April 27, 2021

ಪುನಃ ಪುನಃ ಹುಟ್ಟು ಪಡೆಯುವವಳು ಉಷೋದೇವಿ

ಪುನಃ ಪುನಃ ಹುಟ್ಟು ಪಡೆಯುವವಳು.

ರಾಹೂಗಣನ ಮಗ ಗೋತಮರ ಒಂದು ಸೂಕ್ತದ ಕುರಿತು ಬರೆದಿದ್ದೆ ಉಷೋದೇವಿಯ ಪ್ರಾರ್ಥನೆಯನ್ನು ಕುರಿತಾದದ್ದು. ಅದರಲ್ಲಿ ಒಂದು ಋಕ್ಕನ್ನು ನಾನು ಬಿಟ್ಟು ಮುಂದಿನದ್ದನ್ನು ಬರೆದಿದ್ದೆ. ಅರ್ಚಂತಿ ನಾರೀರಪಸೋ ನ ವಿಷ್ಟಿಭಿಃ ಸಮಾನೇನ ಯೋಜನೇ ಎನ್ನುವ ಇದೊಂದು ಋಕ್ಕು ಎಷ್ಟು ಅರ್ಥಗಳನ್ನು ಕೊಟ್ಟಿದೆ. ದಿನದ ಆರಂಭದಲ್ಲಿ ಕಾಣಿಸುವ ಈ ಉಷಸ್ಸುಗಳು ಜಗತ್ತಿನ ಚರಾಚರ ಜೀವಿಗಳಿಗೂ ಆ ದಿನದ ಮಾರ್ಗದರ್ಶಕರು. ಪವಿತ್ರವಾದ ಕರ್ಮಗಳನ್ನು ಆಚರಿಸುವವನೂ, ಯಜ್ಞಕ್ಕೆ ಬೇಕಾಗುವ ಸೋಮವನ್ನು ಕೊಡುವವನೂ, ಉದಾರ ದಾನಿ ಮತ್ತು ಯಜ್ಞ ಮಾಡಿಸುವವರಿಗೆ ಉಪಕಾರಿಯೂ ಅವರಿಗೆ ಆಹಾರಾಭಾವ ಆಗದಂತೆ ನೋಡಿಕೊಳ್ಳುವವನೂ ಆಗಿರುವವನು. ಯುದ್ಧಭೂಮಿಯಲ್ಲಿ ಸೈನಿಕರು ಅತ್ಯಂತ ದೂರದ ಪ್ರದೇಶದ ತನಕ ಚದುರಿ ಹೋಗಿರುವಂತೆ ಅಂತರಿಕ್ಷದ ಅತ್ಯಂತ ಎತ್ತರದ ಮತ್ತು ಬಹು ದೂರದ ಸ್ಥಾನದಲ್ಲಿ ತನ್ನ ನೈಸರ್ಗಿಕ ಕಿರಣಗಳನ್ನು ಒಮ್ಮೆಲೇ ಹರಡುವಂತೆ ಮಾಡುವ ಸೂರ್ಯನನ್ನು ಕುರಿತಾಗಿ ಸ್ತುತಿಸಲಾಗಿದೆ.  
ಇಲ್ಲಿ ನಾರೀ ಎನ್ನುವ ಶಬ್ದಕ್ಕೆ ನೇತ್ರ ಎನ್ನುವ ಅರ್ಥವನ್ನು ಬಾಷ್ಯಕಾರರು ಕೊಟ್ಟಿದ್ದಾರೆ. ನಾರೀಃ ಎನ್ನುವ ಶಬ್ದವು ನೃ ಎನ್ನುವ ಧಾತುವಿನಿಂದ ಹುಟ್ಟಿದ್ದು. ಎಲ್ಲರನ್ನೂ ಉನ್ನತಿಯತ್ತ ಕೊಂಡೊಯ್ಯುವ ಗುಣ ಇರುವುದು ನಾರಿಗೆ. ಅದಕ್ಕಾಗಿಯೇ ನಾರೀ ನೇತ್ರ್ಯಃ ಎಂದು ಭಾಷ್ಯಕಾರ ಸಾಯಣಾಚಾರ್ಯರು ಹೇಳುತ್ತಾರೆ. ಅಂದರೆ ಕತ್ತಲಿನಿಂದ ಬೆಳಕಿನೆಡೆಗೆ ಕೊಡೊಯ್ಯುವ ಸಾಮರ್ಥ್ಯ ಇರುವುದು ನಾರಿಗೆ. ನಾರೀರಪಸೋ ನ ವಿಷ್ಟಿಭಿಃ ಎನ್ನುವುದನ್ನು ಅರ್ಥೈಸುವಾಗ ಕಾರ್ಯಕುಶಲಿಗಳಾದ ನಾರಿಯರು ಎಂದು ಹೇಳಿದ್ದಾರೆ. ಇಂತಹ ನಾರಿಯರು ನಮ್ಮ ಅಂದರೆ ನರರ ಅಭಿವೃದ್ಧಿಯನ್ನೇ ಬಯಸುವವರು. ಆ ನಾರಿಯರಂತೆ ಕಿರಣಗಳು ಇನ್ನೊಬ್ಬರ ಏಳಿಗೆಗೆ ಕಾರಣವಾಗಿವೆ ಎನ್ನಲಾಗಿದೆ. 

ಪುನಃ ಪುನರ್ಜಾಯಮಾನಾ ಪುರಾಣೀ ಸಮಾನಂ ವರ್ಣಮಭಿ ಶುಂಭಮಾನಾ | ಎನ್ನುವ ಈ ಋಕ್ಕು ಇನ್ನು ಸುಂದರವಾಗಿದೆ. ಪುನಃ ಪುನರ್ಜಾಯಮಾನಾ ಎನ್ನುವುದಕ್ಕೆ ಪ್ರತಿದಿವಸಂ ಸೂರ್ಯೋದಯಾತ್ಪೂರ್ವಂ ಪ್ರಾದುರ್ಭವಂತಿ. ಎನ್ನುವುದು ಪುನಃ ಪುನಃ ಅಥವಾ ಒಂದೇ ರೀತಿಯಾಗಿ ಹುಟ್ಟುತ್ತಾ ಪ್ರಾಚೀನಳಾದ ಉಷೋದೇವಿಯು ಕಾಂತಿಯುಕ್ತಳಾಗಿದ್ದಾಳೆ. ಇಷ್ಟೇ ಅಲ್ಲ್ಲ ಶುಭ್ರಾಕಾಶದಲ್ಲಿ ಪ್ರತಿದಿನವೂ ಸ್ವಲ್ಪವೂ ಸಹ ಬದಲಾವಣೆ ಇಲ್ಲದ ರೂಪದವಳಾಗಿದ್ದಳು. ಮತ್ತು ಬೇಡನ ಮಡದಿಯೊಬ್ಬಳು ಹೇಗೆ ರಭಸದಿಂದ ಹಾರುವ ಹಕ್ಕಿಗಳ ರೆಕ್ಕೆಯನ್ನು ಕತ್ತರಿಸಿ ಹಾಕುತ್ತಾಳೊ ಅದರಂತೆ ಮರಣ ಧರ್ಮವನ್ನು ಪಡೆದಿರುವ ಜೀವರಾಶಿಗಳಿಗೆ ಮುಪ್ಪನ್ನು ಕೊಟ್ಟು ಮರಣವನ್ನು ಕಲ್ಪಿಸುವವಳು. ಅಂದರೆ ಇಲ್ಲಿ ಉಷಸ್ಸು ಸದಾಕಾಲ ತಾರುಣ್ಯವನ್ನು ಹೊಂದಿರುವಂತಹದ್ದು. ಆದರೆ ಉಷಸ್ಸು ಸೂರ್ಯಕಿರಣದೊಂದಿಗೆ ಕಾಲನ ಜೊತೆ ಮುಂದಕ್ಕೆ ಹೋಗಿ ಮುಪ್ಪನ್ನು ಪಡೆದು ಸಾವಿನಲ್ಲಿ ಅಂತ್ಯವನ್ನು ಪಡೆಯುತ್ತದೆ. ಅಂದರೆ ತಾರುಣ್ಯ ಪಡೆದವನು ಕಾಲಾಂತರದಲ್ಲಿ ತಾರುಣ್ಯದಿಂದ ಮುಪ್ಪಿಗೆ ಜಾರುವುದನ್ನು ಹೇಳಲಾಗಿದೆ. ಪುನಃಪುನರ್ಜಾಯಮಾನ ಎನ್ನುವುದು ಉಷಸ್ಸಿನ ಸ್ವರೂಪದ ವರ್ಣನೆ ಒಂದಾದರೆ ನಿಸರ್ಗದ ಬದಲಾವಣೆಯನ್ನು ಸೂಚಿಸುತ್ತದೆ. ಇಲ್ಲಿ ಹೊಸ ಹುಟ್ಟು ಅನ್ನುವುದಕ್ಕಿಂತ ಸೂರ್ಯೋದಯಕ್ಕೆ ಮೊದಲಿನ ಹುಟ್ಟು ಎಂದು ತಿಳಿಯುವುದೇ ಸರಿಯಾದದ್ದು. ಅಂದರತೆ ಅನಾದಿಯಿಂದಲೂ ಈ ಸೂರ್ಯೋದಯಕ್ಕೂ ಮೊದಲಿನ ಉಷಸ್ಸಿನ ಈ ಸೊಬಗು ಈಗಿನದ್ದಲ್ಲ ಅತ್ಯಂತ ಪ್ರಾಚೀನ ಎನ್ನುವುದನ್ನೇ ಪುರಾಣೀ ಎಂದಿರುವುದು. ಋಗ್ವೇದದ ಮೂರನೇ ಮಂಡಲದ ೬೧ನೇ ಸೂಕ್ತದಲ್ಲಿ ಪುರಾಣೀ ದೇವಿ ಎಂದೇ ಉಷಸ್ಸನ್ನು ಕರೆಯಲಾಗಿದೆ. ಅಂದರೆ ಪ್ರತಿದಿನವವೂ ಹೊಸತನ್ನು ಪಡೆದು ನಾವೀನ್ಯವನ್ನು ಪಡೆದುಕೊಳ್ಳುವವಳು ಎನ್ನಲಾಗಿದೆ. ಇರಲಿ ಅದೇನೇ ಇರಲಿ ಇಲ್ಲಿ ಒಂದಂತೂ ಸತ್ಯ. ನಾರೀ ಎನ್ನುವವಳು ಸಾಮಾನ್ಯವಾಗಿ ದೂರಾಲೋಚನೆ ಹೊಂದಿರುವವಳು. ತನ್ನ ಚಾತುರ ನಡೆಯಿಂದ ಉನ್ನತಿಗಂತೂ ಕಾರಣಳು. ಅಂದರೆ ಉಷಸ್ಸು ಹೇಗೆ ಅಭಿವೃದ್ಧಿ ಹೊಂದುತ್ತಾಳೆ ಎನ್ನುವುದಕ್ಕೆ ನಾರೀ ಎನ್ನುವುದನ್ನು ಸಮೀಕರಿಸಿದಂತೆ ಭಾಸವಾಗುತ್ತದೆ.

#ನಾರೀ_ಚತುರೆ
ಸದ್ಯೋಜಾತರು

No comments:

Post a Comment

If you have any doubts. please let me know...