August 9, 2021

ಭಾರತ ಎನ್ನುವ ಹೆಸರಿನ

ಭಾರತ ಎನ್ನುವ ಹೆಸರಿನ. . . .

ಆರ್ಯಾವರ್ತಃ ಪುಣ್ಯಭೂಮಿ ಎಂದು ಸಾರುವುದು ನಮ್ಮ ಶಾಸ್ತ್ರಗಳು. ಇವು ಈ ಭೂಮಿಯ ಮೇಲಿರುವ ಭರತವರ್ಷ ಎನ್ನುವುದು ಪುಣ್ಯಭೂಮಿಯಾದರೆ ಆರ್ಯಾವರ್ತ ಎನ್ನುವುದು ಅತ್ಯಂತ ಪವಿತ್ರ ಭೂಮಿ ಎಂದು ಹೇಳುತ್ತಿವೆ. ಈ ಭೂಮಿಯ ಮೇಲೆ ಮಾನವ ಕಾಣಿಸಿಕೊಂಡ ನಂತರ ಭಗವಂತ ಒಂದಲ್ಲ ಒಂದು ರೂಪದಿಂದ ನಮ್ಮೊಡನಿದ್ದು ನಮಗೆ ಧರ್ಮದಂತೆ ನಡೆಯಲು ಮಾರ್ಗದರ್ಶನ ನೀಡಿದ್ದಾನೆ. ಭಗವಂತ ಇಲ್ಲಿ ನಮಗೆ ರಕ್ತ ಸಂಬಂಧಿಯಾಗಿ ಕಾಣಿಸಿಕೊಂಡಿದ್ದಾನೆ, ಹಾಗೂ ಮಿತ್ರನಾಗಿ ಕೆಲವೊಮ್ಮೆ ಕಾಣಿಸಿಕೊಂಡಿದ್ದಾನೆ. ಅಧ್ಯಾತ್ಮದ ಮಾರ್ಗದರ್ಶಕನಾಗಿ ಬಂದ ಭಗವಂತ ಈ ಭರತ ವರ್ಷದಲ್ಲಿನ ಪ್ರಳಯಗಳ ನಿಯಂತ್ರಕನಾಗಿ ಉಳಿದುಕೊಂಡಿದ್ದಾನೆ. ಈ ಭರತವರ್ಷವು ಎಲ್ಲಾ ಜೀವಿಗಳ ಉಗಮಕ್ಕೂ ಮೂಲ ಸ್ತಳವಾಗಿದೆ ಎಂದರೆ ತಪ್ಪಲ್ಲ ಎಂದು ಹೇಳುತ್ತವೆ. 

ಈ ಬ್ರಹ್ಮಾಂಡದ ಆರಂಭದಲ್ಲಿ ಬ್ರಹ್ಮನು ಮೊದಲು ಸೃಷ್ಟಿಸಿದ ಸ್ಥಳವಿದು ಎನ್ನುವುದು ವೇದ ಮತ್ತು ಶಾಸ್ತ್ರಗಳು. ಅವುಗಳು ನಿಸ್ಸಂದಿಗ್ಧವಾಗಿ ಹೇಳುವ ಪ್ರದೇಶ ಇದು. ಹಿಮಾಲಯದಿಂದ ಕನ್ಯಾಕುಮಾರಿಯವರೆಗಿನ ಪ್ರದೇಶದಲ್ಲಿ ಅದೆಷ್ಟೋ ಸಹಸ್ರ ವರ್ಷಗಳಿಂದ ಆರ್ಯ ಸಂಸ್ಕೃತಿ, ಮತ್ತು ಅದನ್ನು ಆಚರಿಸಿಕೊಂಡು ಬಂದ ಆರ್ಯಜನಾಂಗ ನೆಲೆಸಿತ್ತು ಎನ್ನುವುದಕ್ಕೆ ಈಗಾಗಲೇ ಅನೇಕ ಆಧಾರಗಳು ಸಿಕ್ಕಿಯಾಗಿವೆ. 
ಸ್ವಯಂಭುವ ಮನುವು ಈ ಮಾನವಕುಲದ ಮೂಲ ಪುರುಷ ಎಂದು ನಾವು ನಂಬುತ್ತೇವೆ. ಅತನೇ ನಮ್ಮಲ್ಲಿನ ಆಧ್ಯಾತ್ಮದ ಭಾವವನ್ನು ಜಾಗ್ರತಗೊಳಿಸಿದ. ಆತ ಪೋಷಿಸಿ ಜಾಗ್ರತಗೊಳಿಸಿದುದರಿಂದಲೇ ಆತನನ್ನು ಭರತ ಎಂದು ಕರೆಯಲಾಯಿತು. ಸಂಸ್ಕೃತದ ಭರನ ಎನ್ನುವುದಕ್ಕೆ ಪ್ರಜಾನಾಂ ವಿನಯಾಧಾನಾದ್ರಕ್ಷಣಾದ್ಭರಣ ಎನ್ನುವ ಅರ್ಥವಿದೆ. ಪ್ರಜೆಗಳ ಸಂಪೂರ್ಣ ರಕ್ಷಣೆ, ಪಾಲನೆಗಳ ಭಾರ ವಹಿಸಿದವನೇ ಭರತ. ಆತನ ನಿರ್ದೇಶನದಂತೆ ಇಂದಿಗೂ ನಾವು ನಡೆಯುತ್ತಿರುವುದರಿಂದ ಮಾನವೀಯ ಗುಣಗಳು ಅವನಿಂದಲೇ ಬಂದಿರುವುದರಿಂದ ನಾವು ಭಾರತೀಯರಾದೆವು, ದೇಶ ಭಾರತವಾಯಿತು. ಹಿಮಾಲಯದಿಂದ ರಾಮ ಸೇತುವಿನ ತನಕದ ಪ್ರದೇಶ ಭಾರತವಾದರೆ, ಇಲ್ಲಿನ ಜನಾಂಗವನ್ನು ಭಾರತರು ಎಂದು ಗುರುತಿಸಲಾಯಿತು ಮತ್ತು ಭರತವರ್ಷ ಎಂದೂ ಸಹ ಕರೆಯಲಾಯಿತು.

ಸ್ವಯಂಭುವಿನ ನಂತರ ನಾಭಿ ಎನ್ನುವ ರಾಜನು ಆಳುತ್ತಾನೆ. ಆಗ ಈ ಭೂಮಿ ಅಜನಾಭವರ್ಷ ಎನ್ನುವ ಹೆಸರು ಪಡೆಯುತ್ತದೆ. ಅವನ ನಂತರ ಋಷಭ ಎನ್ನುವವನು ಆಡಳಿತ ನಡೆಸುತ್ತಾನೆ. ಆ ಋಷಭನ ಮಗನೇ ಭರತ ಅಥವಾ ಜಡಭರತ. ಈ ಜಡಭರತನಿಂದಾಗಿ ಭಾರತ ಎನ್ನುವ ಹೆಸರು ಬಂತು ಎನ್ನುವ ಅಭಿಪ್ರಾಯ ಸಹ ಕೆಲವರದ್ದು. ಇನ್ನು ಇಮಂ ಇಂದ್ರ ಭರತಸ್ಯ ಪುತ್ರಾಃ ಎನ್ನುವ ಋಗ್ವೇದ ಮೂರನೇ ಮಂಡಲದ ಸೂಕ್ತವೊಂದರ ಮಂತ್ರವೂ ಸಹ ಈ ನೆಲಕ್ಕೆ ಭಾರತ ಎಂದಿರುವುದಕ್ಕೆ ದಾಖಲೆ. ಇನ್ನು ಪುರಾಣಗಳು ಭರತಪ್ರಜಾ, ಭರತ ಮತ್ತು ಭಾರತ ಎನ್ನುವುದಾಗಿಯೇ ಕರೆದಿವೆ. ಅಂತೂ ಈ ವೇದದಲ್ಲಿನ ಭರತದ ಉಲ್ಲೇಖವನ್ನು ಗಮನಿಸಿದರೆ ಈ ನೆಲಕ್ಕೆ ಆ ಹೆಸರು ಬಂದದ್ದು ನಾವು ಗಣಿಸಲು ಸಾಧ್ಯವಿಲ್ಲದಷ್ಟು ಪ್ರಾಚೀನದಲ್ಲಿ. 

ಇನ್ನು ವಾಯುಪುರಾಣವು ೧:೪೫: ೭೫ರಲ್ಲಿ: ಇದಂ ತು ಮಧ್ಯಮಂ ಚಿತ್ರಂ ಶುಭಾಶುಭ ಫಲೋದಯಂ | ಉತ್ತರಂ ಯತ್ಸಮುದ್ರಸ್ಯ ಹಿಮವತ್ ದಕ್ಷಿಣಂ ಚ ಯತ್|| ಎಂದಿದೆ 
ಹಿಮಾಲಯದ ದಕ್ಷಿಣಕ್ಕೂ ಮತ್ತು ಕನ್ಯಾಕುಮಾರಿಯಿಂದ ಉತ್ತರಕ್ಕೂ ಇರುವ ಮಧ್ಯದ ಭೂ ಪ್ರದೇಶ ಶುಭಾಶುಭ ಫಲಗಳನ್ನು ಅವರವರ ಕರ್ಮಗಳಿಗನುಸಾರವಾಗಿ ನೀಡುತ್ತದೆ, ಆದುದರಿಂದ ಇದನ್ನೇ ಭರತವರ್ಷ ಎನ್ನುತ್ತೇವೆ ಎನ್ನುವ ಅರ್ಥ ಕೊಡುತ್ತದೆ.
ಇನ್ನು ವಾಯು ಮತ್ತು ಮತ್ಸ್ಯ ಪುರಾಣದಲ್ಲಿ ಹೇಳುವಂತೆ ವರ್ಷಯದ್ಭಾರತಂ ನಾಮ ಅತ್ರೇಯಂ ಭಾರತೀ ಪ್ರಜಾ | ಭರಣಾಚ್ಚ ಪ್ರಜಾನಾಂ ವೈ ಮನುರ್ಭರತ ಉಚ್ಯತೇ | ನಿಋಕ್ತ ವಚನಾಚ್ಚೈವ ವರ್ಷಂ ತದ್ಭಾರತಂ ಸ್ಮೃತಮ್ || ಎಂದಿರುವಲ್ಲಿ ಮನುವು ಇಲ್ಲಿನ ಮಾನವಕುಲದ ಮಾರ್ಗದರ್ಶಕನಾಗಿ ಮನುಕುಲವನ್ನು ಸರಿಯಾದ ಮಾರ್ಗದಲ್ಲಿ ನಡೆಸಿದ ಕಾರಣಕ್ಕಾಗಿ ಈ ನೆಲದ ಪ್ರಜೆಗಳನ್ನು ಬಾರತೀಪ್ರಜಾ ಎಂದು ಕರೆಯಲಾಯಿತು. ಇಲ್ಲಿನ ಜನರ ಅಗತ್ಯಗಳಿಗೆ ಸ್ಪಂಧಿಸಿದ ಮನುವಿನ ಇನ್ನೊಂದು ಹೆಸರೇ ಭರತ ಎಂದಿರುವುದರಿಂದ ಅವನ ಪ್ರಜೆಗಳೆಲ್ಲರೂ ಬಾರತೀಯರು ಮತ್ತು ಭರತವರ್ಷೀಯರು ಎನ್ನಿಸಿದರು ಎನ್ನುವ ಅಭಿಪ್ರಾಯ ನೀಡುತ್ತದೆ.

ಈ ಪುಣ್ಯ ನೆಲದಲ್ಲಿನ ಆಚಾರ, ವಿಚಾರ, ಸಂಸ್ಕೃತಿಯ ಫಲವಾಗಿ ಮತ್ತು ಆಚರಿಸುವ ಕರ್ಮದ ಫಲದ ರೂಪ ಇಲ್ಲಿನ ಪ್ರಜೆಗಳ ಆತ್ಮವು ಸ್ವರ್ಗವನ್ನು ಸೇರುತ್ತದೆ ಎನ್ನುವ ನಂಬುಗೆ ಇದೆ. ಹೀಗೆ ಇರುವ ಕಾರಣದಿಂದಲೂ ಸಹ ಇಲ್ಲಿನ ಜನ ಸಹಿಷ್ಣುಗಳು ಮತ್ತು ಹಿಂಸಾರೂಪಿಗಳಾಗಿಲ್ಲ ಎನ್ನುವುದು ವಾಯುಪುರಾಣ. ಇಲ್ಲಿ ಆತ್ಮಕ್ಕೊಂದು ಮೋಕ್ಷ ಅಥವಾ ಸ್ವರ್ಗದ ಪರಿಕಲ್ಪನೆ ಇದೆ. ಪ್ರಪಂಚದ ಉಳಿದ ದೇಶಗಳಲ್ಲಿ ಶವವನ್ನು ಪೆಟ್ಟಿಗೆಯಲ್ಲಿಟ್ಟು ಭದ್ರವಾಗಿ ಹೂತಿಡುತ್ತಾರೆ. ಅಲ್ಲಿ ಆತ್ಮ ಸುಖವಾಗಿ ಶಾಂತವಾಗಿರುತ್ತದೆ ಎನ್ನುವ ನಂಬುಗೆ. ಅದಕ್ಕೆ ಸದಾ ಶಾಂತಿಯನ್ನು ಬಯಸಬೇಕಾಗುತೆ. ನಮ್ಮಲ್ಲಿನ ಪ್ರಾರ್ಥನೆ ಶ್ರದ್ಧೆಯಿಂದ ಕೂಡಿದ ಪ್ರಾರ್ಥನೆ. ನಾವು ಬಯಸುವುದು ಸದ್ಗತಿಯೇ ಹೊರತು ಆತ್ಮಕ್ಕೆ ಶಾಂತಿಯಲ್ಲ. ಇದೇ ಬಾರತೀಯತೆ! ನಾವು ಮಾಡಿದ ಸತ್ಕರ್ಮದ ಫಲ ಸ್ವರ್ಗ.

#ಆತ್ಮಕ್ಕೆಶಾಂತಿಯಲ್ಲ_ಸದ್ಗತಿ 
ಸದ್ಯೋಜಾತರು

No comments:

Post a Comment

If you have any doubts. please let me know...