ಅಂಗಿರಃ ಎನ್ನುವುದು ಪ್ರಮುಖವಾಗಿ ಅಗ್ನಿಯನ್ನು ಕುರಿತಾಗಿ ಹೇಳುವ ಪದ. ಅಂಗಾರಃ ಎನ್ನುವುದು ಅಗ್ನಿಯಿಂದ ಉಂಟಾದ ಕೆಂಡವನ್ನು ಕುರಿತಾಗಿ ಹೇಳಿವುದು. ಐತರೇಯ ಬ್ರಾಹ್ಮಣದಲ್ಲಿ "ಯೇಙ್ಗಾರಾ ಆ ಸಂಸ್ತೇಙ್ಗಿರಸೋ ಭವನ್" ಎಂದು ಬಂದಿದೆ. ಅಗ್ನಿಗೆ ಸಂಬಂಧಿಸಿದ ಅಂಗಾರಗಳು(ಕೆಂಡಗಳು) ಅಂಗಿರಸರೆನ್ನುವ ಹೆಸರನ್ನು ಪಡೆದವು ಎಂದು ಪ್ರಜಾಪತಿದುಹಿತೃಧ್ಯಾನೋಪಾಖ್ಯಾನದಲ್ಲಿ ಬರುತ್ತದೆ.
ಒಮ್ಮೆ ಪ್ರಜಾಪತಿಯು ತನ್ನ ಮಗಳನ್ನು ಕೆಟ್ಟ(ಕಾಮುಕ) ಭಾವನೆಯಿಂದ ಮನಸ್ಸಿನಲ್ಲಿ ಧ್ಯಾನಿಸುತ್ತಾನೆ. ಇದು ದೇವತೆಗಳ ಗಮನಕ್ಕೆ ಬರುತ್ತದೆ. ಆಗ ಅದನ್ನು ಹೇಗಾದರೂ ಮಾಡಿ ತಡೆಯಬೇಕೆಂದು ಯೋಚಿಸುತ್ತಾರೆ. ಆದರೆ ಈ ಕೆಲಸ ಮಾಡುವಷ್ಟು ಶಕ್ತಿ ಅವರಲ್ಲಿ ಇರಲಿಲ್ಲ. ದೇವತೆಗಳೆಲ್ಲಾ ಸೇರಿ ತಮ್ಮಲ್ಲಿರುವ ಘೋರವಾದ ಶಕ್ತಿಯನ್ನು ಒಂದು ಮಾಡಿ ಒಂದು "ರುದ್ರ" ಎನ್ನುವ ದೇವನನ್ನು ಗುರುತಿಸುತ್ತಾರೆ. ಆ ರುದ್ರನಲ್ಲಿ ಪ್ರಜಾಪತಿಯನ್ನು ಶಿಕ್ಷಿಸಲು ವಿನಂತಿಸಿಕೊಳ್ಳುತ್ತಾರೆ. ಆಗ ಇದನ್ನು ಗಮನಿಸಿದ ಪ್ರಜಾಪತಿಯು ಹೆದರಿಕೊಂಡು ಮೃಗರೂಪವನ್ನು ಧರಿಸಿ ಅಂತರಿಕ್ಷಕ್ಕೆ ನೆಗೆಯುತ್ತಾನೆ. ಅದೇ ಇಂದಿಗೂ ಕಾಣಿಸಿಕೊಳ್ಳುತ್ತಿರುವ ಮೃಗ ನಕ್ಷತ್ರ ಅಥವಾ ಮೃಗಶಿರಾ. ಆಗ ರುದ್ರನು ಆರ್ದ್ರಾ ನಕ್ಷತ್ರವಾಗಿ ನೆಗೆದು ಮೃಗಶಿರಾ ನಕ್ಷತ್ರದ ಪ್ರಜಾಪತಿಯ ಮೇಲೆ ಬಾಣ ಪ್ರಯೋಗಿಸುತ್ತಾನೆ. ಆದರೆ ಅದಾಗಲೇ ಬೃಹಸ್ಪತಿಯ ವೀರ್ಯಸ್ಖಲನವಾಗುತ್ತದೆ. ಅದನ್ನು ಮರುತ್ತುಗಳು ಬೇರೆ ಬೇರೆ ಕಡೆ ಹರಡಿ ಭಸ್ಮ ಮಾಡುತ್ತವೆ. ಆ ವೀರ್ಯದಿಂದ ಮೊದಲು ಆದಿತ್ಯನೂ, ಆಮೇಲೆ ಭೃಗುರ್ವಾರುಣಿಯೂ ಜನಿಸುತ್ತಾರೆ. ಉಳಿದ ಅಂಗಾರಗಳಿಂದ ಅಂಗಿರಸರೆನ್ನುವವರು ಹುಟ್ಟಿಕೊಳ್ಳುತ್ತಾರೆ. ಹೀಗೆ ಅಂಗಿರಸರು ಕೆಂಡದಿಂದಲೇ ಜನ್ಮ ತಳೆದಿದ್ದು ತಿಳಿಯುತ್ತದೆ.
ವೇದಗಳಲ್ಲಿ ಅಂಗಿರ ಎನ್ನುವವರು ಬಹು ಪ್ರಾಚೀನ ಮತ್ತು ಅಷ್ಟೇ ಮಹತ್ವವನ್ನು ಪಡೆದವರು. ಅನೇಕ ಪ್ರಸಿದ್ಧರಾದ ಋಷಿಗಳಿಗೆ ಇವರೇ ಮೂಲ ಪುರುಷರಾಗಿದ್ದಾರೆ. "ತೇ ಅಂಗಿರಸಃ ಸೂನವಸ್ತೇ ಅಗ್ನೇಃ ಪರಿಜಜ್ಞಿರೇ" ಋಗ್ವೇದ ೧೦ಮಂಡಲದ ೬೨ ಸೂಕ್ತದಲ್ಲಿ ಅಂಗಿರಸ್ಸೆಂಬ ಋಷಿಗಳು ಅಗ್ನಿಯ ಪುತ್ರರು ಎನ್ನುವುದನ್ನು ತಿಳಿಸಿದೆ. "ಮನುಷ್ವದಗ್ನೇ ಅಂಗಿರಸ್ವದಂಗಿರೋ . . . " "ಪೂರ್ವೋ ಅಂಗಿರಾಃ . . . . ||" ಎನ್ನುವುದಾಗಿ ಋಗ್ವೇದದ ಒಂದನೇ ಮಂಡಲವೇ ಇವರ ಕುರಿತಾಗಿ ಹೇಳುತ್ತಾ ಅನೇಕ ಪ್ರಸಿದ್ಧ ಋಷಿಗಳಿಗೆ ಮೂಲ ಮತ್ತು ಪ್ರಾಚೀನ ಋಷಿ ಎನ್ನುವುದನ್ನು ತಿಳಿಸಿಕೊಡುತ್ತದೆ. ಈ ಅಂಗಿರಾ ಋಷಿಯ ವಂಶದಲ್ಲಿ ’ಅಥರ್ವನ್’ ಎನ್ನುವವನು ಪ್ರಮುಖನು. ಇವನಿಗೆ ಬೃಹಸ್ಪತಿ, ಗೋತಮ ಮತ್ತು ವೃಷಣ ಎನ್ನುವ ಮೂವರು ಪುತ್ರರು. ವೃಷಣ ಎನ್ನುವವನು ಅಥರ್ವಣನಿಗೆ ಪಥ್ಯಾ ಎನ್ನುವ ಪತಿಯಲ್ಲಿ ಹುಟ್ಟಿದವನು. ವೇದದಲ್ಲಿ ಅನೇಕ ಕಡೆಯಲ್ಲಿ ಈತನ ಹೆಸರು ಕಂಡು ಬರುತ್ತದೆ. ಈ ವೃಷಣನ ಮಗ ’ಸುಧನ್ವಾನ್’ ಆಂಗಿರ ಎನ್ನುವವನು. ಈ ಸುಧನ್ವನಿಗೆ ಋಬು, ವಿಭ್ವನ್, ಮತ್ತು ವಾಜ ಎನ್ನುವುದಾಗಿ ಮೂರು ಜನ ಮಕ್ಕಳು. ಈ ಮೂವರೂ ವೇದದಲ್ಲಿ ಋಭುಗಳೆಂದೇ ಕರೆಯಲ್ಪಟ್ಟಿದ್ದಾರೆ. ಇವರೆಲ್ಲ ತ್ವಷ್ಟೃ ಪ್ರಜಾಪತಿಯ ಶಿಷ್ಯರು. ಈ ಅಂಗಿರಾ ಋಷಿಯ ವಂಶಸ್ಥರೇ ಬೃಹಸ್ಪತಿಗಳೆನ್ನುವವರು ಮೂವರಿದ್ದರು. ಋಭು ಮತ್ತು ಬೃಹಸ್ಪತಿಗಳನ್ನು ದೇವತೆಗಳೆಂದೇ ಭಾವಿಸಿ ಅನೇಕ ಋಕ್ಕುಗಳಲ್ಲಿ ಕೊಂಡಾಡಿದ್ದಾರೆ. ಇವರನ್ನು ಸ್ತುತಿಸುವ ಅನೇಕ ಋಕ್ಕುಗಳು ಸಿಗುತ್ತವೆ. ಮೂವರು ಬೃಹಸ್ಪತಿಗಳಲ್ಲಿ ಮೊದಲನೆಯವನು ಫಣಿ ಎನ್ನುವ ದಸ್ಯು ರಾಜನನ್ನು ಕೊಂದು ಅವನು ಅಪಹರಿಸಿದ್ದ ಗೋವುಗಳನ್ನು ಹಿಂದಕ್ಕೆ ಕರೆತಂದವನು. ಅಂಶುಮತೀ ಎಂಬ ನದೀ ದಡದಮೇಲೆ ರಾಜ್ಯವಾಳುತ್ತಿದ್ದ ದಾಸನೆನ್ನುವ ಮತ್ತೊಬ್ಬ ದಸ್ಯು ಮುಖಂಡನನ್ನು ತನ್ನ ಹತ್ತು ಸಾವಿರ ಬೆಂಬಲಿಗರೊಡನೆ ಎದುರಿಸಿ ಸೋಲಿಸಿದ ಎನ್ನುವುದಾಗಿ ತಿಳಿದು ಬರುತ್ತದೆ. ಬೃಹಸ್ಪತಿಯ ಮಗನಾದ ಭರದ್ವಾಜನೆಂಬ ಋಷಿಯು ಶಂಬರನೆಂಬ ದೈತ್ಯನನ್ನ ಕೊಂದ ದಿವೋದಾಸನಿಗೆ ಪುರೋಹಿತನಾಗಿದ್ದನಂತೆ. ಈತ ಬೃಹಸ್ಪತಿಯ ಮಗ. ವೇದದಲ್ಲಿ ಅಗ್ನಿಯ ಕುರಿತಾದಲ್ಲೆಲ್ಲಾ ಅಂಗಿರಾ ಶಬ್ದ ಕಂಡು ಬರುತ್ತದೆ.
"ತಮಿತ್ಸು ಹವ್ಯಮಂಗಿರಃ ಸುದೇವಂ ಸಹಸೋ ಯಹೋ| ಜನಾ ಆಹುಃ ಸುಬರ್ಹಿಷಂ||" ಆರನೇ ಮಂಡಲದ ಮಂತ್ರವಿದು. ಇಲ್ಲಿ ಬಲ ಪುತ್ರನಾದ ಅಂಗಿರಸ್ ಎಂಬ ಅಗ್ನಿಯೇ ನಿನ್ನನ್ನು ಯಜಮಾನ, ಹವಿರ್ದಾನ ದೇವತೆ ಮತ್ತು ಯಜ್ಞ ಇವುಗಳೆಲ್ಲವುಗಳಲ್ಲಿಯೂ ಅದೃಷ್ಟಶಾಲಿಯೆಂದು ಎಲ್ಲ ಜನರೂ ಹೇಳುತ್ತಾರೆ ಎನ್ನುವುದು ಈ ಋಕ್ಕಿನ ಅರ್ಥವಾಗಿದ್ದರೂ ಇಲ್ಲಿ ಅಂಗಿರಃ ಎನ್ನುವುದು ಅಗ್ನಿಯನ್ನು ಕುರಿತಾಗಿ ಹೇಳಲಾಗಿದೆ. ತವೇತತ್ಸತ್ಯಮಂಗಿರಃ ಎಂದು ಒಂದನೇ ಮಂಡಲದಲ್ಲಿ ಅಗ್ನಿಯನ್ನು ಸಂಬೋಧಿಸಲಾಗಿದೆ. "ತ್ವಮಗ್ನೇ ಪ್ರಥಮೋ ಅಂಗಿರಾ ಋಷಿರ್ದೇವೋ ದೇವಾನಾಮಭವ ಶಿವಃ ಸಖಾ|| ಎನ್ನುವುದಾಗಿ ಇಲ್ಲಿಯೂ ಅಂಗಿರಾ ಋಷಿಯು ಅಗ್ನಿ ಎನ್ನಲಾಗಿದೆ. "ತ್ವಂ ನೋ ಅಗ್ನೇ ಅಂಗಿರಃ" ಎಂದು ಐದನೇ ಮಂಡಲದಲ್ಲಿ ಹೇಳಲಾಗಿದೆ.
ಋಗ್ವೇದ ಒಂದನೇ ಮಂಡಲದ ೩೧ನೇ ಸೂಕ್ತದ ಋಷಿ ಹಿರಣ್ಯಸ್ತೂಪ ಎನ್ನುವವನು. ಈತ ತನ್ನನ್ನು ಅಂಗೀರಸ ವಂಶದವನೆಂದು ಹೇಳಿಕೊಂಡಿರುವುದಲ್ಲದೇ "ತ್ವಮಗ್ನೇ ಪ್ರಥಮೋ ಅಂಗಿರಾ ಋಷಿರ್ದೇವೋ ಎನ್ನುವುದಾಗಿ ಆರಂಭಿಸಿ ಎಲ್ಲಾ ಋಕ್ಕುಗಳನ್ನೂ ತ್ವಮಗ್ನೇ ಎಂದು ಹೇಳಿಕೊಳ್ಳುತ್ತಾನೆ.
ಈ ಅಂಗೀರಸನು ಫಣಿಗಳಿಂದ ಅಪಹೃತವಾದ ಗೋವುಗಳನ್ನು ಸಂಪತ್ತನ್ನು ಮರಳಿ ಪಡೆದ ಎನ್ನುವುದು ಋಗ್ವೇದದ ಒಂದನೇ ಮಂಡಲದಿಂದ ತಿಳಿಯುತ್ತದೆ. ಹಾಗೆಯೇ ಇವರೆಲ್ಲರೂ ಯಜ್ಞಗಳ ನಿರ್ವಣೆಯಲ್ಲಿ ಬಹಳ ಮುಖ್ಯವಾದ ಪಾತ್ರವಹಿಸುತ್ತಿದ್ದುದು ತಿಳಿದು ಬರುತ್ತದೆ.
ಅಂಗಿರಾ ಋಷಿ ವೇದಗಳಲ್ಲಿ ಪ್ರಮುಖನಾಗಿ ಕಾಣಿಸಿಕೊಂಡು ದೇವತ್ವವನ್ನು ಪಡೆದ ಋಷಿಯಾಗಿ ಗೋಚರಿಸುತ್ತಾನೆ. ಹುಟ್ಟಿನ ಮೂಲಕ್ಕೂ ಅಗ್ನಿಯೇ ಶಾಖರೂಪದಲ್ಲಿ ಶಕ್ತಿಯರೂಪದಲ್ಲಿ ಕಾರಣನಾಗುತ್ತಾನೆ. ಸಾವಿನ ಮೂಲಕ್ಕೂ ಆತನೇ ಕಾರಣನಾಗಿ ಮಧ್ಯದ ನಮ್ಮ ಜೀವನದ ಉದ್ದಕ್ಕೂ ಅಗ್ನಿ ನಮ್ಮ ಜೊತೆಗಿರುತ್ತಾನೆ. ಅಂತಹ ಅಗ್ನಿಯನ್ನೇ ಅಂಗಿರಾ ಅಥವಾ ಅಂಗಿರಸ ಎನ್ನುವುದಾಗಿ ಕರೆಯಲಾಗಿದೆ.
#ಅಂಗಾರ_ಅಂಗಿರಾ
Sadyojath...
No comments:
Post a Comment
If you have any doubts. please let me know...