ಆರ್ತೋ,ಅರ್ಥಾರ್ಥೀ,ಜ್ಞಾನಾರ್ಥೀ,ಶರಣಾರ್ಥೀ ಎಂಬ ನಾಲ್ಕು ವರ್ಗದ(category) ಜನರಿದ್ದಾರೆ.
ಹಾಗೆಯೇ ನಾಲ್ಕು ವಿಧಗಳ ಮರಣ ಸ್ವರೂಪಗಳೂ ಇವೆ.ಅವೆಂದರೆ, ಆರ್ತ,ರೌದ್ರ,ಧನ್ಯ,ಶುಕ್ಲ.
ಈಗ ಮೊದಲ ವರ್ಗದ ವಿಚಾರ ನೋಡೋಣ.
ಆರ್ತ: ಕಷ್ಟ ಬಂದಾಗ ಮಾತ್ರ ದೇವರೇ ಕಾಪಾಡೂ ಎಂದು ಮೊರೆ ಹೋಗ್ತಾನೆ.ದೇವರ ದಯೆಯಿಂದ ಸುಖ ಪ್ರಾಪ್ತಿಯಾದ ತಕ್ಷಣ ದೇವರ ನೆನಪಾಗಲ್ಲ.'ದೇವ್ರಿಗೆ ಸಾಕಷ್ಟು ಕೊಟ್ಟಿದ್ದೇನಯ್ಯಾ.ಸಮಸ್ಯೆ ಬಂದರೆ ಪೂಜೆ,ಯಾಗ,ಯಜ್ಞ ಮಾಡಿಸಿಕೊಂಡರಾಯ್ತು ಬಿಡು' ಎನ್ನುವ ಮನಸ್ಸಿನವ. ಸಮಸ್ಯೆ ಬಂದ ನಂತರ ನ್ಯಾಯವಾದಿಗಳ ಮೂಲಕವೋ,ನ್ಯಾಯಾಧೀಶರಿಗೆ ಲಂಚ ಕೊಡುವ ಮೂಲಕವೋ ಸಮಸ್ಯೆಗಳಿಂದ ಮುಕ್ತರಾಗೋದು. ಈ ಮದ್ಯೆ ಅದ್ಯಾರೋ ಸಲಹೆ ಕೊಟ್ಟಂತೆ ಪೂಜೆ ಗೀಜೆ ಅದೂನೂ ಮಾಡಿಸೋದು. ಒಟ್ನಲ್ಲಿ ನನ್ನ ಸಮಸ್ಯೆ ಮುಗಿದುಬಿಟ್ರೆ ಸಾಕು. ಇಂತವನಿಗೆ ಆರ್ತ ರೂಪದ ಮರಣ ಬರುತ್ತದೆ.ಅಂದರೆ ಮರಣ ಕಾಲದಲ್ಲಿ ಈತನಿಗೆ ಆ ದೇವರ ಪೂಜೆ ಮಾಡ್ಸಿದ್ದೆ,ಈ ಸಂಸ್ಥೆಗೆ ದಾನ ನೀಡಿದ್ದೆ.ಇಷ್ಟು ಮಾಡಿದರೂ ಯಾಕೆ ಈ ಮರಣ ವೇಧನೆ ಎನ್ನುತ್ತಾ ಕೊನೆಯುಸಿರು ಬಿಡ್ತಾನೆ.ಇವನೂ ಭಗವಂತನ ಪಾದವೇ ಸೇರೋದು.ಆದರೆ ಮುಂಬರುವ ಜನ್ಮದಲ್ಲಿ ದರಿದ್ರನಾಗಿಯೇ ಜನಿಸಬೇಕಾಗುತ್ತದೆ.
ಅರ್ಥಾರ್ಥಿ: ಈ ವ್ಯಕ್ತಿ ತುಂಬಾ ದೇವಸ್ಥಾನ ಸುತ್ತುತ್ತಾನೆ. ಪೂಜೆ,ಯಾಗ,ಯಜ್ಞ ಮಾಡಿಸುತ್ತಾನೆ.ಯಾಕೆಂದರೆ ಅಧಿಕಾರ,ಧನಕ್ಕೆ ಬೇಕಾಗಿ. ಯಾರನ್ನೋ ಮುಳುಗಿಸಲಿಕ್ಕೆ ಬೇಕಾಗಿ. ಅದು ಆಗದಿದ್ದರೆ, ಸಿಗದಿದ್ದರೆ ,' ಯಾವ ದೇವರೂ ಇಲ್ಲ ಕಣಯ್ಯಾ.ಎಲ್ಲ ಸುಳ್ಳು' ಎನ್ನಲೂ ಇವನ ನಾಲಿಗೆ ಹಿಂಜರಿಯುವುದಿಲ್ಲ. ಇವನ ಅಂತ್ಯ ಕಾಲದಲ್ಲಿ ರೌದ್ರ ಮರಣ ಬರುತ್ತದೆ.ಅದು ಹೇಗಿರುತ್ತೆ ಅಂದರೆ, ದ್ವೇಷ, ಅಸೂಯೆ ತುಂಬಿ ತುಳುಕಾಡುತ್ತಿರುತ್ತದೆ. ಕೆಲವರು ಹೇಳುವುದನ್ನು ಕೇಳಿರಬಹುದು ನೀವು. ' ಸತ್ತರೂ ನಿನ್ನನ್ನು ದೆವ್ವವಾಗಿ ಕಾಡದೆ ಬಿಡಲ್ಲ.ನನ್ನ ಹೆಣ ಕೂಡಾ ಮುಟ್ಟಬಾರದು ನೀನು' ಎನ್ನುವ ವ್ಯಕ್ತಿಗಳನ್ನು ಕಾಣುತ್ತೇವೆ.ಇವನ ಮರಣಕಾಲಕ್ಕೆ ರೌದ್ರ ಚಿಂತನೆ ಬರುತ್ತದೆ.ಇದರ ಅರ್ಥ ಮುಂದಿನ ಜನ್ಮದಲ್ಲಿ ಮಹಾ ನಂಜುಕೋರ,ಜಿಪುಣ,ಕಳ್ಳನಾಗಿ ಹೊಡೆದಾಡುತ್ತಾ ಸಾಯುವ ಜನ್ಮ ಲಭಿಸುತ್ತದೆ.ಇವನೂ ಸತ್ತ ಮೇಲೆ ಸೇರುವುದು ಭಗವಂತನ ಪಾದಕ್ಕೆ.ಜನ್ಮ ನೀಡುವ ತೀರ್ಮಾನವೂ ಭಗವಂತನದ್ದೆ.
ಜ್ಞಾನಾರ್ಥಿ: ಇವನು ಭಕ್ತಿಯಿಂದ ದೇವರನ್ನು ನೋಡಲ್ಲ. ಕುತೂಹಲದಿಂದ ನೋಡುತ್ತಾನೆ. ದೇವರು ಇದ್ದಾನೋ ಇಲ್ಲವೋ ನೋಡೇ ಬಿಡುವ ಎನ್ನುವ ಛಲ.ಅನ್ಯಾಯಗಾರನಲ್ಲ.ಪರರ ಹಿಂಸಕನೂ ಆಗಿರಲ್ಲ.ಪರರ ಸೊತ್ತಿನ ಮೇಲೆ ಕಣ್ಣಿಟ್ಟವನೂ ಅಲ್ಲ. ಬೇಕಾದರೆ ದಾನ ಧರ್ಮ ಕೂಡಾ ಮಾಡುತ್ತಾನೆ.ಮತ್ತು ಸ್ವಲ್ಪ ಪ್ರಚಾರ ಪ್ರಿಯ.ಹೇಳಿಕೊಂಡು ಬರ್ತಾನೆ.ಅವನಿಗೆ ಸಹಾಯ ಮಾಡಿದೆ,ಇವನನ್ನು ಬದುಕಿಸಿದೆ,ಆ ಸಂಸ್ಥೆಗಿಷ್ಟು ದಾನ ಮಾಡಿದೆ ಎನ್ನುತ್ತಾ ಒಂದು ದಿನ ಮರಣ ಹೊಂದುತ್ತಾನೆ. ಅವನ ಮರಣ ಕಾಲದ ಚಿಂತನೆ ಹೇಗಿರಬಹುದು?
' ಓ ದೇವರೇ ಯಾಕೆ ನನ್ನನ್ನು ಒಯ್ಯುತ್ತೀ.ಇನ್ನೂ ಸ್ವಲ್ಪ ಬದುಕಿಕೊಳ್ಳುತ್ತಿದೆ.ಅದೆಷ್ಟೋ ದಾನ ಧರ್ಮ ಮಾಡಿದ್ದೇನೆ.ಬೇಕಾದರೆ ಜನರನ್ನು ಕೇಳು.ಪತ್ರಿಕೆಗಳನ್ನು ನೋಡು.ಅಲ್ಲಿ ಎಲ್ಲಾ ಕಡೆ ನನ್ನ ಪ್ರಶಂಸೆ ಇದೆ. ಬೇಕಾದಷ್ಟು ಜ್ಞಾನ ಸಂಪಾದಿಸಿದ್ದೇನೆ' ಎನ್ನುತ್ತಾ ಕಣ್ಣು ಮುಚ್ಚಿಬಿಡುತ್ತಾನೆ. ಇವನೂ ಭಗವಂತನಿಗೆ ಪ್ರಿಯನೆ.ಇವನಿಗೆ ಮುಂದಿನ ಜನ್ಮವು ಶ್ರೀಮಂತಿಕೆಯ ಜನ್ಮ ಆಗುತ್ತದೆ.ಇದು ಕೂಡಾ ಭಗವತ್ ಚಿತ್ತವೆ.
ಶರಣಾರ್ಥಿ: ಇವನು ಮಾತ್ರ ಪರಮ ಪೂಜ್ಯನು.ಫಲಾಪೇಕ್ಷೆ ಇಲ್ಲದ ಸೇವೆ ಇವನದ್ದು. ಧರ್ಮಿಷ್ಟನು. ಯಾರಾದರೂ ಇವನನ್ನು ಹೊಗಳಿದರೆ,ನಗುತ್ತಾ,' ಏನ್ರೀ ನಮ್ದು ಇದೆ? ಅವ ಕೊಟ್ಟ.ಅದರಲ್ಲಿ ಸ್ವಲ್ಪ ಹಸಿವಿಗಾಗಿ ತಿಂದ್ಕೊಂಡೆ.ಉಳಿದುದನ್ನು ಪರರಿಗೆ,ದೀನರಿಗೆ ಕೊಟ್ಟೆ.ಇದರಲ್ಲಿ ನಂದೇನಿದೆ? ಎಲ್ಲವೂ ಭಗವಂತ ನನ್ನ ಕೈಯಲ್ಲಿ ಮಾಡಿಸಿದ ಅಷ್ಟೆ. ನಾನೇನಿದ್ದರೂ ಶರಣನಷ್ಟೆ. ಭಗವಂತನ ಅಣತಿಯಂತೆ ಕೆಲಸ ಮಾಡುವ ಕಾರ್ಮಿಕ. ಇದರಲ್ಲಿ ನನ್ನ ಸಾಧನೆ ಏನಿಲ್ಲ.ಯಾರ್ಯಾರಿಗೆ ಎಷ್ಟೆಷ್ಟು ನನ್ನ ಕೈಯಲ್ಲಿ ಕೊಡಿಸಿದ್ದಾನೋ ಅದೇನೂ ನನಗೆ ಅರಿವಿಲ್ಲ.ಹೇ ಭಗವಂತಾ,ಈ ಜಗತ್ತಿನ ಸ್ವಾಸ್ಥ್ಯಕ್ಕಾಗಿ ನನ್ನ ಕಾಯವನ್ನು ಸತ್ಕರ್ಮಕ್ಕಾಗಿ ಇಟ್ಟುಕೋ ಎಂಬುದಿಷ್ಟೇ ನನ್ನ ಪ್ರಾರ್ಥನೆ.
ಕೊನೆಯ ಚಿಂತನೆಯು ಭಗವಂತನ ಚಿಂತನೆಯಲ್ಲದೆ ಬೇರಾವ ಇಂತನೆಯೂ ಇವನಿಗಿಲ್ಲ.ಇವನು ಶುಕ್ಲ ಮರಣವನ್ನು ಹೊಂದುತ್ತಾನೆ.ಅಂದರೆ ಇವನು ಭಗವಂತನಿಗೆ ಅತ್ಯಂತ ಪ್ರಿಯನಾಗಿ ಮೋಕ್ಷ ಪಡೆಯುವವನಾಗುತ್ತಾನೆ.
ಇಂತಹ ಶುಭ ಜನ್ಮ ಅಥವಾ ಮೋಕ್ಷಕ್ಕಾಗಿಯೇ ಜೀವನದುದ್ದಕ್ಕೂ ನಡೆಸುವ ಸತ್ಚಿಂತನೆ ಸತ್ಕರ್ಮಗಳ ಅಭ್ಯಾಸ ಇರುವುದು.
No comments:
Post a Comment
If you have any doubts. please let me know...