ಡಯಾಬಿಟೀಸ್ ಮತ್ತು ಬೀಪಿಗಳಿಗೆ ಹಲವಾರು ವರ್ಷಗಳಿಂದ ಔಷಧಿ ಸೇವಿಸುತ್ತಿದ್ದೀರಾ ? ತಿಂಗಳಿಗೊಮ್ಮೆ ಪರೀಕ್ಷೆ ಮಾಡಿಕೊಂಡು ಸಮಾಧಾನ ಪಡುತ್ತಿದ್ದೀರಾ ? ಹಾಗಾದರೆ ನಿಮಗೆ ನಿಜಕ್ಕೂ ಡಯಾಬಿಟೀಸ್ ಮತ್ತು ಬೀಪಿ ಇವೆಯೇ ? ಡಾ ಬಿಸ್ವರೂಪ ರಾಯ್ ಚೌಧರಿ ಹೇಳುವುದನ್ನು ಕೇಳಿದರೆ ಶಾಕ್ ಆಗುತ್ತೀರಿ, ಬಿಟ್ಟ ಬಾಯಿ ಬಿಟ್ಟೇ ಇರುತ್ತದೆ. ಇವರು ಹೇಳುತ್ತಿರುವುದರಲ್ಲೂ ಲಾಜಿಕ್ ಇದೆ. ಹೆಚ್ಚು ಕಡಿಮೆ ಇವೇ ಮಾತುಗಳನ್ನು ಡಾ ಬಿ ಎಂ ಹೆಗ್ಡೆಯವರ ಬಾಯಿಯಿಂದ ಕೇಳಿದರೂ ಇದನ್ನು ಓದಿದರೆ ಬೆಚ್ಚಿ ಬೀಳುವುದು ಖಂಡಿತ.
1979 ಕ್ಕೂ ಮೊದಲು ವಿಜ್ಞಾನಕ್ಕೆ ರಕ್ತದಲ್ಲಿ ಸಕ್ಕರೆ ಹೆಚ್ಚು ಇರಬಹುದು ಅಂತ ಗೊತ್ತಿದ್ದರೂ ಎಷ್ಟು ಸಕ್ಕರೆಯಿದ್ದರೆ ಹೆಚ್ಚು ಅಂತ ಅಳತೆಗೋಲು ಇರಲಿಲ್ಲ.
ಅದೇ ವರ್ಷ ಮೊದಲ ಬಾರಿಗೆ ಸುಮಾರು ಐದು ಸಾವಿರ ಜನರ ಸಕ್ಕರೆ ಪ್ರಮಾಣವನ್ನು ವೈದ್ಯರು ಅಳೆದು ಸಕ್ಕರೆ ಪ್ರಮಾಣ 200 mg/dl ಗಿಂತಲೂ ಹೆಚ್ಚಿರಬಾರದು ಅಂತ ನಿಗದಿ ಪಡಿಸಿದರು .
ಇವರೇನೋ ಕೋಟ್ಯಂತರ ಡಾಲರ್ ಹಾಕಿ ರೀಸರ್ಚ್ ಮಾಡಿ ಈ ಪ್ರಮಾಣವನ್ನು ನಿರ್ಧರಿಸಿರಬಹುದು ಅಂತ ತಿಳಿದು ಎಲ್ಲರೂ ಒಪ್ಪಿಕೊಂಡರು.
1999 ರಲ್ಲಿ ಅಮೇರಿಕನ್ ಡಯಾಬಿಟೀಸ್ ಅಸೋಸಿಯೇಷನ್ (ADA) ಈ ಮಾಪನವನ್ನು 126 mg/dl ಗೆ ಏಕಾಏಕಿ ಇಳಿಸಿತು.ಇದನ್ನು ವರ್ಲ್ಡ್ ಹೆಲ್ಥ್ ಆರ್ಗನೈಸೇಷನ್ ( WHO ) ಪ್ರತಿಭಟಿಸಿತ್ತು.
2003 ರಲ್ಲಿ ADA ಮತ್ತೆ ಇದನ್ನು 100 mg/dl ಗೆ ಇಳಿಸಿತು.
2010 ರಲ್ಲಿ ಊಟ ಆದ ನಂತರದ ಸಕ್ಕರೆ ಪ್ರಮಾಣ 140 mg/dl ಅಥವಾ ಫಾಸ್ಟಿಂಗ್ ಬ್ಲಡ್ ಶುಗರ 100 mg/dl ಅಥವಾ Hb1c 5.6 ಗಿಂತಲೂ ಕಡಿಮೆ ಇರಬೇಕು. ಇವುಗಳಲ್ಲಿ ಯಾವುದೇ ಒಂದು ಇಲ್ಲವಾದರೂ ನಿಮಗೆ ಡಯಾಬಿಟೀಸ್ ಇದೆ ಎಂದರ್ಥ ಅಂತ ADA ಹೇಳಿತು.
ಇದು ಹೇಗಾಯಿತೆಂದರೆ ಏಕಾಏಕಿ ವಿದ್ಯಾರ್ಥಿಗಳ ತೇರ್ಗಡೆಯಾಗುವ ಕನಿಷ್ಟ ಅಂಕಗಳನ್ನು ಶೇ 35 ರಿಂದ ಶೇ 80 ಕ್ಕೆ ಏರಿಸಿದಂತೆ. ಡಯಾಬಿಟೀಸ್ ಇದೆಯೇ ಅಂತ ಪರೀಕ್ಷೆ ಮಾಡಿಕೊಂಡ ಹೆಚ್ಚಿನ ಜನ ಫೇಲ್.
ಈ ತರ ಪ್ರತೀ ವರ್ಷ ಪ್ರಮಾಣವನ್ನು ಇಳಿಸಿದರೆ ಏನಾಗುತ್ತದೆ ಅಂತ ತೋರಿಸಲು ಚೈನಾದಲ್ಲಿ ಒಂದು ವಿಶಿಷ್ಟ ಪ್ರಯೋಗವನ್ನು ಮಾಡಲಾಯಿತು.
1979 ರ ಮಾನದಂಡವನ್ನು ತೆಗೆದುಕೊಂಡರೆ ಶೇ 3.5 ಚೈನೀಸರು ಡಯಾಬಿಟೀಸ್ ಔಷಧಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದೇ 1997 ರ ಮಾನದಂಡದಲ್ಲಿ ಶೇ 8 ಜನ , 2010 ರ ಮಾನದಂಡದಲ್ಲಿ ಶೇ 27 ಮತ್ತು ಈಗಿನ ಮಾನದಂಡದಲ್ಲಿ ಶೇ 50 ಜನ ಚೈನೀಸರು ಔಷಧಿ ಸೇವಿಸಬೇಕು.
ಆದಷ್ಟೂ ಹೆಚ್ಚಿನ ಜನ ಔಷಧಿ ಸೇವಿಸಬೇಕು ತನ್ಮೂಲಕ ಔಷಧಿ ಕಂಪನಿಗಳಿಗೆ ಲಾಭ ಆಗಬೇಕು ಅಂತ ಬೇಕಂತಲೇ ಹೀಗೆ ಮಾಡಲಾಗಿದೆಯೇ ಅಂತ ಸೈನ್ಸ್ ಜರ್ನಲ್ ಗಳಲ್ಲಿ ಅಚ್ಚಾಯಿತು.
ರಕ್ತದೊತ್ತಡದ ಮಾನದಂಡಗಳೂ ಹೀಗೆಯೇ ಬದಲಾಗಿವೆ. 1997 ರ ಪೂರ್ವದಲ್ಲಿ 140/100 ಇದ್ದರೆ ನಾರ್ಮಲ್ ಅಂತ ಇದ್ದುದನ್ನು 1997 ರಲ್ಲಿ 140/90 ಗೆ ಇಳಿಸಿ ಈಗ ಮತ್ತೆ 120/80 ಮಾಡಲಾಗಿದೆ.
120/80 ಗಿಂತ ಕಡಿಮೆಯಿದ್ದರೆ ಮತ್ತೆ ಲೋ ಬ್ಲಡ್ ಪ್ರೆಶರ್ ಅಂತ ಔಷಧಿ ಚಾಲೂ ಮಾಡುತ್ತಾರೆ.
2004 ರಲ್ಲಿ " ಹೀಗೆ 200, 100 ಅಂತ ನಿಖರವಾದ ಅಂಕೆ ಬರುತ್ತಿರುವುದಾದರೂ ಹೇಗೆ ? "ಅಂತ ADA ಗೆ ಪ್ರಶ್ನೆ ಮಾಡಿದಾಗ ಅವರು ಕೊಟ್ಟ ಉತ್ತರ "ಗೊತ್ತಿಲ್ಲ" ಅಂತ.
ಎಕ್ಚುವಲಿ 1979 ರಲ್ಲಿ 5000 ಜನರ ರಕ್ತದ ಸಕ್ಕರೆ ಎವರೇಜ್ ಬಂದಿದ್ದು 226 mg/dl , ಆದರೆ ನೆನಪಿಟ್ಟುಕೊಳ್ಳಲು ಸುಲಭವಾಗಲಿ ಅಂತ ಚೆನ್ನಾಗಿರುವ ಸಂಖ್ಯೆಯನ್ನು ಆಯ್ದುಕೊಂಡಿದ್ದರು ಈ ವೈದ್ಯರುಗಳು. ಇದನ್ನೇ ಇಟ್ಟುಕೊಂಡು ನೋಡೋಣ, ಮುಂದೆ ಬೇಕಾದರೆ ಬದಲು ಮಾಡೋಣ ಅಂತ ವಿಚಾರ ಇತ್ತಂತೆ. ಶುಗರ್ ಲೆವಲ್ 250 ಕ್ಕಿಂತ ಹೆಚ್ಚಿದ್ದರೆ ಮಾತ್ರ ನಿಮಗೆ ಡಯಾಬಿಟೀಸ್ ಇದೆ ಅಂತ ಅರ್ಥ ಅಂತ ಬಿಸ್ವರೂಪ ಹೇಳುತ್ತಾರೆ.
226 mg/dl ನ್ನೇ ಸರಿ ಅಂತ ಆಯ್ದುಕೊಂಡರೂ ಗೊಂದಲಗಳು ಮುಗಿಯುವುದಿಲ್ಲ. ಬೆರಳುಗಳಿಂತ ತೆಗೆದ ರಕ್ತದಲ್ಲಿ , ರಕ್ತನಾಳಗಳಿಂದ ತೆಗೆದ ರಕ್ತಕ್ಕಿಂತ ಶೇ 15 ಹೆಚ್ಚು ಸಕ್ಕರೆ ಇರುತ್ತದೆ. ಇದಲ್ಲದೇ ಬಲಗೈಯಿಂದ ತಗೆದ ರಕ್ತದಲ್ಲಿ ಎಡಗೈಯಿಂದ ತೆಗೆದ ರಕ್ತಕ್ಕಿಂತ ಹೆಚ್ಚು ಸಕ್ಕರೆ ಇರುತ್ತದೆ. ಅಷ್ಟೇ ಯಾಕೆ ? ಹತ್ತೂ ಬೆರಳುಗಳಿಂದ ಏಕಕಾಲದಲ್ಲಿ ರಕ್ತ ತೆಗೆದು ಪರೀಕ್ಷೆ ಮಾಡಿದರೂ ಗ್ಲೂಕೋಮೀಟರ್ ನಲ್ಲಿ ಬೇರೆ ಬೇರೆ ಫಲಿತಾಂಶ ಬರುತ್ತದೆ. ಯಾವುದನ್ನು ನಂಬುತ್ತೀರಿ ? ಅಂತ ಬಿಸ್ವರೂಪ ಚೌಧರಿ ಪ್ರಶ್ನಿಸುತ್ತಾರೆ.
ADA ಇಂದು WHO ಗಿಂತ ಹೆಚ್ಚಿನ ಹಣವನ್ನು ಹೊಂದಿದ್ದೇ ಇದಕ್ಕೆ ಕಾರಣವಂತೆ. "ಡಯಾಬಿಟೀಸ್ ಆದವರು ಯಾವ ಫಾಸ್ಟ್ ಫೂಡ್ ತಿನ್ನಬೇಕು" ? ಅಂತ ADA ಒಂದು ಪುಸ್ತಕವನ್ನೇ ಪ್ರಕಟಿಸಿದೆ. ಅದರ ಮೊದಲ ಪುಟದಲ್ಲೇ ಕೆ ಎಫ್ ಸಿ , ಮ್ಯಾಕಡೊನಾಲ್ಡ್ ಇತ್ಯಾದಿಗಳ ಫೋನ್ ನಂಬರ್ ವಿಳಾಸಗಳಿವೆ ! ADA ವೆಬ್ ಸೈಟಿನಲ್ಲಿ ಕ್ಯಾಡಬರಿ ಇತ್ಯಾದಿ ಕಂಪನಿಗಳ ಜಾಹೀರಾತುಗಳು ಕಣ್ಣು ಕುಕ್ಕುತ್ತವೆ.
2001 ರಲ್ಲಿ ACCOT ಟ್ರಯಲ್ ಅಂತ ಒಂದು ದೊಡ್ಡ ಸ್ಟಡಿ ನಡೆಯಿತು. ಇದರಲ್ಲಿ 10000 ಡಯಾಬಿಟೀಸ್ ರೋಗಿಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಯಿತು. ಮೊದಲ ಗುಂಪಿನವರ ಸಕ್ಕರೆ ಕಾಯಿಲೆಯನ್ನು ಅತ್ಯಂತ ಮುತುವರ್ಜಿಯಿಂದ ಹದ್ದುಬಸ್ತಿನಲ್ಲಿಡಲಾಯಿತುಎರಡನೇ ಗುಂಪಿನವರು ಔಷಧಿ ಸೇವಿಸುತ್ತಿದ್ದರಾದರೂ ಅಷ್ಟೇನೂ ಕಾಳಜಿ ವಹಿಸುತ್ತಿರಲಿಲ್ಲ.
ಈ ಟ್ಯಯಲ್ ಏಳು ವರ್ಷಗಳ ವರೆಗೂ ನಡೆದು ಡಯಾಬಿಟೀಸ್ ಇದ್ದವರು ಕಟ್ಟುನಿಟ್ಟಾಗಿ ಪಥ್ಯ ಔಷಧಿ ಮಾಡಿದರೆ ಲಾಭವಾಗುತ್ತದೆ ಅಂತ ತೋರಿಸುವುವರಿದ್ದರು. ಆದರೆ ಮೂರೂವರೆ ವರ್ಷಗಳಲ್ಲಿ ಮೊದಲ ಗುಂಪಿನಲ್ಲಿ ಅಂದರೆ ಕಟ್ಟುನಿಟ್ಟಾಗಿ ಔಷಧಿ ಪಥ್ಯ ಮಾಡಿದವರಲ್ಲಿ ಶೇ 22 ಹೆಚ್ಚು ಸಾವುಗಳು ಸಂಭವಿಸಿದ್ದರಿಂದ ಇಡೀ ಸ್ಟಡಿಯನ್ನೇ ರದ್ದುಗೊಳಿಸಲಾಯಿತು.
ಈ ಸಾವುಗಳ ನಿಖರ ಕಾರಣ ಗೊತ್ತಾಗಲಿಲ್ಲ. ಈ ಸ್ಟಡಿಯ ನಿಖರತೆ ಬಗ್ಗೆ ಅಪಸ್ವರಗಳಿವೆ. ಡಯಾಬಿಟೀಸ್ ಔಷಧಿಯ ಅಡ್ಡ ಪರಿಣಾಮವೇ ? ಅಥವಾ ರಕ್ತದೊತ್ತಡ ಔಷಧಿ ಗಳನ್ನು ಸೇರಿಸದಿದ್ದುದು ಕಾರಣವೇ ಅಂತ ಗೊತ್ತಾಗಿಲ್ಲ.
ಫಾಸ್ಟಿಂಗ್ ಬ್ಲಡ್ ಶುಗರ್ ಟೆಸ್ಟ್ ಒಂದು ಅತ್ಯಂತ ಗೊಂದಲಮಯ ಟೆಸ್ಟ್ ಅಂತ ಬಿಸ್ವರೂಪ ಹೇಳುತ್ತಾರೆ. ಜಗತ್ತಿನಲ್ಲಿ ಅರ್ಧದಷ್ಟು ಜನರಿಗೆ ರಾತ್ರಿ ಮಲಗುವಾಗ ಇರುವುದಕ್ಕಿಂತ ಹೆಚ್ಚಿನ ಬ್ಲಡ್ ಗ್ಲೂಕೋಸ್ ಬೆಳಿಗ್ಗೆ ಏಳುವಾಗ ಇರುತ್ತದೆ. ಉಪವಾಸ ಇದ್ದಿದ್ದಕ್ಕೆ ಕಡಿಮೆಯಾಗಬೇಕಿತ್ತು ಅಂತ ಇದಕ್ಕೆ Dawn syndrome ಅಂತ ಹೆಸರಿಟ್ಟಿದ್ದಾರೆ.
ಆದರೆ ಇದು ನೈಸರ್ಗಿಕ. ಅನೇಕರ ಮೆದುಳು ಬೆಳಗಿನ ಕಾರ್ಯಗಳಿಗೆ ಶಕ್ತಿ ಇರಲಿ ಅಂತ ಲಿವರ್ ನಲ್ಲಿರುವ ಸಕ್ಕರೆಯನ್ನು ಬೆಳಿಗ್ಗೆ ಏಳುವ ಹೊತ್ತಿನಲ್ಲಿ ರಿಲೀಸ್ ಮಾಡಿಡುತ್ತದೆ. ಅದನ್ನೇ ವಿಜ್ಞಾನ ತಪ್ಪು ತಿಳಿದಿದೆ. ಫಾಸ್ಟಿಂಗ್ ಶುಗರ್ ಟೆಸ್ಟ್ ಯಾವುದೇ ಪ್ರಯೋಜನ ಇಲ್ಲ.
ಇಷ್ಟಕ್ಕೂ ಡಯಾಬಿಟೀಸ್ ಅಂದರೇನು ?
200 mg/dl ಸಕ್ಕರೆ ಒಬ್ಬನ ದೇಹದಲ್ಲಿದೆ ಅಂತಂದರೆ ಗ್ರಾಂ ಲೆಕ್ಕದಲ್ಲಿ ಪರಿವರ್ತಿಸಿದರೆ ಆತನ ರಕ್ತದಲ್ಲಿ ಒಟ್ಟೂ ಹತ್ತು ಗ್ರಾಂ ಸಕ್ಕರೆ ಇರುತ್ತದೆ. ಇದು ನಾರ್ಮಲ್ ಅಂತ ಭಾವಿಸಿದರೆ , ಸಕ್ಕರೆಯ ಪ್ರಮಾಣ 250 mg/dl ಆಯಿತೆಂದರೆ ಆತನಿಗೆ ಡಯಾಬಿಟೀಸ್ ಇದೆ ಅಂತರ್ಥ. ಆಗ ಆತನ ರಕ್ತದಲ್ಲಿ ಹನ್ನೆರಡೂವರೆ ಗ್ರಾಂ ಸಕ್ಕರೆ ಇರುತ್ತದೆ. ಅಷ್ಟೇ. ಈ ಚಿಕ್ಕ ಪ್ರಮಾಣವೂ ಮಾರಕ.
ಈ ಹೆಚ್ಚಿನ ಸಕ್ಕರೆ ದೇಹದ ಜೀವಕೋಶಗಳಲ್ಲಿ ಶೇಖರವಾದರೆ ತೊಂದರೆ ಇರುವುದಿಲ್ಲ. ಆದರೆ ರಕ್ತದಲ್ಲಿ ಚಲಿಸುತ್ತಿರುವ ಸಕ್ಕರೆ ಜೀವಕೋಶಗಳ ಒಳಗೆ ಸೇರಲು ಇನ್ಸುಲಿನ್ ಎನ್ನುವ ಕೀಲಿಕೈ ಬೇಕು. ಇನ್ಸುಲಿನ್ ಪ್ರಮಾಣ ಕಡಿಮೆಯಾದಾಗ ಶುರುವಾಗುತ್ತದೆ ತೊಂದರೆಗಳ ಸರಮಾಲೆ.
ಮೆದುಳು ಹೆಚ್ಚಿನ ಇನ್ಸುಲಿನ್ ತಯಾರಿಸುವಂತೆ ಪ್ಯಾನಕ್ರಿಯಾಸ್ ಗೆ ಹೇಳಿದರೂ ತೊಂದರೆಯೇ. ಇನ್ಸುಲಿನ್ ಜೊತೆಯಲ್ಲಿ IGF ಅನ್ನುವ ಉಪ ಪದಾರ್ಥವೂ ಉತ್ಪನ್ನವಾಗುತ್ತದೆ. ಈ ಹೆಚ್ಚಾದ IGF ದೇಹದ ಯಾವುದೇ ಭಾಗದಲ್ಲಿ ಶೇಖರವಾದರೂ ಕ್ಯಾನ್ಸರ್ ಗೆ ಕಾರಣವಾಗಬಹುದು.
ಇದನ್ನು ತಪ್ಪಿಸಲು ಮೆದುಳಿಗೆ ಇರುವ ಏಕೈಕ ಮಾರ್ಗವೆಂದರೆ ಹೆಚ್ಚಾಗಿರುವ ಸಕ್ಕರೆಯನ್ನು ಇನ್ಸುಲಿನ್ ಸಹಾಯ ಇಲ್ಲದೇ ಯಾವ ಜೀವಕೋಶಗಳಲ್ಲಿ ಸ್ಟೋರ್ ಮಾಡಬಹುದೋ ಅಲ್ಲಿ ಸ್ಟೋರ್ ಮಾಡುವುದು. ಅವೆಂದರೆ ಮೆದುಳಿನ ಜೀವಕೋಶಗಳು.
ಮೆದುಳಿನಲ್ಲಿ ಹೆಚ್ಚು ಸಕ್ಕರೆ ಸ್ಟೋರ್ ಆಗುವುದರಿಂದ ಪಾರ್ಕಿನಸನ್ಸ್, ಅಲ್ಝೈಮರ್ , ಡಿಮೆನ್ಷಿಯಾ ಇತ್ಯಾದಿಗಳಾಗುತ್ತವೆ. ಆದುದರಿಂದಲೇ ಇದನ್ನು ಟೈಪ್ 3 ಡಯಾಬಿಟೀಸ್ ಅಂತ ಕರೆಯಲಾಗುತ್ತದೆ.
ಲೇಖನ ಓದಿ ಔಷಧಿ ನಿಲ್ಲಿಸುವ ಮುಂಚೆ ಎಚ್ಚರಿಕೆ . ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಡಯಾಬಿಟೀಸನ್ನು ಅಲಕ್ಷ್ಯ ಮಾಡಬೇಡಿ.
ಡಯಾಬಿಟೀಸ್ ರೋಗಿಗಳಲ್ಲಿ ಶೇ 20 ಜನರು ದೃಷ್ಟಿ , ಶೇ 50 ಜನರು ಮೂತ್ರಪಿಂಡ, ಶೇ 15 ಜನರು ಕಾಲುಗಳನ್ನು ಕಳೆದುಕೊಳ್ಳುತ್ತಾರೆ. ಇಷ್ಟೆಲ್ಲಾ ಆಗುವುದು ಕೇವಲ 3- 4 ಗ್ರಾಂ ಹೆಚ್ಚಿನ ಸಕ್ಕರೆಯಿಂದ.
ಇದಲ್ಲದೇ ವೈರಸಗಳಿಂದ ಬರುವ ಅನೇಕ ರೋಗಗಳ ಬಗ್ಗೆಯೂ ಬಿಸ್ವರೂಪ ಚೌಧರಿ ಹೇಳಿದ್ದಾರೆ.
ಪ್ರತಿಯೊಂದೂ ವೈರಲ್ ಕಾಯಿಲೆ ಸೇಮ್ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಜ್ವರ, ಕೈಕಾಲು ನೋವು, ಅಶಕ್ತತೆ. ಆದುದರಿಂದ ಇಂಥಹದ್ದೇ ಕಾಯಿಲೆ ಅಂತ ಹೇಳಲು ಯಾವುದೇ ವಿಧಾನದಿಂದಲೂ ಸಾಧ್ಯವಿಲ್ಲ.
ಡಾ ಕೆಲ್ಲಿ ಮುಲ್ಲಿಸ್ ಎನ್ನುವವರು ವೈರಸ್ ಗಳನ್ನು ಕಂಡುಹಿಡಿಯಲು polymerase chain reaction PCR ಎನ್ನುವ ವಿಧಾನವನ್ನು ಕಂಡುಹಿಡಿದು 1993 ರಲ್ಲಿ ನೋಬೆಲ್ ಪಡೆದರು.
ಆದರೂ ಅವರೇ ಹೇಳುವ ಪ್ರಕಾರ ಯಾವುದೇ ಪರೀಕ್ಷೆ ಪಾಸಿಟಿವ್ ಬಂದ ತಕ್ಷಣ ಅದೇ ವೈರಸ್ ಇದೆ ಅಂತ ಅರ್ಥವಲ್ಲ, ನೆಗೆಟಿವ್ ಬಂದಿದೆಯಂತ ವೈರಸ್ ಇಲ್ಲ ಅಂತಲೂ ಅಲ್ಲ !
ಆದುದರಿಂದಲೇ ಝಿಕಾ , H1N1 ಇತ್ಯಾದಿಗಳು ಇಂಥವೇ ಅಂತ ಇಂದಿಗೂ ಹೇಳಲಾಗುತ್ತಿಲ್ಲ. ವೈರಲ್ ಕಾಯಿಲೆ ಬಂದಿದೆಯಂತಾದರೆ ಅದಕ್ಕೆ ಯಾವುದೇ ಪದ್ಧತಿಯಲ್ಲಿ ಯಾವುದೇ ಮದ್ದಿಲ್ಲ. ಯಾಕೆಂದರೆ ವೈರಸ್ ಗೆ ಜೀವ ಇಲ್ಲ, ಇಂಥದ್ದೇ ರೂಪ ಅಂತಲೂ ಇಲ್ಲ. ಸದಾ ಬದಲಾಗುತ್ತಿರುವುದೇ ಅದರ ಸ್ವಭಾವ.
1884 ರ ತನಕವೂ ನಮಗೆ ಬ್ಯಾಕ್ಟೀರಿಯಾ ಇವೆ ಅಂತ ಗೊತ್ತಿತ್ತು. ಆದರೆ ವೈರಸ್ ಗಳ ಇರುವಿಕೆ ಗೊತ್ತಿರಲಿಲ್ಲ.
1992 ರಲ್ಲಿ ಬ್ಯಾಕ್ಟೀರಿಯಾ ಸೋಸುವ ಜಾಳಿಗೆ ಕಂಡುಹಿಡಿಯಲಾಯಿತು. ಇದರಲ್ಲಿ ಸೋಸಿದ ದ್ರಾವಣದಲ್ಲಿ ತಂಬಾಕಿನ ಎಲೆಗಳನ್ನು ಹಾಕಿದಾಗ ಆದರೂ ಅವು ರೋಗಗ್ರಸ್ಥವಾದದ್ದನ್ನು ಕಂಡು ಬ್ಯಾಕ್ಟೀರಿಯಾ ಗಿಂತ ಚಿಕ್ಕದ್ದೇನೋ ಇರಬೇಕು ಅಂತ ಊಹಿಸಲಾಯಿತು. ಇವುಗಳಿಗೆ ವೈರಸ್ ಅಂದರೆ "ವಿಷ " ಅಂತ ಹೆಸರಿಡಲಾಯಿತು.
ವೈರಸ್ ಗಳಿಗೆ ಸ್ವಂತ ಜೀವಕೋಶ ಇರುವುದಿಲ್ಲ, ಚಯಾಪಚಯ, ಎನರ್ಜಿಯನ್ನು ತಯಾರಿಸುವ ಪ್ರಕ್ರಿಯೆ ಕೂಡ ಇರುವುದಿಲ್ಲ. ಆದುದರಿಂದಲೇ ಇವುಗಳಿಗೆ ದೇಹದ ಹೊರಗೂ ಜೀವ ಇರುತ್ತದೆಯೇ ಅನ್ನುವುದು ಇನ್ನೂ ತಿಳಿದಿಲ್ಲ.
ವೈರಸ್ ಅಂದರೆ ಇಂಜಿನ್ ಇಲ್ಲದ ಗಾಡಿಯ ತರ , ಯಾವುದೇ ದೇಹವನ್ನು ಹೊಕ್ಕರೆ ಅಲ್ಲಿನ ಜೀವಕೋಶವನ್ನು ತೆಗೆದುಕೊಂಡು ಇಂಜಿನ್ ಮಾಡಿಕೊಳ್ಳುತ್ತವೆ. ಇದಾದ ನಂತರ ಆ ವೈರಸ್ ಹೇಳಿದಂತೆ ಆ ಜೀವಕೋಶ ಕೇಳಬೇಕು. ಅದಾದ ನಂತರ ಇವು ತಮ್ಮ ಸಂಖ್ಯೆಯನ್ನು ವೇಗವಾಗಿ ಹೆಚ್ಚಿಸಿಕೊಳ್ಳುತ್ತವೆ.
ವೈರಸ್ಗಳು ಬದುಕಿವೆಯೇ ಇಲ್ಲವೇ ಅಂತಲೇ ಗೊತ್ತಿಲ್ಲದ್ದರಿಂದಲೇ ಅವುಗಳನ್ನು ಕೊಲ್ಲುವ ಔಷಧಿ ಕಂಡುಹಿಡಿಯುವುದು ಸಾಧ್ಯ ಆಗುತ್ತಿಲ್ಲ. ಅಸಲಿಗೆ ವಿಜ್ಞಾನಕ್ಕೆ ಇನ್ನೂ "ಜೀವ" ಅಥವಾ "ಸಾವು" ಅನ್ನುವುದೇನು ಅಂತಲೇ ನಿಖರವಾಗಿ ಗೊತ್ತಿಲ್ಲ. ಹಲವಾರು ತರದ "ಜೀವ"ಗಳು ಮತ್ತು "ಸಾವು"ಗಳೂ ಇವೆ. ಉದಾಹರಣೆಗೆ ಬ್ರೇನ್ ಡೆಥ್, ಇದರಲ್ಲಿ ಮೆದುಳು ಒಂದನ್ನು ಬಿಟ್ಟು ಬೇರೆ ಎಲ್ಲವೂ ಕೆಲಸ ಮಾಡುತ್ತಿರುತ್ತವೆ.
"ಜೀವ" ಅಂದರೇನು ಅಂತಲೇ ಗೊತ್ತಿಲ್ಲದೇ ಮಂಗಳನ ಮೇಲೆ ಜೀವಿಗಳಿವೆಯೇ ಅಂತ ಹೇಳುವ ಸಾಹಸ ಮಾಡುತ್ತಿದ್ದಾನೆ ಮಾನವ. ವೈರಸ್ ಗಳಂಥ ಬದುಕಿಯೂ ಇಲ್ಲದ ಸತ್ತೂ ಇಲ್ಲದ ಜೀವಿಗಳಲ್ಲಿದ್ದರೆ ?
ವೈರಸ್ ಗಳೇ ಭೂಮಿಯ ಮೇಲಿನ ಮೊದಲ ಜೀವಿಗಳಾಗಿರುವ ಸಾಧ್ಯತೆ ಇದೆ. ಮಾನವನ ದೇಹದ ಶೇ 8 ವೈರಸ್ ಗಳೇ ಆಗಿವೆ. ಒಂದು ಸಲ ನಮ್ಮ ದೇಹವನ್ನು ಹೊಕ್ಕ ವೈರಸ್ ಗಳು ನಮ್ಮ ದೇಹದ ಡಿ ಎನ್ ಎ ಜೊತೆಯಲ್ಲಿ ಮಿಕ್ಸ್ ಆಗಿಬಿಡುತ್ತವೆ. ಹೆಚ್ಚಿನ ವೈರಸ್ ಗಳು ಹಾನಿಕಾರಕವಲ್ಲ.
ಇಷ್ಟೇ ಯಾಕೆ ನಮ್ಮ ದೇಹದ ಅನೇಕ ಕೆಲಸಗಳು ವೈರಸ್ಗಳ ಸಹಾಯದಿಂದಲೇ ಆಗುತ್ತವೆ. ತಾಯಿಯ ಭ್ರೂಣದಲ್ಲಿ ಮೊದಲ ಜೀವಕೋಶ ಡಿವೈಡ್ ಆದಾಗಲೇ ವೈರಸ್ ಗಳ ಕಾರ್ಯ ಶುರುವಾಗುತ್ತದೆ. ಇದರಲ್ಲಿ ಕೆಲವು ಜೀವಕೋಶಗಳು ಟೋಡಿಪೊಟೆಂಟ್ ಜೀವಕೋಶಗಳಾಗುತ್ತವೆ. ಅಂದರೆ ಇವೇ ಮುಂದೆ ಪ್ಲೆಸೆಂಟಾ ,ನ್ಯೂರಾನ್ ಇತ್ಯಾದಿ ಆಗುತ್ತವೆ. ಕೆಲವು ಜೀವಕೋಶಗಳು ಪ್ಲೋರಿಪೊಟೆಂಟ್ ಆಗುತ್ತವೆ, ಇವು ಮುಂದೆ ಎಲುಬು , ಚರ್ಮ, ಕೂದಲು ಮತ್ತು ಹಲ್ಲುಗಳಾಗುತ್ತವೆ. ಈ ಕ್ರಿಯೆ ನಡೆಯಬೇಕಾದರೆ ಅತ್ಯಂತ ನಿಖರವಾಗಿ ಜೀನ್ ಸ್ವಿಚ್ ಆಗುತ್ತಲೇ ಇರಬೇಕಾಗುತ್ತದೆ. ಈ ಕೆಲಸವನ್ನು ವೈರಸ್ಗಳು ಮಾಡುತ್ತವೆ. ವೈರಸ್ ಗಳಿಲ್ಲದೇ ಮಾನವನ ಉಗಮವೇ ಆಗುತ್ತಿರಲಿಲ್ಲವಂತೆ. ಇದಕ್ಕೆ ವೈರಸ್ ವರ್ಲ್ಡ್ ಥಿಯರಿ ಅಂತ ಹೆಸರು.
ಆದರೆ ಕೆಲವು ಹಾನಿಕಾರಕ ವೈರಸ್ ಗಳೂ ಇರುತ್ತವೆ. ಇವೇ ರೋಗಗಳನ್ನು ತರುವುದು. ಬ್ಯಾಕ್ಟೀರಿಯಾ ಗಳಿಗೂ ರೋಗ ತರುವ ವೈರಸ್ ಗಳಿವೆ. ಇವುಗಳಿಗೆ ಬ್ಯಾಕ್ಟೀರಿಯಾಫೇಜಿ ಅಂತ ಹೆಸರು.
ನಮ್ಮ ದೇಹದ ಮೇಲೆ ಹಾನಿಕಾರಕ ವೈರಸ್ ಎಟ್ಯಾಕ ಆದಾಗ ಯಾವುದೇ ಔಷಧಿ ಕೆಲಸ ಮಾಡುವುದಿಲ್ಲ. ಬದಲು ದೇಹವೇ ಇವುಗಳನ್ನು ಹೊರಗೆ ಹಾಕಲು ಜ್ವರವನ್ನು ತರುತ್ತದೆ. ಹೆಚ್ಚಿನ ತಾಪಮಾನದಲ್ಲಿ ಈ ವೈರಸಗಳು ಸಾಯುತ್ತವೆ. ಆದರೆ ಚಿಕ್ಕ ಪುಟ್ಟ ಜ್ವರಗಳಿಗೆ ಔಷಧಿ ತೆಗೆದುಕೊಂಡು ಜ್ವರವನ್ನು ಕಡಿಮೆ ಮಾಡುವುದರಿಂದ ಈ ವೈರಸ್ ಗಳು ಸಾಯದೇ ರೂಪ ಬದಲಿಸಿಕೊಂಡು ನಮ್ಮ ದೇಹದಲ್ಲೇ ನೆಲೆಸುತ್ತವೆ. ತೀರಾ ಹೆಚ್ಚಿನ ಜ್ವರಕ್ಕೆ ಮಾತ್ರ ಔಷಧಿ ಸೇವಿಸಿ.
ಯಾವುದೇ ನೋವು ಕೂಡ , ನಿಮ್ಮ ದೇಹ ನೋಡು ,ಇಲ್ಲಿ ಲಕ್ಷ ಕೊಡು ಅಂತ ಹೇಳುವ ವಿಧಾನ ಮಾತ್ರ ಆಗಿದೆ. ಯುದ್ಧ ಕಾಲದಲ್ಲಿ ಅಥವಾ ಆಪತ್ಕಾಲದಲ್ಲಿ ಎಷ್ಟೇ ದೊಡ್ಡ ಗಾಯವಾದರೂ ನೋವಾಗುವುದಿಲ್ಲ. ಯಾಕೆಂದರೆ ನೋವಿನತ್ತ ಗಮನ ಕೊಟ್ಟರೆ ಸಾವು ನಿಶ್ಚಿತ ಅಂತ ಮೆದುಳೇ ನಿರ್ಧರಿಸಿ ನೋವಿನ ಸಿಗ್ನಲ್ ಗಳನ್ನು ಆಫ್ ಮಾಡುತ್ತದೆ. ನೋವು ನಿವಾರಕ ಹಾರ್ಮೋನ್ ಸ್ರವಿಸಲ್ಪಡುತ್ತವೆ. ಒಂದು ಸಲ ಡೇಂಜರ್ ನಿಂದ ಹೊರಬಂದ ನಂತರವೇ ನೋವಿನ ಅನುಭವ ಆಗುತ್ತದೆ.
ಅಮೆರಿಕಾದ ಅಧ್ಯಕ್ಷ ರೋನಾಲ್ಠ್ ರೇಗನ್ ಮೊದಲು ಸಿನೆಮಾ ನಟರಾಗಿದ್ದರು. ಅನೇಕ ಚಿತ್ರಗಳಲ್ಲಿ ಗುಂಡಿನೇಟು ತಿಂದ ನಟನೆ ಮಾಡಿದ್ದರು. ಆದರೆ ನಿಜಜೀವನದಲ್ಲೇ ಅವರಿಗೆ ಯಾರೋ ಗುಂಡು ಹೊಡೆದ. ಚಿಕಿತ್ಸೆಯ ನಂತರ - ಗುಂಡಿನೇಟು ಬಿದ್ದಾಗ ಎಷ್ಟು ಹೆದರಿದ್ದೆ ಅಂತಂದರೆ ನೋವಿನ ಅನುಭವವೇ ಆಗಲಿಲ್ಲ, ಇದು ಸಿನಿಮಾದಲ್ಲಿ ನಟನೆ ಮಾಡುವುದಕ್ಕಿಂತ ಬೇರೆಯೇ ಇದೆ" ಅಂತ ಹೇಳಿಕೆ ಕೊಟ್ಟಿದ್ದರು.
Trigeminal neuralgia ಅಂತ ಕಾಯಿಲೆ ಸಲ್ಮಾನ್ ಖಾನ್ ಗೆ ಇದೆ. ಅವರ ಕೆನ್ನೆಯ ಭಾಗದಲ್ಲಿ ಅಸಾಧ್ಯ ನೋವುಂಟಾಗುತ್ತದೆ. ಯಾವುದೇ ಕಾರಣವಿಲ್ಲದೇ ತೀವ್ರವಾದ ನೋವಾಗುವುದು ಈ ಕಾಯಿಲೆಯ ಲಕ್ಷಣ. ತನಗೆ ನೋವಾಗುತ್ತಿದೆ ಅಂತ ರೋಗಿಯ ಹೇಳಿಕೆಯನ್ನು ಬಿಟ್ಟರೆ ಈ ಕಾಯಿಲೆಯನ್ನು ಕಂಡುಹಿಡಿಯುವ ಯಾವುದೇ ವಿಧಾನವೂ , ಯಾವುದೇ ಪರೀಕ್ಷೆಯೂ ಜಗತ್ತಿನಲ್ಲಿ ಇಲ್ಲ.
ಇದೆ ಕಾರಣಕ್ಕೆ ಆಸಾರಾಂ ಬಾಪು ತನ್ನ ಬಂಧನ ತಪ್ಪಿಸಿಕೊಳ್ಳಲು ತನಗೆ Trigeminal neuralgia ಇದೆ ಅಂತ ಹೇಳಿಕೆ ಕೊಟ್ಟಿದ್ದ. ವೈದ್ಯರು ನಂಬಲೆಬೇಕಾಯಿತು. ಒಂದು ವೇಳೆ ಪೊಲೀಸರು ನಿಮ್ಮನ್ನು ಹಿಡಿಯಲು ಬಂದರೆ ನೀವೂ ಇದನ್ನೇ ಹೇಳಿ ಜೈಲಿನ ಬದಲು ಆಸ್ಪತ್ರೆಗೆ ಸೇರಬಹುದು.
ಇನ್ನೊಮ್ಮೆ ಎಚ್ಚರಿಕೆ. ಇವುಗಳಲ್ಲಿ ಹೆಚ್ಚಿನವು ಡಾ ಬಿಸ್ವರೂಪ ರವರ ಮಾತುಗಳು. ಮೇಲ್ನೋಟಕ್ಕೆ ಲಾಜಿಕ್ ಕಾಣುತ್ತದೆ. ಆದರೂ ಲೇಖನ ಓದಿ ಔಷಧಿ ನಿಲ್ಲಿಸಬೇಡಿ . ನಿಮ್ಮ ವೈದ್ಯರನ್ನು ಸಂಪರ್ಕಿಸಿ.
No comments:
Post a Comment
If you have any doubts. please let me know...