April 16, 2021

ಸಂಧ್ಯೋಪಾಸನೆ ಮತ್ತು ದಧಿಕ್ರಾವ್ಣೋ



ಆನೆಯನ್ನು ನಾವು ಗುಇರುತಿಸುವುದು ಅದರ ಮದದಿಂದ. ಅದು ಆನೆಯ ಲಕ್ಷಣ. ವೇಗವನ್ನು ನಾವು ಗುರುತಿಸುವುದು ಕುದುರೆಯಿಂದ. ಕುದುರೆಯ ವೇಗ ಅತ್ಯಂತ ತೀಕ್ಷ್ಣ. ಇದನ್ನೇ ಹಾರ್ಸ್ ಪವರ್ ಎನ್ನುತ್ತಾರೆಯೋ ಏನೋ ನನಗೆ ತಿಳಿಯದು. ವೇಗವನ್ನು ಮತ್ತು ಶಕ್ತಿಯನ್ನು ಅಳೆಯುವುದು ಆಶ್ವಶಕ್ತಿಯಿಂದ, ಅಂದರೆ ಕುದುರೆಯ ಶಕ್ತಿಯ ಮಾಪನದಿಂದ ಎನ್ನುವುದು ನನ್ನ ತಿಳುವಳಿಕೆ. ನನಗದು ತಿಳಿಯದು. ವೇಗ ಎನ್ನುವುದು ಶಕ್ತಿ ಅಥವಾ ಸಾಮರ್ಥ್ಯಕ್ಕೆ ಸಂಬಂಧಿಸಿದೆ. ಈ ಅಶ್ವಶಕ್ತಿಯ ಮಾಪನ ಪ್ರಪಂಚದಾದ್ಯಂತವೂ ಅನುಸರಿಸಲಾಗುತ್ತದೆ. ಎಲ್ಲಿಂದ ಈ ಆಶ್ವ ಶಕ್ತಿಯ ಆರಂಭವಾಯಿತು ? ಯಾವಾಗ ಇದು ಬಳಕೆಗೆ ಬಂತು.?
ಸಾಮಾನ್ಯವಾಗಿ ಕುದುರೆಗಳ ಬಳಕೆಯಾಗಿದ್ದು ಯುದ್ಧಗಳಲ್ಲಿ. ರಥವನ್ನು ಎಳೆಯಲಿಕ್ಕೆ ಬಳಸಲಾಯಿತು. ಅದೇ ಕುದುರೆಯ ಓಟದ ಶಕ್ತಿಯನ್ನು ಮಾಪನವನ್ನಾಗಿ ತೆಗೆದುಕೊಂಡದ್ದು ಪ್ರಪಂಚ. ಅದೇನೇ ಇರಲಿ ನಾನು ವಿಜ್ಞಾನದ ವಿಷಯ ಹೇಳುತ್ತಿಲ್ಲ ಆದರೆ. . . . .
ಹಿಂದೆಲ್ಲಾ ರಥಗಳನ್ನು ಎಳೆಯುತ್ತಿದ್ದ ಕುದುರೆಗಳನ್ನು ದಧಿಕ್ರಾ ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು. ಈ ದಧಿಕ್ರಾ ಎನ್ನುವುದು ವಿಶೇಷವಾದ ಶಕ್ತಿಯುಳ್ಳ ಮತ್ತು ನಿಗದಿತ ಸಮಯದಲ್ಲಿ ಅಷ್ಟೇ ವೇಗದಿಂದ ಧಾವಿಸುವ ಕುದುರೆಗಳಿಗೆ. ನಿಗದಿತ ಸ್ಥಳದಿಂದ ಆರಂಭಿಸಿ ತಲುಪುವ ಬಿಂದುವಿಗೆ ಇರುವ ಕರಾರುವಾಕ್ಕಾದ ಮಿತಿ ಅದು. ಅಂದರೆ ವೇಗ ಮತ್ತು ಶಕ್ತಿಯನ್ನು ಅಳೆಯುತ್ತಿದ್ದುದು ಇದೇ ದಧಿಕ್ರಾ ಎನ್ನುವ ಕುದುರೆಗಳ ಅವಲಂಬನೆಯಿಂದ ಎಂದರೆ ಅಶ್ವಶಕ್ತಿಯ ಕಲ್ಪನೆ ಅಥವಾ ಪ್ರಯೋಗ ಬಂದದ್ದು ಆಗ. 

ಈ ದಧಿಕ್ರಾ ಎನ್ನುವುದು ಕಾಣಿಸಿಕೊಳ್ಳುವುದು ಋಗ್ವೇದದಲ್ಲಿ. ಮಿಕ್ಕ ವೇದಗಳಲ್ಲಿ ಇದು ಇಲ್ಲವೇ ಇಲ್ಲ ಎನ್ನುವಷ್ಟು. ಈ ದಧಿಕ್ರಾ ಎನ್ನುವುದನ್ನು ಕೇವಲ ದಧಿಕ್ರಾ ಎಂದು ಕೆಲವೆಡೆ ಹೇಳಿದ್ದರೆ ದಧಿಕ್ರಾವನ್ ಎಂದೂ ಮಿಕ್ಕೆಡೆ ಹೇಳಲಾಗಿದೆ. ರಥಗಳ ಸಾಲಿನಲ್ಲಿ ಮೊದಲು ನಿಲ್ಲಿಸುವುದು ಇದೇ ದಧಿಕ್ರಾ ಎನ್ನುವ ಕುದುರೆಗಳ ರಥವನ್ನು. ಸೂರ್ಯೋದಯದ ಕಾಲದಲ್ಲಿ ಮಂಜಿನಿಂದ ಆವರಿಸಿದ ಆಕಾಶವನ್ನು ಶುಭ್ರವನ್ನಾಗಿಸಿ ಸೂರ್ಯನ ಸುಂದರ ನಿರ್ಮಲ ಕಿರಣಗಳು ಭೂಮಿಯನ್ನು ತಲುಪುವಂತೆ ಮಾಡುವುದನ್ನು ದಧಿ ಎಂದು ಕರೆಯಲಾಗಿದ್ದರೂ, ಅದರ ನಂತರದ ಕ್ರಾ ಎನ್ನುವುದು ಚಲನೆಯನ್ನು ಸೂಚಿಸಿ ಕುದುರೆಯನ್ನು ಕುರಿತಾಗಿ ಹೇಳಲಾಗಿದೆ. ಇದಲ್ಲದೇ, ಕುದುರೆ ಸಹ ನಮಗೆ ದೊರೆತದ್ದು ಸೂರ್ಯನಿಂದಲೇ ಎನ್ನುವುದು ಅಲ್ಲಲ್ಲಿ ತಿಳಿದು ಬರುವುದರಿಂದ ಸೂರ್ಯನನ್ನೂ ಮತ್ತು ಕುದುರೆಯನ್ನೂ ದಧಿಕ್ರಾ ಎಂದು ಅನೇಕ ಕಡೆ ಹೇಳಲಾಗಿದೆ. ಅಗ್ನಿಗೆ ಸಹ ಸಂಬಂಧ ದಧಿಕ್ರಾದೊಂದಿಗೆ ಕಲ್ಪಿಸಿರುವುದು ಮತ್ತು ಉಷೋ ದೇವಿಯರ ಸಂಬಂಧ ಹೇಳುವುದು ಗಮನಿಸಿದರೆ ಸೂರ್ಯಮಂಡಲವೇ ದಧಿಕ್ರಾ ಇರಲೂ ಬಹುದು.

ಆದರೆ ಕುದುರೆಗೆ ದಧಿಕ್ರಾ ಎನ್ನುವ ಹೆಸರು ಇರುವ ಸಾಮ್ಯತೆಗೆ ಈ ಕಥೆ ಬಹಳ ಉಪಯುಕ್ತ.
ಯಾಮಥರ್ವಾ ಮನುಷ್ಪಿತಾ ದಧ್ಯಙ್ ಧಿಯಮತ್ನತ |
ತಸ್ಮಿನ್ಬ್ರಹ್ಮಾಣಿ ಪೂರ್ವಥೇಂದ್ರ ಉಕ್ಥಾ ಸಮಗ್ಮತಾರ್ಚನ್ನನು ಸ್ವರಾಜ್ಯಂ || ಋಗ್ವೇದ ಮೊದಲ ಮಂಡಲದ ಎಂಬತ್ತನೇ ಸೂಕ್ತದಲ್ಲಿ ದಧ್ಯಂಚ್ ಅಥವಾ ದಧೀಚಿ ಎನ್ನುವ ಋಷಿಯ ಪ್ರಸ್ತಾಪ ಬರುತ್ತದೆ. ಈ ದಧೀಚಿ ಪುರಾಣಗಳಲ್ಲಿ ಅತ್ಯಂತ ಪ್ರಸಿದ್ಧ ಋಷಿ. ಅಥರ್ವ ಎನ್ನುವ ಋಷಿಯ ಮಗನಾಗಿ ಜನಿಸಿದ ಈ ದಧೀಚಿ, ಒಂದು ಕಾಲದಲ್ಲಿ ಅಸುರರು ಈತನನ್ನು ನೋಡಿ ಓಡಿ ಹೋಗಿದ್ದರಂತೆ. ದಧೀಚಿ ಮೃತನಾದ ಬಳಿಕ ಜಗತ್ತಿಗೆ ಪುನಃ ಅಸುರರು ಉಪಟಳ ಕೊಡಲು ಆರಂಭಿಸುತ್ತಾರೆ. ನಿರ್ಭಯರಾಗಿ ಭೂಮಿಯನ್ನೆಲ್ಲಾ ವ್ಯಾಪಿಸಿ ಬಿಡುತ್ತಾರೆ. ಆಗ ಇಂದ್ರ ಅವರೊಡನೆ ಯುದ್ಧ ಮಾಡಲು ಅಶಕ್ತನಾಗುತ್ತಾನೆ. ಇಂದ್ರ ಈ ದಧೀಚಿ ಅಥವಾ ದಧ್ಯಂಚನನ್ನು ಹುಡುಕುತ್ತಾನೆ. ಆದರೆ ಋಷಿ ಸಿಕ್ಕುವುದಿಲ್ಲ, ಋಷಿ ಮೃತನಾಗಿದ್ದು ತಿಳಿದು ಬರುತ್ತದೆ. ಆಗ ಇಂದ್ರ ತನ್ನ ಜೊತೆಯಲ್ಲಿರುವವರಲ್ಲಿ ಆ ಋಷಿಯ ದೇಹದ ಯಾವುದಾದರೂ ಅವಶೇಷ ಇದೆಯೇ ಎಂದು ಕೇಳುತ್ತಾನೆ, ಅದಕ್ಕೆ ಅವರು "ದಧೀಚಿಯು ಒಂದಾನೊಂದು ಕಾಲದಲ್ಲಿ ತನಗೆ ದೊರಕಿದ್ದ ಮಧುವಿದ್ಯೆಯನ್ನು ಅಶ್ವಿನೀ ದೇವತೆಗಳಿಗೆ ಹೇಳಿಕೊಡುತ್ತಾನೆ. ವಾಸ್ತವದಲ್ಲಿ ಅದನ್ನು ಬೇರೆಯವರಿಗೆ ಉಪದೇಶಿಸುವಂತಿರಲಿಲ್ಲ. ಆದರೂ ಮಧುವಿದ್ಯೆಯನ್ನು ಹೇಳಿಕೊಡುತ್ತಾನೆ. ಇದನ್ನು ಹೇಳಿಕೊಟ್ಟ ಶಿಕ್ಷೆಯಾಗಿ ದಧೀಚಿಯ ತಲೆ ಕಡಿಯಲಾಗುತ್ತದೆ. ಆಗ ಅಶ್ವಿನೀ ದೇವತೆಗಳು ಕುದುರೆಯೊಂದರ ತಲೆಯನ್ನು ಜೋಡಿಸುತ್ತಾರೆ. ದಧ್ಯಂಚನ ಕುದುರೆಯಾಕಾರದ ತಲೆ ಮಾತ್ರ ಕುರುಕ್ಷೇತ್ರದ ಸಮೀಪವಿರುವ ಶರ್ಯಣಾವತ್ ಎನ್ನುವ ಒಂದು ಸರೋವರದಲ್ಲಿ ಬಿದ್ದು ತೇಲುತ್ತಿರುವುದನ್ನು ಹೇಳುತ್ತಾರೆ. ಅದನ್ನೇ ತೆಗೆದುಕೊಂಡು ಬರುತ್ತಾರೆ. ಅದರ ಮೂಳೆಯಿಂದಲೇ ಇಂದ್ರ ಅಸುರರನ್ನು ಸಂಹರಿಸುತ್ತಾನಂತೆ. ಒಂಬತ್ತಾವರ್ತಿ ಅಂದರೆ ಎಂಟುನೂರ ಹತ್ತು ಸಲ ಅಸುರರ ಮಾಯಾಜಾಲವನ್ನು ಬೇಧಿಸಿ ಜಯಿಸುತ್ತಾನೆ ಎನ್ನುವುದು ಭಾಷ್ಯಕಾರರ ಅಭಿಮತ.

ಇಲ್ಲಿ ದಧ್ಯಂಚನ ಹೆಸರೂ ಮತ್ತು ಆತನ ಶಿರೋಭಾಗ ಕುದುರೆಯಂತಿರುವುದನ್ನೂ ತುಲನೆ ಮಾಡಿದರೆ ದಧಿಕ್ರಾ ಎನ್ನುವುದು ಕುದುರೆಗೆ ಸಮೀಪದ ಪದವಾಗುತ್ತದೆ. ಇನ್ನು ಬೃಹದ್ದೇವತಾದಲ್ಲಿ ಮೋಡಗಳಿಗೆ ದಧಿಕ್ರಾ ಎನ್ನಲಾಗಿದೆ. ಋಗ್ವೇದದ ೭ ನೇ ಮಂಡಲದ ೪೪ನೇ ಸೂಕ್ತದಲ್ಲಿ ವಶಿಷ್ಠ ಮಹರ್ಷಿ ’ದಧಿಕ್ರಾಂ ವಃ ಪ್ರಥಮಮಶ್ವಿನೋಷಸಮಗ್ನಿಂ’ ಎನ್ನುತ್ತಾ ಈ ದಧಿಕ್ರಾ ಎನ್ನುವುದು ಅಶ್ವಗಳ ಅಭಿಮಾನ ದೇವತೆ ಎನ್ನುವಂತೆ ಹೇಳಿರುವುದು ಕಂಡು ಬರುತ್ತದೆ. ಇನ್ನು ಮೂರನೇ ಮಂಡಲದ ೨೦ನೇ ಸೂಕ್ತದಲ್ಲಿ ಗಾಥೀ ಎನ್ನುವ ಋಷಿಯೂ ಸಹ ದಧಿಕ್ರಾ ಎನ್ನುವುದು ಕುದುರೆ ಎನ್ನುತ್ತಾನೆ. ಋಷಿಯು ಇಲ್ಲಿ ಅಗ್ನಿಯನ್ನು ಸ್ತುತಿಸಿದ್ದರೂ ಅಶ್ವದ ಶಕ್ತಿಯ ಪ್ರಖರತೆ ಹೇಳಿದ್ದಾನೆ. ಅಂದರೆ ಈ ಆಶ್ವದ ಶಕ್ತಿಯನ್ನು ಆ ಕಾಲದಲ್ಲಿಯೇ ಮಾಪನವಾಗಿಯೋ ಅಥವಾ ಅದರ ಶಕ್ತಿ ಮತ್ತು ಸಾಮರ್ಥ್ಯವನ್ನು ಕಂಡಿದ್ದಾರೆ ಎನ್ನುವುದು ನಿಃಸ್ಸಂಶಯ.
ಋಗ್ವೇದದ ೪ನೇ ಮಂಡಲದ ೩೯ನೇ ಸೂಕ್ತದಲ್ಲಿ
ದದಿಕ್ರಾವ್ಣೋ ಅಕಾರಿಷಂ ಜಿಷ್ಣೋರಶ್ವಸ್ಯವಾಜಿನಃ | ಸುರಭಿನೋಮುಖಕರತ್ಪ್ರಣ ಆಯೂಂ ಷಿ ತಾರಿಷತ್ || 
ಈ ಮಂತ್ರದಲ್ಲಿ ಅಶ್ವವನ್ನು ಮತ್ತು ಅದರ ಅಭಿಮಾನಿ ದೇವತೆಯನ್ನು ಪ್ರಾರ್ಥಿಸಿ, ನಾನು ಸುಗಂಧಯುಕ್ತವಾಗಿ ಕಾಂತಿಯಿಂದ ಕಂಗೊಳಿಸುವಂತಾಗಲಿ. ನನಗೆ ಅಶ್ವದ ಶಕ್ತಿಯನ್ನು ಮತ್ತು ಸಮಯದ ಪಾಲನೆಯ ಶಕ್ತಿಯನ್ನು ಕೊಡು, ನನ್ನ ಮುಖ ಸುಗಂಧಯುಕ್ತವಾಗಲಿ ಮತ್ತು ಆಯುಷ್ಯವನ್ನು ದಿನದಿಂದ ದಿನಕ್ಕೆ ವರ್ಧಿಸು ಎನ್ನುವಂತೆ ವಾಮದೇವ ಮಹರ್ಷಿ ದಧಿಕ್ರಾ ದೇವತೆಯನ್ನು ಕೇಳಿಕೊಂಡಿದ್ದಾರೆ. ಅಂದರೆ ಈ ಮಂತ್ರವನ್ನು ಸಂಧ್ಯಾವಂದನೆಯ ಸಮಯದಲ್ಲಿಯೂ ಸಹ ಸಾಮಾನ್ಯವಾಗಿ ದಿನವೂ ಒಮ್ಮೆಯಾದರೂ ಹೇಳುತ್ತೇವೆ. ಇಲ್ಲಿ ದಧಿಕ್ರಾ ದೇವತೆಯನ್ನು ದಿನವೂ ನಾವು ಪ್ರಾರ್ಥಿಸುತ್ತೇವೆ. ಅಂದರೆ ನಮ್ಮ ಜೀವನ ಸಮಯ ಪಾಲನೆಯಿಂದ ಮಿತವಾಗಿ ಹಿತವಾಗಿರಬೇಕೆನ್ನುವ ಬಯಕೆಯಿಂದ ದಧಿಕ್ರಾ ದೇವತೆಯನ್ನು ಪ್ರಾರ್ಥಿಸುತ್ತೇವೆ ಅಂತಾಯಿತು.

#ಸಮಯಪಾಲನೆ_ಕುದುರೆಯಿಂದ
ಸದ್ಯೋಜಾತರು

No comments:

Post a Comment

If you have any doubts. please let me know...