April 11, 2021

ಷೋಡಶ ಸಂಸ್ಕಾರಗಳು, ವಿವಾಹ

 ಸಂಸ್ಕಾರಗಳು
____________________

                     ವಿವಾಹ 
                     ________
ಲೇಖನ ಮಾಲೆ - 17.
( ದಿನಾಂಕ  3 -  04 - 2021ರಿಂದ
  ಮುಂದುವರೆದಿದೆ )

ಪ್ರಿಯ ಬಂಧುಗಳೇ,
ವಿವಾಹ ಸಂಸ್ಕಾರಕ್ಕೆ ಸಂಬಂಧಿಸಿದಂತೆ
 ಇಲ್ಲಿಯವರೆಗಿನ  ಲೇಖನಗಳಲ್ಲಿ 
ಹಲವಾರು ಹಂತಗಳನ್ನು ದಾಟಿ,
ಮಾಂಗಲ್ಯಧಾರಣೆಯ ಹಂತವನ್ನು ತಲುಪಿದ್ದೇವೆ.
ಮುಂದುವರೆಯೋಣ.

             ಮಾಂಗಲ್ಯಧಾರಣೆ.
              _______________
   
        ವರನು ವಧುವಿಗೆ ಮಾಂಗಲ್ಯ ಕಟ್ಟುವ ಮುನ್ನ ಇದರ ಹಿನ್ನಲೆಯನ್ನು ಸ್ವಲ್ಪ ಅರಿಯೋಣ.
      ವರನು ವಧುವಿಗೆ ಮಾಂಗಲ್ಯ ಕಟ್ಟುವ ಪದ್ಧತಿ ಯಾವಾಗ ಆರಂಭವಾಯಿತು ?
ನಿರ್ದಿಷ್ಟವಾಗಿ ತಿಳಿದಿಲ್ಲ.
ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮ ಸೀತೆಗೆ ಮಾಂಗಲ್ಯ ಕಟ್ಟಿದ ಪ್ರಸ್ತಾಪವಿಲ್ಲ.
ಮಹಾಭಾರತದಲ್ಲೂ ದ್ರೌಪದಿಗೆ ಮಾಂಗಲ್ಯ ಧಾರಣೆ ಆದ ಬಗ್ಗೆ ಹೇಳಿಲ್ಲ. ಆದರೆ ಮಹಾಭಾರತದಲ್ಲಿ ರಾಮೋಪಖ್ಯಾನ ಬರುತ್ತದೆ. ಅದರಲ್ಲಿ, ರಾವಣನು ಸೀತೆಯನ್ನು ಅಪಹರಿಸಿದಾಗ ಸೀತೆಯು ಮಾಂಗಲ್ಯವೊಂದನ್ನು ಬಿಟ್ಟು ಉಳಿದೆಲ್ಲ ಒಡವೆಗಳನ್ನು ಗಂಟುಕಟ್ಟಿ ಕೆಳಗೆ ಬಿಸುಟಳೆಂದು ಹೇಳಿದೆ. ಬಹುಶಃ ಇದನ್ನು ಪ್ರಕ್ಷಿಪ್ತವೆಂದು ಪರಿಗಣಿಸಬಹುದು.
ವೇದಗಳಲ್ಲೂ, ನಿರ್ದಿಷ್ಟವಾಗಿ ಮಾಂಗಲ್ಯಧಾರಣೆ ಕುರಿತು ಏನೂ ಹೇಳಿಲ್ಲ. ಆದರೂ ಈ ಬಗ್ಗೆ ಸ್ವಲ್ಪ ಆಳವಾಗಿ ಕೆದಕಿ ನೋಡೋಣ.
ಮಾಂಗಲ್ಯ ಪದದ ವ್ಯುತ್ಪತ್ತಿ 'ಮಂಗಲ ' ಪದದಿಂದ.
" ಮಂಗಂ ಸುಖಂ ಲಾತೀತಿ = ಮಂಗಲಂ
  = ಲಾವಾನೇ = ಸುಖವನ್ನು ಕೊಡುವುದು.
                      ಅಥವಾ
" ಮಂಗತಿ ಧನ್ಯಮಿತಿ ಮಂಗಲಂ ಮಗಿ
  ಗತೌ = ಇಲ್ಲಿ ಧಾನ್ಯವನ್ನು ಹೊಂದುವುದು 
   ಎನ್ನುವ ಅರ್ಥದಲ್ಲಿ ಮಂಗಲಂ ಪದ
    ಬಳಸಲಾಗಿದೆ.
" ಮಂಗಲಸ್ಯ ಭಾವಃ ಮಾಂಗಲ್ಯಂ =
  ಮಂಗಲ ಭಾವವು = ಅಮರಕೋಶ -
  ಭಾಗ-೧, ಶ್ಲೋಕ -೨೭. 
ಮಾಂಗಲ್ಯ ಪದವು ಭಗವಂತ ನೃಸಿಂಹರನ್ನೂ ಸೂಚಿಸುತ್ತಿದೆ
ನೃಸಿಂಹ ಸಹಸ್ರನಾಮ ಹೇಳುತ್ತದೆ
= ಮಾಂಗಲ್ಯಾಯ ಮನೋಜ್ಞಾಯ ಮಂತವ್ಯಾಯ ಮಹಾತ್ಮನೇ.
ಸೂತ್ರಕಾರರು ಮಾಂಗಲ್ಯಧಾರಣೆ ವಿವೇಚಿಸದಿದ್ದರೂ, ಪ್ರಯೋಗಕಾರರು ಮಾಂಗಲ್ಯಧಾರಣೆಯ ವಿಧಿಯನ್ನು ಹೇಳಿರುತ್ತಾರೆ.‌ಇವರ ಪ್ರಕಾರ
" ಬಧ್ನೀಯಾತ್ ಕನ್ಯಕಾ ಕಂಠೇ ಸೂತ್ರಂ ಮಣಿಸಮನ್ವಿತಂ " - ಮಾಂಗಲ್ಯಂ ತಂತು ನಾನೇನ ಮಂತ್ರೇಣ ಸ್ಯಾತ್ ಸದಾಸತೀ "||
ಬ್ರಹಾಂಡ ಪುರಾಣ ಹೇಳುತ್ತದೆ -
" ಮಾಂಗಲ್ಯಸೂತ್ರ ರತ್ನಾಂಶು, ಶೋಣಿ ಮಾಧರಕಂಧರಃ ".
     ವರನು ವಧುವಿಗೆ ಮಾಂಗಲ್ಯ ಕಟ್ಟುವ ಸಮಯದಲ್ಲಿ ಹೇಳುವ  ಮಂತ್ರ ಹೀಗಿದೆ :

" ಮಾಂಗಲ್ಯಂ ತಂತು ನಾನೇನ, ಮಮ
  ಜೀವನ ಹೇತುನಾ |
‌‌  ಕಂಠೇ ಬಧ್ನಾಮಿ ಸುಭಗೇ, ತ್ವಂ‌ ಜೀವ
  ಶರದಾಂ ಶತಂ " ||
(ದಯವಿಟ್ಟು ಗಮನಿಸಿ - ಇದು ಮಂತ್ರವಲ್ಲ. ಇದೊಂದು ಶ್ಲೋಕ ಮಾತ್ರ ).
ಈ ಶ್ಲೋಕಕ್ಕೆ ಮೂಲ ಯಾವುದು ಗೊತ್ತೇ ?
ತೈತ್ತಿರೀಯ ಸಂಹಿತೆಯ ಒಂದು ಮಂತ್ರ ಹೀಗಿದೆ :

" ಯತ್ತೇ ದೇವೀ ನಿಋರ್ತಿರಾ ಬಬಂಧ
  ದಾಮಗ್ರೀವಾಸ್ವ ವಿಚರ್ತ್ಯಮ್ |
  ಇದಂ ತೇ ತದ್ವಿಷ್ಯಾಮ್ಯಾಯುಷೋ
   ನ ಮಧ್ಯಾದಥಾ ಜೀವಃ ಪಿತುಮದ್ಧಿ 
   ಪ್ರಮುಕ್ತಃ " ||
ಇನ್ನೊಂದು ಶ್ಲೋಕ ಹೇಳುತ್ತದೆ :

" ಮಂಗಲಂ ಭಗವಾನ್ ವಿಷ್ಣುಃ,
   ಮಂಗಲಂ ಮಧುಸೂದನಃ |
   ಮಂಗಲಂ ಪುಂಡರೀಕಾಕ್ಷೋ,
   ಮಂಗಲಂ ಗರುಡಧ್ವಜಃ " ||

ಇದು ಹೇಗೇ ಇರಲಿ,
ಮಾಂಗಲ್ಯಧಾರಣೆ ಪ್ರಯೋಗವನ್ನು ಪರಿಶೀಲಿಸೋಣ.
ವಧು ‌ವರನ ಮನೆಯಿಂದ ನೀಡಲ್ಪಟ್ಟ ಹೊಸ ಸೀರೆಯನ್ನು 'ಮಡಿಶಾಲ್' ಸೀರೆ ಮಾದರಿಯಾಗಿ ಉಟ್ಟುಕೊಂಡು ವಿವಾಹ ಮಂಟಪಕ್ಕೆ ಬರುತ್ತಾಳೆ. ಆ ನಂತರ ವರನು ಎರಡು ಬಾರಿ ಆಚಮನ ಮಾಡಬೇಕು.
ಮಾಂಗಲ್ಯಕ್ಕೆ ಕೆಳಗಿನಂತೆ ಪೂಜೆ ಸಲ್ಲಿಸಬೇಕು.
ಮಾಂಗಲ್ಯ ದೇವತೆಯನ್ನು ಆವಾಹನೆ ಮಾಡಿ, ಷೋಡಶೋಪಚಾರ ಪೂಜೆಯನ್ನು ಸಮರ್ಪಿಸಬೇಕು.
" ಓಂ ಮಾಂಗಲ್ಯ ದೇವತಾಭ್ಯೋ ನಮಃ ,
   ಧ್ಯಾಯಾಮಿ, ಆವಾಹಯಾಮಿ
(ಎಂದು ಧ್ಯಾನಿಸಿ, ಆವಾಹನೆ ಮಾಡಿ)
ಅರ್ಘ್ಯಂ, ಪಾದ್ಯಂ, ಆಚಮನೀಯಂ, ಸ್ನಾನೀಯಂ ಸಮರ್ಪಯಾಮಿ.
ವಸ್ತ್ರೋತ್ತರೀಯಂ, ಗಂಧಂ, ಪುಷ್ಪ, ಧೂಪ, ದೀಪ ನಿವೇದನ ತಾಂಬೂಲಂ ಸಮರ್ಪಯಾಮಿ. 
ಪುನರಾಚಮನೀಯಂ ಸಮರ್ಪಯಾಮಿ.
ಮಂತ್ರಪುಷ್ಪಂ, ಸ್ವರ್ಣಪುಷ್ಪಾದಿ ಷೋಡಶೋಪಚಾರಾನ್ 
ಸಮರ್ಪಯಾಮಿ "||
ನಂತರ ಒಂದು ಬೆಳ್ಳಿಯ ತಟ್ಟೆಯಲ್ಲಿ ಅರಿಶಿನ, ಕುಂಕುಮ ಭೂಷಿತ ತೆಂಗಿನಕಾಯಿ ಮತ್ತು ಬೆಲ್ಲದ ಅಚ್ಚನ್ನು ಇರಿಸಿಕೊಂಡು, ತೆಂಗಿನಕಾಯಿಯ ಮೇಲೆ ಮಂಗಲಸೂತ್ರ ಸಹಿತ ಮಾಂಗಲ್ಯವನ್ನು ಇರಿಸಿಕೊಂಡು, ಅದನ್ನು ನೆರೆದಿರುವ ಎಲ್ಲಾ ಭಾಗವತರು, ಸುಮಂಗಲಿಯರ ಕೈಲಿ ಮುಟ್ಟಿಸಬೇಕು. ಭಾಗವತರು ಮತ್ತು ಸುಮಂಗಲಿಯರು ಮಾಂಗಲ್ಯವನ್ನು ಮುಟ್ಟುವಾಗ ಮನಃಪೂರ್ವಕವಾಗಿ ಹೀಗೆ ಹೇಳುತ್ತಾ ಮುಟ್ಟಬೇಕು.

" ದೀರ್ಘ ಸುಮಂಗಲೀ ಭವ |
   ಆಯುರಾರೋಗ್ಯ ಐಶ್ವರ್ಯ
   ಸಂಪತ್ಸಮೃದ್ಧಾ ಭವ |
   ಗೃಹಸ್ಥಾಶ್ರಮೇ ಶುಭಾನಿ
    ವರ್ಧಂತಾಮ್ " ||

ವಧುವು ತಂದೆಯ ಮಡಿಲಲ್ಲಿ, ಧಾನ್ಯ ರಾಶಿಯ ಮೇಲೆ ಪೂರ್ವಾಭಿಮುಖವಾಗಿ ಕುಳಿತಿರಬೇಕು. ವರನು ಪಶ್ಚಿಮಾಭಿಮುಖವಾಗಿ ನಿಂತುಕೊಂಡು, ಕೆಳಗಿನ ಶ್ಲೋಕ ಹೇಳಿ ಮಂಗಲಸೂತ್ರವನ್ನು ಆಕೆಯ ಕೊರಳಿನಲ್ಲಿ ಕಟ್ಟಬೇಕು.
 
" ಮಾಂಗಲ್ಯಂ ತಂತು ನಾನೇನ ಮಮ
 ‌‌  ಜೀವನ ಹೇತುನಾ |
‌‌‌‌   ಕಂಠೇ ಬಧ್ನಾಮಿ ಸುಭಗೇ ತ್ವಂ ಜೀವ
 ‌‌  ಶರದಶ್ಶತಮ್ ||

   ಮಂಗಲಂ ‌ಭಗವಾನ್ವಿಷ್ಣುಃ
  ‌ ಮಂಗಲಂ ಮಧುಸೂದನಃ
‌‌‌   ಮಂಗಲಂ ಪುಂಡರೀಕಾಕ್ಷೋ
 ‌‌‌  ಮಂಗಲಂ ಗರುಡಧ್ವಜಃ " ||

ವರನು ವಧುವಿನ ಕೊರಳಿಗೆ ಮಂಗಲಸೂತ್ರವನ್ನು ಕಟ್ಟುವ ಸಮಯದಲ್ಲಿ ಪುರೋಹಿತರು ಘಂಟಾನಾದವನ್ನೂ, ವಾದ್ಯಗೋಷ್ಠಿಯವರು ಮಂಗಳವಾದ್ಯ ಘೋಷವನ್ನೂ ಮಾಡಬೇಕು. ವರನು ಮಂಗಲಸೂತ್ರಕ್ಕೆ ಒಂದು ಗಂಟು ಹಾಕಿದ ನಂತರ ವರನ ಸಹೋದರಿಯು ಮಂಗಲಸೂತ್ರಕ್ಕೆ ಇನ್ನೊಂದು ಗಂಟನ್ನು ಗಟ್ಟಿಯಾಗಿ ಹಾಕಬೇಕು. ಮಾಂಗಲ್ಯಧಾರಣೆಯ ಕೂಡಲೇ ನೆರೆದಿರುವವರೆಲ್ಲೂ ಶೋಭನಾಕ್ಷತೆಯನ್ನು ವಧೂ-ವರರ ಮೇಲೆ ಸಿಂಪಡಿಸಬೇಕು.

(ಟಿಪ್ಪಣಿ :- ಮಂಗಲಸೂತ್ರಕ್ಕೆ ವರನ ಸಹೋದರಿ ಎರಡನೆಯ ಗಂಟನ್ನು ಹಾಕಬೇಕೆನ್ನುವುದು ಕೇವಲ ಸಂಪ್ರದಾಯವೇ ಹೊರತು ಯಾವುದೇ ಶಾಸ್ತ್ರಾಧಾರಿತವಲ್ಲ. ಯಾವ ಸೂತ್ರಕಾರರೂ ಇದನ್ನು ಹೇಳಿರುವುದಿಲ್ಲ. ಹೇಗೋ, ಏನೋ ಆಚರಣೆಗೆ ಬಂದಿದೆ.
ಇಲ್ಲಿ ನನಗೆ ಒಂದು ಅನುಮಾನ - ಎರಡನೇ ಗಂಟನ್ನು ವರನ ಸಹೋದರಿ ಹಾಕಬೇಕೆಂದು ಪುರೋಹಿತರು ಹೇಳುತ್ತಾರೆ. ವರನಿಗೆ ಬಹುಮಂದಿ ಸಹೋದರಿಯರು ಇದ್ದರೆ, ಜ್ಯೇಷ್ಠ ಸಹೋದರಿ ಮಾತ್ರ ಗಂಟು ಹಾಕಬೇಕೆಂದು ಸಹ ಹೇಳುತ್ತಾರೆ. ವರನಿಗೆ ಜ್ಯೇಷ್ಠ ಸಹೋದರಿಯೇ ಇಲ್ಲದೆ ಕಿರಿಯ ಸಹೋದರಿ ಮಾತ್ರ ಇದ್ದರೆ ? ಆ ಕಿರಿಯ ಸಹೋದರಿಗೆ ಇನ್ನೂ ವಿವಾಹವಾಗದೇ ಇದ್ದರೆ ?  ಜ್ಯೇಷ್ಠ ಸಹೋದರಿ/ಕಿರಿಯ ಸಹೋದರಿ ಇದ್ದೂ, ವಿಧವೆಯಾಗಿದ್ದರೆ ?
ದಯವಿಟ್ಟು ಯಾರಾದರೂ ವಿವರಿಸೀಪ್ಪಾ)
 ‌‌‌‌
{ ವಿವರಣೆ : - ಶ್ರೀವೈಷ್ಣವ ಬ್ರಾಹ್ಮಣರಲ್ಲಿ, ಹೆಚ್ಚಿನ ಮನೆಗಳಲ್ಲಿ ವಧುವಿಗೆ ತಾಯಿಯ ಮನೆಯಲ್ಲಿಯೂ ಒಂದು ಮಾಂಗಲ್ಯ ಕಟ್ಟುವ ಸಂಪ್ರದಾಯವಿದೆ.  ಈ ಮಂಗಲಸೂತ್ರವನ್ನು ವಧುವಿನ ತಾಯಿಯು ವಿವಾಹದ ದಿನಕ್ಕೆ ಮುಂಚಿತವಾಗಿ ಅಂದರೆ ದೇವರ ಸಮಾರಾಧನೆ ಎಂಬ ಸಮಾರಂಭವನ್ನು ನಡೆಸುವ ದಿನ ವಧುವಿನ ಕೈಲಿ ಲಕ್ಷ್ಮೀ ಪೂಜೆಯನ್ನು ಮಾಡಿಸಿ, ನಂತರ ವಧುವಿನ ತಾಯಿಯು ವಧುವಿಗೆ ಕಟ್ಟುತ್ತಾಳೆ.  ಕೆಲವೇ ಮನೆಗಳಲ್ಲಿ ತವರುಮನೆಯ ಮಂಗಲಸೂತ್ರವನ್ನು ವಧುವಿನ ಸೋದರತ್ತೆಯು ವಧುವಿಗೆ ಕಟ್ಟುವ ಸಂಪ್ರದಾಯವಿದೆ.  ತವರು ಮನೆಯಲ್ಲಿ ಮಂಗಲಸೂತ್ರವನ್ನು ಕಟ್ಟುವ ಸಂಪ್ರದಾಯವು ಇನ್ನಿತರ ಬ್ರಾಹ್ಮಣರ ಮನೆಗಳಲ್ಲಿಯೂ ಇದೆ.  ಇದಲ್ಲದೆ, ಶ್ರೀವೈಷ್ಣವ ಬ್ರಾಹ್ಮಣರನ್ನು ಹೊರತುಪಡಿಸಿ, ಇನ್ನಿತರೆ ಕೆಲವು ಬ್ರಾಹ್ಮಣರ ಮನೆಗಳಲ್ಲಿ ' ನಾಗೋಲಿ ತಾಳಿ '  ಎಂದು ಮೂರನೇ ತಾಳಿ ಕಟ್ಟುವ ಸಂಪ್ರದಾಯವೂ ಅಲ್ಲಲ್ಲಿ ಕಂಡುಬರುತ್ತದೆ. ಆದರೆ ' ನಾಗೋಲಿ ತಾಳಿ ' ಕಟ್ಟುವ ಸಂಪ್ರದಾಯವು ಶ್ರೀವೈಷ್ಣವರಲ್ಲಿ ಕಂಡುಬರುವುದಿಲ್ಲ.
      ' ಮಂಗಲಸೂತ್ರ ' ಅಂದರೆ ಚಿನ್ನದ ತಾಳಿ ಮತ್ತು ಎರಡು ಚಿನ್ನದ ಅಷ್ಟದಳ ಗುಂಡುಗಳು. ತವರು ಮನೆಯ ಮಂಗಲಸೂತ್ರ ಮತ್ತು ವರನು ವಧುವಿಗೆ ಕಟ್ಟುವ ಮಂಗಲಸೂತ್ರ ಎರಡೂ ಒಂದೇ ರೀತಿ ಇರುತ್ತವೆ.  ತಾಳಿ ಮತ್ತು ಗುಂಡುಗಳನ್ನು ಅರಿಶಿನ ದಾರಕ್ಕೆ ಪೋಣಿಸಿರುತ್ತಾರೆ. ಶ್ರೀವೈಷ್ಣವ ಬ್ರಾಹ್ಮಣರಲ್ಲಿ  ಮಂಗಲಸೂತ್ರಕ್ಕೆ ಕರಿಮಣಿಗಳನ್ನು ಪೋಣಿಸುವ ಸಂಪ್ರದಾಯ ಇರುವುದಿಲ್ಲ. ಇತರೆ ಬ್ರಾಹ್ಮಣರಲ್ಲಿ ಮಂಗಲಸೂತ್ರಕ್ಕೆ ಕರಿಮಣಿಗಳನ್ನು ಪೋಣಿಸುವ ಸಂಪ್ರದಾಯವಿರುತ್ತದೆ.
         ತವರು ಮನೆಯ ತಾಲಿ ಮತ್ತು ವರನು ವಧುವಿಗೆ ವಿವಾಹದ ದಿನ ಕಟ್ಟಿದ ತಾಲಿಗಳನ್ನು ವಿವಾಹದ ಹದಿನಾರನೇ ದಿನ ಅಥವಾ ಒಂದು ಶುಭ ದಿನ, ಶುಭ ಮುಹೂರ್ತದಲ್ಲಿ ಒಂದೇ ಅರಿಶಿನ ದಾರಕ್ಕೆ ಅಥವಾ ಚಿನ್ನದ ಸರಕ್ಕೆ ಸೇರಿಸಲಾಗುತ್ತದೆ.}

ನಂತರ ವರನು ಮುಂಜ ಎಂಬ ಹುಲ್ಲಿನಿಂದ ಮಾಡಿದ ಯೋಕ್ತ್ರವನ್ನು ವಧುವಿನ ಸೊಂಟದಲ್ಲಿ ಕೆಳಗಿನ ಮಂತ್ರ ಹೇಳಿ ಕಟ್ಟಬೇಕು.

" ಆಶಾಸಾನಾಸೌ ಮನಸಂ ಪ್ರಜಾಗ್ಂ
  ಸೌಭಾಗ್ಯಂ ತನೂಮ್ |
  ಅಗ್ನೇರನು ವ್ರತಾ ಭೂತ್ವಾ ಸನ್ನಹ್ಯೇ
  ಸುಕೃತಾಯಕಮ್ " ||

ಈ ಮಂತ್ರದ ಸ್ಥೂಲ ಅರ್ಥ - ಎಲೈ ವಧುವೇ, ಸತ್ಸಂತಾನವನ್ನೂ, ಸೌಭಾಗ್ಯವನ್ನೂ, ಒಳ್ಳೆಯ ಮನಸ್ಸನ್ನೂ ಬಯಸಿ, ಅಗ್ನಿ ಸಂಬಂಧವಾದ ಹೋಮ-ವ್ರತಗಳಿಗಾಗಿಯೂ ಕೂಡ, ಈ ಮೌಂಜಿಯನ್ನು ನಿನ್ನ ನಡುವಿಗೆ ಸುತ್ತುತ್ತಿದ್ದೇನೆ.
(ಟಿಪ್ಪಣಿ : ಗೆಳೆಯರೇ, ಗಮನಿಸಿ - ಈ ಮೌಂಜೀ ಬಂಧನವೇ ವಧುವಿಗೆ (ಪತ್ನಿಗೆ) ಉಪನಯನ ಸಂಸ್ಕಾರವೆನಿಸುತ್ತದೆ. ಈಗ ವಧು ದ್ವಿಜಳಾಗುತ್ತಾಳೆ. ಆದುದರಿಂದ ದಯವಿಟ್ಟು ಹೆಣ್ಣಿಗೆ ಉಪನಯನ ಸಂಸ್ಕಾರ ಇಲ್ಲ ಎಂದು ವಾದಿಸಬೇಡಿ.
ಎಲ್ಲ ಶುಭ ಕಾರ್ಯಗಳ ಆರಂಭಕ್ಕೆ ಮುನ್ನ
ಕರ್ತನಿಗೆ ನೂತನ ಯಜ್ಞೋಪವೀತ ಧಾರಣೆ ಮಾಡಿಸುವಂತೆ, ಆತನ ಪತ್ನಿಗೂ ನೂತನ ಮೌಂಜೀಧಾರಣೆ ಇತ್ತು.
ಇದಕ್ಕೆ ಸಮರ್ಥನೆ - " ಆಶಾಸಾನಾ ಸೌಮನಸಮಿತ್ಯಾಹಾ | ಏತದ್ವೈಪತ್ನಿಯೈ ವ್ರತೋಪನಯನಂ ||
      - ತೈತ್ತಿರೀಯ ‌ಬ್ರಾಹ್ಮಣ.
 [ ಷರಾ : ಯೋಕ್ತ್ರ ಎಂದರೆ ಮುಂಜ ಎಂಬ ಹುಲ್ಲಿನಲ್ಲಿ ಉಡಿದಾರದ ಮಾದರಿಯಲ್ಲಿ ಹೆಣೆದಿರುವ ಸೂತ್ರ. ಇದು ಸರಿಸುಮಾರು ಉಪನಯನ ಸಂಸ್ಕಾರದಲ್ಲಿ ವಟುವಿಗೆ ಧಾರಣೆ ಮಾಡುವ ಮೌಂಜದ ಮಾದರಿಯಲ್ಲಿ ಇರುತ್ತದೆ. ‌ವರನು ಯೋಕ್ತ್ರವನ್ನು ವಧುವಿನ ಕಟಿಪ್ರದೇಶದಲ್ಲಿ ಪ್ರದಕ್ಷಿಣಾರೂಪವಾಗಿ ಕಟ್ಟಬೇಕು. ಯೋಕ್ತ್ರದ ಗಂಟು ವಧುವಿನ ನಾಭಿ ಪ್ರದೇಶಕ್ಕೆ ಅಂದರೆ ಹೊಕ್ಕುಳಿನ ಪ್ರದೇಶಕ್ಕೆ ಸರಿಯಾಗಿ ಬರಬೇಕು. ಯಾವುದೇ ಕಾರಣಕ್ಕೂ ಇದನ್ನು ಪುರೋಹಿತರಾಗಲೀ, ಇತರೆಯವರಾಗಲೀ ವಧುವಿಗೆ ಕಟ್ಟಬಾರದು].
       ನಂತರ ವರನು ವಧುವಿನ ಬಲಗೈನ ಎಲ್ಲಾ ಬೆರಳುಗಳನ್ನೂ ಹಿಡಿದುಕೊಂಡು, ಆಕೆಯನ್ನು ಅಗ್ನಿಯ ಸಮೀಪಕ್ಕೆ ಕೆಳಕಂಡ ಮಂತ್ರ ಹೇಳುತ್ತಾ ಕರೆದೊಯ್ಯಬೇಕು.

" ಪೂಷಾತ್ವೇತೋ ನಯತು
  ಹಸ್ತಗೃಹ್ಯಾಶ್ವಿನೌ  ತ್ವಾ ಪ್ರವಹತಾಗ್ಂ
  ರಥೇನ |
  ಗೃಹಾನ್ ಗಚ್ಛ ಗೃಹಪತ್ನೀ ಯಥಾsಸೋ
  ವಶಿನೀತ್ವಂ ವಿದಥಮಾವದಾಸಿ " ||

ಈ ಮಂತ್ರಕ್ಕೆ ಅರ್ಥವನ್ನು ಹೀಗೆ ಹೇಳಬಹುದು.
" ಪೂಷಾ ದೇವತೆಯು ನಿನ್ನನ್ನು ಅಗ್ನಿಯ ಬಳಿಗೆ ಒಯ್ಯಲಿ. ಅಶ್ವಿನೀದೇವತೆಗಳೂ ನಿನ್ನನ್ನು ಅಗ್ನಿ ಸಮೀಪಕ್ಕೆ ರಥದಲ್ಲಿ ಕರೆದುಕೊಂಡು ಹೋಗಲು ಅನುಮೋದನೆ ನೀಡಲಿ.‌ ನೀನು ಗೃಹಪತ್ನಿಯಾಗಿ ಮನೆಗೆ ಬಾ. ಮನೆಯ ಯಜಮಾನಿಯಾಗು. ಯಾಗದ ವಿಷಯಗಳನ್ನು ತಿಳಿಸು ".
ಮಿತ್ರರೇ,
ಇನ್ನುಮುಂದೆ ಅಗ್ನಿ ಕಾರ್ಯ.
ಅದನ್ನು ಮುಂದಿನ ಲೇಖನದಲ್ಲಿ ಪರಿಶೀಲಿಸೋಣ.
ನಮಸ್ಕಾರಗಳು.
ತಿರುಮಲೆ ಪಾರ್ಥಸಾರಥಿ.

No comments:

Post a Comment

If you have any doubts. please let me know...