May 17, 2021

ಹನುಮಂತನ ಸ್ವರೂಪವಿಚಾರ

ಹನುಮಂತನ ಸ್ವರೂಪವಿಚಾರ :- 

ಕೈ ತೋರಿಸಿ ಅವಲಕ್ಷಣ ಮಾಡಿಕೊಳ್ಳಬೇಡಿ.

ನಿಮಲ್ಲಿರುವ ಅಪ್ರಾಮಾಣಿಕ ವಾಕ್ಯಗಳನ್ನು ನಿಮ್ಮ ಪ್ರವಚನಗಳಿಗೆ ಮಾತ್ರ ಸೀಮಿತವಾಗಿಟ್ಟುಕೊಳ್ಳಿ. ಪ್ರಕ್ಷಿಪ್ತ ಪುರಾಣವಾಕ್ಯಗಳು ನಿಮಗೆ ಆಧಾರವಾಗಿರ ಬಹುದು. ಆದರೇ ನಾನು ಕೊಟ್ಟಿರುವಂಥ ಪ್ರಮಾಣಗಳು ಮೂಲ ವಾಲ್ಮೀಕಿ ರಾಮಾಯಣ ,ವೇದದ ಹಿನ್ನೆಲೆ ಮತ್ತು ಮಹಾಭಾರತದ ವಾಕ್ಯಗಳು. ಇವುಗಳಲ್ಲಿರುವ ಸಾಮ್ಯತೆಗಳನ್ನು ಮುಂದಿಟ್ಟುಕೊಂಡು ಹನುಮಂತನು ಶಿವಾಂಶ ಎನ್ನುವದು ಶಾಸ್ತ್ರೀಯವೇ ಆಗಿದೆ.ಏಕೆಂದರೇ ತೇಜಸ್ಸಿನಿಂದ ಆಕಾಶವೂ ,ಆಕಾಶದಿಂದ ವಾಯುವೂ  ಉತ್ಪತ್ತಿ ಎಂದು ಹೇಳಿದೆ.ತೇಜಸ್ಸು (ಮೂಲ ಅಗ್ನಿಯ ಅವ್ಯಕ್ತ ರೂಪ) ವಾಯುವೇ ಮೊದಲಾದ ಮರುದ್ದೇವತೆಗಳಿಗೆ ರುದ್ರನೇ ಪಿತನು ಎಂದು ಸಾರುತ್ತಿರುವ  ಶೃತಿವಾಕ್ಯಗಳಿಂದಲೇ ನಿಮ್ಮೆಲ್ಲಾ ಸ್ಮೃತಿಪುರಾಣವಾಕ್ಯಗಳು ನೆಲಕಚ್ಚುತ್ತವೆ.

ಇನ್ನು ವಾಯುವಿನ ಅಂಶ ಹನುಮಂತ ಎನ್ನುವದರಲ್ಲಿ ನಾವು ಯಾವುದೇ ನಿರಾಕರಣೆಯನ್ನೂ ಮಾಡಿಲ್ಲ. ರುದ್ರನೇ ವಾಯುವಿನ ತಂದೆಯೂ ಎಂದು ವೇದಗಳಲ್ಲಿ ಹೇಳಿರುವದರಿಂದಲೂ ಅನುವಂಶೀಯತೆಯ ಕಾರಣದಿಂದಲೂ ,ಪುರಾಣಗಳಲ್ಲಿಯೂ ಹನುಂತನು ರುದ್ರಾಂಶಸಂಭೂತವೆಂದು ಹೇಳಿರುವದರಿಂದಲೂ ಈ ಅನುವಂಶೀಯತೆಯ ಆಧಾರದ ಮೇಲೇ ಹನುಂತನು ವಾಯುವಿನ ಅಂಶವಾಗಿದ್ದರೂ ,ವಾಯು ರುದ್ರನ ಅಂಶವಾಗಿರುವದರಿಂದಲೂ , ಮತ್ತೂ ವೇದಗಳೇ ವಾಯು ಮೊದಲಾದ ದೇವತೆಗಳು ಅಪ್ರಜಾಃ ಅರ್ಥಾತ್ ಅವೀರ್ಯವಂತರೂ ಆಗಿರುವದರಿಂದ ಇವರು ತಮ್ಮ ಅಂಶಗಳನ್ನು ಗುಣಗಳ ರೂಪದಲ್ಲಿ ದಯಪಾಲಿಸಬಾಹುದಾಗಿದೆ.

ಈ ಗುಣಾಂಶವೇ ರುದ್ರನ ಅಂಶವಾಗಿರುವದರಿಂದ ರುದ್ರನ ಅಂಶವನ್ನೇ ವಾಯು ಹನುಮಂತನಿಗೆ ವರ್ಗಾಯಿಸಿದ್ದಾನೆ ಎಂಬುದೂ ವೈಜ್ಞಾನಿಕವೂ ಶಾಸ್ತ್ರೋಕ್ತವೂ ಆಗಿದೆ. 

ಈ ಅನುವಂಶೀಯತೆ ನಿರಾಕರಿಸಿದರೇ ಮಧ್ವಾಚಾರ್ಯರ ಅವತಾರವೂ ಅಸಂಬದ್ಧ ಎಂದೇ ನೀವು ಹೇಳಿದಂತಾಗಿ , ಮಧ್ವಯತಿಗಳೆಲ್ಲರೂ ಯಾವುದೋ ದೇವತೆಗಳ ಅಂಶವೆಂದು ಈಗಲೂ ಪ್ರತಿಬಿಂಬಿಸುತ್ತಿರುವ ನಿಮ್ಮ ಕಟ್ಟುಕಥೆಗಳಿಗೂ ಎಳ್ಳುನೀರು ಬಿಡ ಬೇಕಾಗುತ್ತದೆ.

ಇನ್ನು ಸುಗ್ರೀವನಿಗೆ ಯಾರು ಹಾರ ಹಾಕಿದರೇ ನಮಗೇನು ,ಬಾಣ ಬಿಟ್ಟಿದ್ದು ರಾಮ ಸತ್ತಿದ್ದು ವಾಲಿಯೇ ಅಲ್ಲವೇ ? ಸಂಪೂರ್ಣ ಉತ್ತರ ಭಾರತದಲ್ಲಿ ಹನುಂತನು ಮುಖ್ಯದೇವತೆ ಆಗಿರುವದರಿದಲೂ , ಎಲ್ಲರೂ ಅಲ್ಲಿ ಹನುಮಂತನು ರುದ್ರಾಂಶ ಸಂಭೂತನೆ ಎಂಬುವದೇ ಪುರಾಣಗಳಿಂದಲೂ ವೇದಗಳಿಂದಲೂ ಸಮರ್ಥಿತವಾಗಿ ಸಿದ್ಧಾಂತವಾಗಿದೆ. ಆದ್ದರಿಂದ ನೀವು ಹನುಮಂತನು ವಾಯುವಿನ ಅಂಶ ಎಂದು ಒಪ್ಪಿಕೊಳ್ಳುವದರಿಂದಲೇ ವೇದೋಕ್ತ ಹಾಗೂ ವೈಜ್ಞಾನಿಕವಾಗಿಯೂ ಹನುಮಂತನೂ ರುದ್ರಾಂಶನೇ ಎನ್ನುವದರಲ್ಲಿ ಯಾವುದೇ ಸಂಶಯವಿಲ್ಲ. 

ಇನ್ನು ನೀವು ರಾಮಯಣದಲ್ಲಿದೆ ಎಂದು ಹೇಳಿರುವ ಮತ್ತೊಂದು ಅಸಂಬದ್ಧ ವಾಕ್ಯ

 *ಹನುಮಂತನ ಬಗ್ಗೆ ರಾಮನಲ್ಲಿ ಅಗಸ್ತ್ಯರು " ಬ್ರಹ್ಮಾ ಭವಿಷ್ಯತಿ ತೇ ಪ್ರಸಾದಾತ್" ಎಂದು ಹೇಳುತ್ತಾರೆ. ಮುಂದಿನ ಕಲ್ಪದಲ್ಲಿ ನಿನ್ನ ಅನುಗ್ರಹದಿಂದ ಬ್ರಹ್ಮನಾಗುವವನು ಎಂಬುದು ಇದರ ಅರ್ಥ* ಇದು ಭೀಮಸೇನನಿಗೂ ಕೃಷ್ಣನಿಗೂ ಕಲ್ಪಿಸಿರುವ ಕಟ್ಟುಕಥೆ. ಅಥವಾ ಮುಂದೆ ಮಧ್ವಾಚಾರ್ಯರ ಪದವಿ ಪ್ರಾಪ್ತಿ ಇದ್ದರೂ ಇರಬಹುದು. ಏಕೆಂದರೇ ಹನುಮಂತನೇ ಒಂದು ಅಂಶ. ಅವನೇ ಚಿರಂಜೀವಿ ಎಂದು ವರ ಪಡೆದಿರುವದರಿಂದಲೇ ಬ್ರಹ್ಮತ್ವ ಪ್ರಾಪ್ತಿ ಇಲ್ಲ. ಇದ್ದರೂ  ಪ್ರಳಯದಲ್ಲೇ ಎಂಬುದೂ ಜಗದ್ವಿಖ್ಯಾತ ಆಗಿದೆ. ಮುಂದಿನ ಕಲ್ಪದಲ್ಲಿ ಹನುಮಂತ ಅಥವಾ ಅವನ ಅಂಶಕ್ಕೆ ಬ್ರಹ್ಮ ಪದವಿ ಪ್ರಾಪ್ತಿ ಎಂದರೇ ಹನುಮಂತನ ಚಿರಂಜೀವತ್ವಕ್ಕೆ ಎಳ್ಳುನೀರು ಬಿಡಿ. ಏಕೆಂದರೇ ಜಿವನಿಗೆ ಬ್ರಹ್ಮ ಪದವಿ ಇದ್ದರೇ ಜೀವತ್ವವನ್ನು ಬಿಟ್ಟಮೇಲೇ ಎಂಬುದೂ ಯುಕ್ತಿಯುಕ್ತವೇ. 

ಈಗ  ಮೇಲಿನ ವಾಕ್ಯವನ್ನು ಹಗಲುದೀಪ ಹಿಡಿದು ಹುಡುಕಿದರೂ ಮೂಲ ರಾಮಾಯಣದಲ್ಲಿ ಸಿಗುವದಿಲ್ಲ. (ನಿಮ್ಮಿಂದ ಮುದ್ರಿತವಾದ ಪುಸ್ತಕಗಳಲ್ಲಿ ಸಿಗಬಹುದೇನೋ ನಾನರಿಯೆ) ಇಲ್ಲಿಯೂ ನಿಮ್ಮ ಶಾಸ್ತ್ರತಿರಿಚುವಿಕೆಯೇ ಎದ್ದು ಕಾಣುತ್ತಿದೆ.ಹೋಗಲೀ ಅದನ್ನಾದರೂ ಪೂರ್ವಾಪರ ಯೋಚಿಸಿ ಮಾಡಿದ್ದೀರೋ .ಅಲ್ಲೂ ನಿಮ್ಮ ಪೆದ್ದುತನ ತಾಂಡವವಾಡುತ್ತಿದೆ. ನೀವೇ ಯೊಚಿಸಿ ಹನುಮಂತನಿಗೆ ಬ್ರಹ್ಮ ಪದವಿ ಕೊಡುತ್ತೀರೋ ಅಥವಾ ಚಿರಂಜೀವತ್ವ ಹೇಳುತ್ತೀರೋ.ಮುಂದಿನ ಕಲ್ಪ ಎಂದರೇ ಇತಿಹಾಸಪುರಾಣಗಳು ಅನಿತ್ಯವಾಗಿರುವದರಿಂದ ,ಪ್ರತಿಕಲ್ಪದ ಆದಿಯಲ್ಲೂ ಇವುಗಳು ಸೃಷ್ಟವಾಗಿ ಕಲ್ಪಾಂತದಲ್ಲಿ ನಾಶವಾಗುತಿರುವದರಿಂದ ಈ ಅಭಿಪ್ರಾಯವೂ ಕಲ್ಪಾಂತದಲ್ಲಿ ನಾಶವಾಗಿಯೇ ತೀರುತ್ತದೆ.ಈ ಕಲ್ಪಾಂಟ ಯುಕ್ತಿಯಿಂದಲೂ ಹನುಮಂತನ ಚುರಂಜೀವತ್ವ ನಾಶ ಇಲ್ಲ. ಏಕೆಂದರೇ ಜೀವನಿಗೆ ಉತ್ಪತ್ತಿ ಹೇಳಿಲ್ಲ . ನಿಮ್ಮ ಪ್ರಕಾರ ಜೀವನಿಗೆ ಬ್ರಹ್ಮಪದವಿ ಎಂದರೇ ಜೀವತ್ವಬಿಡಬೇಕು ಎಂದರ್ಥ ಮಾಡುವ ಹಾಗೂ ಇಲ್ಲ. ಏಕೆಂದರೆ ಅದಕ್ಕೂ ಮುಂಚೇ ತನೇ ವಾಯುವೂ ಆಗಬೇಕು. ಮತ್ತು ನಿಮ್ಮ ಸಿದ್ಧಾಂತದಲ್ಲಿ ಪದವಿಯು ಸಂಪಾದಿಸಿಕೊಳ್ಳುವಂಥದ್ದು ಎನ್ನುವದರಲ್ಲಿ ಪರಮಾತ್ಮನ ಕೃಪೆ ಹೇಳಿರುವದರಿಂದ ಪುರುಷಪ್ರಯತ್ನ ಅಲ್ಲಗಳೆದಂತೆಯೂ ಆಯಿತು.ಇಂಥ ಎಡಬಿಡಂಗಿತನ ನಿಮ್ಮ ಪ್ರಕ್ಷಿಪ್ತಗಳಿಂದ. 

ಇನ್ನಾದರೂ ನಿಮ್ಮ ದುಶ್ಚಟಗಳನ್ನು ದೂರವಿಟ್ಟು ಪ್ರಾಮಾಣಿಕವಾದ ನಿರೂಪಣೆ ಮಾಡುವದನ್ನು ಕಲಿತುಕೊಳ್ಳಿ. ಶಾಸ್ತ್ರೋಕ್ತ ವಾಕ್ಯಗಳ ಮೂಲಕ ನಿಮ್ಮ ಅಭಿಪ್ರಾಯವನ್ನು ತಿಳಿಸುವ ಪ್ರಯತ್ನ ಮಾಡಿ. ಕಟ್ಟುಕಥೆಗಳು, ಬಾಯಿಮಾತಿನ ಕುರುಡು ಅಭಿಮಾನ ತಾತ್ಪರ್ಯನಿರ್ಣಯ ಮತ್ತಿತರ ಕುಗ್ರಂಥಗಳು ನಿಮಗೆ ಪ್ರಮಾಣ ಇರಬಹುದು,ವೈದೀಕರಿಗಲ್ಲ.  

ಇಂಥ ಕ್ಷುಲ್ಲಕ ನಿರೂಪಣೆಗೆ ನನ್ನ ಸಮಯ ಹಾಳು ಮಾಡಬೇಡಿ. ಇನ್ನು ಇಂಥವರ ಉಪನ್ಯಾಸಪದವಿ ...ದೇವರೇ ಗತಿ.

ಶುಭಮ್ 

ಸತ್ಯಪ್ರಕಾಶ.

No comments:

Post a Comment

If you have any doubts. please let me know...