"ತೋರಣ" ಇದು ಮೂಲ ಸಂಸ್ಕೃತ ಪದ. ಆದರೆ ಇಂದು ನಾವು ಕನ್ನಡದ ಪದವೇ ಇರಬೇಕೆನ್ನುವಷ್ಟು ನಮ್ಮ ಭಾಷೆಯಲ್ಲಿ ಬಳಸಿಕೊಂಡಿದ್ದೇವೆ. ತೋರಣಕ್ಕೆ ಸಮಾನ ಕನ್ನಡ ಪದ ನಮಗೆ ಹೊಳೆಯುವುದೇ ಇಲ್ಲ. ತೋರಣಕ್ಕೆ ಸಮಾನ ಪದ ಯಾವುದೆಂದು ಹುಡುಕುತ್ತಾ ಹೋದರೆ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನ ನಾಲ್ಕನೇ ಸಂಪುಟದ ೩೭೦೯ನೇ ಪುಟದ ೨ನೇ ಕಾಲಂನ ೨೩ನೇ ಪದ ತೋರಣ ಎನ್ನುವುದಕ್ಕೆ ಹೆಬ್ಬಾಗಿಲು, ಹೊರಬಾಗಿಲು ಎಂದು ಹೇಳಲಾಗಿದೆ. ಕಿಟ್ಟೆಲ್ ಶಬ್ದಕೋಶದ ೭೫೮ನೇ ಪುಟದಲ್ಲಿA festoon suspended across gateways ಎಂದು ಅರ್ಥೈಸಲಾಗಿದೆ. ಸಂಸ್ಕೃತದ ಮೋನಿಯರ್ ವಿಲ್ಲಿಯಮ್ಸ್‌ನಲ್ಲಿ ೪೫೬ನೇ ಪುಟದಲ್ಲಿಯೂ ಹೂವಿನಿಂದಲಂಕೃತವಾದ ಬಾಗಿಲು ಎನ್ನಲಾಗಿದೆ. "ದ್ವಾರಾಗ್ರೇ ನಿಖಾತಸ್ತಂಭೋ ಪರಿನಿಬದ್ಧೋ ಧನುರಾಕಾರಃ" ಎಂದು ವಾಚಸ್ಪತ್ಯದಲ್ಲಿ ಹೇಳಲಾಗಿದೆ. ಹೀಗೇ ತೋರಣ ಎನ್ನುವುದು ಯಾಗ ಶಾಲೆಗಳಲ್ಲಿಯೂ ವಿಶೇಷತೆಯನ್ನು ಪಡೆದಿದೆ. ಮಂಗಲಕರ ಸನ್ನಿವೇಶದಲ್ಲಿ "ತೋರಣ" ಬಹುಮುಖ್ಯ.
ರಾಮಾಯಣದಲ್ಲಿ ತೋರಣದ ಕುರಿತಾಗಿ ನೋಡುತ್ತಾ ಹೋದರೆ
ನಿವೇದಯಿತ್ವಾಭಿಜ್ಞಾನಂ ಪ್ರವೃತ್ತಿಂ ಚ ನಿವೇದ್ಯ ಚ | ಸಮಾಶ್ವಾಸ್ಯ ಚ ವೈದೇಹೀಂ ಮರ್ದಯಾಮಾಸ ತೋರಣಮ್|| ಎನ್ನುವ ಉಲ್ಲೇಖ ಸಿಗುತ್ತದೆ.
ಪಞ್ಚಸೇನಾಗ್ರ್ಯನಿಧನಂ ಸಪ್ತಮನ್ತ್ರಿ ನಿಬರ್ಹಣಮ್ | ತಥಾಕ್ಷಸ್ಯಾಪಿ ನಿಧನಂ ತೋರಣಸ್ಯ ಚ ಭಞ್ಜನಮ್ || ತೋರಣವನ್ನು ಹಾಳು ಮಾಡಿರುವುದರ ಉಲ್ಲೇಖ ಇನ್ನೊಂದೆಡೆ ಸಿಗುತ್ತದೆ.
ರಾಮಾಯಣದ ಬಾಲಕಾಂಡ ೭೭ನೇ ಸರ್ಗದಲ್ಲಿ ಪರಶುರಾಮನು ಮಹೇಂದ್ರಪರ್ವತಕ್ಕೆ ಹೊರಟು ಹೋದನಂತರ ರಾಮನು ತನ್ನಲ್ಲಿದ್ದ ಬಾಣಸಹಿತವಾದ ವೈಷ್ಣವಧನುಸ್ಸನ್ನು ವರುಣನಿಗೆ ನಿಕ್ಷೇಪರೂಪವಾಗಿ ಕೊಡುತ್ತಾನೆ. ರಾಮನಿಗೂ ಪರಶುರಾಮನಿಗೂ ದ್ವಂದ್ವ ಯುದ್ಧ ನಡೆಯುತ್ತದೆ. ಆಮೇಲಿನ ಪ್ರಾಯಶ್ಚಿತ್ತ ನಿವಾರಣೆಗೆ ಪರಶುರಾಮ ಮಹೇಂದ್ರಪರ್ವತಕ್ಕೆ ಹೋಗುತ್ತಾನೆ. ಆ ಸಂದರ್ಭದಲ್ಲಿ ಚತುರಂಗ ಬಲಸಮೇತನಾದ ದಶರಥನು ಕೂಡಲೇ ಅಯೋಧ್ಯೆಗೆ ಬರುತ್ತಾನೆ. ಆಗ ಅಯೋಧ್ಯೆಯು ತಳಿರು ’ತೋರಣ’ಗಳಿಂದಲೂ, ಧ್ವಜಪತಾಕೆಗಳಿಂದಲೂ ಅಲಂಕೃತವಾಗಿದ್ದಿತು. ನಾನಾವಿಧವಾದ ಜಯಘೋಷಗಳಿಂದ ತುಂಬಿತ್ತು. ಎನ್ನುವ ಪದ ಬರುತ್ತದೆ.
ಅಯೋಧ್ಯಾಕಾಂಡದ ೩ನೇ ಸರ್ಗದಲ್ಲಿ ಕೈಲಾಸಶಿಖರಕ್ಕೆ ಸಮಾನವಾಗಿದ್ದ ಆ ಭವ್ಯವಾದ ಅರಮನೆಯ ಉಪ್ಪರಿಗೆಯನ್ನು ಶ್ರೀರಾಮನು ದಶರಥನನ್ನು ನೋಡುವ ಇಚ್ಫೆಯಿಂದ ಸುಮಂತ್ರನೊಡನೆ ಹತ್ತುತ್ತಾನೆ ಆಗ ಅಯೋಧ್ಯೆಯ ದಶರಥನ ಅರಮನೆಯ ವರ್ಣನೆ ಯಲ್ಲಿ
ಭೂವೃತ್ತಪಾದೇ ಪೂರ್ವಸ್ಯಾಂ ಯವಕೋಟೀತಿ ವಿಶ್ರುತಾ | ಭದ್ರಾಶ್ವವರ್ಷೇ ನಗರೀ ಸ್ವರ್ಣಪ್ರಾಕಾರತೋರಣಾ ||
ಭೂಮಿಯ ವೃತ್ತಪಾದದಲ್ಲಿ ಪೂರ್ವದಿಕ್ಕಿನಲ್ಲಿ ಭದ್ರಾಶ್ವವರ್ಷದಲ್ಲಿ ಯವಕೋಟಿ ಎಂದು ಪ್ರಸಿದ್ಧವಾದ, ಚಿನ್ನದ ಕೋಟೆಗಳಿಂದಲೂ, ತೋರಣಗಳಿಂದಲೂ ಕೂಡಿದ ನಗರವಿದೆ ಎನ್ನುವಲ್ಲಿ ಆ ನಗರದ ಪ್ರಮುಖ ಬಾಗಿಲನ್ನು ತೋರಣ ಎಂದು ಹೇಳಲಾಗಿದೆ.
ಕಿಷ್ಕಿಂಧಾಕಾಂಡದ ೧೪ನೇ ಸರ್ಗದಲ್ಲಿ ಕಿಷ್ಕಿಂಧಾ ಪಟ್ಟಣದ ಕುರಿತಾಗಿ ಸುಗ್ರೀವನಿಂದ ಹೇಳಲ್ಪಡುವ ಮಾತು ಹರಿವಾಗುರಯಾ ವ್ಯಾಪ್ತಾಂ ತಪ್ತಕಾಞ್ಚನತೋರಣಾಮ್ | ಪ್ರಾಪ್ತಾಃ ಸ್ಮ ಧ್ವಜಯನ್ತ್ರಾಢ್ಯಾಂ ಕಿಷ್ಕಿನ್ಧಾಂ ವಾಲಿನಃ ಪುರೀಮ್ || ವಸಂತಕಾಲವು ಬಂದೊಡನೆಯೇ ಬಳ್ಳಿಯು ಪುಷ್ಪಭರಿತ ಹರಿವಾಗುರಯಾ = ವಾನರರೂಪವಾದ ಬಲೆ. ವಾನರರೂಪಮೃಗಬನ್ಧಕಪಾಶೇನ ವ್ಯಾಪ್ತಾಂ:- ವಾನರರೂಪವಾದ ಮೃಗಬಂಧಪಾಶದಿಂದ ವ್ಯಾಪ್ತವಾಗಿರುವ ಹರಯ ಏವ ವಾಗುರಾ ಮೃಗಗ್ರಹಣಪಾಶಃ ತಯಾ ವ್ಯಾಪ್ತಾಂ - ವಾನರರೇ ವಾಗುರುಗಳು ಅಥವಾ ಪ್ರಾಣಿಗಳನ್ನು ಹಿಡಿಯುವ ಬಲೆಗಳು. ಅದರಿಂದ ವ್ಯಾಪ್ತವಾಗಿರುವುದು ಕಿಷ್ಕಿಂಧೆ. ಎಂದರೆ: ವಾನರರು ಬಲೆಯು ಮಾಡುವ ಕೆಲಸವನ್ನು ಮಾಡುತ್ತಾರೆ. ವಾನರರು ಬಲೆಯ ರೂಪದಲ್ಲಿದ್ದು ಹೊರಗಿನಿಂದ ಯಾರೇ ಬಂದರೂ ಬಲೆಯು ಜಿಂಕೆಯನ್ನು ಹಿಡಿಯುವಂತೆ ಶತ್ರುಗಳನ್ನು ಹಿಡಿದುಹಾಕುತ್ತಾರೆ. ಪಟ್ಟಣಪ್ರವೇಶಕ್ಕೆ ಆಸ್ಪದ ಕೊಡುವುದಿಲ್ಲ ಎಂಬ ಅಭಿಪ್ರಾಯ. ಬಂಗಾರದ ತೋರಣ ಎನ್ನುವ ಉಲ್ಲೇಖ ಕಾಣ ಸಿಗುತ್ತದೆ.
ಸುಂದರಕಾಂಡದ ೫೫ನೇ ಸರ್ಗದಲ್ಲಿ ಲಂಕೆಗೆ ಹನುಮಂತ ಬೆಂಕಿ ಇಟ್ಟ ಸಂದರ್ಭದಲ್ಲಿ
’ದಗ್ಧೇಯಂ ನಗರೀ ಲಙ್ಕಾ ಸಾಟ್ಟಪ್ರಾಕಾರತೋರಣಾ’ ಹೊತ್ತಿ ಉರಿಯುತ್ತಿರುವ ಲಂಕೆಯ ಜನರ ಕೋಲಾಹಲದಿಂದ ಗಡಚಿಕ್ಕುವ ಶಬ್ದಗಳಿಂದ, ಉಪ್ಪರಿಗೆ ಮನೆಗಳಿಂದಲೂ, ಪ್ರಾಕಾರಗಳಿಂದಲೂ, ಹೆಬ್ಬಾಗಿಲುಗಳಿಂದಲೂ ಕೂಡಿರುವ ಈ ಲಂಕಾ ಪಟ್ಟಣವು ಸಂಪೂರ್ಣವಾಗಿ ಸುಟ್ಟುಹೋಯಿತು. ಆದರೆ ಅಶೋಕವನದಲ್ಲಿರುವ ಸೀತಾದೇವಿಯು ಮಾತ್ರ ಸುಡಲಿಲ್ಲವೆಂಬುದು ನಮ್ಮೆಲ್ಲರಿಗೂ ಅದ್ಭುತವಾಗಿ ಕಾಣುತ್ತಿದೆ ಇದು ಅತ್ಯಾಶ್ಚರ್ಯಕರವೇ ಆಗಿದೆ. ಇಲ್ಲಿ ತೋರಣವನ್ನು ಹೆಬ್ಬಾಗಿಲಿನ ಅರ್ಥ ಬರುವಂತೆ ಹೇಳಲಾಗಿದೆ.
ಯುದ್ಧಕಾಂಡದ ೨೫ನೇ ಸರ್ಗದಲ್ಲಿ ಶುಕ-ಸಾರಣರು ರಾವಣದ ಯುದ್ಧದ ದೂತ ಕಾರ್ಯಕ್ಕೆ ಬರುತ್ತಾರೆ ಆಗ ರಾಮನು ರಾವಣನಿಗೆ ಹೇಳುವಂತೆ ಆದೇಶಿಸುವ ಮಾತು: ’ಶ್ವಃ ಕಾಲ್ಯೇ ನಗರೀಂ ಲಙ್ಕಾಂ ಸಪ್ರಾಕಾರಾಂ ಸತೋರಣಾಮ್’
ನಾಳೆ ಬೆಳಗಾಗುತ್ತಲೇ ಮಹಾದ್ವಾರ ಮತ್ತು ಪ್ರಾಕಾರಗಳಿಂದ ಕೂಡಿರುವ ಲಂಕಾಪಟ್ಟಣವೂ ಮತ್ತು ರಾಕ್ಷಸರ ಸೈನ್ಯವೂ ನನ್ನ ಬಾಣಗಳಿಂದ ಧ್ವಂಸವಾಗುವುದನ್ನು ನೋಡು ಎನ್ನುತ್ತಾನೆ. ಇಲ್ಲಿ ತೋರಣವನ್ನು ಪ್ರಾಕಾರದ ವಿಶೇಷಣವಾಗಿ ತೋರಣವನ್ನು ಬಳಸಲಾಗಿದೆ.
ಯುದ್ಧಕಾಂಡದ ೭೨ನೇಸರ್ಗದಲ್ಲಿ ’ತದ್ಭಯಾದ್ಧಿ ಪುರೀ ಲಙ್ಕಾ ಪಿಹಿತದ್ವಾರತೋರಣಾ’
ನಾನು ಅ ರಾಘವನನ್ನು ರೋಗ ಮತ್ತು ಶೋಕಗಳಿಲ್ಲದ ಶ್ರೀಮನ್ನಾರಾಯಣನೆಂದೇ ಭಾವಿಸುತ್ತೇನೆ. ಅವನ ಭಯದಿಂದಲೇ ಲಂಕಾ ಪಟ್ಟಣದ ಹೊರಬಾಗಿಲುಗಳೂ ಹೆಬ್ಬಾಗಿಲುಗಳೂ ಮುಚ್ಚಲ್ಪಟ್ಟಿವೆ. ಇಲ್ಲಿಯೂ ಸಹ ಹೊರಬಾಗಿಲನ್ನು ತೋರಣ ಎಂದು ಕರೆಯಲಾಗಿದೆ.
ಮಹಾಭಾರತದ ಆದಿಪರ್ವ ೭೩ನೇ ಅಧ್ಯಾಯದಲ್ಲಿ ದುಶ್ಯಂತನು ಶಕುಂತಲೆಯನ್ನು ತಪೋವನದಲ್ಲಿಯೇ ಬಿಟ್ಟು ಹೊರಡುವುದು ಅನಿವಾರ್ಯವಾಯಿತು. ಹೊರಡುವಾಗ ಪುನಃ ಪುನಃ ಹೇಳುತ್ತಾನೆ: ನನ್ನ ಪಟ್ಟದರಸಿಯಾಗಿರುವ ನಿನ್ನನ್ನು ಸಾಧಾರಣ ರೀತಿಯಲ್ಲಿ ನನ್ನ ಪಟ್ಟಣಕ್ಕೆ ಕರೆದೊಯ್ಯುವೆನೇ? ಸಾಧ್ಯವಿಲ್ಲ. ಮಹಾ ರಾಣಿಯಾದವಳಿಗೆ ಸಲ್ಲಬೇಕಾದ ಮರ್ಯಾದೆಗಳೆಲ್ಲವೂ ಸಾಂಗೋಪಾಂಗವಾಗಿ ಸಲ್ಲಲೇಬೇಕು. ನಾನು ಪಟ್ಟಣಕ್ಕೆ ಹೋದೊಡನೆಯೇ ತಳಿರು ತೋರಣಗಳಿಂದ ಪಟ್ಟಣವನ್ನು ಅಲಂಕರಿಸುವಂತೆ ಆಜ್ಞಾಪಿಸಿ, ನಿನ್ನನ್ನು ಕರೆತರುವ ಸಲುವಾಗಿ ಮಂತ್ರಿ ಮತ್ತು ಪುರೋಹಿತರನ್ನು ಚತುರಂಗಬಲದೊಡನೆ ಕಳುಹಿಸುವೆನು ಎನ್ನುತ್ತಾನೆ. ಇಲ್ಲಿ ತೋರಣ ಒಂದು ಆಲಂಕಾರಿಕ ಮತ್ತು ಗೌರವದ ಸೂಚಕವಾಗುತ್ತದೆ.
ಆದಿಪರ್ವದ ೮೨ನೇ ಅಧ್ಯಾಯದಲ್ಲಿ ಶಚೀಸಮೇತನಾದ ಇಂದ್ರನನ್ನು ಹೋಲುತ್ತಿದ್ದ ಯಯಾತಿಯು ದೇವಯಾನಿಯಿಂದೊಡಗೂಡಿ ಚತುರಂಗಬಲಸಮೇತನಾಗಿ ತಾಳ ಮೇಳವಾದ್ಯಗಳೊಡನೆ ತನ್ನ ಪಟ್ಟಣವನ್ನು ಪ್ರವೇಶಿಸಿದನು. ನಗರವೆಲ್ಲವೂ ತಳಿರು, ತೋರಣಗಳಿಂದ ಅಲಂಕೃತವಾಗಿತ್ತು. ಗಗನಚುಂಬಿಗಳಾದ ಸೌಧಗಳಿಂದ ಸುಮಂಗಲಿಯರು ಹೊರಬಂದು ರಾಜನಿಗೆ ಆರತಿಯನ್ನು ಎತ್ತುತ್ತಿದ್ದರು ಎನ್ನುವ ಮಾತು ಬರುತ್ತದೆ. ತೋರಣ ಎನ್ನುವುದು ಅಲಂಕಾರವನ್ನು ನಿರ್ದೇಶಿಸುತ್ತಿದೆ.
ವನಪರ್ವದ ೧೫ನೇ ಅಧ್ಯಾಯದಲ್ಲಿ ಧ್ವಜಪತಾಕೆಗಳು ಎಲ್ಲೆಲ್ಲಿಯೂ ಹಾರಾಡುತ್ತಿದ್ದುವು. ತೋರಣಗಳೂ ಕಟ್ಟಲ್ಪಟ್ಟಿದ್ದುವು. ಸೈನಿಕರೆಲ್ಲರೂ ಸಜ್ಜಾಗಿ ನಿಂತಿದ್ದರು. ಶತಘ್ನಿಗಳೂ (ಫಿರಂಗಿಗಳೂ), ಬಂದೂಕುಗಳೂ ಸಿದ್ಧವಾಗಿದ್ದುವು ಎಂದು ತೋರಣವು ಅಲಂಕಾರವನ್ನು ಸೂಚಿಸುತ್ತದೆ.
ವನಪರ್ವದ ೧೪೮ನೆಯ ಅಧ್ಯಾಯದಲ್ಲಿ ರಾಮಾಯಣದ ಉಲ್ಲೇಖ ಸಿಗುತ್ತದೆ. ’ದಗ್ಧ್ವಾ ಲಙ್ಕಾಮಶೇಷೇಣ ಸಾಟ್ಟಪ್ರಾಕಾರತೋರಣಾಮ್’ ಎಂದು ಲಂಕಾ ಪಟ್ಟಣದ ವೈಭವವನ್ನು ಸೂಚಿಸುತ್ತದೆ.
ದ್ರೋಣಪರ್ವದ ೧೭೫ ಅಧ್ಯಾಯದಲ್ಲಿ ತೋರಣಪ್ರತಿಮಂ ಶುಭ್ರಂ ಕಿರೀಟಂ ಮೂರ್ಧ್ನಶೋಭತ’
ಘಟೋತ್ಕಚನು ತನ್ನ ವಕ್ಷಃಸ್ಥಳದಲ್ಲಿ ಸುವರ್ಣಮಾಲೆಯನ್ನು ಧರಿಸಿದ್ದನು. ಸುವರ್ಣಮಯವಾಗಿದ್ದ, ಚಿತ್ರಿತವಾಗಿದ್ದ, ತೋರಣಸದೃಶವಾಗಿದ್ದ, ಬಹುರೂಪವಾದ, ಸುಂದರವಾದ ವಿಭಾಗಗಳಿಂದ ಶೋಭಾಯಮಾನವಾಗಿ ಕಾಣುತ್ತಿದ್ದ ಕಿರೀಟವು ರಾಕ್ಷಸನ ತಲೆಯಲ್ಲಿ ಬೆಳಗುತ್ತಿದ್ದಿತು.
ಅನುಶಾಸನಪರ್ವ ಅಧ್ಯಾಯ ೧೭ರಲ್ಲಿ ಮಹಾಭಾರತ ಸಂರಕ್ಷಕನಾದ ಶ್ರೀ ಕೃಷ್ಣನ ಕುರಿತಾಗಿ ತೋರಣಃ = ಮುಕ್ತಿದ್ವಾರಸ್ವರೂಪನು. ತಾರಣಃ = ಸಂಸಾರಸಾಗರವನ್ನು ದಾಟಿಸುವವನು.ಎನ್ನಲಾಗಿದೆ. ಇಲ್ಲಿ ಕೃಷ್ಣನನ್ನು ನಿರ್ದೇಶಿಸಿ ಹೇಳಲಾಗಿದೆ.
ಸ್ವರ್ಗಾರೋಹಣಪರ್ವದಲ್ಲಿ
ರತ್ನವೇದಿಕಸಮ್ಬಾಧಂ ವೈಢೂರ್ಯಮಣಿತೋರಣಮ್ | ಹೇಮಜಾಲಪರಿಕ್ಷಿಪ್ತಂ ಪ್ರವಾಲವಲಭೀಮುಖಮ್ ||
ರತ್ನಮಯವಾದ ವೇದಿಕೆಯಿಂದ ಕೂಡಿರುವ, ವೈಡೂರ್ಯಮಯವಾದ ಬಹಿರ್ದ್ವಾರದಿಂದ (ತೋರಣಗಳಿಂದ) ಕೂಡಿರುವ, ಸುವರ್ಣಮಯವಾದ ಬಲೆಗಳಿಂದ ಆಚ್ಛಾದಿತವಾಗಿರುವ, ಮುಂಭಾಗದಲ್ಲಿ ಹವಳದ ಪಟ್ಟಿಯಿಂದ ಕೂಡಿರುವ, ಎನ್ನುವ ಪ್ರಶಂಸೆ ಕಾಣ ಸಿಗುತ್ತದೆ. ಇಲ್ಲಿ ತೋರಣವನ್ನು ಹೊರಗಿನ ದ್ವಾರ ಅಥವಾ ಹೆಬ್ಬಾಗಿಲನ್ನು ಕುರಿತಾಗಿ ಹೇಳಲಾಗಿದೆ.
ಕಾಳಿದಾಸನೂ ಸಹ ತನ್ನ ರಘುವಂಶದ ಏಳನೇ ಸರ್ಗದಲ್ಲಿ “ಇಂದ್ರಾಯುಧದ್ಯೋತಿತತೋರಣಾಂಕಮ್” ಎಂದು ವರ್ಣಿಸಿದ್ದಾನೆ. ಇಂದ್ರಾಯುಧಾನೀವ ದ್ಯೋತಿತಾನಿ ಪ್ರಕಾಶಿತಾನಿ ತೋರಣಾನಿ ಅಂಕಾ: ಚಿಹ್ನಾನಿ ಯಸ್ಯ ತಮ್ ರಾಜಮಾರ್ಗಮ್’ ಅಜನು ಇಂದುಮತಿಯೊಂದಿಗೆ ಬರುವ ರಾಜಮಾರ್ಗದಲ್ಲಿ ಕಾಮನಬಿಲ್ಲಿನಂತಿರುವ ತೋರಣಗಳನ್ನು ಕಟ್ಟಿದ್ದರು, ಅದಕ್ಕೆ ಬಹಿರ್ದ್ವಾರಾಣಿ ಎಂದು ಅರ್ಥಮಾಡಲಾಗಿದೆ. ಹದಿನಾಲ್ಕನೇ ಸರ್ಗದಲ್ಲಿ ’ಉತ್ತೋರಣಾಮನ್ವಯರಾಜಧಾನೀಂ’ ಎಂಬಲ್ಲಿಯೂ ’ಉನ್ನತಾ: ತೋರಣಾ: ಬಹಿರ್ದ್ವಾರಾಣಿ ಯಸ್ಯ’ ಎಂದು ಅರ್ಥೈಸಲಾಗಿದೆ. ಕುಮಾರ ಸಂಭವದಲ್ಲಿ "ಭಾಸೋಜ್ವತ್ಕಾಂಚನ ತೋರಣಾನಾಮ್" ಎಂದು ಹೇಳಲಾಗಿದೆ.
ಅಮರಕೋಶದಲ್ಲಿ ’ತೋರಣೋಸ್ತ್ರೀ ಬಹಿರ್ದ್ವಾರಂ’ ಎಂದು ಬರುತ್ತದೆ ಅದಕ್ಕೆ ಅರ್ಥ ಹೊರಬಾಗಿಲು, ಹೊರಬಾಗಿಲಿನ ಚೌಕಟ್ಟು ಎನ್ನುವುದು ಸೂಚಿತವಾಗಿದೆ.
ಕ್ರಿ. ಶ ೧೦೬೮ ಮತ್ತು ೧೦೮೫ ರ ಚಾಳುಕ್ಯ ಆಹವಮಲ್ಲ ಮತ್ತು ೬ನೇ ವಿಕ್ರಮಾದಿತ್ಯನ ಕಾಲದಲ್ಲಿ ಘಟಿಕಾಸ್ಥಾನ (ಮಧುಸೂದನ) ನಾಟ್ಯಶಾಲೆಯೂ ಇದ್ದ ಬಗ್ಗೆ "ನಾಟ್ಯಶಾಳಾಳಂಕೃತಮುಂ" ಎನ್ನುವುದಾಗಿ ಹೇಳಿಕೊಂಡಿದ್ದರೆ ಮುಂದೆ ಮಹಾಮಾಣಿಕ ಮದುಸೂಧನ ದೇವಾಲಯವನ್ನು ನಿರ್ಮಿಸಿ ಅದರಲ್ಲಿ "ಶುಂಭಚ್ಛಾಕುಂಬ ವೈನತೇಯ ಸ್ತಂಭಮುಮಮರರಾಜದ್ವಿಮಾನಾನುಕಾರಿಯಪ್ಪ ಮೂರು ನೆಲೆಯ ಬಾಗಿಲ್ವಾಡಮುಂ - "ಏಕದಂಡಿ" - "ತ್ರಿದಣ್ಡಿ" - ಸ್ನಾತಕ ಬ್ರಹ್ಮಚಾರಿ, ಹಂಸ ಪರಮಹಂಸಾನುಷ್ಟಾನ ಭವನಮುಂ" ಕಟ್ಟಿಸಿ ಆರ್ಷ ಧರ್ಮ ಪ್ರತಿಪಾದಕನಾಗಿದ್ದು, ಅನುಷ್ಠಾನ ನಿರತರಿಗೆ ಪ್ರತ್ಯೇಕ ಆಲಯವನ್ನು ನಿರ್ಮಿಸಿದ್ದಾಗಿ ಹೇಳಿಕೊಂಡಿದ್ದಾನೆ. ನಾಲ್ಕು ವೇದಗಳು ಮತ್ತು ಶಾಖೆಗಳ ಅಧ್ಯಯನಕ್ಕೆ "ಪಠನಮಠವಿರಾಜಿತಮುಮುತ್ತುಂಗತೋರಣ ಪ್ರಾಸಾದ" ಎನ್ನುವುದಾಗಿ ಬರುತ್ತದೆ. ವಿದ್ಯಾಕಾಂಕ್ಷಿಗಳಿಗೆ ತವರುಮನೆಯಂತೆ ಇದ್ದಿತ್ತು ಹಾಗೂ ವಿದ್ವತ್ತಿಗೆ ತಕ್ಕ ಮಾನ್ಯತೆಯೂ ಇತ್ತು ಎನ್ನುವುದಾಗಿ ತಿಳಿದು ಬರುತ್ತದೆ. ಓದುವ ವಿದ್ಯಾಲಯ ಅಥವಾ ಮಠ ಎತ್ತರದ ಅರಮನೆಯ ಬಾಗಿಲಿನಂತೆ ಶೋಭಿಸುತ್ತಿತ್ತು.
ಕವಿ ಪಂಪ ತನ್ನ ವಿಕ್ರಮಾರ್ಜುನ ವಿಜಯದಲ್ಲಿ ತೋರಣವನ್ನು ಹೀಗೆ ಹೇಳುತ್ತಾನೆ-
ಪೊೞಲೊಳಗೊಪ್ಪೆ ಕನ್ನಡಿಯ ಕಂಚಿನ ತೋಱಣದೋಳಿಗಳ್
ತಳತ್ತಳಿಸಿ ವಿಚಿತ್ರ ಕೇತು ತತಿಗಳ್ ಮಿಳಿರ್ದಾಡೆ ಪುರಾಙ್ಗನಾ
ಜನಙ್ಗಳ ಜಯ ಜೀಯಮಾನ ರವಮಿಕ್ಕುವ ಸೇಸೆ ಮನೋನುರಾಗಮಮ್
ಬಳಿಯಿಸೆ ಪೊಕ್ಕನಾ ದ್ರುಪದ ಮನ್ದಿರಮಮ್ ಮಮ್ದಿರಮಮ್ ಪರಸೈನ್ಯಭೈರವಮ್[೩-೭೪]
ಇದಿರೊಳ್ ಕಟ್ಟಿದ ತೋರಣಮ್ ನಿಹಿದಳಿರ್ ಪೂಗೊಂಚಲಂದೆತ್ತಮೆ
ತ್ತಿದ ಪೂಮಾಲೆ ಪರಾಗ ರಾಗಮುದಿತಾಶಾ ಭಾ ಸಮುದ್ಯನ್ಮಧೂ
ನ್ಮದ ಭೃಂಗ ಧ್ವನಿ ಮಂಗಳ ಧ್ವನಿಯೆನಲ್ ಸಾಲ್ವನ್ನೆಗಮ್ ತಾನೆ
ತಕ್ಕುದು ಕಾಮಂಗೆ ವಿವಾಹ ಮಂಟಪಮೆನಲ್ಕಾ ಮಾಧವೀ ಮಂಟಪಮ್[೫-೬] ಎಂದು ಅದು ಶುಭ ಸೂಚಕವಾಗಿಯೂ ಆಲಂಕಾರಿಕವಾಗಿಯೂ ಹೇಳಿದ್ದಾನೆ.
ಸುಮಾರು ಒಂದು ಮತ್ತು ಎರಡನೇ ಶತಮಾನದ ಕಾಲದ ಜೈನ ಶಾಸನ. ಉತ್ತರ ಪ್ರದೇಶದ ಮಥುರಾದಲ್ಲಿರುವ ಶಾಸನದ ಭಾಷೆ ಪ್ರಾಕೃತ ಮಿಶ್ರವಾದ ಸಂಸ್ಕೃತ. ಲಿಪಿ ಬ್ರಾಹ್ಮಿ.
ಇಲ್ಲಿ "ಸಹ ಮಾತಾ ಪಿತಿಹಿ ಸಹ" ಮತ್ತು "ಶಶ್ರೂ ಶಶುರೇಣ" ಎನ್ನುವುದು ತೋರಣದೊಂದಿಗೆ ಇರುವುದು. ಇಲ್ಲಿ ಶಶುರೇಣ ಎನ್ನುವಲ್ಲಿನ ಅಕ್ಷರಗಳನ್ನು ತೋರಣದ ಅಂದಕ್ಕಾಗಿ ಸ್ವಲ್ಪ ಅಸ್ತವ್ಯಸ್ಥ ಗೊಳಿಸಲಾಗಿದೆ.
#ತೋರಣ_ಪ್ರಾಸಾದ
ಸದ್ಯೋಜಾತರು
No comments:
Post a Comment
If you have any doubts. please let me know...