥವಾ ಯುದ್ಧವಾಗಿ ೩೬-೩೭ನೇ ವರ್ಷವಾದ ೩೧೦೨ ರಿಂದಲೋ ಎನ್ನುವುದೇ ಪ್ರಮುಖವಾಗುತ್ತದೆ. ಆದರೆ ಈ ಶಾಸನವನ್ನು ನಾವು ತೆಗೆದುಕೊಂಡಾಗ ಶಕೆಯಕಾಲವನ್ನು ಸ್ಪಷ್ಟವಾಗಿ ನಮೂದಿಸುತ್ತಾ ೫೫೫ ವರ್ಷಕ್ಕೆ ೭೮(ಶಕ) ವರ್ಷಗಳನ್ನು ಸೇರಿಸಿದರೆ ಸಿಗುವ ಉತ್ತರ ೬೩೩ವರ್ಷಗಳು. ೬೩೩ ವರ್ಷಗಳನ್ನು ೩೭೩೫ರಲ್ಲಿ ಕಳೆದಾಗ ೩೧೦೨ಎನ್ನುವ ಉತ್ತರ ಸಿಗುತ್ತದೆ. ಅಂದರೆ ಕಲಿಯುಗಾಬ್ದ ಎನ್ನುವುದು ೩೧೦೨ರಲ್ಲಿ ಆರಂಭವಾಯಿತು. ಮಹಾಭಾರತ ಯುದ್ಧ ನಡೆದ ನಂತರ ೩೭ ವರ್ಷಗಳ ನಂತರ ಕಲಿಯುಗದ ಆರಂಭವಾಯಿತು. ಅದನ್ನೇ ಶಾಸನದಲ್ಲಿ ಹೇಳಲಾಗಿದೆ.

"ತ್ರಿಂಶತ್ಸು ತ್ರಿಸಹಸ್ರೇಷು ಭಾರತಾದಾಹವಾದಿತಃ" ಭಾರತ ಯುದ್ಧದ ನಂತರ ೩೧೩೦ (ಗ)ತೇಷ್ವಬ್ದೇಷು ಪಂಚಸು ಅದರಲ್ಲಿ ಐದು, ಅಂದರೆ ೩೧೩೫. ಕಲಿಯುಗದಲ್ಲಿ ಕಳೆದಿದೆ. "ಪಂಚಾಶತ್ಸು ಕಲೌ ಕಾಲೇ ಷಟ್ಸು ಪಂಚಶತಾಸು ಚ | ಸಮಾಸು ಸಮತೀತಾಸು ಶಕಾನಾಮಪಿ ಭೂಭುಜಾಮ್ ||" ೫೫೬ನೇ ಶಕಕಾಲವು ನಡೆಯುತ್ತಿದ್ದುದನ್ನು ಜ್ಞಾಪಿಸುತ್ತಿದೆ. ರವಿಕೀರ್ತಿಯು ಅತ್ಯಂತ ಸ್ಪಷ್ಟವಾಗಿ ಕಲಿಯುಗದ ೩೧೩೫ ವರ್ಷಗಳು ಗತಿಸಿರುವುದರ ಜೊತೆಗೆ ಮಹಾಭಾರತ ಯುದ್ಧದ ಕಾಲವನ್ನು ನಿರ್ಣಯಿಸುತ್ತಾನೆ. ಈ ದೇವಾಲಯ ನಿರ್ಮಾಣ ೬ನೇ ಶತಮಾನದಲ್ಲಾಗಿದ್ದು, ಇಂದಿಗೂ ಈ ಶಾಸನ ಅಧ್ಯಯನಕ್ಕೆ ಗೋಡೆಯಲ್ಲಿ ಲಭ್ಯವಿದೆ. ಇತಿಹಾಸದ ಕ್ರಮಬದ್ಧ ಅಧ್ಯಯನಕ್ಕೆ ಕಾಲಗಣನೆ ಅತ್ಯವಶ್ಯ. ವ್ಯವಸ್ಥಿತವಾದ ಸಾರ್ವತ್ರಿಕ ಕಾಲಗಣನೆಯ ಪದ್ಧತಿ ಪ್ರಾಚೀನ ಭಾರತದಲ್ಲಿ ಇದ್ದ ಬಗ್ಗೆ ಸಾಕಷ್ಟು ಆಧಾರಗಳು ಲಭಿಸುವುದಿಲ್ಲ. ಆದರೆ ಕೆಲವು ಕಾಲಗಣನೆಗಳು ಪರಿಮಿತ ಪ್ರದೇಶಗಳಲ್ಲಿ, ಮತ್ತು ವಲಯಗಳಲ್ಲಿ ಪ್ರಚಾರಕ್ಕೆ ಬಂದರೂ ಸಾರ್ವತ್ರಿಕವಾಗದೆ ಕೆಲ ಕಾಲಾನಂತರ ಮೂಲೆಗುಂಪಾದವು. ಅವುಗಳಿಂದ ಐತಿಹಾಸಿಕ ಕಾಲ ನಿರ್ಧಾರಕ್ಕೆ ಸ್ವಲ್ಪ ಮಾತ್ರ ಸಹಾಯ ದೊರಕಿದೆ. ಇವುಗಳನ್ನು ಶಕೆಯ ಮೂಲಕವೇ ಸೂಚಿಸಲಾಗುತ್ತಿತ್ತು. 
ಸೂರ್ಯನ ಉದಯಾಸ್ತಗಳ ಆವರ್ತನ, ಚಂದ್ರ ಬಿಂಬದ ವೈರೂಪ್ಯಗಳ ಅವರ್ತನ, ಹಾಗೇ ಋತುಗಳ ಮತ್ತು ಆಕಾಶದಲ್ಲಿನ ನಕ್ಷತ್ರಗಳ ಆವರ್ತನ; ಇವುಗಳು ಕ್ರಮವಾಗಿ ದಿನ, ತಿಂಗಳು ಹಾಗೂ ವರ್ಷಗಳೆಂಬ ಕಾಲಾವಧಿಯ ಗಣನೆಗೆ ನಾಂದಿಯಾಯಿತು. ಹೀಗೆ ರೂಪುಗೊಂಡಿದ್ದ ಕಾಲಗಣನೆ ಬಹು ಪ್ರಾಚೀನ ಕಾಲದಿಂದಲೇ ವಿಶ್ವದಾದ್ಯಂತ ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನ ರೀತಿ ಮತ್ತು ಹೆಸರುಗಳಲ್ಲಿ ಬಳಕೆಗೆ ಬಂದಿದೆ. ಸಾಮಾನ್ಯ ಶಕವರ್ಷ ಆರಂಭದ ಕಾಲಕ್ಕಾಗಲೇ ರಾಜನ ಆಡಳಿತ ವರ್ಷವನ್ನು ಗಣಿಸುವ ಪದ್ಧತಿ ಬಳಕೆಯಲ್ಲಿದ್ದ ಕುರಿತು ಅಶೋಕನ ಶಾಸನಗಳಿಂದ ತಿಳಿದು ಬರುತ್ತದೆ. ನನ್ನ ಪಟ್ಟಾಭಿಷೇಕವಾದ ೧೨ ವರ್ಷಗಳು ಆಗಿರುವಾಗ ಈ ಆಜ್ಞೆಯನ್ನು ಹೊರಡಿಸುತ್ತಿದ್ದೇನೆ ‘ದುವಾದಸ ವಸಾಭಿಸಿತೇನ ಮೇ ಇಯಂ ಆನಾಪಯಿತೆ’ ಎಂದು ಶಾಸನ ಹೇಳುತ್ತದೆ. ಅದೇ ರೀತಿ ರಾಜರು ತಮ್ಮ ಆಡಳಿತ ವರ್ಷವನ್ನು ಉಲ್ಲೇಖಿಸುವ ಪ್ರವೃತ್ತಿ ದಕ್ಷಿಣದ ಶಾತವಾಹನ, ಬಂಗಾಳದ ಪಾಲರು, ಚಂದ್ರರು; ಅಸ್ಸಾಮಿನ ಬ್ರಹ್ಮಪಾಲ ದೊರೆಗಳು; ದಕ್ಷಿಣ ಭಾರತದ ಪಲ್ಲವ, ಚೋಳ, ಪಾಂಡ್ಯ, ಹಾಗೇ ಕ್ರಿ.ಶ. ೬ನೆಯ ಶತಮಾನಕ್ಕಿಂತ ಹಿಂದಿನ ಕರ್ನಾಟಕದ ಪ್ರಸಿದ್ಧ ಅರಸು ಮನೆತನಗಳವರಾದ ತಲಕಾಡಿನ ಗಂಗ, ಬನವಾಸಿಯ ಕದಂಬ ಹಾಗೂ ಬಾದಾಮಿಯ ಚಲುಕ್ಯರ ಆಳ್ವಿಕೆಯ ಕಾಲದ ಶಾಸನಗಳಲ್ಲೂ ಕಂಡುಬರುತ್ತದೆ.
ಸಾತವಾಹನರ ಅಧೀನರಾಗಿದ್ದ ಚುಟುಸಾತಕರ್ಣಿಗಳ ಬನವಾಸಿಯ ನಾಗಶಿಲ್ಪದ ಶಾಸನದಲ್ಲಿ ‘ಸಂವತ್ಸರ ೧೦-೨ ಹೇಮಂತಾನ ಪಖೋ ೨ ದಿವಸ ೧ ಎಂಬ ಉಲ್ಲೇಖ ಸಿಗುತ್ತದೆ. ಇಲ್ಲಿ ತಿಳಿದು ಬರುವಂತೆ ಒಂದು ವರ್ಷಕ್ಕೆ ಮೂರು ಋತುಗಳು; ಅಂದರೆ ಬೇಸಿಗೆ, ಮಳೆಗಾಲ ಮತ್ತು ಚಳಿಗಾಲವನ್ನು ಗ್ರೀಷ್ಮ, ವರ್ಷ ಮತ್ತು ಹೇಮಂತ ಎಂದು, ಒಂದು ಋತುವಿಗೆ ಎಂಟು ಪಕ್ಷಗಳು, ಒಂದು ಪಕ್ಷಕ್ಕೆ ಹದಿನೈದು ದಿನಗಳು - ಎಂಬ ಗಣನೆ ಬಳಕೆಯಲ್ಲಿದ್ದುದು ತಿಳಿದು ಬರುತ್ತದೆ. ಶಾತವಾಹನರ ಅನಂತರ ದಕ್ಷ್ಷಿಣ ಭಾರತ ಎಲ್ಲಾ ಪ್ರದೇಶಗಳು ಪಲ್ಲವ, ಗಂಗ, ಕದಂಬ, ಚೋಳ, ಚೇರ ಪಾಂಡ್ಯರೇ ಮೊದಲಾದವರ ಆಳ್ವಿಕೆಗೆ ಒಳಪಟ್ಟಿತ್ತು. ಅವರ ಪ್ರಾಚೀನ ಶಾಸನಗಳಲ್ಲಿ ರಾಜನ ಆಡಳಿತ ವರ್ಷ ಗಣನೆಯೇ ವಿಶೇಷವಾಗಿ ಬಳಕೆಯಾಗಿರುವುದು ಕಂಡು ಬರುತ್ತದೆ. ಋತು, ಪಕ್ಷ ಮತ್ತು ದಿನಗಳ ಗಣನೆಯ ಜೊತೆಗೆ ಹಲವು ಸಂದರ್ಭಗಳಲ್ಲಿ ನಕ್ಷತ್ರ, ಮೂಹೂರ್ತಗಳ ಉಲ್ಲೇಖಗಳೂ ಬಂದಿವೆ.

ಕದಂಬ ಮೃಗೇಶವರ್ಮನ ಎರಡನೆಯ ವರ್ಷದ ತಾಮ್ರ ಶಾಸನದಲ್ಲಿ ‘ಶ್ರೀ ವಿಜಯ ಶಿವಮೃಗೇಶವರ್ಮ್ಮಣಃ ವಿಜಯವೈಜಯಿಕಃ ಸಂವತ್ಸರಃ ದ್ವಿತೀಯಃ ಹೇಮಂತ ಪಕ್ಷಃ ಚತುರ್ತ್ಥ ತಿಥಿರ್ದ್ದಶಮೀ’ ಎನ್ನುವುದಾಗಿ ಬರೆಯಲ್ಪಟ್ಟಿದೆ. 
ಗಂಗರ ಕಾಲದ ಹಿಂದೂಪುರ ತಾಲೂಕಿನ ಶಾಸನಕೋಟೆ ಗ್ರಾಮದ ತಾಮ್ರ ಶಾಸನದಲ್ಲಿ ‘ಪ್ರಥಮೇ ಸಂವತ್ಸರೇ ಫಾಲ್ಗುನ ಮಾಸೆ ಶುಕ್ಲಪಕ್ಷೇ ತಿಥೌದಶಮ್ಯಾಂ’ಎಂದು ಉಕ್ತವಾಗಿದೆ. ಗಂಗ ದುರ್ವಿನೀತನ ಉತ್ತನೂರು ತಾಮ್ರ ಶಾಸನದಲ್ಲಿ ‘....ವರ್ತಮಾನೇ ವಿಂಶತ್ತಮೇ ವಿಜಯ ಸಂವತ್ಸರೇ ಕಾರ್ತಿಕ ಮಾಸೆ ಪೌರ್ಣಮಾಸ್ಯಾಂ ತಿಥೌ ಕೃತ್ತಿಕ ನಕ್ಷತ್ರೇ ಅಭಿಜಿತ್ ಮೂಹೂರ್ತೆ’ ಎಂದು ಮೂಹೂರ್ತದ ಉಲ್ಲೇಖ ಕೂಡ ಬಂದಿದೆ. ಹಾಗೇ ಪಲ್ಲವರ ತಾಮ್ರಪಟ ಶಾಸನದಲ್ಲಿ ‘ಧರ್ಮ್ಮಮಹಾರಾಜಃ ಶ್ರೀಕಂದವರ್ಮ್ಮಣಃ ಪ್ರವರ್ದ್ಧಮಾನ ವಿಜಯರಾಜ್ಯ ದ್ವಿತೀಯ ಸಂವತ್ಸರೇ......’ (ಪಲ್ಲವ ಶ್ರೀಕಂದವರ್ಮನ ತಾಮ್ರಶಾಸನಗಳು; ಇತಿಹಾಸ ದರ್ಶನ, ಸಂಪುಟ ೨೫, ಪುಟ ೨೬-೨೮) ಎಂದು ಉಲ್ಲೇಖವಾಗಿದೆ.
ಆರನೆಯ ಶತಮಾನದ ನಂತರದ ದಕ್ಷಿಣ ಭಾರತದ, ಅಂದರೆ; ಕರ್ನಾಟಕದ ಬಾದಾಮಿ ಚಲುಕ್ಯರೇ ಮೊದಲಾದವರ ಶಾಸನಗಳಲ್ಲಿ ಈ ಶಕ ವರ್ಷಗಳ ಉಲ್ಲೇಖಗಳು ವಿಶೇಷವಾಗಿ ಕಾಣಿಸಿಕೊಂಡಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. ಬಾದಾಮಿ ಚಲುಕ್ಯರ ಮೊದಲನೇ ಪೊಲೆಕೇಶಿಯ ಶಾಸನದಲ್ಲಿ ‘ಶಕ ವರ್ಷ್ಷೇಷು ಚತುಶ್ಶತೇಷು ಪಞ ಷಷ್ಟಿಯುತೇಷು’ (೪೬೫=ಕ್ರಿ.ಶ.೫೪೩) ಎಂಬ ಉಲ್ಲೇಖ ಮೊದಲಿಗೆ ಸಿಗುತ್ತದೆ. ಇದು ಕರ್ನಾಟಕದಲ್ಲಿ ದೊರೆತಿರುವ ಪ್ರಾಚೀನವಾದ ಶಕವರ್ಷದ ಉಲ್ಲೇಖವಿರುವ ಶಾಸನವಾಗಿದೆ. ಈ ಶಕವರ್ಷ ಇದು ಕ್ರಿ.ಶ. ೭೮ ರಿಂದ ಆರಂಭವಾಗುತ್ತದೆ. 

ಚಲುಕ್ಯ ದೊರೆ ಮಂಗಲೀಶನ ಶಾಸನವೊಂದರಲ್ಲಿ ‘ಶ್ರೀಮಂಗಲೀಶ್ವರ ರಣವಿಕ್ರಾನ್ತಃ ಪ್ರವರ್ದ್ಧಮಾನ ರಾಜ್ಯ ಸಂವತ್ಸರೇ ದ್ವಾದಶೇ ಶಕನೃಪ ರಾಜ್ಯಾಭಿಷೇಕ ಸಂವತ್ಸರೇಷ್ಟೆತಿಕ್ರಾನ್ತೇಷು ಪಂಚಶತೇಷು’ ಎಂದು ತನ್ನ ಆಡಳಿತದ ೧೨ನೆಯ ವರ್ಷ ಹಾಗೂ ಶಕನೃಪತಿ ರಾಜ್ಯಾಭಿಷೇಕದ ೫೦೦ನೆಯ ವರ್ಷವನ್ನು ಉಲ್ಲೇಖಿಸಲಾಗಿದೆ. ಇದೇ ವಂಶದ ವಿನಯಾದಿತ್ಯ, ಕೀರ್ತಿವರ್ಮರ ಶಾಸನಗಳಲ್ಲೂ ಶಕವರ್ಷವನ್ನು ಬಳಸಿರುವುದು ಕಂಡುಬರುತ್ತದೆ, ‘ಶಾಲಿವಾಹನ ಶಕ ೧೧೧೦ರ ಉಲ್ಲೇಖ ಪಂಡರಾಪುರದ ಮರಾಠಿ ಶಾಸನವೊಂದರಲ್ಲಿ ಬಂದಿದ್ದು, ಇದೇ ಪ್ರಾಯಶಃ ‘ಶಾಲಿವಾಹನ ಶಕೆ’ ಎಂಬುದರ ಪ್ರಾಚೀನತಮ ಉಲ್ಲೇಖವಿದ್ದಂತೆ ತೋರುತ್ತದೆ.
ಶಕವರ್ಷವನ್ನು ಕರ್ನಾಟಕದ ಇನ್ನಿತರ ಪ್ರಸಿದ್ಧ ರಾಜಮನೆತನಗಳಾದ ರಾಷ್ಟ್ರಕೂಟ, ಕಲ್ಯಾಣದ ಚಾಳುಕ್ಯ, ಮತ್ತು ಅವರ ಮಾಂಡಲಿಕರಾಗಿದ್ದ ಕಳಚೂರ್ಯು, ಸೇಉಣ ಹಾಗೂ ಹೊಯ್ಸಳರು ವ್ಯಾಪಕವಾಗಿ ಬಳಸಿರುವುದು ಕಂಡುಬರುತ್ತದೆ. ಇಂದಿಗೂ ಭಾರತದಾದ್ಯಂತ ತಮ್ಮ ಪಾರಂಪರಿಕ ದೃಕ ಮತ್ತು ಸೂರ್ಯ ಸಿದ್ಧಾಂತ ಪಂಚಾಂಗಗಳಲ್ಲಿ ವಿಶೇಷವಾಗಿ ಬಳಕೆಗೊಳ್ಳುತ್ತಿರುವ ಶಕೆಯೆಂದರೆ, ‘ಶಾಲಿವಾಹನ ಶಕೆ’ಯೇ. 
ದಕ್ಷಿಣ ಭಾರತದ ಶಾಸನಗಳಲ್ಲಿ ಈ ‘ಶಾಲಿವಾಹನಶಕೆಯನ್ನು ಮಾತ್ರವಲ್ಲದೆ ‘ಕಲಿಯುಗ ಸಂವತ್ಸರ’, ‘ಕೊಲ್ಲಂ ಸಂವತ್ಸರ’, ‘ಚಾಳುಕ್ಯ ವಿಕ್ರಮ ವರ್ಷ’,‘ಪುದುವೈಪ್ಪು ಸಂವತ್ಸರ’, ‘ಹಿಜಿ’, ‘ಫಸ್ಲಿ’, ‘ಶೂಹೂರ್’, ‘ಮೌಲಾದಿ ಸಂವತ್ಸರ’ಗಳೂ ಶಾಸನಗಳಲ್ಲಿ ಕಂಡುಬರುತ್ತವೆ. ಈ ಸಂವತ್ಸರಗಳಲ್ಲಿ ಕೆಲವು ಚಾಂದ್ರಸೌರಮಾನ, ಸೌರಮಾನ ಹಾಗೂ ಚಾಂದ್ರಮಾನ ಪದ್ಧತಿಗಳಲ್ಲಿ ಗಣನೆ ಮಾಡುತ್ತಿರುವುದು ಕಂಡುಬರುತ್ತದೆ. ಈ ಪದ್ಧತಿಗಳ ಜೊತೆ ಜೊತೆಗೇ, ಬಾರ್ಹಸ್ಪತ್ಯ ಮಾನದ ಅರವತ್ತು ವರ್ಷ ಚಕ್ರದ ಸಂವತ್ಸರದ ಗಣನೆಯನ್ನು ನಿಯತವಾಗಿ ಬಳಸಿರುವುದು ಕೂಡ ಕಂಡುಬರುತ್ತದೆ. 

ತಿಂಗಳ ಗಣನೆಗೆ ಚಂದ್ರನ ಚಲನೆಯನ್ನೂ, ವರ್ಷದ ಗಣನೆಗೆ ಸೂರ್ಯನ ಚಲನೆಯನ್ನು ಸಮೀಕಣಗೊಳಿಸಿ ಬೇಸಿಗೆ, ಮಳೆ, ಚಳಿಗಾಲಗಳು ಎಂಬ ಋತುಮಾನಗಳಿಗೆ ಹೊಂದಾಣಿಕೆ ಯಾಗುವಂತೆ ರೂಪಿಸಿಕೊಂಡ ಪಂಚಾಂಗವೇ ಚಾಂದ್ರಸೌರಮಾನ ಪಂಚಾಂಗ.
ಬಾದಾಮಿ ಚಲುಕ್ಯರ ಕಾಲದಲ್ಲೇ ಕಲಿಯುಗ ಸಂವತ್ಸರದ ಉಲ್ಲೇಖ ಬಂದಿದೆ. ಮಹಾಭಾರತದ ಯುದ್ಧವು ಕ್ರಿ.ಪೂ. ೩೧೦೨ ರಲ್ಲಿ ನಡೆಯಿತು. ಆ ಯುದ್ಧದ ನಂತರ ಕಲಿಯುಗ ಪ್ರಾರಂಭವಾಯಿತು. ಅಂದರೆ ಮಹಾಭಾರತದ ಧರ್ಮರಾಯ (ಯುಧಿಷ್ಠಿರ)ನು ಪಟ್ಟಕ್ಕೆ ಬಂದ ಕಾಲ ಎಂಬ ಹೇಳಿಕೆಗಳ ಆಧಾರದ ಮೇಲೆ ಈ ಸಂವತ್ಸರದ ಗಣನೆ ನಿಂತಿದೆ. ಇದು ದಕ್ಷಿಣ ಭಾರತದ ಅನೇಕ ಶಾಸನಗಳಲ್ಲಿ ಕಾಣಿಸಿಕೊಂಡಿದೆ. ಬಹುತೇಕ ಸಂದರ್ಭಗಳಲ್ಲಿ ಶಕ(ಶಾಲಿವಾಹನ ಶಕ) ಇಲ್ಲವೆ ಇತರ ಸಂವತ್ಸರಗಳೊಂದಿಗೆ ಇದು ಬಳಕೆಯಾಗಿದೆ. ಇನ್ನು ರವಿಕೀರ್ತಿಯ ಶಾಸನದ ರೀತಿಯೇ ಕೋಲಾರ ಜಿಲ್ಲೆಯಲ್ಲಿನ ಶಾಸನವೊಂದರಲ್ಲಿ ‘ಸ್ವಸ್ತಿ ಕಲಿವರುಷ ೪೫೧೮ ಶಕಾಬ್ದ ೧೩೩೯ನೆಯ ಮೇಲೆ ಸಲ್ಲುವ ಹೇವಿಳಂಬಿ ಸಂವತ್ಸರದ ಆಷಾಢ ಶು ಸೋ.......’ ಎಂಬ ಉಲ್ಲೇಖ ಬಂದಿದೆ. ಇಲ್ಲಿ ಪಕ್ಷ ಮತ್ತು ವಾರಗಳನ್ನು ಸೂಚಿಸಲು ಶು. ಸೋ. ಎಂಬ ಸಂಕ್ಷೇಪಗಳನ್ನು ಕಾಣಬಹುದಾಗಿದೆ. ಈ ರೀತಿಯ ಸಂಕ್ಷೇಪಗಳ ಬಳಕೆ ಶಾಸನಗಳ ಕಾಲಗಣನಾ ಭಾಗದಲ್ಲಿ ಬಹು ಪ್ರಾಚೀನ ಕಾಲದಿಂದಲೇ ಬಳಕೆಗೊಂಡಿರುವುದನ್ನು ಕಾಣಬಹುದಾಗಿದೆ. 

#ಕಲಿಯುಗ_
ಸದ್ಯೋಜಾತರದ್ದು

No comments:

Post a Comment

If you have any doubts. please let me know...