August 10, 2021

ತೇ ಹ ನಾಕಂ ಮಹಿಮಾನಃ

  ತಿಸ್ರಃ ಪೃಥಿವೀರುಪರಿ ಪ್ರವಾ ದಿವೋ ನಾಕಂ ರಕ್ಷೇಥೇ ದ್ಯುಭಿರಕ್ತುಭಿರ್ಹಿತಂ ||
ಅಂಗೀರಸನ ಮಗ ಹಿರಣ್ಯಸ್ತೂಪನು ಅಶ್ವಿನೀ ದೇವತೆಗಳನ್ನು ಕುರಿತು ಮೂರು ಲೋಕಗಳಲ್ಲು ಸಂಚರಿಸುತ್ತಾ ಹಗಲು ರಾತ್ರಿಗಳಾಗುವಂತೆ ಮಾಡಲು ನಿಯಮಿಸಲ್ಪಟ್ಟ ಸೂರ್ಯನನ್ನು ನೀವು ಸಲಹುತ್ತೀರಿ. ಅಂತಹ ನಿಮಗೆ ನಾನು ಗಂಗಾ ಮೊದಲಾದ ಸಪ್ತ ನದಿಗಳ ಪುಣ್ಯೋದಕದಿಂದ ಸೇವೆ ಮಾಡುತ್ತಿರುವೆನು ಎನ್ನುತ್ತಾನೆ. ಇಲ್ಲಿ ಸೂರ್ಯನನ್ನು ನಾಕ ಎನ್ನುವ ಹೆಸರಿನಿಂದ ಕರೆದಿರುವುದು ಕಂಡುಬರುತ್ತದೆ. ದಿವೋ ನಾಕಂ ಎನ್ನುವ ಪದವನ್ನು ಗಮನಿಸಿದರೆ ಸ್ವರ್ಗದ ಕಟ್ಟಕಡೆಯ ತುದಿ ಎನ್ನುವ ಅರ್ಥ. ಅಂತರಿಕ್ಷದ ಪರಮೋಚ್ಚ ಪ್ರದೇಶ.

ನಿರುಕ್ತಕಾರ ಯಾಸ್ಕ ಮಹರ್ಷಿಗಳು 'ನಾಕಃ ಆದಿತ್ಯೋ ಭವತಿ' ಎನ್ನುವುದಾಗಿ ನಿರ್ಣಯಿಸಿ ಸೂರ್ಯನೆನ್ನುವ ಅರ್ಥವನ್ನೂ ಕೊಟ್ಟಿದ್ದಾರೆ.
ಕಣ್ವ ಮಹರ್ಷಿಯ ಮಗ ಮೇಧಾತಿಥಿಯು ಋಗ್ವೇದದ ಒಂದನೇ ಮಂಡಲದ ೧೯ನೇ ಸೂಕ್ತದಲ್ಲಿ 
ಯೇ ನಾಕಸ್ಯಾಧಿ ರೋಚನೇ ದಿವಿ ದೇವಾಸ ಆಸತೇ |
ಮರುದ್ಭಿರಗ್ನ ಆ ಗಹಿ || 
ಇಲ್ಲಿ ಮೇಧಾತಿಥಿ ಅಗ್ನಿಯನ್ನು ಕುರಿತು ಹೇಳುತ್ತಾ, ಸೂರ್ಯಮಂಡಲದಲ್ಲಿ ಯಾವತ್ತೂ ದುಃಖವೇ ಆಗುವುದಿಲ್ಲ ಅಂತಹ ಪ್ರಕಾಶಮಾನವಾದ ಪ್ರದೇಶಕ್ಕಿಂತಲೂ ಮೇಲೆ ಸ್ವರ್ಗದಲ್ಲಿ ಮರುದ್ದೇವತೆಗಳಿದ್ದಾರೆ. ಅವರೊಡನೆ ಸೇರಿಕೊಂಡು ನೀನು ಬಾ ಎನ್ನುತ್ತಾನೆ. 
ಇಲ್ಲಿ ಸಹ ನಾಕಸ್ಯಾಧಿ ರೋಚನೇ ದಿವಿ ಎನ್ನುವಲ್ಲಿ ನಾಕ ಎನ್ನುವುದು ಸೂರ್ಯನನ್ನು ಕುರಿತಾಗಿದ್ದರೆ ದಿವಿ ಎನ್ನುವುದು ಸ್ವರ್ಗವನ್ನು ಕುರಿತಾಗಿ ಹೇಳಲ್ಪಟ್ಟಿದೆ.

ಇನ್ನು ಆಂಗಿರಸ ವಂಶದ ಪವಿತ್ರ ಎನ್ನುವ ಮಹರ್ಷಿಯು ಒಂಬತ್ತನೇ ಮಂಡಲದ ಎಪ್ಪತ್ತಮೂರನೇ ಸೂಕ್ತದಲ್ಲಿ. . . 
ಸಹಸ್ರಧಾರೇವ ತೇ ಸಮಸ್ವರನ್ದಿವೋ ನಾಕೇ ಮಧುಜಿಹ್ವಾ ಅಸಶ್ಚತಃ |
ಬೇರೆ ಬೇರೆ ಅಥವಾ ಅನೇಕ ಧಾರಾ ರೂಪದಲ್ಲಿರುವ ಸೂರ್ಯ ರಶ್ಮಿಗಳು ಕೆಳಭಾಗದಲ್ಲಿರುವ ಭೂಮಿಯೊಡನೆ ಸೇರುತ್ತವೆ. ಸೋಮರಶ್ಮಿಗಳು ದ್ಯುಲ್ಲೋಕದಲ್ಲಿನ ಅತ್ಯಂತ ಎತ್ತರವಾದ ಪ್ರದೇಶದಲ್ಲಿರುವುವು ಎನ್ನುತ್ತಾನೆ. ಇಲ್ಲಿಯೂ ಸಹ ದೇವಲೋಕ ಮತ್ತು ಸೂರ್ಯನನ್ನು ಕುರಿತಾಗಿ ದಿವೋ ನಾಕೇ ಎನ್ನಲಾಗಿದೆ. 
ಇಲ್ಲಿ ನಾಕ ಎನ್ನುವ ಶಬ್ದದ ಕುರಿತಾಗಿ ಗಮನಿಸಿದರೆ ಕಂ ಎನ್ನುವುದು ಸುಖವನ್ನು ನಿರ್ದೇಶಿಸುತ್ತದೆ. ಅಕಂ ಎನ್ನುವುದು ನಿಷೇಧಾರ್ಥಕವಾಗಿ ಸುಖವಲ್ಲ ಎನ್ನುವ ಅರ್ಥವನ್ನು ಕೊಟ್ಟರೆ ನ - ಅಕಂ ಎನ್ನುವುದು ಕಷ್ಟವಲ್ಲದ ಎನ್ನುವ ಅರ್ಥದೊಂದಿಗೆ ಸ್ವರ್ಗವನ್ನು ನಿರ್ದೇಶಿಸುತ್ತದೆ. ಯಾವುದು ದುಃಖಕರವಲ್ಲದ ಪ್ರದೇಶವೋ ಅದು ನ ಅಕಂ ಅಥವಾ ನಾಕ.
ರಾಹೂಗಣನು ಒಂದನೇ ಮಂಡಲದ ಎಂಬತ್ತೈದನೇ ಸೂಕ್ತದಲ್ಲಿ 
ತೇsವರ್ಧಂತ ಸ್ವತವಸೋ ಮಹಿತ್ವನಾ ನಾಕಂ ತಸ್ಥುರುರು ಚಕ್ರಿರೇ ಸದಃ | ಎನ್ನುವಲ್ಲಿ ಮರುತ್ತುಗಳು ತಮ್ಮ ಸಾಮರ್ಥ್ಯದಿಂದ ವೃದ್ಧಿಯನ್ನು ಹೊಂದಿ ಸ್ವರ್ಗವನ್ನು ಸೇರಿಕೊಂಡವು. ಎನ್ನುವಲ್ಲಿ ನಾಕ ಎನ್ನುವುದು ಸ್ವರ್ಗವನ್ನು ಹೇಳುತ್ತಿದೆ.

ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್ |
ತೇ ಹ ನಾಕಂ ಮಹಿಮಾನಃ ಸಚಂತ ಯತ್ರ ಪೂರ್ವೇ ಸಾಧ್ಯಾಃ ಸಮತಿ ದೇವಾಃ || ಋಗ್ವೇದದ ಈ ಸೂಕ್ತವನ್ನು ವಾಮನ ಸೂಕ್ತ ಎನ್ನುವುದಾಗಿಯೂ ಕರೆಯಲಾಗಿದೆ. ದೀರ್ಘತಮಾ ಔಚಥ್ಯನ ಈ ಸೂಕ್ತದಲ್ಲಿನ ಈ ಋಕ್ಕಿನಲ್ಲಿ ತೇ ಹ ನಾಕಂ ಮಹಿಮಾನಃ ಎನ್ನುವಲ್ಲಿ ಸ್ವರ್ಗವನ್ನು ಸೇರಿಕೊಂಡಿರುವ ಮಹಾಮಹಿರನ್ನು ಕುರಿತಾಗಿ ಹೇಳಲ್ಪಟ್ಟಿದ್ದು. ನಾಕ ಇಲ್ಲಿ ಸ್ವರ್ಗವನ್ನು ಹೇಳುತ್ತಿದೆ.
ನಾಕ ಎನ್ನುವುದು ಸ್ವರ್ಗ ಎಂದಿರಲಿ ಅಥವಾ ಅದೇ ನಾಕ ಸೂರ್ಯನನ್ನು ನಿರ್ದೇಶಿಸಲಿ, ಸ್ವರ್ಗ ಎನ್ನುವುದು ಇರುವುದು ಸೂರ್ಯ ಮಂಡಲದಲ್ಲಿ ಎನ್ನುವುದು ಸ್ಪಷ್ಟವಾಗುತ್ತಾ ಹೋಗುತ್ತದೆ. ಸ್ವರ್ಗಕ್ಕೂ ಸೂರ್ಯನಿಗೂ ಅತ್ಯಂತ ನಿಕಟ ಸಂಪರ್ಕ ಇದೆ. ಪಿತೃಗಳೆಲ್ಲಾ ಸೇರುವುದೂ ಸಹ ಅದೇ ಸ್ವರ್ಗವನ್ನೇ ಎನ್ನುವುದು ಈ ಋಕ್ಕುಗಳಿಂದ ತಿಳಿಯುತ್ತದೆ.

#ತೇ_ಹ_ನಾಕಂ 
ಸದ್ಯೋಜಾತರು

No comments:

Post a Comment

If you have any doubts. please let me know...