ಮೊನ್ನೆ ವಾತರಶನಾ ಎನ್ನುವ ಋಷಿಯ ಕುರಿತು ಬರೆದಿದ್ದೆ. ಅದು ಬರೆಯಲೂ ಒಂದು ಕಾರಣವಿತ್ತು. ಈಗ ಇನ್ನೊಂದು ವಿಷಯವನ್ನು ಬರೆಯುವೆ. ತೈತ್ತಿರೀಯ ಬ್ರಾಹ್ಮಣದ ಎರಡನೇ ಪ್ರಪಾಠಕದಲ್ಲಿ ಬರುವ ಯಜ್ಞೋಪವೀತವನ್ನು ಗಮನಿಸುವೆ. ’ಪ್ರಸೃತೋ ಹ ವೈ ಯಜ್ಞೋಪವೀತಿನೋ ಯಜ್ಞೋಪ್ರಸೃತೋನುಪವೀತಿನೋ ಯತ್ಕಿಂಚ . . . . ತತ್ತಸ್ಮಾದ್ಯಜ್ಞೋಪವೀತ್ಯೇವಾಧೀಯೀತ’ ಎಂದು ಬರುತ್ತದೆ. ಅಂದರೆ ಯಜ್ಞೋಪವೀತವನ್ನು ಧರಿಸಿದವನು ಮಾಡುವ ಯಜ್ಞವು ಅತ್ಯಂತ ಶ್ರೇಷ್ಠವಾಗಿರುತ್ತದೆ ಅದರ ಗುಣಗಳು ಅತ್ಯಂತ ಪ್ರಭಾವಶಾಲಿ ಮತ್ತು ಪರಿಣಾಮಕಾರಿ ಎಂದು ಅರ್ಥೈಸಲಾಗಿದೆ. ’ಅನುಪವೀತಿನೋ’ ಎಂದು ಮುಂದೆ ಹೇಳಲ್ಪಟ್ಟಿದೆ. ಅಂದರೆ, ಯಜ್ಞೋಪವೀತವನ್ನು ಧರಿಸದವನ ಯಜ್ಞವು ಗುಣಹೀನವಾಗಿರುತ್ತದೆ ಮತ್ತು ಅದು ಶ್ರೇಷ್ಠತರದ್ದಲ್ಲ ಎಂದು ಹೇಳಲ್ಪಟ್ಟಿದೆ. ಮುಂದೆ ’ಯತ್ಕಿಂಚ’ ಎಂದು ಬಂದಿರುವುದು ಬ್ರಾಹ್ಮಣನು ಯಜ್ಞೋಪವೀತವನ್ನು ಧರಿಸಿ ಎಷ್ಟೇ ವಿದ್ಯೆ ಕಲಿಯಲಿ ಅದು ಯಾಗಾನುಷ್ಠಾನಕ್ಕೆ ಸಮನಾಗಿರುತ್ತದೆ ಎನ್ನುವುದು ಸಾಯಣಾಚಾರ್ಯರು. ಅಂದರೆ ಇಲ್ಲಿ ಉಪವೀತವನ್ನು ಧರಿಸಿ ವಿದ್ಯೆ ಕಲಿಯುವುದೇ ಮುಖ್ಯ. ’ತತ್ತಸ್ಮಾದ್ಯಜ್ಞೋಪವೀತ್ಯೇವಾಧೀಯೀತ’ ಇಲ್ಲಿ ಪ್ರಸೃತಿಃ ಎನ್ನುವುದು ಅತ್ಯಂತ ಶ್ರೇಷ್ಠವಾದ ಗುಣವನ್ನು ಹೊಂದಿರುವುದು ಎನ್ನುವ ಅರ್ಥ. ಅಥವಾ ಸರಿಯಾದ ಮಾರ್ಗದಲ್ಲಿನ ಅನುಸರಣೆ.
ಹೌದು, ಹಾಗಾದರೆ ಯಜ್ಞೋಪವೀತ ಎನ್ನುವುದು ಯಾವುದು. ? ಅದನ್ನು ಸಿದ್ಧ ಪಡಿಸುವುದು ಹೇಗೆ ? ಎನ್ನುವುದನ್ನು ’ಆಜಿನಂ ವಾಸೋ ವಾ ದಕ್ಷಿಣತ ಉಪವೀಯ’ ಕೃಷ್ಣಾಜಿನ ಅಥವಾ ವಸ್ತ್ರವನ್ನು ಬಲಭಾಗವು ಕೆಳಗಿರುವಂತೆ ಲಂಬವಾಗಿ ಧರಿಸಬೇಕು. ’ಕೃಷ್ಣಾಜಿನ ವಸ್ತ್ರಯೋರನ್ಯತರ ದ್ರವ್ಯಂ’ ಎಂದು ಸ್ಪಷ್ಟವಾಗಿ ಭಾಷ್ಯದಲ್ಲಿ ಹೇಳಲಾಗಿದೆ. ಇನ್ನು ಯಜ್ಞೋಪವೀತ ಧಾರಣೆಯಲ್ಲಿಯೂ ಮೂರು ವಿಧವನ್ನು ಹೇಳಲಾಗಿದೆ.
ದಕ್ಷಿಣಂ ಬಾಹುಮುದ್ಧರತೇವಧತ್ತೇ ಸವ್ಯಮಿತಿ ಯಜ್ಞೋಪವೀತ ಮೇತದೇವ |
ವಿಪರೀತಂ ಪ್ರಾಚೀನಾವೀತಗ್ಂ ಸಂವೀತಂ ಮಾನುಷಮ್ ||
೧. ಎಡ ಭುಜದ ಮೇಲೆ ಯಜ್ಞೋಪವೀತವನ್ನು ಹಾಕಿಕೊಂಡು ಬಲದ ಕೈ ಕೆಳಗೆ ಲಂಬವಾಗಿ ಬಿಡಲ್ಪಡುವುದು #ಉಪವೀತ ಎನ್ನುವ ಹೆಸರಿನಿಂದ ಕರೆಸಿಕೊಳ್ಳುತ್ತದೆ. ಇದು ದೇವತೆಗಳು ಮತ್ತು ಮನುಷ್ಯರೂ ಸಾಮಾನ್ಯವಾಗಿ ಧರಿಸುವ ಪ್ರಕಾರವಾದರೂ ಹವ್ಯ ಕಾರ್ಯಗಳಿಗೆ ಮತ್ತು ದೇವತಾ ಕಾರ್ಯಗಳಿಗೆ ಹೇಳಲ್ಪಟ್ಟಿದೆ. ಭಟ್ಟ ಭಾಸ್ಕರಾಚಾರ್ಯರು ಇಲ್ಲಿ ದೇಹದ ಎಡಭುಜದಿಂದ ಇಳಿ ಬಿಟ್ಟು ಬಲಭಾಗದ ಅರ್ಧ ಮುಚ್ಚುವುದು ಉಪವೀತ ಎನ್ನುತ್ತಾರೆ.
೨. ಬಲ ಭುಜದ ಮೇಲಿನಿಂದ ಲಂಬವಾಗಿ ಎಡ ಕೈ ಕೆಳಗೆ ಬಿಡಲ್ಪಡುವುದು #ಪ್ರಾಚೀನಾವೀತ ಎಂತ ಕರೆಯಲ್ಪಡುತ್ತದೆ. ಇನ್ನು ಇದು ಕೇವಲ ಅಪರ ಕಾರ್ಯ. ಪಿತೃಕಾರ್ಯಗಳಿಗೆ ಮಾತ್ರವೇ ಹೇಳಲ್ಪಟ್ಟಿದೆ. ಬಲಭುಜದಿಂದ ಇಳಿಬಿಟ್ಟು ಎಡಭಾಗವನ್ನು ಮುಚ್ಚುವುದು ’ಸವ್ಯ’ ಎನ್ನಿಸಿಕೊಳ್ಳುತ್ತದೆ ಎಂದು ಭಟ್ಟ ಭಾಸ್ಕರರ ಭಾಷ್ಯ ಹೇಳುತ್ತದೆ.
೩. ಇನ್ನೊಂದು #ಸಂವೀತ ಎಂದು. ಅಂದರೆ ಬಲ ಮತ್ತು ಎಡ ಭುಜದ ಮೇಲೆ ಬರುವಂತೆ ಧರಿಸುವುದು. ಸಂವೀತವು ಸಾಮಾನ್ಯವಾಗಿ ಋಷಿಗಳು ಹಾಗೂ ಸನ್ಯಾಸಿಗಳು ಧರಿಸುವುದನ್ನು ಹೇಳಲ್ಪಟ್ಟಿದೆ. ಸಮವೀತಿ ಎನ್ನುವುದನ್ನೇ ಸಂವೀತಿ ಎಂದು ಹೇಳಲಾಗಿದ್ದು. ಸಾಮಾನ್ಯ ಮನುಷ್ಯರೆಲ್ಲ ಇದೇ ರೀತಿ ಬಳಸಿಕೊಳ್ಳುತ್ತಾರೆ ಎನ್ನುವುದು ಭಟ್ಟಭಾಸ್ಕರರ ಭಾಷ್ಯ.
ಇಲ್ಲಿ ಒಂದನ್ನು ಗಮನಿಸಬೇಕು ಯಜ್ಞೋಪವಿತವೆಂದರೆ ಮೂರೆಳೆ ಇರುವ ನೂಲಲ್ಲ. ಆ ನೂಲಿಗೆ ಯಾವ ಪ್ರಾಮುಖ್ಯತೆಯೂ ಇಲ್ಲ. ನಾವು ಸದಾಕಾಲ ಉತ್ತರೀಯವನ್ನು ದರಿಸಿ ಇರಲು ಅಸಾಧ್ಯ ಎನ್ನುವ ಕಾರಣಕ್ಕೆ ಬಂದ ವ್ಯವಸ್ಥೆಯೇ ಮೂರು ದಾರಗಳನ್ನು ಸೇರಿಸಿ ಬ್ರಹ್ಮಗಂಟು ಎಂದೆಲ್ಲ ಹೇಳಿದ ಪರ್ಯಾಯ ವ್ಯವಸ್ಥೆ. ಅಂದರೆ ಯಾರೇ ಉಪವೀತವನ್ನು ಅಥವಾ ಉತ್ತರೀಯವನ್ನು ಧರಿಸಿದರೂ ಅದರ ಫಲ ಬಹಳ. ಹಾಗೆ ನೋಡಿದರೆ ನಮ್ಮ ಮಾತೆಯರು ಮಹಿಳೆಯರು ಸೀರೆಯನ್ನು ಧರಿಸಿದಾಗ ಉಪವೀತದಂತೆಯೇ ಸೆರಗು ಬಂದಿರುತ್ತದೆ. ಅಂದರೆ ಅವರೂ ಸಹ ಉಪವೀತ ಧರಿಸಿದಂತೆಯೇ ಅಲ್ಲವೇ ? ಶುಭ ಸಂದರ್ಭಗಳಲ್ಲಿ ಅವರೂ ಉತ್ತರೀಯ ಹಾಕುತ್ತಾರೆ. ಅಂದರೆ ಅದು ಉಪವೀತ ಧಾರಣೆಯೇ.
ಇನ್ನು ಯಜ್ಞೋಪವೀತಧಾರಣೆಯ ಕುರಿತು ಎಡ ಬಲ ಎನ್ನುವ ಜಿಜ್ಞಾಸೆಯ ಜೊತೆಗೆ ಯಾವ ಯಜ್ಞೋಪವೀತಕ್ಕೆ ಶ್ರೇಷ್ಠತೆ ಜಾಸ್ತಿ ಎನ್ನುವುದು ತಿಳಿಯುತ್ತದೆ. ಅಂದರೆ ಉಪವೀತರಾಗಿದ್ದರೆ ನೋಡಲೂ ಚೆಂದ ಆ ಭಾವನೆಯೇ ಬೇರೆ.
#ಪರಮಂ_ಪವಿತ್ರಮ್
ಸದ್ಯೋಜಾತರು
No comments:
Post a Comment
If you have any doubts. please let me know...