ರಾಮಾಯಣದಲ್ಲಿ ಕೌತುಕಗಳು ಕಡಿಮೆ ಅನ್ನಿಸುತ್ತದೆ. ಆದರೆ ಮಹಾಭಾರತ ಹಾಗಲ್ಲ, ಅದೊಂದು ಖನಿಜಗಳ ಗಣಿ. ಇಲ್ಲಿ ಅಧ್ಯಯನಶೀಲರಿಗೆ ಬೇಕಷ್ಟು ಸರಕುಗಳು ಸಿಗುತ್ತವೆ. ಮಹಾಬಾರತವನ್ನು ಒಮ್ಮೆ ಓದಿದರೆ ಒಂದು ಹೊಳಹು ಕಂಡರೆ, ಇನ್ನೊಮ್ಮೆ ಓದುವಾಗ ಅದರ ಆಯಾಮವೇ ಬೇರೆಯಾಗುತ್ತದೆ. ಇನ್ನು ಮಹಾಭಾರತದಲ್ಲಿರುವ ಸ್ಥಳಗಳನ್ನು ಸಂದರ್ಶಿಸಿದರೂ ಕೆಲವೊಮ್ಮೆ ಕೆಲವೊಂದು ಸನ್ನಿವೇಶಗಳು ಆಶ್ಚರ್ಯ ಹುಟ್ಟಿಸುತ್ತವೆ. ಅವೆಲ್ಲ ಏನೇ ಇರಲಿ, ಇದೊಂದು ಮಹಾಬಾರತದ ಜಿಜ್ಞಾಸೆ ಹೀಗೆ ಆರಂಭವಾಗುತ್ತದೆ. ಭೀಷ್ಮ ಪರ್ವದಲ್ಲಿನ ಒಂದು ಜಿಜ್ಞಾಸೆ ಈ ರೀತಿಯಾಗಿದೆ. ಇದು ಜ್ಯೋತಿಷ್ಯ ಅಥವಾ ಖಗೋಲಕ್ಕೆ ಸಂಬಂಧಿಸಿದ್ದು.
ಧ್ರುವಂ ಪ್ರಜ್ವಲಿತೋ ಘೋರಮಪಸವ್ಯಂ ಪ್ರವರ್ತತೇ |
ರೋಹಿಣೀಂ ಪೀಡಯತ್ಯೇವಮುಭೌ ಚ ಶಶಿಭಾಸ್ಕರೌ |
ಚಿತ್ರಾಸ್ವಾತ್ಯನ್ತರೇ ಚೈವ ವಿಷ್ಠಿತಃ ಪುರುಷಗ್ರಹಃ || ೧೭ ||
ಚಿತ್ರಾ ಮತ್ತು ಸ್ವಾತೀನಕ್ಷತ್ರಗಳ ಮಧ್ಯದಲ್ಲಿರುವ ಪುರುಷಗ್ರಹ ರೋಹಿಣೀನಕ್ಷತ್ರವನ್ನೂ ಚಂದ್ರ ಮತ್ತು ಸೂರ್ಯರನ್ನೂ ಪೀಡಿಸುತ್ತಿದೆ. ಭಯಂಕರವಾಗಿ, ಘೋರವಾಗಿ ಪ್ರಜ್ವಲಿಸುತ್ತಾ ಧ್ರುವನಕ್ಷತ್ರವನ್ನು ಎಡಭಾಗಕ್ಕೆ ಬಿಟ್ಟು ಮುನ್ನಡೆಯುತ್ತಿದೆ. ಇಲ್ಲಿ ಯಾವುದೇ ಗ್ರಹದ ಹೆಸರಿಲ್ಲ. ಪುರುಷ ಗ್ರಹ ಎಂದು ಮಾತ್ರ ಹೇಳಲಾಗಿದೆ. ಭಾಷ್ಯಕಾರರು ಈ ಗ್ರಹವನ್ನು ‘ರಾಹು’ ಎಂದು ವ್ಯಾಖ್ಯಾನಿಸಿದ್ದಾರೆ. ಅಂಅದರೆ ಶಶಿ ಭಾಸ್ಕರೌ ಎಂದಿರುವುದು ಸೂರ್ಯನನ್ನು ಪೀಡಿಸುವ ರಾಹು ಎಂದೂ ಇರಬಹುದು. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯ, ಗುರು ಮತ್ತು ಅಂಗಾರಕ ಈ ಮೂರು ಗ್ರಹಗಳು ಪುರುಷಗ್ರಹಗಳು ಎನ್ನುತ್ತವೆ. ಶುಕ್ರ, ಚಂದ್ರ, ರಾಹು ಇವುಗಳು ಸ್ತ್ರೀಗ್ರಹಗಳು. ಶನಿ, ಬುಧ, ಕೇತು ಇವುಗಳು ನಪುಂಸಕಗ್ರಹಗಳು.
ಶ್ವೇತೋ ಗ್ರಹಸ್ತಥಾ ಚಿತ್ರಾಂ ಸಮತಿಕ್ರಮ್ಯ ತಿಷ್ಠತಿ |
ಅಭಾವಂ ಹಿ ವಿಶೇಷೇಣ ಕುರೂಣಾಂ ತತ್ರ ಪಶ್ಯತಿ || ೧೨ || ಎನ್ನುವ ಈ ಶ್ಲೋಕದಲ್ಲಿ ಚಿತ್ರಾ ಮತ್ತು ಸ್ವಾತೀನಕ್ಷತ್ರಗಳ ನಡುವೆ ಶ್ವೇತಗ್ರಹವಿದೆಯೆಂದು ಹೇಳಿದೆ. ಶ್ವೇತಗ್ರಹ ಯಾವುದಿರಬಹುದು ?. ಆದುದರಿಂದ ಪುರುಷಗ್ರಹವೆಂದರೆ ಇಂತಹುದೇ ಗ್ರಹವೆಂದು ನಿರ್ಣಯಿಸುವುದು ಕಷ್ಟ. ಇನ್ನು ಕೆಲವು ಭಾಷ್ಯ ಗ್ರಂಥಗಳಲ್ಲಿ ಪುರುಷ ಗ್ರಹ ಎಂದು ಪಾಠಾಂತರ ಸಿಗುತ್ತದೆ. ಇದು ಕ್ರೂರಗ್ರಹ ಎನ್ನುವ ಅರ್ಥವೂ ಧ್ವನಿಸುತ್ತದೆ. ಇನ್ನೊಂದು ಅಭಿಪ್ರಾಯ ನೋಡಿದರೆ ಪುರುಷ ಗ್ರಹ ಎಂದಿರುವುದು ಶುಕ್ರನಿಗೆ ಹೇಳಿರಬಹುದೇನೋ. ಏಕೆಂದರೆ ಶುಕ್ರನೂ ಸಹ ಬಿಳಿ, ಸಹಜವಾಗಿ ಶುಕ್ರ ಅಸುರ ಗುರು, ಅದಲ್ಲದೇ ಈತ ರವಿ ಮತ್ತು ಚಂದ್ರರಿಗೂ ವೈರಿ. ಇಷ್ಟಲ್ಲದೇ ಚಿತ್ರಾ ಮೂರನೆಯ, ನಾಲ್ಕನೇ ಪಾದ, ಸ್ವಾತೀ ನಕ್ಷತ್ರ ಬರುವುದು ಸಹ ಶುಕ್ರನ ಮನೆಯಾದ ತುಲಾ ರಾಶಿಯಲ್ಲಿ. ರೋಹಿಣಿಯೂ ಬರುವುದು ಶುಕ್ರನ ಅಧೀನದ ವೃಷಭದಲ್ಲೇ.
ಶುಕ್ರ, ಚಂದ್ರ, ರಾಹು ಇವರೆಲ್ಲರೂ ಆ ಸ್ತ್ರೀಯರ ಗುಣಗಳ ಲಕ್ಷಣಗಳನ್ನು ಪಡೆದುಕೊಂಡಿದ್ದಾರೆಯೇ ವಿನಃ ಅವರೇ ಸ್ತ್ರೀಯರಲ್ಲ, ಚಂದ್ರನಿಗೆ ೨೭ ಮಡದಿಯರು, ರೋಹಿಣಿ ಬಹಳ ಇಷ್ಟದವಳು ಎನ್ನಲಾಗುತ್ತದೆ. ಗುರುವಿನ ಪತ್ನಿ ತಾರಾ, ಬುಧನ ಜನನ ವೃತ್ತಾಂತ ಗಮನಿಸಿದರೂ ಚಂದ್ರ ಪುರುಷನೇ, ಶುಕ್ರನಂತೂ ಅಸುರ ಗುರು, ಹಾಗಾಗಿ ಆತನೂ ಪುರುಷನೇ, ನವಗ್ರಹರಿಗೆಲ್ಲ ಪತ್ನಿಯರಿದ್ದಾರೆ. ಪತಿಯರು ಯಾರೂ ಇಲ್ಲ. ಆದರೆ ಇದೇ ಗ್ರಹವೆಂದು ಇದಮಿತ್ಥಂ ಹೇಳಲು ಸಾಧ್ಯವಾಗುವುದಿಲ್ಲ. ಇದೊಂದು ಒಗಟಾಗಿಯೇ ಪರಿಣಮಿಸುತ್ತದೆ.
#ಯಾವುದು_ಪುರುಷಗ್ರಹ
ಮೂಲ ಶ್ರೀ ಸದ್ಯೋಜಾತರು..
No comments:
Post a Comment
If you have any doubts. please let me know...