ವೇದಾಂತದಲ್ಲಿ ಮುಕ್ತಿ ಸ್ವರೂಪ
ಮುಂಡಕೋಪನಿಷತ್ತಿನ 3.2.6 ಮಂತ್ರದಲ್ಲಿ ಅಪರೋಕ್ಷ ಜ್ಞಾನದಿಂದ ಮುಕ್ತಿ ಹೊಂದುವವರ ಬಗ್ಗೆ ಹೀಗೆ ತಿಳಿಸಿದೆ:
वेदान्तविज्ञानसुनिश्चितार्थाः संन्यासयोगाद्यतयः शुद्धसत्त्वाः ।
ते ब्रह्मलोकेषु परान्तकाले परामृताः परिमुच्यन्ति सर्वे ॥ ६ ॥
ವೇದಾಂತದಲ್ಲಿ ತಿಳಿಸಿರುವ ಬ್ರಹ್ಮ ಆತ್ಮ ಸ್ವರೂಪವನ್ನು ಯಾವುದೇ ಸಂಶಯಾದಿ ದೋಷಗಳಿಲ್ಲದೆ ಅಪರೋಕ್ಷವಾಗಿ ಅರಿತವರಿಗೆ ಮುಕ್ತಿ. ಇದನ್ನು ಶಂಕರರು ವಿವರಿಸುವಾಗ ಹೀಗೆ ಹೇಳಿದ್ದಾರೆ:
परामृताः परम् अमृतम् अमरणधर्मकं ब्रह्म आत्मभूतं येषां ते परामृता जीवन्त एव ब्रह्मभूताः, परामृताः सन्तः परिमुच्यन्ति परि समन्तात्प्रदीपनिर्वाणवद्भिन्नघटाकाशवच्च निवृत्तिमुपयान्ति परिमुच्यन्ति परि समन्तान्मुच्यन्ते सर्वे, न देशान्तरं गन्तव्यमपेक्षन्ते । ‘शकुनीनामिवाकाशे जले वारिचरस्य वा । पदं यथा न दृश्येत तथा ज्ञानवतां गतिः’ (मो. ध. १८१ । ९) ‘अनध्वगा अध्वसु पारयिष्णवः’ ( ? ) इति श्रुतिस्मृतिभ्याम् ; देशपरिच्छिन्ना हि गतिः संसारविषयैव, परिच्छिन्नसाधनसाध्यत्वात् । ब्रह्म तु समस्तत्वान्न देशपरिच्छेदेन गन्तव्यम् । यदि हि देशपरिच्छिन्नं ब्रह्म स्यात् , मूर्तद्रव्यवदाद्यन्तवदन्याश्रितं सावयवमनित्यं कृतकं च स्यात् । न त्वेवंविधं ब्रह्म भवितुमर्हति । अतस्तत्प्राप्तिश्च नैव देशपरिच्छिन्ना भवितुं युक्ता ॥
ಅಮೃತಸ್ವರೂಪವಾದ ಬ್ರಹ್ಮವನ್ನು ತಾನೆಂದು ತಿಳಿದವರಿಗೆ ಅವರುಗಳು ಅಖಂಡ ಅಪರಿಚ್ಚಿನ್ನ ಬ್ರಹ್ಮವೇ ಆಗಿರುವುದರಿಂದ ಮೋಕ್ಷಕ್ಕಾಗಿ ಎಲ್ಲೋ ದೇಶಾಂತರ/ಲೋಕಾಂತರಕ್ಕೆ ಹೋಗುವ ಅವಶ್ಯಕತೆ ಇಲ್ಲ. ಏಕೆಂದರೆ ಅವರುಗಳೇ ಸರ್ವವ್ಯಾಪಿಯಾದ ಬ್ರಹ್ಮವಾಗಿರುವುದರಿಂದ ಶರೀರ ಪಾತದ ಬಳಿಕ ಅವರಿಗ ಹೋಗಿ ಸೇರುವಂಥ ಸ್ಥಳವಿಶೇಷ ಯಾವುದೂ ಇರುವುದಿಲ್ಲ. ಮಹಾಭಾರತದಲ್ಲಿ ಇವರ 'ಗತಿ' = 'ತೆರಳುವಿಕೆ'ಯ ಬಗ್ಗೆ ಹೀಗೆ ಹೇಳಿದೆ: ಪಕ್ಷಿಯು ಆಕಾಶದಲ್ಲಿ ಹಾರಿದಾಗ ಮತ್ತು ಮೀನು ನೀರಲ್ಲಿ ಚಲಿಸುವಾಗ ಯಾವ ಹೆಜ್ಜೆ ಗುರುತೂ ಕಾಣಲು ಸಿಗುವುದಿಲ್ಲ. ಹೀಗಿರುತ್ತೆ ಅಪರೋಕ್ಷ ಜ್ಞಾನಿಗಳ 'ಗತಿ'. ಮತ್ತೊಂದು ವಾಕ್ಯ 'ಹಾದಿಯಲ್ಲಿ ನಡೆಯದೆಯೇ ದಾಟಿಬಿಡುವರು' ಎಂದು. 'ಗತಿ' ಹೋಗುವಿಕೆ ಎಂದರೆ ಒಂದು ಪರಿಚ್ಛಿನ್ನವಾದ ಕಡೆಯಿಂದ ಒಬ್ಬ ವರಿಚ್ಛಿನ್ನ ವ್ಯಕ್ತಿ ಮತ್ತೊಂದು ಪರಿಚ್ಛಿನ್ನವಾದ ಕಡೆಗೆ ಹೋಗುವುದು. ಮುಕ್ತನು ಒಂದು ವೇಳೆ ಏನಾದರೂ ಬೇರೆ ಕಡೆಗೆ ಹೋಗಬೇಕೆಂದರೆ, ಆ ಜಾಗ ಪರಿಚ್ಚಿನ್ನದಾಗಿರುತ್ತೆ. ಅಲ್ಲಿರುವ ಬ್ರಹ್ಮವೂ ದೇಶಪರಿಚ್ಚಿನ್ನವಾಗಿರುತ್ತೆ. ಯಾವುದು ಪರಿಚ್ಚಿನ್ನವೋ ಅದು ಒಂದು ಉಂಟಾದ ಜಡ ಆಕೃತಿಯುಳ್ಳ ವಸ್ತುವಿನಹಾಗೆ ತನ್ನಿಂದ ಬೇರೆಯೊಂದು ಕಡೆ, ಭೂಮಿಯನ್ನು ಆಶ್ರಯಿಸಬೇಕಾಗುತ್ತೆ. ಒಂದು ಘಟ ನೆಲದ ಮೇಲೆ ಇರಬೇಕಾಗಿರುವ ಹಾಗೆ. ಆ ಬ್ರಹ್ಮ ತನ್ನಿಂದ ಬೇರೆಯಾದ ಒಂದು ಭೂತಲವನ್ನು ಆಶ್ರಯಿಸಿರುತ್ತೆ. ಮತ್ತು ಅದು ಸಾವಯವ ದ್ರವ್ಯವಾಗಿರುತ್ತೆ. ಈ ವಸ್ತು ಅನಿತ್ಯವಾಗಿ, ಕೃತಕವಾಗಿರುತ್ತೆ. ಆದರೆ ವೇದಾಂತದ ಬ್ರಹ್ಮ ಈ ರೀತಿಯಾದ್ದಲ್ಲ. ಹಾಗಾಗಿ ಮುಕ್ತಿಯನ್ನು ಹೊಂದಲು ದೇಶಾಂತರಕ್ಕೆ ತೆರಳುವುದು ಎಂಬುದು ವೇದಾಂತದ ರೀತಿಯಲ್ಲ.
ನಾವು ದೇವಸ್ಥಾನದ ಅರ್ಚಾಮೂರ್ತಿಯನ್ನು, ಪುಟ್ಟ ಸಾಲಗ್ರಾಮವನ್ನು ಸರ್ವವ್ಯಾಪಿ ವಿಷ್ಣು ಎಂದು ಪೂಜಿಸುತ್ತೇವೆ. ಇವೆಲ್ಲ ಆ ನಾಮ ರೂಪವಿಲ್ಲದ ಬ್ರಹ್ಮದ ಪ್ರತೀಕಗಳು. ನಮ್ಮ ಸ್ಥೂಲ ಬುದ್ಧಿಯನ್ನು ಸೂಕ್ಷ್ಮಗೊಳಿಸಲು ಶಾಸ್ತ್ರ ನಮಗೆ ಹಾಕಿಕೊಟ್ಟ ಮೆಟ್ಟಲು, ಉಪಾಯ. ಇದು ವ್ಯಾವಹಾರಿಕ ರೂಪ. ಇದರ ಮೂಲಕ ಪಾರಮಾರ್ಥಿಕ ಬ್ರಹ್ಮದ ಸ್ವರೂಪವನ್ನು ನಾವು ಮುಟ್ಟ ಬೇಕು. ಈ ವ್ಯಾವಹಾರಿಕ ರೂಪವನ್ನೇ ಪಾರಮಾರ್ಥಿಕ ಸ್ವರೂಪವೆಂದು ನಿಲ್ಲಬಾರದು. ಆದ್ದರಿಂದ ದೇಗುಲದಲ್ಲಿ, ಸಾಲಗ್ರಾಮದಲ್ಲಿ ಪರಿಚ್ಚಿನ್ನ ಮೂರ್ತಿಯಲ್ಲಿ ಅನಂತ, ಅಖಂಡ ಗುಣವನ್ನು ಆರೋಪಿಸುತ್ತೇವೆ ಪೂಜಿಸುವಾಗ. ಇದಕ್ಕೆ ಭಾವನೆ ಎಂದು ಹೆಸರು. ಆದರೆ ವೇದಾಂತ ತಿಳಿಸುವ ಮುಕ್ತಿಗೆ ಕಾರಣವಾದ ಅಪರೋಕ್ಷ ಜ್ಞಾನವು ಈ ವಿಗ್ರಹ, ಸಾಲಗ್ರಾಮದ ಅರಿವಲ್ಲ; ಅದರಿಂದ ಉಪಲಕ್ಷಿತವಾದ ನಾಮ ರೂಪಗಳ ಪರಿಚ್ಛೇದಕ್ಕೆ ನಿಲುಕದ ವಸ್ತುವನ್ನು. ಆದ್ದರಿಂದಲೇ ವೇದಾಂತ ಆ ಬ್ರಹ್ಮವನ್ನು ನಮ್ಮ ಮುಂದೆ ಪ್ರತಿಪಾದನೆ ಮಾಡುತ್ತೆ. ಈ ಜ್ಞಾನವನ್ನು ಪಡೆದಾಗ ನಮ್ಮನ್ನು ಮತ್ತೆ ಒಂದು ದೇಗುಲಕ್ಕೋ ಸಾಲಗ್ರಾಮದ ಪೂಜಾ ಸಂಪುಟಕ್ಕೋ ಸೀಮಿತಗೊಳಿಸೊಲ್ಲ ವೇದಾಂತ. ಇದು ಮುಂಡಕದ ಆ ಮಾತಿನ ಆಂತರ್ಯ. ಅಲ್ಲಿ ಭಾವನೆಯ ಅವಶ್ಯಕತೆಯಿಲ್ಲ ಏಕೆಂದರೆ ನೇರಾಗಿ ಸ್ವರೂಪವನ್ನೇ ಸಾಕ್ಷಾತ್ಕರಿಸುವುದರಿಂದ. ಇದೇ 'ಅಪರೋಕ್ಷ' ಎಂಬ ಶಬ್ದದ ಅರ್ಥ. ಅಪರೋಕ್ಷ ಸಾಧ್ಯವಾಗದ ಅವಸ್ಥೆಯಲ್ಲೇ 'ಭಾವನೆಗೆ' ಕೆಲಸ.
ಇದನ್ನು ನಾವು ಭ.ಗೀತೆಯ 13ನೆ ಅಧ್ಯಾಯದಿಂದಲೂ ತಿಳಿಯಬಹುದು. ಸ್ಥೂಲ ಮತ್ತು ಸೂಕ್ಷ್ಮ ಶರೀರಗಳು, ಮನಸ್ಸು ಅದರ ಭಾವನೆಗಳು, ಇಂದ್ರಿಯಗಳು, ಅವುಗಳಿಂದ ತಿಳಿಯಲಾಗುವ ಶಬ್ದಾದಿ ಪ್ರಪಂಚ - ಇವೆಲ್ಲವನ್ನೂ ಕ್ಷೇತ್ರ, ಪ್ರಕೃತಿ ಎಂದು ತಿಳಿಸಿ, ಇದನ್ನು ಅರಿಯುವ, ಬೆಳಗಿಸುವ ಚೈತನ್ಯವನ್ನು ಕ್ಷೇತ್ರಜ್ಞ, ಪುರುಷ ಎಂದು ಕರೆದಿದೆ. ಹಾಗಾದರೆ ಆತ್ಮಾ ಶರೀರಾದಿಗಳನ್ನು ತಾನೆಂದು ತಿಳಿದಾಗ ಸಂಸಾರ, ತದ್ರಹಿತನು ಆತ್ಮಾ ಎಂದು ತಿಳಿದಾಗ ಮೋಕ್ಷ ಎಂದು ಕೊನೆಯ ಶ್ಲೋಕದಲ್ಲಿ ತಿಳಿಸಿದೆ. ಈ ಉಭಯ ಶರೀರೋಪಾಧಿ ರಹಿತವಾದ ಚೈತನ್ಯಕ್ಕೆ ಯಾವ ರೀತಿಯಾದ ಪರಿಚ್ಛೇದವೂ ಇರಲು ಸಾಧ್ಯವಿಲ್ಲ. ಅದಕ್ಕೆ ಯಾವ ಪ್ರಮಾಣವೂ ಇಲ್ಲ. ಶರೀರಾಗಳನ್ನು ತಾನೆಂದು ತಿಳಿದ ಭ್ರಮಾವಸ್ಥೆಯಲ್ಲಿ ಮಾತ್ರ ಒಬ್ಬ ಜೀವ ಮತ್ತೊಂದು ಜೀವನಿಂದ ಭಿನ್ನ ಎನಬಹುದು. ಆದರೆ ಈ ಭ್ರಮೆ ನೀಗಿದಾಗ ಆತ್ಮರಲ್ಲಿ ಭೇದಕ ಉಪಾಧಿ ಯಾವುದೂ ಇರುವುದಿಲ್ಲವಾಗಿ ಈ ಆತ್ಮಾ ಆ ಆತ್ಮಾ ಎಂದು ಭೇದ ಪಡಿಸಲು ಸಾಧ್ಯವಿಲ್ಲ. ಉಪನಿಷತ್ತುಗಳಲ್ಲಿ ಯಾವುದೇ ಭೇದಕವೂ, ಅಂದರೆ, ಆತ್ಮನ ಸ್ವರೂಪಕ್ಕೆ ಸೇರಿದ, ಆತ್ಮನನ್ನು ಪರಿಚ್ಚಿನ್ನನಾಗಿ ಭಿನ್ನನಾಗಿ ತೋರಿಸುವ ಉಪಾಧಿ ಯಾವುದೂ ಉಪದಿಷ್ಟವಾಗಿಲ್ಲ.
ಹಾಗಾಗಿ ಆತ್ಮಾ ಬ್ರಹ್ಮದಿಂದಲೂ ಭಿನ್ನ ಎಂದು ಹೇಳಲು ಯಾವ ಭೇದಕವೂ ಇಲ್ಲ. ಹೀಗೆ ತನ್ನ ಸ್ವರೂಪದ ಪರಿಜ್ಞಾನವನ್ನು ಹೊಂದಿದವನು ಶರೀರಪಾತವಾದ ಬಳಿಕ ಹೋಗಬೇಕಾದ ಸ್ಥಳ ಯಾವುದೂ ಇರುವುದಿಲ್ಲ ಏಕೆಂದರೆ ತಾನೇ ಸರ್ವವ್ಯಾಪಿಯಾಗಿದ್ದು ನಿರವಯವವಾಗಿದ್ದು ದೇಶಾಂತರವಿಲ್ಲದಿರುತ್ತೆ. ' न तस्य प्राणा उत्क्रामन्ति ब्रह्मैव सन्ब्रह्माप्येति ॥ ६ ॥ ಬೃಹದಾರಣ್ಯಕ 4.4.6 (ಅವನ ಸೂಕ್ಷ್ಮ ಶರೀರ ಶರೀರವನ್ನು ಬಿಟ್ಟು ಹೊರಗೆ ಹೋಗುವುದೇ ಇಲ್ಲ. ಅವನು ಬ್ರಹ್ಮವಾಗಿಯೇ ಇರುವವನು, ಬ್ರಹ್ಮವನ್ನು ಹೊಂದುತ್ತಾನೆ.) अत्रैव समवनीयन्ते 3.2.11 ಇಲ್ಲೇ, ತನ್ನ ಕಾರಣದಲ್ಲೇ, ಲಯವಾಗಿಬಿಡುತ್ತೆ ಆ ಲಿಂಗ ಶರೀರ. ಹಾಗಾಗಿ ದೇಶಾಂತರಕ್ಕೆ ಹೋಗುವಂಥಹ ವಸ್ತು ಯಾವುದೂ ಉಳಿದಿರುವುದಿಲ್ಲ ಆತ್ಮನಲ್ಲಿ. ಸಂಸಾರಿಯ ವಿಷಯದಲ್ಲಿ ಸೂಕ್ಷ್ಮಶರೀರಕ್ಕೆ 'ಲಿಂಗ ಭಂಗ' ಆಗದಿರುವುದರಿಂದ ಮತ್ತೆ ಜನ್ಮ ಪಡೆಯಲು ಲೋಕಾಂತರಕ್ಕೆ ಹೋಗಬೇಕು, ಸಾಧ್ಯ. ಆದರೆ ಅಪರೋಕ್ಷ ಜ್ಞಾನಿಗೆ ಲಿಂಗ ಭಂಗ ಆಗುವುದರಿಂದ ಲೋಕಾಂತರ/ದೇಶಾಂತರಕ್ಕೆ ಹೋಗುವ ಪ್ರಸಂಗವೇ ಇರದು. ಈ ಜ್ಞಾನಿಗಳಿಗೆ ಕೊನೆಯ ಕಾಲ, ಅಂದರೆ ಶರೀರಪಾತ ಕಾಲವನ್ನು ಉಪನಿಷತ್ತಿನಲ್ಲಿ 'ಪರಾಂತಕಾಲೇ' ಎಂದು ತಿಳಿಸಿದೆ. ಈ ಶಬ್ದವು ವಾಲ್ಮೀಕಿ ರಾಮಾಯಣದ ಈ ಶ್ಲೋಕದಲ್ಲಿದೆ:
परान्तकाले हि गतायुषो नरा । हितं न गृह्णन्ति सुहृद्भिरीरितम् ॥ (युद्धकाण्डः१६/२६) ಇದಕ್ಕೆ ವ್ಯಾಖ್ಯನದಲ್ಲಿ परान्तकाले मरणसमये ಎಂದಿದ್ದಾರೆ.
ವೇದಾಂತದಲ್ಲಿ ಮುಕ್ತಿಯ ವಿಷಯವಾಗಿ ಹೀಗೆ ತಿಳಿಸಿದ್ದಾರೆ ಶಂಕರರು.
No comments:
Post a Comment
If you have any doubts. please let me know...