ಹಡಗೊಂದು ಬಿರುಗಾಳಿಗೆ ಸಿಲುಕಿ ನುಚ್ಚು ನೂರಾಗಿ ಇಬ್ಬರು ಮಿತ್ರರ ಹೊರತಾಗಿ ಉಳಿದವರೆಲ್ಲ ತಮ್ಮ ಪ್ರಾಣಗಳನ್ನು ಕಳೆದುಕೊಂಡರು. ಬದುಕುಳಿದ ಇಬ್ಬರು ಮಿತ್ರರು ಅದು ಹೇಗೋ ಈಜಿ ದ್ವೀಪವನ್ನು ಸೇರಿದರು.
ಮರಳ ರಾಶಿ, ಒಂದಷ್ಟು ಮುಳ್ಳು ಗಿಡಗಳ ಹೊರತಾಗಿ ಆ ದ್ವೀಪದಲ್ಲೇನೂ ಇರಲಿಲ್ಲ. ಬದುಕಿದೆಯಾ ಬಡ ಜೀವವೇ, ಇನ್ನು ಮುಂದೆ ದೇವರಿಟ್ಟ ಹಾಗಾಗುತ್ತದೆ. ಆ ಇಬ್ಬರು ಮಿತ್ರರು ಆ ದ್ವೀಪವನ್ನು ಸಮನಾಗಿ ತಮ್ಮಲ್ಲಿ ಹಂಚಿಕೊಂಡು ಸಮುದ್ರದ ಮೀನುಗಳನ್ನು ಹಿಡಿದು ಹಸಿ ಹಸಿಯಾಗಿ ತಿನ್ನುತ್ತ ವಾಸಿಸತೊಡಗಿದರು. ಇಬ್ಬರು ತಮ್ಮ ಬಿಡುಗಡೆಗಾಗಿ ದೇವರನ್ನು ಪ್ರಾರ್ಥಿಸುವುದನ್ನು ಮರೆಯಲಿಲ್ಲ.
ಮೊದಲ ಮಿತ್ರನ ಪ್ರಾರ್ಥನೆ ದೇವರನ್ನು ತಲುಪಿತು. ಮರುದಿನ ಒಂದು ಹಡಗಲ್ಲಿ ಅವನಿಗೆ ಒಂದಷ್ಟು ಆಹಾರ ಸಾಮಗ್ರಿಗಳು, ಬೇಯಿಸುವುದಕ್ಕೆ ಪಾತ್ರೆ ಪಗಡಿ, ತೊಡುವುದಕ್ಕೆ ಬಟ್ಟೆಗಳು ಬಂದವು. ಕೆಲ ದಿನದ ನಂತರ ಆತನಿಗೆ ಮದುವೆಯಾಗಬೇಕೆನಿಸಿತು. ಮರುದಿನ ಹಡಗಿನಲ್ಲಿ ಚಂದದ ಹುಡುಗಿಯೊಬ್ಬಳು ಬಂದಳು. ಅವರಿಬ್ಬರು ಮದುವೆಯಾದರು. ಅವನ ಇನ್ನೊಬ್ಬ ಮಿತ್ರನಿಗೆ ಹಸಿ ಮೀನುಗಳೇ ಗತಿ! ಈ ಮೊದಲ ಮಿತ್ರ ತನ್ನ ಇನ್ನೊಬ್ಬ ಗೆಳೆಯನ ಬಗ್ಗೆ ಏನೊಂದು ಯೋಚಿಸಲೇ ಇಲ್ಲ!
ಅವನ ಇನ್ನೊಬ್ಬ ಮಿತ್ರ ಬಹುದಿನಗಳಿಂದ ಆ ದ್ವೀಪದಲ್ಲೆಲ್ಲೂ ಕಾಣಿಸುತ್ತಿಲ್ಲ! ಹೋದರೆ ಹೋಗಲಿ, ಅವನ ಗೊಡವೆ ನನಗೇಕೆ ಎಂದ ಸುಖವಾಗಿದ್ದ ಮಿತ್ರ ತನ್ನ ಗೆಳೆಯನನ್ನು ಹುಡುಕುವ ಗೋಜಿಗೆ ಹೋಗಲಿಲ್ಲ. ಹೀಗಿರುತ್ತ ದೇವರ ದಯೆಯಿಂದ ಎಲ್ಲವನ್ನು ಪಡೆದ ಮಿತ್ರನಿಗೆ ದ್ವೀಪವಾಸ ಬೋರ್ ಅನಿಸತೊಡಗಿತು. ತಾನು ತನ್ನ ಹೆಂಡತಿ ಇಬ್ಬರೇ. ಅವಳ ಮುಖ ತಾನು ತನ್ನ ಮುಖ ಅವಳು ನೋಡುತ್ತ ಇರಬೇಕು. ಆತ ಮರಳಿ ಊರಿಗೆ ಹೊರಡಲು ನಿಶ್ಚಯಿಸಿದ, ತನ್ನ ಮಿತ್ರನಿಗೂ ತಿಳಿಸದೆ! ದೇವರ ಹತ್ತಿರ ದೋಣಿಯೊಂದನ್ನು ಬೇಡಿದ, ದೇವರು ದೋಣಿಯೊಂದನ್ನು ಕಳಿಸಿದ. ಇನ್ನೇನು ತಾನು ತನ್ನ ಹೆಂಡತಿಯೊಂದಿಗೆ ದೋಣಿಯೇರಬೇಕು..
ನಿಲ್ಲು ಅಶರೀರ ವಾಣಿ ಮೊಳಗಿತು.....
ಏನಪ್ಪಾ.. ಇಷ್ಟು ದಿನ ನಾನು ಕೊಟ್ಟುದರಲ್ಲಿ ಚೆನ್ನಾಗಿಯೇ ಬದುಕಿದೆ. ನಾನು ಕೊಟ್ಟುದರಲ್ಲಿ ನಿನ್ನ ಮಿತ್ರನಿಗೆ ನೀನೇನು ಕರೆದು ಕೊಟ್ಟಿಲ್ಲ. ಅವನನ್ನು ಹುಡುಕುವ ಪ್ರಯತ್ನವನ್ನೂ ಮಾಡಲಿಲ್ಲ. ಹೋಗಲಿ ಈಗ ಈ ದೋಣಿಯಲ್ಲಿ ಹೋಗುವಾಗಲಾದರೂ ಅವನನ್ನು ವಾಪಸ್ಸು ಕರೆದುಕೊಂಡು ಹೋಗಲು ನೀನು ಮನಸ್ಸು ಮಾಡಲಿಲ್ಲ. ಯಾಕೆ ಹೀಗೆ ಮಾಡಿದೆ?
ಅಯ್ಯೋ ... ಅವನಿಗಾಗಿ ನಾನೇಕೆ ಏನೆಲ್ಲ ಮಾಡಬೇಕು? ನನಗೆ ದೊರೆತದ್ದೆಲ್ಲ ನನ್ನ ಪ್ರಾರ್ಥನೆಯ ಫಲ!
ದೇವರೆಂದ, ಅಯ್ಯೋ ಮಂಕೆ..ಇದು ನಿನ್ನ ಪ್ರಾರ್ಥನೆಯ ಫಲ ಮಾತ್ರ ಅಲ್ಲ, ಅವನ ಪ್ರಾರ್ಥನೆಯದೂ ಕೂಡ.
ದೇವರೆಂದ..ಅವನು ತನಗಾಗಿ ಏನೊಂದು ಬೇಡದೆ ನಿನ್ನ ಒಳಿತಾಗಲೆಂದು ನನ್ನಲ್ಲಿ ದಿನವೂ ಪ್ರಾರ್ಥಿಸುತ್ತಿದ್ದ. ಅವನ ಶುಭ ಹಾರೈಕೆಯ ಫಲದಿಂದ ನೀನು ಈ ದ್ವೀಪದಲ್ಲಿ ಸುಖವಾಗಿದ್ದೆ. ನಿನಗಾಗಿ ಅಂತಹ ಒಳ್ಳೆಯ ಪ್ರಾರ್ಥನೆಯನ್ನು ಮಾಡಿದ ಅವನನ್ನು ನಾನು ಮರೆತೆನೆಂದು ಕೊಂಡೆಯಾ? ಖಂಡಿತ ಇಲ್ಲ. ಅವನಿಗೆ ಹಸಿವೆಯೇ ಆಗದಂತಹ, ತನ್ನ ತೋಳ್ಬಲದಿಂದ ಈ ಸಮುದ್ರವನ್ನು ಈಜಿ ದಾಟಿ ಅವನ ಊರನ್ನು ಸೇರುವ ಶಕ್ತಿಯನ್ನು ಕೊಟ್ಟಿದ್ದೆ. ಅವನು ಬಹಳ ಹಿಂದೆಯೇ ತನ್ನ ಊರನ್ನು ಸೇರಿ ತನ್ನ ಕುಟುಂದೊಂದಿಗೆ ಹಾಯಾಗಿದ್ದಾನೆ! ಅವನು ಈಗಲೂ ನೀನು ಸುರಕ್ಷಿತವಾಗಿ ಬಂದು ಅವನನ್ನು ಸೇರಬೇಕು ಎಂದು ನನ್ನಲ್ಲಿ ದಿನವೂ ಪ್ರಾರ್ಥಿಸುತ್ತಿದ್ದಾನೆ.
ಕೃತಘ್ನನಾದ ಗೆಳೆಯ ದೇವರಲ್ಲಿ ಕ್ಷಮೆ ಬೇಡಿ ಊರನ್ನು ಸೇರಿ ತನ್ನ ಗೆಳೆಯನೊಂದಿಗೆ ಸಂತೋಷದಿಂದ ಬದುಕಿದ.
ನೀತಿ : ನಮ್ಮ ಜೀವನ ರೂಪುಗೊಳ್ಳುವುದು ನಮ್ಮ ಪ್ರಾರ್ಥನೆಯಿಂದ ಮಾತ್ರ ಎಂಬ ಅಹಂಕಾರವನ್ನು ಬಿಟ್ಟು ಬಿಡೋಣ. ಅದರಲ್ಲಿ ನಮ್ಮ ಬಂಧುವರ್ಗ ಮತ್ತು ಗೆಳೆಯರ ಹಾರೈಕೆಗಳೂ ಇರುತ್ತವೆ.
No comments:
Post a Comment
If you have any doubts. please let me know...