ಬಾಯಿ ಮಾತಲ್ಲಿ ಬುದ್ಧಿ ಹೇಳುವುದಕ್ಕಿಂತ ಬೆತ್ತ (ದಂಡ) ಪ್ರಯೋಗಿಸುವುದೇ ಉತ್ತಮ. ದ್ವಿಗುಣ ಅಂದರೆ ಎರಡು ಸಲ, ತ್ರಿಗುಣ ಅಂದರೆ ಮೂರು ಸಲ ಅದೇರೀತಿ “ದಶಗುಣಂ” ಅಂದರೆ ಹತ್ತು ಸಲ ಎಂದೂ ಅರ್ಥವಾಗುತ್ತದೆ. ಹೀಗಾಗಿ ಒಳ್ಳೇ ಮಾತಿನಲ್ಲಿ ಹತ್ತು ಸಲ ಹೇಳುವುದೂ ಒಂದೇ ಕೋಲಿನಿಂದ ಒಮ್ಮೆ ದಂಡಿಸುವುದೂ ಒಂದೇ ಎಂಬರ್ಥದಲ್ಲಿ ಈ ಪದಪುಂಜವನ್ನು ಬಳಸಲಾಗುತ್ತಿದೆ.
ಚತುರುಪಾಯಗಳಾದ ಸಾಮ , ದಾನ , ಭೇದ , ದಂಡ ಇವುಗಳಲ್ಲಿ “ದಂಡ” ಅಂದರೆ ಶಿಕ್ಷೆ ಎಂದರ್ಥ. ಆದ್ದರಿಂದ “ದಂಡಂ ದಶಗುಣಂ” ಅಂದರೆ ಉಳಿದ ಮೂರು ವಿಧಾನಗಳಿಗಿಂತ ಹತ್ತು ಪಟ್ಟು ಹೆಚ್ಚು ಒಳ್ಳೆಯ ಪರಿಣಾಮವು ಈ ಶಿಕ್ಷೆಯಿಂದ ಸಿಗುತ್ತದೆ ಅಥವಾ ಶಿಕ್ಷೆಯಿಂದಲೇ ಹತ್ತು ಉತ್ತಮ ಗುಣಗಳು ಬರುತ್ತವೆ ಎಂಬ ಅರ್ಥದಲ್ಲಿಯೂ ಈ ಪದಪುಂಜವನ್ನು ಬಳಸಲಾಗುತ್ತಿದೆ.
ಆದರೆ, ವಾಸ್ತವ ಹಾಗಲ್ಲ. “ದಂಡಂ ದಶಗುಣಂ” ಎಂಬುದು ಒಂದು ಸುಭಾಷಿತ ಶ್ಲೋಕದ ಭಾಗ ಅಷ್ಟೇ. ಆ ಶ್ಲೋಕ ಹೀಗಿದೆ :
"ವಿಶ್ವಾಮಿತ್ರೇಚ ವಾರ್ಧಕ್ಯೇ ರಾತ್ರೌ ಅಪ್ಸು ಕರ್ದಮೆ |
ಅಂಧೇ ಸರ್ಪೇಚ ಕ್ರೀಡೇಚ ದಂಡಂ ದಶಗುಣಂ ಭವೇತ್ ॥"
" विश्वामित्रेच वार्धक्ये रात्रौ अप्सु कर्दमे |
अन्धे सर्पेच क्रीडेच दण्डं दशगुणं भवेत् ||"
ಒಂದು ಕೋಲನ್ನು ಎಷ್ಟು ವಿಧವಾಗಿ ಬಳಸಬಹುದು ಎಂಬುದನ್ನು ಈ ಶ್ಲೋಕ ವಿವರಿಸಿದೆ.
ವಿ = ವಿಹಗ = ಹಕ್ಕಿಗಳನ್ನು ಓಡಿಸಲು , ಶ್ವಾ = ಶ್ವಾನ = ನಾಯಿಯನ್ನು ಓಡಿಸಲು , ಅಮಿತ್ರೆ = ಶತ್ರುವನ್ನು ಎದುರಿಸಲು , ವಾರ್ಧಕ್ಯೇ = ವೃದ್ಧಾಪ್ಯದಲ್ಲಿ ನಡೆಯಲು , ರಾತ್ರೌ = ರಾತ್ರಿಯಲ್ಲಿ ಆತ್ಮರಕ್ಷಣೆಗಾಗಿ , ಅಪ್ಸು = ನೀರನ್ನು ದಾಟಲು , ಕರ್ದಮೇ = ಕೆಸರು ಅಥವಾ ಮರಳನ್ನು ದಾಟಲು , ಅಂಧೇ = ಅಂಧರಿಗೆ ಓಡಾಡಲು , ಸರ್ಪೇ = ಹಾವನ್ನು ಹೆದರಿಸಲು ಮತ್ತು ಕ್ರೀಡೇ = ಆಟವಾಡಲು ಹೀಗೆ ದಂಡವನ್ನು ಈ ಹತ್ತು ರೀತಿಯಲ್ಲಿ ಉಪಯೋಗಿಸಬಹುದು ಎಂದರ್ಥ.
ಶ್ಲೋಕವನ್ನು ಪೂರ್ತಿಯಾಗಿ ತಿಳಿಯದೇ ಮತ್ತು ಅದರ ಸರಿಯಾದ ಅರ್ಥವನ್ನು ಕೂಡಾ ತಿಳಿಯದೇ ಈಗ ಎಲ್ಲರೂ “ದಂಡಂ ದಶಗುಣಂ” ಎಂಬ ಭಾಗವನ್ನು ಮಾತ್ರ ತಮಗೆ ತೋಚಿದ ಅರ್ಥದಲ್ಲಿ ಬಳಸುತ್ತಿದ್ದಾರೆ.
ಕೇವಲ ಒಂದು ಕೋಲಿನಿಂದ ಹತ್ತು ಹಲವು ಉಪಯೋಗಗಳಿವೆ ಎಂಬುದು ಇದರ ತಾತ್ಪರ್ಯ.
No comments:
Post a Comment
If you have any doubts. please let me know...