August 19, 2021

ಉಪಾಯವಿದ್ದರೆ ಯಾವ ಅಪಾಯದಿಂದಲೂ ಪಾರಗಬಹುದು

ದಿನಕ್ಕೊಂದು ನೀತಿ ಕಥೆ
ಕಾಡಿನಲ್ಲಿ ನರಿಯೊಂದು ಆಹಾರ ಅರಸುತ್ತಾ ಹೊರಟಿತ್ತು, ಸ್ವಲ್ಪ ದೂರ ಹೊರಟಾಗ ತನಗರಿವಿಲ್ಲದೇ ಹಾಳುಬಾವಿಯೊಂದರಲ್ಲಿ ಬಿದ್ದುಬಿಟ್ಟಿತು. ಬಿದ್ದ ರಭಸಕ್ಕೆ ಅದಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆದರೆ ಹೊರಬರುವ ಪ್ರಯತ್ನ ಮಾತ್ರ ವ್ಯರ್ಥವಾಯಿತು. ಉಪಾಯದಿಂದ ಪಾರಾಗುವ ಪ್ರಯತ್ನ ಮಾಡದೇ ಹೋದರೆ ತಾನು ಸತ್ತೇ ಹೋಗುವೆನೆಂದು ಭಾವಿಸಿ ಅತ್ತಿತ್ತ ನೋಡಿತು. ಹಾಳುಬಾಯಿಯ ಅನತಿ ದೂರದಲ್ಲೇ ಹೆಮ್ಮರಗಳು ಬೆಳೆದಿರುವುದು ಗೋಚರಿಸಿತು. ಅಲ್ಲಿ ಅನೇಕ ಪಕ್ಷಿಗಳಿದ್ದವು. ಆಗ ಅದಕ್ಕೊಂದು ಉಪಾಯ ಹೊಳೆಯಿತು.

" ಕಾಡಿನ ಪ್ರಾಣಿಗಳನ್ನು ಅಪಾಯದಿಂದ ಪಾರುಮಾಡುವ ವಿಷಯವು ನನಗೆ ತಿಳಿದಿದೆ. ಕೂಡಲೇ ನನ್ನನ್ನು ಮೇಲಕ್ಕೆತ್ತಿರಿ' ಂದು ಶಕ್ತಿಮೀರಿ ಕೂಗಿಕೊಳ್ಳತೊಡಗಿತು. ಹೆಮ್ಮರದಲ್ಲಿದಲ್ಲಿದ್ದ ಹಕ್ಕಿಗಳು ಅಲ್ಲಿಗೆ ಹಾರಿಬಂದವು. ಆಗ ನರಿಯು, "ಬಂಧುಗಳೇ, ಈ ಕಾಡಿನ ಪ್ರಾಣಿಗಳಿಗೆ ಪ್ರಾಣಾಪಾಯವಿದೆ. ಹಾಗಾಗಿ ಈ ಕೂಡಲೇ ಅವರಿಗೆ ವಿಷಯ ತಿಳಿಸಬೇಕಾಗಿದೆ. ಕಾಡಿನ ಪ್ರಾಣಿಗಳಿಗೆ ನನ್ನನ್ನು ರಕ್ಷಿಸಲು ತಿಳಿಸಿರಿ' ಎಂದು ಹೇಳಿತು. 

ಪಕ್ಷಿಗಳೆಲ್ಲವೂ ಹಾಳುಬಾವಿಯಲ್ಲಿದ್ದ ನರಿಯ ವಿಷಯವನ್ನು ಕಾಡುಪ್ರಾಣಿಗಳಿಗೆ ತಿಳಿಸಿದವು. ಅವೆಲ್ಲ ಬಂದಾಗ ನರಿ ಬಾರಿ ಬಾರಿ ಕೂಗಿಕೊಂಡಿತು, " ಬಂಧುಗಳೇ ನೀವು ತುಂಬ ಅಪಾಯದಲ್ಲಿದ್ದೀರಿ' ಅವು ಯಾವುದೋ ಮುಖ್ಯವಾದ ವಿಷಯವೇ ಇರಬೇಕೆಂದು ಕಲ್ಲು, ಮಣ್ಣನ್ನು ತಂದು ಹಾಳುಬಾವಿಯಲ್ಲಿ ಸುರಿಯತೊಡಗಿದವು. ನರಿಯು ಅದರ ಮೇಲೆ ನಿಂತು ಮೇಲೆ ಮೇಲೆ ಬರತೊಡಗಿತು. ಬಹಳ ಹೊತ್ತಾದ ಮೇಲೆ ಬಾವಿಯು ಸಂಪೂರ್ಣ ಮುಚ್ಚಿಕೊಂಡಿತು. ಆಗ ನರಿಯು ನೆಲದ ಮೇಲೆ ಬಂದಿಳಿಯಿತು. 

ಕಾಡಿನ ಪ್ರಾಣಿಗಳು ಕುತೂಹಲದಿಂದ "ನರಿಯಣ್ಣ, ನಮಗೆ ಯಾವ ಅಪಾಯವಿದೆ?' ಎಂದು ಕುತೂಹಲದಿಂದ ಪ್ರಶ್ನಿಸತೊಡಗಿದವು. ಆಗ ನರಿಯು ಕಲ್ಲುಮಣ್ಣುಗಳಿಂದ ತುಂಬಿದ ಹಾಳುಬಾವಿಯನ್ನು ತೋರಿಸುತ್ತಾ, " ಬಂಧುಗಳೇ, ನಾನು ಯಾವ ಹೊಸ ವಿಷಯವನ್ನು ನಿಮಗೆ ಹೇಳಬೇಕೆಂದಿರುವೆನೋ ಅದನ್ನು ಅದನ್ನು ನೀವು ಈಗಾಗಲೇ ಮಾಡಿದ್ದೀರಿ' ಎಂದು ನರಿಯು ಅಲ್ಲಿಂದ ಹೊರಟಿತು. ಆಗ ಕಾಡಿನ ಪ್ರಾಣಿಗಳೆಲ್ಲವೂ ಕಲ್ಲು ಮಣ್ಣುಗಳಿಂದ ಭರ್ತಿಯಾದ ಹಾಳುಬಾವಿಯನ್ನು ವಿಸ್ಮಯದಿಂದ ನೋಡತೊಡಗಿದವು.

ನೀತಿ : ಉಪಾಯವಿದ್ದರೆ ಯಾವ ಅಪಾಯದಿಂದಲೂ ಪಾರಗಬಹುದು
ಕೃಪೆ ಉದಯವಾಣಿ

No comments:

Post a Comment

If you have any doubts. please let me know...