ಬಹುಶಃ ಮಿಕ್ಕ ವಚನಕಾರರಲ್ಲಿ ಎಲ್ಲಿಯೂ ಶೈವ ಮತ್ತು ವೀರಶೈವ ಮತ ಸ್ವರೂಪಗಳ ಬಗೆಗೆ ಪ್ರಸ್ತಾಪವಿಲ್ಲ ಎಂದೆನಿಸುತ್ತದೆ.
ಆದಯ್ಯನ ಮತ ಯಾವುದು? ಎಂಬ ಪ್ರಶ್ನೆಗೆ ಉತ್ತರವನ್ನು ನಾವು ಆತನ ವಚನಗಳಿಂದಲೇ ಊಹಿಸಬಹುದಾಗಿದೆ.
ಆದಯ್ಯನು ಪುಲಿಗೆರೆಯ ಸುರಹೊನ್ನೆ ಬಸದಿಯಲ್ಲಿ ಸೌರಾಷ್ಟ್ರದ ಸೋಮೇಶನನ್ನು ಪ್ರತಿಷ್ಠಾಪಿಸಿದ್ದನ್ನು ಗಮನದಲ್ಲಿಟ್ಟುಕೊಂಡರೆ ಸ್ಥಾವರ ಲಿಂಗ ಆರಾಧಕನಾದ ಆದಯ್ಯನ ಮತ ಶೈವ ಎಂದು ನಿರ್ಧರಿಸಬಹುದು.
ವಚನಗಳಲ್ಲಿ ಒಂದೆಡೆ ಸ್ಥಾವರ ಲಿಂಗದ ವಿರೋಧತೆ ವ್ಯಕ್ತವಾಗಿದ್ದರೂ ಶೈವಮತದ ಸ್ವರೂಪವನ್ನು ಹೇಳುತ್ತಾ ಅದರ ಮೂಲಕ ವೀರಶೈವ ಮತ ಸ್ವರೂಪ ಮತ್ತು ಶ್ರೇಷ್ಠತೆಯನ್ನು ಎತ್ತಿ ಹಿಡಿದಿದ್ದಾನೆ.
ವೀರಶೈವ ಮತ ಉಗಮಗೊಂಡಿದ್ದೆ ಶೈವ ಮತದ ಮೂಲಕ ಎಂಬುದನ್ನು ಹಾಗೂ ಆದಯ್ಯನ ಮತವನ್ನು ನಾವು ಉಭಯ ಮತಗಳೆರಡರಲ್ಲಿಯೂ ಗುರುತಿಸಲು ಕಾರಣ ಆತನ ವಚನಗಳಲ್ಲಿ ವ್ಯಕ್ತವಾಗಿರುವ ಶೈವ- ವೀರಶೈವ ಮತಗಳ ಆಚರಣೆಯ ಬಗೆಗಿನ ಸುದೀರ್ಘ ವಾದ ವ್ಯಾಖ್ಯಾನ.
ವಚನಗಾರ ಆದಯ್ಯನು ಬಸವಪೂರ್ವ ಯುಗದಿಂದಲೂ ಜೀವಿಸಿದ್ಧ ಬಸವಣ್ಣನ ಹಿರಿಯ ಸಮಕಾಲೀನನಾಗಿ ಇಳಿವಯಸ್ಸಿನಲ್ಲಿ ವಚನಗಳು ಹಾಗೂ ಇತರೆ ಲಘು ಕೃತಿಗಳನ್ನು ರಚಿಸಿದ್ದಾನೆ. ಆತನನ್ನು ಕುರಿತು ಹರಿಹರ , ರಾಘವಾಂಕ, ಸಿದ್ಧನಂಜೇಶ ಮೊದಲಾದ ಕವಿಗಳು ಕಾವ್ಯಗಳನ್ನು ರಚಿಸಿದ್ದಾರೆ.
ಆತನ ವಚನಗಳಲ್ಲಿ ಹಾಗೂ ಅತನನ್ನು ಕುರಿತ ಕೃತಿಗಳಲ್ಲಿ ವೀರಶೈವಕ್ಕೆ ಸಂಬಂಧಿಸಿದ ಸಂಗತಿಗಳನ್ನು ಗ್ರಹಿಸಬಹುದಾಗಿದೆ.
ಪುಲಿಗೆರೆಯಲ್ಲಿ ಸೋಮನಾಥನ ಪ್ರತಿಷ್ಠಾಪನೆ ಮಾಡಿದ ಆದಯ್ಯನ ಹೆಸರು ವೀರಶೈವ ಧಾರ್ಮಿಕ ಚರಿತ್ರೆಯಲ್ಲಿ ಹಾಗೂ ವಚನಕಾರರ ಸಾಲಿನಲ್ಲಿ ಎದ್ದು ಕಾಣುವಂತಹದು.
ಆದಯ್ಯನು 405 ವಚನಗಳನ್ನು ರಚಿಸಿದ್ದಾನೆ.
ಆದಯ್ಯನನ್ನು ಕುರಿತು ಕಾವ್ಯ ಪುರಾಣಗಳಲ್ಲಿ ಸೌರಾಷ್ಟ್ರವು ಆದಯ್ಯನ ಜನ್ಮಗ್ರಾಮ ಎಂಬುದಾಗಿ ತಿಳಿದುಬಂದಿದೆ. ಆದಯ್ಯನನ್ನು ಕುರಿತು ಕಾವ್ಯಗಳಲ್ಲಿ
ಆದಯ್ಯ ಪದ್ಮಾವತಿಯರ ವಿವಾಹ ಪ್ರಸಂಗದ ನಂತರ ಆದಯ್ಯ ಮತ್ತು ಮಾವ ಪಾರಿಸ ಪಂಡಿತನ ಜೋತೆಯಲ್ಲಿ ಉಂಟಾದ ವಾದ-ವಿವಾದದಲ್ಲಿ ಸೌರಾಷ್ಟ್ರ ದ ಸೋಮೇಶನನ್ನು ಪುಲಿಗೆರೆಯ ಸುರಹೊನ್ನೆ ಬಸದಿಯಲ್ಲಿ ತಂದು ಪ್ರತಿಷ್ಠಾಪಿಸಿದ ಹೊರತು ಉಣ್ಣಲಾರ ಎಂಬ ಮಾವನ ಕಟಕಿನುಡಿಯನ್ನೇ ಪ್ರತಿಜ್ಞೆಯಾಗಿ ಸ್ವೀಕರಿಸಿ ಆದಯ್ಯನು ಕಾರ್ಯತತ್ಪರನಾಗುತ್ತಾನೆ.
ಆದಯ್ಯನು ಪುಲಗೆರಿಯ ಸುರಹೊನ್ನೆ ಬಸದಿಗೆ ಸೋಮೇಶನನ್ನು ಕರೆತರಲು ಸೌರಾಷ್ಟ್ರಕ್ಕೆ ಹೋದ ಎಂಬುದು ಇಲ್ಲಿ ವಿಧಿತವಾಗಿರುವ ಸಂಗತಿ.
ಸೋಮನಾಥ ಚಾರಿತ್ರದಲ್ಲಿ ಆದಯ್ಯನು ಸೌರಾಷ್ಟ್ರ ದ ಸೋಮೇಶ್ವರನನ್ನು ಕರೆತರಲು ಹೊರಟ ಪ್ರಯಾಣದ ವಿವರ ತ್ರಾಸದಾಯಕವಾಗಿತ್ತು ಎಂಬುದು ಕಾವ್ಯಗಳಿಂದ ವಿಧಿತವಾಗುತ್ತದೆ.
ಆದಯ್ಯನು ತನ್ನ ಪ್ರತಿಜ್ಞೆಯನ್ನು ನೇರವೇರಿಸಲು ಕಾರ್ಯತತ್ಪರನಾಗಿ ದಟ್ಟಡವಿಯಲ್ಲಿ ಏಕಾಂಗಿಯಾಗಿ ಹೊರಟಾಗ ಪಶುಯತೀಶ್ವರನನ್ನು ಭೇಟಿ ಮಾಡಿದ ಉಲ್ಲೇಖ ಕಂಡುಬರುತ್ತದೆ. ಈ ಸಂದರ್ಭದಲ್ಲಿ ಪಶುಯತೀಶ್ವರ ಹಾಗೂ ಆದಯ್ಯನ ನಡುವೆ ನಡೆಯುವ ಸಂಭಾಷಣೆಯಲ್ಲಿ ವೀರಶೈವ ಧರ್ಮದ ತಾತ್ವಿಕ ಅಂಶಗಳನ್ನು ಗ್ರಹಿಸಬಹುದಾಗಿದೆ.
ಯತಿಗಳು ಆದಯ್ಯನಿಗೆ ಪ್ರಶ್ನೆಮಾಡುತ್ತಾರೆ.
ಶಿವಲಿಂಗವನ್ನು ಸ್ಥಾಪಿಸುವ ಹವ್ಯಾಸವು ನಿನಗೇತಕೆ ಎಂದು ಕೇಳಿದುದಕ್ಕೆ ಆದಯ್ಯನು ಎನ್ನ ದೇಹಾಭಿಮಾನ ನಿಮಿತ್ತ ಮಾಡೆ ಎನ್ನ ಸಮಯಾಭಿಮಾನದ ನಿಮಿತ್ತ ಮಾಡುತಿದ್ದೇನೆ. ಈ ರೀತಿ ಮಾಡಿದರೆ ದೋಷವಿಲ್ಲ ಎನ್ನುತ್ತಾನೆ. ಈ ಹೇಳಿಕೆಯಲ್ಲಿ ಆದಯ್ಯನಿಗೆ ಮುಕ್ತಿಗಾಗಿ ಜಂಗಮತ್ವವಿದ್ದು ಶೈವಮತದ ಅಭಿಮಾನಕ್ಕೊಸ್ಕರ ಸ್ಥಾವರ ಲಿಂಗವನ್ನು ಪ್ರತಿಪಾದಿಸಿದ ಉದ್ದೇಶ ಇದೆ ಎಂಬ ಅಂಶವು ಗ್ರಹಿತವಾಗಿರುವುದನ್ನು ಕಾಣಬಹುದು.
#ವಚನಕಾರ ಆದಯ್ಯ ಮತ್ತು ಪುಲಿಗೆರೆಯಲ್ಲಿ ಸೌರಾಷ್ಟ್ರದ ಸೋಮೇಶ್ವರ ನನ್ನು ತಂದು ಪ್ರತಿಷ್ಠಾಪಿಸಿದ ಆದಯ್ಯರೀರ್ವರೂ ಒಬ್ಬರೆ ಎಂದೆನಿಸುತ್ತದೆ.
ಆದಯ್ಯನ ನಿಷ್ಠೆಯನ್ನು ಪರೀಕ್ಷಿಸಬೇಕೆಂದು ಕಾಡಿಸುತ್ತ ಭಕ್ತವೇಷದ ಶಿವನು , ಎಲ್ಲಿಯೂ ಭಕ್ತನನ್ನು ಕಾಣದೇ ನಿನ್ನಲ್ಲಿಗೆ ಬಂದೆ, ತಗೆದುಕೋ ಮೊಸರೂಗರವ ಎಂದು ಅಡ್ಡಗಟ್ಟಿ ತುಡಕಿ ಹಿಡಿದಾಗ
" ಒಲ್ಲೆ ಒಲ್ಲೇನುತ ಮೃಡ ಸೋಮನಾಥನಂ ತಂದ ಬಳಿಕಲ್ಲದಿನ್ನೆಡೆಯೊಳವಡದೆನೆಗೆ"
ಎಂದು ಆದಯ್ಯನು ಸಾಗುವನು.
ಆದಯ್ಯನ ಮಾತಿನಿಂದ ಮೆಚ್ಚಿಕೊಂಡ ಶಿವನು ಹೊಗಳುತ್ತಾನೆ. ಶಿವನ ಪರೀಕ್ಷೆ ಭಕ್ತನ ಮುಂದೆ ಸೋಲನ್ನಪ್ಪಿ ನಿಜರೂಪ ತೊರುವನು.
ಹೀಗೆ ಕಾವ್ಯಗಳಲ್ಲಿ ವರ್ಣಿಸಿದಂತೆ ಪಶುಯತೀಶ್ವರ ಮತ್ತು ಆದಯ್ಯನ ನಡುವಿನ ಸಂಭಾಷಣೆಯ ಪ್ರಸಂಗದಲ್ಲಿನ ಶೈವ ,ವೀರಶೈವ ಮತಗಳ ಸ್ವರೂಪದ ಉಲ್ಲೇಖವು ಆದಯ್ಯನ ವಚನಗಳ ಸಾರರೂಪ ಎಂದೆನಿಸುತ್ತದೆ.
#ಶೈವ ಮತ:
ವೀರಶೈವ ಮತಕ್ಕಿಂತ ಹಿಂದಿನ ಶೈವಮತದಲ್ಲಿ ನಾಲ್ಕು ಭೇದಗಳು ಇದ್ದವು ಎಂಬುದು ವಚನದಿಂದ ವ್ಯಕ್ತವಾಗುತ್ತದೆ.
ಆದಯ್ಯನು ಅವುಗಳ ಹೆಸರು ಮತ್ತು ಸ್ವರೂಪವನ್ನು ವಿವರಿಸಿದ್ದಾನೆ. ಶೈವಮತದ ನಾಲ್ಕು ಭೇದಗಳು ಎಂದರೆ
1 .ಶುದ್ಧಶೈವ
2 .ಮಿಶ್ರ ಶೈವ
3 .ಪೂರ್ವ ಶೈವ
4 .ಸಂಕೀರ್ಣ ಶೈವ
ಶುದ್ಧಶೈವ ಎಂತೆಂದರೆ ಒಮ್ಮೆ ಧರಿಸಿ ,ಒಮ್ಮೆ ಇರಿಸಿ , ಶುಚಿಯಾದೆನೆಂದು ಅಶುಚಿಯಾದನೆಂದು ಭವಿಯಾಗುತ್ತೊಮ್ಮೆ ಭಕ್ತನಾಗುತ್ತೊಮ್ಮೆ ಒಪ್ಪಚ್ಚಿ ಹೊಲೆ, ಒಪ್ಪಚ್ಚಿ ಕುಲವೆಂದು ಆ ರೀತಿ ಇರುವ ಭಕ್ತನ ಮತ.
ಮಿಶ್ರಶೈವ ಎಂತೆಂದರೆ ಬ್ರಹ್ಮ, ವಿಷ್ಣು, ರುದ್ರ ,ಮಾಹೇಶ್ವರರು ಒಂದೆಂದು ನುಡಿವ ದುಷ್ಕರ್ಮದ ಮತವೇ ಮಿಶ್ರಶೈವ. ಈ ಹೇಳಿಕೆ ಪ್ರಕಾರ ಆದಯ್ಯನಿಗೆ ದೇವನೊಬ್ಬ ನಾಮ ಹಲವು ಎಂಬುದು ವೀರೋಧ ಎಂಬಂತೆ ಭಾಸವಾಗಿದೆ.
ಪೂರ್ಮಶೈವ ಎಂತೆಂದರೆ ದೂರದಿಂದ ನಮಿಸಿ ಅರ್ಪಿಸಿ ಶೇಷವನುಣ ಕರ್ತನಲ್ಲವೆಂದು ಭಾವಿಸುವ ದೂರಸ್ಥನಹದ ಮತದವರು.
ಸಂಕಿರ್ಣ ಶೈವ ಎಂದರೆ ಹರನೇ ಹಿರಿಯನೆಂದು ಹಿರಿಯರೆಲ್ಲರನ್ನು ದೇವರೆಂದು ನುಡಿದು ಕಂಡ ದೇವರಿಗೆ ಸಾಷ್ಟಾಂಗ ಹಾಕುವ ವೇಶಿಯ ಸುತನಂತೆ ಸಂಕಿರ್ಣಕ್ಕೊಳಗಾದ ಮತ.
ನಾವು ಸಾಮಾನ್ಯವಾಗಿ ಶೈವ ಮತಾಚರಣೆಯ ಸಿದ್ಧಾಂತಗಳೆಂದು ಹೇಳುವುದನ್ನೇ ಆದಯ್ಯನು ಇಲ್ಲಿ ಶೈವಮತ ಪ್ರಭೇದಗಳನ್ನಾಗಿ ವಿಭಾಗಿಸಿ ಹೆಸರುಗಳನ್ನು ಕೊಟ್ಟಿದ್ದಾನೆ ಎಂದೆನಿಸುತ್ತದೆ.
ಇಲ್ಲಿ ಶೈವಮತದ ವಿಭಾಗಗಳಲ್ಲಿರುವ ಭಕ್ತರಂತೂ ಸ್ಥಾವರ ಲಿಂಗಾರಾಧಕರು.
ಈ ಶೈವ ಮಾರ್ಗಗಳನ್ನು ಹೇಳುತ್ತ ಇವೆಲ್ಲವುಗಳಿಗಿಂತ ವೀರಶೈವವು ಶ್ರೇಷ್ಠ ವಾದದ್ದು ಎಂದು ಅದರ ಸ್ವರೂಪವನ್ನು ನಿರೂಪಿಸಿದ್ದಾನೆ.
ಶ್ರೀಗುರುವು ಶಿಷ್ಯನ ಮಲಮಾಯಾ ಮಲಿನವನ್ನು ತನ್ನ ಕೃಪಾವಲೋಕದಿಂದಳಿದು ಲಿಂಗವನ್ನು ಶಿಷ್ಯನಂಗದ ಮೇಲೆ ಬಿಜಯಂಗೆಯಿಸಿ ,ಕರ್ಣದ್ವಾರದಲ್ಲಿ ಪ್ರಾಣಂಗೆ ಲಿಂಗವ ಜಪಿಸುವ ಪ್ರಣವ ಪಂಚಾಕ್ಷರಿಯನುಪದೇಶಿಸಿ ಅಂಗಪೀಠದಲ್ಲಿರಿಸಿ ಅಭಿನ್ನ ಪ್ರಕಾರವಾದ ಪೂಜೆಯ ಮಾಡ ಹೇಳಲು, ವೀರಶೈವನು ಅಂಗದ ಮೇಲೆ ಲಿಂಗ ಧರಿಸಿ ಅಭಿನ್ನಭಾವದಿಂದ ಅರ್ಚನೆ ಪೂಜನ ಮಾಡುವುದೇ ವೀರಶೈವವು.
ಇದು ಆದಯ್ಯನು ವೀರಶೈವ ದ ಬಗ್ಗೆ ಕೊಟ್ಟ ನಿಷ್ಪತ್ತಿಯಾಗಿದೆ.
ಮೇಲಿನ ವಿವರಣೆಯ ಪ್ರಕಾರ ಆದಯ್ಯನು ಗುರುವು ಶಿಷ್ಯನಿಗೆ ಬೋಧಿಸುವ ರೀತಿಯಲ್ಲಿ ಶುದ್ಧ ಶೈವ ಮತ್ತು ವೀರಶೈವದ ಲಕ್ಷಣಗಳಗಳನ್ನು ನಿರೂಪಿಸಿದ್ದಾನೆ.
ಶುದ್ಧಶೈವವು ಸ್ಥಾವರಲಿಂಗದ ಶ್ರೇಷ್ಠತೆಯನ್ನು ಎತ್ತಿ ಹಿಡಿದರೆ ,ವೀರಶೈವವು ಇಷ್ಟಲಿಂಗದ ಶ್ರೇಷ್ಠತೆಯನ್ನು ಎತ್ತಿ ಹಿಡಿದಿದೆ.
ಶುದ್ಧಶೈವಕ್ಕೆ ಲಿಂಗದ ನೆನಹು ಇಷ್ಟವಾದರೆ ವೀರಶೈವಕ್ಕೆ ಲಿಂಗದ ಸಂಗ ಶ್ರೇಷ್ಠವಾಗುತ್ತದೆ. ಇದನ್ನು ಅತ್ಯುತ್ತಮ ಉಪಮೆಯೊಡನೆ ಆದಯ್ಯನು ನಿರೂಪಿಸಿದ್ದಾನೆ.
" ಅತ್ಯಂತ ಮನೋರಮಣಪ್ಪಂತ ಪುರುಷನ ಒಲುಮೆಯಲ್ಲಿ ಹ
ಸ್ತ್ರೀಗೆ ನೆನಹಿನ ಸುಖದಿಂದ ಸಂಗಸುಖವು ಅತ್ಯಧಿಕವಪ್ಪಂತೆ"
ಆದಯ್ಯನ ಈ ಹೇಳಿಕೆಯಲ್ಲಿ ತಿಳಿದು ಬರುವ ಸಂಗತಿ ಎಂದರೆ ಶುದ್ಧಶೈವದಲ್ಲಿರುವ ಭಕ್ತನೇ ಮುಂದೆ ವೀರಶೈವ ಮತದ ವ್ಯಕ್ತಿಯಾಗಿ ಮಾರ್ಪಾಡು ಹೊಂದುತ್ತಾನೆ ಎಂಬುದು. ಅಂದರೆ ಮನೋರಮಣನಾದ ಪುರುಷನ ಒಲುಮೆಯಲ್ಲಿರುವ ಸ್ತ್ರೀಗೆ ನೆನಹಿನ ಸುಖದಿಂದ ಸಂಗಸುಖ ಅತ್ಯಧಿಕವಪ್ಪಂತೆ ಶುದ್ಧಶೈವದ ಭಕ್ತನ ಲಿಂಗದಲ್ಲಿ ಅನವರತ ನೆನಹಿನಿಂದ ಕೂಡಿದಾಗ ಮುಂದೆ ಆತನಿಗೆ ಲಿಂಗದ ಸಂಗವನ್ನು ಬಯಸುವ ಸುಖ ಅತ್ಯಧಿಕವಾಗುತ್ತದೆ.
ಸ್ಥಾವರಲಿಂಗ ಧ್ಯಾನಕ್ಕೂ ಮತ್ತು ಇಷ್ಟಲಿಂಗದ ಸಂಗಕ್ಕೂ ಇರುವ ಸಾರೂಪ್ಯವನ್ನು ಈ ರೀತಿ ವಿವರಿಸಿದ್ದಾನೆ.
ಕೀಟನು ಭ್ರಮರ ಧ್ಯಾನದಿಂದ ಭ್ರಮರ ರೂಪಾದಂತೆ ಶೈವನು ಶಿವಧ್ಯಾನದಿಂದ ಸಾರೂಪ್ಯ ಪದವನೈದುತ್ತಾನೆ. ಅಗ್ನಿಯ ಸಂಗವ ಮಾಡಿದ ಕರ್ಪೂರ ನಾಸ್ತಿಯಾದ ಹಾಗೆ ವೀರಶೈವನು ಜಂಗಮಾರ್ಚನೆಯ ಮಾಡಿ ಪ್ರಾಣಲಿಂಗ ಸಂಬಂಧದಿಂದ ಸಾಯಜ್ಯ ಪದವಿಯನ್ನು ಪಡೆಯುತ್ತಾನೆ.
ಆದಯ್ಯನ ವಚನಗಳಲ್ಲಿ ಉಲ್ಲೇಖಿಸಿರುವ ವೀರಶೈವ ಜೊತೆಗಿನ ಶುದ್ಧಶೈವ ಎಂದು ಹೇಳಿರುವುದು ಆದಯ್ಯನ ಒಂದು ವಚನದಲ್ಲಿ ವ್ಯಕ್ತವಾಗಿರುವ ಹೇಳಿಕೆಯ ಪ್ರಕಾರ ಶುದ್ಧಶೈವರೆಂದರೆ ತಮೀಳುನಾಡಿನ ಅರವತ್ತು ಮೂರು ಮಂದಿ ಪುರಾತನರೇ ಎಂದೆನಿಸುತ್ತದೆ. ಶುದ್ಧಶೈವದ ಆಚರಣೆಯನ್ನು ವಿವರಿಸುತ್ತಾ ಶುದ್ಧಶೈವ ಸಂಪನ್ನರಪ್ಪ ಅರವತ್ತು ಮೂವರು ಅಸಂಖ್ಯಾತರು ಶಿವನಲ್ಲಿ ಚತುರ್ವಿಧ ಪದವಿಯ್ದು ಸುಖಿಯಾದರು ಎಂದಿದ್ದಾನೆ.
ವಚನಕಾರರು ಶೈವಮತವನ್ನು ಖಂಡಿಸಿದ್ದರೆ ಆದಯ್ಯನಲ್ಲಿ ಮಾತ್ರ ಎಲ್ಲಿಯೂ ಶೈವಮತದ ಖಂಡನೆ ಉಗ್ರವಾಗಿ ಬಂದಿಲ್ಲ.
ಡಾ ಸಂಗಮೇಶ್ ಸವದತ್ತಿಮಠ ಅವರ ಸಂಪಾದಿತ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣದ ಸಂಶೋಧನ ಪ್ರಬಂಧ ಸಂಕಲನ ವೀರಶೈವ ಆಕಾರಗಳು ಗ್ರಂಥದಲ್ಲಿ ಡಾ. ಸಿ. ಗಾಗಭೂಷಣ .ಕೋಲಾರ ಇವರು ಬಹಳ ವಿಸ್ತ್ರುತವಾಗಿ ಬಸವಪೂರ್ವ ಯುಗದ ಶರಣರ ಜೀವನ ಮತ್ತು ಕೃತಿಗಳಲ್ಲಿ ವೀರಶೈವ ಎಂಬ ಬಗ್ಗೆ ಪ್ರಬಂಧ ಮಂಡಿಸಿದ್ದಾರೆ.
ಕೆಲವು ಆಯ್ದಭಾಗಗಳನ್ನು ಲೇಖನದಲ್ಲಿ ಆದಯ್ಯನನ್ನು ಕೇಂದ್ರಿಕರಿಸಿ ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಇದರ ಉದ್ದೇಶವಾಗಿದೆ.
Dattatreya S Mulge
No comments:
Post a Comment
If you have any doubts. please let me know...