August 17, 2021

ಅಂಗಾರಕ ಜಯಂತಿ

☆☆🌹 ಅಂಗಾರಕ ಜಯಂತಿ 🌹☆☆

ಅಂಗರಕನು ಭೂಮಿ ದೇವತೆಯ ಮಗನೆಂದು ನಂಬಲಾಗಿದೆ. ಆದ್ದರಿಂದ ಅವನನ್ನು ‘ಭೌಮಾ’ ಅಥವಾ ಭೂಮಿಕಾರಕ ಎಂದು ಕರೆಯುತ್ತಾರೆ. .
ಅವನನ್ನು ಮಂಗಳ,  ಕುಜಾ ಎಂದೂ ಕರೆಯುತ್ತಾರೆ. 

ಕೆಂಪುಮಾಲೆಯನ್ನು ಧರಿಸಿರುವ ಕೆಂಪು ಬಟ್ಟೆಯ ಚತುರ್ಭುಜ ಈತ. ಗದಾಶಕ್ತಿ ಖಡ್ಗಶೂಲಗಳನ್ನು ಚತುರ್ಭುಜಗಳಲ್ಲಿ ಧರಿಸಿದ್ದಾನೆ. ಕುಳ್ಳಶರೀರ, ಪಿಂಗಳ ಕಣ್ಗಳು, ಮಸ್ತಾದ ಮೈಕಟ್ಟು, ಕಾಂತಿಯುಕ್ತ ಮುಖ, ಚಂಚಲ ಸ್ವಭಾವ, ಚುರುಕುತನ, ಶೌರ್ಯ, ಪ್ರತಿಭಾಪೂರ್ಣ ಮಾತುಗಳು,
ಗುಂಗುರು ಗುಂಗುರಾದ ಕೆಂಪು ಹರಳು, ತಾಮಸ ಸ್ವಭಾವ, ಸಾಹಸ ಪ್ರಿಯತೆ, ಹಿಂಸಾ ತತ್ಪರತೆ, ಕೆಂಪಾದ ಮೈಬಣ್ಣ, ಕೆಂಪು ಉಡುಗೆಗಳು ಇದು ಕುಜನ ಸ್ವರೂಪದ ಚಿತ್ರ.

ಅಂಗಾರಕನನ್ನು ನಾಲ್ಕು ಕೈಗಳಿರುವಂತೆ ಚಿತ್ರಿಸಲಾಗಿದೆ, ತ್ರಿಶೂಲ, ಜಟಿಲ, ಕಮಲ ಮತ್ತು ಈಟಿಯನ್ನು ಹಿಡಿದಿದ್ದಾನೆ. ಕೆಂಪು ಬಟ್ಟೆಗಳನ್ನು ಧರಿಸಿ, ಅವನು ಆಗಾಗ್ಗೆ  ಮೇಕೆ ಮೇಲೆ ಸವಾರಿ ಮಾಡುತ್ತಾನೆ.

ವಿಷ್ಣುವಿನ ಅನುಗ್ರಹದಿಂದ ಭೂದೇವಿಯಲ್ಲಿ ಹುಟ್ಟಿದ ಭೂಮಿಯ ಮಗನಾದ್ದರಿಂದಲೇ ಈತ ಭೌಮ. ಆದ್ದರಿಂದಲೇ ಕುಜ. ತಪಸ್ಸಿನಿಂದ ನವಗ್ರಹಗಳಲ್ಲಿ ಒಬ್ಬನಾದ ದಾಕ್ಷಾಯಿಣೀ ವಿರಹ ಪೀಡಿತನಾದ. ಶಿವನ ಮುಖದ ಬೆವರು ಭೂಮಿಯಲ್ಲಿ ಬಿದ್ದಾಗ ಅದರಿಂದ ಹುಟ್ಟಿದವನು ಕುಜನೆನ್ನುತ್ತದೆ ಬ್ರಹ್ಮವೈವರ್ತ ಪುರಾಣ.

ಈತ ಅಮಂಗಲ ಫಲಗಳನ್ನು ಸೂಚಿಸುವುದೇ ಹೆಚ್ಚು. ಆದರೂ ಇವನ ಹೆಸರು ಮಂಗಲ. ಇವನ ವಾರ ಮಂಗಲವಾರ. ಈ ದಿನ ಎಲ್ಲಾ ಶುಭಕೆಲಸಗಳಿಗೂ ಅಯೋಗ್ಯವಾಗಿ ಅಮಂಗಲವಾರವೆನಿಸಿದೆ. ಹೆಚ್ಚೇಕೆ ಕ್ಷೌರಕ್ಕೂ ನಿಷಿದ್ಧವಾದ ದಿನವೆನಿಸಿದೆ. ಹೀಗಿದ್ದರೂ ಈ ಕುಜನಿಗೆ ಮಂಗಲನೆಂಬ ಹೆಸರೇಕೆ? ಕ್ಷೀರಸಾಗರ ಭಟ್ಟರ ಮನೆಯಲ್ಲಿ ಕಾಸಿನ ಮಜ್ಜಿಗೆ ಇಲ್ಲವೆಂಬ ಗಾದೆಯ ಮಾತಿನಂತಾಯಿತಲ್ಲ ?

ನಿಜ, ಮಂಗಲನೆಂದು ಹೇಳಿಯಾದರೂ ಆತ ಮಂಗಲಕರನಾಗಲಿ ಎನ್ನುವ ಪ್ರಾಚೀನ ಭಾವನೆಯೇ ಇದಕ್ಕೆ ಕಾರಣ. ಅರವತ್ತನೆಯ ಸಂವತ್ಸರ ಕ್ಷಯ. ಆದರೆ ಹಾಗೆನ್ನುತ್ತೇವೆಯೇ? ಅಕ್ಷಯನಾಮ ಸಂವತ್ಸರೇ ಎನ್ನುತೇವೆ. ಮನುಷ್ಯನಿಗೆ ಕೆಟ್ಟ ಶಬ್ದ ಹೇಳಲೂ ಹೆದರಿಕೆ!

ಮಂಗಳವು ಶಕ್ತಿಯುತ ಗ್ರಹವಾಗಿದ್ದು, ಬಯಕೆ,  ಧೈರ್ಯ, ಸಾಹಸಗಳು, ದೈಹಿಕ ಶಕ್ತಿ,  ಸ್ವಾವಲಂಬನೆ, ಒತ್ತಡವನ್ನು ತಡೆದುಕೊಳ್ಳುವ ಶಕ್ತಿ, ಸ್ವತಂತ್ರ ಸ್ವಭಾವ, ಸ್ಥಾನದ ಆಸೆ, ಯೋಧ ಶಕ್ತಿಯಿಂದ ಕೂಡಿದೆ.  ಮಂಗಳ ಶಕ್ತಿಯು ವ್ಯಕ್ತಿಗಳಲ್ಲಿ ರಚನಾತ್ಮಕವಾಗಿಯೂ ಮತ್ತು  ವಿನಾಶಾತ್ಮಕವೂ ಇರಬಹುದು. ಇವರುಗಳು ಜಾಗರೂಕರಾಗಿರಬೇಕು.

ಮಂಗಳವಾರವು ಮಂಗಳ ಗ್ರಹದ ವಾರದ ದಿನವಾಗಿದೆ.  ಅಮೂಲ್ಯ ರತ್ನ ಹವಳ, ಮತ್ತು ಅತ್ಯಂತ ಗಮನಾರ್ಹವಾದ ಕೆಂಪು ಹೂವುಗಳು, ಕೆಂಪು ಗುಲಾಬಿ. ತೊಗರಿಬೇಳೆ ಮಂಗಳ ಗ್ರಹದ ಧಾನ್ಯ. ಮಂಗಳನ ಬಣ್ಣವು ಕೆಂಪು ಬಣ್ಣದ್ದಾಗಿರುವುದರಿಂದ, ಅವನು ಯಾವಾಗಲೂ ಕೆಂಪು ಬಣ್ಣದ ಬಟ್ಟೆಯಲ್ಲಿ ಅಲಂಕರಿಸಲ್ಪಡುತ್ತಾನೆ.

ಮಂಗಳನ ಪುರುಷ ಶಕ್ತಿಯು ನಮ್ಮ ಪ್ರಮುಖ ಶಕ್ತಿ ಮತ್ತು ಭಾವನೆಯ ಪ್ರಕ್ಷೇಪಣವನ್ನು ತೋರಿಸುತ್ತದೆ ಮತ್ತು ಇದು ನಮ್ಮ ಉತ್ಸಾಹ, ಪ್ರೇರಣೆ ಮತ್ತು ದೃಢ ನಿಶ್ಚಯವನ್ನು ಸೂಚಿಸುತ್ತದೆ. ಬಲವಾದ ಮಂಗಳವು ಚೈತನ್ಯ, ಶಕ್ತಿ, ಸಹಿಷ್ಣುತೆ, ಚಾಲನೆ, ಧೈರ್ಯ ಇತ್ಯಾದಿ ಗುಣಗಳನ್ನು ಸೂಚಿಸುತ್ತದೆ. 
ಅಲ್ಲದೆ ಮಂಗಳವು ಉಚ್ಚ ಸ್ಥಾನದಲ್ಲಿ  ಇದ್ದಾಗ,  ಆತ್ಮವಿಶ್ವಾಸ, ಬಲವಾದ ಇಚ್ಛಾಶಕ್ತಿ ನೀಡುತ್ತದೆ. ನೀಚಸ್ಥಾನದಲ್ಲಿದ್ದಾಗ, ಮಂಗಳವು ಹಿಂಸೆ, ಸರ್ವಾಧಿಕಾರ ಭಾವ,  ಗಾಯ, ಅಪಘಾತ, ಕೋಪ, ಯುದ್ಧ, ಟೀಕೆ, ವಿಳಂಬವಾದ ವಿವಾಹಗಳು, ಸಂಬಂಧದ ಹೋರಾಟಗಳು ಇತ್ಯಾದಿಗಳಿಗೆ ಕಾರಣವಾಗಬಹುದು.

ಮಂಗಳನ ಶಕ್ತಿ ತಾಣ ತಮಿಳುನಾಡಿನ ದಕ್ಷಿಣಕ್ಕೆ ಇರುವ ವೈತೀಶ್ವರನ್ ದೇಗುಲ.  ಮಂಗಳವಾರ ಮಂಗಳ ಗ್ರಹವನ್ನು ಪೂಜಿಸುವುದು ಮತ್ತು ಅದರ ಪ್ರಧಾನ ದೇವತೆಯಾದ ಮುರುಗನನ್ನು ಆರಾಧಿಸುವುದರಿಂದ, ಆ ಗ್ರಹದ ದೋಷದಿಂದ ಉಂಟಾಗುವ ಯಾವುದೇ ತೊಂದರೆಗಳನ್ನು ನಿವಾರಣೆಯಾಗುತ್ತವೆ.

ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು ಎನ್ನುತ್ತಾರೆ.

ಧರಣೀ ಗರ್ಭಸಂಭೂತಂ ವಿದ್ಯುತ್ಕಾಂಚನಸನ್ನಿಭಮ್ |
ಕುಮಾರಂ ಶಕ್ತಿಹಸ್ತಂ ಚ ಮಂಗಲಂ ಪ್ರಣಮಾಮ್ಯಹಮ್ ||

ಭೂದೇವಿಯ ಗರ್ಭದಲ್ಲಿ ಜನಿಸಿದ, ಮಿಂಚಿನ ಮತ್ತು ಚಿನ್ನದ ಕಾಂತಿಯಂತೆ ಪಾಟಲಕಾಂತಿಯುಳ್ಳ ಹದಿನಾರು ವರುಷದ ಕುಮಾರನಾದ ಶಕ್ತ್ಯಾಯುಧಧಾರಿಯಾದ
ಮಂಗಲನಿಗೆ ನನ್ನ ನಮನಗಳು. ಶುಭಮಸ್ತು.

ಸದ್ವಿಚಾರ ಸಂಗ್ರಹ

No comments:

Post a Comment

If you have any doubts. please let me know...