*ದೇವಸ್ಥಾನದ ಗರ್ಭಗೃಹ ನಿರ್ಮಾಣ*
ದೇವಸ್ಥಾನ ನಿರ್ಮಾಣದ ವಿಷಯದಲ್ಲಿ ಗರ್ಭಗೃಹ ನಿರ್ಮಾಣವಾಗುವ ಪ್ರದೇಶವನ್ನು ಅಳೆತ್ತರದಷ್ಟಾಗಲೀ, ನೀರು ಅಥವಾ ಕಲ್ಲು ಸಿಗುವಷ್ಟಾಗಲೀ ಆಗೆದು ಷಡಾಧಾರಪ್ರತಿಷ್ಠೆಗೋಸ್ಕರ ಅಣಿಯಾಗಿಸಬೇಕು. (ಶುದ್ಧವಾದ ಮಣ್ಣು, ಮರಳು (ಹೊಗೆ) ಮತ್ತು ಶಿಲೆಗಳಿಂದ ಆ ಖಾತವನ್ನು ಮುಚ್ಚಬೇಕು) ಸೂರ್ಯಾಸ್ತ ಸಮಯದ ನಂತರ (ರಾತ್ರಿಯಲ್ಲಿ) ಅಲ್ಲಿ ಆಚಾರ್ಯನು ವಾಸ್ತು ಪೂಜೆಯನ್ನು ಮಾಡಿ, ಆಧಾರ ಶಿಲೆಯನ್ನು ಸ್ಥಾಪಿಸಬೇಕು. ಅನಂತರ ತಾಮ್ರಮಯ ಅಥವಾ ಶಿಲಾಮಯವಾದ ನಿಧಿಕಲಶದಲ್ಲಿ ಸ್ವರ್ಣ ವಜ್ರಾದಿಗಳನ್ನು ತುಂಬಿಸಿ, ದೇವತಾಶಕ್ತಿಯನ್ನು ಪೂಜಿಸಿ ಸ್ಥಾಪಿಸಬೇಕು. ನಿಧಿಕಲಶದ ಮೇಲೆ ಸ್ವರ್ಣಮಯವಾದ ಕೂರ್ಮವನ್ನೂ ಯೋಗನಾಳವನ್ನೂ ಸರಿಯಾಗಿ ಜೋಡಿಸಿ ಖಾತವನ್ನು ಪೂರ್ಣವಾಗಿ ಶುದ್ದ ಮೃತ್ತಿಕೆ ಮತ್ತು ಶಿಲಾದಿಗಳಿಂದ ಮುಚ್ಚಬೇಕು.
ಬಳಿಕ ನಿರ್ದಿಷ್ಟವಾದ ಉದ್ದ ಅಗಲಗಳುಳ್ಳ ಇಟ್ಟಿಗೆಗಳನ್ನು ತತ್ತದಾಮಗಮೋಕ್ತ ಸ್ಥಳದಲ್ಲಿ ಆಚಾರ್ಯನು ಉಪಧಾನಮಾಡಿ ಅವಟ ಮಧ್ಯದಲ್ಲಿ ಗರ್ಭಪಾತ್ರನ್ಯಾಸವನ್ನು ಮಾಡಬೇಕು. ಈ ಅವಟಮಧ್ಯದಲ್ಲಿ ಇಷ್ಟಕಾಂತರಾಳಗಳಲ್ಲಿ ಮೃತ್ತಿಕೆಗಳನ್ನೂ, ಮೂಲಗಳನ್ನೂ, ಬೀಜಗಳನ್ನೂ, ಧಾನ್ಯಗಳನ್ನೂ, ರತ್ನಗಳನ್ನೂ ಮತ್ತು ಧಾತುಗಳನ್ನೂ ಉಪಧಾನಮಾಡಬೇಕು. ತದಂಗ ಹೋಮವನ್ನು ಮಾಡಿ ಶಕ್ತಿಯನ್ನು ಪೂಜಿಸಿ, ರಾತ್ರಿಕಾಲದಲ್ಲಿ ಗರ್ಭಪಾತ್ರನ್ಯಾಸವನ್ನು ಮಾಡಬೇಕು. ಪ್ರಾಸಾದವನ್ನು ಪುರುಷರೂಪವಾಗಿ ಮುಂದೆ ರಚಿಸುವಾಗ ಪ್ರಾಸಾದ ತಳದಲ್ಲಿ ಮಾಡಲ್ಪಟ್ಟ ಗರ್ಭಪಾತ್ರನ್ಯಾಸವು ಗರ್ಭಾಧಾನ ಸಂಸ್ಕಾರದಂತೆ ಗೇಹಕ್ಕೆ ಒಂದು ವಿಶಿಷ್ಟವಾದ ಸ್ವರೂಪವನ್ನು ನೀಡುತ್ತದೆ. (ತಂ ಸ ೪)
ಸಂ: © ವೇ ಶ್ರೀ ಚನ್ನೇಶ ಶಾಸ್ತ್ರಿಗಳು ಮಠದ 9986175616
No comments:
Post a Comment
If you have any doubts. please let me know...