ಪ್ರಪಂಚ, ಸಂಸಾರ, ಜಗತ್ತು ಮತ್ತು ಸೃಷ್ಟಿ ಇವೆಲ್ಲವುಗಳು ಪರ್ಯಾಯ ಶಬ್ದಗಳು. ಸೃಷ್ಟಿ ಎಂದರೆ ನಿರ್ಮಿತಿ ಅಥವಾ ನಿರ್ಮಾಣ ಎಂದರ್ಥ.ಇದು ನಿರಂತರವಾಗಿ ನಡೆಯುವ ಒಂದು ಪ್ರಕ್ರಿಯೆ.ಅಂತೆಯೇ ಇದಕ್ಕೆ ಪುನರಾವೃತ್ತಿ ಎಂದೂ ಕರೆಯುವರು. ಇಲ್ಲಿ ಉತ್ಪತ್ತಿ, ಸ್ಥಿತಿ ಮತ್ತು ಲಯಗಳು ಯಾವಾಗಲೂ ನಡೆಯುತ್ತಲೇ ಇರುತ್ತವೆ. ಆರಂಭದ ಗೊತ್ತುಗುರಿಯಿಲ್ಲದ ಎಂದೂ ಸಮಾಪ್ತಿ ಯಾಗದ ಪ್ರಕ್ರಿಯೆಯೇ ಸೃಷ್ಟಿ. 4 ಯುಗಗಳು ಒಂದು ಸಾವಿರ ಸಾರೆ ಪುನರಾವರ್ತನೆಗೊಂಡಾಗ ಸೃಷ್ಟಿಕರ್ತನಾದ ಬ್ರಹ್ಮನಿಗೆ ಒಂದು ದಿವಸ ವಾಗುವುದು. ಇದೇ ಪ್ರಮಾಣದಲ್ಲಿ ಅವನ ನೂರು ವರ್ಷಗಳು ಮುಗಿದಾಗ ಈ ಸೃಷ್ಟಿಯು ಪ್ರಳಯವಾಗುವುದು. ಆಗ ಮತ್ತೊಬ್ಬ ಬ್ರಹ್ಮನು ಉದಿಸಿ ಬಂದು ಈ ಸೃಷ್ಟಿಯನ್ನು ತನ್ನ ನೂರು ವರ್ಷಗಳವರೆಗೆ ಮಾಡುತ್ತಲೇ ಇರುತ್ತಾನೆ. ಹೀಗೆ ನಿರಂತರವಾಗಿ ನಡೆಯುವ ಒಂದು ಅಖಂಡ ಪ್ರಕ್ರಿಯೆಯೇ ಸೃಷ್ಟಿಯು.
ಜಾತಸ್ಯ ಹಿ ಧ್ರುವೋ ಮೃತ್ಯು: ಧ್ರುವಂ ಜನ್ಮ ಮೃತಸ್ಯ ಚ!
ಜಂತುರ್ಮರಣಜನ್ಮಭ್ಯಾಂ ಪರಿಭ್ರಮತಿ ಚಕ್ರವತ್!!
ಎಂಬುದಾಗಿ ಶ್ರೀ ಸಿದ್ಧಾಂತಶಿಖಾಮಣಿಯಲ್ಲಿ. ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಸೃಷ್ಟಿಯ ಪುನರಾವರ್ತನೆಯನ್ನು ಸ್ಪಷ್ಟಪಡಿಸಿದ್ದಾರೆ.
ಶ್ರೀ ಜಗದ್ಗುರು ಶಂಕರಾಚಾರ್ಯರೂ ಸಹ "ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ" ಎಂಬುದಾಗಿ ಹೇಳಿ ಅದೇ ಮಾತನ್ನೇ ಸಮರ್ಥಿಸಿದ್ದಾರೆ.
ಜಗತ್ತಿನ ಸಕಲ ಜೀವಿಗಳು ಆಹಾರ, ನಿದ್ರೆ, ಭಯ ಮತ್ತು ಮೈಥುನಗಳೆಂಬ ಸಾಮಾನ್ಯ ಕ್ರಿಯೆಗಳಲ್ಲಿ ತಮ್ಮ ಆಯುಷ್ಯವನ್ನು ಕಳೆದುಕೊಂಡು ಮತ್ತೆ
ಪ್ರಾರಬ್ಧಕರ್ಮಾನುಸಾರವಾಗಿ ಯಾವುದೋ ಒಂದು ಯೋನಿಯಲ್ಲಿ ಜನ್ಮತಾಳಿ ಮತ್ತೆ ಮತ್ತೆ ಅದೇ ಅದೇ ವ್ಯವಹಾರಗಳನ್ನು ಮಾಡುತ್ತಲೇ ಇರುತ್ತವೆ. ಹೀಗೆ ಮಾಡುತ್ತಿರುವ ಈ ಜೀವಿಗಳು ಒಂದೊಂದು ಯೋನಿಯಲ್ಲಿ ಎಷ್ಟು ಸಾರಿ ಜನ್ಮತಾಳಿ ಬಂದಿದ್ದಾರೆ ಎಂಬುದರ ಬಗ್ಗೆ ಅಂಕಿ-ಸಂಖ್ಯೆಗಳ ಲೆಕ್ಕವೇ ಇಲ್ಲ. ಅದನ್ನೇ ಶ್ರೀ ಮನ್ ನಿಜಗುಣ ಶಿವಯೋಗಿಗಳು
ಕೈವಲ್ಯ ಪದ್ಧತಿಯ ಜೀವಸಂಬೋಧನೆ ಸ್ಥಲದಲ್ಲಿ
"ಧರೆಯನೆಲ್ಲವನು ಸಣ್ಣಿಸಿಧೂಳಿಮಾಡಲಾ ಪರಮಾಣುಗಳವೆನಿತನಿತು ದೇಹವನು ಧರಿ ಸುತೊಂದೊಂದು ಜೀವದ ಬಸುರೊಳು ಬಂದು ಮರಳಿ ನೀನತ್ತ ತಿರುಗದಂತೆ ರಚಿಸಿದೆ." ಎಂಬ ಈ ಪದ್ಯದಲ್ಲಿ ವಿಷಯ ಭೋಗಿಯಾದ ಜೀವನು ಇದಷ್ಟು ಸಾರಿ ಹುಟ್ಟಿ ಸತ್ತಿದ್ದಾರೆಂಬುದನ್ನು ಬಹಳ ಮನೋಜ್ಞವಾಗಿ ವರ್ಣಿಸಿದ್ದಾರೆ.
ಈ ಸೃಷ್ಟಿಯಲ್ಲಿ ಬರುವ ಪ್ರತಿಯೊಂದು ವಸ್ತು ಹಾಗೂ ವ್ಯಕ್ತಿಗಳು ಭಿನ್ನ ಭಿನ್ನರೇ ಆಗಿರುತ್ತಾರೆ. ನೋಡಲು ಸಮಾನವಾಗಿ ಕಂಡರೂ ಪರಸ್ಪರರಲ್ಲಿ ವ್ಯತ್ಯಾಸ ಇದ್ದೇ ಇರುತ್ತದೆ. ಅಂತೆಯೇ ಈ ಸೃಷ್ಟಿಯು ವಿಷಮವಾದದ್ದು. ಈ ವಿಷಮತೆಗೆ ಸೃಷ್ಟಿಕರ್ತನಾದ ದೇವರೇ ಕಾರಣವೆಂದರೆ ಅವನ ಮೇಲೆ ವೈಷಮ್ಯ ದೋಷವು ಪ್ರಾಪ್ತವಾಗುವದು ಆದ್ದರಿಂದ ಪ್ರಾಣಿಗಳ ಅದೃಷ್ಟವೇ ವಿಷಮತೆಗೆ ಕಾರಣ ಎಂಬುದಾಗಿ ಸರ್ವ ದಾರ್ಶನಿಕರು ಒಪ್ಪಿಕೊಂಡಿದ್ದಾರೆ.
ಒಂದು ವಸ್ತು ನಿರ್ಮಾಣವಾಗಬೇಕಾದರೆ ಅದಕ್ಕೊಂದು ಪ್ರಯೋಜನ ಇದ್ದೇ ಇರುತ್ತದೆ. ಈ ಜಗತ್ತಿನಲ್ಲಿ ಭೋಗ ಇಲ್ಲವೇ ಮೋಕ್ಷ ಇವೆರಡೇ ಮುಖ್ಯವಾದ ಪ್ರಯೋಜಗಳು. ಅಂತೆಯೇ ಅನಂತ ಜೀವಿಗಳ ಭೋಗ- ಮೋಕ್ಷಕ್ಕಾಗಿ ಈಶ್ವರನಿಂದ ನಿರ್ಮಿತವಾದ ಚಿತ್ರವಿಚಿತ್ರವಾದ ಈ ವಿಶ್ವವೇ ಸೃಷ್ಟಿಯು.
ಶಬ್ದಸ್ಪರ್ಶಾದಿ ವಿಷಯಗಳು ಕೇವಲ ಭೋಗಕ್ಕಾಗಿಯೇ ಅಲ್ಲ ಅವುಗಳನ್ನು ಪುನಃ ಪುನಃ ಅನುಭವಿಸಿ ಅದರಲ್ಲಿಯ ಕ್ಷಣಿಕತೆ, ಅನಿತ್ಯತೆ ಮತ್ತು ಅಸಾರತೆಯನ್ನು ಅರಿತು ಅದರಿಂದ ವಿಮುಖನಾಗಿ ವೈರಾಗ್ಯವನ್ನು ಹೊಂದಿ ಶಿವಭಕ್ತಿಯನ್ನು ಮಾಡಿ ಕೊನೆಗೆ ಮುಕ್ತಿಯನ್ನು ಪಡೆಯುವದೇ ಆಗಿರುತ್ತದೆ. ಅಂತೆಯೇ ಸೃಷ್ಟಿಯಲ್ಲಿಯ ಅನಂತ ಜೀವಿಗಳು ವಿಷಯ ಭೋಗದಲ್ಲಿಯೇ ಲಿಪ್ತ ರಾಗಿದ್ದರೂ ಕೋಟಿಗೊಬ್ಬರಂತೆ ಈ ಭೋಗದಿಂದ ವಿರಕ್ತರಾಗಿ ಭಗವಂತನಲ್ಲಿ ಅನನ್ಯವಾದ ಭಕ್ತಿಯನ್ನು ಮಾಡಿ ಸದ್ಗುರುವಿನಿಂದ ಜ್ಞಾನವನ್ನು ಪಡೆದುಕೊಂಡು ಸ್ವತ: ಜೀವನ್ಮುಕ್ತಿಯನ್ನು ಪಡೆದು ಅನ್ಯರಿಗೂ ಮೋಕ್ಷದ ಮಾರ್ಗವನ್ನು ತೋರಿಸಿದ ಆಚಾರ್ಯರು, ಸಂತರು, ಶರಣರು ಮತ್ತು ಪ್ರವಾದಿಗಳು ಅನೇಕರು ಆಗಿಹೋಗಿದ್ದಾರೆ. ಆದ್ದರಿಂದ ಭೋಗ ಮೋಕ್ಷಗಳೆರಡೂ ಈ ಸೃಷ್ಟಿಯ ಪ್ರಯೋಜನಗಳೆಂದು ತಿಳಿದುಕೊಳ್ಳಬೇಕು.
ಶಿವನ ಈ ಸೃಷ್ಟಿಯ ರಹಸ್ಯವು ಅತ್ಯಂತ ಗೂಢವಾದದ್ದು. ಯಾರೇ ಎಷ್ಟೇ ತಿಳಿದುಕೊಂಡರೂ ಸಹ ಇನ್ನೂ ತಿಳಿಯಬೇಕಾದದ್ದು ಬಹಳಷ್ಟಿರುತ್ತದೆ. ಆದರೂ ಈ ದೇಶದ ಆಚಾರ್ಯರು ದಾರ್ಶನಿಕರು ಸಾಧು ಸಂತರು ತಮ್ಮ ತಮ್ಮ ಚಿಂತನೆಗನುಸಾರವಾಗಿ ಸೃಷ್ಟಿ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಅವರೆಲ್ಲರ ವಿಚಾರಧಾರೆಯನ್ನು ಇಲ್ಲಿ ಸಂಕ್ಷೇಪವಾಗಿ ಕ್ರೋಡಿಕರಿಸಲಾಗಿದೆ.
ಸನಾತನ ವೀರಶೈವಧರ್ಮದ ಮೂಲ ಸಂಸ್ಥಾಪನಾಚಾರ್ಯರಾದ ಶ್ರೀ ಜಗದ್ಗುರು ಪಂಚಾಚಾರ್ಯರು ಪ್ರಪ್ರಥಮವಾಗಿ ಪಡ್ವಿಡಿ, ವೃಷ್ಟಿ, ಲಂಬನ, ಮುಕ್ತಾಗುಚ್ಛ ಮತ್ತು ಪಂಚವರ್ಣಗಳೆಂಬ ಪಂಚಸೂತ್ರಗಳ ಮುಖಾಂತರ ಈ ಸೃಷ್ಟಿಯು ಶಿವನ ಲೀಲೆ ಎಂಬುದಾಗಿ ಹೇಳಿ ಇದು ಜೀವಿಗಳ ಭೋಗ ಮೋಕ್ಷಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಸೂತ್ರರೂಪದಲ್ಲಿ ತಿಳಿಸಿಕೊಟ್ಟಿದ್ದಾರೆ. "ಲೋಕವತ್ತು ಲೀಲಾ ಕೈವಲ್ಯಂ" ಎಂಬ ಬ್ರಹ್ಮಸೂತ್ರದಲ್ಲಿ ವ್ಯಾಸ ಮಹರ್ಷಿಯೂ ಸಹ ಸೃಷ್ಟಿಯು ಶಿವನ ಲೀಲೆ ಎಂದೇ ಪ್ರತಿಪಾದಿಸಿದ್ದಾನೆ . ತನ್ನ ಯಾವುದೇ ವಿಶೇಷವಾದ ಪ್ರಯೋಜನವಿಲ್ಲದೇ ವಿನೋದಕ್ಕಾಗಿ ಮಾಡುವ ಕಾರ್ಯಕಲಾಪಗಳು ಲೀಲೆ ಎಂದು ಕರೆಯಲ್ಪಡುತ್ತವೆ. ನಿತ್ಯತೃಪ್ತನೂ ನಿಸ್ಪೃಹನೂ ಆದ ಶಿವನು ಸೃಜ್ಯಪ್ರಾಣಿಗಳ ಪ್ರಾರಬ್ಧಕರ್ಮದ ಭೋಗಕ್ಕಾಗಿ ತನಗೆ ಯಾವ ಆಯಾಸವಿಲ್ಲದೆ ಲೀಲಾಜಾಲವಾಗಿ ಕೇವಲ ತನ್ನ ಸಂಕಲ್ಪ ಮಾತ್ರದಿಂದ ಈ ಸೃಷ್ಟಿಯನ್ನು ಮಾಡಿರುವುದರಿಂದ ಇದು ಶಿವನ ಲೀಲೆ ಎಂದು ಕರೆಸಿಕೊಳ್ಳುತ್ತದೆ.
ಶಕ್ತಿ ವಿಶಿಷ್ಟನಾದ ಶಿವನು ತನ್ನಲ್ಲಿ ಅವಿನಾಭಾವ ಸಂಬಂಧದಿಂದ ಇರುವ ಶಕ್ತಿಯಲ್ಲಿಯ ಶುದ್ಧ ಸತ್ವಗುಣದ ಉಪಾಧಿಯಿಂದ ಕೂಡಿಕೊಂಡು ಸಕಲ ಜೀವಿಗಳಿಗೆ ಪ್ರೇರಕನಾಗಿ ಈಶ್ವರನೆಂದು ಕರೆಯಿಸಿಕೊಳ್ಳುತ್ತಾನೆ. ಸಮ್ಮಿಶ್ರ ಉಪಾಧಿಯಿಂದ ಕೂಡಿಕೊಂಡು ಅವನೇ ಅನಂತ ಜೀವಿಗಳ ರೂಪದಲ್ಲಿ ಭೋಕ್ತೃ ಎನಿಸಿಕೊಳ್ಳುತ್ತಾನೆ. ಅದರಂತೆ ಅವನೇ ಶುದ್ಧ ತಮೋಗುಣ ಉಪಾಧಿಯಿಂದ ಕೂಡಿದವನಾಗಿ ಭೋಜ್ಯವಾದ ವಿಶ್ವರೂಪವನ್ನು ತಾಳುತ್ತಾನೆ. ಹೀಗೇ ತಾನೇ ಪ್ರೇರಕನಾಗಿ ಭೋಕ್ತೃವಾಗಿ ಮತ್ತು ಭೂಜ್ಯನಾಗಿ ಲೀಲೆಯನ್ನು ಮಾಡುತ್ತಿರುವುದರಿಂದ ಈ ಸೃಷ್ಟಿಯು ಶಿವನ ಲೀಲೆ ಎಂಬುದಾಗಿ ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಶ್ರೀ ಸಿದ್ಧಾಂತಶಿಖಾಮಣಿಯ ಪಿಂಡಸ್ಥಲಲ್ಲಿಪ್ರತಿಪಾದಿಸಿದ್ದಾರೆ.
ಲೋಕದಲ್ಲಿಯ ತಂದೆ-ತಾಯಿಗಳು ತಮ್ಮ ಮಕ್ಕಳಿಗಾಗಿ ಅನಂತ ಭೋಗ ಭಾಗ್ಯಗಳ ಸಾಮಗ್ರಿಗಳನ್ನು ಕೂಡಿಸಿ ಅವರಿಗೆ ತಂದುಕೊಡುವಂತೆ ಶಿವನು ತನ್ನ ಅಂಶರೂಪರಾದ ಸಕಲಜೀವಿಗಳಿಗೆ ಅವರವರ ಪ್ರಾರಬ್ಧಕರ್ಮಾನುಸಾರವಾಗಿ ಅನಂತ ಭೋಗಭಾಗ್ಯಗಳನ್ನು ಕೊಟ್ಟು ಅವರನ್ನು ತೃಪ್ತಿಪಡಿಸಿ ಅದು ಅವರಿಗೆ ಸಾಕೆನಿಸಿದಾಗ ಅವರಿಗೆ ಮುಕ್ತಿಯನ್ನು ದಯಪಾಲಿಸುವದಕ್ಕಾಗಿಯೇ ಭಗವಂತನು ಈ ಸೃಷ್ಟಿಯ ಲೀಲೆಯನ್ನು ನಿರಂತರವಾಗಿ ಮಾಡುತ್ತಲೇ ಇರುತ್ತಾನೆ. ಜಗತ್ತಿನ ಎಲ್ಲ ಜೀವಿಗಳು ಮುಕ್ತರಾಗುವ ವರೆಗೆ ಈ ಸೃಷ್ಟಿಯು ನಿರಂತರವಾಗಿ ನಡೆಯುತ್ತಲೇ ಇರುತ್ತದೆ.ಈ ಸೃಷ್ಟಿಯು ಎಂದು ಆರಂಭವಾಯಿತು ಎಂಬುದರ ಬಗ್ಗೆ ಯಾರಿಗೂ ಹೇಳಲಿಕ್ಕೆ ಸಾಧ್ಯವಾಗುವುದಿಲ್ಲ. ಅಂತೆಯೆ ಸರ್ವ ದಾರ್ಶನಿಕರು ಸರ್ವಮತಾಚಾರ್ಯರು ಈ ಸೃಷ್ಟಿಯನ್ನು ಅನಾದಿ ಎಂಬುದಾಗಿ ಕರೆದಿದ್ದಾರೆ.
ಆದರೂ ಪಾಲ್ಗುಣ ಮಾಸದಲ್ಲಿ ತರುಮರಾದಿಗಳು ನನ್ನ ಎಲ್ಲ ಎಲೆಗಳನ್ನು ಕಳಚಿಕೊಂಡು ಚೈತ್ರಮಾಸದಲ್ಲಿ ಚಿಗುರೆಲೆಗಳಿಂದ ಕಂಗೊಳಿಸುವುದರಿಂದ ಚೈತ್ರಮಾಸದ ಶುಕ್ಲಪಕ್ಷದ ಪ್ರತಿಪದೆಯನ್ನು ಯುಗದ ಆದಿ ದಿನ ಎಂಬುದಾಗಿ ಕರೆದಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅದನ್ನೇ ವರ್ಷದ ಆರಂಭದ ದಿನವೆಂದು ಅದೇ ಯುಗಾದಿಯಂದು ಆಚರಿಸುತ್ತ ಬಂದಿದ್ದೇವೆ. ಆದ್ದರಿಂದ ಜನೆವರಿ 1 ನೇ ತಾರೀಖು ನಮ್ಮ ಹೊಸವರ್ಷದ ದಿನವಲ್ಲ ಎಂಬುದನ್ನು ಸರ್ವರೂ ಅರ್ಥ ಮಾಡಿಕೊಳ್ಳಬೇಕು.
ಇನ್ನು ಸಂಸಾರದಲ್ಲಿರುವ ಜೀವಿಗಳು ತಮ್ಮ ತಮ್ಮ ಕರ್ಮಾನುಸಾರವಾಗಿ ಸಾಂಸಾರಿಕ ಸುಖ ದುಃಖಗಳನ್ನು ಅನುಭವಿಸಬೇಕಾದರೆ ಅವರಿಗೆ ಒಂದು ಸ್ಥೂಲದೇಹದ ಅವಶ್ಯಕತೆ ಇರುತ್ತದೆ. ಅಂತೆಯೇ ಸ್ಥೂಲದೇಹಕ್ಕೆ ಭೋಗಾಯತನ ಎಂಬುದಾಗಿ ಕರೆದಿದ್ದಾರೆ. ಜೀವಿಗಳ ಸುಖ-ದುಃಖ ಭೋಗಕ್ಕೆ ಶರೀರವೇ ಆಧಾರವಾದುದು. ಅಂತೆಯೇ ಪರಮಾತ್ಮನು ಅನಂತ ಭೋಗ್ಯ ಪದಾರ್ಥಗಳನ್ನು ಸೃಷ್ಟಿಸುವುದರ ಜೊತೆಗೆ ಆ ಪದಾರ್ಥಗಳನ್ನು ಉಪಯೋಗಿಸುವುದಕ್ಕಾಗಿ ಜೀವಿಗಳಿಗೆ 84ಲಕ್ಷ ಪ್ರಕಾರದ ಶರೀರಗಳನ್ನು ನಿರ್ಮಿಸಿದ್ದಾನೆ.
ಈ ಎಂಬತ್ತುನಾಲ್ಕುಲಕ್ಷ ಪ್ರಕಾರದ ಶರೀರಗಳನ್ನು
ಮಹರ್ಷಿ ವ್ಯಾಸರು ಸ್ಕಂದಪುರಾಣದಲ್ಲಿ ಸಪ್ತ ಜನ್ಮಗಳನ್ನಾಗಿ ವಿಂಗಡಿಸಿದ್ದಾರೆ. ಅವರ ಪ್ರಕಾರ ದೇವತೆಗಳು 16ಲಕ್ಷ, ಮಾನವರು 9 ಲಕ್ಷ, ಜಲಚರ ಪ್ರಾಣಿಗಳು 10 ಲಕ್ಷ, ಪಕ್ಷಿಗಳು 10 ಲಕ್ಷ, ಚತುಷ್ಪಾದ ಪಶುಗಳು 10 ಲಕ್ಷ, ಸರ್ಪಗಳು 11 ಲಕ್ಷ, ಗಿಡ ಮರಾದಿ ಸ್ಥಾವರಗಳು 18 ಲಕ್ಷ ಹೀಗೆ ಸಪ್ತ ಜನ್ಮಗಳಲ್ಲಿ 84ಲಕ್ಷ ಪ್ರಕಾರದ ಶರೀರಗಳನ್ನು ವಿಭಜಿಸಿದ್ದಾರೆ. ಜೀವಿಗಳಿಗೆ ಪ್ರಾಪ್ತವಾಗುವ 84ಲಕ್ಷ ಪ್ರಕಾರದ ಶರೀರಗಳನ್ನು ಪ್ರಾಯ: ನಮ್ಮ ದೇಶದ ಎಲ್ಲ ಋಷಿಮುನಿಗಳು ಮತ್ತು ಮತಾಚಾರ್ಯರು ಮತ್ತು ಸಂತ ಶರಣರು ಒಪ್ಪಿಕೊಂಡಿದ್ದಾರೆ.
ಸದ್ಯ: ವಿಜ್ಞಾನವು ಸಾಕಷ್ಟು ಮುಂದುವರೆದಿದ್ದು ಅದರ ಸಂಶೋಧನೆಯು ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
ಈ ವೈಜ್ಞಾನಿಕ ಸಂಶೋಧನೆಯ ಪ್ರಕಾರ ಈ ಸೃಷ್ಟಿಯಲ್ಲಿ ವ್ಯಕ್ತವಾಗಿರುವ ತೋರುವ ಜೀವಿಗಳ ಶರೀರಗಳು 87 ಲಕ್ಷ ಮತ್ತು ಅವ್ಯಕ್ತವಾಗಿರುವ ಅಂದರೆ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ವಾಗಿರುವ ಶರೀರಗಳು ಒಂದು ಲಕ್ಷಕೋಟಿ ಎಂಬುದಾಗಿ ಹೇಳಿದ್ದಾರೆ. ಒಂದು ದೃಷ್ಟಿಯಿಂದ ಈ ಸಂಪೂರ್ಣ ಸೃಷ್ಟಿಯು ಅನಂತ ಜೀವಿಗಳಿಂದಲೇ ತುಂಬಿಕೊಂಡಿದೆ. ಈ ಸೃಷ್ಟಿಯಲ್ಲಿಯ ಜೀವಿಗಳು ತಾವು ಬದುಕಬೇಕಾದರೆ ಇನ್ನೊಂದು ದುರ್ಬಲ ಜೀವಿಯನ್ನು ಕೊಂದೇ ತಾನು ಬದುಕುತ್ತದೆ. ಅಂತೆಯೇ "ಜೀವೋ ಜೀವಸ್ಯ ಜೀವನಂ" ಎಂಬುದಾಗಿ ಹೇಳಿದ್ದಾರೆ.
ಶಿವನೇ ಭೋಜ್ಯರೂಪನಾಗಿ ಪರಿಣಮಿಸಿದ ಈ ಸೃಷ್ಟಿಯಲ್ಲಿ ಭೂ:, ಭುವ:,ಸ್ವ: ಮಹ:, ಜನ:,ತಪ:,ಸತ್ಯಂ ಎಂಬ ಊರ್ಧ್ವದ ಸಪ್ತಲೋಕಗಳು, ಅದರಂತೆ ಅತಲ,ವಿತಲ,ಸುತಲ,ತಲಾತಲ,ರಸಾತಲ,ಮಹಾತಲ ಮತ್ತು ಪಾತಾಲಗಳೆಂಬ ಸತ್ತ ಅಧೋಲೋಕಗಳು, ಜಂಬೂ, ಶಾಕ, ಕುಶ, ಕ್ರೌಂಚ,ಶಾಲ್ಮಲ,ಮೇದ, ಮತ್ತು ಪುಷ್ಕರಗಳೆಂಬ ಸಪ್ತ ದೀಪಗಳು, ಲವಣ, ಕ್ಷೀರ, ಘೃತ ಮೊದಲಾದ ಸಪ್ತಸಾಗರಗಳು, ಗಂಗಾ ಯಮುನಾ, ಬ್ರಹ್ಮಪುತ್ರಾ, ಕಾವೇರಿ ಮುಂತಾದ ಅನಂತ ಪವಿತ್ರ ನದಿನದಗಳು, ಭಾರತ, ಹರಿ ವರ್ಷ ಮೊದಲಾದ ಎಂಟು ವರ್ಷಗಳು, ಹಿಮಾಲಯ, ಮೇರು, ನೀಲ, ಮಹೇಂದ್ರ, ವಿಂಧ್ಯ, ಮಲಯ ಮತ್ತು ಕೈಲಾಸ ಮುಂತಾದ ಇಪ್ಪತ್ತು ಕುಲ ಪರ್ವತಗಳು, ಇವೆಲ್ಲವುಗಳಿಂದ ಕೂಡಿದ ಈ ವಿಶಾಲ ವಿಶ್ವವೇ ಈಶ್ವರನಿಂದ ನಿರ್ಮಿತವಾದ ಸೃಷ್ಟಿಯು. ಈ ಸೃಷ್ಟಿಯ ಬಗ್ಗೆ ಮಹರ್ಷಿವ್ಯಾಸನು ತಾನು ರಚಿಸಿದ ವನ್ಹಿ ಪುರಾಣದಲ್ಲಿ ವಿಸ್ತಾರವಾಗಿ ತಿಳಿಸಿದ್ದಾನೇ.
ಜಗತ್ತಿನ ಎಲ್ಲ ಜೀವಿಗಳ ಉಪಭೋಗಕ್ಕಾಗಿ ಕಂಬಾರ ಕಬ್ಬಿಣದ ಸಾಮಗ್ರಿಗಳನ್ನು , ಕುಂಬಾರ ಮಣ್ಣಿನ ಪಾತ್ರೆ ಮುಂತಾದ ಸಾಮಗ್ರಿಗಳನ್ನು, ಅಕ್ಕಸಾಲಿಗ ಬೆಳ್ಳಿ ಬಂಗಾರದ ಆಭರಣಗಳನ್ನು ಮತ್ತು ಅಭಿಯಂತರು ಮನೆ, ಮಠ, ಮಂದಿರ, ಭವನ, ಬ್ರಿಜ್ ಹಾಗೂ ವಿವಿಧ ವಾಹನಗಳನ್ನು ನಿರ್ಮಿಸುವುದನ್ನು ಪ್ರತ್ಯಕ್ಷವಾಗಿ ಕಾಣುತ್ತೇವೆ. ಹೀಗೆ ಪ್ರತಿಯೊಂದು ವಸ್ತುವಿಗೂ ನಿರ್ಮಾಣದ ಸಾಮಗ್ರಿಗಳು ಹಾಗೂ ನಿರ್ಮಾಣ ಮಾಡುವ ವ್ಯಕ್ತಿ ಇರುವುದನ್ನು ಕಾಣುತ್ತೇವೆ. ನಿರ್ಮಾಣಗೊಂಡ ಈ ವಸ್ತುಗಳನ್ನು ಪಡೆದುಕೊಂಡು ಜೀವಿಗಳು ಸುಖವನ್ನು ಮತ್ತು ದುಃಖವನ್ನು ಅನುಭವಿಸುವದನ್ನು ಮತ್ತು ಕೊನೆಗೆ ವಸ್ತುಗಳು ಬೇಡವೆನಿಸಿದಾಗ ಅವುಗಳ ತ್ಯಾಗ ಮಾಡುವುದನ್ನು ಸಹ ನೋಡುತ್ತೇವೆ. ಅದರಂತೆ ಜಗತ್ತಿನಲ್ಲಿ ಜನ್ಮತಾಳಿದ ಎಲ್ಲ ಜೀವಿಗಳು ಈ ಸೃಷ್ಟಿಯ ವಸ್ತುಗಳಿಂದ ಸುಖದುಃಖಗಳನ್ನು ಅನುಭವಿಸಿ ಕೊನೆಗೆ ಇದರ ಬಗ್ಗೆ ವಿರಕ್ತಿ ಉಂಟಾದಾಗ ಇದೆಲ್ಲವನ್ನು ಶ್ರೀ ತ್ಯಾಗ ಮಾಡಿ ಮೋಕ್ಷವನ್ನು ಪಡೆದುಕೊಳ್ಳುತ್ತಾರೆ. ಹೀಗೆ
ಈ ಸೃಷ್ಟಿಯು ಆಸಕ್ತಿಯುಳ್ಳ ಜೀವಿಗಳ ಭೋಗಕ್ಕೆ ಹಾಗೂ ನಿರಾಸಕ್ತರಾದವರಿಗೆ ಮೋಕ್ಷಕ್ಕೆ ಕಾರಣವಾಗಿರುತ್ತದೆ. ಹಾಗಂದ ಮೇಲೆ ಈ ವಿಶಾಲವಾದ ಪ್ರಪಂಚವನ್ನು ಯಾರು ಮಾಡಿದರು ಯಾವ ಸಾಮಗ್ರಿಗಳಿಂದ ಮಾಡಿದರು ಮತ್ತುಯಾರಿಗಾಗಿ ಮಾಡಿದರು ಎಂಬ ಜಿಜ್ಞಾಸೆಯು ಉಂಟಾಗುವುದು ಸಹಜ. ಈ ಜಿಜ್ಞಾಸೆಯ ಪರಿಹಾರಕ್ಕಾಗಿ ಪುರಾಣಿಕರು, ದಾರ್ಶನಿಕರು ಮತ್ತು ವಿಜ್ಞಾನಿಗಳು ತಮ್ಮದೇ ಆದ ಆಲೋಚನಾ ಶಕ್ತಿಯಿಂದ ಬೇರೆ ಬೇರೆ ರೀತಿಯಾಗಿ ಸಮರ್ಥನೆಯನ್ನು ಮಾಡಿಕೊಂಡು ಬಂದಿದ್ದಾರೆ. ಅದನ್ನೇ ಇಲ್ಲಿ ವಿಶೇಷವಾಗಿ ಚರ್ಚಿಸಲಾಗುವುದು.
ಇಷ್ಟು ವಿಶಾಲವಾದ ವಿಶ್ವವನ್ನು ರಚಿಸುವುದು ಯಾವ ಮನುಷ್ಯರಿಂದಲೂ ಸಾಧ್ಯವಿಲ್ಲದ ಕಾರಣ ಇದನ್ನು ರಚಿಸಿದ ಸರ್ವ ಸಮರ್ಥನಾದ ಒಬ್ಬ ಈಶ್ವರನು ಇರಲೇಬೇಕೆಂಬ ಅನುಮಾನ ಪ್ರಮಾಣದಿಂದ ಪುರಾಣಿಕರು ಹಾಗೂ ದಾರ್ಶನಿಕರು ಈಶ್ವರನನ್ನು ಒಪ್ಪಿಕೊಂಡಿದ್ದಾರೆ.
ಒಬ್ಬನೇ ಆದ ಆ ಈಶ್ವರನೇ
ಏಕಾ ಮೂರ್ತಿಸ್ರ್ತಯೋ ಭಾಗಾ:
ಬ್ರಹ್ಮವಿಷ್ಣುಮಹೇಶ್ವರಾ:
ಎಂಬ ಉಕ್ತಿಯ ಪ್ರಮಾಣದಂತೆ ಒಬ್ಬನೇ ಆದ ಆ ಈಶ್ವರನು ಮೂರು ಸ್ವರೂಪವನ್ನು ತಾಳಿ ಬ್ರಹ್ಮನಾಗಿ ಸೃಷ್ಟಿಯನ್ನು, ವಿಷ್ಣುವಾಗಿ ಅದರ ಪಾಲನೆಯನ್ನು ಮತ್ತು ರುದ್ರನಾಗಿ ಸೃಷ್ಟಿಯ ಸಂಹಾರವನ್ನು ಮಾಡುತ್ತಾನೆ ಎಂಬುದು ಪುರಾಣಿಕರ ವಿಚಾರ.
ಈ ಸೃಷ್ಟಿ ಸಿದ್ಧಾಂತವು ಅತ್ಯಂತ ರಹಸ್ಯಮಯ ವಾದದ್ದು. ಇದಮಿತ್ಥಂ ಎಂಬುದಾಗಿ ಯಾರಿಂದಲೂ ಹೇಳಲು ಸಾಧ್ಯವಾಗುವುದಿಲ್ಲ. ಆದರೂ ಸಹ ನಮ್ಮ ದೇಶದ ಮಹರ್ಷಿಗಳು ತಮ್ಮ ತಪಸ್ಸು ಹಾಗೂ ಅಲೌಕಿಕವಾದ ಚಿಂತನೆಯಿಂದ ಈ ಸೃಷ್ಟಿ ಸಿದ್ಧಾಂತವನ್ನು ಎಲ್ಲರಿಗೂ ತಿಳಿಸುವುದಕ್ಕಾಗಿ ಭಿನ್ನ ಭಿನ್ನ ಪದ್ಧತಿಗಳನ್ನು ಅನುಸರಿಸಿದ್ದಾರೆ. ಆ ಪದ್ಧತಿಗಳೇ ಇಂದು ದರ್ಶನಗಳೆಂದು ಕರೆಸಿಕೊಳ್ಳುತ್ತವೆ. ಈ ದರ್ಶನಗಳಲ್ಲಿ ಆಸ್ತಿಕ ದರ್ಶನ ಮತ್ತು ನಾಸ್ತಿಕ ದರ್ಶನ ಎಂಬುದಾಗಿ ಎರಡು ವಿಧಗಳು. ವೇದ ಹಾಗೂ ದೇವರನ್ನು ಒಪ್ಪಿ ಸೃಷ್ಟಿ ಸಿದ್ಧಾಂತವನ್ನು ಪ್ರತಿಪಾದಿಸುವ ದರ್ಶನಗಳು ಆಸ್ತಿಕ ದರ್ಶನಗಳು. ವೇದವನ್ನು ಒಪ್ಪದೆ ದೇವರನ್ನು ನಂಬದೆ ಸೃಷ್ಟಿ ಸಿದ್ಧಾಂತವನ್ನು ಪ್ರತಿಪಾದಿಸುವ ದರ್ಶನಗಳು ನಾಸ್ತಿಕ ದರ್ಶನಗಳು ಎಂಬುದಾಗಿ ಕರೆಸಿಕೊಳ್ಳುತ್ತವೆ.
ನ್ಯಾಯ ವೈಶೇಷಿಕ ಸಾಂಖ್ಯ ಯೋಗ ಪೂರ್ವ ಮಾಂಸ ವೇದಾಂತ ಮತ್ತು ವೀರಶೈವ ದರ್ಶನಗಳು ಈಶ್ವರನನ್ನು ವೇದಗಳನ್ನು ಒಪ್ಪಿ ಸೃಷ್ಟಿ ಸಿದ್ಧಾಂತವನ್ನು ಪ್ರತಿಪಾದಿಸಿರುವುದರಿಂದ ಇವುಗಳು ಆಸ್ತಿಕ ದರ್ಶನಗಳೆಂದು ಕರೆಯಲ್ಪಡುತ್ತವೆ. ಇನ್ನು ಚಾರ್ವಾಕ ಬೌದ್ಧ ಮುಂತಾದ ದರ್ಶನಗಳು ದೇವರನ್ನು ಹಾಗು ವೇದಗಳನ್ನು ಒಪ್ಪದೆ ಸೃಷ್ಟಿ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ ಆದ್ದರಿಂದ ಅವುಗಳಿಗೆ ನಾಸ್ತಿಕ ದರ್ಶನಗಳೆಂದು ನಮ್ಮ ಪೂರ್ವಜರು ಕರೆದಿದ್ದಾರೆ.
ಇಲ್ಲಿ ನಾವು ಕೇವಲ ಆಸ್ತಿಕ ದರ್ಶನಗಳನ್ನು ಅವಲಂಬಿಸಿ ಸಂಕ್ಷಿಪ್ತವಾಗಿ ಸೃಷ್ಟಿ ಸಿದ್ಧಾಂತವನ್ನು ಪ್ರತಿಪಾದಿಸಿದ್ದೆವೆ.
ದೃಶ್ಯಾದೃಶ್ಯಗಳಿಂದ ಕೂಡಿದ ಈ ಸೃಷ್ಟಿಯು ಅಗಮ್ಯ ಹಾಗೂ ಅಪಾರ. ಯಾವುದೇ ಒಂದು ವಸ್ತುವನ್ನು ನಿರ್ಮಿಸಬೇಕಾದರೆ ಅದಕ್ಕೆ ಕೆಲವು ಕಾರಣ ಸಾಮಗ್ರಿಗಳು ಬೇಕಾಗುತ್ತವೆ. ಅವುಗಳಿಗೆ ಶಾಸ್ತ್ರಗಳಲ್ಲಿ ಸಾಮಾನ್ಯವಾಗಿ ಉಪಾದಾನ ಕಾರಣ ನಿಮಿತ್ತ ಕಾರಣ ಮತ್ತು ಸಹಕಾರಿ ಕಾರಣಗಳೆಂಬುದಾಗಿ ಕರೆಯುತ್ತಾರೆ. ಕಾರ್ಯದ ಜೊತೆಗೆ ಸದಾ ಇದ್ದುಕೊಂಡು ಕಾರ್ಯಕ್ಕೆ ಕಾರಣವಾದದ್ದೇ ಉಪಾದಾನಕಾರಣ. ಮಡಿಕೆಗೆ ಮಣ್ಣು ವಸ್ತ್ರಕ್ಕೆ ಎಳೆಗಳು ಉಪಾದಾನ ಕಾರಣಗಳು. ಮಣ್ಣನ್ನು ಬಿಟ್ಟು ಮಡಿಕೆಯನ್ನು ಮಾಡಲಾಗುವುದಿಲ್ಲ. ಎಳೆಗಳನ್ನು ಬಿಟ್ಟು ವಸ್ತ್ರವನ್ನು ನಿರ್ಮಿಸಲು ಆಗುವುದಿಲ್ಲ. ಆದ್ದರಿಂದ ಮಣ್ಣು ಹಾಗೂ ಎಳೆಗಳು ಘಟ ಮತ್ತು ವಸ್ತ್ರಕ್ಕೆ ಉಪಾದಾನ ಕಾರಣಗಳೆಂದು ಕರೆಯಲ್ಪಡುತ್ತವೆ.
ಘಟವನ್ನು ನಿರ್ಮಿಸಲು ಕುಂಬಾರನು ನಿಮಿತ್ತ ಕಾರಣನು ಮತ್ತು ಅವನಿಗೆ ಬೇಕಾಗುವ ದಂಡ ಚಕ್ರ ಮುಂತಾದ ಸಾಮಗ್ರಿಗಳು ಸಹಕಾರಿ ಕಾರಣಗಳು. ಅದೇ ರೀತಿಯಾಗಿ ಬಟ್ಟೆಯನ್ನು ನಿರ್ಮಿಸಲು ನೇಕಾರನು ನಿಮಿತ್ತ ಕಾರಣ ಮತ್ತು ಅವನಿಗೆ ಬೇಕಾಗಿರುವ ಮಗ್ಗ ಮುಂತಾದ ಸಾಮಗ್ರಿಗಳು ಸಹಕಾರಿ ಕಾರಣಗಳು. ಹೀಗೆ ಯಾವುದೇ ಒಂದು ವಸ್ತುವನ್ನು ಸೃಷ್ಟಿ ಮಾಡುವಾಗ ಇಷ್ಟು ಸಾಮಗ್ರಿಗಳನ್ನು ಸರ್ವರೂ ಒಪ್ಪಿಕೊಂಡಿದ್ದಾರೆ.
ಈ ಸೃಷ್ಟಿಯು ಬಹು ದೊಡ್ಡ ಕಾರ್ಯ ವಾಗಿರುವುದರಿಂದ ಇದು ಹೇಗೆ ಸೃಷ್ಟಿಯಾಯಿತು? ಇದನ್ನು ಯಾರು ಸೃಷ್ಟಿಸಿದರು? ಅನ್ನುವ ವಿಚಾರದಲ್ಲಿ ನಮ್ಮ ಆಸ್ತಿಕ ದಾರ್ಶನಿಕರು ಭಿನ್ನ ಭಿನ್ನ ಮಾರ್ಗವನ್ನು ಅವಲಂಬಿಸಿದ್ದಾರೆ. ಸದ್ಯ ಅದನ್ನೇ ಸಂಕ್ಷೇಪವಾಗಿ ವಿವರಿಸುತ್ತೇವೆ.
ಈ ರಹಸ್ಯಮಯ ವಾದ ಸೃಷ್ಟಿ ಸಿದ್ಧಾಂತವನ್ನು ಸತ್ಕಾರ್ಯವಾದ ಮತ್ತು ಅಸತ್ಕಾರ್ಯವಾದ ಎಂದು ಎರಡು ವಿಧವಾಗಿ ವಿಂಗಡಿಸಿದ್ದಾರೆ. ಎಳ್ಳಿನಲ್ಲಿ ಎಣ್ಣಣ್ಣೆಯು ಮೊದಲೇ ಇತ್ತು ಅಂತೆಯೇ ಎಳ್ಳಿನಿಂದ ಎಣ್ಣೆಯು ಉತ್ಪನ್ನವಾಗುತ್ತದೆ ಎಂದು ಹೇಳುವುದಕ್ಕೆ ಸತ್ಕಾರ್ಯ ವಾದವೆಂದು ಕರೆಯುವರು. ತಂತುಗಳಲ್ಲಿ ಮೊದಲು ವಸ್ತ್ರವಿರಲಿಲ್ಲ ತಂತುಗಳನ್ನು ಜೋಡಿಸಿ ನೈದಾಗ ವಸ್ತ್ರವು ಉತ್ಪನ್ನವಾಗುತ್ತದೆ ಎಂದು ಹೇಳುವ ವಾದಕ್ಕೆ ಅಸತ್ಕಾರ್ಯ ವಾದವೆಂದು ಕರೆಯುವರು. ಸತ್ಕಾರ್ಯ ವಾದವು ಪರಿಣಾಮವಾದ ಮತ್ತು ವಿವರ್ತವಾದ ಎಂಬುದಾಗಿ ಪುನಹ ಎರಡು ವಿಧ ವಾಗಿರುತ್ತದೆ. ಸಾಂಖ್ಯ ಮತ್ತು ವೀರಶೈವ ದರ್ಶನಗಳು ಪರಿಣಾಮ ವಾದಿಗಳು ಅದರಲ್ಲಿಯೂ ಸಾಂಖ್ಯರು ಪ್ರಕೃತಿ ಪರಿಣಾಮವಾದಿಗಳು, ವೀರಶೈವರು ಶಕ್ತಿವಿಶಿಷ್ಟ ಪರಶಿವನ ಪರಿಣಾಮ ವಾದಿಗಳು, ಎಂಬುದು ವಿಶೇಷ. ಇನ್ನು ಅದ್ವೈತ ವೇದಾಂತಿಗಳು ವಿವರ್ತವಾದ ವನ್ನು ಪ್ರತಿಪಾದಿಸುತ್ತಾರೆ.
ನ್ಯಾಯ -ವೈಶೇಷಿಕರು ಅಸತ್ಕಾರ್ಯವಾದಿಗಳು.
ಇದಕ್ಕೆ ಆರಂಭವಾದ ಎಂಬುದಾಗಿಯೂ ಕರೆಯುತ್ತಾರೆ. ಈ ಸೃಷ್ಟಿ ಸಿದ್ಧಾಂತವನ್ನು ಪ್ರತಿಪಾದಿಸುವಾಗ ನ್ಯಾಯ -ವೈಶೇಷಿಕ ದಾರ್ಶನಿಕರು 9 ದ್ರವ್ಯಗಳನ್ನು ಒಪ್ಪಿದ್ದು, ಅವುಗಳಲ್ಲಿ ಪೃಥ್ವಿ, ಅಪ್ಪು, ತೇಜ, ಮತ್ತು ವಾಯು ಈ ನಾಲ್ಕು ದ್ರವ್ಯಗಳನ್ನು ಅನಿತ್ಯವೆಂಬುದಾಗಯೂ ಉಳಿದ ಆಕಾಶ, ಕಾಲ, ದಿಕ್ಕು,ಆತ್ಮ ಮತ್ತು ಮನಸ್ಸುಗಳನ್ನು ನಿತ್ಯ ದ್ರವ್ಯಗಳನ್ನಾಗಿ ಸ್ವೀಕರಿಸಿದ್ದಾರೆ. ಅಂತೆಯೇ ಇವರು ನಿತ್ಯ ದ್ರವ್ಯಗಳ ಉತ್ಪತ್ತಿಯನ್ನು ಹೇಳುವುದಿಲ್ಲ. ಕೇವಲ ಅನಿತ್ಯ ದ್ರವ್ಯಗಳ ಉತ್ಪತ್ತಿ ಮತ್ತು ವಿನಾಶವನ್ನು ಪ್ರತಿಪಾದಿಸುತ್ತಾರೆ. ಅನಿತ್ಯ ದ್ರವ್ಯಗಳಾದರೂ ಪ್ರಲಯ ಕಾಲದಲ್ಲಿ ಅಣು ರೂಪವನ್ನು ಧರಿಸಿ ನಿತ್ಯರೂಪಗಳಾಗುತ್ತವೆ. ಪುನಹ ಸೃಷ್ಟಿಯ ಸಮಯದಲ್ಲಿ ಆ ನಿತ್ಯ ಅಣು ಗಳ ಸಂಯೋಜನೆಯಿಂದಲೇ ಸ್ಥೂಲವಾದ ಸೃಷ್ಟಿಯು ನಿರ್ಮಾಣಗೊಳ್ಳುವುದು. ಎರಡು ಪರಮಾಣುಗಳು ಪರಸ್ಪರ ಕೂಡಿದಾಗ ಒಂದು ದ್ವ್ಯಣುಕವಾಗುತ್ತದೆ. ಇಂತಹ 3 ದ್ವ್ಯಣುಕಗಳು ಪರಸ್ಪರ ಕೂಡಿಕೊಂಡಾಗ ಒಂದು ತ್ರ್ಯಣುಕವಾಗುವುದು. ಅಣು ಪರಮಾಣುಗಳು ಯಾರ ಕಣ್ಣಿಗೆ ಕಾಣುವುದಿಲ್ಲ ಆದರೆ ತ್ರ್ಯಣಕ ಪರಮಾಣು ಮಾತ್ರ ಬೆಳಕಿಂಡೆಯ ಬಿಸಿಲಿನಲ್ಲಿ ದೃಷ್ಟಿಗೋಚರ ವಾಗುವವು. ಈ ತ್ರ್ಯಣುಕದ 60ನೇ ಒಂದು ಭಾಗವೇ ಪರಮಾಣುವೆಂದು ಕರೆಯಿಸಿಗೊಳ್ಳುವದು. ಹೀಗೆ ಈ ತ್ರ್ಯಣುಕಗಳು ಪರಸ್ಪರ ಸಂಯೋಜನೆಗೊಂಡು ಸ್ಥೂಲರೂಪವನ್ನು ತಳೆದಾಗ ಪೃಥ್ವಿ ಅಪ್ಪು ತೇಜ ಮತ್ತು ವಾಯು ಗಳೆಂಬ ಮಹಾಭೂತಗಳು ಉತ್ಪತ್ತಿಯಾಗುತ್ತವೆ. ಹೀಗೆ ಪರಮಾಣುಗಳು ಸಂಯೋಜನೆಗೊಂಡು ಸೃಷ್ಟಿಕ್ಕಯಾಗುವುದಕ್ಕೆ ಮುಂದೆ ಹುಟ್ಟಲಿರುವ ಎಲ್ಲ ಜೀವರಾಶಿಗಳ ಪ್ರಾರಬ್ಧಕರ್ಮವೇ ಕಾರಣವಾಗಿರುತ್ತದೆ. ಈ ಪ್ರಾರಬ್ಧಕರ್ಮದ ದೆಶೆಯಿಂದ ಈಶ್ವರನಲ್ಲಿ ಸೃಷ್ಟಿಯನ್ನು ಮಾಡುವ ಇಚ್ಛೆಯು ಉತ್ಪನ್ನವಾಗುವದು. ಹೇಗೆ ಪ್ರಾಣಿಗಳ ಪ್ರಾರಬ್ಧದಿಂದ ಪ್ರೇರಣೆಗೊಂಡ ಈಶ್ವರನು ಸೃಷ್ಟಿಯನ್ನು ಮಾಡುವದಕ್ಕಾಗಿ ಬ್ರಹ್ಮನನ್ನು ಸೃಷ್ಟಿಸುತ್ತಾನೆ.ಆ ಬ್ರಹ್ಮನು ಸಹ ಅತ್ಯಂತ ನಿಸ್ಪೃಹ ಯನಾಗಿರುವದರಿಂದ ಯಾವುದೇ ಪಕ್ಷಪಾತವನ್ನು ಮಾಡದೇ ಎಲ್ಲ ಪ್ರಾಣಿಗಳನ್ನು ಅವರವರ ಪ್ರಾರಬ್ಧಕ್ಕನುಗುಣವಾಗಿ 84ಲಕ್ಷ ಪ್ರಕಾರದ ಯೋನಿಗಳಲ್ಲಿ ಜನ್ಮ ತಾಳುವಂತೆ ಮಾಡುತ್ತಾನೆ. ಹೀಗೆ ಆರಂಭವಾದಿಗಳಾದ ನ್ಯಾಯ ವೈಶೇಷಿಕ ಆಚಾರ್ಯರ ವಿಚಾರದಂತೆ ಸೃಷ್ಟಿಯಾಗುತ್ತದೆ.ಇಲ್ಲಿ ಪರಮಾಣುಗಳು ಉಪಾದಾನ ಕಾರಣಗಳು, ಪರಮಾಣುಗಳ ಪರಸ್ಪರ ಸಂಯೋಗವು ಸಹಕಾರಿ ಕಾರಣವು ಮತ್ತು ಆಯಾ ಪ್ರಾಣಿಗಳ ಅದೃಷ್ಟ ಮತ್ತು ಈಶ್ವರನು ನಿಮಿತ್ತ ಕಾರಣವೆಂದು ತಿಳಿದುಕೊಳ್ಳಬೇಕು.
ಸೃಷ್ಟಿಕರ್ತನಾದ ಬ್ರಹ್ಮನ ನೂರು ವರ್ಷಗಳು ಪೂರ್ಣಗೊಂಡಾಗ ಸೃಷ್ಟಿಯು ಪ್ರಳಯವಾಗುವುದು. ಆಗ ಪೃಥ್ವಿ ಅಪ್ಪು ತೇಜ ಮತ್ತು ವಾಯುಗಳು ಪರಮಾಣು ರೂಪವನ್ನು ತಳೆದು ಸೃಷ್ಟಿಯು ಇಲ್ಲದಂತಾಗುವುದು. ಇದು ನ್ಯಾಯ ವೈಶೇಷಿಕರ ಸೃಷ್ಟಿ ಸಿದ್ಧಾಂತವು.
ಆಧುನಿಕ ವಿಜ್ಞಾನಿಗಳೂ ಸಹ ಈ ಪರಮಾಣು ವಾದವನ್ನು ಸ್ವೀಕರಿಸಿ ಪರಮಾಣುಗಳ ಸಂಯೋಜನೆಯಿಂದಲೇ ಸೃಷ್ಟಿಯಾಗುವುದು ಎಂದು ಹೇಳುತ್ತಾರೆ. ಆದರೆ ನ್ಯಾಯ ವೈಶೇಷಿಕರಂತೆ ಇವರು ಪರಮಾಣುಗಳ ಸಂಯೋಜನೆಗೆ ಜೀವಿಗಳ ಪ್ರಾರಬ್ಧವನ್ನಾಗಲಿ ಈಶ್ವರನನ್ನಾಗಲಿ ಒಪ್ಪುವುದಿಲ್ಲ. ಯಾರ ಪ್ರೇರಣೆಯಿಲ್ಲದೆ ಪರಮಾಣುಗಳು ಕೂಡಿಕೊಂಡು ಸೃಷ್ಟಿಯನ್ನು ಮಾಡುತ್ತವೆ. ಪುನ: ತಾವೇ ವಿಭಜನೆಗೊಂಡು ಪ್ರಳಯವನ್ನುಂಟುಮಾಡುತ್ತವೆ . ಎಂಬುದಾಗಿ ತಿಳಿಸುತ್ತಾರೆ
ಸಾಂಖ್ಯ ಮತ್ತು ಯೋಗ ದರ್ಶನಗಳ ಆಚಾರ್ಯರು ಪ್ರಕೃತಿಯ ಪರಿಣಾಮವೇ ಸೃಷ್ಟಿ ಎಂಬುದಾಗಿ ಪ್ರತಿಪಾದಿಸುತ್ತಾರೆ.
ಈ ಸಿದ್ಧಾಂತದಲ್ಲಿ ಪ್ರಕೃತಿಯು ಜಡರೂಪ ವಾದದ್ದು ಪುರುಷರು ಚೇತನ ನಾಗಿದ್ದರೂ ಅಸಂಗಿ ಯಾಗಿರುತ್ತಾನೆ. ಆದ್ದರಿಂದ ಇವರಿಬ್ಬರೂ ಸ್ವತಂತ್ರರಾಗಿ ಸೃಷ್ಟಿಯನ್ನು ಮಾಡಲು ಸಮರ್ಥರಾಗಿರುವುದಿಲ್ಲ. ಆದರೆ ಪುರುಷನಿಂದ ಅಧಿಷ್ಠಿತವಾದ ಪ್ರಕೃತಿಯೇ ಶ್ರೀ ಸೃಜ್ಯಮಾನ ಪ್ರಾಣಿಗಳ ಪರಿಪಕ್ವವಾದ ಕರ್ಮದಿಂದ ಕ್ಷೋಭೆಗೊಂಡು ಮಹತ್ತತ್ವ ರೂಪವನ್ನು ತಾಳುತ್ತದೆ. ಅದರಿಂದ ಬುದ್ಧಿ ತತ್ತ್ವವು, ಆ ಬುದ್ಧಿತತ್ತ್ವದಿಂದ ಅಹಂಕಾರ, ಆ ಅಹಂಕಾರ ತತ್ತ್ವದಿಂದ ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಮನಸ್ಸು ಮತ್ತು ಪಂಚತನ್ಮಾತ್ರೆಗಳೆಂಬ 16 ತತ್ತ್ವಗಳು ಉತ್ಪನ್ನವಾಗುತ್ತವೆ. ಇವುಗಳಲ್ಲಿಯ ಆ ಪಂಚತನ್ಮಾತ್ರೆಗಳಿಂದ ಆಕಾಶದಿ ಪಂಚಮಹಾಭೂತಗಳು ಉತ್ಪನ್ನವಾಗುತ್ತವೆ. ಹೀಗೆ ಪ್ರಕೃತಿ ತತ್ವವು ಮೇಲೆ ಹೇಳಿದ ತತ್ವಗಳ ರೂಪದಲ್ಲಿ ಪರಿಣಾಮಗೊಳ್ಳುವದು. ಇಲ್ಲಿ ಅಂಧ ಪಂಗು ನ್ಯಾಯದಿಂದ ಸೃಷ್ಟಿಯನ್ನು ಪ್ರತಿಪಾದಿಸಲಾಗಿದೆ.
ಈ ದರ್ಶನದಲ್ಲಿಯೂ ಕೂಡ ಪುರುಷನಿಗೆ ಭೋಗ ಮೋಕ್ಷಗಳನ್ನು ಕೊಡುವುದಕ್ಕಾಗಿಯೇ ಪ್ರಕೃತಿಯು ಪ್ರವೃತ್ತವಾಗುವುದು. ಯಾವ ಪುರುಷನಿಗೆ ಪ್ರಕೃತಿ-ಪುರುಷರ ವಿವೇಕ ಜ್ಞಾನ ವಾಗುವುದೋ ಅವನಿಗೆ ಪ್ರಕೃತಿಯು ಮೋಕ್ಷವನ್ನು ಮತ್ತು ವಿವೇಕ ಜ್ಞಾನವಾಗದ ಪುರುಷರಿಗೆ ಮತ್ತೆ ಭೋಗವನ್ನು ಕೊಡುವುದಕ್ಕಾಗಿ ಪ್ರಕೃತಿಯು ಪುನ:ಪುನ: ಸೃಷ್ಟಿಯನ್ನು ಮಾಡುತ್ತಲೇ ಇರುತ್ತದೆ. ಎಂಬುದು ಸಾಂಖ್ಯ ಯೋಗದರ್ಶನಾಚಾರ್ಯರ ಅಭಿಮತ.
ಮೀಮಾಂಸಾ ದರ್ಶನದಲ್ಲಿ ಈ ಸೃಷ್ಟಿಯನ್ನು ನಿತ್ಯ ವನ್ನಾಗಿ ಒಪ್ಪಿಕೊಂಡಿದ್ದಾರೆ. ಇದು ಎಂದೂ ಸಂಪೂರ್ಣವಾಗಿ ನಾಶವಾಗುವುದಿಲ್ಲ. ಆದರೆ ಖಂಡ ಸೃಷ್ಟಿ ಮತ್ತು ಖಂಡಪ್ರಳಯಗಳು ಮಾತ್ರ ನಡೆಯುತ್ತವೆ. ಅವುಗಳನ್ನು ಸಹ ಯಾರೂ ಮಾಡುವುದಿಲ್ಲ ಅವುಗಳು ಸ್ವಾಭಾವಿಕವಾದ ಕ್ರಿಯೆಗಳು.ಈ ಸಿದ್ಧಾಂತದಲ್ಲಿ ಜೀವಿಗಳ ಶರೀರಗಳು ಭೋಗಾಯತನಗಳು , ಇಂದ್ರಿಯಗಳು ಭೋಗ ಸಾಧನೆಗಳು ಮತ್ತು ಪ್ರಪಂಚದಲ್ಲಿಯ ಶಬ್ದಸ್ಪರ್ಶಾದಿಗಳು ಭೋಗದ ವಿಷಯಗಳಾಗಿರುತ್ತವೆ. ಇವರಲ್ಲಿ ಕೆಲವರು ನೈಯಾಯಿಕರಂತೆ ಪರಮಾಣುಗಳ ಸಂಯೋಜನೆಯಿಂದ ಸೃಷ್ಟಿ ಮತ್ತು ಅವುಗಳ ವಿಭಜನೆಯಿಂದ ಸೃಷ್ಟಿಯ ವಿನಾಶ ಎಂಬುದಾಗಿಯೂ ಒಪ್ಪಿಕೊಂಡಿದ್ದಾರೆ.
ಇನ್ನು ಅದ್ವೈತ ವೇದಾಂತಿಗಳು
"ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರ:" ಅಂದರೆ ಬ್ರಹ್ಮ ಒಂದೇ ಸತ್ಯ ಜಗತ್ತು ಮಿಥ್ಯ ವಾದದ್ದು ಜೀವಾತ್ಮನು ಸಹ ಬ್ರಹ್ಮನೇ ಆಗಿರುತ್ತಾನೆ. ಎಂಬ ವಾದವನ್ನು ಮಂಡಿಸುತ್ತಾರೆ.
ಅವರ ಪ್ರಕಾರ ಹಗ್ಗದಲ್ಲಿ ತೋರುವ ಹಾವಿನಂತೆ, ಕಪ್ಪೆಚಿಪ್ಪಿನಲ್ಲಿ ತೋರುವ ಬೆಳ್ಳಿಯಂತೆ, ಮೊಂಡ ಮರದಲ್ಲಿ ಕೋರುವ ಕಳ್ಳನಂತೆ ಈ ಪ್ರಪಂಚವು ಪರಬ್ರಹ್ಮದಲ್ಲಿ ಭ್ರಾಂತಿಯಿಂದ ತೋರುತ್ತದೆ. ಆದ್ದರಿಂದ ಇದು ಬ್ರಹ್ಮದ ವಿವರ್ತ ಎಂಬುದಾಗಿ ಹೇಳುತ್ತಾರೆ. ಆದರೂ ಈ ಪ್ರಪಂಚಕ್ಕೆ ವ್ಯಾವಹಾರಿಕ ಸತ್ಯವನ್ನು ಒಪ್ಪಿಕೊಂಡು ಇದು ಮಾಯೆಯ ಪರಿಣಾಮ ಎಂಬುದಾಗಿಯೂ ಹೇಳುತ್ತಾರೆ. ಈ ಸಿದ್ಧಾಂತದಲ್ಲಿ "ನೇಹ ನಾನಾಸ್ತಿ ಕಿಂಚನ", "ಸರ್ವಂ ಖಲ್ವಿದಂ ಬ್ರಹ್ಮ"ಎಂಬ ಸೃತಿ ಪ್ರಮಾಣದಂತೆ ಎಲ್ಲವೂ ಪರಬ್ರಹ್ಮ ಸ್ವರೂಪವೇ. ಆದರೂ ಜೀವಿಗಳ ಅಜ್ಞಾನದಿಂದ ತೋರುವ ಈ ಸೃಷ್ಟಿಯನ್ನು ಅಲ್ಲಗಳೆಯುವುದಕ್ಕಾಗಿ ಅಧ್ಯಾರೋಪ ಮತ್ತು ಅಪವಾದಗಳ ಮೂಲಕ ಈ ಸೃಷ್ಟಿಯನ್ನು ಮಾಯೆಯ ಪರಿಣಾಮವಾಗಿ ಹೇಳಿ ಅದರ ಮಿಥ್ಯಾತ್ವವನ್ನು ತಿಳಿಸಿ ಜೀವನಿಗೆ ಬ್ರಹ್ಮಜ್ಞಾನವನ್ನು ಮಾಡಿಕೊಡುತ್ತಾರೆ.
ಇನ್ನು ಸನಾತನ ವೀರಶೈವ ಸಿದ್ಧಾಂತದಲ್ಲಿ ಶಕ್ತಿ ವಿಶಿಷ್ಟನಾದ ಪರಶಿವನೇ ಈ ಸೃಷ್ಟಿಗೆ ಉಪಾದಾನ ಮತ್ತು ನಿಮಿತ್ತ ಕಾರಣನಾಗಿರುತ್ತಾನೆ.
ಪತ್ರಶಾಖಾದಿರೂಪೇನ ಯಥಾ ತಿಷ್ಠತಿ ಪಾದಪ:।
ತಥಾ ಭೂಮ್ಯಾದಿರೂಪೇನ ಶಿವ ಏಕೋ ವಿರಾಜತೇ।।
ಅಂದರೆ ಬೇರು, ಬೊಡ್ಡೆ, ಟೊಂಗೆಗಳ ರೂಪದಲ್ಲಿ ವೃಕ್ಷವೇ ತೋರುವಂತೆ ಭೂಮ್ಯಾದಿಗಳ ರೂಪದಲ್ಲಿ ಶಿವನೇ ತೋರುತ್ತಿರುತ್ತಾನೆ. ಆದ್ದರಿಂದ ನಿಷೇಧಾತ್ಮಕ ವಿಚಾರಕ್ಕೆ ಆಸ್ಪದ ಕೊಡದೆ ಸರ್ವವೆಲ್ಲವನ್ನು ಶಿವಮಯವನ್ನಾಗಿ ಪ್ರತಿಪಾದಿಸಲಾಗಿದೆ. ಸಂಪೂರ್ಣ ಸೃಷ್ಟಿಯು ಶಿವರೂಪವಾದದ್ದು ಶಿವನಿಗಿಂತ ಬೇರೆ ಯಾವುದೂ ಇಲ್ಲ ಮತ್ತು ನಾನೂ ಶಿವಸ್ವರೂಪನೇ ಆಗಿದ್ದೇನೆ ಎಂಬ ದೃಢವಾದ ಜ್ಞಾನವಾಗಲು ಆ ಜೀವಿಯು ಸಂಸಾರದಿಂದ ಮುಕ್ತನಾಗುತ್ತಾನೆ. ಆದ್ದರಿಂದ ವೀರಶೈವ ಸಿದ್ಧಾಂತದಲ್ಲಿ ಯಾವುದೂ ಮಿಥ್ಯವಾದುದಲ್ಲ. ಸುವರ್ಣವು ಯಾವುದೇ ಅಲಂಕಾರರೂಪವನ್ನು ತಾಳಿದರೂ ಸುವರ್ಣಕ್ಕೆ ಯಾವುದೇ ಚ್ಯುತಿಬಾರದಿರುವಂತೆ ಶಿವನು ಸೃಷ್ಟಿಸ್ವರೂಪವನ್ನು ತಾಳಿದರೂ ಶಿವನ ಮೂಲಸ್ವರೂಪಕ್ಕೆ ಯಾವ ಚ್ಯುತಿಯೂ ಬರುವುದಿಲ್ಲ.
ಈ ರೀತಿಯಾಗಿ ಭಾರತೀಯ ದಾರ್ಶನಿಕರು ಸೃಷ್ಟಿಯ ವಿಚಾರದಲ್ಲಿ ತಮ್ಮ ತಮ್ಮ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. "ಯಥಾದೃಷ್ಟಿ: ತಥಾ ಸೃಷ್ಟಿ:"ಎಂಬ ಉಕ್ತಿಗಣುಸಾರವಾಗಿ ಯಾರು ಈ ಸೃಷ್ಟಿಯನ್ನು ಹೇಗೆ ಭಾವಿಸುತ್ತಾರೆಯೋ ಅದು ಅವರಿಗೆ ಹಾಗೆಯೇ ತೋರುತ್ತದೆ. ಆದ್ದರಿಂದ ಇದನ್ನು ಜಡಮಯವಾಗಿ ಕಾಣದೆ ಚಿದ್ರೂಪವಾಗಿ ಕಾಣುವುದೇ ಹೆಚ್ಚು ಸೂಕ್ತವೆನಿಸುತ್ತದೆ. ಸೃಷ್ಟಿಯ ಬಗ್ಗೆ ಇರುವ ಜಡದೃಷ್ಠಿಯನ್ನು ಕಳೆದುಕೊಂಡರೆ ಅದರಲ್ಲಿಯ ಆಸಕ್ತಿಯು ಕಡಿಮೆಯಾಗಿ ಪ್ರತಿಯೊಬ್ಬರು ಇದೇ ಜನ್ಮದಲ್ಲಿ ಸದ್ಗತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದು. ಅದರಿಂದ ಸೃಷ್ಟಿಯ ವಿಧಾನದಲ್ಲಿ ವಾದಿಸದೇ ಸೃಷ್ಟಿಯನ್ನೇ ಶಿವನಾಗಿ ಭಾವಿಸುವುದು ಕಲ್ಯಾಣ ಕರವಾದುದು ಎಂಬುದು ನಮ್ಮ ಭಾವನೆಯಾಗಿದೆ.
ಲೇಖಕರು: " ಸರ್ವದರ್ಶನತೀರ್ಥ" "ವೇದಾಂತಾಚಾರ್ಯ" "ವಿದ್ಯಾವಾರಿಧಿ" "ವಿದ್ಯಾವಾಚಸ್ಪತಿ" ಶ್ರೀ ಕಾಶಿ ಜಗದ್ಗುರು ಡಾಕ್ಟರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಜಗದ್ಗುರು ವಿಶ್ವಾರಾಧ್ಯ ಜ್ಞಾನ ಸಿಂಹಾಸನ ಜಂಗಮವಾಡಿ ಮಠ ವಾರಣಾಸಿ*