ರುದ್ರಾಂಶ ಸಂಭೂತ ಆಜನ್ಮಬ್ರಹ್ಮಚಾರೀ ಹನುಮಂತ:- ಭಾಗ-೦೧
ಇಂದಿನ ಬರಹದಲ್ಲಿ ಹನುಮಂತನಿಗೆ ಮದುವೇಯಾಗಿದೆ ಮುಂತಾದ ಅಪಭ್ರಂಶಗಳ ನಿವಾರಣೆ ಮಾಡುವದಕ್ಕೋಸಕರ ಹಾಗೂ ಹನುಮಂತನ ಜನ್ಮಸಂಬಂಧ ವೇದದಲ್ಲಿ ಹೇಳಿರುವದಕ್ಕೂ ಪುರಾಣ ಸ್ಮೃತಿಗಳಲ್ಲಿ ಹೇಳಿರುವದಕ್ಕೂ ಹೇಗೆ ಸರಿಹೊಂದಿಸುವದು ಎಂಬ ಸಣ್ಣ ಪ್ರಯತ್ನ.ಮೊದಲಿಗೆ ಪುರಾಣಸ್ಮೃತಿಗಳಲ್ಲಿ ಹೇಳಲ್ಪಟ್ಟ ಪ್ರಸಿದ್ಧವಾದ ಕಥೆ ನಂತರ ಹನುಮಂತನಿಗೆ ಮದುವೆಯಾಗಿದೆ ಎಂಬ ಅಪ್ರಭ್ರಂಶ ನಿವಾರಣೆ ಮತ್ತು ಕೊನೆಯ ಭಾಗದಲ್ಲಿ ಹನುಮಂತನ ಜನ್ಮ ಸಂಬಂಧ ವೇದಗಳಲ್ಲಿರುವ ವಿಚಾರ ವಿಮರ್ಶೆ.
ಪುರಾಣಗಳಲ್ಲಿ ಹೆಚ್ಚು ಕಡಿಮೆ ಈ ಕೆಳಗಿನ ಕಥೆಯೇ ಹೆಚ್ಚು ಪ್ರಚಲಿತವಾಗಿದೆ.ಇದರ ಪ್ರಮಾಣಪ್ರತಿಪಾದನೆಗೆ ನಾನು ಕೈ ಹಾಕುವದಿಲ್ಲ.ಏಕೆಂದರೇ ಹನುಮಂತನ ಜನನ ವಿಷಯದಲ್ಲಿ ಸಾಕಷ್ಟು ವ್ಯತಿರಿಕ್ತವಾದ ಕಥೆಗಳಿವೆ. ಆದರೇ ಹನುಮಂತನು ರುದ್ರಾಂಶ ಸಂಭೂತ ವಾಯುಪುತ್ರ (ವಾಯು ಕೂಡ ರುದ್ರಾಂಶ ಸಂಭೂತನೇ ,ವಾಯುವಿಗೆ ವೇದಗಳಲ್ಲಿ ರುದ್ರನ ಮಗ ಎಂಬುದಾಗಿ ನೇರವಾಗಿಯೇ ಹೇಳಿದೆ) ಮತ್ತೂ ಕೇಸರೀ ಅಂಜನಾದೇವಿಯರ ಮಗ ಎಂಬುವದು ನಿರ್ವಿವಾದವಾಗಿರುವ ಸಾರ್ವಕಾಲಿಕ ಸತ್ಯ
ಶಿವನು ರಾಮಾವತಾರದಲ್ಲಿ ಸೀತೆಯನ್ನು ಹುಡುಕುವ ಕೆಲಸದಲ್ಲಿ ಸಹಾಯಮಾಡುವ ಸಲುವಾಗಿ ಹನುಮಂತನರೂಪದಲ್ಲಿ ಹುಟ್ಟಿ ನಾನಾಲೀಲೆಗಳನ್ನು ತೋರಿಸಿದನು. ಸಮುದ್ರಮಂಥನದ ಸಮಯದಲ್ಲಿ ಮೋಹಿನೀ ರೂಪಧರಿಸಿದ ವಿಷ್ಣುವಿನಲ್ಲಿ ಮೋಹಿತನಾಗಿ ತನ್ನ ರೇತಸ್ಸನ್ನು ಚೆಲ್ಲಿದನು.ಈ ರೇತಸ್ಸನ್ನು ಗೌತಮ ಮಹರ್ಷಿಗಳು ತಪೋನಿರತಳಾದ ಅಂಜನಾದೇವಿಯ ಗರ್ಭದಲ್ಲಿ ಸೇರಿಸಿದರು.ಇದು ಒಂದು ಕಥೆ. ಅಂಜನಾದೇವಿಯ ಗರ್ಭದಿಂದ ಜನಿಸಿದ ರುದ್ರಾಂಶ ಸಂಭೂತನು ಒಮ್ಮೆ ಹಸಿವಿನಿಂದ ಕೂಡಿದಾಗ ಸಂಧ್ಯಾಕಾಶದಲ್ಲಿರುವ ಸೂರ್ಯನನ್ನು ನೋಡಿ ಅದನ್ನು ಹಣ್ಣೆಂದು ತಿಳಿದು ಹಿಡಿಯಲು ಹೋದಾಗ ಇಂದ್ರನ ವಜ್ರಾಯುಧದ ಪೆಟ್ಟಿನಿಂದ ಮೂರ್ಛೆ ಹೊಂದಿ ಕೆಳಗೆ ಬಿದ್ದನು.ನಂತರ ಈಶ್ವರನು ಇವನನ್ನು ಸಂತೈಸುತ್ತಾ ಬ್ರಹ್ಮಾಸ್ತ್ರ ,ನಾರಾಯಣಾಸ್ತ್ರ ಪಾಶುಪತಾಸ್ತ್ರ ಮುಂತಾದ ಯಾವುದೇ ಅಸ್ತ್ರಗಳಿಂದಲೂ ಪರಾಜಿತನಾಗದಂತೆ ಅನುಗ್ರಹಿಸಿ ಚಿರಂಜೀವತ್ವವನ್ನೂ ದಯಪಾಲಿಸಿದನು. ನಂತರ ಈಶ್ವರನ ಆಜ್ಞೆಯ ಮೇರೆಗೆ ಸೂರ್ಯನಿಂದಲೇ ನಾಲ್ಕೂ ವೇದಗಳು ಸರ್ವ ಶಾಸ್ತ್ರಗಳ ಬೋಧನೆ ಎಂಬ ಕಥೆ.ಶಿವಪುರಾಣದಲ್ಲಿ ಇದೆ. ಶಿವಪುರಾಣದಲ್ಲಿಯೇ ಹನುಮಂತನಿಗೆ ಹರಿಹರ ಪುತ್ರ ,ಕುಮಾರ , ಅಗ್ನಿ , ವಿಭಾವಸು ಎಂಬ ಹೆಸರಿನಿಂದಲೂ ಹೇಳಲಾಗಿದೆ.ಇದನ್ನು ಹನುಮಂತನ ಸಹಸ್ರ ನಾಮಾವಳಿಯಲ್ಲಿ ಕುಮಾರ ಎಂಬ ಹೆಸರೂ ಇದೆ.ಹಾಗೆಯೇ ಗಣೇಶನ ಭ್ರಾತೃ ಎಂಬುದಾಗಿಯೂ ಕರೆದಿರುವದೂ ಇದೇ ಸಹಸ್ರನಾಮಗಳಲ್ಲಿ ಕಂಡುಬರುತ್ತದೆ.
ಹನೂಮತ್ಸಹಸ್ರನಾಮಾವಳಿ :-
ಅಗ್ನಿರ್ವಿಭಾವಸುರ್ಭಾಸ್ವಾನ್ ಯಮೋ ನಿರೃತಿರೇವ ಚ ॥ 35॥ ಮೇಘನಾದೋ ಮೇಘರೂಪೋ ಮೇಘವೃಷ್ಟಿನಿವಾರಣಃ ॥ 83॥
ಕಾಳಿಕಾರಹಸ್ಯ :-
ಕುಮಾರಬ್ರಹ್ಮಚಾರೀ ಚ ರತ್ನಕುಂಡಲದೀಪ್ತಿಮಾನ್ ॥ 7॥ ವಜ್ರದಂಷ್ಟ್ರೋ ವಜ್ರನಖೋ ರುದ್ರವೀರ್ಯಸಮುದ್ಭವಃ ॥ 19॥
ಇವುಗಳು ಹೇಗಾದರೂ ಇರಲಿ ಹನುಮಂತನು ರುದ್ರಾಂಶಸಂಭೂತನೆಂಬುದಾಗಿ ಎಲ್ಲಿಯೂ ಸಂಶಯವಿಲ್ಲ.ಇದಕ್ಕೆ ವೇದಗಳ ಪ್ರಮಾಣವನ್ನೂ ಇದೆ ಬರಹದ ಕೊನೆಯಲ್ಲಿ ಕೊಡುತ್ತೇವೆ.
ಪಲ್ಲವರು ತಮ್ಮ ಮೂಲದೇವರುಗಳಲ್ಲಿ ಹನುಮಂತ ,ಪಾರ್ವತೀ ಮತ್ತು ಗಣೇಶನ ವಿಗ್ರಹವನ್ನು ಒಂದೇ ಪೀಠದಲ್ಲಿ ನಿರ್ಮಿಸಿರುವದು ಇಂದಿಗೇ ಸಿಕಂದರಾಬಾದಿನಲ್ಲಿ ಸುವರ್ಚಲಾ ದೇವಿ ಎಂಬ ದೇವಸ್ಥಾನದ ಹೆಸರಿನಲ್ಲಿ ಪ್ರಖ್ಯಾತವಾಗಿದೆ.ಹಿಂದೆ ಈ ಸ್ಥಳದಲ್ಲಿ ಕೆಲವು ಮೂರ್ಖಜನರು ತಾಯಿ ಮಕ್ಕಳು,ಅರ್ಥಾತ್ ಪಾರ್ವತೀ ಸಮೇತ ಹನುಮಂತ ಮತ್ತು ಗಣೇಶನನ್ನು ಈಶ್ವರನ ಮಕ್ಕಳಾಗಿ ಪ್ರತಿಬಿಂಬಿಸಿರುವ ಈ ಮೂರ್ತಿಯಲ್ಲಿರುವ ಹೆಣ್ಣು ದೇವತೆ ಹನುಮಂತನ ಪತ್ನಿಯಾದ ಸುವರ್ಚಲಾದೇವಿ ಎಂಬುದಾಗಿ ಚರಿತ್ರೆಯನ್ನು ತಿರುಚಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಇದಕ್ಕೆ ಮೂಲಕಾರಣ ಶೈವದ್ವೇಷಿಯಾದ ಯಾರೋ ಒಬ್ಬರು ಸುವರ್ಚಲಾ ಎಂಬುವವಳು ಸೂರ್ಯನ ಮಗಳು ಎಂಬುದಾಗಿ ಹೇಳಿ , ವಿಗ್ರಹದಲ್ಲಿರುವ ಹೆಣ್ಣು ದೈವ ಹನುಮಂತನ ಹೆಂಡತಿ ಸುವರ್ಚಲಾ ಎಂಬುದಾಗಿ ಹೇಳಿ ಹೊಸದಾದ ಕಟ್ಟುಕಥೆಯನ್ನು ಸೃಷ್ಟಿಸಿದ್ದಾರೆ.
ಸುಮಾರು ಹದಿನೈದನೆಯ ಶತಮಾನದಲ್ಲಿ ಈ ದೇವಸ್ಥಾನವನ್ನು ಪುನಸ್ಸ್ಥಾಪಿಸಿದ್ದಾರೆ. ಇದಕ್ಕೆ ಮರುಳುಮಾಡುವಂಥ ಕಥೆಯನ್ನೂ ಸೂರ್ಯನ ಬಳಿ ನವ-ವ್ಯಾಕರಣ ಕಲಿಯುವದಕ್ಕಾಗಿ ತನ್ನ ಬ್ರಹ್ಮಚರ್ಯವನ್ನು ತ್ಯಾಗಮಾಡಿದನು , ನಂತರ ಹನುಮಂತನು ಬ್ರಹ್ಮ ಪದವಿಯನ್ನು ಪಡೆದ ನಂತರ ಈ ಸುವರ್ಚಲಾ ಎಂಬುವಳೇ ಸರಸ್ವತಿಯಾಗುತ್ತಾಳೆ (ಶಿವದ್ವೇಷಿಗಳ ಮೂಲ ಇಲ್ಲಿದೆ) , ಎಂಬುದಕ್ಕೇ ಯಾವುದೇ ಆಧಾರವಿಲ್ಲದ ಅಸಂಬದ್ಧ ಕಥೆಯನ್ನು ಸೃಷ್ಟಿಮಾಡಿದ್ದಾರೆ. ಹನುಮಂತನಿಗೂ ರುದ್ರನಿಗೂ ಸಂಬಂಧ ಕಡಿಯುವದೇ ಇವರ ಮುಖ್ಯ ಉದ್ದೇಶ. ಆಜನ್ಮ ಬ್ರಹ್ಮಚಾರೀ ಮತ್ತು ರುದ್ರಾಂಶಸಂಭೂತನಾದ ಹನುಮಂತನನ್ನು ಹಡೆದ ತಾಯಿ ಅಂಜನಾದೇವಿಯಾದರೂ ಮೂಲದಲ್ಲಿ ಹನುಂತನ ಗರ್ಭಧರಿಸಿದ್ದು ಪಾರ್ವತಿಯೇ ಎಂಬುದಾಗಿ ಕಂಬ ರಾಮಾಯಣದ ಪೂರ್ವಖಂಡದಲ್ಲಿ ಕಥೆಯಿದೆ.ತಮಿಳು ಭಾಷೆಯಲ್ಲಿರುವ ಈ ರಾಮಾಯಣವು ಹನ್ನೊಂದನೆಯ ಶತಮಾನದಲ್ಲಿ ತಂಜಾವುರು ಪ್ರಾಂತ್ಯದಿಂದ ಗುಳೇ ಬಂದ ಪಲ್ಲವರ ಆಸ್ಥಾನ ಕವಿಯಾದ ಕಂಬರನಿಂದ ರಚಿಸಲ್ಪಟ್ಟಿದ್ದು ,ಇಂದಿನ ಇದೇ ಅಂಧ್ರಪ್ರದೇಶದಲ್ಲೇ ಈ ಕಥೆಯು ಹೆಚ್ಚು ಪ್ರಚಲಿತವಾಗಿದೆ. ಇಂದಿಗೂ ಅಲ್ಲಿಯ ಜನಪದಗೀತೆಗಳಲ್ಲಿ ಈ ಕಂಬ ರಾಮಾಯಣದ ಹನುಮಂತನೂ ಗಣೇಶನೂ ಅಣ್ಣತಮ್ಮಂದಿರು , ಅವರ ತಂದೆತಾಯಿಗಳು ಶಿವಪಾರ್ವತಿಯರೇ ಎಂಬ ಕುರುಹನ್ನು ಪ್ರತಿಬಿಂಬಿಸುವ ಕಥೆಯು ಜೀವಂತ ಸತ್ಯವಾಗಿ ಜನಪ್ರಿಯವಾಗಿದೆ.
ಈ ಪ್ರಾಂತ್ಯದಲ್ಲೇ ಇದ್ದುಕೊಂಡಿದ್ದ ಈ ವಿಗ್ರಹವನ್ನು ಅದರ ಚಾರಿತ್ರ್ಯವನ್ನೂ ಧ್ವಂಸ ಮಾಡಿದ ಅಪಕೀರ್ತಿ ಈ ಕುತ್ಬ್ -ಷಾಹಿ ನಡುವೆ ನಿಕಟ ಸಂಬಂಧ ಇದ್ದ ಯಾದೋ ಒಂದು ಶಿವದ್ವೇಷಿಗಳೇ ಎಂಬುದರಲ್ಲಿ ಸಂದೇಹವಿಲ್ಲ. ಈ ದೇವಸ್ಥಾನ ರಜಪುತ , ಮುಘಲರ ಹಾಗೂ ಕುತ್ಬ್ ಷಾಹಿ ಮೂರೂ ಪ್ರಾಕಾರಗಳನ್ನು ಹೊಂದಿದೆ. ಇದೇ ಸಂಕೇತ ಈ ದಿವ್ಯಸ್ಥಾನದ ಚರಿತ್ರೆಯು ಎಷ್ಟುಬಾರಿ ಪುನರ್ನಿಮಿಸಲ್ಪಟ್ಟಿದೆ ಎಂದು.
ರಾಮಾಯಣ ,ವಿಷ್ಣುಪುರಾಣ , ಮಹಾಭಾರತದಲ್ಲಿ ಸುವರ್ಚಲಾ ಎನ್ನುವದೂ ಸೂರ್ಯನ ಪತ್ನಿಯೇ ಎಂಬುದಾಗಿ ಸುಸ್ಪಷ್ಟವಾಗಿ ಹೇಳಿದೆ.
ರಾಮಾಯಣ
ಧರ್ಮಸ್ತು ಗಜನಾಸೋರು ಸದ್ಭಿರಾಚರಿತಃ ಪುರಾ | ತಂ ಚಾಹಮನುವರ್ತೇಽದ್ಯ ಯಥಾ ಸೂರ್ಯಂ ಸುವರ್ಚಲಾ ||೨.೦೨೭.೦೨೮||
ಕಥಯನ್ತೀವ ಚನ್ದ್ರೇಣ ಸೂರ್ಯೇಣೇವ ಸುವರ್ಚಲಾ | ಮತ್ಪೃಷ್ಠಮಧಿರುಹ್ಯ ತ್ವಂ ತಾರಾಕಾಶಮಹಾರ್ಣವಮ್ | ೫.೦೩೫.೦೨೭||
ಎಲೈ ಸೀತೇ , ಹಿಂದೆ ಧರ್ಮಜ್ಞರು ಪಿತೃವಾಕ್ಯಪರಿಪಾಲನೆಯನ್ನು ಅನುಸರಿಸುವಾಗ ಆನೆಗಳು ಇಡುವ ಹೆಜ್ಜೆಯಂತೆ ದೃಢಮಾರ್ಗಾನುವ್ರತರಾದರೋ ಹಾಗೆಯೇ ಇಂದಿನಿಂದ, ಪತಿಯು ಹೇಗೆ ಯಾವರೀತಿಯಲ್ಲಿ ತನ್ನ ಸಹಧರ್ಮಿಣಿಯಲ್ಲಿ ಧರ್ಮವನ್ನಾಚರಿಸಬೇಕು ಎಂಬುದಾಗಿ ಸೂರ್ಯನ ಪತ್ನಿಯಾದ ಸುವರ್ಚಲಾ ಎಂಬುವಳು ತೋರಿಸಿಕೊಟ್ಟಿದ್ದಾಳೋ , ಅದೇ ರೀತಿಯಲ್ಲಿ ಆಯಾ ಧರ್ಮಗಳಲ್ಲಿ ನಾನು ನನ್ನ ಸಹಧರ್ಮಿಣಿಯಾದ ನಿನ್ನನ್ನು ಅನುಸರಿಸುತ್ತೇನೆ.
ರಾಮಾಯಣ :-
ಅಸೌ ಪುರಾ ವ್ಯಾಕರಣಂ ಗ್ರಹೀಷ್ಯನ್ ಸೂರ್ಯೋನ್ಮುಖಃ ಪೃಷ್ಠಗಮಃ ಕಪೀನ್ದ್ರಃ || ೭.೦೩೬.೦೪೨ ||
ಶ್ರೀರಾಮನು ಹನುಮಂತನ ಭೇಟಿಯಲ್ಲೇ ಹನುಮಂತನಿಗೆ ಈ ಹಿಂದೆಯೇ ವ್ಯಾಕರಣಾದಿ ಶಾಸ್ತ್ರಗಳು ಸೂರ್ಯನಿಂದಲೇ ಹೇಳಿಕೊಡಲ್ಪಟ್ಟಿದೆ ಎಂಬ ವಿಷಯವು ಇದೆ. ಹಾಗಾಗಿ ಇಲ್ಲಿ ನವ-ವ್ಯಾಕರಣ ಎಂಬ ಯಾವ ಉಲ್ಲೇಖವೂ ಇಲ್ಲ.ಅದನ್ನು ಹೇಳಿಕೊಟ್ಟಿದಕ್ಕಾಗಿ ಸೂರ್ಯನು ಗುರುದಕ್ಷಿಣೆಯ ರೂಪದಲ್ಲಿ ಹೆಂಡತಿಯನ್ನೇ ಮದುವೆ ಆಗು ಎಂದೂ ಕೇಳುವ ಅಸಂಬದ್ಧವೂ ಇಲ್ಲ.
ವಿಷ್ಣುಪುರಾಣ:-
ಸುವರ್ಚಲಾ ತಥೈವೋಮಾ ಸುಕೇಶೀ ಚಾಪರಾ ಶಿವಾ| ಸ್ವಾಹಾ ದಿಶಸ್ತಥಾ ದೀಕ್ಷಾ ರೋಹಣೀ ಚ ಯಥಾಕ್ರಮಮ್ ||೮||
ಸೂರ್ಯಾದೀನಾಂ ನರಶ್ರೇಷ್ಠ ರುದ್ರಾಧೈರ್ನಾಮಭಿಃ ಸಹ| | ಪತ್ನ್ಯಃ ಸ್ಮೃತಾ ಮಹಾಭಾಗ ತದಪತ್ಯಾನಿ ಮೇ ಶೃಣು| | ೧೦||
ಹಿಂದೆಯೇ ರುದ್ರಾವಲೋಕನದಲ್ಲಿ ಸಾಕ್ಷಾತ್ ಪರಮೇಶ್ವರನೇ ಚತುರ್ಮುಖ ಬ್ರಹ್ಮನ ಮಗನಾಗಿ ಹುಟ್ಟುತ್ತೇನೆಂದು ವರಕೊಟ್ಟು ಏಕಾದಶ ರುದ್ರರಾಗಿ ವ್ಯಕ್ತವಾದನು ಎಂಬ ವಿಷಯ ವೇದಮಂತ್ರಗಳ ಮೂಲಕ ವಿಸ್ತಾರವಾಗಿ ತಿಳಿಸಿದ್ದೆವು.
ಅದಕ್ಕೆ ಅನುಬಂಧಿಯಾಗಿ ವಿಷ್ಣುಪುರಾಣದಲ್ಲಿಯೂ ಸಹ ಈ ರುದ್ರನು ಅಷ್ಟಮೂರ್ತಿಗಳ ರೂಪದಲ್ಲಿ (ಬ್ರಹ್ಮನಿಗೆ ನೀಡಿದ ವರದಂತೆ ಶಿವನು *ಶತರುದ್ರೀಯಮ್* ಅರ್ಥಾತ್ ರುದ್ರನ ನೂರು ಅವತಾರಗಳಗಳನ್ನು ತಾಳಿದನು) ವ್ಯಕ್ತವಾಗಿ ಸೂರ್ಯ, ಜಲ,ಭೂಮಿ,ವಾಯು,ಅಗ್ನಿ,ಆಕಾಶ, ಬ್ರಾಹ್ಮಣ ಮತ್ತು ಚಂದ್ರ ಎಂಬ ಶರೀರಗಳನ್ನು ಧಾರಣೆ ಮಾಡಿದನು. ಮತ್ತು ಆಯಾ ಸ್ಥಾನಗಳಲ್ಲಿ ಅರ್ಥಾತ್ ಸೂರ್ಯಾದಿಗಳಿಗೇ ಸುವರ್ಚಲಾ,ಉಮಾ ಮುಂತಾದ ಪತ್ನಿಯರೂ ಸೇರಿಕೊಂಡರು.
ಮಹಾಭಾರತ: ಶಾಂತಿಪರ್ವ:-
ಶ್ಯಾಮಾಕಮಶನಂ ತತ್ರ ಸೂರ್ಯಪತ್ನೀ ಸುವರ್ಚಲಾ || ೧೨.೨೬೪.೦೦೪ ||
ಅನುಶಾಸನಿಕ ಪರ್ವ:-
ವರುಣಸ್ಯ ತತೋ ಗೌರೀ ಸೂರ್ಯಸ್ಯ ಚ ಸುವರ್ಚಲಾ | ರೋಹಿಣೀ ಶಶಿನಃ ಸಾಧ್ವೀ ಸ್ವಾಹಾ ಚೈವ ವಿಭಾವಸೋಃ|| ೧೩.೧೩೪.೦೦೪ ||
ತ್ರಿಕಾಂಡಶೇಷದಲ್ಲೂ ಸೂರ್ಯನ ಹದಿನಾಲ್ಕು ಪತ್ನಿಯರ ಹೆಸರ ಮತ್ತು ಅವರಿಂದ ಹುಟ್ಟಿದ ಮಕ್ಕಳ ಹೆಸರನ್ನೂ ಹೇಳುವಂಥ ಈ ಕೆಳಗಿನ ಮಂತ್ರವಿದೆ.
ಛಾಯಾ ಸ್ಯಾತ್ತಪತೀ ಮಂದಜನನೀ ಭೂಮಯೀವರೀ | ಸಂಜ್ಞಾತು ಯಮಕಾಲಿಂದೀರೇವಂತ ಮನುದಸ್ಸ್ರಸೂಃ ||೦೧.೧೯ ||
ತ್ರಸರೇಣುರ್ಮಹಾವೀರ್ಯಾ ಸ್ವಾತಿ ಸೂರ್ಯಾ ಸುವರ್ಚಲಾ | ಸುರೇಣುರ್ದ್ಯುಮಯೀ ತ್ವಾಷ್ಟ್ರೀ ಪ್ರಿಯೇಚೇತೇ ವಿವಸ್ವತಃ || ೦೧.೨೦||
ಸೂರ್ಯನಿಗೆ ಛಾಯಾ ಸಂಜ್ಞಾ ಎನ್ನುವ ಪತ್ನಿಯರ ಜೊತೆಗೆ ತ್ರಸರೇಣು ,ಮಹಾವೀರ್ಯಾ , ಸ್ವಾತಿ, ಸೂರ್ಯಾ , ಸುರೇಣು,ದ್ಯುಮಯೀ , ತ್ವಾಷ್ಟ್ರೀ ಪ್ರಿಯಾ ಮುಂತಾದ ಪತ್ನಿಯರೂ ಇದ್ದರು
ಹೀಗಾಗಿ ಹನುಂತನು ಆಜನ್ಮ ಬ್ರಹ್ಮಚಾರಿಯೇ ಆಗಿದ್ದನು.ಎಂಬುವದು ನಿಶ್ಚಯವಾಯಿತು. ಶಿವದ್ವೇಷಿಗಳು ಪಲ್ಲವರ ಕಾಲದ ಹಾಗೂ ಕಂಬರಾಮಾಯಣದ ಪ್ರತೀಕವಾದ ಒಂದೇ ಪೀಠದಲ್ಲಿರುವ ಗಣೇಶ,ಹನುಮಂತ ಹಾಗೂ ಪಾರ್ವತಿ ಮೂರ್ತಿಯ ಹಿಂದಿರುವ ಚರಿತ್ರೆಯ ನಾಶಾಕ್ಕಾಗಿಯೇ ಈ ಅಸಂಬದ್ಧವಾದ ಹನುಮಂತನ ಮದುವೆಯ ವಿಷಯವನ್ನು ಮುಗ್ಧರಲ್ಲಿ ಪ್ರಚಾರ ಮಾಡಿದ್ದಾರೆ ಎಂಬುವದನ್ನೂ ನಿರೂಪಿಸಿದಂತಾಯಿತು. ಈ ಕುಧರ್ಮಿಗಳ ಮೂಲವನ್ನೂ ಜಾಲಾಡುತ್ತೇನೆ ಸದ್ಯದಲ್ಲೆ.
ಹರಿ ಓಮ್ ತತ್ ಸತ್
ಸತ್ಯಪ್ರಕಾಶ.
ಮುಂದಿನ ಭಾಗ
ರುದ್ರಾಂಶ ಸಂಭೂತ ಆಜನ್ಮಬ್ರಹ್ಮಚಾರೀ ಹನುಮಂತ:- ಭಾಗ-೦೨
ವೇದಗಳಲ್ಲಿ ಅರ್ಥವಾದ ರೂಪದಲ್ಲಿ ಉಲ್ಲೇಖವಾಗಿರುವ ವಿಷಯಗಳು.
No comments:
Post a Comment
If you have any doubts. please let me know...