April 21, 2021

ರಹೂಗಣ ಅಥವಾ ರಾಹೂಗಣ

ರಹೂಗಣ ಅಥವಾ ರಾಹೂಗಣ

ಆಂಗಿರಸ ಋಷಿಯ ವಂಶಸ್ಥರೋ ಅಥವಾ ಅವರ ಪರಂಪರೆಯಲ್ಲಿ ಬಂದ ಪ್ರಮುಖರಲ್ಲಿ ಅಯಾಸ್ಯ ಉಚಥ್ಯ ಕುತ್ಸ ಪುರುಮೀಳ್ಹ ರಹೂಗಣ ಎನ್ನುವವನು ಸಹ ಇದೇ ವಂಶದಲ್ಲಿ ಬರುವುದು. ಇವರನ್ನು ಆಂಗಿರಸಃ ಅಭಿವರ್ತಃ ಎಂದು ಕರೆಯುವ ರೂಢಿ. ಇನ್ನು ಕೆಲವೊಮ್ಮೆ ಅಭೀವರ್ತ ಆಂಗಿರಸ ಎಂದು ಕರೆಯಲಾಗುತ್ತದೆ. ಅದೇನೇ ಇರಲಿ ಈ ರಹೂಗಣ ಎನ್ನುವ ಹೆಸರಿನ ಋಷಿಯನ್ನು ರಾಹೂಗಣ ಎಂದೂ ಸಹ ಕರೆಯುತ್ತಾರೆ. ಈ ರಾಹೂಗಣನ ಮಗನೇ ಗೋತಮ. ಈ ಗೋತಮನು ಸಹ ಪ್ರಸಿದ್ಧನಾಗಿದ್ದ. ಎಲ್ಲ ಕಡೆ ಗೋತಮೋ ರಾಹೂಗಣಃ ಅಥವಾ ಗೋತಮೋ ರಹೂಗಣಃ ಎಂದು ಕರೆಸಿಕೊಂಡವನು. ಭರದ್ವಾಜ, ಕಶ್ಯಪ, ಗೋತಮ, ಅತ್ರಿ, ವಿಶ್ವಾಮಿತ್ರ, ಜಮದಗ್ನಿ, ವಶಿಷ್ಠರೆನ್ನುವ ಸಪ್ತರ್ಷಿಗಳ ಸಾಲಿನಲ್ಲಿ  ಸೇರಿರುವ ಗೋತಮ ಅನೇಕ ಸೂಕ್ತಗಳ ದೃಷ್ಟಾರ. ಋಗ್ವೇದದ ೧೦ನೇ ಮಂಡಲದ ೧೩೭ನೇ ಸೂಕ್ತ ಸಪ್ತರ್ಷಿಗಳದ್ದು. ಅಲ್ಲಿ ಮೂರನೇ ಋಕ್ಕನ್ನು ಕೊಟ್ಟವರು ಇದೇ ಗೋತಮರು. ಉತ ದೇವಾಃ ಎನ್ನುವ ಈ ಸೂಕ್ತವನ್ನು ಪಠಿಸಿದರೆ ರೋಗದಿಂದ ನರಳುತ್ತಿದ್ದು ಘನ ಮತ್ತು ದ್ರವಾಹಾರಗಳನ್ನೂ ಸಹ ಸೇವಿಸುವುದನ್ನು ನಿಲ್ಲಿಸಿದ್ದರೆ (ಅಜೀರ್ಣರೋಗ) ಅಂತಹ ರೋಗ ಶಮನವಾಗುತ್ತದೆ ಎನ್ನಲಾಗಿದೆ. ಅದರ ಕ್ರಮವನ್ನು ಋಗ್ವಿಧಾನದ ೪ನೇ ಅಧ್ಯಾಯದ ೪೬ ರಿಂದ ೪೯ ನೇ ಶ್ಲೋಕದಲ್ಲಿ ವಿವರಿಸಲಾಗಿದೆ. ಇನ್ನು ರಾಹೂಗಣರ ಮಗನಾದ ಗೋತಮರ ಒಂದು ಸೂಕ್ತ ಋಗ್ವೇದ ಒಂದನೇ ಮಡಲದ ೭೮ನೇ ಸೂಕ್ತ. ಅಲ್ಲಿ ಅಗ್ನಿಯನ್ನು ಸ್ತುತಿಸುತ್ತಾ ಅವೋಚಾಮ ರಹೂಗಣಾ ಅಗ್ನಯೇ ಎಂದು ರಹೂಗಣನ ಹೆಸರು ಪ್ರಸ್ತಾಪಿಸಿದ್ದಾರೆ. ಇನ್ನು ಋಗ್ವೇದದ ಒಂದನೇ ಮಂಡಲದ ೯೨ನೇ ಸೂಕ್ತಕ್ಕೆ ಗೋತಮನೇ ಋಷಿಯು. ಆದರೆ ಗೌತಮ ಬೇರೆ. ಕಾಲಮಾನವೂ ಬೇರೆ. 

ಇನ್ನು ನೋಡುವುದಾದರೆ ವಾಜಸನೇಯೀ ಸಂಹಿತೆಯಲ್ಲಿ ಕುರು ಸೃಂಜಯಾನಾಂ ಪುರೋಹಿತ ಆಸೀತ್ ಎಂದು ಬರುತ್ತದೆ. ಅಂದರೆ ಕುರು ಮತ್ತು ಸೃಂಜಯ ಎನ್ನುವ ಜನಾಂಗದ ರಾಜರುಗಳಿಗೆ ಪುರೋಹಿತರಾಗಿದ್ದರು. ಋಗ್ವೇದ ೧ನೇ ಮಂಡಲದ ೮೧ನೇ ಸೂಕ್ತದಲ್ಲಿ ಈ ವಂಶದ ರಾಜರ ಯುದ್ಧಗಲ ಜಯಕ್ಕಾಗಿ ಇಂದ್ರನನ್ನು ಪ್ರಾರ್ಥಿಸುತ್ತಾರೆ. ಇಂದ್ರನನ್ನು ಪ್ರಸನ್ನಗೊಳಿಸಿ ಯುದ್ಧದಲ್ಲಿ ಜಯ ಲಭಿಸುವಂತೆ ಮಾಡುತ್ತಾರೆ ಎನ್ನುವುದು ಸಾಯಣ ಭಾಷ್ಯದಲ್ಲಿ.

ಇನ್ನು ಇದೇ ರಾಹೂಗಣ ಮತ್ತು ಗೋತಮನು ವದೀಘಮಾಥವ ಎನ್ನುವ ರಾಜನಿಗೂ ಪುರೋಹಿತನಾಗಿದ್ದನು. ಈ ವಿದೇಘಮಾಥವ ಎನ್ನುವವನು ಮಥು ಎನ್ನುವ ವಂಶೀಯನು. ಈತನ ಕುರಿತಾಗಿ ಬ್ರಾಹ್ಮಣಗಳಲ್ಲಿ ಬರುವ ಒಂದು ಕಥೆ ಹೀಗಿದೆ. ವಿದೇಘ ಒಮ್ಮೆ ಅಗ್ನಿಯನ್ನು ತನ್ನ ಬಾಯಿಯಲ್ಲಿ ಹಾಕಿಕೊಂಡು ಅದು ಹೊರಗೆ ಬರಬಾರದು ಎನ್ನುವ ಉದ್ದೇಶದಿಂದ ಬಾಯಿ ಮುಚ್ಚಿಕೊಂಡಿರುತ್ತಿದ್ದ. ಮೌನವನ್ನು ಆಶ್ರಯಿಸಿದ್ದ. ಮಾತನಾಡಿದರೆ ಅಗ್ನಿ ಎಲ್ಲಿಯಾದರೂ ಹೊರಗೆ ಹಾರಿ ಹೊರಟು ಹೋಗಬಹುದೆನ್ನುವ ಭಯ ಆತನನ್ನು ಆವರಿಸಿತ್ತು. ಪುರೋಹಿತನಾಗಿದ್ದ ರಾಹೂಗಣ ಎಷ್ಟು ಪ್ರಯತ್ನ ಮಾಡಿದರೂ ಅಗ್ನಿಯನ್ನು ಹೊರತರಲು ಸಾಧ್ಯವಾಗುವುದಿಲ್ಲ. ರಾಜ ಬಾಯಿ ಬಿಡುತ್ತಿಲ್ಲ. ಅಗ್ನಿ ಹೊರಗೆ ಬರಲಾಗುತ್ತಿಲ್ಲ. ಒಂದು ದಿನ ಅಚಾನಕ್ಕಾಗಿ ರಾಹೂಗಣನ ಬಾಯಿಯಿಂದ ಘೃತ ಎನ್ನು ಪದ ಹೊರಬರುತ್ತದೆ. ತಕ್ಷಣವೇ ರಾಜನ ಬಾಯಿಯಲ್ಲಿದ್ದ ಅಗ್ನಿ ಸಿಡಿಯುತ್ತದೆ ಸ್ಫೋಟದ ರೂಪ ಪಡೆದು ಹೊರ ಬರುತ್ತದೆ. ಅಗ್ನಿ ಕೆನ್ನಾಲಿಗೆ ಚಾಚಿ ಇಡೀ ಪ್ರಪಂಚವನ್ನೇ ಸುಡುತ್ತಾನೋ ಎನ್ನುವ ರೀತಿಯಲ್ಲಿ ಹೊರಕ್ಕೆ ಬಂದು ಸುಡಲಾರಂಭಿಸುತ್ತಾನೆ. ಗಾಳಿಯೂ ಬಿಸಿಯೇರುತ್ತದೆ. ಅನೇಕ ನದಿಗಳು ಒಣಗಿ ಹೋಗುತ್ತವೆ. ಅವನ ಇಡೀ ಆಡಳಿತ ಪ್ರದೇಶ ನಾಶವಾಗುತ್ತದೆ. ರಾಹೂಗಣ ಮತ್ತು ವಿದೇಘನೂ ಕೆನ್ನಾಲಿಗೆಗೆ ಸಿಲುಕಿಕೊಳ್ಳುತ್ತಾರೆ ಅವರೂ ಭಸ್ಮವಾಗುತ್ತಿದ್ದರು. ಅಷ್ಟರಲ್ಲಿಯೇ ಆತನ ರಾಜ್ಯದ ಗಡಿಯಲ್ಲಿರುವ ಸದಾನೀರ ಎನ್ನುವ ನದಿಯಲ್ಲಿ ಅಡಗಿಕೊಳ್ಳುತ್ತಾರೆ. ಆಗ ಅಗ್ನಿಯು ತನ್ನ ಜ್ವಾಲೆಯನ್ನು ಕಡಿಮೆ ಗೊಳಿಸುತ್ತಾನೆ ಎನ್ನುವುದು ಶತಪಥ ಬ್ರಾಹ್ಮಣ. ಪ್ರಾಯಶಃ ಆ ನದಿಯ ನೀರನ್ನು ಹಾಯಿಸಿ ಅಗ್ನಿಶಮನ ಮಾಡಿರಬಹುದು. ಹೀಗೇ ರಹೂಗಣ ಮತ್ತು ರಾಹೂಗಣ ಎರಡೂ ಪದ ಪ್ರಯೋಗ ಸಿಗುತ್ತದೆ ಆದರೆ ಗೋತಮರಹೂಗಣನ ವಂಶೀಯನೂ, ಗೌತಮ ನೋಧಾ ಎಂದು ಕರೆಯಲ್ಪಡುತ್ತದೆ.

#ಕುರು_
ಸದ್ಯೋಜಾತರು

No comments:

Post a Comment

If you have any doubts. please let me know...