March 27, 2021

ವೃಷಭ (ಬಸವಣ್ಣ) ಇರುವ ಘಂಟೆ ಹನುಮಂತ ಇರುವ ಘಂಟೆಗಿಂತಲೂ ಭಿನ್ನವಾಗಿ ಶಬ್ದಮಾಡುತ್ತದೆಯೋ ?

ಭಕ್ತರ ಕೃತಕೃತ್ಯತಾ  ಭಾವ 

ಗುರುದರ್ಶನಕ್ಕೆ ಹಾಗೂ ಗುರುಸೇವೆಗೇ ಹೆಚ್ಚು ಮಹತ್ವ. ಹೀಗಿದ್ದರೂ ಸಖರಾಯ ಪಟ್ಟಣದಲ್ಲಿ ಐತಿಹಾಸಿಕ ಹೊಯ್ಸಳ ಕಾಲದ ಬಲ್ಲಾಳೇಶ್ವರ ದೇವಸ್ಥಾನ,   ಶಕುನಿ ರಂಗನಾಥ ಸ್ವಾಮಿ ದೇವಾಲಯ , ರಾಮೇಶ್ವರ ಲಕ್ಷ್ಮಣೇಶ್ವರ ದೇವಸ್ಥಾನ ಹೀಗೇ ಎಲ್ಲಾ ದೇವಾಸ್ಥಾನಗಳಿಗೇ ಎಲ್ಲಾ ಕಾಲದಲ್ಲೂ ಪೂಜಾಸಾಮಗ್ರಿಗಳು , ಧವಸ ಧಾನ್ಯಗಳು ಮುಂತಾದವುಗಳ ಪೂರೈಕೆ ನಿರಂತರವಾಗಿ ನಡೆಯುತ್ತಿತ್ತು. ಪೂಜಾಕೈಂಕರ್ಯ , ಪಾರಂಪರಿಕವಾಗಿ ಅಧಿಕಾರದಲ್ಲಿರುವ ಪೌರೋಹಿತ ಕುಟುಂಬಗಳು , ಒಂದೇ ದೇವಸ್ಥಾನಕ್ಕೆ ಎರಡು ಮೂರೂ ಕುಟುಂಬಗಳಿಗಿದ್ದ ಪೂಜಾಧಿಕಾರ ,ಮತ್ತು ಅವರ  ನಡುವಣ ಆಗಾಗ ತಲೆದೋರುತ್ತಿದ್ದ ಸಾಂಪ್ರಾದಾಯಿಕ ಆಚರಣೆಗಳಲ್ಲಿ ಭಿನ್ನಾಭಿಪ್ರಾಯವೂ ಸಹಜವಾಗೇ ಇದ್ದುಕೊಂಡಿದ್ದವು.ಎಲ್ಲಾ ಸಮಸ್ಯೆಗೂ ಸಮಾಧಾನ ಗುರುಗಳೊಬ್ಬರೇ ಎಂಬುದು ಪುರೋಹಿತರ ನಂಬಿಕೆಯೂ ಆಗಿತ್ತು. ಯಾವುದೇ ಶಾಸ್ತ್ರ ಸಂಬಂಧ ಸಂಶಯವನ್ನು ಕರಾರುವಾಕ್ಕಾಗಿ ಪರಿಹಾರ ಮಾಡುತ್ತಿದ್ದುದೂ ಅಲ್ಲದೇ ಎಲ್ಲವೂ ಸರಿಹೋದ ನಂತರ *ಏನೋ ನಾನು ವೇದಶಾಸ್ತ್ರಗಳನ್ನು ಓದಿದವನಲ್ಲ ,ಲೋಕವನ್ನು ಸುತ್ತಾಡಿ ,ಲೋಕದಿಂದ ಕಿಂಚಿತ್ತು ತಿಳಿದುಕೊಂಡದ್ದನ್ನು   ನಿಮಗೆ ಹೇಳಿದ್ದೇನೆ, ಬೇಕಿದ್ದರೇ  ಶೃಂಗೇರೀ ಗುರುಗಳನ್ನು ಸಂಪರ್ಕ ಮಾಡಿ ಸಂಶಯವನ್ನು ಪರಿಹಾರ ಮಾಡಿಕೊಳ್ಳಿ ಎಂದುಬಿಡುತ್ತಿದ್ದರು. 
ಹಲವಾರು ಬಾರಿ ಶೃಂಗೇರೀ ಗುರುಗಳೇ *ಅವಧೂತರು ಹೇಳಿದ ಮೇಲೆ ಯಾವ ಶಾಸ್ತ್ರವನ್ನೂ ನೋಡುವ ಅವಶ್ಯಕತೆಯಿಲ್ಲ ಎಂಬುದಾಗಿ ಹೇಳಿದ್ದನ್ನು ನಾವುಗಳೇ ಕೇಳಿದ್ದೇವೆ. 
ಮೂಲದಲ್ಲಿ ಶ್ರದ್ಧೆಯಿಲ್ಲದಿದ್ದರೇ  ಸಂಶಯಗಳು ಬರುತ್ತವೆ ಎಂಬುದಾಗಿ ಗುರುಗಳೂ ಹೇಳುತ್ತಲೇ ಬಂದಿದ್ದರು.
ನೈವೇದ್ಯವನ್ನು ದೇವರ ಮುಂದೆ ಇಡಬೇಕೇ , ಎಡಭಾಗದಲ್ಲಿಡಬೇಕೋ ,ಬಲಭಾಗದಲ್ಲಿಡಬೇಕೋ ? ಯಾವ ದೇವರಿಗೇ ಯಾವ ನೈವೇದ್ಯ ? ಎಷ್ಟು ವೀಳ್ಯದೆಲೆಗಳನ್ನು ಇಡಬೇಕು ? ಎಷ್ಟು ಅಡಕೆಗಳನ್ನು ಇಡಬೇಕು ? ವೀಳ್ಯದೆಲೆಯ ಮೇಲಿಡುವ ಫಲಗಳನ್ನು , ತೆಂಗಿನ ಕಾಯಿಯನ್ನು ಯಾವ ದಿಕ್ಕಿನಲ್ಲಿಡಬೇಕು ?? ಹೀಗೇ ನಾನಾ ಪ್ರಶ್ನೆಗಳು. 
ಗುರುನಾಥರ ಹಾಸ್ಯಪ್ರಜ್ಞೆಯ ಪರಿಚಯ ಸ್ವಲ್ಪಮಟ್ಟಿಗೇ ಮಾಡಿಕೊಡುತ್ತೇನೆ.
ಮೇಲೆ ಹೇಳಿದ ಪ್ರಶ್ನೆಗಳನ್ನು ಹೊತ್ತುಕೊಂಡ ಮಹನೀಯರೊಬ್ಬರು ಗುರುವಿನ ಬಳಿಬಂದು ಇದಕ್ಕೆ ಉತ್ತರ ಹೇಳಬೇಕೆಂದು ಕೇಳಿಕೊಂಡರು. 
ಗುರುಗಳು ಹುಸಿನಗುತ್ತಾ * ಅಲ್ಲಾರೀ, ಅವನಿಗೆ ತೋರಿಸಿ ನೀವು ತಿನ್ನುವದಕ್ಕೇ ಇಷ್ಟೆಲ್ಲಾ ನಾಟಕ ಮಾಡಬೇಕಾ ?? ಹಸಿದವನು ಬಂದಾಗ ಅಂಥವನಿಗೆ ಕೊಟ್ಟರೇ ಅದೇ ದೇವರಿಗೆ ಕೊಟ್ಟಂತೇ ಅಲ್ಲವೇ ?   ನೀವು  ಶಾಸ್ತ್ರದ ಪ್ರಕಾರವೇ ನೈವೇದ್ಯವನ್ನು ಯಾವ ದಿಕ್ಕಿನಲ್ಲಿಟ್ಟಿದ್ದೀರಿ ಎಂದು ನೋಡಿಕೊಂಡು ಯಾವಾಗಲಾದರೂ ಆ ಭಗವಂತನು ಬಂದು ನೈವೇದ್ಯ ಸ್ವೀಕರಿಸಿದ್ದು ನಿಮ್ಮ ಅನುಭವದಲ್ಲಿದೆಯೋ ?? ಅಥವಾ ಈ ದಿಕ್ಕಿನಲ್ಲಿಟ್ಟರೇ ನಾನು ಸ್ವೀಕರಿಸುವದಿಲ್ಲ ಎಂಬ ಕನಸೇನಾದರೂ ಬಿದ್ದಿತ್ತೇ ??

ಆ ಪರಮಾತ್ಮ ಏನಾದ್ರೂ ಒಂದೇ ಒಂದು ಸಲ ನೀವಿಡುವ ನೈವೇದ್ಯದ ಮೇಲೆ ಕೈ ಆಡಿಸುವ ಹಾಗಿದ್ದರೇ ನೀವು ನಿಜವಾಗಿಯೂ ಅವನಿಗೆ ನೈವೇದ್ಯಕ್ಕೆ ಏನಾದರೂ ಇಡುತ್ತಿದ್ದೀರೋ ?? ಅಥವಾ ಇಷ್ಟೊಂದು ದೇವಾಲಯಗಳು ಇರುತ್ತಿದ್ದವೋ ? 
ನಿಮ್ಮ ಆಚರಣೆಗೂ ದೇವಾಲಯಕ್ಕೂ ಏನೂ ಸಂಬಂಧವಿಲ್ಲ. ದೇವಾಲಯದ ಉದ್ದೇಶವನ್ನೇ ಮರೆತು ಇಂದಿಗೇ ಅದು ಒಂದು ವ್ಯಾಪಾರ ಆಗಿರುವದು ಶೋಚನೀಯ, ಶಾಸ್ತ್ರವನ್ನು ಊರ್ಗೋಲು ಮಾಡಿಕೊಳ್ಳಿ , ನೇತು ಹಾಕಿಕೊಳ್ಳುವಕೊಂಡಿ ಮಾಡಿಕೊಳ್ಳಬೇಡಿ* ಎಂದುಬಿಟ್ಟರು.

ಮತ್ತೊಮ್ಮೆ ಊರಿನ ಹಿರಿಯ ಪುರೋಹಿತರು ಬಂದು *ಗುರುಗಳೇ ಯಾರೋ ಭಕ್ತರು ಹಿಂದೆ ದೇವಸ್ಥಾನಕ್ಕೆ ಬಂದು ಹರಕೆಯನ್ನು ಹೊತ್ತಿದ್ದರಂತೆ. ಅದರಂತೆ  ಬಂದು ಘಂಟೆಯನ್ನು ಸಮರ್ಪಣೆ ಮಾಡಿದ್ದಾರೇ , ಅದನ್ನು ಉಪಯೋಗಿಸಿ ಎಂಬುದಾಗಿಯೂ ಕೇಳಿಕೊಳ್ಳುತ್ತಿದ್ದಾರೆ. ಆದರೇ  ಅವರು ವೃಷಭ (ಬಸವಣ್ಣ) ಇರುವ ಘಂಟೆಯನ್ನು ಕೊಟ್ಟಿದ್ದಾರೆ . ಆದರೇ ನಾವು ಈವರೆವಿಗೂ ಹನುಮಂತ ಇರುವ ಘಂಟೆಯನ್ನು ಉಪಯೋಗಿಸುತ್ತಿದ್ದೇವೆ, . ನಮ್ಮಲ್ಲಿ ಈ ಘಂಟೆಯನ್ನು ಉಪಯೋಗಿಸುವ ಸಂಪ್ರದಾಯ ಇಲ್ಲ,  ಅವರು ನಮ್ಮ ದೇವಸ್ಥಾನಕ್ಕೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ ,ತಿರಸ್ಕಾರ ಮಾಡಿದರೇ ಅವರು ಬೇಸರಿಸಿಕೊಳ್ಳಬಹುದು, ಎಂದು ತಮ್ಮ ಅಳಲನ್ನು ತೋರಿಕೊಂಡರು. 

ಗುರುನಾಥರು * ಏಕೆ ವೃಷಭ (ಬಸವಣ್ಣ) ಇರುವ ಘಂಟೆ ಹನುಮಂತ ಇರುವ ಘಂಟೆಗಿಂತಲೂ ಭಿನ್ನವಾಗಿ ಶಬ್ದಮಾಡುತ್ತದೆಯೋ ?? ಅಥವಾ ವೃಷಭ (ಬಸವಣ್ಣ) ಇರುವ ಘಂಟೆಯ ಶಬ್ದ ನಿಮ್ಮ ದೇವರಿಗೆ ಹಿಡಿಸುವದಿಲ್ಲವೋ ?? ಎಂದು ಕೇಳಿದರು.
ಪುರೋಹಿತರು * ಹಾಗಲ್ಲ ಗುರುಗಳೇ ಹನುಮಂತ ಇರುವ ಘಂಟೆ ತುಂಬ ಪವಿತ್ರವಾದ್ದದ್ದು ಎನ್ನುತ್ತಾರೇ. ಅದಕ್ಕೇ ಸಂಶಯ.
ಗುರುನಾಥರು *ಹೌದೋ ,ಹಾಗಿದ್ದರೇ ಆ ಘಂಟೆಯನ್ನು ನೀವು ಯಾವ ಕೈಯ್ಯಲ್ಲಿ ಹಿಡಿದುಕೊಳ್ಳುತ್ತೀರ ?? ಎಡಗೈಯ್ಯಲ್ಲಿ ಅಲ್ಲವೇ. ಪವಿತ್ರವಾದದ್ದನ್ನು ಎಡಗೈಯ್ಯಲ್ಲಿ ಹಿಡಿದುಕೊಂಡರೇ ಅಪವಿತ್ರ ಆಗುವದಿಲ್ಲವೇ ?? ಪವಿತ್ರವಾದದ್ದನ್ನು ಎಡಗೈಯ್ಯಲ್ಲಿ ಮುಟ್ಟಬಾರದು ಎಂದು ಎಲ್ಲಿಯೂ ಶಾಸ್ತ್ರವು ಹೇಳಿಲ್ಲವೇ ??

ಇಂಥದ್ದನ್ನು  ಯಾವ ಕಾಲಕ್ಕೂ ಯಾವ ಶಾಸ್ತ್ರಗಳೂ ಹೇಳಬಾರದು. ಹೇಳಿದ್ದರೂ ಈ ಕಲಿಯುಗದಲ್ಲಿ ಅವುಗಳನ್ನು ಅನುಸರಿಸುವಾಗ ಶಾಸ್ತ್ರಗಳ ಪೂರ್ವಾಪರಗಳನ್ನು ನೋಡುವದಕ್ಕಿಂತ ಭಕ್ತರ ಭಾವನೆಯನ್ನು ನೋಡಬೇಕು. ಅವರಿಂದ ಅನುದಾನ ಸ್ವೀಕರಿಸುವಾಗ ಹಿಂಜರಿಯದ ನೀವು ಈಗೇಕೇ ಸಂಶಯಕ್ಕೊಳಗಾದಿರಿ ?? 

ಈ ದೇವಸ್ಥಾನಕ್ಕೆ ಬಂದ ಆ ಭಕ್ತರಿಗೆ ಪರಿಹಾರ ಸಿಕ್ಕಿದೆ. ತನ್ಮೂಲಕ ನೆಮ್ಮದಿಯೂ ಸಿಕ್ಕಿದೆ, ಆ ನೆಮ್ಮದಿಯ ಹಿಂದಿರುವ ಚೈತನ್ಯವೇ  ಈ  ಘಂಟೆಯನ್ನು ಕೊಡುವಂತೆ ಪ್ರೇರೇಪಣೇ ಮಾಡಿದೆ ಎಂದುಕೊಳ್ಳಲು ನಿಮ್ಮ ಪೌರೋಹಿತ್ಯದ ಭಾವವೇನಾದರೂ ಅಡ್ಡಿಯಾಗುತ್ತಿದೆಯೇ ??  ಇದು ಕೇವಲ ದೇವರಿಗೆ ಕೊಟ್ಟಿರುವ ಕಾಣಿಕೆಯಲ್ಲ. ನೀವು ಸದ್ಭಾವದಿಂದ ಪೂಜೆ ಮಾಡಿರುವದೂ ಆ ಭಕ್ತರ ಕಷ್ಟ ಪರಿಹಾರಕ್ಕೆ ಕಾರಣ ಎಂಬ ನಂಬಿಕೆಯೂ  ಕೃತಕೃತ್ಯತಾ ಭಾವದ ಒಂದು ಅಂಗವಾಗೇ ಇದೆ ಎನ್ನುವದನ್ನು ತಿಳಿಯಿರಿ. ಅದನ್ನೇ ಪೌರೋಹಿತ್ಯ ಎನ್ನುವದು.  ಆ ಕೃತಕೃತ್ಯತಾ ಭಾವದಲ್ಲಿ ಈ ಘಂಟೆಯ ವಿಷಯ ಅಪಸ್ವರವಾಗಬಾರದಲ್ಲವೇ ? ಎಂದುಗುರುನಾಥರು ಕೇಳಿದರು.

ಪುರೋಹಿತರು ನಿರುತ್ತರರಾದರು. 

ಸತ್ಯಪ್ರಕಾಶ.

No comments:

Post a Comment

If you have any doubts. please let me know...