May 28, 2021

ಸ್ವಪ್ನದಲ್ಲಿ ನಡೆದಾಡುವ . .Somnambulism ಈ ಹೆಸರು ಕೇಳಿರಬಹುದು. ಇದು ವೈದ್ಯಕೀಯ ಭಾಷೆಯಲ್ಲಿ ಹೇಳಿರುವುದು.

ಸ್ವಪ್ನದಲ್ಲಿ ನಡೆದಾಡುವ . . . . . .

Somnambulism ಈ ಹೆಸರು ಕೇಳಿರಬಹುದು. ಇದು ವೈದ್ಯಕೀಯ ಭಾಷೆಯಲ್ಲಿ ಹೇಳಿರುವುದು. ಅಂದರೆ ನಿದ್ದೆಗಣ್ಣಿನಲ್ಲಿ ಅಥವಾ ಸ್ವಪ್ನಾವಸ್ಥೆಯಲ್ಲಿ ನಡೆದಾಡುವ ಒಂದು ಮನಸ್ಸಿಗೆ ಸಂಬಂಧಿಸಿದ ರೋಗ. ಸಾಮಾನ್ಯವಾಗಿ ಚಿಕ್ಕ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಂಡರೂ, ದೊಡ್ಡವರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಚಿಕ್ಕ ಮಕ್ಕಳು ಹೆದರಿ ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದರಿಂದ ಹಿಡಿದು ಸ್ವಪ್ನಾವಸ್ಥೆಯಲ್ಲಿ ಕನವರಿಸುವುದೂ ಸಹ ಇದೇ ಕಾರಣ ಇರಬಹುದೋ ಏನೋ. ವೈದ್ಯಕೀಯ ಶಾಸ್ತ್ರದಲ್ಲಿ ಇದಕ್ಕೆ ಸೂಕ್ತವಾದ ಔಷದಗಳಿದ್ದು, ಇದನ್ನು ಹಿಪ್ನೋಟೈಸ್ ಮುಖಾಂತರವೂ ಗುಣಪಡಿಸಲು ಸಾಧ್ಯವಂತೆ. ಇದನ್ನು ಮಾನಸಿಕ ಖಾಯಿಲೆ ಎನ್ನುವುದಕ್ಕಿಂತ ಮಾನಸಿಕ ಸ್ಥಿತಿ ಅನ್ನಬಹುದೇನೋ. ವೇದಕಾಲದಲ್ಲಿ ಇಂತಹ ಒಂದು ಘಟನೆಗೆ ವಸಿಷ್ಠ ಮಹರ್ಷಿ ಸಾಕ್ಷಿಯಾಗುತ್ತಾರೆ. 
ವಸಿಷ್ಠ ಮಹರ್ಷಿ ನಿತ್ಯಾನುಷ್ಠಾನ ಪರಾಯಣರಾಗಿದ್ದರು. ತಪಸ್ವಿ, ಆದರೆ ಇವರಿಗೆ ನಿದ್ದೆಯಲ್ಲಿ ಕನಸ್ಸಿನಲ್ಲಿ ನಡೆಯುವ ಅಭ್ಯಾಸ ಇತ್ತು. ಹೀಗಿರುತ್ತಾ ಒಮ್ಮೆ ಇವರು ನಿದ್ದೆಗಣ್ಣಿನಲ್ಲಿ ನಡೆದುಕೊಂಡು ಹೋಗುತ್ತಾ ತನ್ನ ತಂದೆಯಾದ ವರುಣನ ಮನೆಯ ಸಮೀಪಕ್ಕೆ ಹೋಗುತ್ತಾರೆ. ವರುಣನ ಮನೆಯ ಕೊಟ್ಟಿಗೆಯ ಹತ್ತಿರ ನಾಯಿ ಮಲಗಿತ್ತು. ಮಧ್ಯರಾತ್ರಿಯಲ್ಲಿ ನಾಯಿ ಮಲಗಿದ್ದನ್ನು ಗಮನಿಸದೇ ಸಾಗುತ್ತಿರುವಾಗ ನಾಯಿ ಬಹಳ ಜೋರಗಿ ಕೂಗುತ್ತದೆ. ಕೂಗುವುದು ಮಾತ್ರವಲ್ಲ ಕಚ್ಚಲು ಅಟ್ಟಿಸಿಕೊಂಡು ಬರುತ್ತದೆ. ಆಗ ವಸಿಷ್ಠ. . . . 
ಯದರ್ಜುನ ಸಾರಮೇಯ ದತಃ ಪಿಶಂಗ ಯಚ್ಛಸೇ | ಎನ್ನುವ ೭ನೇ ಮಂಡಲದ ೫೫ನೇ ಸೂಕ್ತದಂತೆ
ಈ ನಾಯಿ ಬಿಳಿಯ ಬಣ್ಣದಿಂದ ಕೂಡಿದ್ದು ಅಲ್ಲಲ್ಲಿ ಚಿನ್ನದ ಲೇಪವಿದ್ದಂತೆ ಇತ್ತು. ಸರಮೆಯ ಮಗನಾದ ಸಾರಮೇಯನೇ ನಿನ್ನ ಹಲ್ಲುಗಳ ಪಂಕ್ತಿಯನ್ನು ನೋಡಿದಾಗ ಅದು ಬಿಳುಪಾದ ಆಯುಧದಂತೆ ಕಾಣಿಸುತ್ತಿತ್ತು. ನನ್ನನ್ನು ಹಿಂಸಿಸದೇ ನೀನು ಸದ್ದು ಮಾಡದೇ ನಿದ್ದೆ ಮಾಡು ಎಂದು ಸ್ತುತಿಸುವುದು ಸಿಗುತ್ತದೆ. ಇಲ್ಲಿ ಅರ್ಜುನ ಎಂದು ಬಂದಿರುವುದು ಬಿಳುಪು ಅಥವಾ ಶುಭ್ರವರ್ಣವನ್ನು ಸೂಚಿಸುವುದಕ್ಕಾಗಿ. ಅಲ್ಲಿಂದ ಮುಂದಿನ ಋಕ್ಕಿನಲ್ಲಿ ನನ್ನಿಂದ ಮತ್ತು ನಿನ್ನಿಂದ ಯಾರಿಗೂ ನಿದ್ರಭಂಗವಾಗ ಬಾರದು, ಮಲಗಿರುವವರನ್ನು ಕೂಗಿ ಎಬ್ಬಿಸ ಬೇಡ ಎಮದು ಕೇಳಿಕೊಳ್ಳುವ ಋಕ್ಕುಗಳಿವೆ. ಮುಂದೆ ನಾಯಿಯು ಸುಮ್ಮನಾಗುತ್ತದೆ ಎಂದು ಮುಂದಿನ ಋಕ್ಕುಗಳಿಂದ ತಿಳಿಯುತ್ತದೆ. ಮುಂದೆ ಸೂಕ್ತದೃಷ್ಟಾರ ಎನ್ನಿಸಿಕೊಳ್ಳುತ್ತಾರೆ. ಅದೇನೇ ಇರಲಿ ವಸಿಷ್ಠ ಮಹರ್ಷಿ ನಿದ್ದೆಯಲ್ಲಿ ನಡೆದು ಬಂದದ್ದು ಬಹುದೂರ. ನಾಯಿಯಿಂದ ಜಾಗ್ರತರಾದರು !! 

ಈ ಸೂಕ್ತದ ಮೊದಲ ಋಕ್ಕಿನಲ್ಲಿಯೇ ವಸಿಷ್ಠ ವಾಸ್ತೋಷ್ಪತಿಯನ್ನು ಕುರಿತಾಗಿ ಸ್ತೋತ್ರಮಾಡಿದ್ದಾರೆ. ಇಲ್ಲಿಯೂ ಅವರು ಸಹಜವಾಗಿ ವೈಜ್ಞಾನಿಕ ಜಾಗ್ರತಿಯನ್ನು ಎತ್ತಿಹಿಡಿದಿದ್ದಾರೆ.
ಅಮೀವಹಾ ವಾಸ್ತೋಷ್ಪತೇ ವಿಶ್ವಾ ರೂಪಾಣ್ಯಾವಿಶನ್ | ಸಖಾ ಸುಶೇವ ಏಧಿ ನಃ || ಇದು ಋಗ್ವೇದದ ಏಳನೇ ಮಂಡಲದ ೫೫ನೇ ಸೂಕ್ತ. ಅಮೀವಹ ಎನ್ನುವಲ್ಲಿಂದಲೇ ಆರಂಭಗೊಳ್ಳುತ್ತದೆ. ಅಂದರೆ ರೋಗನಾಶಕನಾದ ಹೇ ವಾಸ್ತೋಷ್ಪತಿ ದೇವನೇ ನೀನು ಬೇರೆ ಬೇರೆ ರೂಪ ಹೊಂದುತ್ತಾ ನನಗೆ ಮಿತ್ರನಾಗಿಯೂ ಸಖನಾಗಿಯೂ ಇರು ಎನ್ನುವುದು ಭಾವಾರ್ಥ.

ವಸ್ ಎನ್ನುವುದು ವಾಸ್ತು ಎನ್ನುವ ಪದದ ಧಾತು. ವಸತಿಯನ್ನು ಸೂಚಿಸುವ ಈ ಪದ ವಾಸಮಾಡಲು ಯೋಗ್ಯವಾದ ಮನೆ ಎಂದು ಅರ್ಥವನ್ನು ಕೊಡುತ್ತದೆ. ವಾಸ್ತೋಷ್ಪತಿ ಎಂದರೆ ವಾಸಮಾಡಲು ಯೋಗ್ಯವಾಗಿರುವ ಮನೆಯ ಯಜಮಾನ ಎಂದಾಗುತ್ತದೆ. ಈತನೇ ಆ ಮನೆಯ ಸಂರಕ್ಷಕನಾಗಿರುತ್ತಾನೆ. ಹಾಗಾದರೆ ಈ ವಾಸ್ತು ಎಂದರೆ ಯಾರು ? ಬೇರೆ ಬೇರೆ ವಿಧವಾಗಿ ರೂಪ ಧರಿಸಿ ಯಾವುದೇ ರೋಗ ರುಜಿನಗಳು ಬಂದರೂ ಗುಣಪಡಿಸುವ ಶಕ್ತಿಯನ್ನು ಹೊಂದಿದ ದೇವರೂಪದ ರೋಗನಿರೋಧಕ ಶಕ್ತಿಯಂತಿರುವ ದೇವನು. ಇವನೇ ವೈದ್ಯ !!

ವಾಸ್ತೋಷ್ಪತೇ ಪ್ರತಿ ಜಾನೀಹ್ಯಸ್ಮಾನ್ವೇಶ್ಸ್ತ್ವಾವೇಶೋ . . . . ಶಂ ನೋ ಭವ ದ್ವಿಪದೇ ಶಂ ಚತುಷ್ಪದೇ ||
ನಾವು ವಾಸಿಸುವ ಮನೆಯನ್ನು ಕಾಪಾಡುವ ವಾಸ್ತೋಷ್ಪತಿ ದೇವನೇ! ಮನೆಯಲ್ಲಿ ವಾಸಿಸುವ ನಮ್ಮನ್ನು ನೀನು ನಿನ್ನ ಆರಾಧಕರು ಎಂದು ತಿಳಿ. ಮನೆಯಲ್ಲಿ ನಾವು ವಾಸಿಸಲು ಉತ್ತಮವಾದ ವಾತಾವರಣವನ್ನು ನಿರ್ಮಿಸಿ ಸಕಲ ರೋಗ ನಿರೋಧಕನಾಗಿರು. ನೀನು ಸಂತುಷ್ಟನಾಗಿದ್ದು ನಾವು ಬಯಸುವ ಸುಖ ಮತ್ತು ಸಂಪತ್ತನ್ನು ನಮಗೆ ನೀಡು. ಮುಖ್ಯವಾಗಿ ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ಹಾಗೂ ನಮ್ಮ ಮನೆಯಲ್ಲಿ ವಾಸಿಸುವ ಪಶುಗಳಿಗೂ ಸುಖವನ್ನು ನೀಡು ಎನ್ನುವುದು ಈ ಋಗ್ವೇದದ ೫೪ನೇ ಸೂಕ್ತದ ಭಾವಾರ್ಥ.
ವಾಸ್ತೋಷ್ಪತೇ ಪ್ರತರಣೋ . . . .  ಪಿತೇವಪುತ್ರಾನ್ಪ್ರತಿ ನೋ ಜುಷಸ್ವ ||
ಒಬ್ಬ ತಂದೆ ತನ್ನ ಮಕ್ಕಳಿಗಾಗಿ ಎಷ್ಟೆಲ್ಲಾ ತ್ಯಾಗ ಮಾಡಿ ತನ್ನ ಜೀವನವನ್ನೇ ಮುಡುಪಾಗಿಟ್ಟು ಮೇಲಕ್ಕೆ ತರುತ್ತಾನೋ ಅದೇ ರೀತಿ ನಮ್ಮ ಮನೆಯಲ್ಲಿ ಸಂಪತ್ತು ಬೆಳಗಲಿ, ನಮ್ಮ ಗೋವುಗಳು ಅಭಿವೃದ್ಧಿಯನ್ನು ಹೊಂದಲಿ, ನಮಗೆ ಕುದುರೆಗಳನ್ನು ಸಾಕುವಷ್ಟು ಬಲವನ್ನು ನೀಡು. ನಮ್ಮ ಸಂಪತ್ತು ದಿನೇ ದಿನೇ ವೃದ್ಧಿಸಿ ನಮಗೆ ಇನ್ನೂ ಬೇರೆ ಬೇರೆ ಮನೆಗಳನ್ನು ನಿರ್ಮಿಸುವ ಶಕ್ತಿ ನೀಡು ಎಂದು ಕೇಳಿಕೊಳ್ಳುತ್ತಾರೆ.

ಮನೆ ಎನ್ನುವುದು ಹೇಗಿರುತ್ತೆ ಎನ್ನುವುದು ಇಲ್ಲಿ ಹೇಳಲಾಗಿದೆ. ನಮಗೆ ಕಂಡೊಡನೆ ಮನಸ್ಸನ್ನು ಆಕರ್ಷಿಸುತ್ತದೆಯಂತೆ ಅದನ್ನೇ ಇಲ್ಲಿ ರಣ್ವಯಾ ಎನ್ನಲಾಗಿದೆ. ರಮಣೀಯವಾಗುವ ಎನ್ನುವ ಅರ್ಥವನ್ನು ಕೊಡುವುದು. ಇನ್ನು ಶಗ್ಮಯಾ ಎನ್ನುವುದು ಸುಖವನ್ನು ಹೇಳುತ್ತದೆ. ಮನೆಯನ್ನು ಪ್ರವೇಶಿಸಿ ಅಲ್ಲಿ ಉಳಿದಾಗ ನಮಗೆ ಸುಖದ ಅನುಭವವಾಗಬೇಕಂತೆ. ಗಾತುಮತ್ಯಾ ಎಂದು ಹೇಳಿರುವುದು ಮನೆ ಇದ್ದರೆ ಅಲ್ಲಿ ಸುಖವಿದ್ದರೆ ಮತ್ತು ಆಕರ್ಷಕವಾಗಿದ್ದರೆ ಮಾತ್ರ ಸಾಲದು ಇಲ್ಲಿ ಸಂಪತ್ತು ಶೇಖರಣೆಯಾಗುತ್ತಿದ್ದರೆ ಮಾತ್ರ ಉಳಿದವು ಸುಸೂತ್ರವಾಗಿರುತ್ತವೆ ಎನ್ನುವುದು ಶಗ್ಮಯಾ ಎನ್ನುವುದರ ತಾತ್ಪರ್ಯ. ’ಪಾಹಿ ಕ್ಷೇಮ ಉತ ಯೋಗೇ ವರಂ’ ಇಲ್ಲಿ ಇವಿಷ್ಟೂ ಅಲ್ಲದೇ ನಮಗೆ ರಕ್ಷಣೆ ಬೇಕಾಗುತ್ತದೆ ನಾವು ಮಾಡುವ ಉದ್ಯೋಗದಲ್ಲಿ, ಕಳ್ಳಕಾಕರು, ಬಿಸಿಲು, ಮಳೆ, ಶೀತಗಳಿಂದಲೂ ರಕ್ಷಣೆ ಅತ್ಯವಶ್ಯ ಅವುಗಳು ದೊರಕಲಿ, ಮತ್ತು ನಾವು ಅಪೇಕ್ಷಿಸಿದ್ದು ಅತ್ಯಂತ ಸುಲಭವಾಗಿ ದೊರಕುವಂತಾಗಲಿ ಎನ್ನುವುದನ್ನೇ ಯೋಗೇ ಎಂದಿರುವುದು. ಹೀಗೆ ಒಂದು ಮನೆಯ ಎಲ್ಲರನ್ನೂ ಸುಖ ಸಂತೋಷ ನೆಮ್ಮದಿಯಿಂದ ಬಾಳುವಂತೆ ಮಾಡಬಲ್ಲದು ಆದರೆ ಅದು ವಾಸ್ತೋಷ್ಪತಿಯ ಅಥವಾ ವಾಸ್ತು ದೇವನ ಅನುಗ್ರಹದಿಂದ ಎಂದಿರುವುದು ಅತ್ಯಂತ ಮಹತ್ವ ಪಡೆಯುತ್ತದೆ.

ವೇದದಲ್ಲಿ ಸ್ಪಷ್ಟವಾಗಿ ವಾಸ್ತುವನ್ನು ಸಾಕ್ಷಾತ್ಕರಿಸಿಕೊಂಡ ವಸಿಷ್ಟ ಹೇಳುವಂತೆ ಮನೆಯಲ್ಲಿ ವಾಸ್ತುದೇವ ನೆಲೆಸಬೇಕು, ಅಂದರೆ ಮನೆಯ ಪರಿಸರವೂ ಸ್ವಚ್ಚವಾಗಿದ್ದು ಯಾವುದೇ ರೋಗಾಣುಗಳು ಹುಟ್ಟಿಕೊಳ್ಳಬಾರದು ಅದೇ ವಾಸ್ತುವಿನ ಗುಣ ಎನ್ನುತ್ತಾರೆ. ಆದರೆ ದಿಕ್ಕು ? ಅದರ ಕುರಿತು ಉಲ್ಲೇಖಿಸಲೇ ಇಲ್ಲ. ದಿಕ್ಕು ಪ್ರತಿದಿನವೂ ಬದಲಾಗುತ್ತದೆ ಸೂರ್ಯೋದಯದ ದಿಕ್ಕನ್ನು ಪೂರ್ವ ಎಂದು ಇಟ್ಟುಕೊಂಡು ಪಶ್ಚಿಮವನ್ನು ನಿರ್ದೇಶಿಸಿದರೆ ಉತ್ತರಾಯಣ ಮತ್ತು ದಕ್ಷಿಣಾಯನಗಳಲ್ಲಿ ನೇರಕ್ಕೆ ಎಂದಿಗೂ ಸಿಗಲಿಕ್ಕಿಲ್ಲವೇನೋ, ಹಾಗಾಗಿಯೇ ವಾಸ್ತು ದೇವನ ಕುರಿತು ಸ್ತುತಿಸಲಾಗಿದೆಯೇ ವಿನಃ ವೇದದಲ್ಲಿ ವಸ್ತುವಿನ ಅಸಂಬದ್ಧತೆ ಕಾಣಿಸುತ್ತಿಲ್ಲ. ಹಾಗಾದರೆ ಇಂದಿನ ವಾಸ್ತು ? ಇಂದಿನ ವಾಸ್ತುಗಳು ವಿಪರೀತ, ಅವೈದಿಕ. ಹಾಗೊಂದು ವೇಳೆ ವಾಸ್ತುವನ್ನು ನಿರ್ಧರಿಸಲು ಜ್ಯೋತಿಷ್ಯ ಶಾಸ್ತ್ರಕ್ಕೆ ಸಾಧ್ಯವೇ ಹೊರತು ಟಿವಿಗಳಲ್ಲಿ ಕುಳಿತು ಆ ವಾಸ್ತು ಈ ವಾಸ್ತು ಎನ್ನುವುದೆಲ್ಲಾ ಬೊಗಳೆ ಅನ್ನಿಸುತ್ತದೆ.

#ಶಂ_ನೋ_ಭವ_ದ್ವಿಪದೇ_ಶಂ_ಚತುಷ್ಪದೇ
ಸದ್ಯೋಜಾತ

No comments:

Post a Comment

If you have any doubts. please let me know...