April 26, 2021

ಲಿಂಗ ದೀಕ್ಷೆ ಪಡೆದ ಡಾ ರಾಜಕುಮಾರ ಕುಟುಂಬ

#ಪೂಜ್ಯ_ಶ್ರೀ_ಸಿಂದಗಿ_ಶಾಂತವೀರ_ಪಟ್ಟಾಧ್ಯಕ್ಷರಿಂದ_ಲಿಂಗದೀಕ್ಷೆ_ಪಡೆಯುತ್ತಿರುವ #ಡಾ_ರಾಜಕುಮಾರ_ಹಾಗೂ_ಅವರ_ಕುಟುಂಬ.
ಗದುಗಿನ ಪಂಡಿತ್ ಪುಟ್ಟರಾಜ  ಗವಾಯಿಗಳವರು 1974ರ ಜನವರಿ ತಿಂಗಳಲ್ಲಿ ಮದ್ರಾಸದ ಡಾ . ರಾಜಕುಮಾರ ಅವರ ಮನೆಯಲ್ಲಿ ಸಂಗೀತ ಕಚೇರಿಯಲ್ಲಿ ಭಾಗವಹಿಸಿದರು . ಈ ಸಂಗೀತ ಕಾರ್ಯಕ್ರಮದ ನಂತರ ಪುಟ್ಟರಾಜ ಗವಾಯಿಗಳವರಿಗೆ ತಮ್ಮ ಶಿಷ್ಯರಾದ ವಿರೇಶ ಮಧರಿ ( ವೈಯಲಿನ್ ವಾದಕರು ) ಅವರ ಮನೆಯಲ್ಲಿ ಪೂಜಿ ಪ್ರಸಾದಕ್ಕೆ ವ್ಯವಸ್ಥೆಯಾಗಿತ್ತು . ಪುಟ್ಟರಾಜರ ಸಂಗೀತ ವ್ಯಾಮೋಹಕ್ಕೆ ಒಳಗಾದ ರಾಜಕುಮಾರ ಅವರು ಪುಟ್ಟರಾಜರನ್ನು ತಮ್ಮ ಮನೆಯಲ್ಲಿಯೇ ಪೂಜೆ ಪ್ರಸಾದ ಸ್ವೀಕರಿಸಲು ಅಂದು ಬಿನ್ನವಿಸಿಕೊಂಡರು. 

 ರಾಜಕುಮಾರರ ಅಪೇಕ್ಷೆಗೆ ಸ್ಪಂದಿಸಿದ ಪುಟ್ಟರಾಜರು "ಲಿಂಗಪೂಜೆ ಹೃದಯದ ಸಂಗೀತ ” ನಿಮ್ಮ ಹೃದಯದ ಕೂಗು ನನಗೆ ಅರ್ಥವಾಗಿದೆ . “ ಪೂಜೆಯಲ್ಲಿ ಹೃದಯವಿಲ್ಲದ ಶಬ್ದಗಳಿರುವುದಕ್ಕಿಂತ ಶಬ್ದಗಳೇ ಇಲ್ಲದ ಹೃದಯವಿರುತ್ತದೆ " ಎಂಬುದು ಬಸವಾದಿ ಪ್ರಥಮರೆ ಮಾತು . “ ಆಯಿತು . . . ಆಗಬಹುದು ... ಆದರೆ! ತಾವು  ಇಷ್ಟಲಿಂಗಧಾರಣೆ ಮಾಡಿಕೊಳ್ಳಬೇಕಲ್ಲ . . . ” ಎಂದು ಮಾತು ಮುಗಿಸುವಷ್ಟರಲ್ಲಿ ಪುನಃ   ರಾಜಕುಮಾರ ಅವರು “ ನೀವೇ ನನಗೆ ಇಷ್ಟಲಿಂಗಧಾರಣೆ ದಯಪಾಲಿಸಬೇಕು ” ಎಂದರು . " ಉಂಹೂ ಅದು ಸಂತೆಯಲ್ಲ . ತಕ್ಷಣ ಕೊಡಲು ಬರುವುದಿಲ್ಲ . ತಮ್ಮ ಲಿಂಗಧಾರಣೆಗೆ ಒಬ್ಬ ಯೋಗ್ಯ ಗುರು ಬೇಕು . ಆ ಅರ್ಹತೆ ನನಗೆ ಇಲ್ಲ . ನಿಮ್ಮ ಕೋರಿಕೆಯನ್ನು ಹಾವೇರಿಯಲ್ಲಿರುವ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರಿಗೆ ಕರುಣಿಸಲು ನಾನು ಕೇಳಿಕೊಳ್ಳುತ್ತೇನೆ . ತಮಗೆ ಲಿಂಗಧಾರಣೆ ಆದ ನಂತರ ತಮ್ಮ ಮನೆಯಲ್ಲಿ ನನ್ನ ಪೂಜೆ ಪ್ರಸಾದ ಎಂದು ಪುಟ್ಟರಾಜರು ಡಾ . ರಾಜಕುಮಾರ ಅವರಿಗೆ ಅರುಹಿದರು . 

ಘನತೆಗೆ ವಿನಯವೇ ಅಡಿಪಾಯ ಡಾ . ರಾಜಕುಮಾರರು ಪುಟ್ಟರಾಜರ ಸಲಹೆಯಂತೆ ಹಾವೇರಿಯಲ್ಲಿರುವ ತಪೋನಿಷ್ಠ ಸಿಂದಗಿ ಶಾಂತವೀರ ಪಟ್ಟಾಧಕರನ್ನು  ಮದ್ರಾಸದ ತಮ್ಮ ಮನೆಗೆ 1974 ಜೂನ್ ತಿಂಗಳಲ್ಲಿ ಗೌರವಾದರದಿಂದ ಬರಮಾಡಿಕೊಂಡರು . ತಮ್ಮ ಶ್ರೀಮತಿ ಪಾರ್ವತಮ್ಮ , ಮಕ್ಕಳಾದ ಶಿವರಾಜಕುಮಾರ್ , ರಾಘವೇಂದ್ರ ರಾಜಕುಮಾರ ಹಾಗೂ ಪುನೀತರನ್ನು ಒಳಗೊಂಡಂತೆ ಎಲ್ಲರಿಗೂ ಶಾಂತವೀರ ಪಟ್ಟಾಧ್ಯಕ್ಷರಿಂದ  ಇಷ್ಟಲಿಂಗಧಾರಣೆಯ ದೀಕ್ಷೆ ಪಡೆದುಕೊಂಡರು . ಅಂದು ಎಲ್ಲರಿಗೂ ದೀಕ್ಷೆ ದಯಪಾಲಿಸಿದ ಪಟ್ಟಾಧ್ಯಕ್ಷರು ರಾಜಕುಮಾರರನ್ನು ಹರಸುತ್ತಾ . . . “ ದೇವನ ಸಾಕ್ಷಾತ್ಕಾರಕ್ಕೆ ಸಾಧನ ಸ್ಪಷ್ಟರೂಪ ದರ್ಶನಕ್ಕೆ ಇಷ್ಟಲಂಗ ಕನ್ನಡಿ , ಫಲದಲ್ಲಿ ಅನಾಸಕ್ತನಾಗು , ಸತ್ಯಾನ್ವೇಷಣೆಯ ಗುರಿಹೊಂದು , ನೋಡುಗರನ್ನು ಅತ್ಯದ್ಭುತವಾಗಿ ಗೌರವಿಸು . . . . ಅವರೇ ನಿನ್ನ ಪಾಲಿನ ದೇವರು . ನಿನ್ನ ಅಭಿನಯ ನಿನ್ನ ಕಾಲ ಬಳಿ ಸ್ವರ್ಗವನ್ನು ಸೃಷ್ಟಿಸುತ್ತದೆ . ದೂರವಾದವರನ್ನು  ಆದೂರ ಮಾಡುತ್ತದೆ . ಹಿಂದಿರುಗಬೇಡ ಮುನ್ನುಗು . ” ಎಂದು ಉಪದೇಶಿಸಿದರು . ಈ ಸಂದರ್ಭದಲ್ಲಿ ರಾಜಕುಮಾರರಿಗಾಗಿ ಹಾವೇರಿಯ ತಮ್ಮ ಮಠದಿಂದ ಹತ್ತಾರು ಬೆಳ್ಳಿಯ ಲಿಂಗದಕಾಯಿಗಳನ್ನು ( ಗುಂಡಗಡಿಗೆ ) ಅದರೊಳಗೆ ವೈಜ್ಞಾನಿಕ ರೀತಿಯ ಇಷ್ಟಲಿಂಗಗಳನ್ನು ತಂದಿದ್ದರು . 

 ಇಷ್ಟಲಿಂಗಧಾರಕರಾದ ಡಾ . ರಾಜಕುಮಾರ ಅವರು ಶರಣರ ವಚನ ಹಾಗೂ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರು . ಇದನ್ನು ಅವರು ನಟಿಸಿದ ಅನೇಕ ಪಾತ್ರಗಳಲ್ಲಿ ಕಾಣಬಹುದು . ವೀರಪ್ಪನ್ ರಾಜ್ ರನ್ನು ಅಪಹರಿಸಿದಾಗ ಜೊತೆಗಿದ್ದುದೇ ಇಂತಹ ಶರಣರ ಆದರ್ಶಗಳು , “ ಸರ್ಗ ನರಕದ ಕಲ್ಪನೆ ಕೇವಲ ಬಾಯಿಮಾತಿನಲ್ಲಿ. ಚಿತ್ತಶುದ್ದಿಗಾಗಿ ಇಷ್ಟಲಿಂಗಬೇಕು . ನಂಬಿದ ಕಾಯಕದ ಕಾಲಬಳಿ ಸ್ವರ್ಗ ಬಿದ್ದಿದೆ . ಲಿಂಗಧಾರಣೆಯ ಸಂಸ್ಕಾರ ತಾಯಿ ಗರ್ಭವತಿಯಾದ ಏಳು ತಿಂಗಳಲ್ಲಿ ಪ್ರಾರಂಭ. ತಾಯಿಯ ಗರ್ಭದಲ್ಲಿರುವಾಗ ಮಗುವೂ ತಾಯಿಯ ಮೂಲಕ ಆಹಾರ ಉಸಿರು , ಪಡೆಯುವುದು. ಅದೇರೀತಿ ಧರ್ಮವನ್ನು ಪಡೆಯಬೇಕೆಂಬುದೇ ಈ ಲಿಂಗಧಾರಣೆಯ ಘನ ಉದ್ದೇಶ . . . " ಎಂಬಂತಹ ದಿವ್ಯ ಸಂದೇಶಗಳನ್ನು ನಾನು ಪಟ್ಟಾಧ್ಯಕ್ಷರಿಂದ ತಿಳಿದುಕೊಂಡೆ ಹಾಗೂ ಅಳವಡಿಸಿಕೊಂಡೆ ಎಂದು 1980ರ ಫೆಬ್ರವರಿ 16ರಂದು ಶಾಂತವೀರ ಪಟ್ಟಾಧ್ಯಕ್ಷರು ಲಿಂಗೈಕ್ಯರಾದಾಗ ಡಾ . ರಾಜಕುಮಾರ ಅವರು ಪಟ್ಟಾಧ್ಯಕ್ಷರಿಗೆ ನುಡಿ ನಮನ ಸಲ್ಲಿಸಿ ಪತ್ರ ಬರೆದರು . 

 ಡಾ . ರಾಜಕುಮಾರ ಅವರು ಶಾಂತವೀರ ಪಟ್ಟಾಧ್ಯಕ್ಷರಿಂದ ಲಿಂಗದೀಕ್ಷೆಯಾದ ಕೆಲವು ತಿಂಗಳುಗಳ ನಂತರ ಡಾ . ಪಂಡಿತ ಪುಟ್ಟರಾಜರನ್ನು ಮತ್ತೆ ಮತ್ತೆ ಮದ್ರಾಸಿನ ತಮ್ಮ ಮನೆಗೆ ಕರೆಯಿಸಿಕೊಂಡದ್ದಲ್ಲದೆ , ತಾವು ಗದುಗಿನ ಪುಣ್ಯಾಶ್ರಮಕ್ಕ ಹೋಗಿ ಅಂಧ ಮಕ್ಕಳಿಗಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡ ಪುಟ್ಟರಾಜರಿಗೆ ಹಲವು ರೀತಿಯಲ್ಲಿ ಸಹಾಯಾರ್ಥ ಕಾರ್ಯಕ್ರಮಗಳನ್ನು ನೀಡಿದ್ದು ಈಗ ಇತಿಹಾಸ , ಹೀಗೆ ಪುಟ್ಟರಾಜ ಗವಾಯಿಗಳ ಮೂಲಕ ಏರ್ಪಟ ಡಾ . ರಾಜಕುಮಾರ ಹಾಗೂ ಹಾವೇರಿಯ ಸಿಂದಗಿ ಶಾಂತವೀರ ಪಟಾಧ್ಯಕ್ಷರ ಸಮಾಗಮಗಳು ಈ ನಾಡಿನ ಸಾಂಸ್ಕೃತಿಕ - ಧಾರ್ಮಿಕ ಕ್ಷೇತ್ರಗಳಲ್ಲಿ ಮೈಲುಗಲ್ಲುಗಳಾಗಿವೆ , ಡಾ . ರಾಜಕುಮಾರ ಅವರಿಗೆ “ ಅಭಿಮಾನಿ ದೇವರು ” ಗಳ ಕಲ್ಪನೆ ಬಂದದ್ದು ಇಂತಹ ತಪೋನಿಷ್ಠ ಪೂಜ್ಯರುಗಳಿಂದ ಎಂದು ಸ್ಪಷ್ಟವಾಗಿ ಹೇಳಬಹುದು .

No comments:

Post a Comment

If you have any doubts. please let me know...