August 19, 2021

ಗಾಯತ್ರೀ ಮಂತ್ರ



ಇದು  ಗಾಯತ್ರೀ ಹಬ್ಬದ  ಸಂದರ್ಭ.  ‘ವೇದಾನಾಂ ಮಾತಾ ಅಮೃತಸ್ಯ ನಾಭಿಹ್”, ‘ಗಾಯತ್ರಿಂ ಛಂದಸಾಂ ಮಾತಾ”, “ಗಾಯತ್ರಿ ಸರ್ವಾಣಿ ಸವನಾನಿ ವಹತಿ” ಮುಂತಾದ ವೇದಗಳಲ್ಲಿ ಉಲ್ಲೇಖಿತ ವಾಕ್ಯಗಳು “ದೇವೀ ಗಾಯತ್ರಿ ಮಾತೆ”ಯನ್ನು ವೇದಮಾತೆ ಎಂದು ಸ್ಪಷ್ಟೀಕರಿಸುತ್ತದೆ.  ಭಗವದ್ಗೀತೆಯಲ್ಲಿ, ಭಗವಾನ್ ಕೃಷ್ಣರು “ಗಾಯತ್ರಿಂ ಛಂದಸಾಂ ಅಹಂ” – ಅಂದರೆ “ಮಂತ್ರಗಳಲ್ಲಿ ನಾನು ಗಾಯತ್ರೀ ಮಂತ್ರ” ಎಂದು ಹೇಳುತ್ತಾರೆ.  

ವೇದ ಪುರಾಣಗಳಲ್ಲಿ ಬಣ್ಣಿಸಿರುವಂತೆ ಗಾಯತ್ರೀ ಮಂತ್ರದ ಉದ್ಘಾರದಿಂದ ನಾವು ಪಾಪಗಳೆಂದು ಎಣಿಸುವ ಸಕಲ  ಬಂಧನಗಳಿಂದ ಮುಕ್ತತೆ ಒದಗುತ್ತದೆ.  ಪರಾಶರ ಸ್ಮೃತಿಯಲ್ಲಿನ  “ಗಾಯತ್ರೀ ಜಪಕ್ರಿದ್ಭವತ್ಯ ಸರ್ವಪಾಪಾಯ ಪ್ರಮುಚ್ಯತೆ”, ಭವಿಷ್ಯ ಪುರಾಣದಲ್ಲಿನ “ಸರ್ವಪಾಪಾಣಿ ನಾಶ್ಯಂತಿ ಗಾಯತ್ರೀ ಜಪತೋ ನ್ರಿಪ್” ಮುಂತಾದ ಹಲವಾರು ಪುರಾಣಗಳ ಉಲ್ಲೇಖಗಳು ನಾವು “ಗಾಯತ್ರೀ ಮಂತ್ರದ” ಜಪದ ಸಹಾಯದಿಂದ  ನಮ್ಮ ಮಾನಸಿಕ ಬಂಧನಗಳೆಂಬ ಪಾಪಗಳಿಂದ ಮುಕ್ತರಾಗಬಹುದು   ಎಂಬುದನ್ನು ನಿರೂಪಿಸುತ್ತದೆ.

ಮಂತ್ರಗಳೆಂದರೆ ಸಂಸ್ಕೃತದಲ್ಲಿ “ಮನನಾತ್ ತ್ರಾಯತೇ ಇತಿ ಮಂತ್ರಹ” ಅಂದರೆ “ಯಾವುದು, ತನ್ನನ್ನು   ಪುನರುಚ್ಚಾರ ಮಾಡುವುದರಿಂದ  ನಮ್ಮನ್ನು ಕಾಪಾಡುತ್ತದೋ ಅದೇ ಮಂತ್ರ”.  ಗಾಯತ್ರೀ ಮಂತ್ರದ ಬಗ್ಗೆ “ಗಾಯಂತಂ ತ್ರಾಯತೇ ಇತಿ ಗಾಯತ್ರೀ” ಅಂದರೆ “ಇದನ್ನು ಹಾಡುವುದರಿಂದ ನಮಗೆ ರಕ್ಷೆ ಸಿಗುತ್ತದೆ” ಎಂಬ ಉಲ್ಲೇಖಗಳಿವೆ.  ಹಾಡುವುದು ಎಂದರೆ ಸಂತಸದಿಂದ ಅನುಭಾವಿಸಬೇಕು ಎಂಬ ಮಾತೂ ಕೂಡಾ ಆಗುತ್ತದೆ.  ನಾವು ಸಂಗೀತವನ್ನು ಕೇಳಿ ಆನಂದಿಸುತ್ತೇವೆ.  ಜೊತೆಗೆ ಅದನ್ನು ಅನುಭಾವಿಸುತ್ತೇವೆ.  ಅಂತೆಯೇ ಗಾಯತ್ರೀ ಮಂತ್ರವನ್ನು ಸಂತಸದಿಂದ ಆನಂದಿಸಿ ನಂತರ ಪ್ರಶಾಂತವಾದ ಅನುಭಾವಕ್ಕಿಳಿಯಬಹುದು.  

ಇದನ್ನು ಸ್ತ್ರೀಯರು ಹಾಡಬಾರದು, ಕೇವಲ ಹಿಂದೂಗಳು ಮಾತ್ರ ಹಾಡಬೇಕು ಎಂಬ ಯಾವುದೇ ನಿರ್ಬಂಧಗಳೂ ಇಲ್ಲ.

ॐ भूर्भुवः॒ स्वः ।
तत्स॑वितुर्वरे॑ण्यं ।
भ॒र्गो॑ दे॒वस्य॑ धीमहि। ।
धियो॒ यो नः॑ प्रचो॒दया॑त्॥ 

ಓಂ ಭೂರ್ಭುವಸ್ಸುವಃ,
ತತ್ ಸವಿತುರ್ ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ,
ಧಿಯೋ ಯೋ ನಃ ಪ್ರಚೋದಯಾತ್

ಈ ಮಂತ್ರದ ಪ್ರಾಥಮಿಕ ಅರ್ಥ ಹೀಗಿದೆ:

“ನಾನು ಭೂಮಿ, ಆಕಾಶ, ಅಂತರಿಕ್ಷಗಳೆಂಬ ನೆಲೆಗಳನ್ನೂ,  ಆಧ್ಯಾತ್ಮಿಕ ಸಮತೋಲನದ ನೆಲೆಯನ್ನೂ, ಮಾನವನ ಅಧ್ಯಾತ್ಮ  ಜ್ಞಾನದ ನೆಲೆಯನ್ನೂ , ಸಕಲ ಬಂಧನಗಳಿಂದ ಮುಕ್ತವಾದ ಭಾವದ ನೆಲೆಯನ್ನೂ, ಪರಿಪೂರ್ಣವಾದ ಸತ್ಯವೆಂಬ ನೆಲೆಯನ್ನೂ ಆವಾಹಿಸುತ್ತಿದ್ದೇನೆ.  ಎಲ್ಲಾ ದಿವ್ಯತೆಗಳಲ್ಲಿಯೂ ಶ್ರೇಷ್ಠವಾದ “ಓ, ಅಧ್ಯಾತ್ಮದ ಬೆಳಕೇ, ನಾವು ನಿಮ್ಮನ್ನು ಧ್ಯಾನಿಸುತ್ತಿದ್ದೇವೆ.  ನಮ್ಮ ಮನಗಳನ್ನು ಪ್ರಕಾಶಗೊಳಿಸು” 

ಈ ಮಂತ್ರದ ಉಚ್ಚಾರದಿಂದ ನಮ್ಮ ದೇಹದಲ್ಲಿರುವ ಏಳೂ ಚಕ್ರಗಳಲ್ಲಿಯೂ  ತೇಜಸ್ಸು ಉತ್ಪನ್ನಗೊಂಡು ಆ ತೇಜಸ್ಸನ್ನು ಆಧ್ಯಾತ್ಮಿಕವಾದ ತೇಜದಲ್ಲಿ ಸಮ್ಮಿಲನಗೊಳಿಸುತ್ತದೆ.  ಜೊತೆಗೆ ನಮ್ಮ ಮನಸ್ಸು, ಹೃದಯ ಮತ್ತು ಆತ್ಮಗಳನ್ನು ಲೋಕದ ಸೃಷ್ಠಿಗೆ ಮೂಲಭೂತವಾದ ದಿವ್ಯತೆಯ ಬೆಳಕಿನೊಂದಿಗೆ ಒಂದುಗೊಳಿಸುತ್ತದೆ.

ಕನ್ನಡದ ಹಿರಿಯರಾದ ಮಾಸ್ತಿಯವರು ತಮ್ಮ ಕವಿತೆಯಲ್ಲಿ ಈ ಭಾವವನ್ನು ಹೀಗೆ ಕಟ್ಟಿಕೊಟ್ಟಿದ್ದಾರೆ:

ಬಾ ಸವಿತಾ ಬಾ ಸವಿತಾ ಬಾ ಸವಿತಾ

ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ
ತಿಳಿವಿಗೆ ಬಣ್ಣವ ಹಚ್ಚಿಸಿ ಒಮ್ಮೆ
ಒಳಿತಲ್ಲದುದೆ ಒಳಿತೆಂಬುದರ
ಚಳಕವೆಲ್ಲಕೆ ವಿನಾಶವ ತಾ

ಬಾ ಸವಿತಾ ಬಾ ಸವಿತಾ ಬಾ ಸವಿತಾ

ನೆಲೆಯಿಂದ ಹೊರಟು ಅಲೆ ಅಲೆ ಅಲೆ ಅಲೆ
ಛಲ ತೊಟ್ಟ ಮಲ್ಲ ವಾಹಿನಿ ಬಾ
ನಿಲವಿಲ್ಲಾ ಜಗದಿ ಕತ್ತಲೆಗೆಂದು
ಗೆಲವನು ಸಾರುವ ಭಾಸವ ತಾ

ಬಾ ಸವಿತಾ ಬಾ ಸವಿತಾ ಬಾ ಸವಿತಾ

ಓಂ ತತ್ ಸವಿತುರ್ವರೇಣ್ಯವೆಂದೆವು
ಅಂತಲ್ಲದೆ ಬೇರೇನನು ನಂಬೆವು
ಪಂಥವ ಬೆಳಗಿಸಿ ನಿರೂಪಿಸಿ ಕಾಂಬೆವು
ಶಾಂತ ಸುಂದರ ಶಿವದಾ ಸವಿತಾ

ಬಾ ಸವಿತಾ ಬಾ ಸವಿತಾ ಬಾ ಸವಿತಾ ಬಾ ಸವಿತಾ

ಸರ್ವರಿಗೂ ಈ ದಿವ್ಯತೆಯ ಬೆಳಕು ಲಭಿಸಲಿ.  ಈ ಲೋಕ ಸಕಲ ಜ್ಞಾನ ಸುಖ ಶಾಂತಿ ನೆಮ್ಮದಿಗಳಿಂದ ಈ ಬೆಳಕಿನಲ್ಲಿ ಸಮ್ಮಿಳಿತಗೊಂಡಿರಲಿ.

'ಕನ್ನಡ  ಸಂಪದ

No comments:

Post a Comment

If you have any doubts. please let me know...