ಬಾಗಿಲು ತಟ್ಟಿದಾಗ ನಾಳೆ ಬಾ ಎನ್ನುವವರು!*
ಬಹಳ ಹಿಂದೆ ಸೂಫಿ ಸಂತರೊಬ್ಬರಿದ್ದರಂತೆ. ಸದಾಕಾಲ ಆನಂದವಾಗಿರುತ್ತಿದ್ದರು. ಹಾಡುತ್ತ-ಕುಣಿಯುತ್ತ ದೇವರಸ್ಮರಣೆ ಮಾಡುತ್ತಾ ಇರುತ್ತಿದ್ದರು. ಒಮ್ಮೆ ಸಂತರನ್ನು ಭೇಟಿಯಾದ ಅಲ್ಲಿನ ಸುಲ್ತಾನರು ತಾವು ಸದಾ ಆನಂದವಾಗಿರುತ್ತೀರಿ. ಆದರೆ ಜಗತ್ತಿನ ಬಹುತೇಕ ಆನಂದವಾಗಿರುವುದಿಲ್ಲ. ಏನೋ ದುಃಖದಲ್ಲಿರುತ್ತಾರೆ. ತಾವು ಅವರಿಗೆಲ್ಲ ಆನಂದವನ್ನೇಕೆ ಕೊಡಬಾರದು? ಎಂದರಂತೆ.
ಸಂತರು ಜನರಿಗೆ ಆನಂದವನ್ನು ಕೊಡಲು ನಾನು ಸಿದ್ಧನಿದ್ದೇನೆ. ಆದರೆ ತೆಗೆದುಕೊಳ್ಳಲು ಅವರು ಸಿದ್ಧರಿದ್ದಾರೆಯೇ? ಎಂದು ಪ್ರಶ್ನಿಸಿದರಂತೆ. ಸುಲ್ತಾನರು ಆನಂದವನ್ನು ಕೊಡೆತ್ತೇನೆಂದಾಗ ಬೇಡವೆನ್ನುವ ಜನರಿರುತ್ತಾರೆಯೇ? ಎಂದರಂತೆ. ಸಂತರು ಆನಂದವೊಂದೇ ಅಲ್ಲ, ಒಳ್ಳೆಯದೆಲ್ಲ ಅವರ ಮುಂದಿದ್ದರೂ, ಅದನ್ನು ಗಮನಿಸದಿರುವ ಜನರಿದ್ದಾರೆ. ಬೇಕಿದ್ದರೆ ಅದನ್ನೀಗಲೇ ಪ್ರಯೋಗ ಮಾಡಬಹುದು! ಎಂದರು. ಕುತೂಹಲದಿಂದ ಒಪ್ಪಿಕೊಂಡ ಸುಲ್ತಾನರನ್ನು ಸಂತರು ದೊಡ್ಡದೊಂದು ಕಾಲುವೆಯ ಬಳಿ ಕರೆದೊಯ್ದರು. ಕಾಲುವೆಯನ್ನು ಮರದ ಸೇತುವೆಯಿತ್ತು. ಸೇತುವೆಯ ಮೇಲೆ ಜನಸಂದಣಿ ಹೆಚ್ಚಾಗಿರುತ್ತಿತ್ತು. ಭಿಕ್ಷುಕನೊಬ್ಬ ಪ್ರತಿದಿನ ಸೇತುವೆಯನ್ನು ದಾಟಿ ಬಂದು ಈಕಡೆ ಕುಳಿತು ಭಿಕ್ಷೆ ಬೇಡುತ್ತಿದ್ದ.
ಸಂತರು ಸುಲ್ತಾನರಿಗೆ ಹೇಳಿ ಒಂದು ಸಾವಿರ ನಾಣ್ಯಗಳ ಥೈಲಿಯನ್ನು ಸೇತುವೆಯ ಮಧ್ಯೆ ಇಡಿಸಿಸಿದರು. ಸುಲ್ತಾನರ ಸೈನಿಕರನ್ನು ಸೇತುವೆಯ ಎರಡೂ ಕಡೆ ಕಾವಲಿಟ್ಟರು. ಸೈನಿಕರಿಗೆ ಭಿಕ್ಷುಕ ಸೇತುವೆಯನ್ನು ದಾಟಲು ಬಂದ ತಕ್ಷಣ ಉಳಿದ ಜನರನ್ನು ಸೇತುವೆಯ ಮೇಲೆ ಬಾರದಂತೆ ತಡೆಯಲು ಹೇಳಿದರು. ಅಲ್ಲಿಗೆ ಭಿಕ್ಷುಕ ಬಂದ. ಆತನೊಬ್ಬನೇ ಸೇತುವೆಯ ನಡೆದು ಬರುತ್ತಿದ್ದ. ಆತ ನಾಣ್ಯಗಳ ಥೈಲಿಯನ್ನು ಗಮನಿಸಲೇ ಇಲ್ಲ. ನೇರವಾಗಿ ಈ ಕಡೆ ಬಂದ. ತಾನು ಯಾವಾಗಲೂ ಕೂರುವ ಸ್ಥಳದಲ್ಲಿ ಕುಳಿತು ಭಿಕ್ಷೆ ಬೇಡತೊಡಗಿದ. ಸಂತರು ಸುಲ್ತಾನರನ್ನುದ್ದೇಶಿಸಿ ಸೇತುವೆಯ ಮಧ್ಯಭಾಗದಲ್ಲಿ ನಾಣ್ಯಗಳ ಥೈಲಿಯನ್ನು ಇಡಿಸಿದ್ದಿರಿ. ಸೇತುವೆಯನ್ನು ಭಿಕ್ಷುಕನೊಬ್ಬನೇ ದಾಟಿದ. ಆದರೂ ನಾಣ್ಯಗಳನ್ನು ತೆಗೆದುಕೊಳ್ಳಲಿಲ್ಲ. ಮತ್ತೆ ಭಿಕ್ಷೆ ಬೇಡುತ್ತಿದ್ದಾನೆ. ಎಂದರು. ಸುಲ್ತಾನರಿಗೆ ಭಿಕ್ಷುಕ ನಾಣ್ಯಗಳನ್ನೇಕೆ ತೆಗೆದುಕೊಳ್ಳಲಿಲ್ಲವೆಂಬ ಆಶ್ಚರ್ಯ!
ಅವರು ಭಿಕ್ಷುಕನ ಬಳಿ ಹೋಗಿ ಸೇತುವೆಯ ಮೇಲೆ ನಾಣ್ಯಗಳ ಥೈಲಿಯಿತ್ತು. ಅಲ್ಲಿ ಓಡಾಡುತ್ತಿರಲಿಲ್ಲ. ಆದರೂ ನೀನು ನಾಣ್ಯಗಳನ್ನು ತೆಗೆದುಕೊಂಡು ಜೀವನವಿಡೀ ಸಮೃದ್ಧಿಯಾಗಿ ಬದುಕಬಹುದಿತ್ತು! ಅದನ್ನು ತೆಗೆದುಕೊಳ್ಳದೆ ನೀನೇಕೆ ಭಿಕ್ಷೆ ಬೇಡುತ್ತಿದ್ದೀಯೇ? ಎಂದು ಕೇಳಿದರು. ಭಿಕ್ಷುಕ ಮಹಾಸ್ವಾಮಿ! ಪ್ರತಿದಿನ ನಾನು ಸೇತುವೆಯನ್ನು ದಾಟುವಾಗ ನೂರಾರು ಜನರಿರುತ್ತಿದ್ದರು. ಇಂದು ಮೊಟ್ಟಮೊದಲನೆ ಬಾರಿಗೆ ಸೇತುವೆಯ ಮೇಲೆ ಯಾರೂ ಇಲ್ಲದ್ದನ್ನು ಕಂಡು ನನಗೆ ಆಶ್ಚರ್ಯವಾಯಿತು. ನಾನು ಕಣ್ಮುಚ್ಚಿಕೊಂಡು ಸೇತುವೆಯ ಮೇಲೆ ನಡೆಯಬಲ್ಲೆನೇ ಎಂಬ ಯೋಚನೆ ಬಂತು. ಕಣ್ಮುಚ್ಚಿಕೊಂಡು ಸೇತುವೆಯನ್ನು ಸರಾಗವಾಗಿ ದಾಟಿದೆ. ನಾಣ್ಯಗಳ ಥೈಲಿಯನ್ನು ನಾನು ಗಮನಿಸಲಿಲ್ಲ
ತಕ್ಷಣ ಸಂತರು ಸುಲ್ತಾನರೇ! ತಾವು ಸಾವಿರ ನಾಣ್ಯಗಳನ್ನು ಕೊಡಬೇಕೆಂದು ಇಚ್ಛಿಸಿದರೂ ತೆಗೆದುಕೊಳ್ಳುವ ಭಾಗ್ಯ ಭಿಕ್ಷುಕನಿಗಿರಲಿಲ್ಲ. ಅವನು ಕಣ್ಮುಚ್ಚಿಕೊಂಡು ನಡೆದು ಅವಕಾಶವನ್ನು ಕಳೆದುಕೊಂಡ. ಹಾಗೆಯೇ ನಾನು ಆನಂದವನ್ನು ಕೊಡಲು ಸಿದ್ಧನಿದ್ದೇನೆ. ಜನ ಏನೇನೋ ಕಾರಣಗಳಿಂದ ಕಣ್ಣುಮುಚ್ಚಿ ನಡೆಯುತ್ತಿದ್ದರೆ, ಅವರಿಗೆ ನಾನು ಆನಂದವನ್ನು ಹೇಗೆ ಕೊಡಲಿ? ಎಂದರಂತೆ. ಸುಲ್ತಾನರು ಸಂತರ ಮಾತುಗಳಲ್ಲಿದ್ದ ಸತ್ಯವನ್ನು ಅರ್ಥಮಾಡಿಕೊಂಡರಂತೆ.
ಬದುಕಿನಲ್ಲಿ ಏನೇನೋ ಕಾರಣಗಳಿಗಾಗಿ ಕಣ್ಮುಚ್ಚಿ ನಡೆಯುತ್ತಿರುವವರು, ಬದುಕುತ್ತಿರುವವರು, ಎದುರಿಗೇ ಇರಬಹುದಾದ ಆನಂದವನ್ನು ಗುರುತಿಸದೇ ಇರುವವರು, ಸುವರ್ಣಾವಕಾಶ ರೂಪದಲ್ಲಿ ಬೇಕಾದರೂ ಬರಬಹುದೆಂಬುದನ್ನು ಅರಿಯದೇ, ಕಣ್ಮುಚ್ಚಿಕೊಂಡು ಕುಳಿತು ಅದನ್ನು ಕಳೆದುಕೊಳ್ಳುತ್ತಿರುವವರನ್ನು ನಾವೂ ಕಂಡಿರಬಹುದಲ್ಲವೇ? ನಾವು ಅಂತಹವರಾಗದಿದ್ದರೆ ಸಾಕಲ್ಲವೇ?
ಕೃಪೆ:ವಿಶ್ವವಾಣಿ.
No comments:
Post a Comment
If you have any doubts. please let me know...