ಯಾರು ಕಲಿಯ ಬಹುದು ಯಾರು ಕಲಿಯ ಬಾರದು ಎನ್ನುವದು ಎಲ್ಲಾ ಯುಗದಲ್ಲೂ ಇದ್ದುಕೊಂಡ ಸಮಸ್ಯೆ. ಎಲ್ಲಾ ಕಾಲದಲ್ಲೂಇದ್ದಿರುವಂತೆ , ಸ್ವಸಾಮರ್ಥ್ಯದಿಂದ ಕಲಿತು ವೇದಕ್ಕೆ ಅಪಭ್ರಂಶ ಹೇಳುವದೂ ಶತರುದ್ರೀಯ ಮತ್ತು ಅಂಭೃಣೀ ಸೂಕ್ತಕ್ಕೆ ,ಬನ್ನಂಜೆಯಂಥವರ ಭಾಷ್ಯದಿಂದಲೂ , ಭಗವಾನ್ ,ಜಾಕೀರ್ ನಾಯಕ್ ಅಂಥವರ ದುರ್ಮೇಧಿಗಳ ಅಭಿಪ್ರಾಯದಿಂದಲೂ ಕಂಡುಕೊಳ್ಳಬಹುದು.
ಹಲವು ಸ್ಮೃತಿಗಳು ಸ್ತ್ರೀಯರಿಗೆ , ನಾಲ್ಕನೆಯ ವರ್ಣದವರಿಗೆ ಪತಿತರಿಗೆ ಹೀಗೇ ನಾನಾ ವರ್ಗದವರಿಗೆ ವೇದಾಧ್ಯಯನವನ್ನು ನಿರಾಕರಿಸಿದೆ. ಆದರೇ ವೇದಗಳೇ ಎಲ್ಲಿಯೂ ಈ ವಿಷಯವನ್ನು ಹೇಳುವದಿಲ್ಲ ಎಂಬುದಾಗಿ ಶ್ರೀಶಂಕರರ ಭಾಷ್ಯದಿಂದ ಸ್ಪಷ್ಟವಾಗುತ್ತದೆ.
ಹಲವಾರು ಧರ್ಮ ಶಾಸ್ತ್ರಗಳನ್ನು ಆಧಾರಿಸಿ ಶ್ರೀ ಮಧ್ವಾಚಾರ್ಯರು ತಮ್ಮ ಬ್ರಹ್ಮ ಸೂತ್ರ *ಅಪಶೂದ್ರಾಧಿಕರಣ* ಎಂಬ ಸೂತ್ರ ಭಾಷ್ಯದಲ್ಲಿ ಸಂಪೂರ್ಣವಾಗಿ ಶ್ರೀಶಂಕರರನ್ನೇ ಅನುಸರಿಸಿದ್ದರೂ ಶ್ರೀಶಂಕರರು ಹಿಡಿದಿರುವ ಜಾಡನ್ನು ಹಿಡಿಯಾಲಾಗದೇ ಎಡವಿದ್ದಾರೆ. ಅವರು ಎಡವಿದ್ದನ್ನು ಅವರ ಅಜ್ಞಾನಿ ಶಿಷ್ಯರು ಶ್ರೀಶಂಕರರ ಮೇಲೆ ಆರೋಪಿಸಿ ತಮ್ಮ ಅವಿವೇಕವನ್ನು ಮೆರೆಯುವ ಪ್ರಯತ್ನ ಮಾಡಿದ್ದಾರೆ.
ಇಂದಿನ ಶ್ರೋತ್ರೀಯ ಬ್ರಾಹ್ಮಣರ ಚಿಂತೆ ಮತ್ತಷ್ಟೂ ಹಾದಿ ತಪ್ಪುತ್ತಿದೆ.ಇವರಲ್ಲಿ ಸ್ತ್ರೀಯರಿಗೆ ವೇದಾಧ್ಯಯನ ಶಾಸ್ತ್ರದಲ್ಲಿ ಹೇಳಿಲ್ಲ ಎಂಬ ಶಾಸ್ತ್ರ್ರ ಜ್ಞಾನವಿದೆಯೇ ಹೊರತು ಅವುಗಳ ಪೂರ್ವಾಪರದ ಅರಿವಿದ್ದಂತಿಲ್ಲ. ವಾಸ್ತವ ವಿಷಯವನ್ನು ಹೇಳುತ್ತಿದ್ದೇನೆ ,ಯಾರನ್ನೂ ವೈಯಕ್ತಿಕವಾಗಿ ದೂಷಿಸುತ್ತಿಲ್ಲ. ಪರಮಹಂಸ ಶ್ರೀಶ್ರೀಶ್ರೀ ಚಂದ್ರಶೇಖರ ಭಾರತಿ ಮಹಾಸ್ವಾಮಿಗಳು , ಅನಂತಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳೂ ಕೂಡ ಸ್ತ್ರೀಯರಿಗೆ ವೇದಾಧ್ಯಯನ ಇಲ್ಲ ಎಂದು ಹೇಳಿರುವದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಈ ಅಭಿಪ್ರಾಯವನ್ನು ತಿರಸ್ಕಾರ ಮಾಡುವ ಯೋಗ್ಯತೆಯಾಗಲೀ ಪ್ರಯತ್ನವಾಗಲೀ ನನ್ನಲ್ಲಿಲ್ಲ. ಆದರೇ ಈ ಅಭಿಪ್ರಾಯದ ಹಿಂದಿರುವ ಮೂಲ ಉದ್ದೇಶವನ್ನು ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ
ಮೊದಲಿಗೆ ವೇದಾಧ್ಯಯನಕ್ಕೆ ಹಲವರಿಗೆ ಅಧಿಕಾರ ಇಲ್ಲ ಎನ್ನುವ ವಿಷಯವನ್ನು ಮುಂದಿಟ್ಟುಕೊಂಡು ಎದ್ದೇಳುವ ಮೊದಲ ಪ್ರಶ್ನೆ .
ವೇದಾಧ್ಯಯನದ ಪ್ರಯೋಜನ ಏನು ?? ಇದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ವೇದ ಎಂದರೇನು ಎಂದು ತಿಳಿದುಕೊಂಡರೇ ವೇದದ ಪ್ರಯೋಜನ ಅರಿವಾದಂತೆ. ವೇದ ಎಂದರೇ ಮಂತ್ರಗಳಲ್ಲಿ ಅಡಗಿರುವ ಜ್ಞಾನ ಎನ್ನುವದು ಪ್ರಸಿದ್ಧ ಅರ್ಥ.
*ವಿದ್-ಜ್ಞಾನೇ* ತಿಳಿದುಕೊಳ್ಳುವದು ,ಅರಿತುಕೊಳ್ಳುವದು.
ವೇದ - ಶಾಸ್ತ್ರಾಣಿ ವಿಂದಂತಿ ಪ್ರಾಪ್ನುವಂತಿ ಅಸ್ಮಿನ್ *ವಿದ್ ಲೃ ಲಾಭೇ ಘಙ್* || ೦೩.೦೩.೧೨೧ ||
ಯಾವ ಶಾಸ್ತ್ರಗಳ ಸಹಾಯದಿಂದ ಧರ್ಮವನ್ನು ಬ್ರಹ್ಮವನ್ನು ತಿಳಿದುಕೊಳ್ಳಬಹುದೋ ,ತಿಳಿದದ್ದನ್ನು ಪಡೆದುಕೊಳ್ಳಬಹುದೋ ಅದು ವೇದ.
ಧರ್ಮ್ಮಬ್ರಹ್ಮಪ್ರತಿಪಾದಕಮಪೌರುಷೇಯವಾಕ್ಯಮ್ | ಇತಿ ವೇದಾನ್ತಶಾಸ್ತ್ರಮ್ ||
ಯಾವುದು ಧರ್ಮ ಹಾಗೂ ಬ್ರಹ್ಮವನ್ನು ಪ್ರತಿಪಾದಿಸುತ್ತವೆಯೋ ಅಂಥ ಅಪೌರುಷೇಯ ಅರ್ಥಾತ್ ಮನುಷ್ಯನ ಪ್ರಯತ್ನವಿಲ್ಲದೇ ತಾನೇ ತಾನಾಗಿ ಕಂಡುಕೊಂಡಂಥ ,ಋಷಿಗಳಾದ , ಕ್ರಾಂತದರ್ಶಿಗಳ ಕಾಣ್ಕೆ.
ಬ್ರಹ್ಮಮುಖನಿರ್ಗತಧರ್ಮ್ಮಜ್ಞಾಪಕಶಾಸ್ತ್ರಮ್ | ಇತಿ ಪುರಾಣಮ್ ||
ಧರ್ಮವನ್ನು ಜ್ಞಾಪಿಸುವದಕ್ಕಾಗಿ ಪರಮಾತ್ಮನ ಮುಖದಿಂದ ಹೊರ ಬಂದದ್ದು.
ತತ್ಪರ್ಯ್ಯಾಯಃ | ಶ್ರುತಿಃ ೨ ಆಮ್ನಾಯಃ ೩ | ಛನ್ದಃ ೪ ಬ್ರಹ್ಮ ೫ ನಿಗಮಃ ೬ ||
ಶ್ರುತಿ ,ಆಮ್ನಾಯ, ಛಂದಸ್ಸು , ಬ್ರಹ್ಮ .ನಿಗಮ ಮುಂತಾದ ಪರ್ಯಾಯ ಪದಗಳು ಇವೆ.
ಹೀಗೇ ವೇದಕ್ಕೆ ನಾನಾರಿತಿಯಲ್ಲಿ ಅಭಿಪ್ರಾಯ ಹೇಳುತ್ತಾರೆ.ಒಟ್ಟಾರೇ ಹೇಳುವದಾದರೇ ಅತ್ಯಂತ ಉತ್ಕೃಷ್ಟವಾದ ಜ್ಞಾನವನ್ನು ಯಾವದು ತಿಳಿಸಿಕೊಡುತ್ತದೆಯೋ ಅದೇ ವೇದ.
ಆದ್ದರಿಂದ ಅತ್ಯುತ್ಕೃಷ್ಟವಾದ , ಬ್ರಹ್ಮ ಜ್ಞಾನ ಪಡೆಯುವದಕ್ಕೇ ವೇದವು ಸಾಧನೆಯಾಗಿದೆ. ಜ್ಞಾನದಿಂದಲೇ ಅಥವಾ ಜ್ಞಾನವೇ ಮುಕ್ತಿ ಎಂಬುದು ಎಲ್ಲಾ ದಾರ್ಶನಿಕರ ಮತವೇ ಆಗಿರುವದರಿಂದ ವೇದದ ಪ್ರಯೋಜನ ಮುಕ್ತಿ ಎಂಬುದು ಸಿದ್ಧವಾಯಿತು. ವೇದಗಳ ಅಧ್ಯಯನ ಜ್ಞಾನಾರ್ಜನೆಗೆ ಸಾಧನವಾಯಿತು.
ಹಾಗಿದ್ದರೇ ವೇದಗಳನ್ನು ಅಧ್ಯಯನ ಮಾಡದೇ ಇದ್ದರೇ ಮುಕ್ತಿಯೇ ಇಲ್ಲವೇ ?? ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಇದಕ್ಕೆ ಶ್ರೀ ಶ್ರೀ ಶಂಕರಾಚಾರ್ಯರು ಉತ್ತರ ಹೇಳುತ್ತಾರೆ.
ಮನುಷ್ಯ ಜನ್ಮಮಾತ್ರದಿಂದಲೇ ಮುಕ್ತಿಗೆ ಯೋಗ್ಯರಾಗಿರುತ್ತಾರೆ ಎನುವದೇ ಶ್ರೀಶಂಕರರ ಅಭಿಪ್ರಾಯ. ಆದರೇ ಮಾರ್ಗವನ್ನು ಹೀಗೇ ಅರ್ಥಾತ್ ವೇದಾಧ್ಯಯನದಿಂದಲೇ ಮುಕ್ತಿ ಎನ್ನುವದು ಎಲ್ಲರಿಗೂ ಅನ್ವಯವಾಗುವಂಥ ವಿಷಯವಲ್ಲ, ವೇದಾಧ್ಯಯನ ಇಲ್ಲದೆಯೂ ಮುಕ್ತಿಗೆ ಯೋಗ್ಯರು ಎಂಬ ಶಾಸ್ರ್ತ್ರಾಭಿಪ್ರಾಯವನ್ನು ಶ್ರೀಶಂಕರರು ಸಂದರ್ಭಾನುಸಾರವಾಗಿ ಬಹಳ ವಿಸ್ತಾರವಾಗಿ ತಿಳಿಸಿದ್ದಾರೆ.
ಶ್ರೀಶಂಕರರ ಅಬಿಪ್ರಾಯವನ್ನು ತಿಳಿದುಕೊಳ್ಳುವಲ್ಲಿ ನಮ್ಮಲ್ಲಿರುವ ಪೂರ್ವಾಗ್ರಹವೂ ಅಡಚಣೆಯೇ ಆಗಿರುತ್ತದೆ. ಶ್ರೀ ಶಂಕರರು ಯಾವಯಾವ ಸಂದರ್ಭದಲ್ಲಿ ಯಾವಯಾವ ಅಭಿಪ್ರಾಯ ಹೇಳಿದ್ದಾರೇ ಎಂಬುದನ್ನು ಕೂಡಿಸಿಕೊಂಡು ಅದರಲ್ಲಿ ಶಂಕರರ ಸಮಗ್ರ ಅಭಿಪ್ರಾಯ ಏನೆಂದು ತಿಳಿದುಕೊಳ್ಳಬೇಕು.
ಕೆಲವರು ವೇದವನ್ನು ಸಂಪೂರ್ಣ ಅಧ್ಯಯನ ಮಾಡುವದಕ್ಕೂ ಮುಂಚೆಯೇ ಶಾಸ್ತ್ರಕ್ಕೆ ಜೋತು ಬಿದ್ದು , ತಾವು ಅರ್ಥ ಮಾಡಿಕೊಂಡಂಥ ಶಾಸ್ತ್ರಾಭಿಪ್ರಾಯಕ್ಕೆ ಅನುಕೂಲವಾಗುವಂಥ ಶಾಸ್ತ್ರ ವಾಕ್ಯಗಳನ್ನು ,ಅಲ್ಲಿ ಹೇಳಿದ ಆಖ್ಯಾಯಿಕೆ ,ಕಥೆಗಳನ್ನು ಹುಡುಕುತ್ತಿರುವದು ವಿಪರ್ಯಾಸ.
ನಾನು ಕಲಿತು ಕೊಳ್ಳಬೇಕು ,ನಾನು ವೇದಾಧ್ಯಯನ ಮಾಡಬೇಕು ಎನ್ನುವದಕ್ಕೆ ಶಾಸ್ತ್ರವೂ ಅನುಕೂಲವಾಗಿದೆ ಎನ್ನುವ ತಿಳುವಳಿಕೆಯೇ ಸಾಕು , ಬೇರೆಯವರಿಗೆ ಅನುಕೂಲವಾಗಿದೆಯೋ ಇಲ್ಲವೋ ಎನ್ನುವ ತಿಳುವಳಿಕೆ ಖಂಡಿತವಾಗಿಯೂ ಹಾದಿತಪ್ಪಿದ ಸೂಚನೆ ಮತ್ತು ಹಾದಿಗೆ ಅಡಚಣೆಯೇ ಆಗಿರುತ್ತದೆ. ಇನ್ನೊಬ್ಬರಿಗೆ ಪ್ರತಿಕೂಲ ಎನ್ನುವ ತಿಳುವಳಿಕೆಯೂ ವೇದಾಧ್ಯಯನಕ್ಕೆ ಅನರ್ಹವೇ ಆಗಿರುತ್ತದೆ ಎಂಬುದು ಸತ್ಯವೇ ಅಲ್ಲವೇ .
ಸ್ತ್ರೀಯರಿಗೆ ವೇದಾಧ್ಯಯನ ಇಲ್ಲವೆಂಬುವವರು, ಸ್ವತಃ ತಮ್ಮ ವೇದಾಧ್ಯಯನ ಎಷ್ಟರ ಮಟ್ಟಿಗೆ ಆಗಿದೆ ಎನ್ನುವದನ್ನು ತಿಳಿದುಕೊಂಡಿದ್ದಿದ್ದರೇ ಈ ಗೊಂದಲಕ್ಕೆ ಸಿಲುಕುತ್ತಿರಲಿಲ್ಲ. ವೇದಗಳನ್ನು, ಅದರ ಉದ್ದೇಶಾರ್ಥವನ್ನು ತಿಳಿದುಕೊಳ್ಳದವರಿಗೆ *ಕಿಂ ಋಚಾ ಕರಿಷ್ಯತಿ* ಎಂಬ ಮಾತು ಅನ್ವಯಿಸುತ್ತದೆ.
ಯಾರಾದರೂ ಬಳಿ ಬಂದು ನಾನು ವೇದ ಕಲಿಯಬಹುದೇ ಎಂದು ಕೇಳಿದಾಗ ಶಾಸ್ತ್ರಗಳು ಹೀಗೆ ಹೇಳಿವೆ ಎಂದು ಹೇಳುವದರ ಜೊತೆಗೆ ಆಸಕ್ತರ ಪೂರ್ವಾಪರಗಳನ್ನು ತಿಳಿದುಕೊಳ್ಳುವದು ಅತ್ಯಗತ್ಯವಾಗಿರುತ್ತದೆ. ಶತಾಯಗತಾಯ ಹೇಗಾದರೂ ವೇದಮಂತ್ರಗಳನ್ನು ಕಲಿಯಲೇ ಬೇಕೆಂದು ಮನಸ್ಸು ಮಾಡಿದಂಥವರಿಗೂ ,ಗಂಡಸರೋ ಹೆಂಗಸರೋ , ವೇದಗಳು ಸುಲಭವಾಗಿ ತನ್ನ ಗರ್ಭವನ್ನು ತೋರಿಸಿಕೊಳ್ಳುವದಿಲ್ಲ. ಪೂರ್ವ ಸಂಸ್ಕಾರದಿಂದಲೇ ಇದು ತಿಳಿಯುವಂಥದ್ದು.
ಅಧಿಕಾರಿಗಳು ಎಂಬು ಬೀಗುವ ಗಂಡಸರಿಗಿಂತ , ನಾನು ಎಷ್ಟೋ ಹೆಂಗಸರು ನೂರು ಪಾಲು ಉತ್ತಮವಾಗಿ ವೇದಮಂತ್ರಗಳನ್ನು ಸ್ವರಬದ್ಧವಾಗಿ ಹೇಳುವದನ್ನೂ ಹೇಳಿಕೊಡುವದನ್ನೂ ನೋಡಿದ್ದೇನೆ. ಹೀಗಿರುವಾದ ಯಾವಶಾಸ್ತ್ರ ಇಂಥವರಿಗೆ ಯಾವ ಅಧಿಕಾರವನ್ನು ಕೊಟ್ಟರೇ ಏನು ಪ್ರಯೋಜನ ? ಸಕಾಲ ಸಂಧ್ಯಾವಂದನೆ ಮಾಡಿದವರಿಗೇ ದುರ್ಲಭವಾದ ಇದು ಸಕಾಲ ಸಂಧ್ಯಾವಂದನೆಯನ್ನೂ ಮಾಡದೇ ಇರುವವರಿಗೆ ಬೇರೆಯವರ ಅಧಿಕಾರದ ವಿಷಯ ಗೋಚರವಾಗುವದಾದರೂ ಹೇಗೆ ?
ಶ್ರೀ ಶ್ರೀ ಚಂದ್ರ ಶೇಖರ ಭಾರತಿ ಮಹಾಸ್ವಾಮಿಗಳು ,ಅನಂತಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳಂಥವರು ಆಸಕ್ತರಿಗೆ ಈ ವಿಷಯದ ಬಗ್ಗೆ ಹೇಳಬಹುದು. ಏಕೆಂದರೇ ಆಸಕ್ತರ ಪೂರ್ವಾಪರ ತಿಳಿಯುವಂಥ ಜ್ಞಾನಘನರು ಅವರಾಗಿರುವದರಿಂದ , ಈ ವಿಷಯ ಅವರು ಹೇಳಿದವರಿಗೇ ಅನ್ವಯಿಸುತ್ತದೆಯೇ ಹೊರತು ಸಂಬಂಧವಿಲ್ಲದವರಿಗೆ ಯಾವ ಕಾಲಕ್ಕೂ ಅನ್ವಯಿಸುವದಿಲ್ಲ. ಏಕೆಂದರೇ ಗುರುವಿನ ಅವಶ್ಯಕತೆಯೇ ಬೇಡವೆಂದು ಸ್ವಸಾಮರ್ಥ್ಯದ ಮೇಲೇ ಅಧ್ಯಯನ ಮಾಡುವಂಥವರು ಈಗಲೂ ಹೇರಳವಾಗಿದ್ದಾರೆ .ಅವರಿಗೇ ಯವಕಾಲದಲ್ಲೂ ಅಧಿಕಾರವೇ ಇರುವದಿಲ್ಲ.
ಆದ್ದರಿಂದ ವೇದಾಧ್ಯಯನದ ಅಧಿಕಾರ ಯೋಗ್ಯ ಗುರು ನಿರ್ಧಾರ ಮಾಡುತ್ತಾನೆಯೇ ಹೊರತು ಶಾಸ್ತ್ರಗಳಲ್ಲ.
ಈಗ ಪುನಃ ಮೂಲ ಪ್ರಶ್ನೆಯ ಕಡೆ ಗಮನ ಹರಿಸೋಣ.
ಸ್ತ್ರೀಯರಿಗೆ ವೇದಕ್ಕೆ ಅಧಿಕಾರ ಇದೆಯೋ ಇಲ್ಲವೋ ?
ವೇದ ಮಂತ್ರಗಳನ್ನು ಕಂಡುಕೊಂಡಥ ,ಕ್ರಾಂತ ದರ್ಶಿಗಳಾದ ಹಲವು ಋಷಿಕೆಯರಿದ್ದಾರೆ ಅರ್ಥಾತ್ ಸ್ತ್ರೀ ಮಂತ್ರ ದ್ರಷ್ಟಾರರೂ ಇದ್ದಾರೆ.
ಕ್ರಾಂತ ದರ್ಶಿಗಳು ಅಥವಾ ಮಂತ್ರ ದ್ರಷ್ಟ್ರಾರರು ಎಂದರೇ ಯಾರು ? ಅವರು ಮಾಡುತಿದ್ದ ಉಪಾಸನೆ ಏನು ? ಅವರುಗಳೂ ವೇದಾಧ್ಯಯನವನ್ನು ಮಾಡುತ್ತಿದ್ದರೇ ? ವೇದಾಧ್ಯಯನದಿಂದಲೇ ಅವರು ವೇದಗಳನ್ನು ಕಂಡುಕೊಂಡರೇ ?
ಹೀಗೆ ಯೋಚಿಸಲಾಗಿ ವೇದೋಕ್ತ ಕರ್ಮಗಳು , ವೇದಾಧ್ಯಯನದಿಂದಲೇ ವೇದಗಳನ್ನು ಕಂಡುಕೊಂಡು ಅವುಗಳನ್ನು ದಾಟಿದರು ಎಂಬುದು ವಿಶ್ವಾಮಿತ್ರ, ಉಚಿಥ್ಯ, ಮೇಧಾತಿಥಿ ,ಕಣ್ವ ಅಂಗಿರಸರೇ ಮೊದಲಾದ ಋಷಿಗಳ ವೃತ್ತಾಂತದಿಂದ ತಿಳಿದುಕೊಳ್ಳಬಹುದು.
ಒಂದು ವೇಳೆ ಸ್ತ್ರೀಯರಿಗೆ ವೇದಾಧ್ಯಯನದ ಅಧಿಕಾರ ಇರಲಿಲ್ಲ ಎಂದರೇ ಮಂತ್ರದ್ರಷ್ಟಾರರಾದ ವಾಗಂಭೃಣಿ , ಅಪಾಲ ಮುಂತಾದ ಋಷಿಕೆಯರು ವೇದ ಮಂತ್ರಗಳನ್ನು ಹೇಗೆ ಕಂಡು ಕೊಂಡರು ? ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಒಂದು ವೇಳೆ ಸ್ತ್ರೀಯರಿಗೆ ವೇದಾಧ್ಯಯನಕ್ಕೆ ಅಧಿಕಾರ ಇಲ್ಲ ಎಂದಿದ್ದರೇ ಈ ಋಷಿಕೆಯರು ಕೇವಲ ಧ್ಯಾನೋಪಾಸನೆಗಳಿಂದ ವೇದ ಮಂತ್ರಗಳನ್ನು ಕಂಡುಕೊಂಡರು ಎಂಬುದಾಗುತ್ತದೆ. ಹಾಗಾಗಿ ಗುರುವಿನ ಉಪದೇಶಿತ ಮಾರ್ಗದಿಂದ ಸರಿಯಾದ ಧ್ಯಾನೋಪಾಸನೆಗಳ ಸಾಮರ್ಥ್ಯ ಉಳ್ಳ ಸ್ತ್ರೀಯರು , ಪೂರ್ವಸಂಸ್ಕಾರದಿಂದಲೂ ವೇದ ಮಂತ್ರಗಳನ್ನು ಕಂಡುಕೊಳ್ಳಬಹುದಾಗಿದೆ ಎಂಬುದು ಸಿದ್ಧವಾಗುತ್ತದೆ .
ಶಾಸ್ತ್ರಗಳು ಹೇಳುವಂತೆ ಅಧಿಕಾರ ಇಲ್ಲದ ಸ್ತ್ರೀಯರಿಗೆ ವೇದಮಂತ್ರಗಳು ಗೋಚರವಾಗಲೇ ಬಾರದಿತ್ತು. ಆದ್ದರಿಂದ ವೇದಗಳೇ ಅಧ್ಯಯನ ಅಧಿಕಾರಕ್ಕೆ ಲಿಂಗಭೇದಗಳನ್ನು ಹೇಳುತ್ತಿಲ್ಲ ಎಂಬುದು ಸಿದ್ಧವಾಯಿತು.
ಹಾಗಾದರೇ ಶಾಸ್ರ್ತ್ರಗಳು ವ್ಯರ್ಥವಾಯಿತಲ್ಲ ?? ಎಂದರೇ ಇಲ್ಲ ಎನ್ನುತ್ತೇವೆ .
ಧ್ಯಾನೋಪಾಸನೆಗಳ ಸಾಮರ್ಥ್ಯ ಉಳ್ಳವರೆಲ್ಲರೂ ಮಂತ್ರ ದ್ರಷ್ಟಾರರಾಗುತ್ತಾರೆ ಎಂಬುದು ಸಾಹಸಾಭಿಪ್ರಾಯವಾಗುತ್ತದೆ. ಶಾಸ್ತ್ರಗಳು ಜ್ಞಾಪಕವನ್ನು ಮಾಡುತ್ತಿದೆಯೇ ಹೊರತು ಮತ್ತೊಂದನ್ನು ಹೊಸದಾಗಿ ಹುಟ್ಟುಹಾಕುವದಿಲ್ಲ. ಸುಪ್ತವಾಗಿದ್ದುಕೊಂಡಿರುವ *ವಿದ್-ಜ್ಞಾನೇ* ಎಂಬುದಕ್ಕೆ ಶಾಸ್ತ್ರದಿಂದ ಸಂಸ್ಕಾರ ಉಂಟಾಗುತ್ತಿದೆ ಮತ್ತು ಸಂಸ್ಕಾರ ಮಾರ್ಗವನ್ನು ಸೂಚಿಸುತ್ತಿದೆಯೇ ಹೊರತು ಶಾಸ್ತ್ರಗಳಿಂದ ನಿರ್ಬಂಧನೆಗಳು ಉಂಟಾಗುತ್ತಿಲ್ಲ. ಇಲ್ಲಿ ಪೂರ್ವ ಸಂಸ್ಕಾರ, ಗುರೂಪದೇಶ , ಸಾಧನೆ ಮುಂತಾದವುಗಳು ಪೂರಕವಾಗಿ ಕೆಲಸ ಮಾಡುತ್ತಿವೆ ಎಂಬುದಾಗಿ ತಿಳಿದುಕೊಳ್ಳಬೇಕು.
ಯಾರಿಗಾದರೂ ವೇದಾಧ್ಯಯನ ಮಾಡಬೇಕು ಎಂದಾಗ ಸೂಕ್ತ ಗುರುವಿನ ಬಳಿಸಾರಬೇಕು. ಜ್ಞಾನಿಯಾದ ಗುರು ಆಸಕ್ತರ ಪೂರ್ವಾಪರಗಳನ್ನು ಕಂಡುಕೊಂಡು ಮಂತ್ರ ದೀಕ್ಷೆ ಕೊಡುತ್ತಾರೆ. ಇಲ್ಲಿ ಗಂಡಸರಿಗೆ ಮಾತ್ರವೇ ಅಧಿಕಾರ ಇದೆ ಎಂದು ಶಾಸ್ತ್ರ ಹೇಳಿದೆ ಎಂಬುದೊಂದೇ ಅಳತೆಗೋಲಾಗಿದ್ದರೇ ಗುರುವಿನ ಬಳಿ ಸಾರಿದವರೆಲ್ಲಾ ಮಂತ್ರ ದ್ರಷ್ಟಾರರೋ ಜ್ಞಾನಿಗಳೇ ಆಗಿಬಿಡುತ್ತಿದ್ದರು. ಹಾಗಾಗಿರುವದು ಲೋಕದಲ್ಲಿ ಕಂಡಿಲ್ಲ. ಅಧಿಕಾರಿಗಳಾಗಿರುವ ಗಂಡಸರೇ ವೇದಗಳಲ್ಲಿ ಯಾವ ಆಸಕ್ತಿಯೂ ಇಲ್ಲದೇ ಅನಧ್ಯಯನದಲ್ಲಿದ್ದಾರೆ.
ಮುಂಬರುವ ಸಂಚಿಕೆಗಳಲ್ಲಿ ವೇದಗಳಲ್ಲಿ ಸ್ತ್ರೀಯರು ವೇದಾಧ್ಯಯನ ಮಾಡಿರುವಂಥ ವಿಷಯಗಳನ್ನು ತಿಳಿಸಿಕೊಡುತ್ತೇನೆ. ಅವುಗಳು ಹೇಗೆ ಧರ್ಮ ಶಾಸ್ತ್ರದಲ್ಲಿ ಹೇಳಿರುವದಕ್ಕೆ ವಿರುದ್ಧವಾಗಿಲ್ಲ ಎಂಬುದನ್ನೂ ತಿಳಿಸಿಕೊಡುತ್ತೇನೆ.
ಸತ್ಯಪ್ರಕಾಶ