ನಮ್ಮಲ್ಲಿ ಹಿಂದೊಬ್ಬ ರಾಜನಿದ್ದ. ರಾಜನೆಂದರೆ ಅದೊಂದು ದೈತ್ಯ ಶಕ್ತಿಯ ವ್ಯಕ್ತಿತ್ವ ಅವನದ್ದು. ಪ್ರಜೆಗಳು ಅವನ ಆಡಳಿತದಲ್ಲಿ ಸ್ವತಃ ಪಾಲ್ಗೊಳ್ಳುತ್ತಿದ್ದರು. ರಾಜನೆನ್ನುವ ಭಯ ಪ್ರಜೆಗಳಲ್ಲಿರಲಿಲ್ಲ. ಆದರೆ ಭಕ್ತಿ ಮತ್ತು ವಿಶ್ವಾಸವಿತ್ತು. ಆ ಕಾರಣದಿಂದಲೇ ಆಡಳಿತದಲ್ಲಿಯೂ ಸಹ ಸ್ವಯಂಸೇವಕರಾಗಿ ಪಾಲ್ಗೊಳ್ಳುತ್ತಿದ್ದರಂತೆ. ಈತ ಪೂರ್ವದ ಬಂಗಾಲದಿಂದ ಪಶ್ಚಿಮದ ಸಮುದ್ರದ ತನಕ ಯುದ್ಧಮಾಡಿದ್ದ. ಉತ್ತರದಲ್ಲಿ ಹಿಮಾಲಯದಿಂದ ಕನ್ಯಾಕುಮಾರಿಯ ತನಕ ಹೋಗಿ ಸಿಂಹಳವನ್ನು ಗೆದ್ದಿದ್ದ. ಇವಿಷ್ಟೂ ಅಲ್ಲದೇ ಈತನ ಆಕ್ರಮಣಗಳಿಗೆ ಹೆದರಿದ ಅನೇಕ ದ್ವೀಪವಾಸಿಗಳು ಸ್ವತಃ ಕಪ್ಪಗಳನ್ನು ಕೊಟ್ಟು ಈತನ ಹೆಸರಿನಲ್ಲಿ ತಾವು ರಾಜ್ಯಭಾರ ಮಾಡುತ್ತಿದ್ದರಂತೆ. ಈತ ಭಾರತದ ಪ್ರದೇಶವನ್ನು ಮಾತ್ರವೇ ಆಕ್ರಮಿಸಿ ಏಕಚಕ್ರಾಧಿಪತ್ಯದಡಿ ತಂದಿಲ್ಲ. ಬಾಹ್ಲೀಕವನ್ನು ವಶಪಡಿಸಿಕೊಂಡಿದ್ದ. ತನ್ನ ದಾರಿಯನ್ನು ಆಯ್ದುಕೊಂಡಾಗ ಪರ್ಷಿಯನ್ನರ ವರ್ಣನೆ ಹೀಗೆ ದಾಖಲಾಗಿದೆ. . . . ಕೆಂಪು ಕೆನ್ನೆಗಳ ಕಮಲದಂತಿರುವ ಮುಖ ಹೊಂದಿರುವ ಮದಿರೆಯ ನಶೆಯಲ್ಲಿದ್ದ ಯವನ ಮಹಿಳೆಯರ ಮುಖವು ರಾಜನ ದಾಳಿಯಿಂದ ಮಸುಕಾಯಿತು. ಪಶ್ಚಿಮ ದೇಶದ ಅಶ್ವ ಸೈನ್ಯವು ವ್ಯರ್ಥವಾಗಿ ಈ ರಾಜನೊಂದಿಗೆ ಹೋರಾಡಿತು. ರಾಜ ಮತ್ತು ಆತನ ಸೈನ್ಯವು ಸಿಂಧೂನದಿಯ ದಡದಲ್ಲಿ ವಿಶ್ರಾಂತಿ ಪಡೆಯಿತು. ಕಾಂಭೋಜದ ರಾಜನಿಗೂ ಸಹ ಇವನನ್ನು ತಡೆಯಲಿಕ್ಕಾಗಲಿಲ್ಲ ಎಂದು ಕಾಳಿದಾಸ ವರ್ಣಿಸುತ್ತಾನೆ. ಮುಂದುವರಿದು ಆತ ಹೇಳುವಂತೆ ತಾಮ್ರಪರ್ಣಿ ನದಿಯ ಸಂಗಮದಿಂದ ಮುತ್ತುಗಳನ್ನು ಹೊತ್ತೊಯ್ದ ನೀರು ಸಾಗರವನ್ನು ಸೇರುವಂತೆ ಪಾಂಡ್ಯ ದೊರೆಯ ಕೀರ್ತಿಗಳೆಲ್ಲವೂ ಸಾಗರದೋಪಾದಿಯಲ್ಲಿ ಈ ದೊರೆಗೆ ಸೇರಿತು. ಎನ್ನುತ್ತಾನೆ. ಶಾಸನದಲ್ಲಿ ಈತನ ಕುರಿತಾಗಿ ಹೇಳುವಂತೆ. ಈತನ ದೇಹದಲ್ಲಿ ಗಾಯಗಳಿಲ್ಲದ ಜಾಗ ಇಲ್ಲವಂತೆ. ಆದರೆ ಇಂತಹ ಪರಾಕ್ರಮಿ ರಾಜ ಇಷ್ಟೆಲ್ಲಾ ರಾಜ್ಯಗಳನ್ನು ಗೆದ್ದ. ಅಖಂಡ ಭಾರತದ ಅಧಿಪತ್ಯಪಡೆದ. ಆದರೆ ಈತ ಮುಂದೆ ಹೇಳುವ ವಿಷಯದ ಪ್ರತಿರೂಪವಾಗಿದ್ದ. ಎಲ್ಲ ಕಡೆ ವಿಜಯಿಯಾಗುತ್ತಾನೆ. ಆದರೆ ಗೆದ್ದ ರಾಜ್ಯಗಳನ್ನು ಪುನಃ ಆ ರಾಜರಿಗೇ ಒಪ್ಪಿಸಿ ಅಲ್ಲಿಗೆ ಅವರನ್ನೇ ಮುಂದುವರಿಯುವಂತೆ ನೋಡಿಕೊಳ್ಳುತ್ತಿದ್ದ. ಹಿಂಸೆ ಎನ್ನುವುದು ಈತನಿಗೆ ಪರಿಚಯವೇ ಇರಲಿಲ್ಲ ಎಂದು ಇತಿಹಾಸದಲ್ಲಿ ದಾಖಲಾಗುತ್ತದೆ. ಈತ ರಾಜ್ಯವಾಳಿದ್ದು ರಾಜರ್ಷಿಯಾಗಿ. ಭಾರತ ವೈದಿಕ ಆಡಳಿತ ಹೊಂದಿತ್ತು. ಈ ರಾಜನೇ ನಮಗೆ #ಸರ್ವ್ವ_ಕರ_ದಾನಾಜ್ಞಾಕರಣ_ಪ್ರಣಾಮಾಗಮನ_ಪರಿತೋಷಿತ_ಪ್ರಚಂಡ_ಶಾಸನಸ್ಯ ಅನೇಕ ಭ್ರಷ್ಟ ರಾಜ್ಯೋತ್ಸನ್ನ ರಾಜವಂಶ ಪ್ರತಿಷ್ಠಾಪನೋದ್ಭೂತ ನಿಖಿಲ ಭುವನ ವಿಚಾರಣ ಶ್ರಾಂತ ಯಶಸಃ ಎಂದು ಘೋಷಿಸಿಕೊಂಡ ಸಮುದ್ರಗುಪ್ತ. ಇಂಥಹ ರಾಜ ಆಳಿದ್ದರೂ ನಮ್ಮಲ್ಲಿ ಎಲ್ಲವಕ್ಕೂ ತಪ್ಪು ಹುಡುಕುವ ಅಥವಾ ಆಧುನಿಕತೆಯನ್ನು ಹುಡುಕುವ ಪರಿಪಾಠವಿದೆ. ಬಹು ಮುಖ್ಯವಾಗಿ ಪ್ರಾಚೀನತೆ ನಮಗದು ಅಸಹ್ಯ. ಇತ್ತೀಚೆಗೆ ನಿರ್ಧಾರಕ್ಕೆ ಬಂದಿದ್ದಾರೆ. ಅದು ಅನೇಕ ಸಾಹಿತ್ಯಗಳಲ್ಲಿ ಮತ್ತು ಲೇಖನಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಅಂದರೆ ಈ ದೇಶದಲ್ಲಿ ಆಡಳಿತ ವ್ಯವಸ್ಥೆ ಆರಂಭವಾದದ್ದೇ ಬ್ರಾಹ್ಮಣಗಳು ಬಂದನಂತರ. ಜನಪದವಿರಲಿ, ಮಹಾಜನಪದವಿರಲಿ ಅವೆಲ್ಲವೂ ಆಮೇಲಿನ ಅನ್ಯ ದೇಶೀಯರನ್ನು ನೋಡಿ ಕಲಿತದ್ದು ಎನ್ನುವಂತಹ ಧೋರಣೆ. ಆದರೆ ಗ್ರಾಮ ವ್ಯವಸ್ಥೆ, ಅರಣ್ಯ ರಕ್ಷಣೆ, ಆಡಳಿತವ್ಯವಸ್ಥೆ ಎಲ್ಲವೂ ನಾವು ಕಂಡು ಕೇಳರಿಯದಷ್ಟು ಪ್ರಾಚೀನದಲ್ಲಿಯೇ ಈ ನೆಲದಲ್ಲಿ ರೂಪುಗೊಂಡಾಗಿತ್ತು. ಅದನ್ನೇ ಸ್ವಲ್ಪ ಗಮನಿಸುವೆ.
ಧ್ರುವಂ ತೇ ರಾಜಾ ವರುಣೋ ಧ್ರುವಂ ದೇವೋ ಬೃಹಸ್ಪತಿಃ | ಧ್ರುವಂತ ಇಂದ್ರಶ್ಚಾಗ್ನಿಶ್ಚ ರಾಷ್ಟ್ರಂಧಾರಯತಾಂ ಧ್ರುವಂ ||
ಮಹಾರಾಜ, ನಿನ್ನ ರಾಜ್ಯವನ್ನು ವರುಣದೇವ, ಬೃಹಸ್ಪತಿ ಮತ್ತು ಇಂದ್ರ, ಅಗ್ನಿಗಳ ದಾನ, ಧರ್ಮ, ಸದ್ಗುಣಗಳು ನೆಲೆಸಿ ನಿನ್ನ ರಾಜ್ಯವು ಸ್ಥಿರವಾಗಿದ್ದು ನಿನ್ನನ್ನು ಮತ್ತು ಪ್ರಜೆಗಳನ್ನು ಕಾಪಾಡಿ ಬೆಳಗಲಿ ಎಂದು ಅಂಗಿರಸನ ಮಗನಾದ ಧ್ರುವನು ಆಶಿಸುತ್ತಾನೆ. ಮುಂದಿನ ಮಂತ್ರದಲ್ಲಿ ಪ್ರಜೆಗಳು ನಿನ್ನಲ್ಲಿ ರಾಜಭಕ್ತಿಯನ್ನಿಡುವಂತೆ ಮತ್ತು ಅವರೇ ನಿನಗೆ ಕರಾದಾಯಗಳನ್ನು ಸ್ವ ಮನಸ್ಸಿನಿಂದ ಕೊಡುವಂತೆ ಇಂದ್ರನು ಅನುಗ್ರಹಿಸಲಿ ಎನ್ನುತ್ತಾನೆ. ಅಂದರೆ ರಾಜಾಡಳಿತ ಇತ್ತು ಎನ್ನುವುದು ಸ್ಪಷ್ಟ. ಮತ್ತು ಆ ಕಾಲಕ್ಕೆ ತೆರಿಗೆಯ ಪದ್ಧತಿ ಸಹ ಬಂದಾಗಿತ್ತು. ಆದರೆ ಆ ಕಂದಾಯ ಹೇಗಿತ್ತು ಅನ್ನುವುದನ್ನು ನೋಡಿದರೆ, ’ಅಥೋ ತ ಇಂದ್ರಃ ಕೇವಲೀರ್ವಿಶೋ ಬಲಿಹೃತಸ್ಕರತ್’ ಎನ್ನುವಲ್ಲಿ ರಾಜ ನಿನ್ನ ಆಡಳಿತ ಜನರ ತೊಂದರೆಗಲನ್ನು ನಿವಾರಿಸಿ ಅವರಲ್ಲಿ ಹೇರಳವಾದ ಸಂಪತ್ತು ಕೂಡಿ, ಅವರಿಗೆ ಯಾವುದೇ ತೊಂದರೆಯಾಗದಂತೆ ಅವರೇ ರಾಜಾದಾಯ, ತೆರಿಗೆಗಳನ್ನು ಕೊಡುವಂತೆ ರಾಜನನ್ನು ಮತ್ತು ಪ್ರಜೆಗಳನ್ನು ಇಂದ್ರನು ಪ್ರೇರೇಪಿಸಲಿ ಎನ್ನುವುದಾಗಿ ಹೇಳುವುದರಿಂದ ತೆರಿಗೆಯ ಪದ್ಧತಿ ಆ ಸಮಯಕ್ಕೆ ಹೇಗೆ ಇತ್ತು ಎನ್ನುವುದು ತಿಳಿಯುತ್ತದೆ. ಹೀಗೇ ಋಗ್ವೇದದಲ್ಲಿ ರಾಜ್ಯಾಡಳಿತ ಮತ್ತು ರಾಜನ ನೀತಿ ನಿಯಮಗಳನ್ನು ಹೇಳಲಾಗಿದೆ. ರಾಜನ ಸುಖವೇ ಪ್ರಜೆಗಳ ಸುಖವೆನ್ನುವುದು ಒಂದಾದರೆ, ಎಲ್ಲರನ್ನೂ ಜೀವಿಸಲು ಬಿಡು ಎನ್ನುವುದು ಇನ್ನೊಂದು ಅರ್ಥ. ರಾಜನಾದವ ಕರಗಳನ್ನು ಬೇಡಿ ಸ್ವೀಕರಿಸಬಾರದು ಅಥವಾ ಬಲಾತ್ಕಾರದಿಂದ ತೆಗೆದುಕೊಳ್ಳಲೂ ಬಾರದು. ಪ್ರಜೆಗಳಲ್ಲಿ ತಾವೇ ಸಮರ್ಪಿಸಬೇಕು ಎನ್ನುವ ಭಾವನೆ ಹುಟ್ಟಬೇಕಂತೆ. ಹಾಗಾದರೆ ಆ ರಾಜ ಎಂತವನಿರಬೇಕು! ಅವನ ಆಡಳಿತ ಹೇಗಿರಬಹುದು. ಇನ್ನು ಋಗ್ವೇದದ ನಾಲ್ಕನೇ ಮಂಡಲದ ೨೦ ಸೂಕ್ತದಲ್ಲಿ ವಾಮದೇವ ಋಷಿಯು ರಾಜನು ಯುದ್ಧಮಾಡುವ ಕುರಿತೂ ಹೇಳಿರುವುದು ರಾಜ್ಯಾಡಳಿತದ ಸ್ಥಿತಿಯನ್ನು ಹೇಳುತ್ತ. ಋಗ್ವೇದದ ೭ನೇ ಮಂಡಲದ ೮೪ ಸೂಕ್ತದಲ್ಲಿ ವಸಿಷ್ಠ ರಾಷ್ಟ್ರದ ಕುರಿತು ಹೇಳಿದ್ದು ಸಿಗುತ್ತದೆ. ಹೀಗೇ ಅನೇಕ ದೃಷ್ಟಾರರು ರಾಷ್ಟ್ರಾಡಳಿತವನ್ನು ಸೂಚಿಸಿದ್ದಾರೆ. ಋಗ್ವಿಧಾನದಲ್ಲಿ ರಾಜನ ಪಟ್ಟಾಭಿಷೇಕ ಹೇಗೆ ಮತ್ತು ಯಾವಾಗ ನಡೆಯಬೇಕು ಅನ್ನುವುದನ್ನು ಹೇಳುವುದು ಹೀಗೆ:
ರಾಜಾನಮಭಿಷಿಚ್ಯೇತ ತಿಷ್ಯೇಣ ಶ್ರವಣೇನವಾ | ಪೌಷ್ಣಾ ಸಾವಿತ್ರ ಸೌಮ್ಯಾಶ್ವಿರೋಹಿಣೀಷೂತ್ತರಾಸು ಚ ||
ಎನ್ನುವುದಾಗಿ ಪುಷ್ಯಾ ಮತ್ತು ಶ್ರವಣ ಮೊದಲಾದ ಶುಭ ನಕ್ಷತ್ರದಲ್ಲಿ ರಾಜ್ಯಾಭಿಷೇಕ ಮಾಡಬೇಕು ಎನ್ನುತ್ತಾ, ಅದರ ವಿಧಿ ವಿಧಾನಗಳನ್ನೂ ಸಹ ಹೇಳಲಾಗಿದೆ. ರಾಜನಿಗೆ ಪುರೋಹಿತನಾಗಿದ್ದವನು ರಾಜನನ್ನು ಆಶೀರ್ವದಿಸಬೇಕು. ಅಪ್ರತಿರಥ ಸೂಕ್ತದಲ್ಲಿನ ’ಆಶುಃ ಶಿಶಾನಃ’ ಎನ್ನುವ ಮಂತ್ರವನ್ನು ಪಠಿಸುತ್ತಾ ಎಲೈ ರಾಜನೇ ಸಮಸ್ತ ಪೃಥ್ವಿಯನ್ನು ಜಯಿಸುವವನಾಗು. ನಿನ್ನಲ್ಲಿ ಧರ್ಮವು ಜಾಗ್ರತವಾಗಿರಲಿ. ಪ್ರಜಾ ಪಾಲನೆಯಲ್ಲಿಯೂ ಸಹ ಧರ್ಮವನ್ನು ಆಚರಿಸು. ನಿನ್ನ ವಂಶವು ಅಭಿವೃದ್ಧಿಯಾಗಲಿ. ಎಂದು ಜಪಿಸಬೇಕು. ಯುದ್ಧಾರ್ಥವಾಗಿ ಹೊರಟು ನಿಂತ ರಾಜನನ್ನು ಅದೇ ಸೂಕ್ತದ ಆತ್ವಾಹಾರ್ಷಮಂತರೇಧಿ ಧ್ರುವಸ್ತಿಷ್ಠಾ ವಿಚಾಚಲಿಃ ಎನ್ನುವ ಮಂತ್ರದಿಂದ ಅಭಿಮಂತ್ರಿಸಬೇಕು ಎನ್ನುತ್ತದೆ.
ಅಂದರೆ ಹಿಂದೆಲ್ಲ ನಮ್ಮ ದೇಶದ ರಾಜರ ಆಡಳಿತವೆಂದರೆ ಅದು ಪ್ರಜೆಗಳ ಆಡಳಿತವಾಗಿತ್ತು. ಅದರಲ್ಲಿ ರಾಜನ ಪ್ರೇರಣೆ ಇರುತ್ತಿತ್ತು.
#ಮಿಹಿರಕುಲಿಯ_ಅಶೋಕನಿಗಿಂತ_ಸಮರ್ಥ_ಸಮುದ್ರಗುಪ್ತ
Sadyojath
No comments:
Post a Comment
If you have any doubts. please let me know...