August 14, 2021

ಅಗ್ನಿಮೀಳೇ ಪುರೋಹಿತಂ



ಸುದಾಸನಿಗೆ ಪುರೋಹಿತರಾಗಿದ್ದ ವಸಿಷ್ಠರು ರಾಜನ ಯಜ್ಞ ಕಾಲದಲ್ಲಿ ಹೋತೃವಿನ ಸ್ಥಾನದಲ್ಲಿದ್ದು ಕೇವಲ ಮಂತ್ರ ಪಠನವನ್ನು ಮಾಡುತ್ತಿದುದು ಮಾತ್ರವಲ್ಲದೇ ಅವನ ರಾಜಕೀಯ ವ್ಯವಹಾರಗಳನ್ನೂ ಅವನಿಗೆ ಅನೇಕ ವಿಧವಾದ ಸಹಾಯಗಳನ್ನು ಮಾಡುತ್ತಿದ್ದರು. ಹಾಗಂತ ತನಗೆ ಯಾವೊಂದನ್ನೂ ಬಯಸುತ್ತಿರಲಿಲ್ಲ. ಇದಕ್ಕೆ ಪುರೋಹಿತತನ ಎನ್ನುವುದು. ಇದು ಭಾರತೀಯರ ಮೂಲ ಆಶಯ, ತನಗಾಗಿ ಮಾತ್ರ ಕೇಳದೇ ಪರರಹಿತವನ್ನೂ ಬಯಸುವುದು ಇಂದಿಗೂ ಅಲ್ಲಲ್ಲಿ ಉಳಿದುಕೊಂಡು ಬಂದಿದೆ.
ವಿಶ್ವಾಮಿತ್ರ ಮಹರ್ಷಿಗಳ ವಂಶದಲ್ಲಿ ಹುಟ್ಟಿದ ಅಥವಾ ಅವರ ಮಗನಾಗಿ ಹುಟ್ಟಿದ ಮಹರ್ಷಿಗಳಲ್ಲಿ ಮಧುಚ್ಛಂದ ಎನ್ನುವವರು ಅತ್ಯಂತ ಹೆಚ್ಚು ಪ್ರಸಿದ್ಧರು. ಈ ಮಧುಚ್ಛಂದ ಮಹರ್ಷಿಯು ಅಗ್ನಿಯನ್ನು ಕುರಿತಾಗಿ ಸ್ತುತಿಸುತ್ತಾ ದೃಷ್ಟಾರರಾಗಿರುವ ಋಗ್ವೇದದ ಮೊದಲ ಮಂಡಲದ ಮೊದಲ ಸೂಕ್ತದ ಮೊದಲ ಋಕ್ಕನ್ನು ಮೊದಲು ಗಮನಿಸಿ ಮುಂದಕ್ಕೆ ಹೋಗುವೆ. . .
ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಂ|
ಹೋತಾರಂ ರತ್ನಧಾತಮಂ || ಎಂದಿರುವ ಈ ಋಕ್ಕಿನಲ್ಲಿ
ಯಜ್ಞದಲ್ಲಿ ಪ್ರಮುಖ ಸ್ಥಾನದಲ್ಲಿದ್ದು, ಎದುರಿಗೇ ಇದ್ದು ಕೊಂಡು ಪುರೋಹಿತನಾಗಿಯೂ ಯಜ್ಞದಲ್ಲಿ ಪ್ರತ್ಯಕ್ಷ ದೇವತಾ ರೂಪನಾಗಿಯೂ ಇರುವವನು, ಯಜ್ಞದಲ್ಲಿ ಮುಖ್ಯವಾಗಿ ಭಾಗವಹಿಸುವ, ಬ್ರಹ್ಮ, ಹೋತೃ, ಅಧ್ವರ್ಯು, ನಾಲ್ಕು ಜನ ಮುಖ್ಯ ಋತ್ವಿಜರಲ್ಲಿ ಹೋತೃವೆಂಬ ಋತ್ವಿಜನಾಗಿಯೂ, ಯಜ್ಞ ಮಾಡುವ ಯಜಮಾನನಿಗೆ ಎಲ್ಲಾ ವಿಧದ ರತ್ನವೇ ಮೊದಲಾದ ಸಂಪತ್ತನ್ನು ಅನುಗ್ರಹಿಸುವವನಾಗಿಯೂ ಇರುವ ಅಗ್ನಿಯೆಂಬ ದೇವತೆಯನ್ನು ಸ್ತೋತ್ರ ಮಾಡುವೆನು ಎಂದು ಮಧುಚ್ಛಂದ ಮಹರ್ಷಿ ಪ್ರಾರ್ಥಿಸುವಾಗ ’ಪುರೋಹಿತಂ’ ಎನ್ನುವ ಪದದ ಬಳಕೆ ಮೊತ್ತ ಮೊದಲಿಗೆ ಕಾಣಿಸಿಕೊಳ್ಳುತ್ತದೆ. ಇಲ್ಲಿಯೇ ಸ್ಪಷ್ಟವಾಗಿ ಪುರೋಹಿತ ಅಂದರೆ ಯಾರು ಎಂದು ಹೇಳಲಾಗಿದೆ. ಯಜ್ಞವನ್ನು ನಡೆಸಿ ಕೊಡುವ ಮುಖ್ಯಸ್ಥ ಮತ್ತು ಅವನೇ ಪ್ರತ್ಯಕ್ಷ ದೇವತಾ ಸ್ವರೂಪನಾಗಿರುತ್ತಾನೆ ಎನ್ನಲಾಗಿದೆ.
’ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಂ’ ಅಂದರೆ ಯಜ್ಞವೊಂದರ ಪ್ರತ್ಯಕ್ಷದೇವತೆ ಎನ್ನಿಸಿಕೊಳ್ಳುವ ಪುರೋಹಿತ ಸ್ವತಃ ದೇವತಾ ಸ್ವರೂಪದ ಅಧ್ವರ್ಯುವಾಗಿರುತ್ತಾನೆ. ’ಯಜ್ಞಸ್ಯ ದೇವಂ’ ಎನ್ನುವುದು ಇದೇ ಪುರೋಹಿತನಿಗೆ ಮತ್ತು ಪ್ರತ್ಯಕ್ಷನಾದ ಅಗ್ನಿಗೆ. ಇಲ್ಲಿ ಒಂದನ್ನು ಗಮನಿಸಬೇಕಾದ್ದು ಮಹತ್ವವೆನ್ನಿಸುತ್ತದೆ. ಈ ಪುರೋಹಿತ ಯಾರು ಯಜ್ಞವನ್ನು ಮಾಡಿಸುತ್ತಾರೋ ಅವರಿಗೆ ’ರತ್ನಧಾತಮಂ’ ರತ್ನವೇ ಮೊದಲಾದ ಸಂಪತ್ತನ್ನು ಕೊಡು ಎಂದು ಕೇಳಿಕೊಳ್ಳುತ್ತಾನೆಯೇ ಹೊರತು ತನಗೆ ಅಪೇಕ್ಷಿಸುವುದಿಲ್ಲ. ಅಂದರೆ ಪುರೋಹಿತ ಪರರ ಹಿತವನ್ನು ಬಯಸುವವ ಅಂತಾಯ್ತು.
ಇನ್ನು ಋಗ್ವೇದ ಒಂದನೇ ಮಂಡಲದ ಒಂದು ಸೂಕ್ತದಲ್ಲಿ ಕಣ್ವ ಮಹರ್ಷಿಯ ಮಗನಾದ ಪ್ರಸ್ಕಣ್ವ ಮಹರ್ಷಿ ಅಗ್ನಿಯನ್ನು ಕುರಿತಾಗಿ ಹೇಳುವಾಗ ಸಹ ’ಅಸಿ ಗ್ರಾಮೇಷ್ವವಿತಾ ಪುರೋಹಿತೋಸಿ’ ಎಂದು ಹೇಳಿದ್ದು ಸಿಗುತ್ತದೆ. ಹೇ ಅಗ್ನಿಯೇ, ನಿನ್ನ ತೇಜಸ್ಸಿನ ಮಹಿಮೆಯಿಂದ ನೀನು ಲೋಕದಲ್ಲಿ ಎಲ್ಲವನ್ನೂ ಪ್ರಕಾಶಗೊಳಿಸುವುದು ಮಾತ್ರವಲ್ಲದೆ ಎಲ್ಲ ಜನರಿಗೂ ಕಾಣಿಸಿಕೊಳ್ಳುವವನು. ಅದೆಷ್ಟೋ ಲೆಕ್ಕವಿಲ್ಲದಷ್ಟು ವರ್ಷಗಳಿಂದ ಸಹಸ್ರಾರು ಉಷಃ ಕಾಲಗಳು ನಿನ್ನ ತೇಜಸ್ಸಿನಿಂದ ಬೆಳಕು ಕಂಡಿವೆ. ಅಂತಹ ಮಹಿಮೆಯುಳ್ಳ ನೀನು ನಮ್ಮಂತಹ ಮಾನವರು ವಾಸಿಸುವ ಪ್ರತಿಯೊಂದು ಗ್ರಾಮಗಳಿಗೂ ರಕ್ಷಕನಾಗಿರುವೆ. ಅಂತಹ ರಕ್ಷಕನಾದ ನೀನು ನಮ್ಮ ಯಜ್ಞಕರ್ಮಗಳಲ್ಲಿ ಪುರೋಹಿತನಾಗಿ, ಯಜ್ಞವೇದಿಯ ಪೂರ್ವ ಭಾಗದಲ್ಲಿ ಕುಳಿತು ಋತ್ವಿಕ್ಕುಗಳೂ ಯಜಮಾನರೂ ಆದ ಮಾನವರ ಹಿತಕಾರಿಯಾಗಿಯೂ ಆಗಿರುವೆ ಎನ್ನುವ ಭಾವಾರ್ಥ ಕೊಡುತ್ತದೆ. ಈ ಋಕ್ಕಿನ ಅರ್ಥ ಗಮನಿಸಿದರೆ ಅಗ್ನಿಯಷ್ಟೇ ಮಹತ್ವ ಪುರೋಹಿತನಿಗೂ ಇದೆ. ಪುರೋಹಿತ ನಾವು ವಾಸಿಸುವ ನಮ್ಮ ಗ್ರಾಮಗಳ ರಕ್ಷಕ ಎನ್ನುವಲ್ಲಿ ಅವನ ಮಹತ್ವ ಎಷ್ಟೆಂದು ತಿಳಿಯುತ್ತದೆ.
ಇಲ್ಲಿ ’ಪುರಃ ಹಿತಃ’ ಎನ್ನುವಲ್ಲಿ ಯಜ್ಞ ವೇದಿಯ ಮುಂದಕ್ಕೆ ಕುಳಿತುಕೊಳ್ಳುವವ ಎನ್ನುವ ಅರ್ಥವಿದ್ದರೂ ಸಹ ಇದು ಕೇವಲ ಯಜ್ಞಕ್ಕೆ ಮಾತ್ರ ಸಂಬಂಧಿಸಿಲ್ಲ. ಪುರೋಹಿತ ರಾಜನಿಗೆ ವಯಕ್ತಿಕವಾದ ಶ್ರೇಯಸ್ಸನ್ನು ಹಾರೈಸುವುದರ ಜೊತೆಗೆ ಆತನ ಆಡಳಿತಾತ್ಮಕ ವ್ಯವಹಾರಗಳಲ್ಲಿಯೂ ಸೂಕ್ತವಾದ ಸಲಹೆಗಾರನಾಗಿದ್ದ ಎನ್ನುವುದು ವೇದಕಾಲದ ಇತಿಹಾಸ ಗಮನಿಸಿದರೆ ತಿಳಿಯುತ್ತದೆ. ಸಪ್ತರ್ಷಿಗಳಲ್ಲಿ ಹೆಚ್ಚಿನವರು ರಾಜರ್ಷಿಗಳಿಗೆ ಪುರೋಹಿತರಾಗಿದ್ದು ಕಂಡು ಬರುತ್ತದೆ. ವಿಶ್ವಾಮಿತ್ರ ವಶಿಷ್ಠ ಮೊದಲಾದ ಮಹರ್ಷಿಗಳು ರಾಜರ್ಷಿಗಳ ಯುದ್ಧಕಾಲದಲ್ಲಿಯೂ ಮಾರ್ಗದರ್ಶಕರಾಗಿದ್ದುದು ಅಲ್ಲಲ್ಲಿ ಕಾಣಬಹುದು. ಭರದ್ವಾಜ ಮಹರ್ಷಿಗಳು ಯುದ್ಧದ ಆಯುಧಗಳನ್ನು ಪೂಜಿಸಿದ್ದು ಈ ಹಿಂದೆ ಬರೆದಿದ್ದೆ. ಅಂದರೆ ತನ್ನ ಸ್ವಾರ್ಥಕ್ಕೆ ಏನನ್ನೂ ಬಯಸದೇ ಜನರ ಹಿತವನ್ನೇ ಬಯಸುವವನು ಪುರೋಹಿತ ಎನ್ನುವುದು ತಿಳಿಯುತ್ತದೆ.
ಸುದಾಸನ ದಾಶರಾಜ್ಞ ಯುದ್ಧದಲ್ಲಿ ’ಸತ್ಯಾ ತೃತ್ಸೂನಾಮಭವತ್ಪುರೋಹಿತಿಃ’ ಎನ್ನುವಲ್ಲಿ ಇಂದ್ರಾ ವರುಣರಿಗೆ ಕೃತಜ್ಞತೆ ಅರ್ಪಿಸುವಾಗ ಯುದ್ಧಕಾಲದಲ್ಲಿ ನನಗೊದಗಿದ ಪೌರೋಹಿತ್ಯ ಸಫಲವಾಯಿತು ಎಂದಿರುವುದು ಪೌರೋಹಿತ್ಯದ ಮಹತ್ವ ಮತ್ತು ಫಲವನ್ನು ತಿಳಿಸುತ್ತದೆ.
ರಾಜನಿಗೆ ಬಲಭುಜದಂತಿದ್ದು ಅವನ ಸಮಸ್ತ ವ್ಯವಹಾರಗಳಲ್ಲಿಯೂ ಅವನಿಗೆ ನಾನಾ ವಿಧವಾದ ಸಹಾಯಗಳನ್ನು ಮಾಡುತ್ತಾ ಅವನಿಗೂ ಅವನ ರಾಜ್ಯಕ್ಕೂ ಹಿತಕರವಾದ ಮತ್ತು ಒಳ್ಳೆಯದನ್ನೇ ಮಾಡುವಂತಹ ಹಿತೋಪದೇಶಕನಿಗೆ ಪುರೋಹಿತನೆಂದು ಹೇಳಬಹುದು. ಈ ರೀತಿ ಪುರೋಹಿತನ ಸ್ಥಾನವನ್ನು ವರ್ಣಿಸಿದರೆ ಹೋತ್ರಾದಿ ಋತ್ವಿಕ್ಕುಗಳ ಸ್ಥಾನಕ್ಕಿಂತಲೂ ಪುರೋಹಿತನ ಸ್ಥಾನವು ರಾಜನಿಗೆ ಅಧಿಕವಾದ ಬೆಲೆಯುಳ್ಳದ್ದು ಎಂದೂ ತಿಳಿಯುತ್ತದೆ. ರಾಜನಿಗೂ ಪುರೋಹಿತನಿಗೂ ಕೇವಲ ವಯಕ್ತಿಕವಾದ ಸಂಬಂಧವಿದ್ದರೂ ಸಹ ರಾಜ್ಯದಲ್ಲಿ ಸುಖಶಾಂತಿಗಳು ದೊರೆಯಬೇಕಾದರೂ ಪುರೋಹಿತನ ಸಹಾಯದಿಂದಲೇ ಸಾಧ್ಯವೆಂಬ ಅಂಶವು ವೇದ ಮತ್ತು ಬ್ರಾಹ್ಮಣಾದಿಗಳಲ್ಲಿ ವಿವರವಾಗಿ ತಿಳಿಸಿದೆ. ರಾಜನಿಗೆ ಪುರೋಹಿತನಿಂದ ಸಿಗುವ ಕೆಲವು ವಯಕ್ತಿಕ ಸಹಾಯಗಳು ಮಾತ್ರವಲ್ಲ ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲೂ ಸಹ ಪುರೋಹಿತನ ಪ್ರಭಾವವು ಬಹಳ ಪರಿಣಾಮಕಾರಿಯಾಗುತ್ತದೆ. ಪುರೋಹಿತನು ರಾಜನಿಗೆ ಹತ್ತಿರದ ಸಖನೂ, ಸಚಿವನೂ, ಯುದ್ಧ ಕಾಲದಲ್ಲೂ ಮತ್ತು ಶಾಂತಿಕಾಲದಲ್ಲೂ ಸದುಪದೇಶಕನೂ ಆಗಿರತಕ್ಕವನು. ಅಂದರೆ ಎಲ್ಲರ ಅಭ್ಯುದಯ ಬಯಸುವವನು.
sadyojath

No comments:

Post a Comment

If you have any doubts. please let me know...