August 20, 2021

ಕುಬೇರ ಮತ್ತು ಪ್ರಾದುರ್ಭೂತೋsಸ್ಮಿ ರಾಷ್ಟ್ರೇsಸ್ಮಿನ್

ಕುಬೇರ ಮತ್ತು ಪ್ರಾದುರ್ಭೂತೋsಸ್ಮಿ ರಾಷ್ಟ್ರೇsಸ್ಮಿನ್ 

ಕುವೇರ ಎಂದು ಸಂಸ್ಕೃತದಲ್ಲಿ ಕರೆಯಲ್ಪಡುವವನೇ ಕುಬೇರ ಎಂದೂ ಸಹ ಕರೆಯಲ್ಪಡುತ್ತಾನೆ. ಈತ ವಿಶ್ರವಸನೆಂಬ ಬ್ರಹ್ಮನಿಗೆ ಹುಟ್ಟಿದವನು. ಅದಕ್ಕಾಗಿ ವೈಶ್ರವಣ ಎಮದೂ ಕರೆಯಲಾಗುತ್ತದೆ. ಕುಬೇರ ಎಂದು ಕೆಲವು ಕಡೆಗಳಲ್ಲಿ ಹೇಳಿದರೆ, ಮಹಾಭಾರತದ ವನಪರ್ವದಲ್ಲಿ ಪುಲಸ್ತ್ಯ ಮಹರ್ಷಿಗೆ ಗೋ ಎಂಬಾಕೆಯಲ್ಲಿ ಜನಿಸಿದವನು ಎಂದು ಹೇಳಲಾಗಿದೆ. ಈತನನ್ನು ಉತ್ತರ ದಿಕ್ಕಿಗೆ ಅಧಿಪತಿ ಎಂದು ಹೇಳಲಾಗುತ್ತದೆ. ಆದುದರಿಂದ ಈತನನ್ನು ಸೋಮನೆನ್ನುವ ಇನ್ನೊಂದು ಹೆಸರಿನಿಂದ ಸಹ ಕರೆಯಲಾಗುತ್ತದೆ. ಅದೇ ಕಾರಣಕ್ಕೆ ಉತ್ತರಾಶಾಪತಿ ಎಂದೂ ಹೇಳುತ್ತಾರೆ. ಸಂಪತ್ತಿನ ಒಡೆಯನಾದುದರಿಂದ ಧನಪತಿ, ಅಥವಾ ಧನಾಧಿಪ ಎಂದು ಕರೆಯಲಾಗುತ್ತದೆ. ವಿತ್ತೇಶ, ಅರ್ಥಪತಿ ಮತ್ತು ಶ್ರೀದಃ ಎಂದರೂ ಇದೇ ಕುಬೇರ. ಇಳಾವಿಲನ ಮಗನಾದ್ದರಿಂದ ಏಳಾವಿಲ ಅಥವಾ ಐಡಾವಿಲ ಎಂದೂ ಕರೆಯುತ್ತಾರೆ. ಇನ್ನು ಯಕ್ಷರಿಗೆ ಅಧಿಪತಿಯಾಗಿದ್ದರಿಂದ ಯಕ್ಷೇಶ ಎನ್ನಲಾಗುತ್ತದೆ. ನಲಕೂಬರನೆಂಬ ಮಗನನ್ನು ಹೊಂದಿದ್ದ ಈತ ಅಲಕಾನಗರವನ್ನು ಆಳುತ್ತಿದ್ದ ಎನ್ನುವುದು ಪುರಾಣಗಳಿಂದ ತಿಳಿದು ಬರುತ್ತದೆ. ಈತನ ಪತ್ನಿಯನ್ನು ಋದ್ಧಿ ಎಂದು ಕೆಲವೆಡೆ ಹೇಳಿದ್ದರೆ, ಈತನ ಮಡದಿಯನ್ನು ಭದ್ರೆ ಎನ್ನುವುದಾಗಿ ಮಹಾಭಾರತದ ಆದಿಪರ್ವದಲ್ಲಿ ಹೇಳಲಾಗಿದೆ. ಕುಬೇರನಿಗೂ ಮುಚುಕುಂದನಿಗೂ ನಡೆದ ಕ್ಷತ್ರಿಯ ಧರ್ಮದ ಸಂವಾದ ಈ ಹಿಂದೆ ನಾನು ಬರೆದಾಗಿದೆ. ಈತ ಲಂಕೆಯನ್ನು ಆಳುತ್ತಿದ್ದ, ಆಗ ಈತನ ಮಲತಾಯಿ ಮಕ್ಕಳಾದ ರಾವಣ ಕುಂಭಕರ್ಣರೇ ಮೊದಲಾದವರು ಇವನನ್ನು ಯುದ್ಧದಲ್ಲಿ ಸೋಲಿಸಿ ಲಂಕೆಯನ್ನೂ ಮತ್ತು ಈತನಲ್ಲಿದ್ದ ಪುಷ್ಪಕ ವಿಮಾನವನ್ನು ಕಸಿದುಕೊಂಡು ಕಳಿಸಿದ್ದು ರಾಮಾಯಣದಲ್ಲಿ ಮತ್ತು ದೇವೀಭಾಗವತದಲ್ಲಿ ಸಿಗುತ್ತದೆ. ಹೀಗೇ ಇವಿಷ್ಟೂ ಪುರಾಣಗಳಲ್ಲಿಯಾದರೆ ವೇದಗಳಲ್ಲಿ ಕುಬೇರನ ಹೆಸರು ನೇರವಾಗಿ ಪ್ರಸ್ತಾಪಿಸಿದಂತಿಲ್ಲ. ಶತಪಥಬ್ರಾಹ್ಮಣದಲ್ಲಿ ಕುಬೇರನ ಹೆಸರು ಕಾಣಿಸಿಕೊಳ್ಳುತ್ತದೆ. ಆದರೆ ಕುಬೇರ ಅನ್ನುವ ಹೆಸರಿಲ್ಲದಿದ್ದರೂ ದೇವಸಖ ಎನ್ನುವ ಹೆಸರಿನಿಂದ ಸ್ತುತಿಸಲ್ಪಟ್ಟದ್ದು ನೋಡಬಹುದು.

ಓಂ ಉಪೈತು ಮಾಂ ದೇವಸಖಃ ಕೀರ್ತಿಶ್ಚ ಮಣಿನಾ ಸಹ |
ಪ್ರಾದುರ್ಭೂತೋsಸ್ಮಿ ರಾಷ್ಟ್ರೇsಸ್ಮಿನ್ ಕೀರ್ತಿಮೃದ್ಧಿಂ ದದಾತು ಮೇ || ಎನ್ನುವ ಈ ಮಂತ್ರದಲ್ಲಿ ದೇವಸಖಃ ಎಂದಿರುವುದು ಇದೇ ಕುಬೇರನನ್ನು. ಕುಬೇರನ ಮಂತ್ರಿಯೇ ಮಣಿಭದ್ರ ಎನ್ನುವವನು. ಈ ಕುಬೇರನ ಅಭಿಮಾನಿ ದೇವತೆ ಕೀರ್ತಿ ಎನ್ನುವುದು ಭಾಷ್ಯಕಾರರ ಅಭಿಮತ. ಈ ಮಂತ್ರದ ಭಾವಾರ್ಥವನ್ನು ನೋಡುವುದಾದರೆ, ಹೇ ದೇವಿಯೇ ಮಹಾದೇವನ ಮಿತ್ರನಾದ ದೇವಸಖನೆಂದು ಕರೆಯಲ್ಪಡುವ ಕುಬೇರನೂ, ಮತ್ತು ಕೀರ್ತಿಗೆ ಅಭಿಮಾನಿ ದೇವತೆಯಾದ ದಕ್ಷಕನ್ಯೆಯೂ, ಕುಬೇರನ ಕೋಶಾಧ್ಯಕ್ಷನಾದ ಮಣಿಭದ್ರನೆಂಬವನ ಜೊತೆ ನನಗೆ ಅನುಗ್ರಹ ಮಾಡುವುದಕ್ಕಾಗಿ ನನ್ನ ಸಮೀಪಕ್ಕೆ ಬರಲಿ ಎನ್ನುವುದಾಗಿ ಆನಂದ ಋಷಿ ಕೇಳಿಕೊಳ್ಳುತ್ತಾನೆ. ಈ ರಾಷ್ಟ್ರದಲ್ಲಿ ನಾನು ಜನಿಸಿರುವುದೇ ನಿನ್ನ ಅನುಗ್ರಹ ಸಂಪಾದನೆಗಾಗಿ. ಆದುದರಿಂದ ನನಗೆ ಕುಬೇರನು ಅತ್ಯುನ್ನತವಾದ ಕೀರ್ತಿ ಮತ್ತು ಐಶ್ವರ್ಯದೊಡನೆ ಸುಖ ಮತ್ತು ಭೋಗವಸ್ತುಗಳನ್ನು ನೀಡಲಿ ಎನ್ನುವ ಆಶಯ ವ್ಯಕ್ತಪಡಿಸಿದ್ದಾನೆ.
ಹಿಂದೊಮ್ಮೆ ಕುಬೇರನು ಉಗ್ರವಾದ ತಪ್ಪಸ್ಸನ್ನು ಆಚರಿಸುತ್ತಾನೆ. ತಪಸ್ಸಿಗೆ ಮೆಚ್ಚಿ ಪರಮೇಶ್ವರ ಪ್ರತ್ಯಕ್ಷನಾಗುತ್ತಾನೆ. ಈತನ ತಪಸ್ಸಿಗೆ ಮೆಚ್ಚಿ ಸಂಪತ್ತಿನ ಒಡತಿಯಾದ ಲಕ್ಷ್ಮಿಯನ್ನು ಕುಬೇರನ ವಶದಲ್ಲಿರುವಂತೆ ಅನುಗ್ರಹಿಸುತ್ತಾನೆ. ಮುಂದೆ ಕುಬೇರನ ಗೃಹದಲ್ಲಿ ಲಕ್ಷ್ಮೀ ಸದಾ ವಾಸಮಾಡುತ್ತಾಳೆ. ಈ ಕಾರಣಕ್ಕಾಗಿಯೇ, ಅಂದರೆ ಲಕ್ಷ್ಮಿಯ ಅನುಗ್ರಹ ಬೇಕಿದ್ದರೆ ಈ ಮಂತ್ರ ಪಠಣಮಾಡಿ ಅನುಗ್ರಹ ಪಡೆದುಕೊಳ್ಳಬೇಕು. ಕುಬೇರನ ಪ್ರಾರ್ಥನೆಯಿಂದ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ ಎಂದು ಈಶಾನ ಸಂಹಿತೆ ಹೇಳುತ್ತದೆ. 

’ಕೀರ್ತಿಶ್ಚ ಮಣಿನಾ ಸಹ’ ಎನ್ನುವ ಈ ಭಾಗದ ಕುರಿತಾಗಿ ಭಾಷ್ಯಕಾರರಲ್ಲಿ ಎರಡು ಅರ್ಥಗಳಿದ್ದು ಮಣಿ ಎನ್ನುವುದು ಸಂಪತ್ತೂ ಆಗಬಹುದು ಅಥವಾ ಕುಬೇರನ ಕೋಶಾಧ್ಯಕ್ಷನೂ ಆಗಬಹುದು. ಎರಡೂ ಭಾವ ಒಂದೇ. ಇನ್ನು ಕೀರ್ತಿ ಎನ್ನುವವಳು ಯಶಸ್ಸಿನ ಅಭಿಮಾನ ದೇವತೆ. ಕೀರ್ತಿ ಎನ್ನುವುದು ಯಶಸ್ಸಿನ ದೇವತೆ ಮಾತ್ರವಲ್ಲ ಲಕ್ಷ್ಮಿಯ ಒಂದು ಶಕ್ತಿಯ ವಿಧವೂ ಹೌದು ಆದುದರಿಂದಲೇ ’ಉಪೈತು ಮಾಂ’ ನನ್ನನ್ನು ಸಮೀಪಿಸಲಿ ಮತ್ತು ’ಕೀರ್ತಿಮೃದ್ಧಿಂ ದದಾತು ಮೇ’ ನನಗೆ ಯಶಸ್ಸು, ಕೀರ್ತಿ ಮತ್ತು ಇವೆರಡರ ಜೊತೆಗೆ ಸಂಪತ್ತು ಸಹ ದೊರಕಲಿ ಎನ್ನುವುದು ಋಷಿಯ ಕೋರಿಕೆ. ಈಗ ಸಹ ಈ ಪರಿಸ್ಥಿತಿ ಭಿನ್ನವಾಗಿಲ್ಲ ಅನ್ನಿಸುತ್ತದೆ. ಕೀರ್ತಿ ಮತ್ತು ಯಶಸ್ಸುಗಳೆಲ್ಲ ಶ್ರೀಮಂತರನ್ನೇ ಆಶ್ರಯಿಸುತ್ತವೆ. ಬಡವ ಇನ್ನೂ ಬಡವನಾಗುತ್ತಾ ಇರುತ್ತಾನೆ. ಯಶಸ್ಸು ಕೀರ್ತಿ ಎಲ್ಲ ದೂರದ ಮಾತಾಗಿರುತ್ತದೆ. ಇನ್ನು ಬಡತನವಿದ್ದೂ ಯಾವುದೋ ಕೀರ್ತಿಗಳಿಸಿಕೊಂಡರೂ ಅದು ನಗಣ್ಯವೆನ್ನಿಸಿಬಿಡುತ್ತದೆ. ಬಡವನನ್ನು ಕಂಡರೆ ಶ್ರೀಮಂತರು ಮಾತ್ರವಲ್ಲ ಬಂಧು ಬಾಂಧವರೆಲ್ಲ ದೂರ ಸರಿಯುತ್ತಾರೆ. ಆತನ ವಿದ್ಯೆ ಸಹ ಆತನ ಬಡತನ ನೀಗಿಸುವುದಿಲ್ಲ. ಬಡವನ ಮನೆಯ ಕುಬೇರ ಸಹ ಲಕ್ಷ್ಮೀರಹಿತನಾಗಿರುತ್ತಾನೆ. ಅದೇನೇ ಇರಲಿ ಈ ಮಂತ್ರದಂತೆ ರಾತ್ರಿಯಲ್ಲಿ ಈ ಋಕ್ಕಿನ ಪಠಣದಿಂದ ಅಷ್ಟೈಶ್ವರ್ಯಗಳ ಜೊತೆಗೆ ಸಿದ್ಧಿ ಋದ್ಧಿ ಉಂಟಾಗುತ್ತದಂತೆ. ಪ್ರಾದುರ್ಭೂತೋsಸ್ಮಿ ರಾಷ್ಟ್ರೇsಸ್ಮಿನ್! ಈ ಜನ್ಮ ಇಂತಹ ಉನ್ನತ ಧ್ಯೇಯ ಹೊಂದಿದ ರಾಷ್ಟ್ರದಲ್ಲಾಗಿದೆ. ಅದುವೇ ನಮ್ಮ ಭಾಗ್ಯ! ಅದುವೇ ಸಂಪತ್ತು.

#ದೇವಸಖಃ_ಕುಬೇರ 
ಸದ್ಯೋಜಾತರು

No comments:

Post a Comment

If you have any doubts. please let me know...