August 18, 2021

"ದೇವರು ಎಲ್ಲಿ ವಾಸಿಸುತ್ತಾನೆ"?

#ನಮ್ಮೊಳಗಿನ “ನಾನು” ಯಾರು? ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ನಮ್ಮ ದೇಹ, ವಿದ್ಯೆ, ಉದ್ಯೋಗ, ಇನ್ನಾವುದೋ ವಿಶೇಷತೆಗಳಿಂದ ಗುರುತಿಸಿಕೊಳ್ಳುತ್ತಿದ್ದೇವೆಯೇ ಹೊರತು ಅದರಿಂದಾಚೆಗೆ ನಾನು ಎಂದರೆ ಯಾರು? ಏನು? ಎಂಬುದು ಉತ್ತರವಿಲ್ಲದ ಪ್ರಶ್ನೆ.
    #ದೇಹಮಾತ್ರವೇ ನಮಗೆ ನಾನು ಎಂಬುದರ ರೂಪವಾಗಿ ಹೊರಗಣ್ಣಿಗೆ ಕಾಣುತ್ತಿರುತ್ತದೆ. ಆದರೆ ನಮ್ಮ ಆತ್ಮವು ಏನು? ಎಲ್ಲಿಂದ ಬಂದುದು? ಎಂಬುದಕ್ಕೆ ಕಾರಣವಾಗಿ ನಾವು ಕಂಡುಕೊಂಡಿದ್ದು ದೇವರು. ಎಲ್ಲವನ್ನೂ ನಿಯಂತ್ರಿಸುವ ಶಕ್ತಿಯಾದ ಈ ನಿರಾಕಾರ, ನಿರ್ಮಲವಾದ ಪರಮಾತ್ಮ ಎಲ್ಲಿ ನೆಲೆಸುತ್ತಾನೆ? ಎಂಬ ಪ್ರಶ್ನೆಗೆ ಶ್ವೇತಾಶ್ವತರ ಉಪನಿಷತ್ತಿನಲ್ಲಿದೆ.
 
 *ನವದ್ವಾರೇ ಪುರೇ ದೇಹೀ ಹಂಸೋ ಲೇಲಾಯತೇ ಬಹಿಃ, ವಶೀ ಸರ್ವಸ್ಯ ಲೋಕಸ್ಯ ಸ್ಥಾವರಸ್ಯ ಚರಸ್ಯ ಚ || (೩. ೧೮)*

1) ಜೀವಿಯ ದೇಹದಲ್ಲಿಯೇ ದೇವರು ವಾಸಿಸುತ್ತಾನೆ. ಈ ದೇವತ್ತೊಮ ಅಥವಾ ಪರಮಪುರುಷನು ಜೀವಿಗಳ ದೇಹದಲ್ಲಿದ್ದುಕೊಂಡೇ ವಿಶ್ವವನ್ನು ನಿಯಂತ್ರಿಸುತ್ತಾನೆ. ನವದ್ವಾರಗಳುಳ್ಳ ಶರೀರವೆಂಬ ಪುರದಲ್ಲಿ ದೇವರು ಇದ್ದುಕೊಂಡೇ ಹೊರಗೆಲ್ಲ ಚಲಿಸುತ್ತಾನೆ ಎಂಬುದು ಶ್ವೇತಾಶ್ವತರೋಪನಿಷತ್ತಿನಲ್ಲಿದೆ.

2)ಈ ದೇವನು ಕೈಕಾಲುಗಳಿಲ್ಲದವನು ಆದರೆ ವೇಗವಾಗಿ ಚಲಿಸುವವನೂ ಕೈಗಳಿಲ್ಲದಿದ್ದರೂ ಎಲ್ಲವನ್ನೂ ಪಡೆಯುವವನೂ ಕಣ್ಣುಗಳಿಲ್ಲದೆಯೂ ನೋಡಬಲ್ಲವನೂ ಕಿವಿಗಳಿಲ್ಲದೆಯೂ ಕೇಳಬಲ್ಲವನೂ ಮನಸ್ಸಿಲ್ಲದೆಯೂ ಎಲ್ಲವನ್ನೂ ಅರಿಯಬಲ್ಲವನೂ ಆಗಿದ್ದಾನೆಂದು ಮುಂದಿನ ಶ್ಲೋಕದಲ್ಲಿ ಈ ಉಪನಿಷತ್ತಿನಲ್ಲಿ ವಿವರಿಸಲಾಗಿದೆ.

3)ಇಂತವನನ್ನು ಅರಿಯಬಲ್ಲವರು ಯಾರೂ ಇಲ್ಲ. ಹಾಗಾಗಿ ದೇವನು ಸರ್ವಕಾರಣನಾದ ಪರಿಪೂರ್ಣ ಸ್ವರೂಪನು ಮಹಾಂತನು ಎಂದು ಋಷಿಗಳು ಹೇಳುತ್ತಾರೆ.

3) ಭಗವದ್ಗೀತೆಯ ಐದನೆಯ ಅಧ್ಯಾಯದಲ್ಲಿ ಇಂತಹ ದೇವನು ನೆಲೆಯಿರುವ ನಮ್ಮ ದೇಹ ಮತ್ತು ಮನಸ್ಸು ಪರಿಶುದ್ಧವಾಗಿರಬೇಕು ಎಂದು ಹೇಳಲಾಗಿದೆ. ಕರ್ಮಫಲಗಳಿಗೆ ಮಾರುಹೋಗುವವನು ತೊಡಕಿನಲ್ಲಿ ಸಿಲುಕಿಕೊಳ್ಳುತ್ತಾನೆ. ಕರ್ಮಫಲಗಳನ್ನು ಯೋಚಿಸದೆ ಒಂದೇ ರೀತಿಯಾದ ನಿಷ್ಠೆಯಿಂದಿರುವವನ ಆತ್ಮ ಪರಿಶುದ್ಧವಾದ ಶಾಂತಿಯನ್ನು ಹೊಂದಲು ಸಾಧ್ಯ.
  ಸರ್ವಕರ್ಮಾಣಿ ಮನಸಾ ಸನ್ನ್ಯಸ್ಯಾಸ್ತೇ ಸುಖಂ ವಶೀ, ನವದ್ವಾರೇ ಪುರೇ ದೇಹೀ ನೈವ ಕುರ್ವನ್ನ ಕಾರಯನ್ ||೧೩||ಅಧ್ಯಾಯ ೫||

* ದೇಹಸ್ಥ ಜೀವಿಯು ತನ್ನ ಸ್ವಭಾವಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಮಾನಸಿಕವಾಗಿ ಎಲ್ಲ ಕರ್ಮಗಳನ್ನೂ ತ್ಯಜಿಸಿದಾಗ ಅವನು ನವದ್ವಾರಗಳ ನಗರದಲ್ಲಿ ಸುಖವಾಗಿ ವಾಸಿಸುತ್ತಾನೆ. ಅವನು ಕಾರ್ಯಗಳನ್ನು ಮಾಡಿಸುವುದೂ ಇಲ್ಲ, ಮಾಡುವುದೂ ಇಲ್ಲ ಎಂದು ಗೀತೆ ಹೇಳುತ್ತದೆ.

*ನವದ್ವಾರಗಳಿಂದಲೇ ನಮ್ಮ ದೇಹ ನಿರ್ಮಿತವಾಗಿದೆ. ಎರಡು ಕಣ್ಣುಗಳು, ಎರಡು ಕಿವಿಗಳು, ಎರಡು ಮೂಗಿನ ಹೊಳ್ಳೆಗಳು, ಒಂದು ಬಾಯಿ, ಗುದದ್ವಾರ ಮತ್ತು ಜನನೇಂದ್ರಿಯ ಇವೇ ದೇಹದ ನವರಂಧ್ರಗಳು. ಇವುಗಳನ್ನೇ ಪುರವನ್ನಾಗಿಸಿಕೊಂಡು ದೇವರು ವಾಸಿಸುತ್ತಾನೆ.

*ಇವೆಲ್ಲವುಗಳ ನಿಯಂತ್ರಣವೇ ಉತ್ತಮ ಸ್ವಭಾವಕ್ಕೆ ಕಾರಣವಾಗುತ್ತದೆ. ಮನುಷ್ಯನು ಈ ನವರಂಧ್ರಗಳಿರವುದರಿಂದಲೇ ಬದುಕುತ್ತಿದ್ದಾನೆ. ಈ 

*ನವದ್ವಾರಗಳನ್ನು ಮೊದಲು ಪರಿಶುದ್ಧವಾಗಿಡಬೇಕೆಂಬುದು ಇದರ ಮತಿತಾರ್ಥ.
ನವದ್ವಾರಗಳೂ ದೇವರ ವಾಸಸ್ಥಾನವಾದ್ದರಿಂದ ನಾವು ನೋಡುವ, ಕೇಳುವ ಸಂಗತಿಗಳು ಉತ್ತಮವಾದುದೇ ಆಗಿರಬೇಕು. ಸೇವಿಸುವ ಆಹಾರಗಳು ದೇಹವನ್ನು ಸಮಸ್ಥಿತಿಯಲ್ಲಿ ಇಡುವಂತಿರಬೇಕು. ಮೂಗು ಹುಡುಕಿದ ಪರಿಮಳವನ್ನು ಅರಸಿಕೊಂಡು ಕಣ್ಣು ಹೋಗುತ್ತದೆ. ಅದು ಒಳ್ಳೆಯದೇ ಆಗಿದ್ದರೆ ಒಳಿಯಾಗುತ್ತದೆ. ಇಲ್ಲವೆಂದಾದಲ್ಲಿ ಕೆಟ್ಟದಾಗುತ್ತದೆ.

*ಹಾಗಾಗಿ ಪರಿಮಳವನ್ನೂ ಪರಂಬರಿಸುವ ಯುಕ್ತಿ ನಮ್ಮಲ್ಲಿರಬೇಕು. ದೇಹದ ಪರಿಶುದ್ಧತೆಯಿಂದ ಆತ್ಮವೂ ಶುದ್ಧವಾಗಿ ಶಾಂತಿಯನ್ನು ಹೊಂದುತ್ತದೆ. ದೇವರು ವಾಸಿಸುವ ದೇಹ ದೇವರ ಗುಡಿ. ಈ ಗುಡಿಯನ್ನು ಶುದ್ಧವಾಗಿಟ್ಟುಕೊಳ್ಳುವುದು ನಮ್ಮ ಗುರಿಯಾಗಬೇಕು. ನಮ್ಮೊಳಗಿನ ದೇವರನ್ನು ನಾವು ಕಂಡುಕೊಂಡಾಗ ಸಿಗುವ ಆನಂದವೇ ದೈವತ್ವ.
 
 ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)

No comments:

Post a Comment

If you have any doubts. please let me know...