ಜಮದಗ್ನಿ ಮಹರ್ಷಿ ಮಾತ್ರವಲ್ಲ ಒಂದು ಶಕ್ತಿ
ಗೃಣಾನಾ ಜಮದಗ್ನಿನಾ ಯೋನಾವೃತಸ್ಯ ಸೀದತಂ |
ಪಾತಂ ಸೋಮಮೃತಾವೃಧಾ ||
ಜಮದಗ್ನಿಯಿಂದ ಸ್ತುತಿಸಲ್ಪಡುವ ಮಿತ್ರಾವರುಣರೇ, ನೀವು ಈ ಯಜ್ಞ ವೇದಿಕೆಯಲ್ಲಿ ಕುಳಿತು, ಯಜ್ಞ ವರ್ಧಕರಾಗಿ ಸೋಮವನ್ನು ಪಾನ ಮಾಡಿರಿ. ಎನ್ನುವುದು ಋಗ್ವೇದ ಮೂರನೇ ಮಂಡಲದ ಐದನೇ ಸೂಕ್ತದಲ್ಲಿ ಬರುವ ಋಕ್ಕು.
ಇಲ್ಲಿ ಜಮದಗ್ನಿಗೆ ಸಾಯಣಾಚಾರ್ಯರು ಎರಡು ವಿಧವಾಗಿ ಅರ್ಥ ಹೇಳಿದ್ದಾರೆ. ಮೊದಲನೆಯದಾಗಿ ಜಮದಗ್ನಿ ಎನ್ನುವ ಹೆಸರನ್ನು ಹೊಂದಿರುವ ಮಹರ್ಷಿ ಎನ್ನುವುದಾಗಿದ್ದರೆ, ಇನ್ನೊಂದು ಜಮದಗ್ನಿ ಎನ್ನುವುದು ಪ್ರಜ್ವಲಿತವಾದ ಅಗ್ನಿ ಎಂದಾಗುತ್ತದೆ. ಯಜ್ಞಕ್ಕಾಗಿ ಅಗ್ನಿಯನ್ನು ಪ್ರಜ್ವಲಿತನನ್ನಾಗಿ ಮಾಡಿದ ವಿಶ್ವಾಮಿತ್ರ ಎನ್ನುವುದು ಇನ್ನೊಂದು ಅರ್ಥ.
ಜಮದಗ್ನಿ ಮಹರ್ಷಿ ಇಂದ್ರ ಮತ್ತು ವಿಶ್ವಾಮಿತ್ರ ಇಬ್ಬರಿಗೂ ಮಿತ್ರರಾಗಿದ್ದರು. ಜಮದಗ್ನಿ, ಭೃಗುವಿನ ಮಗನಾದುದರಿಂದ ಹೆಚ್ಚಿನ ಕಡೆ ಜಮದಗ್ನಿ ಭಾರ್ಗವ ಎಂದು ಎನ್ನುವುದಾಗಿ ಕರೆಯಲಾಗಿದ್ದು ಆ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ.
ಸುತೇ ಸಾತೇನ ಯದ್ಯಾಗಮಂ ವಾಂ ಪ್ರತಿ ವಿಶ್ವಾಮಿತ್ರ ಜಮದಗ್ನೀ ದಮೇ || ಎನ್ನುವಲ್ಲಿ ಇಂದ್ರನು ಜಮದಗ್ನಿ ಮತ್ತು ವಿಶ್ವಾಮಿತ್ರರಿಬ್ಬರನ್ನೂ ಜೊತೆಯಲ್ಲಿಯೇ ಸಂಬೋಧಿಸಿ ತನ್ನ ಅನುಗ್ರಹವನ್ನು ವ್ಯಕ್ತಪಡಿಸಿದ್ದಾನೆ. ಅನೇಕ ಕಡೆಗಳಲ್ಲಿ ವಿಶ್ವಾಮಿತ್ರರ ಜೊತೆಯಲ್ಲಿಯೇ ಕಾಣಿಸಿಕೊಳ್ಳುವ ಜಮದಗ್ನಿ ಹತ್ತನೇ ಮಂಡಲದ ನೂರ ಅರವತ್ತೇಳನೇ ಸೂಕ್ತದಲ್ಲಿ ಜೊತೆಯಾಗಿದ್ದಾರೆ. "ವಿಶ್ವಾಮಿತ್ರೇ ಜಮದಗ್ನೀ ವಶಿಷ್ಠೇನಾಸ್ಪರ್ಧೇತಾಗಂ" ಎಂದು ತೈತ್ತಿರೀಯ ಸಂಹಿತೆಯ ೩:೧-೭:೩ ರಲ್ಲಿ ಸಿಗುತ್ತದೆ. ಇಲ್ಲಿ ವಶಿಷ್ಠರೊಂದಿಗೆ ಹೋರಾಡಲು ಸಮರ್ಥ ಎನ್ನಲಾಗಿದೆ.
ವಿಶ್ವಾಮಿತ್ರ ಮತ್ತು ಜಮದಗ್ನಿ ಸೇರಿ ವಶಿಷ್ಠರೊಂದಿಗೆ ಹೋರಾಡುತ್ತಿದ್ದಾಗ ಮಮಾಗ್ನೇ ವರ್ಚೋ ಎನ್ನುವ ಹತ್ತನೇ ಮಂಡಲದ ೧೨೮ನೇ ಸೂಕ್ತದ ದರ್ಶನವನ್ನು ಜಮದಗ್ನಿ ಪಡೆದುಕೊಳ್ಳುತ್ತಾರೆ. ಈ ಸೂಕ್ತದ ಸಹಾಯದಿಂದ ವಶಿಷ್ಠನ ಶಕ್ತಿಯನ್ನು ತಾನು ಪಡೆದುಕೊಳ್ಳುತ್ತಾರೆ ಎನ್ನುವುದು ತೈತ್ತಿರೀಯ ಸಂಹಿತೆ ಮತ್ತು ಬೃಹದ್ದೇವತೆಯಲ್ಲಿನ ಅಭಿಪ್ರಾಯ.
ಸುದಾಶಶ್ಚ ಮಹಾಯಜ್ಞೇ ಎನ್ನುವ ಬೃಹದ್ದೇವತಾ ವಾಕ್ಯವು ಸುದಾಸನ ಮಹಾ ಯಜ್ಞವೊಂದರಲ್ಲಿ ವಿಶ್ವಾಮಿತ್ರರನ್ನು ವಶಿಷ್ಠರ ಮಗ ಶಕ್ತಿ ಎನ್ನುವವನು ಹೊಡೆದುರುಳಿಸಿದಾಗ ಮೂರ್ಚಿತರಾಗಿ ಜ್ಞಾನ ಶೂನ್ಯನಾಗಿ ವಿಶ್ವಾಮಿತ್ರರು ಬೀಳುತ್ತಾರೆ. ಇಲ್ಲಿಯೂ ಸಹ ವಿಶ್ವಾಮಿತ್ರರಿಗೆ ಜಮದಗ್ನಿ ಮಹರ್ಷಿ ಸಹಾಯ ಮಾಡುತ್ತಾರೆ ಎನ್ನುವ ಕಥೆ ಬರುತ್ತದೆ.
ಪ್ರಜಾಪತಿರ್ವಿರಾಜ ಮಪಶ್ಯತ್ತಯಾ ಭೂತಂ ಚ ಭವ್ಯಂ ಚಾಸೃಜತ ತಾಮೃಷಿಭ್ಯಸ್ತಿರೋದಧಾತ್ತಾಂ ಜಮದಗ್ನಿಸ್ತಪದಾ ಪಶ್ಯತ್ತಯಾ ವೈ ಸ ಪೃಶ್ನೀನ್ಕಾಮಾನ ಸೃಜತ ಎಂದು ತೈತ್ತಿರೀಯ ಸಂಹಿತೆಯಲ್ಲಿ ಹೇಳಲ್ಪಟ್ಟಿದೆ. ಇದರಲ್ಲಿ ಜಮದಗ್ನಿ ಎನ್ನುವ ಪದಕ್ಕಿರುವ ಅರ್ಥ ವೈಶಾಲ್ಯವನ್ನು ಹೇಳಲಾಗಿದೆ. ಜಮದಗ್ನಿ ಎನ್ನುವವರು ಪ್ರಜಾಪತಿಯ ಮಗನೆಂತಲೂ ಜಗತ್ತಿನ ಎಲ್ಲಾ ವಿದ್ಯಮಾನಗಳನ್ನೂ ತನ್ನ ದಿವ್ಯ ದೃಷ್ಟಿಯಿಂದ ವೀಕ್ಷಿಸಿ ಈ ಪ್ರಪಂಚಕ್ಕೆ ಜ್ಞಾನ ರೂಪವಾದ ಪ್ರಕಾಶವನ್ನು ಉಂಟುಮಾಡುವವರು ಎನ್ನಲಾಗಿದೆ. ಪ್ರಜಾಪತಿಯು ವಿರಾಟ್ ದರ್ಶನವನ್ನು ಪಡೆವನು. ಅದರ ಸಹಾಯದಿಂದಲೇ ಭೂತ ಮತ್ತು ಭವಿಷ್ಯತ್ತುಗಳನ್ನು ಸೃಷ್ಟಿಮಾಡಿದನಂತೆ. ಆದರೆ ಇವೆರಡನ್ನೂ ಋಷಿಗಳ ಗೋಚರಕ್ಕೆ ಬೀಳದಂತೆ ಮಾಡಿದನಂತೆ. ಆಗ ಜಮದಗ್ನಿಯು ತನ್ನ ತಪಸ್ಸಿನ ಮಹಿಮೆಯಿಂದ ಅವುಗಳ ದರ್ಶನವನ್ನು ಪಡೆಯುತ್ತಾರೆ. ಅವುಗಳಿಂದ ಜಗತ್ತಿನ ಅನೇಕ ವಿಷಯಗಳನ್ನು ಸೃಷ್ಟಿಸುತ್ತಾರೆ. ಹೀಗೆ ಜಮದಗ್ನಿಯ ದಿವ್ಯವಾದ ಶಕ್ತಿಯನ್ನು ವಿವರಿಸಲಾಗಿದೆ.
ಬೃಹದಾರಣ್ಯಕ ಉಪನಿಷತ್ತಿನಲ್ಲಿ ಇಮಾವೇವ ಗೋತಮ ಭಾರಧ್ವಾಜೌ | ಅಯಮೇವ ಗೋತಮಃ ಅಯಂ ಭಾರಧ್ವಾಜಃ | ಇಮಾವೇವ ವಿಶ್ವಾಮಿತ್ರ ಜಮದಗ್ನಿಃ ಎಂದು ಶರೀರದ ತತ್ವವನ್ನು ವಿವರಿಸುವ ಸಂದರ್ಭದಲ್ಲಿ ಹೇಳಲಾಗಿದೆ. ಗೋತಮ ಮತ್ತು ಭರಧ್ವಾಜರು ಶ್ರೋತೃ ತತ್ವ ಪ್ರತಿಪಾದಕರಾದರೆ ವಿಶ್ವಾಮಿತ್ರ ಜಮದಗ್ನಿ ಚಕ್ಷುಸ್ತತ್ತ್ವ ಪ್ರತಿಪಾದಕರು. ವಿಶ್ವಾಮಿತ್ರ ಬಲಗಣ್ಣಾದರೆ ಜಮದಗ್ನಿಯೇ ಎಡಗಣ್ಣು ಎನ್ನುವುದು ಈ ಉಪನಿಷತ್ತಿನ ಅರ್ಥವಾದರೂ ಇದು ಭೌತಿಕವಾದ ಅವಯವಗಳ ಕುರಿತಾಗಿರದೇ ಅಗಾಧವಾದ ಜ್ಞಾನದ ಕಣ್ಣುಗಳ ಕುರಿತಾಗಿ ಹೇಳಿದ್ದು.
"ಚಕ್ಷುರ್ವೈ ಜಮದಗ್ನಿರ್ ಋಷಿರ್ಯದೇನೇನ ಜಗತ್ಪಶ್ಯತ್ಯಥೋ" ಎನ್ನುವುದು ಶತಪಥ ಬ್ರಾಹ್ಮಣದಲ್ಲಿ. ಜಮದಗ್ನಿಯೇ ಕಣ್ಣು ಈ ಜಗತ್ತೆಲ್ಲವೂ ಯಾವುದರಿಂದ ನೋಡಲ್ಪಡುತ್ತದೆಯೋ ಅಂತಹ ಜ್ಞಾನವನ್ನು ನಮಗೆ ನೀಡಿದಾತನೇ ಜಮದಗ್ನಿ. ಪ್ರಜಾಪತಿಯಿಂದ ಸೃಷ್ಟಿಗೊಂಡ ಜಗತ್ತಿನ ಚರಾಚರ ವಸ್ತು ಮತ್ತು ವಿಷಯಗಳ ಕುರಿತಾದ ಜ್ಞಾನವನ್ನು ನೀನೇ ಈ ಪ್ರಪಂಚಕ್ಕೆ ನೀಡಿರುವೆ ಎನ್ನುವ ಅರ್ಥವನ್ನು ಧ್ವನಿಸುತ್ತದೆ. "ಯದಕ್ಷರಂ ಭೂತ ಕೃತಂ" ಎಂದು ಆರಂಭಗೊಳ್ಳುವ ತೈತ್ತಿರೀಯ ಆರಣ್ಯಕದ ಮಾತು ಜಮದಗ್ನಿಯ ಕುರಿತಾಗಿರುವುದು. ಜಮದಗ್ನಿಯು ಅಕ್ಷರಾತ್ಮಕನಾದ ಪರಮಾತ್ಮನ ಸಾಕ್ಷಾತ್ ರೂಪ ಎನ್ನುವುದನ್ನು ತಿಳಿಸಿಕೊಡುತ್ತದೆ.
ಸಸರ್ಪರೀರಮತಿಂ ಬಾಧಮಾನಾ ಬೃಹನ್ಮಿಮಾಯ ಜಮದಗ್ನಿ ದತ್ತಾ |
ಆ ಸೂರ್ಯಸ್ಯ ದುಹಿತಾ ತತಾ ನ ಶ್ರವೋ ದೇವೇಷ್ವಮೃತಮಜುರ್ಯಂ ||
ಇದು ವಾಗ್ದೇವತೆಯನ್ನು ಕುರಿತಾಗಿರುವುದು. ಸುದಾಸನ ಯಜ್ಞವನ್ನು ವಿಶ್ವಾಮಿತ್ರ ನೆರವೇರಿಸುತ್ತಿದ್ದ. ಆಗ ವಶಿಷ್ಠರ ಮಗನಾದ ಶಕ್ತಿ ಎನ್ನುವವನು ವಿಶ್ವಾಮಿತ್ರನ ಶಕ್ತಿಯನ್ನೂ ಮತ್ತು ಮಾತನ್ನೂ (ಸ್ವರ) ಸ್ತಂಬನ ಮಾಡುತ್ತಾನೆ. ಇದರಿಂದಾಗಿ ವಿಶ್ವಾಮಿತ್ರ ಸತ್ವಹೀನರಾಗಿ ಮತ್ತು ಜ್ಞಾನ ಶೂನ್ಯರಾಗಿ ಬೀಳುತ್ತಾರೆ. ಆಗ ಜಮದಗ್ನಿ ಮಹರ್ಷಿಯು ಸೂರ್ಯ ಮಂಡಲದಿಂದ ಸೂರ್ಯನ ಪುತ್ರಿಯಾದ ವಾಗ್ದೇವತೆಯನ್ನು ತಂದು ವಿಶ್ವಾಮಿತ್ರರಿಗೆ ಕೊಡುವುದರಿಂದ ವಿಶ್ವಾಮಿತ್ರ ಪುನಃ ಜ್ಞಾನ ಚಕ್ಷುಗಳಿಂದ ಯಜ್ಞದಲ್ಲಿ ಭಾಗಿಯಾಗಲು ಸಮರ್ಥರಾಗುತ್ತಾರೆ. ಇಲ್ಲಿ ಸೂರ್ಯನೆನ್ನುವ ಜ್ಞಾನ ರಾಶಿಯಿಂದ ವಾಗ್ದೇವತೆ ಎನ್ನುವ ಜ್ಞಾನದ ಒಂದು ಪ್ರಮುಖ ಅಂಶವನ್ನು ವಿಶ್ವಾಮಿತ್ರರಿಗೆ ಜಮದಗ್ನಿ ಕೊಡಿಸುತ್ತಾರೆ. ಅಂದರೆ ಇಲ್ಲಿ ಜಮದಗ್ನಿ ಈ ಜಗತ್ತಿನ ಜ್ಞಾನ ಪ್ರಸಾರಕ್ಕೆ ಪ್ರಮುಖರಾಗುತ್ತಾರೆ. ಜಡವಾದ ಜಗತ್ತನ್ನು ಚೇತನಾಶೀಲನನ್ನಾಗಿ ಮಾಡಲು ಜಮದಗ್ನಿ ಕಾರಣರಾಗುತ್ತಾರೆ, ಮತ್ತು ನಮ್ಮ ಮಾತುಗಳನ್ನು ನಿರ್ಧರಿಸಿ ನಿಯಂತ್ರಿಸುವಲ್ಲಿಯೂ ಜಮದಗ್ನಿ ಕಾರಣರಾಗುತ್ತಾರೆ. ಅದನ್ನೇ ನಿರುಕ್ತಕಾರರು ಪ್ರಜ್ವಾಲಿತಾಗ್ನಿಃ ಎಂದಿರುವುದು. ಅಂದರೆ ಆರದೇ ಇರುವ ಸದಾಕಾಲ ಬೆಳಗುತ್ತಿರುವ ಅಗ್ನಿ ಎಂದು. ಗದ್ಯ ಮತ್ತು ಪದ್ಯ ರೂಪದಿಂದ ಜಗದ್ವಾಪಕವಾಗಿ ಪ್ರಸಾರ ಹೊಂದಿರುವ ವಾಗ್ದೇವತೆಯು ಪಂಚಜನ(ಐದು ವಿಧವಾದ ಜನರಲ್ಲಿಯೂ)** ಪಂಚ ಜನ ಎನ್ನುವುದರ ಅರ್ಥ ವೈಶಾಲ್ಯ ದೊಡ್ದದಿದೆ ಅದು ಇಲ್ಲಿ ನಾನು ಬರೆಯುತ್ತಿಲ್ಲ. ಪಂಚ ವಿಧದ ಜನರಲ್ಲಿಯೂ ವಾಕ್ಸಾಮರ್ಥ್ಯ ಮತ್ತು ಜ್ಞಾನದ ಹರಿವು ಉಂಟಾಗುವಂತೆ ಮಾಡಿದ್ದು ಇದೇ ಜಮದಗ್ನಿ. ಇವರನ್ನು ವೃದ್ಧ ಜಮದಗ್ನಿ ಎಂದು ಈ ಋಕ್ಕು ಹೇಳುತ್ತದೆ.
ಹೀಗೇ ವೇದದಲ್ಲಿ ಜಮದಗ್ನಿ ಜಗತ್ತಿಗೆ ಜ್ಞಾನವನ್ನು ಮತ್ತು ನಮಗೆ ಮಾತನಾಡುವ ಸಾಮರ್ಥ್ಯವನ್ನು ಒದಗಿಸಿಕೊಟ್ಟವರು ಎನ್ನುವುದು ತಿಳಿದು ಬರುತ್ತದೆ. ಅತ್ಯಂತ ದೀರ್ಘ ಕಾಲ ಬಾಳಿ ಬದುಕಿದವರು ಜಮದಗ್ನಿ.
#ಜಮದಗ್ನಿ_ವಿಶ್ವಾಮಿತ್ರ
ಸದ್ಯೋಜಾತರು
No comments:
Post a Comment
If you have any doubts. please let me know...