ಮಾರ್ಕಂಡೇಯ ಮಹಾಮುನಿ.
ಸಪ್ತಶತಿಯನ್ನು ಬರೆದು ಅನುಷ್ಟಾನಕ್ಕೆ ತಂದವರೇ ಮಾರ್ಕಂಡೇಯ ಮುನಿಗಳು.
ಮೃಕಂಡು ಮುನಿ ಮತ್ತು ಮರುದ್ಮತಿಗಳ ಸುಪುತ್ರನೇ ಮಾರ್ಕಂಡೇಯ ಋಷಿ.
ಗೋಮತೀ ನದೀತೀರದಲ್ಲಿ ಇವರ ಆಶ್ರಮ. ದೈವಭಕ್ತರಾದ ಈ ದಂಪತಿಗಳಿಗೆ ಮಕ್ಕಳಾಗದೆ ಕೊನೆಗೆ ಶಿವನ ಧ್ಯಾನ ಮಾಡಿದಾಗ, ಪ್ರಸನ್ನನಾದ ಶಿವ ಪಾರ್ವತಿಯರು ಮಗುವನ್ನು ಕರುಣಿಸಲು ಮುಂದಾದರು. ಆದರೆ ಒಂದು ಶರತ್ತು ವಿಧಿಸುತ್ತಾರೆ. ಅತ್ಯಂತ ವಿದ್ವತ್ ಪೂರ್ಣವಾದ , ಕೇವಲ ಹದಿನಾರು ವರ್ಷದ ಮಗನು ಬೇಕೋ ಅಥವಾ ದೀರ್ಘಾಯು ಹೆಡ್ಡ ಪುತ್ರನು ಬೇಕೋ ಎಂದು ಕೇಳುತ್ತಾರೆ. ಆಗ ದಂಪತಿಗಳು ಭಗವಂತನಿಗೆ ವಂದಿಸಿ,' ಹೇ ಭಗವಂತಾ,ನಾವು ಸಂತಾನ ಬಯಸುವುದು ಕೇವಲ ನಮ್ಮ ಸ್ವಾರ್ಥಕ್ಕೆ ಅಲ್ಲ.ಜಗತ್ತಿಗೆ ಬೆಳಕು ನೀಡುವ ಪುತ್ರನನ್ನು ಕರುಣಿಸು.ಹದಿನಾರು ವರ್ಷ ಆಯುಸ್ಸಿನ ಬಗ್ಗೆ ನಮಗೆ ಚಿಂತೆ ಇಲ್ಲ. ಆಯುಸ್ಸಿನ ನಿರ್ಧಾರ ಅವರವರಿಗೇ ಬಿಟ್ಟದ್ದು ಎಂಬುದನ್ನು ತತ್ವಶಾಸ್ತ್ರಗಳೇ ತಿಳಿಸಿವೆ.ಅದನ್ನು ಅನುಷ್ಟಾನಿಸಿಕೊಳ್ಳಲು ನಿನ್ನ ಅನುಗ್ರಹವಲ್ಲದೆ ಬೇರಾವುದೂ ಇಲ್ಲ. ಧನ್ಯೋಸ್ಮಿ ಭಗವಂತಾ. ಕೃತಾರ್ಥನಾದೆ ನಿನ್ನ ದರುಶನದಿಂದ' ಎಂದು ಪ್ರಣಾಮಗಳನ್ನು ಸಲ್ಲಿಸಿದರು ಆ ದಂಪತಿಗಳು.
ಮಾಸಗಳು ಉರುಳಿದವು.ಆ ಶುಭದಿನದಲ್ಲಿ ಅಲ್ಪಾಯುಸ್ಸಿನ ಶಿಶುವಿನ ಜನನವೂ ಆಯ್ತು. ಮಾರ್ಕಂಡೇಯ ಎಂಬ ನಾಮಕರಣ ಮಾಡಿದರು ದಂಪತಿಗಳು. ಮಗನ ಆಯುಸ್ಸಿನ ಬಗ್ಗೆ ಚಿಂತಿಸದೆ ಆ ದಂಪತಿಗಳು ಮಗನಿಗೆ ವೇದ ಶಾಸ್ತ್ರೋಪನಿಷತ್ ಗಳ ಸಕಲ ವಿದ್ಯಾಭ್ಯಾಸವನ್ನೂ ಮಾಡಿಸಿದರು.
ಮಾರ್ಕಂಡೇಯನು ತನ್ನ ಬಾಲಾವಸ್ತೆಯಲ್ಲೇ ಮಹಾ ವಿದ್ವಾಂಸನಿಗಿರುವ ಸಕಲ ಅರ್ಹತೆಗಳನ್ನೂ ಪಡೆದನು. ಘನ ವಿದ್ವಾಂಸನೂ, ಪರಮ ಶಿವ ಭಕ್ತನೂ ಆದನು.
ಯಾರು ಪ್ರಕೃತಿ ಮೀರುತ್ತಾನೋ ಆಗ ಯಮನ ಪ್ರತ್ಯಕ್ಷ ಆಗುತ್ತದೆ ಎಂಬುದು ಮಾರ್ಕಂಡೇಯ ಸಿದ್ಧಾಂತ. ಈ ಮಾರ್ಕಂಡೇಯ ಒಂದಿನಿತೂ ಪ್ರಕೃತಿಗೆ ವಿರೋಧವಾಗಿ ನಡೆದುಕೊಳ್ಳದೆ ತನ್ನ ಅಧ್ಯಯನ,ತಪಸ್ಸಿನಲ್ಲಿ ನಿರತನಾದ. ಆಹಾರ, ವ್ಯವಹಾರಗಳಲ್ಲಿ ನಿಯಮ ತಪ್ಪಲಿಲ್ಲ. ಅಂದರೆ ದೇವರಿಗೆ ಸರಿಯಾಗಿ ನಡೆದುಕೊಂಡ.
ಆದಿನ ಬಂದೇ ಬಂತು. ಯಮನು ಪಾಶವನ್ನು ಬೀಸಿದ. ಆದರೆ ಭಗವನ್ನಿಯಮಕ್ಕೆ ತಕ್ಕಂತೆ ನಡೆದುಕೊಂಡಂತಹ ಮಾರ್ಕಂಡೇಯನಿಗೆ ಈ ಯಮ ಪಾಶವು ಕೇವಲ ಮಾರ್ಕಂಡೇಯನ ಕೊರಳಿಗೆ ಮಾತ್ರ ಬೀಳಲಿಲ್ಲ.ಪರಶಿವನ ಲಿಂಗಕ್ಕೂ ಬಿತ್ತು. ಆಗ ಕೋಪಗೊಂಡ ಪರಮೇಶ್ವರನು ಪ್ರತ್ಯಕ್ಷನಾಗಿ,' ಎಲೈ ಯಮರಾಜಾ, ಯಾರು ನನ್ನ ನಿಯಮಕ್ಕೆ ಸರಿಯಾಗಿ ನಡೆದುಕೊಳ್ಳುತ್ತಾರೋ ಅವರ ಮೇಲೆ ನೀನು ಯಾವ ಕ್ರಮವನ್ನೂ ತೆಗೆದುಕೊಳ್ಳಲು ಸಾಧ್ಯವಿಲ್ಲ.ಹಾಗಾಗಿ ನೀನು ಬೀಸಿದ ಪಾಶವನ್ನು ಹಿಂದಕ್ಕೆ ಕರೆಸಿಕೋ. ಇಲ್ಲವೆಂದಾದರೆ ನೀನು ನನಗೆ ವಿರುದ್ಧವಾಗಿ ನಡೆದುಕೊಂಡಂತಾಗುತ್ತದೆ.ಇದರ ಪರಿಣಾಮವಾಗಿ ನನ್ನ ತ್ರಿಶೂಲಕ್ಕೆ ಬಲಿಯಾಗಬೇಕಾದೀತು ' ಎಂದನು.ಆಗ ಯಮಧರ್ಮನು ಕೈ ಮುಗಿದು,' ಹೇ ಭಗವಂತಾ,ನಿನ್ನ ಅಣತಿಯಂತೆಯೇ ನಡೆದುಕೊಂಡವ ನಾನು.ಈ ಘಟನೆಯನ್ನು ಜಗತ್ತಿಗೆ ತೋರಿಸಲು ನನಗೆ ಪ್ರೇರಣೆ ನೀಡಿದವನೂ ನೀನೆ.ಈಗ ಅದರ ಉಪಸಂಹಾರವನ್ನೂ ಹೇಳುವವನೂ ನೀನೆ.ನಿನಗೆ ಎದುರಾಡುವ ದೇವತೆ ನಾನಲ್ಲ.ನಿನ್ನ ಆಜ್ಞಾನುಸಾರ ನಡೆದುಕೊಂಡೆ.ನನ್ನ ಕರ್ತವ್ಯದಲ್ಲಿ ನಾನು ಕೃತಾರ್ಥನಾದೆ.ಇನ್ನೇನು ಬೇಕು ಪರಮಾತ್ಮಾ. ಧನ್ಯೋಸ್ಮಿ ' ಎಂದು ಎಸೆದ ಪಾಶವನ್ನು ಹಿಂದೆಳೆದು ಯಥಾಸ್ಥಾನಕ್ಕೆ ತೆರಳಿದ.
ಮಾರ್ಕಂಡೇಯನಿಗೆ ತನಗೆ ಬೇಕಾದಷ್ಟು ವರ್ಷ ಆಯುಷ್ಯವನ್ನು ಬರೆದುಕೊಳ್ಳಲು ಶಿವನು ಪ್ರೇರೇಪಿಸಿದ.
ಇಂದು ಕೂಡಾ ಆಯು ವಿಚಾರದ ಹೋಮ ಹವನದಲ್ಲಿ ಮಾರ್ಕಂಡೇಯ ಹೋಮಕ್ಕೆ ಬಹಳ ಮಹತ್ವ ಇದೆ. ತನ್ನ ಜೀವಿತಾವಧಿಯಲ್ಲಿ ಅನೇಕ ಮಹಾ ಗ್ರಂಥಗಳನ್ನು ಬರೆದು ಜಗತ್ತಿಗೆ ನೀಡಿದ ಮಹಾಮುನಿ ಮಾರ್ಕಂಡೇಯ. ವ್ಯಾಕರಣ ಶಾಸ್ತ್ರದಲ್ಲಿ ಮಹಾವ್ಯಾಕರಣ ಪಂಡಿತನಾದವನೇ ಮಾರ್ಕಂಡೇಯ. ಅದಕ್ಕಾಗಿ ಇಂತಹ ಮಹಾಮುನಿಗಳು ಬರೆದ ಮಂತ್ರಶ್ಲೋಕಗಳ ಪಠನೆ ಮಾಡಲು ಗುರು ಉಪದೇಶ ಬೇಕು ಎಂದಿದ್ದಾರೆ.ಅಂತಹ ಕಠಿಣ ವ್ಯಾಕರಣಗಳನ್ನು ನಮಗೆ ನಾವೇ ಓದಿಕೊಂಡರೆ ತಪ್ಪು ಉಚ್ಚಾರಗಳುಂಟಾಗಿ ಆಯುಷ್ಯ ಹರಣವಾಗುತ್ತದೆ. ಇಂದಿಗೂ ಮಾರ್ಕಂಡೇಯ ಬರೆದ ಸಪ್ತಶತಿ ಪಾರಾಯಣವು ನಾಡಿ ಕ್ರಿಯೆಗಳಿಗೆ ಸಂಬಂಧಿಸಿದ್ದಾಗಿದೆ. ಇದರ ಪಾರಾಯಣದಿಂದ ಸಕಲ ದುಃಖ ಶಮನವಾಗಿ ದುರ್ಗತಿ ದೂರವಾಗುತ್ತದೆ.ಇದುವೇ ದುರ್ಗಾ ಸಪ್ತಶತಿ ಎಂದು ಪ್ರಖ್ಯಾತವಾಗಿದೆ.
ಇದರಲ್ಲಿರುವ ಛಂಸಸ್ಸು,ತಾಳ ಗತಿಗಳು ಅದಕ್ಕೆ ಸಂಬಂಧಿಸಿದ ಗಾಯತ್ರಿಗಳ ಆಧಾರದಲ್ಲಿ ಇರುವುದೇ ವಿಶೇಷ.
No comments:
Post a Comment
If you have any doubts. please let me know...