April 22, 2021

ಋಜ್ರಾಶ್ವ

ಋಜ್ರಾಶ್ವ . . . . 

ವೃಷಾಗಿರ ಎನ್ನುವ ಒಬ್ಬ ಮಹಾರಾಜನಿದ್ದ. ಆತ ತುಂಬಾ ಧಾರ್ಮಿಕನಾಗಿದ್ದ. ಸ್ವತಃ ಅನೇಕ ಯಾಗಗಳನ್ನು ಮಾಡಿಸಿದವನು.  ಇವನಿಗೆ ಐದು ಜನ ಮಕ್ಕಳಿದ್ದರು. ಆ ಐದೂ ಜನ ಮಕ್ಕಳು ರಾಜರ್ಷಿಗಳು ಎನ್ನಿಸಿಕೊಂಡವರು. ಋಜ್ರಾಶ್ವ, ಅಂಬರೀಷ, ಸಹದೇವ, ಭಯಮಾನ, ಮತ್ತು ಸುರಾಧಸ ಎನ್ನುವವರು. ಎಂದು ಋಗ್ವೇದದ ಮೊದಲ ಮಂಡಲದಲ್ಲಿ ಸಿಗುತ್ತದೆ. ಇವರು ಇಂದ್ರನನ್ನು ಕುರಿತಾಗಿ ಸ್ತುತಿಸಿ ಸೂಕ್ತ ದೃಷ್ಟಾರರೆನ್ನಿಸಿಕೊಂಡವರು. 

ಈ ಋಜ್ರಾಶ್ವ ಕಾಲಾಂತರದಲ್ಲಿ ಕುರುಡನಾಗುತ್ತಾನೆ. ಅದರ ಕುರಿತಾಗಿಯೇ ಒಂದು ಕಥೆ ದೊರಕುತ್ತದೆ. ಅಶ್ವಿನೀ ದೇವತೆಗಳ ವಾಹನ ಕತ್ತೆ. ಒಮ್ಮೆ ಅಶ್ವಿನೀ ದೇವತೆಗಳ ಕತ್ತೆಗಳು ಹೆಣ್ಣು ತೋಳದ ರೂಪ ಧರಿಸಿ ಋಜ್ರಾಶ್ವನ ಬಳಿ ಬಂದು ಆಹಾರವನ್ನು ಕೇಳುತ್ತದೆ. ಆಗ ಋಜ್ರಾಶ್ವ ತನ್ನ ಬಳಿ ಇದ್ದ ಆಡುಗಳನ್ನು ಕೊಡದೇ, ತನ್ನ ರಾಜ್ಯದ ಪ್ರಜೆಗಳಿಂದ ಪಡೆದು ನೂರು ಆಡಿನ ಮರಿಗಳನ್ನು ಕಡಿದು ಹೆಣ್ಣು ತೋಳಕ್ಕೆ ಕೊಡುತ್ತಾನೆ. ಆಗ ವೃಷಾಗಿರನಿಗೆ ಸುದ್ಧಿ ತಲುಪುತ್ತದೆ. ವೃಷಾಗಿರ ಸಿಟ್ಟುಗೊಂಡು ಮಗನಿಗೆ ಹೇಳುತ್ತಾನೆ. ಜನರ ಸಂಪತ್ತಿನ ಲೂಟಿ ಮಾಡಿರುವೆ ನೀನು. ಇದು ಪರಮಾಪರಾಧ. ನಿನ್ನ ಈ ಕೆಲಸಕ್ಕೆ ನಿನಗೆ ಶಿಕ್ಷೆಯಾಗಲೇ ಬೇಕು ಎಂದು ಶಪಿಸುತ್ತಾನೆ. ಆಗ ಋಜ್ರಾಶ್ವ ತನ್ನ ಕಣ್ಣುಗಳ ದೃಷ್ಟಿ ಕಳೆದುಕೊಳ್ಳುತ್ತಾನೆ. ಇದನ್ನು ಋಗ್ವೇದದ ಒಂದನೇ ಮಂಡಲದ ೧೧೬ನೇ ಸೂಕ್ತದಲ್ಲಿ ವಿವರಿಸಿದ್ದು ಶತಂ ಮೇಷಾನ್ವೃಕ್ಯೇ ಎಂದು ಆರಂಭವಾಗುವ ಭಿಷಜಾವನರ್ವನ್ ಎಂದು ಕೊನೆಗೊಳ್ಳುವ ಋಕ್ಕಿನಲ್ಲಿ. 

ಆಗ ರಾಜ್ಯಾಡಳಿತ ನಡೆಸಲು ರಾಜನಾದವನು ಯಾವುದೇ ಅಂಗ ವೈಕಲ್ಯವೋ ಅಥವಾ ಇನ್ನಾವುದೇ ಶಾರೀರಿಕ ನ್ಯೂನತೆಗಳಿದ್ದರೊ ರಾಜನಾಗುವಂತಿರಲಿಲ್ಲ. ಇಲ್ಲಿ ಋಜ್ರಾಶ್ವ ಕುರುಡನಾಗಿದ್ದ. ಪ್ರಜೆಗಳ ಯಾವ ಕಷ್ಟ ಸುಖಗಳೂ ಆತನಿಗೆ ತಿಳಿಯುತ್ತಿರಲಿಲ್ಲ. ಆದುದರಿಂದ ಆತ ಇಂದ್ರನನ್ನು ಸ್ತುತಿಸುತ್ತಾನೆ. ಋಗ್ವೇದದ ಒಂದನೇ ಮಂಡಲದ ೧೧೨ನೇ ಸೂಕ್ತದಲ್ಲಿ ರೋಹಿಚ್ಛ್ಯಾವಾ . . . . ರಾಯ ಋಜ್ರಾಶ್ವಸ್ಯ ಎನ್ನುವುದಾಗಿ ಹೇಳುತ್ತಾ ರಾಜನಾದ ಋಜ್ರಾಶ್ವನಿಗೆ ಅಶ್ವಿನೀ ದೇವತೆಗಳು ಕಣ್ಣು ಬರುವಂತೆ ಚಿಕಿತ್ಸೆ ಮಾಡದರಂತೆ. ಆಗ ಇಂದ್ರ ತನ್ನ ರಥದಲ್ಲಿ ಕುಳಿತು ಬಂದು ಸಂಪತ್ತನ್ನು ದಾನ ಮಾಡಿದ ಎಂದು ಹೇಳಲಾಗಿದೆ. ಇದೊಂದೇ ಋಕ್ಕಿನಲ್ಲಿ ಅನೇಕ ವಿಷಯಗಳಿದ್ದು ಅದರ ವಿವರಣೆ ಇಲ್ಲಿ ಅಪ್ರಸ್ತುತವೆನ್ನಿಸುತ್ತದೆ. 

ಮುಂದಿನ ಋಕ್ಕಿನಲ್ಲಿ ವೃಷಾಗಿರನ ಐದು ಮಕ್ಕಳ ಹೆಸರು ಪ್ರಸ್ತಾಪವಾಗಿದೆ. ಋಜ್ರಾಶ್ವಃ ಪ್ರಷ್ಟಿಭಿರಂಬರೀಷಃ ಸಹದೇವೋ ಭಯಮಾನಃ  ಸುರಾಧಾಃ ಎಂದು ಹೆಸರನ್ನು ಉಲ್ಲೇಖಿಸಲಾಗಿದೆ. ಅಂದರೆ ವೃಷಾಗಿರನ ಮಕ್ಕಳಾದ ನಾವು ಐವರೂ ಸೇರಿಕೊಂಡು ನಿನ್ನನ್ನು ಸ್ತುತಿಸುತ್ತಿದ್ದೇವೆ. ನಮಗೆ ನಮ್ಮ ರಾಜ್ಯದ ಪ್ರಜೆಗಳಿಗೆ ಸುಭಿಕ್ಷವನ್ನುಂಟು ಮಾಡು ಎಂದು ಇಂದ್ರನನ್ನು ಸ್ತುತಿಸಿದ್ದಾರೆ.

ಅದೇನೇ ಇರಲಿ, ಹುಟ್ಟು ಕುರುಡುತನವಿರದೇ ಮಧ್ಯದಲ್ಲಿ ಕಾಣಿಸಿಕೊಳ್ಳುವ ಕುರುಡುತನಕ್ಕೆ ವೈದ್ಯಕೀಯ ಲೋಕದಲ್ಲಿ ಔಷಧಗಳಿವೆ ಅಥವಾ ಅದನ್ನು ಗುಣಪಡಿಸಬಹುದು ಎನ್ನುವ ಸಂದೇಶವಂತೂ ಇದರಿಂದ ದೊರಕುತ್ತದೆ.

#ಕುರುಡುತನ_ಋಜ್ರಾಶ್ವ
ಸದ್ಯೋಜಾತರು

No comments:

Post a Comment

If you have any doubts. please let me know...