ಕೆಲವೊಂದು ಹೆಸರುಗಳು ಬಹುವಚನವನ್ನು ಹೊಂದಿವೆ ಎನ್ನುವುದು ಶತಪಥಬ್ರಾಹ್ಮಣ ೧೩ನೇ ಕಾಂಡ ಮತ್ತು ಅಥರ್ವವೇದದ ೭ನೇ ಕಾಂಡದ ೨೨ನೇ ಸೂಕ್ತದಿಂದ ತಿಳಿಯಬಹುದಾಗಿದೆ. ಅಲ್ಲಿ ವಂಗ, ಮಗಧವನ್ನು ಬಹುವಚನದಲ್ಲಿ ಹೇಳಿರುವುದು ಸಮೂಹದಿಂದ ಅಥವಾ ಜನಪದಗಳಿಂದ. ಆದರೆ ಕಾಶಿ ಎನ್ನುವುದು ಬಹುವಚನದಲ್ಲಿಯೇ ಇದೆ. ಕಾಶ್ಯ ಎನ್ನುವ ದೊರೆ ಕಾಶಿಯನ್ನು ಆಳಿದುದರಿಂದ ಬನಾರಸ್ ಕಾಶಿಯಾಗಿದೆ. ಋಗ್ವೇದದ ೩ನೇ ಮಂಡಲದ ೩೦ನೇ ಸೂಕ್ತ ವಿಶ್ವಾಮಿತ್ರ ಮಹರ್ಷಿಯದ್ದು. ಅಲ್ಲಿ ೫ನೇ ಋಕ್ಕಿನಲ್ಲಿ ’ಅಪಾರೇ ಯತ್ಸಂಗೃಭ್ಣಾ ಮಘವನ್ಕಾಶಿರಿತ್ತೇ’ ಎನ್ನುವಲ್ಲಿ ಮಘವನ್ ಕಾಶಿ ಎಂದು ಬರುತ್ತದೆ. ಇದಕ್ಕೆ ಭಾಷ್ಯಕಾರರು ’ಕಾಶಿರ್ಮುಷ್ಟಿರ್ಮಹಾನ್’ ಎಂದು ಹೇಳುತ್ತಾ ಇನ್ನೊಂದು ಅರ್ಥದಲ್ಲಿ ಪ್ರಕಾಶಮಾನವಾದ ಅಥವಾ ಪ್ರಜ್ವಲಿತ ಎಂದು ಹೇಳಿರುವರು. ಇನ್ನು ಶತಪಥ ಬ್ರಾಹ್ಮಣ ಹೇಳುವಂತೆ ಧೃತರಾಷ್ಟ್ರ ಎನ್ನುವವನು ಕಾಶಿಯ ರಾಜನಾಗಿದ್ದ. ಈತ ಶತಾನೀಕ ಸಾತ್ರಾಜಿತನಿಂದ ಸೋಲಿಸಲ್ಪಟ್ಟ. ಇದರ ಫಲವಾಗಿಯೇ ಕಾಶಿ ಬ್ರಾಹ್ಮಣಗಳ ಕಾಲದಲ್ಲಿ ಸ್ವಲ್ಪ ಅವನತಿಯತ್ತ ಸಾಗಿತು.
ಸಾತ್ರಾಜಿತ ಎನ್ನುವವನೇ ಭರತನಾಗಿದ್ದ ಎಂದು ಐತರೇಯ ಬ್ರಾಹ್ಮಣದಲ್ಲಿಯೂ ಹೇಳಿದೆ. ಇನ್ನು ಅಜಾತಶತ್ರುವೂ ಸಹ ಕಾಶಿಯ ರಾಜನಾಗಿದ್ದ ಎನ್ನುವುದನ್ನು ನಾವು ಕೇಳಿದ್ದೇವೆ. ಈತ ವಿದೇಹದ ರಾಜನಾಗಿದ್ದ ಎನ್ನುವುದು ಬೃಹದಾರಣ್ಯಕ ಉಪನಿಷತ್ತಿನ ಎರಡನೇ ಅಧ್ಯಾಯದಲ್ಲಿ (ದೃಪ್ತಬಾಲಾಕಿರ್ಹಾನೂಚಾನೋ ಗಾರ್ಗ್ಯ ಆಸ ಸ ಹೋವಾಚಜಾತಶತ್ರುಂ ಕಾಶ್ಯಾಂ ಬ್ರಹ್ಮತೇ ಬ್ರವಾಣೀತಿ) ಇನ್ನು ಅದೇ ಉಪನಿಷತ್ತಿನ ೩:೮:೨ರಲ್ಲಿ ಗಾರ್ಗಿಯು ಯಾಜ್ಞವಲ್ಕ್ಯರ ಹತ್ತಿರ ಹೇಳುವಾಗ ಅಜಾತಶತ್ರುವು ಕಾಶಿ ಅಥವಾ ವಿದೇಹದ ರಾಜನಾಗಿದ್ದ ವಿಷಯ ಬರುತ್ತದೆ. ಇದೂ ಅಲ್ಲದೇ ಕೌಶೀತಕೀ ಉಪನಿಷತ್ತಿನ ನಾಲ್ಕನೇ ಅಧ್ಯಾಯದಲ್ಲಿ ಸಹ ಉಲ್ಲೇಖವಿದೆ. ಯುಧಿಷ್ಠಿರನೇ ಅಜಾತ ಶತ್ರು ಎಂದು ಸಹ ಹೇಳಲಾಗುತ್ತದೆ. ಅಜಾತ ಶತ್ರುವಿನ ವಂಶೀಯನಾದ ಭದ್ರಸೇನ ಅಜಾತಶತ್ರವ ಎನ್ನುವವನೂ ಸಹ ಕಾಶಿಯರಾಜನಾಗಿದ್ದ ಎಂದು ಶತಪತ ಬ್ರಾಹ್ಮಣ ಹೇಳುತ್ತದೆ. ಈತ ಉದ್ದಾಲಕನ ಸಮಕಾಲೀನನಾಗಿದ್ದ.
ಕಾಶಿಯ ಜನರು ಮತ್ತು ವಿದೇಹದ ಪ್ರಜೆಗಳು ಸಹಜವಾಗಿ ಭೌಗೋಳಿಕ ಸ್ಥಾನದ ದೃಷ್ಟಿಯಿಂದ ನಿಕಟವಾಗಿ ಕಾಣಿಸಿಕೊಳ್ಳುತ್ತಾರೆ.
ಸಾಂಖ್ಯಾಯನ ಶ್ರೌತ ಸೂತ್ರದ ’ಪುರೋಧಾಂ ಪ್ರಾಪ ಕಾಶ್ಯ ವೈದೇಹಯೋಃ ಕೌಸಲಸ್ಯಚ’ ೧೬:೨೯:೫ರಲ್ಲಿ ಕಾಶಿ, ಕೋಸಲ ಮತ್ತು ವಿದೇಹದಲ್ಲಿ ಪುರೋಹಿತರೇ ರಾಜರಾಗಿ ಕಾರ್ಯನಿರ್ವಹಿಸುತ್ತಾರೆ ಎಂದಿದೆ. ಇನ್ನು ಬೌಧಾಯನ ಶ್ರೌತ ಸೂತ್ರದಲ್ಲಿ ಸಹ ವಿದೇಹ ಮತ್ತು ಕಾಶಿಯ ನಿಕಟತನವನ್ನು ಹೇಳಿದ್ದು ಸಿಗುತ್ತದೆ. ವೇದಗಳಲ್ಲಿ ಅತಿ ವಿರಲವಾಗಿ ಕಾಣಿಸಿಕೊಳ್ಳುವ ಉಶೀನರ ಎನ್ನುವವನು ಕಾಶಿ ಮತ್ತು ವಿದೇಹದ ಆಡಳಿತವನ್ನು ಜೊತೆಯಲ್ಲಿಯೇ ನಿರ್ವಹಿಸುತ್ತಿದ್ದನಂತೆ. ಕಾಶಿ ಮತ್ತು ವಿದೇಹದ ನಿಕಟತೆ ಹೇಗೋ ಕೋಸಲ ಮತ್ತು ವಿದೇಹದ್ದೂ ಹಾಗೇ.
ಕಾಶಿ ಮತ್ತು ಕೋಸಲ ಎನ್ನುವುದು ಜೊತೆ ಜೊತೆಗೇ ಇರುವ ಸಂಯುಕ್ತ ಪದದಂದತಿದೆ, ಕಾಶಿಯವರನ್ನೇ ಕೌಸಲ್ಯರು ಎಂದು ಕರೆಯುವುದು ಗೋಪಥ ಬ್ರಾಹ್ಮಣ.
ಆದರೂ ಸಹ ಕಾಶಿ ಎನ್ನುವ ಪದ ಬಂದದ್ದು ನಂತರದಲ್ಲಿಯಾದರೂ ಕಾಶಿ ಪಟ್ಟಣ ಅತ್ಯಂತ ಪ್ರಾಚೀನ. ಆದರೆ ’ವಾರಿದಂ ವಾರಯಾತೈ ವರಣವತ್ಯಾಮಧಿ | ತತ್ರಾಮೃತಸ್ಯಾಸಿಕ್ತಂ ತೇನಾ ತೇ ವಾರಯೇ ವಿಷಮ್ ||’ ಎನ್ನುವ ಅಥರ್ವವೇದದ ೪:೭:೧ರ ವಿಷನಾಶನ ಸೂಕ್ತದಲ್ಲಿ ವಾರಣಾವತಿ ಎನ್ನುವ ನದಿಯಿಂದ ವಾರಣಾಸಿ ಎನ್ನುವ ಹೆಸರು ಬಂದಿದೆ ಎನ್ನುವುದು ಗಮನಿಸಬಹುದು. ಅದೇ ವಾರಣಾವತಿ ನದಿಯಿಂದ ಮುಂದೆ ಬನಾರಸ್ ಆಗಿದೆ ಎನ್ನುವಾಗಿನ ವಾರಣಾಸಿ ಸಹ ಪ್ರಾಚೀನ. ಈ ವಾರಣಾವತೀ ನದಿಯ ನೀರು ವಿಷಾಪಹಾರಕವಾಗಿದೆ, ಅಮೃತದಂತೆ ಕೆಲಸ ಮಾಡುತ್ತದೆ ಎನ್ನುವ ಅರ್ಥ ಅಥರ್ವವೇದ ಕೊಡುತ್ತದೆ. ಕಾಶೀ ಕೋಸಲ ಮತ್ತು ವಿದೇಹ ಮೂರೂ ಸಹ ಒಂದು ನಿಕಟ ಸಂಬಂಧವನ್ನು ಹೊಂದಿದ್ದವು. ಆದರೆ, ಕುರುಪಾಂಚಾಲ ಮತ್ತು ಅದರ ಜನ ಮಾತ್ರ ಇದರೊಂದಿಗೆ ಬೆರೆಯದೇ ಸ್ವಲ್ಪ ವಿರೋಧವಾಗಿಯೇ ಇದ್ದರು. ರಾಜಕೀಯ ಮತ್ತು ಸಾಂಸ್ಕೃತಿಕ ಭಿನ್ನಾಭಿಪ್ರಾಯ ಈ ಎರಡು ಗುಂಪುಗಳ ನಡುವೆ ಇತ್ತು ಎನ್ನುವುದು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ಇಲ್ಲಿ ಒಂದನ್ನು ಗಮನಿಸಬೇಕು. ಕುರುಪಾಂಚಾಲ ಬ್ರಾಹ್ಮಣ್ಯವನ್ನು ಆಕಾಲಕ್ಕೆ ಎತ್ತಿಹಿಡಿದ ರಾಜಮನೆತನ ಅಥವಾ ಆಡಳಿತವಾಗಿತ್ತು. ಆದರೆ ಅದಕ್ಕೂ ಪ್ರಾಚೀನವಾಗಿರುವುದು ಕಾಶಿ ಕೋಸಲ ಮತ್ತು ವಿದೇಹ. ಈ ಎರಡೂ ಸಹ ಉತ್ತಮ ಸಂಸ್ಕಾರಕೊಟ್ಟ ಮತ್ತು ಆಡಳಿತ ನೀಡಿದ ರಾಜ ಮನೆತನಗಳು. ಇಲ್ಲಿ ಕುರುಪಾಂಚಾಲಕ್ಕಿಂತ ಪೂರ್ವಕ್ಕಿದ್ದವರು ರಾಜರ್ಷಿಗಳು. ಕುರುಪಾಂಚಾಲ ಬ್ರಾಹ್ಮಣರು. ಇದನ್ನೇ ಇಟ್ಟುಕೊಂಡು ಬರೆದ ಕೆಲವು ವಿದೇಶೀ ಚಿಂತಕರು ಆರ್ಯ ದ್ರಾವಿಡಕ್ಕೆ ತಳಕು ಹಾಕುವ ಕಾರ್ಯ ಮಾಡುವುದಿದೆ. ಆದರೆ ಎರಡೂ ಶ್ರೇಷ್ಠ ಮತ್ತು ಭಾರತೀಯವೇ. ಇನ್ನು ಕಾಟ್ಯಾಯನ ಶ್ರೌತ ಸೂತ್ರದಲ್ಲಿ ಹೇಳಿರುವಂತೆ ಮಗಧದ ಪ್ರಜೆಗಳು ಈ ಎರಡೂ ಆಡಳಿತಕ್ಕೆ ವಿರೋದ ವ್ಯಕ್ತ ಪಡಿಸಿದ್ದರು ಎನ್ನುತ್ತದೆ. ಮಗಧದ ಜನರ ವಿರೋಧ ಸಹ ಅತ್ಯಂತ ಪ್ರಾಚೀನ ಎನ್ನುವುದು ವಾಜಸನೇಯೀ ಸಂಹಿತೆ(೩೦:೫:೨೨)ಯನ್ನು ಗಮನಿಸಿದಾಗ ಗೊತ್ತಾಗುತ್ತದೆ. ಇನ್ನು ಈ ಕುರು ಪಾಂಚಾಲ ಮತ್ತು ಕಾಶಿ ಕೋಸಲ ವಿದೇಹದವರು ಬ್ರಾಹ್ಮಣ ಸಂಸ್ಕಾರ ಮತ್ತು ಸಂಸ್ಕೃತಿಯಿಂದ ದೂರ ಸರಿದು ತಾವು ಸಹ ಆಡಳಿತಾತ್ಮಕ ಕಾರ್ಯದಲ್ಲಿಯೇ ತೊಡಗಿಸಿಕೊಂಡರು. ಶತಪಥ ಬ್ರಾಹ್ಮಣದಲ್ಲಿನ ಈ ಒಂದು ಸನ್ನಿವೇಶವನ್ನೇ ಹಿಡಿದು ಆರ್ಯರು ವಲಸೆ ಬಂದವರು ಎಂದು ಕೂಗಾಡುತ್ತಾರೆ. ಆರ್ಯವಲಸೆಗೆ ಇದು ಒಂದು ಉದಾಹರಣೆ ಅವರಿಗೆ.. . . . ಮುಂದಿನದ್ದು ಪುಸ್ತಕದಲ್ಲಿ.
#ಹೊಸ_ಅವತಾರ
ಸದ್ಯೋಜಾತರು
No comments:
Post a Comment
If you have any doubts. please let me know...