ಮೃದು ಮಧುರ. . . .
ಮಧು ಎಂದರೆ ನಮಗೆ ಮೊದಲು ನೆನಪಾಗುವುದು ಜೇನು. ಜೇನಿನ ರಸ ಅಥವಾ ಜೇನು ತುಪ್ಪವನ್ನು ನಾವು ಮಧು ಎಂದೇ ಕರೆಯುತ್ತೇವೆ. ಈ ಮಧು ಆಯುರ್ವೇದದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದುಕೊಂಡಿದೆ. ಔಷಧೀಯಗುಣ ಹೊಂದಿರುವ ಮಧುವಿಗೆ ಅಮೃತದ ಸ್ಥಾನ ಕಲ್ಪಸಿರುವುದು ನಮ್ಮ ಪ್ರಾಚೀನರು. ಪಂಚ ಅಮೃತಗಳಲ್ಲಿ ಮಧುವೂ ಒಂದು. ಈ ಮಧುವು ಮಧುರವಾಗಿದ್ದಾಗ ನಮಗೆ ಆಯುರಾರೋಗ್ಯ ಐಶ್ವರ್ಯಗಳು ಸಿಗುತ್ತವೆಯಂತೆ. ನಮ್ಮ ಮಾತುಗಳು ಅಮೃತದಂತೆ ಇದ್ದಾಗ ಎಂತಹ ರೋಗಿಯೂ ಔಷದಗಳ ಅವಲಂಬನೆಗಿಂತಲೂ ಜಾಸ್ತಿ ಬೇಗ ಗುಣಮುಖನಾಗುತ್ತಾನೆ. ಆದುದರಿಂದಲೇ ಮಧು ಎನ್ನುವ ಶಬ್ದ ಕೇಳಿದಾಗಲೇ ಮೈ ಮನಗಳೆಲ್ಲ ಉಲ್ಲಸಿತವಾಗುತ್ತವೆ. ಜೇನಿನಲ್ಲಿ ಮಾತ್ರವೇ ಈ ಸಿಹಿಯಾದ ಮಧು ಸಿಗುವುದು ಹೇಗೆ ಮಾತ್ತು ಯಾವಾಗ ಅನ್ನುವುದಕ್ಕೆ ಒಂದು ನಿದರ್ಶನ ಹೀಗಿದೆ.
ಒಂದು ಕಾಲದಲ್ಲಿ ಅನಾವೃಷ್ಟಿಯುಂಟಾಗುತ್ತದೆ. ಆಗ ಅನಾವೃಷ್ಟಿಯಿಂದಾಗಿ ಮರಗಳೆಲ್ಲಾ ಒಣಗಿ ಹೋಗುತ್ತವೆ. ಆಗ ಅರಪತ್ ಮತ್ತು ಸರಘಾ ಎನ್ನುವ ಎರಡು ಜೇನು ನೊಣಗಳು ಬಹಳ ಸಂಕಷ್ಟಕ್ಕೀಡಾಗುತ್ತವೆ. ಆಗ ಹೂವುಗಳು ಸಿಕ್ಕದೇ ನೊಂದಿರುವಾಗ ಅವುಗಳು ಅಶ್ವಿನೀ ದೇವತೆಗಳನ್ನು ಪ್ರಾರ್ಥಿಸುತ್ತವೆ ಅಶ್ವಿನೀ ದೇವತೆಗಳು ಅವುಗಳಿಗೆ ಮಧುವನ್ನು ಒದಗಿಸುತ್ತಾರೆ. ಆಮೇಲಿಂದ ಅವು ಮಧುವನ್ನು ಯಥೇಚ್ಚವಾಗಿ ಕೊಡಲು ಆರಂಭಿಸಿದವು. ಹೀಗೆ ಜೇನು ನೊಣಗಳು ಅಶ್ವಿನೀ ದೇವತೆಗಳನ್ನು ಕುರಿತಾಗಿ ಪ್ರಾರ್ಥಿಸಿದ ಮಂತ್ರ ಒಂದು ಋಗ್ವೇದ ಒಂದನೇ ಮಂಡಲದ ಎಂಭತ್ತನೇ ಸೂಕ್ತದಲ್ಲಿ ಬರುತ್ತದೆ. ಅಲ್ಲಿಂದ ಮಧುವು ವಿಶಿಷ್ಟ ಸ್ಥಾನ ಪಡೆದು ಮಧುವಿದ್ಯೆ ಎನ್ನುವುದಾಗಿ ಔಷಧ ಶಾಸ್ತ್ರವಾಗಿ ಬೆಳೆಯುತ್ತದೆ. ಆದೇನೇ ಇರಲಿ ಮಧುವಿನ ಬಗ್ಗೆ ಒಂದಿಷ್ಟು ನೋಡುವೆ.
ಮಧು ವಾತಾ ಋತಾಯತೇ ಮಧುಕ್ಷರಂತಿ ಸಿಂಧವಃ |
ಮಾಧ್ವೀರ್ನಃ ಸಂತ್ವೋಷಧೀ: | ಮಧುನಕ್ತ ಮುಷೋಸಸಿ | ಮಧುಮತ್ಪಾರ್ಥಿವಗ್ಂ ರಜಃ | ಮಧು ದ್ಯೌರಸ್ತು ನಃ ಪಿತಾ | ಮಧುಮಾನ್ನೋ ವನಸ್ಪತಿರ್ಮಧುಮಾಗ್ಂ ಅಸ್ತು ಸೂರ್ಯಃ | ಋತಎನ್ನುವ ಶಬ್ದಕ್ಕೆ ಸಾಮಾನ್ಯವಾಗಿ ನಾವು ಹೇಳುವುದು ಸತ್ಯ ಎನ್ನುವುದಾಗಿ. ಅದು ನಿಜವೂ ಹೌದು. ಸತ್ಯವೇ ಶ್ರೇಷ್ಠವಾದದ್ದು. ಋತಾಯತೇ ಎನ್ನುವುದನ್ನು ಶ್ರೇಷ್ಠವಾದ ಯಜ್ಞವನ್ನು ನೆರವೇರಿಸಲು ಇಚ್ಚಿಸುವ ಯಜಮಾನನಿಗಾಗಿ ವಾತಾ ಗಾಳಿಯು ಮಧುರವಾದ ರಸವನ್ನು(ಜೇನು) ಸುರಿಸುತ್ತವಂತೆ. ಇಲ್ಲಿ ಇನ್ನೊಂದು ರೀತಿಯಲ್ಲಿ ಸಾಯಣಾಚಾರ್ಯರು ಹೇಳುವಂತೆ ನಮ್ಮ ದೇಹದಲ್ಲಿನ ರೋಗಗಳ ಉಲ್ಬಣಕ್ಕೆ ವಾಯುವು ಪ್ರಮುಖ ಕಾರಣ. ಯಾವಾಗ ನಮ್ಮ ದೇಹದಲ್ಲಿ ವಾಯುವಿನ ಅಸಮರ್ಪಕ ಸಮತೋಲನ ಉಂಟಾದಾಗ ದೇಹವು ರೋಗಕ್ಕೆ ತುತ್ತಾಗುತ್ತದೆ. ರೋಗವು ದೇಹವನ್ನು ಬಾಧಿಸುತ್ತಿರುವಾಗ ನಮ್ಮ ಮಾನಸಿಕ ಸ್ಥಿತಿಯ ಮೇಲೆ ಸಹ ಪರಿಣಾಮ ಬೀರುತ್ತದೆ. ಆದುದರಿಂದ ಈ ಮಂತ್ರದಲ್ಲಿ ವಾಯುವನ್ನು ಕುರಿತಾಗಿ ಪ್ರಾರ್ಥಿಸಲಾಗಿದೆ. ಇನ್ನು ’ಮಧುಕ್ಷರಂತಿ ಸಿಂಧವಃ’ ಇಲ್ಲಿ ಸಿಂಧವಃ ಎನ್ನುವುದು ಸಮುದ್ರಾಶ್ಚ ಮಧುರಂ ರಸಂ ಸ್ರಾವಯಂತಿ ಎಂದು ಭಾಷ್ಯಕಾರರು ಹೇಳುತ್ತಾರೆ. ಆದರೆ ಋಗ್ವೇದದಲ್ಲಿ ಅನೇಕ ನದಿಗಳನ್ನು ಕುರಿತಾಗಿ ಹೇಳಲಾಗಿದೆ ಎನ್ನುತ್ತಾರೆ. ಆ ನದಿಗಳು ಮಧುರಾವಾದ, ಸಿಹಿಯಾದ ಮತ್ತು ಆರೋಗ್ಯಕರವಾದ ನೀರನ್ನು ಸಂಪಾದಿಸಿಕೊಂಡು ನಮಗೆ ನೀಡುವುದರಿಂದ ಮಧುಕ್ಷರಂತಿ ಸಿಂಧವಃ ಎನ್ನಲಾಗಿದೆ. ’ಮಾಧ್ವೀರ್ನಃ ಸಂತ್ವೋಷಧೀ:’ ದವಸ ಧಾನ್ಯಗಳ ಸಂಯೋಗವೇ ಬೀಜರೂಪದ ಓಷಧಿಗಳು ಎಂದು ಕರೆಸಿಕೊಳ್ಳುತ್ತವೆ. ಇವೆಲ್ಲವೂ ಸಹ ಆರೋಗ್ಯಕ್ಕೆ ಪಥ್ಯರೂಪವಾಗಿ ಸಿಕ್ಕುತ್ತವೆ ಎನ್ನುವುದು ಈ ಮಂತ್ರದ ಅರ್ಥ.
ಮಧುನಕ್ತ ಮುಷೋಸಸಿ ಎನ್ನುವುದರಲ್ಲಿ ನಕ್ತ ಎನ್ನುವುದು ರಾತ್ರಿಗೆ. ಈ ರಾತ್ರಿ ಎನ್ನುವುದು ಸಹ ನಮಗೆ ಮಧುರವೇ, ಎಲ್ಲಾ ಜಂಜಾಟಗಳನ್ನು ಮರೆತು ವಿಶ್ರಾಂತ ಸ್ಥಿತಿಗೆ ಜಾರುವ ಸಮಯ ಅದು. ಉಷೋಸಿ ಎನ್ನುವುದು ರಾತ್ರಿಯ ವಿಶ್ರಾಂತದಿಂದ ಉಷಕಾಲದ ಚೈತನ್ಯ ಸ್ಥಿತಿಗೆ ಬರುವುದು ಸಹ ನಮಗೆ ಅತ್ಯಂತ ಸಮತೋಷದಾಯಕ ಎನ್ನಲಾಗಿದೆ. ಬೆಳಗಿನ ಸೂರ್ಯ ಕಿರಣವನ್ನು ಆಸ್ವಾದಿಸುವುದು ಮಧುರ.
ಮಧುಮತ್ಪಾರ್ಥಿವಗ್ಂ ರಜಃ ಈ ನೆಲದ ರಜೋಗುಣಗಳೆಲ್ಲವೂ ನಮಗೆ ಮಧುರವೇ. ಭೂಮಿಯ ಮೇಲಿನ ಸುಂದರ ಕಲ್ಪನೆಗಳೆಲ್ಲವೂ ಅತ್ಯಂತ ಸುಖದಾಯಕ ಮತ್ತು ಸಂತೋಷದಾಯಕ. ಸಿಹಿಯಾದ ಮಾಧುರ್ಯ ರಸದೊಂದಿಗಿರುವಂತದ್ದು. ನಮ್ಮ ತಂದೆ ಮತ್ತು ಪಿತೃ ಸ್ಥಾನೀಯರಾದವರೂ ಸಹ ಸುಖವನ್ನು ಒದಗಿಸಿ ಮಧುವಿನಂತಿರುವ ಅವರು ನಮಗೆ ಮಧುರ ರಸವನ್ನು ಒದಗಿಸುವಂತಾಗಲಿ.
ಮಧುಮಾನ್ನೋ ವನಸ್ಪತಿರ್ಮಧುಮಾಗ್ಂ ಅಸ್ತು ಸೂರ್ಯಃ ಎನ್ನುವದಕ್ಕೆ ಅಶ್ವತ್ಥವೇ ಮೊದಲಾದ ಶ್ರೇಷ್ಟ ವೃಕ್ಷಗಳೆಲ್ಲ ವನಸ್ಪತಿಗಳೆಂದು ಕರೆಸಿಕೊಂಡಿವೆ. ಅವೆಲ್ಲವೂ ನಮಗೆ ಔಷಧದ ರೀತಿಯಲ್ಲಿ ಒದಗಿ ಬಂದು ನಮಗೆ ಮಧುಮಾನವಾಗಿರಲಿ. ಸವಿಒಯಲು ಸಹ ರಸಯುಕ್ತವಾಗಿ ಹಿತಕರವಾಗಿ ಒದಗಲಿ ಎನ್ನಲಾಗಿದೆ. ಸೂರ್ಯನೂ ಸಹ ನಮ್ಮ ದುಃಖಗಳನ್ನು ದೂರಮಾಡಿ ಸಂತಾಪ ರಾಹಿತ್ಯರನ್ನಾಗಿಮಾಡಿ ಮಾಧುರ್ಯವನ್ನು ನಮ್ಮ ಆಯುರಾರೋಗ್ಯಗಳನ್ನು ಕೊಟ್ಟು ಸುಖವನ್ನು ಒದಗಿಸಲಿ ಎಂದಿರುವುದು ಸಿಗುತ್ತದೆ.
#ಮಧು_
ಸದ್ಯೋಜಾತರು
No comments:
Post a Comment
If you have any doubts. please let me know...