ಯಜ್ಞ ಎಂದಾಕ್ಷಣ ಅದರಲ್ಲಿ ಬಲಿಯನ್ನು ಕಲ್ಪಿಸಿಕೊಂಡು ಹಿಂದಿನ ನಮ್ಮವರೆಲ್ಲಾ ಪ್ರಾಣಿ ಹಿಂಸಕರಾಗಿದ್ದರು ಮತ್ತು ಮಾಂಸಾಹಾರ ಸಾಮಾನ್ಯವಾಗಿತ್ತು ಎನ್ನುವ ಮಂದಿಗೆ ಕೆಲವೊಂದು ಮಂತ್ರಗಳ ಹಿನ್ನೆಲೆ ತಿಳಿದಿರಬೇಕು ಮತ್ತು ಒಂದು ಸೂಕ್ತದ ಎಲ್ಲಾ ಮಂತ್ರಗಳನ್ನು ನೋಡಿ ಮಾತನಾಡಬೇಕು ಎನ್ನುವ ಪರಿಜ್ಞಾನ ಕಡಿಮೆ ಇರುತ್ತದೆ. ಯಜ್ಞ ನಡೆಯುತ್ತದೆ ಎಂದರೆ ಯೂಪ ನೆಡುತ್ತಾರೆ ಅದು ಬಲಿ ಪೀಠ ಎನ್ನುವುದು ಕಲ್ಪನೆ ಅಷ್ಟೆ. ಈಗ ಒಂದು ಮಂತ್ರ ಗಮನಿಸುವೆ. . . .
ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್ |
ತೇ ಹ ನಾಕಂ ಮಹಿಮಾನಃ ಸಚಂತ ಯತ್ರ ಪೂರ್ವೇ ಸಾಧ್ಯಾಃ ಸಂತಿ ದೇವಾಃ ||
ಯಜ್ಞವನ್ನು ಮಾಡುವವರು ಯಜ್ಞದಿಂದಲೇ ಯಜ್ಞವನ್ನು ಮಾಡಿದರು. ಯಜ್ಞವನ್ನು ಯಜ್ಞದಿಂದಲೇ ಮಾಡಿದ ಕರ್ಮವು ಅತ್ಯಂತ ಶ್ರೇಷ್ಠವಾಗಿದ್ದವು. ಅದಕ್ಕಿಂತ ಹಿಂದಿನವರು ಮತ್ತು ಹಿಂದೆ ಮಾಡಿದ ಯಾಗದಲ್ಲಿ ಬಳಸಿದ ಯಜ್ಞ ಸಾಧನಗಳನ್ನು ಹೊಂದಿದವರೂ ಮತ್ತು ದೇವತ್ವವನ್ನು ಪಡೆದವರೂ ಜೊತೆ ಸೇರಿ ಸ್ವರ್ಗವನ್ನು ಅನುಭವಿಸಿದರು. ಈ ಯಾಗದ ಯಜಮಾನರೂ ಸಹ ತಮ್ಮ ಸಾಮರ್ಥ್ಯದಿಂದ ಸ್ವರ್ಗವನ್ನು ಅನುಭವಿಸುತ್ತಾರೆ.
ಇದು ಸಾಮಾನ್ಯವಾಗಿ ದಿನವೂ ನಾವು ಹೇಳುವ ಮಂತ್ರದ ಒಂದು ಭಾಗ. ಸಾಮಾನ್ಯವಾಗಿ ಈ ಮಂತ್ರ ಮತ್ತು ತೈತ್ತೀರೀಯ ಆರಣ್ಯಕ(೧:೩೧:೬)ದ ರಾಜಾಧಿ ರಾಜಾಯ. . . ಎನ್ನುವ ಮಂತ್ರಗಳು ಪ್ರಮುಖವಾಗಿ ನಾವು ಬದುಕುತ್ತಿರುವ ಈ ರಾಷ್ಟ್ರ ಮತ್ತು ನಮ್ಮ ವಯಕ್ತಿಕ ಬದುಕಿನ ದಾರಿದ್ರ್ಯ ನಿವಾರಣೆ ಮಾಡುತ್ತವೆ ಎನ್ನುವ ನಂಬುಗೆಯೂ ಅನೇಕರಲ್ಲಿದೆ. ಅದೇನೇ ಇರಲಿ ನನ್ನ ವಿಷಯ ಅದಲ್ಲ, ಇಲ್ಲಿರುವ ಯಜ್ಞಮಯಜಂತ ದೇವಾಃ ಎನ್ನುವುದು. ಅಗ್ನೇರೇವ ಮೂರ್ತಿಭೇದೇನ ದೇವತ್ವಂ ಚ ಪಶುತ್ವಂ ಚ ದೃಷ್ಟವ್ಯಂ ಎನ್ನುವುದಾಗಿ ಸಾಯಣಾಚಾರ್ಯರು ಹೇಳುತ್ತಾರೆ. ಅಂದರೆ ಅಗ್ನಿಯನ್ನೆ ದೇವರೆಂದೂ, ಪಶುಗಳೆಂದು ತಿಳಿಯಬೇಕು ಎನ್ನುತ್ತಾರೆ. ಇಲ್ಲಿ ದೇವಾಃ ಎನ್ನುವುದು ಅಗ್ನಿಯನ್ನು ಕುರಿತಾಗಿಯೂ ಮತ್ತು ಯಜಮಾನರನ್ನು ಕುರಿತಾಗಿಯೂ ಆಗಬಹುದು.
ಇನ್ನು ತ ಏತೇ ಸರ್ವೇ ಪಶವೋ ಯದಗ್ನಿಃ | ತಸ್ಮಾದಗ್ನೌ ಪಶವೋ ರಮಂತೇ ಶತಪಥ ಬ್ರಾಹ್ಮಣದಲ್ಲಿ ಬರುವ ಈ ಮಂತ್ರ ಅಗ್ನಿಯೇ ಆಹುತಿಯಾಗಿರುವ ಪಶುಗಳು. ಪಶುಗಳೆಲ್ಲಊ ಅಗ್ನಿಯ ಸಮೀಪದಲ್ಲಿರಲು ಸಂತೋಷ ಪಡುತ್ತವೆ ಆದುದರಿಂದ ಅಗ್ನಿ ಇರುವಲ್ಲಿ ಪಶು ಸಂಪತ್ತು ಯಥೇಚ್ಛವಾಗಿ ಒದಗಿ ಬರುವುದು ಎನ್ನುವಲ್ಲಿ ಪಶುಗಳೆಂದರೆ ಅಗ್ನಿ ಎನ್ನುವುದನ್ನು ಕಟ್ಟಿಕೊಡಲಾಗಿದೆ. ಹೀಗೇ ಪ್ರಜಾಪತಿಯೂ ಸಹ ಅಗ್ನಿಯ ಇನ್ನೊಂದು ರೂಪ ಎನ್ನಲಾಗಿದೆ. ಅಂದರೆ ಪಶುಯಾಗ ಅಥವಾ ಪಶುವಿಧಿ ಎನ್ನುವುದು ಸಾಮಾನ್ಯವಾದ ಯಜ್ಞಕ್ಕೂ ಹೇಳಬಹುದಾಗಿದೆ. ಅಲ್ಲಿ ಪಶುಬಲಿ ಮಾಡಲೇ ಬೇಕೆನ್ನುವ ಅರ್ಥವಲ್ಲ. ಈ ರೀತಿ ಅಗ್ನಿಯನ್ನೇ ಪಶುವೆಂದು ತಿಳಿಯುವ ಯಜ್ಞಾಚರಣೆಯೇ ತಾನಿ ಧರ್ಮಾಣಿ ಪ್ರಥಮಾನ್ಯಾಸನ್ ಆ ರೀತಿಯ ಕರ್ಮಗಳೇ ಅತ್ಯಂತ ಶ್ರೇಷ್ಠವಾದವುಗಳಾಗಿದ್ದವು ಎನ್ನುವಲ್ಲಿ ಯಜ್ಞದಲ್ಲಿನ ಪಶುಬಲಿಯ ವಿವರಣೆ ಅತ್ಯಂತ ಸಮಂಜಸವಾಗಿಯೇ ಕಾಣುತ್ತದೆ.
No comments:
Post a Comment
If you have any doubts. please let me know...