ಶಂ ನೋ ಭವತ್ವರ್ಯಮಾ
ಶಂ ನೋ ಮಿತ್ರಃ ಶಂ ವರುಣಃ | ಶಂ ನೋ ಭವತ್ವರ್ಯಮಾ| ಶಂ ನ ಇಂದ್ರೋ ಬೃಹಸ್ಪತಿಃ |
ಶಂ ನೋ ವಿಷ್ಣುರುರುಕ್ರಮಃ |
ಪ್ರಾಣ ಸಂಚಲನಕ್ಕೆ ಅಥವಾ ಪ್ರಾಣವೃತ್ತಕ್ಕೆ ಅಭಿಮಾನಿ ದೇವತೆಯಾದ ಮಿತ್ರ ಎನ್ನುವ ದೇವತೆ ನಮಗೆ ಸುಖವನ್ನು ಕೊಟ್ಟು ಒಳ್ಳೆಯದನ್ನು ಮಾಡಲಿ. ಈ ಮಿತ್ರನು ದಿವೋ ದೇವತೆ. ಅಂದರೆ ಹಗಲಿಗೆ ಅಭಿಮಾನ ದೇವತೆ ಎನ್ನುವುದು ತೈತ್ತಿರೀಯ ಬ್ರಾಹ್ಮಣದಲ್ಲಿ ಸಾಯಣಾಚಾರ್ಯರು. ರಾತ್ರಿಗೆ ವರುಣನು ಅಭಿಮಾನದೇವತೆಯಾಗಿದ್ದು ಅಪಾನಕ್ರಿಯೆಯನ್ನು ಸರಾಗವಾಗಿ ಮಾಡುವ ಸಾಮರ್ಥ್ಯಹೊಂದಿರುವವನಾಗಿ ನಮಗೆ ಸುಖವನ್ನು ಒದಗಿಸಲಿ. ಶಂ ನೋ ಭವತ್ವರ್ಯಮಾ ಎನ್ನುವುದು ಎಷ್ಟು ಮಹತ್ವವನ್ನು ಹೊಂದಿದೆ. ನಮ್ಮ ಕಣ್ಣುಗಳಿಗೆ ಆದಿತ್ಯ ಮಂಡಲಕ್ಕೆ ಅಭಿಮಾನಿ ದೆವತೆಯಾದ ಅರ್ಯಮಾ, (ಸೂರ್ಯ) ಶುಭವನ್ನು ಉಂಟುಮಾಡಲಿ. ಅಂದರೆ ಕಣ್ಣುಗಳು ಜ್ಞಾನದ ಸಂಕೇತ. ಜ್ಞಾನವನ್ನು ಸೂರ್ಯ ವರ್ಧಿಸಲಿ. ನಮ್ಮ ಬಾಹು ಬಲಗಳು ವರ್ಧಿಸಿ ನಮಗೆ ಶಕ್ತಿಯನ್ನು ಕೊಡುವ ದೇವತೆ ಇಂದ್ರ ಆತ ನಮಗೆ ಸುಖವನ್ನು ಒದಗಿಸಲಿ ಎಂದಿರುವುದನ್ನೆ ಶಂನ ಇಂದ್ರೋ ಎಂದು ಮುಂದೆ ಬಂದಿರುವುದು. ನಮ್ಮ ಬುದ್ಧಿ ಮತ್ತು ಮಾತಿಗೆ ಅಭಿಮಾನಿ ದೇವತೆಯಾಗಿರುವವನು ಗುರು. ಅದನ್ನೇ 'ವಾಚೀ ಬುದ್ಧೌ ಚ ಅಭಿಮಾನೀ ಬೃಹಸ್ಪತಿಃ.' ನಮ್ಮ ಕಾಲುಗಳಿಗೆ ಬಲವನ್ನು ಕೊಡುವವನು ವಿಷ್ಣು. ’ಶಂನೋ ವಿಷ್ಣುರುರುಕ್ರಮಃ’ ಎಂದಿರುವುದು ಅದನ್ನೆ, ತ್ರಿವಿಕ್ರಮಾವತಾರಿಯಾಗಿ ಪಾದಗಳನ್ನು ಪಸರಿಸಿದ ವಿಷ್ಣುವು ಕಾಲುಗಳನ್ನು ಅಂದರೆ ನಮ್ಮ ಜೀವನವನ್ನು ರಕ್ಷಿಸಿ ಸುಖ ಸಂತೋಷವನ್ನು ನೀಡಲಿ ಎನ್ನುವುದು ಒಂದರ್ಥವಾದರೆ. ವಿಷ್ಣುವು ತನ್ನ ಮೂರು ಪಾದಗಳ ಸಂಕೇತವನ್ನು ಪೂರ್ವಾಹ್ನದ ಪಾದ ಮತ್ತು ಅಪರಾಹ್ನದ ಪಾದ ಸಾಯಂ ಪಾದವಾಗಿ ಗಣಿಸಿ ಸೂರ್ಯ ಚಲನೆಯು ನಮ್ಮ ದೈಹಿಕ ವ್ಯವಹಾರಗಳಿಗೆ ಮತ್ತು ಮನಸ್ಸು ಬುದ್ದಿಗಳನ್ನು ನಿಯಂತ್ರಿಸಿ ನಮ್ಮನ್ನು ಸಲಹಲಿ ಎಂದು ಇನ್ನೊಂದು ಅರ್ಥ. ಅಥವಾ ಪ್ರಾಣವೇ ಮೊದಲಾದ ಅವಯವಗಳ ಅಭಿಮಾನಿ ದೆವತೆಯನ್ನಾಗಿ ಸ್ತುತಿಸುವ ಮಂತ್ರ ಅಂದರೆ ಇದು ಬ್ರಹ್ಮಾಂಡವನ್ನೇ ತನ್ನೊಳಗೆ ಅಡಗಿಸಿಕೊಂಡಿರುವ ವಿರಾಟ್ ಪುರುಷನನ್ನು ಕುರಿತಾಗಿ ಹೇಳಿದ ಮಂತ್ರ. ಇದನ್ನು ತೈತ್ತಿರೀಯ ಆರಣ್ಯಕದ ಶೀಕ್ಷೋಪನಿಷತ್ ಎಂದು ಕರೆಯಲಾಗಿದೆ.
ರಾಹೂಗಣ ಎನ್ನುವವನ ಮಗ ಗೋತಮನು ಋಗ್ವೇದದ ಒಂದನೇ ಮಂಡಲದ ೯೦ನೇ ಸೂಕ್ತದಲ್ಲಿ ವಿಶ್ವೇದೇವತೆಗಳನ್ನು ಸ್ತುತಿಸುತ್ತಾ ಇದೇ ಮಂತ್ರ ಹೇಳಲಾಗಿದ್ದು ಅಲ್ಲಿ ಹಗಲಿನ ದೇವನಾದ ಸೂರ್ಯ ಮತ್ತು ರಾತ್ರಿಯ ಅಭಿಮಾನಿ ದೇವನಾದ ವರುಣನು ನಮಗೆ ಸುಖವನ್ನು ಒದಗಿಸಲಿ. ಅಹೋರಾತ್ರಗಳ ವಿಭಾಗವನ್ನು ನಿಯಮಿಸುವ ಅರ್ಯಮನು ನಮಗೆ ಸುಖವನ್ನು ಕೊಡಲಿ. ಬೃಹಸ್ಪತಿ ಮತ್ತು ಇಂದ್ರರು ನಮಗೆ ಸುಖದಾಯಕರಾಗಲಿ. ದೀರ್ಘಪಾದದ ವಿಷ್ಣು ನಮಗೆ ಭಾಗ್ಯದಾಯಕನಾಗಲಿ ಎಂದಿರುವುದು ಸಿಗುತ್ತದೆ. ಇಲ್ಲಿ ಬೃಹಸ್ಪತಿಗೆ ಒಂದು ಗುರು ಎನ್ನುವ ಅರ್ಥವಾದರೆ ಇಮ್ನೊಂದು ಎಲ್ಲ ದೇವತೆಗಳಿಗೆ ದೇವತೆ ಎಂದು. ಉರುಕ್ರಮಃ ಎನ್ನುವುದೂ ಸಹ ದೊಡ್ಡದಾದ ಪಾದಗಳುಳ್ಳ ತ್ರಿವಿಕ್ರಮ ಎಂದು.
#ಶಂ_ನೋ_ವಿಷ್ಣುರುರುಕ್ರಮಃ
ಸದ್ಯೋಜಾತ
No comments:
Post a Comment
If you have any doubts. please let me know...