| ಜ್ಞಾನ ಜ್ಯೋತಿ |
ಒಬ್ಬ ಸನ್ಯಾಸಿಗಳು ತಮ್ಮ ಪಾದ ಯಾತ್ರೆಯಲ್ಲಿದ್ದಾಗ, ಸಂಜೆಯಲ್ಲಿ ಒಂದು ಹಳ್ಳಿಯನ್ನು ತಲುಪಿದರು. ಅಂದು ಅಲ್ಲಿನ ಒಬ್ಬ ಬ್ರಾಹ್ಮಣರ ಮನೆಯಲ್ಲಿ ಬಿಡಾರ ಹೂಡಿದರು. ಆ ದಿನ ರಾತ್ರಿ ಹಣತೆಯ ಬೆಳಕಿನಲ್ಲಿ ಸನ್ಯಾಸಿಗಳ ಪ್ರವಚನ ಏರ್ಪಾಟಾಗಿತ್ತು. ಹಳ್ಳಿಯ ಜನ ಪ್ರವಚನಕ್ಕೆ ಹಾಜರಾದರು. ಪ್ರವಚನಕ್ಕೆ ಆ ಹಳ್ಳಿಯ ಒಬ್ಬ ಅಹಂಕಾರಿ ಸಾಹುಕಾರನೂ ಬಂದಿದ್ದ. ಸನ್ಯಾಸಿಯನ್ನು ಪರೀಕ್ಷೆ ಮಾಡಲು ಏನಾದರೊಂದು ಪ್ರಶ್ನೆ ಕೇಳಿ ತನ್ನ ಅಹಂಕಾರದ ಬುದ್ದಿವಂತಿಕೆ ಪ್ರದರ್ಶಿಸುವುದು ಅವನ ಬಯಕೆಯಾಗಿತ್ತು.
ಸನ್ಯಾಸಿಗಳ ಪ್ರವಚನದ ನಡುವೆ, ಆ ಸಾಹುಕಾರ ಎದ್ದುನಿಂತು, ಗುರುಗಳೇ ನನ್ನದೊಂದು ಸಂದೇಹವಿದೆ, ಅದಕ್ಕೆ ತಾವು ಉತ್ತರ ನೀಡಿ ಸಂದೇಹವನ್ನು ಪರಿಹರಿಸಬೇಕು ಎಂದ.
.....ಗುರುಗಳೆ ಇಲ್ಲಿ ಉರಿಯುತ್ತಿರುವ ಹಣತೆಯ ದೀಪದ ಬೆಳಕು ಎಲ್ಲಿಂದ ಬಂತು.?
ಸಾಹುಕಾರನ ಪ್ರಶ್ನೆಗೆ ಗುರುಗಳು ಗಂಭೀರವಾಗಿ ಉತ್ತರ ನೀಡಲು ಪ್ರಾರಂಭಿಸಿದರು.
ಅಷ್ಟರಲ್ಲಿ, ಅಲ್ಲೇ ಕುಳಿತಿದ್ದ ಆ ಮನೆಯ ಬ್ರಾಹ್ಮಣನ ಏಳೆಂಟು ವರ್ಷದ ಮಗಳಿಗೆ ಈ ಸಾಹುಕಾರನ ವ್ಯಂಗ್ಯ ಪ್ರಶ್ನೆ ಸನ್ಯಾಸಿಗಳನ್ನು ಗೇಲಿ ಮಾಡಲಿಕ್ಕಾಗಿ ಎಂಬುದನ್ನು ತಿಳಿದಳು. ಆ ಸಾಹುಕಾರನಿಗೆ ಅವನದೇ ಶೈಲಿಯಲ್ಲಿ ಪ್ರತ್ಯುತ್ತರ ನೀಡುವುದು ಸರಿಯೆಂದು ತಿಳಿದು.......
ಕ್ಷಮಿಸಿ ಗುರುಗಳೆ, ಈ ಸಣ್ಣ ವಿಚಾರಕ್ಕೆ ಜ್ಞಾನಿಗಳಾದ ತಾವು ಉತ್ತರ ನೀಡುವ ಅವಶ್ಯಕತೆ ಇಲ್ಲ. ಜೊತೆಗೆ ತಮ್ಮ ಕ್ಲಿಷ್ಟಕರವಾದ ವ್ಯಾಖ್ಯಾನದ ಉತ್ತರ ಸಾಹುಕಾರರಿಗೆ ಅರ್ಥವಾಗುವುದು ಕಷ್ಟವಾಗಬಹುದು, ಹಾಗಾಗಿ ನಾನು ಅವರ ಪ್ರಶ್ನೆಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಉತ್ತರ ನೀಡುತ್ತೇನೆ ಎಂದಳು.
ತಕ್ಷಣವೇ, ಆ ಉರಿಯುತ್ತಿದ್ದ ಹಣತೆಯ ದೀಪವನ್ನು "ಉಫ್" ಎಂದು ಊದಿ ಆರಿಸಿದಳು, ದೀಪ ನಂದಿಹೋಯಿತು.
....ಸಾಹುಕಾರರೇ, ನೀವು ಹಣತೆಯಲ್ಲಿ ಉರಿಯುತ್ತಿದ್ದ ಬೆಳಕು ಎಲ್ಲಿಂದ ಬಂತು! ಎಂಬುದು ತಮ್ಮ ಪ್ರಶ್ನೆಯಾಗಿತ್ತು. ಈಗ ಆ ಹಣತೆಯಲ್ಲಿ ಬೆಳಕಿಲ್ಲ, ಬರೀ ಕತ್ತಲು ಮಾತ್ರ. ನಾನು "ಉಫ್'' ಎಂದು ಬಾಯಿಂದ ಗಾಳಿ ಬಿಟ್ಟಾಗ ಹಣತೆಯ ದೀಪ ನಂದಿಹೋಯಿತು. ಈಗ ತಾವೇ ಹೇಳಿ, ಆ ದೀಪದ ಬೆಳಕು ಎಲ್ಲಿ ಮಾಯವಾಯಿತು...? ಎಲ್ಲಿಂದ ಆ ಬೆಳಕು ಬಂದಿತ್ತೋ ಅಲ್ಲಿಗೆ ಹೊರಟು ಹೋಯಿತು ಅಲ್ಲವೇ...? ತಮಗೆ ಉತ್ತರ ಸಿಕ್ಕಿತೆ? ಎಂದಳು.
ಸಾಹುಕಾರ ಮರು ಮಾತಾಡದೆ ಅಲ್ಲಿಂದ ಹೊರಟುಹೋದ.
==========================
ಯಾರ ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯಗಳ ಆಚರಣೆಗಳಲ್ಲಿ ಆಸಕ್ತಿ, ಶ್ರದ್ಧೆ ಉಂಟೋ, ಅಲ್ಲಿ ಇಂತಹ ಪ್ರಶ್ನೆಗಳಿಗೆ ಮಕ್ಕಳು ಬಾಲ್ಯದಲ್ಲಿ ಇರುವಾಗಲೇ ತಕ್ಕ ಉತ್ತರ ನೀಡಲು ಸಮರ್ಥರಾಗಿರುವುದು ಸಹಜ. ನಮ್ಮ ಮಕ್ಕಳಿಗೆ ನಮ್ಮ ಮಹಾ ಕಾವ್ಯಗಳ ಕಥೆ ಹೇಳಬೇಕು. ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಸಿ, ಆಚರಣೆಗಳಲ್ಲಿ ಆಸಕ್ತಿ ಮೂಡಿಸುವುದು ಹಿರಿಯರ ಕರ್ತವ್ಯ.
ಧನ್ಯವಾದಗಳು.
ವಿ.ಎಸ್.ಮಣಿ.
No comments:
Post a Comment
If you have any doubts. please let me know...