ಸಹ ನಾವವತು । ಸಹ ನೌ ಭುನಕ್ತು । ಸಹ ವೀರ್ಯಂ ಕರವಾವಹೈ ।
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ
ಓಂ ಶಾಂತಿಃ ಶಾಂತಿಃ ಶಾಂತಿಃ ॥
ಇದು ಯಜುರ್ವೇದದ ಶಾಂತಿ ಮಂತ್ರ. ಯಜುರ್ವೇದದಲ್ಲಿ, ತೈತ್ತಿರೀಯ ಶಾಖೆಯಲ್ಲಿ ಮತ್ತು ಕಾಠಕಶಾಖೆ ಮೂರರಲ್ಲೂ ಒಂದೇ ಶಾಂತಿ ಮಂತ್ರವಿದೆ ಮತ್ತು ಅದು ಕಠೋಪನಿಷತ್ತಿನ ಕೊನೆಗೆ ಬಂದಿದೆ. (ಯಜುರ್ವೇದದಲ್ಲಿ ತೈತ್ತಿರೀಯಶಾಖೆಯವರಿಗೆ “ಶಂ ನೋ ಮಿತ್ರಃ ಶಂ ವರುಣಃ...” ಎನ್ನುವ ಎರಡನೇ ಶಾಂತಿ ಮಂತ್ರವೂ ಇದೆ, ಆದರೆ ಕಠ ಶಾಖೆಯ ಯಜುರ್ವೇದಿಗಳಿಗೆ ಇದೊಂದೇ ಶಾಂತಿ ಮಂತ್ರ). ಇದು ಪಾಠ ಪ್ರಾರಂಭದಲ್ಲಿ ಶಿಷ್ಯರು ಮಾಡುವ ಪ್ರಾರ್ಥನೆ.
ಇದಕ್ಕೆ ಗುರುಗಳೂ ಧ್ವನಿಗೂಡಿಸಬಹುದು.
ಸಹ ನಾವವತು: ‘ಅವತು’ ಎನ್ನುವಲ್ಲಿ ‘ಅವ’ ಎಂದರೆ ಪ್ರವೇಶ. “ಓ ಭಗವಂತ, ನೀನು ನನ್ನ ಗುರುವಿನೊಳಗೆ ಕೂತು, ಅವರಿಗೆ ವಿದ್ಯೆಯನ್ನು ಹೇಳುವ ಶಕ್ತಿ ತುಂಬು. ನನ್ನೊಳಗೆ ಕೂತು ಗುರುಗಳು ಹೇಳುವ ಮಾತು ನನಗೆ ಅರ್ಥವಾಗುವಂತೆ ಮಾಡು”.
ಸಹ ನೌ ಭುನಕ್ತು: ‘ಭುನಕ್ತು’ ಎಂದರೆ ಪಾಲಿಸುವುದು ಅಥವಾ ತಿನ್ನುವುದು. “ಓ ಭಗವಂತ, ನಮ್ಮ ಅಧ್ಯಯನ ಕಾಲದಲ್ಲಿ ಯಾವುದೇ ವಿಘ್ನ ಬಾರದಂತೆ ನಮ್ಮನ್ನು ಕೊನೇಯತನಕ ಪಾಲಿಸು. ನಿನ್ನ ರಕ್ಷೆ ಸದಾ ನಮ್ಮೊಂದಿಗಿರಲಿ. ನಮ್ಮಿಬ್ಬರಿಗೂ ಉಣ್ಣುವುದಕ್ಕೂ ತಿನ್ನುವುದಕ್ಕೂ ಬೇಕಾಗಿರುವ ಸಮೃದ್ಧಿಯನ್ನು ಕರುಣಿಸು”.
ಸಹ ವೀರ್ಯಂ ಕರವಾವಹೈ: “ಗುರುಗಳಿಗೆ ಈ ಅಧ್ಯಾತ್ಮ ವಿದ್ಯೆಯನ್ನು ನಮಗೆ ಕೊಟ್ಟು ನಮ್ಮನ್ನು ಉದ್ಧರಿಸುವಂತೆ ಮಾಡುವ ಸಾಮರ್ಥ್ಯವನ್ನು ಕೊಡು. ನಮ್ಮ ಅಧ್ಯಯನ ಶಕ್ತಿಶಾಲಿಯಾಗಿರಲಿ. ನಮಗೆ ಈ ವಿದ್ಯೆಯನ್ನು ಲೋಕಕ್ಕೆ ಉಪಯೋಗವಾಗುವಂತೆ ಬಳಸುವ ಸಾಮರ್ಥ್ಯವನ್ನು ಕೊಡು”.
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ: “ನಮ್ಮಿಬ್ಬರ ಕೂಡುವಿಕೆಯಿಂದ ನಡೆಯುವ ಈ ಶಾಸ್ತ್ರಾಧ್ಯಾಯನದಿಂದ ಶಾಸ್ತ್ರದ ವರ್ಚಸ್ಸು ನಮ್ಮಲ್ಲಿ ವ್ಯಕ್ತವಾಗಲಿ. ಶಿಷ್ಯ ಪರಂಪರೆಯಿಂದ ಊರ್ಜಿತವಾಗಿ ವಿದ್ಯೆ ಮುಂದುವರಿಯಲು ಬೇಕಾಗಿರುವ ತೇಜಸ್ಸು ನಮ್ಮಲ್ಲಿ ಬರಲಿ. ಗುರುಗಳು ಹೇಳಿದ್ದನ್ನು ನಾನು ನನ್ನ ಮುಂದಿನ ತಲೆಮಾರಿಗೆ ಕೊಡುವ ಶಕ್ತಿ ಕರುಣಿಸು. ಕೊನೇಯತನಕ ನಾವು ಒಬ್ಬರನ್ನೊಬ್ಬರು ದ್ವೇಷಿಸದೇ, ಗೌರವ ಮತ್ತು ಪ್ರೀತಿಯಿಂದಿರುವಂತೆ ಮಾಡು. ನಾವು ಎಂದೆಂದೂ ಯಾರನ್ನೂ ದ್ವೇಷಿಸದೇ, ಎಲ್ಲರನ್ನೂ ಪ್ರೀತಿಸುತ್ತಾ ಬದುಕುವಂತೆ ಮಾಡು”.
ಓಂ ಶಾಂತಿಃ ಶಾಂತಿಃ ಶಾಂತಿಃ : ‘ಓಂ’ ಎನ್ನುವುದು ಅತ್ಯಂತ ಮೂಲಭೂತವಾದ ಬೀಜಾಕ್ಷರ. ಇದು ಭಗವಂತನ ಹೆಸರು. ‘ಶಂ’ ಎಂದರೆ ಆನಂದ; ‘ಇ’ ಎಂದರೆ ಜ್ಞಾನ; ‘ಅಂತ’ ಎಂದರೆ ತುತ್ತತುದಿ. ಆದ್ದರಿಂದ ‘ಓಂ ಶಾಂತಿಃ’ ಎಂದರೆ: ‘ಭಗವಂತ ಜ್ಞಾನಾನಂದಗಳ ತುತ್ತ ತುದಿಯಲ್ಲಿರುವವ’ ಎಂದರ್ಥ. ಮೂರು ವೇದಗಳಲ್ಲಿ ಪ್ರತಿಪಾಧ್ಯನಾಗಿರುವ, ಮೂರು ಕಾಲಗಳಲ್ಲಿರುವ, ಎಲ್ಲಾಕಡೆ ಇರುವ ಭಗವಂತ ಜ್ಞಾನಾನಂದಪೂರ್ಣ ಎಂದು ಇಲ್ಲಿ ಮೂರು ಬಾರಿ ಹೇಳಲಾಗಿದೆ. “ಈ ಅನುಸಂಧಾನದ ಮೂಲಕ ನಮ್ಮ ಬದುಕಿನಲ್ಲಿ ಕೂಡ ಶಾಂತಿಯನ್ನು ಕೊಡು” ಎನ್ನುವ ಪ್ರಾರ್ಥನೆ ಇಲ್ಲಿದೆ.
“ನಮಗೆ ಜ್ಞಾನಾನಂದದ ಪೂರ್ಣತೆಯನ್ನು ಕೊಡು; ನಮಗೆ ಆ ಮೋಕ್ಷದ ಸ್ಥಿತಿಯನ್ನು ಕೊಡು; ಸದಾ ನಿನ್ನೊಂದಿಗಿರುವ ಜ್ಞಾನಾನಂದದ ಅನುಭವವನ್ನು ಕೊಡು; ಅಲ್ಲಿಯ ತನಕ ನಮ್ಮ ಬದುಕಿನಲ್ಲಿ ಇನ್ನೊಬ್ಬರನ್ನು ದ್ವೇಷಿಸದೇ ನೆಮ್ಮದಿಯಿಂದ ಬದುಕುವ ಶಾಂತಿಮಯವಾದ ಬದುಕನ್ನು ಕೊಡು; ಎಲ್ಲರೂ ಶಾಂತಿ-ನೆಮ್ಮದಿಯಿಂದ ಬದುಕಲು ಬಿಡೋಣ ಮತ್ತು ನಾವು ನೆಮ್ಮದಿಯಿಂದ ಬದುಕೋಣ; ಯಾರೂ ಯಾರನ್ನೂ ದ್ವೇಷಿಸುವುದು ಬೇಡ” ಎನ್ನುವುದು ಈ ಶಾಂತಿ ಮಂತ್ರದ ಮೂಲ ಸಂದೇಶ.
ಓಂ ಸಹ ನಾವವತು ಸಹ ನೌ ಭುನಕ್ತು
ಸಹ ವೀರ್ಯಂ ಕರವಾವಹೈ |
ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವಹೈ||
ಓಂ ಶಾಂತಿ: ಶಾಂತಿ: ಶಾಂತಿ: ||
ಈ ಮಂತ್ರದ ಅರ್ಥ ತಿಳಿಯುವುದು ಸೂಕ್ತ.
ಸಹನಾ ವವತು = ಎಲ್ಲರೂ ಪರಸ್ಪರ ಒಬ್ಬರು ಇನ್ನೊಬ್ಬರ ರಕ್ಷ್ಯಣೆಯನ್ನು ಮಾಡೋಣ
ಸಹ ನೌ ಭುನಕ್ತು = ಎಲ್ಲರೂ ಪರಮ ಪ್ರೀತಿಯಿಂದ ಆನಂದವನ್ನು ಅನುಭವಿಸೋಣ
ಸಹ ವೀರ್ಯಂ ಕರವಾವಹೈ = ನಾವೆಲ್ಲರೂ ಪುರುಷಾರ್ಥದಿಂದ ಎಲ್ಲರ ಸಾಮರ್ಥ್ಯವನ್ನು ವರ್ಧಿಸೋಣ
ತೇಜಸ್ವಿ ನೌ ಅಧೀತಮಸ್ತು = ನಮ್ಮೆಲ್ಲರ ತೇಜಸ್ಸು ವರ್ಧಿಸಲಿ
ಮಾ ವಿದ್ವಿಷಾವಹೈ = ನಾವೆಲ್ಲರೂ ಪರಸ್ಪರ ವಿರೋಧವನ್ನು ಎಂದಿಗೂ ಮಾಡದಂತೆ,
ಮಿತ್ರರಾಗಿ ಸದಾ ಇರುವಂತೆ ಮಾಡು
ಶಾಂತಿ: ಶಾಂತಿ: ಶಾಂತಿ:
ಮೂರು ಶಾಂತಿ ಏಕೇ?
೧.ಆಧ್ಯಾತ್ಮಿಕ [ಆತ್ಮಕ್ಕೆ ಸಂಬಂಧಿಸಿದ ದು:ಖ]
೨.ಆಧಿ ಭೌತಿಕ[ದುರ್ಬಲನಿಗೆ ಪ್ರಬಲನಿಂದ ಆಗುವ ದು:ಖ]
೩.ಆಧಿ ದೈವಿಕ = ಪ್ರಕೃತಿ ವಿಕೋಪದಿಂದುಂಟಾಗುವ ದು:ಖ
[ಆಧಿ = ದು:ಖ]
ಭಾವಾರ್ಥ:
ಓ ಭಗವಂತಾ! ನಮ್ಮೆಲ್ಲರಿಗೂ ಪರಸ್ಪರ ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯ ಕೊಡು. ಎಲ್ಲರೂ ಪರಸ್ಪರ ಪ್ರೀತಿಯಿಂದ ಆನಂದವನ್ನು ಅನುಭವಿಸುವಂತಾಗಲಿ. ನಮ್ಮೆಲ್ಲರ ತೇಜಸ್ಸು ವರ್ಧಿಸಲಿ. ನಾವೆಲ್ಲರೂ ಪರಸ್ಪರ ವಿರೋಧವನ್ನು ಎಂದಿಗೂ ಮಾಡದಂತೆ, ಮಿತ್ರರಾಗಿ ಸದಾ ಇರುವಂತೆ ಮಾಡು.
ಈ ಮಂತ್ರಕ್ಕೂ ಭೋಜನಕ್ಕೂ ಏನೂ ಸಂಬಂಧವಿಲ್ಲ. ಆದರೂ ಊಟಮಾಡುವಾಗ ಹೇಳುವ ಪದ್ದತಿ ಬೆಳೆದು ಬಂದಿದೆ. ತಪ್ಪೇನಿಲ್ಲ. ಆದರೆ ಮಂತ್ರದ ಅರ್ಥ ಗೊತ್ತಿರಬೇಕು. ಲೇ: ಡಾ|| ಸುಧಾಕರ ಶರ್ಮಾಜಿ
No comments:
Post a Comment
If you have any doubts. please let me know...