April 1, 2021

ಸಾರ್ಥಕ ಬದುಕಿಗೆ ಏನಿರಬೇಕು? ಹೇಗಿರಬೇಕು?


ದೇವಾಲಯವೊಂದರ ‘ದೇವರು’ ಭಕ್ತರು ಬೇಡಿದ ವರಗಳನ್ನು ಈಡೇರಿಸುವ ದೇವರೆಂದು ಪ್ರಖ್ಯಾತಿ ಪಡೆದಿದ್ದನಂತೆ.  ದೇವಾಲಯದಲ್ಲಿ ಹರಕೆ ಹೊತ್ತ ಭಕ್ತರು ದೇವರಿಗೆ ಏನೇನೋ ಉತ್ಸವಗಳನ್ನು-ಸೇವೆಗಳನ್ನು ಸಲ್ಲಿಸುತ್ತಿದ್ದರು.  ದೇವಾಲಯದ ಆನೆಯ ಮೇಲೆ ಅಂಬಾರಿಯನ್ನು ಕಟ್ಟಿ ಅದರೊಳಗೆ ದೇವರಮೂರ್ತಿಯನ್ನು ಇಟ್ಟು ದೇವಾಲಯದ ಸುತ್ತ ಪ್ರದಕ್ಷಿಣೆ ಬರುವ ಆ ಅಂಬಾರಿ ಬಹಳ ಜನಪ್ರಿಯವಾಗಿತ್ತು.  ಆ ಉತ್ಸವದ ಆನೆಯು ಹಲವಾರು ವರ್ಷಗಳಿಂದ ಕೆಲಸವನ್ನು ನಿಭಾಯಿಸುತ್ತಿತ್ತು.   ಭಕ್ತರ ಹರಕೆಗಳನ್ನೂ, ಸೇವೆಯನ್ನೂ ಮೆಚ್ಚಿಕೊಂಡು ವರಗಳನ್ನು ಕೊಡುವ ದೇವರು ಮೂಕಪ್ರಾಣಿಯ ಸೇವೆಯನ್ನು ಮೆಚ್ಚದೆ ಹೋಗುತ್ತಾನೆಯೇ?  ಒಂದು ದಿನ ದೇವರು ಆನೆಯ ಕನಸಿನಲ್ಲಿ ಪ್ರತ್ಯಕ್ಷವಾಗಿ “ನಿನಗೇನು ವರ ಬೇಕು?” ಎಂದು ಕೇಳಿದನಂತೆ.  ಆನೆ ಕೊಂಚ ಯೋಚಿಸಿ “ನಾನು ಇತರ ಪ್ರಾಣಿಗಳನ್ನು ಗಮನಿಸಿದ್ದೇನೆ.  ನನ್ನ ದೇಹ ಸುಂದರವಾಗಿಲ್ಲವೆಂದು ನನಗೆ ಅನೇಕ ಬಾರಿ ಅನ್ನಿಸಿದೆ.  ತೆಳ್ಳನೆಯ ಕಾಲುಗಳಿದ್ದರೆ, ದಪ್ಪವಾದ ಕತ್ತು ಉದ್ದವಾಗಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂಬಾಸೆ.  ಬೆನ್ನಿನ ಭಾಗದಲ್ಲಿ ಡುಬ್ಬವಿದ್ದರೆ, ನೀರನ್ನು ಇಟ್ಟುಕೊಳ್ಳಬಹುದೆಂಬ ಆಸೆ.  ಜಿಂಕೆಯಂತೆ ಓಡುವಾಸೆ, ನವಿಲಿನಂತೆ ರೆಕ್ಕೆಯಿದ್ದು ಬಣ್ಣ ಬಣ್ಣವಾಗಿರಲು ಎಂಬಾಸೆ.  ದೇವರೇ, ಸಾಧ್ಯವಿದ್ದರೆ ನನ್ನ ಆಸೆಗಳನ್ನು ಈಡೇರಿಸು” ಎಂದು ಕೇಳಿಕೊಂಡಿತು.  ಆನೆಯ ಮಾತುಗಳನ್ನು ಕೇಳಿ ಚಿಂತೆಗೊಳಗಾದ ದೇವರು “ನಿನ್ನ ಆಸೆಗಳನ್ನು ಈಡೇರಿಸುವುದು ನನಗೆ ಕಷ್ಟವೇನಲ್ಲ.  ಆದರೆ ಇವೆಲ್ಲಾ ನಿನಗೆ ಬೇಕಾ? ಎಂದು ನೀನೇ ಯೋಚಿಸುವುದು ಒಳ್ಳೆಯದು! ಆಯಿತು, ನಾಳೆ ಮುಂಜಾನೆಯ ಹೊತ್ತಿಗೆ ನಿನ್ನಾಸೆಯಂತೆ ನಿನ್ನ ದೇಹ ಹೊಸ ರೂಪವನ್ನು ತಾಳಿರುತ್ತದೆ” ಎಂದು ಹೇಳಿ ಮಾಯವಾದನಂತೆ.
ಮರುದಿನ ಮುಂಜಾನೆ ಆನೆಯ ಕತ್ತು ಜಿರಾಫೆಯಂತೆ ಉದ್ದವಾಗಿತ್ತು.  ಬೆನ್ನಿನಲ್ಲಿ ಡುಬ್ಬಗಳಿದ್ದವು.  ಕಾಲುಗಳು ಒಂಟೆಯ ಕಾಲುಗಳಂತೆ ಉದ್ದುದ್ದವಾಗಿದ್ದವು.  ಮೈಯಲ್ಲಿ ನವಿಲಿನಂತೆ ಬಣ್ಣ ಬಣ್ಣದ ರೆಕ್ಕೆ-ಪುಕ್ಕಗಳು, ಜಿಂಕೆಯಂತೆ ಚಿತ್ರ ವಿಚಿತ್ರವಾಗಿತ್ತು.  ಈ ವಿಚಿತ್ರ ಪ್ರಾಣಿಯನ್ನು ಕಂಡ ಮಾವುತ ಹೆದರಿ ಓಡಿಹೋದ.  ವಿಚಿತ್ರ ಆಕೃತಿಯ ಪ್ರಾಣಿಯನ್ನು ಅಂಬಾರಿ ಉತ್ಸವಕ್ಕೆ ಬಳಸುವುದು ಹೇಗೆಂಬ ಸಮಸ್ಯೆ ದೇವಾಲಯದವರಿಗೆ ಉಂಟಾಯಿತು.  ಅವರು ಆನೆ, ಒಂಟೆ, ಜಿರಾಫೆ, ನವಿಲು, ಜಿಂಕೆ ಯಾವುದೂ ಅಲ್ಲದ, ವಿಚಿತ್ರ ರೂಪದ ಪ್ರಾಣಿಯನ್ನು ದೇವಾಲಯದ ಹಿಂಭಾಗದಲ್ಲಿ ಮರಕ್ಕೆ ಕಟ್ಟಿಬಿಟ್ಟರು.  ಬೇರೊಂದು ಆನೆಯನ್ನು ತರಿಸಿ ಅಂಬಾರಿ ಉತ್ಸವಕ್ಕೆ ಬಳಸತೊಡಗಿದರು.  ಹೊಸ ಆನೆಯು ಅಂಬಾರಿ ಉತ್ಸವವನ್ನು ಗತ್ತಿನಿಂದ ಹೊತ್ತು ಬರುವುದನ್ನು, ವಿರೂಪಗೊಂಡ ಆನೆ ಅಸೂಯೆಯಿಂದ ನೋಡುತ್ತಿತ್ತು.  ಈಗ ಅದನ್ನು ಆದರಿಸುವವರು ಯಾರೂ ಇಲ್ಲ!  ಆಗ ಅದು ದೇವರ ಮುಂದೆ ಕಣ್ಣೀರಿಟ್ಟಿತು.  ದೇವರು, “ನೀನು ಕೇಳಿದ ವರವನ್ನೇ ಕೊಟ್ಟಿದ್ದೇನೆ.  ವರವನ್ನು ಸರಿಯಾಗಿ ಕೇಳದಿದ್ದುದು ನಿನ್ನ ತಪ್ಪು!” ಎಂದು ಬಿಟ್ಟನು.  ಆನೆ “ನಾನೇನು ಕೇಳಬೇಕಿತ್ತು? ಅದನ್ನಾದರೂ ತಿಳಿಸು” ಎಂದು ಕೇಳಿಕೊಂಡಿತು.  ದೇವರು, “ಅವರನ್ನು ನೋಡಿ, ಅವರಂತಾಗಬೇಕು, ಇವರನ್ನು ನೋಡಿ ಇವರಂತಾಗಬೇಕು, ಎಂದು ಬೇಡುವ ಬದಲು ನಿನಗೆ ಏನೇನು ಲಭ್ಯವಿತ್ತೋ ಅದನ್ನೇ ಶಕ್ತಿಯುತವಾಗಿ, ಚಾಕಚಕ್ಯತೆಯಿಂದ ಬಳಸಿಕೊಳ್ಳುವ, ಬೆಳೆಸಿಕೊಳ್ಳುವ ವರವನ್ನು ಬೇಡಿದ್ದರೆ ಒಳ್ಳೆಯದಾಗುತ್ತಿತ್ತು” ಎಂದು ಹೇಳಿದನಂತೆ.  ಆಗ ಆನೆಯು ತನ್ನ ಮೂರ್ಖತನಕ್ಕೆ ಜಿಗುಪ್ಸೆಗೊಂಡು ತನ್ನ ತಲೆಯನ್ನು ದೇವಾಲಯದ ಗೋಡೆಗೆ ಬಡಿಯತೊಡಗಿತಂತೆ.  ಹಾಗೆ ಬಡಿದಾಗ ನೋವಾಯಿತು.  ನೋವಿನಿಂದ ಅದಕ್ಕೆ ಎಚ್ಚರವಾಯಿತು.  ಆಗ ಅದಕ್ಕೆ ತಾನು ಕಂಡಿದ್ದು ಕನಸೆಂದು ಅರಿವಾಯಿತು.  ತನ್ನ ದೇಹ ಮೊದಲಿನಂತೆ ಇದೆಯೆಂದು ಸಂತೋಷವಾಯಿತು.  ಅಂದಿನಿಂದ ಅದು ತನ್ನ ಸೇವೆಯನ್ನು ಇನ್ನೂ ಹೆಚ್ಚು ಉತ್ಸಾಹದಿಂದ ಮಾಡತೊಡಗಿತು.  ಅದರಂತೆ ನಮಗೂ ಯಾರನ್ನಾದರೂ ನೋಡಿದಾಗ ಅವರಷ್ಟು ರೂಪ ನಮಗಿರಬೇಕಿತ್ತು, ಅವರಷ್ಟು ಅದೃಷ್ಟ ನಮಗಿರಬೇಕಿತ್ತು.  ಅವರಿಗೆ ಸಿಕ್ಕ ಶ್ರೀಮಂತಿಕೆ, ಅಧಿಕಾರ, ಪದವಿಗಳು ನಮಗೂ ಸಿಗಬೇಕಿತ್ತು ಎನಿಸಿದಾಗ, ಆನೆಯನ್ನು ಜ್ಞಾಪಿಸಿಕೊಳ್ಳುವುದು ಒಳ್ಳೆಯದು.  ನಮಗೇನೇನು ಸಿಕ್ಕಿದೆಯೋ ಅದನ್ನು ಬೆಳಸಿಕೊಳ್ಳುವ, ಬಳಸಿಕೊಳ್ಳುವ ವರವನ್ನು ಬೇಡಿಕೊಳ್ಳುವುದು ಒಳ್ಳೆಯದಲ್ಲವೇ?  ಬದುಕು ಸಾರ್ಥಕವಾಗಲು ಅಷ್ಟೇ ಸಾಕಲ್ಲವೇ?.......

No comments:

Post a Comment

If you have any doubts. please let me know...