ಮೃದೂನಿ ಕುಸುಮಾದಪಿ
#ಶೀರ್ಷಿಕೆ_ಬದಲಿಸಬೇಡಿ
ಮಾತು ಎಲ್ಲವಕ್ಕೂ ಮುಖ್ಯ. ಸಾಮಾನ್ಯವಾಗಿ ಭಾವನೆಗಳ ಸಂವಹನ ನಡೆಯುವುದೇ ಮಾತುಗಳಲ್ಲಿ. ಅಂದರೆ ಮಾತು ಎನ್ನುವುದು ವ್ಯಕ್ತವಾಗಿರುವಂತಹದ್ದು. ಇಂತಹ ಮಾತು ಒಮ್ಮೆ ಆಡಿದರೆ ಮುಗಿಯಿತು. ಅದು ಒಳ್ಳೆಯ ಮಾತಾಗಿದ್ದರೆ ಮೈತ್ರಿ. ಕೆಟ್ಟದ್ದಾಗಿದ್ದರೆ ಶತ್ರುತ್ವ. ’ಮೃದೂನಿ ಕುಸುಮಾದಪಿ’ಯಾಗಿರುವುದೇ ಸೂಕ್ತ ಅನ್ನಿಸಿ ಬಿಡುತ್ತದೆ. ಸರಿ ಮಾತಿಗೆ ಮೂಲ ?? ಅದನ್ನು ವೇದಗಳು ಹಲವು ವಿಧಗಳಲ್ಲಿ ಹೇಳಿವೆ. ಇಲ್ಲಿ ಮಾತು ಎನ್ನುವುದು ವಾಕ್ ಎಂದೂ ಆಗುತ್ತದೆ.
ಹಿಂದೆ ಅಂಭೃಣ ಎನ್ನುವ ಋಷಿಯೊಬ್ಬನಿದ್ದ. ’ಅಂಭೃಣಮತಿಭಯಂಕರಂ’ ಎಂದು ಋಗ್ವೇದ ಒಂದನೇ ಮಂಡಲದ ೧೩೩ನೇ ಸೂಕ್ತದಲ್ಲಿ ಹೇಳಲಾಗಿದೆ. ಅಲ್ಲಿ ಅಂಭೃಣ ಎನ್ನುವುದು ಬೇರೆ ವಿಷಯಕ್ಕಾದರೂ. ಈ ಋಷಿಯೂ ಸಹ ಅಸಾಧಾರಣ ಸಾಧಕನಾಗಿರುವುದರಿಂದ ಅತಿಭಯಂಕರನೇ ಆಗಿದ್ದ. ಈತನಿಗೊಬ್ಬಳು ಮಗಳಿದ್ದಳು. ’ಬ್ರಹ್ಮವಿದುಷೀ ವಾಙ ನಾಮ್ನೀ’ ಬ್ರಹ್ಮ ವಿದುಷೀ ಎನ್ನುವುದರಿಂದ ಬ್ರಹ್ಮ ಜ್ಞಾನ ತಿಳಿದವಳಾಗಿದ್ದಳು ಎನ್ನುವುದು ತಿಳಿಯುವುದಲ್ಲದೇ ಹೆಸರು ವಾಕ್ ಎಂದು ಹೇಳಲಾಗಿದ್ದು ಈಕೆ ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆದ ಮಹಾನ್ ವಿದುಷಿಯಾಗಿದ್ದಳು ಎಂದು ತಿಳಿಯಬಹುದು. ಆಕೆ ಅದೆಷ್ಟು ದೊಡ್ಡ ತಪಸ್ವಿಯಾಗಿದ್ದಳು ಅಂದರೆ ಬ್ರಹ್ಮದಲ್ಲಿಯೇ ತಾದಾತ್ಮ್ಯ ಹೊಂದಿ ಬ್ರಹ್ಮವನ್ನು ಉಪಾಸಿಸುತ್ತಾ ಮಂತ್ರದೃಷ್ಟಾರೆಯಾದವಳು. ಈಕೆ ಜಗತ್ತಿನ ಕಣಕಣವೂ ನಾನೇ ಎನ್ನುವ ಭಾವ ಹೊಂದಿ ತಾನೇ ಅನಂತ ಶಕ್ತಿ ಸಾಮರ್ಥ್ಯಗಳನ್ನು ಹೊಂದಿರುವುದರಿಂದ ಎಂಥಹ ಕೆಲಸವನ್ನಾದರೂ ಮಾಡಬಲ್ಲೆ ಎಂದು ಮಂತ್ರಗಳಲ್ಲಿ ಹೇಳಿಕೊಂಡಿದ್ದಾಳೆ. ಈ ಸೂಕ್ತದ ಮಹತ್ವ ಎಂದರೆ ಅದೇ, ತನ್ನನ್ನೇ ತಾನು ಸ್ತುತಿಸಿಕೊಂಡದ್ದು.
ಅಹಂ ರುದ್ರೇಭೀರ್ವಸುಭಿಶ್ಚರಾಮ್ಯಹಮಾದಿತ್ಯೈರುತ ವಿಶ್ವೇ ದೇವೈಃ |
ಅಹಂ ಮಿತ್ರಾವರುಣೋಭಾಬಿಭರ್ಮಹಮಿಂದ್ರಾಗ್ನೀ ಅಹಮಶ್ವಿನೋಭಾ || ಎನ್ನುವ ಆರಂಭದ ಋಕ್ಕಿನಲ್ಲಿ ನಾನೇ ಏಕಾದಶ ರುದ್ರರು, ನಾನೇ ಅಷ್ಟವಸುಗಳು, ನಾನೇ ದ್ವಾದಶಾದಿತ್ಯರು, ನಾನೇ ವಿಶ್ವೇದೇವತೆಗಳಾಗಿದ್ದೇನೆ. ಇನ್ನು ಮಿತ್ರಾವರುಣರು ಸಹ ನಾನೇ, ಇಂದ್ರ ಅಗ್ನಿ ಮತ್ತು ಅಶ್ವಿನೀ ದೇವತೆಗಳೂ ಸಹ ನಾನೇ ಆಗಿದ್ದು ಸಚ್ಚಿದಾನಂದ ಸ್ವರೂಪಿ ನಾನು ಎನ್ನುತ್ತಾಳೆ. ನನ್ನನ್ನೇ ಅವಲಂಬಿಸಿಕೊಂಡು ತಮ್ಮ ಕಾರ್ಯವನ್ನು ದೇವತೆಗಳು ಮಾಡಿಕೊಳ್ಳಲು ಸಮರ್ಥರಾಗುತ್ತಾರೆ ಎನ್ನುತ್ತಾಳೆ. ’ಅಹಂ ಸೋಮಾಹನಸಂ’ ಎನ್ನುತ್ತಾ, ಶತ್ರುನಾಶಕನಾದ ಸೋಮನೂ ನಾನೇ, ಲತಾ ರೂಪದಲ್ಲಿದ್ದು ಯಾಗಗಳಿಗೆ ಕಲ್ಲಿನಿಂದ ಜಜ್ಜಿ ರಸ ಹಿಂಡುವ ಸೋಮವೂ ನಾನೇ. ತ್ವಷ್ಟೃ, ಪೂಷಾ ಮತ್ತು ಭಗ ಮುಂತಾದ ದೇವತೆಗಳೂ ನಾನೇ ಆಗಿದ್ದೇನೆ ಎನ್ನುತ್ತಾಳೆ.
’ಅಹಂ ರಾಷ್ಟ್ರೀ ಸಂಘಮನೀ ವಸೂನಾಂ ಚಿಕಿತುಷೀ’ ಎನ್ನುವ ಮುಂದಿನ ಋಕ್ಕು ನನಗೆ ಹೊಸದಿಕ್ಕನ್ನೇ ತೋರಿಸಿತು. ಅಹಂ ರಾಷ್ಟ್ರೀ ಎಂದಿರುವುದನ್ನು ಸಾಯಣಾಚಾರ್ಯರು ಈಶ್ವರನಾಮ ಎನ್ನುತ್ತಾರೆ. ಅಂದರೆ ’ಸರ್ವಸ್ಯ ಜಗತ ಈಶ್ವರೀ’ ಎನ್ನುತ್ತಾರೆ. ಅಂದರೆ ರಾಷ್ಟ್ರ ಎನ್ನುವ ಪದಕ್ಕೂ ದೇಶ ಎನ್ನುವ ಪದಕ್ಕೂ ವ್ಯತ್ಯಾಸ ಕಾಣಿಸುತ್ತದೆ. ದೇಶ ಎನ್ನುವುದು ಸೀಮಿತ ಪ್ರದೇಶದ ವ್ಯಾಪ್ತಿಗೊಳಪಟ್ಟರೆ ರಾಷ್ಟ್ರ ಎನ್ನುವುದು ಇಡೀ ಜಗತ್ತನ್ನೇ ನಿರ್ದೇಶಿಸುತ್ತದೆ. ನಮ್ಮಲ್ಲಿ ದೇಶ ಭಕ್ತಿ ಮತ್ತು ದೇಶ ನಿಷ್ಠೆ ಇದ್ದಂತೆ ರಾಷ್ಟ್ರ ಭಕ್ತಿ ಜಾಗ್ರತವಾಗಿರಬೇಕು. ಆಗ ನಾವು ವಿಶಾಲ ಹೃದಯಿಗಳಾಗಬಹುದು. ಇಡೀ ಭೂಮಂಡಲದಲ್ಲಿಯ ಒಂದು ಪ್ರದೇಶದಲ್ಲಿ ನಾವು ಬದುಕುತ್ತಿದ್ದೇವೆ ಆದರೆ ಇಡೀ ಭೂಮಂಡಲದ ಸಮಸ್ತವೂ ನಮ್ಮದೇ ಎನ್ನುವ ಭಾವ ನಮ್ಮನ್ನು ಆವರಿಸುತ್ತದೆ. ಚಿಕಿತುಷೀ ಎಂದು ಋಕ್ಕಿನಲ್ಲಿ ಹೇಳುತ್ತಾ ಪರಬ್ರಹ್ಮವೇ ತಾನಾಗಿರುವುದರಿಂದ ನನ್ನಲಿಯೇ ಐಶ್ವರ್ಯಗಳು ಬಂದು ಸೇರುತ್ತವೆ. ಸಮಸ್ತ ಕಾರ್ಯಗಳಿಗೂ ನಾನೇ ಮೂಲಕಾರಣಳು ಎನ್ನುತ್ತಾಳೆ. ನೋಡುವುದು, ಭಕ್ಷಿಸುವುದು, ಮಾತನಾಡುವುದು ಹೀಗೇ ಪ್ರತಿಯೊಂದು ವ್ಯವಹಾರಗಳೂ ನನ್ನಿಂದಲೇ ಮಾಡಲ್ಪಡುವುದರಿಂದ ನನ್ನನ್ನು ಉಪೇಕ್ಷಿಸಿದರೆ ನಾಶ ಹೊಂದುತ್ತಾರೆ ಎನ್ನುವುದು ಮುಂದಿನ ಋಕ್ಕಿನಲ್ಲಿ. ’ಅಹಮೇವ ಸ್ವಯಮಿದಂ ವದಾಮಿ’ ಎನ್ನುತ್ತಾ ಈ ಜಗತ್ತಿನ ಪ್ರತಿಯೊಂದರ ಅಂಶ ನಾನಾಗಿದ್ದು ಸಮಸ್ತ ಜಗತ್ತೇ ನಾನು ಎನ್ನುವುದು ಈ ಋಕ್ಕಿನಲ್ಲಿ. ಯಾವ ವ್ಯಕ್ತಿ ನನ್ನನ್ನು ಇಚ್ಚಿಸುವನೋ ಅವನನ್ನು ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠನನ್ನಾಗಿ ಮಾಡುವೆನು ಎನ್ನುತ್ತಾಳೆ.
’ಅಹಂ ರುದ್ರಾಯ ಧನುರಾ ತನೋಮಿ’ ಎನ್ನುವ ಮುಂದಿನ ಋಕ್ಕಿನಲ್ಲಿ. ತ್ರಿಪುರ ಸಂಹಾರದ ವರ್ಣನೆ ಬರುತ್ತದೆ. ತ್ರಿಪುರ ಸಂಹಾರದ ಕಾಲದಲ್ಲಿ ರುದ್ರನ ಧನುಸನ್ನು ಬಗ್ಗಿಸಿ ಕೊಟ್ಟವಳು ತಾನೇ ಎಂದು ಹೇಳಿಕೊಳ್ಳುತ್ತಾಳೆ.
ಅಹಮೇವ ವಾತಾ ಇವ ಪ್ರ ವಾಮ್ಯಾರಭಮಾಣಾ ಭುವನಾನಿ ವಿಶ್ವಾ |
ಪರೋ ದಿವಾ ಪರ ಏನಾ ಪೃಥಿವ್ಯೈತಾವತೀ ಮಹಿನಾ ಸಂ ಬಭೂವ || ಯಾವುದೇ ಪ್ರೇರಣೆಗೊಳಗಾಗದೆ ವಾಯುವು ಸ್ವಯಂ ಹೇಗೆ ಬೀಸುವುದೋ ಅದೇ ರೀತಿ ನಾನು ಸಹ ಸ್ವಯಂ ಆಗಿ ಸಮಸ್ತ ಜಗತ್ತಿನ ಪ್ರಾಣಿಗಳನ್ನು ಉತ್ಪತ್ತಿ ಮಾಡುತ್ತೇನೆ. ನನಗೆ ಯಾವ ನಿರ್ಬಂಧವೂ ಇಲ್ಲ ಪ್ರೇರಣೆಯೂ ಇಲ್ಲ. ನಾನು ಸ್ಥಿರವಾಗಿರುವವಳು. ನಾನು ಇಲ್ಲದ ಯಾವ ಪ್ರದೇಶವೂ ಇಲ್ಲ ಹಾಗಿದ್ದೇನೆ ಎನ್ನುತ್ತಾಳೆ.
ಇಡೀ ಸೂಕ್ತದ ಚಿಕ್ಕ ಪರಿಚಯ ಅಷ್ಟೇ ಇದು. ನನಗೆ ಇದರಲ್ಲಿ ಅತ್ಯಂತ ಹೆಚ್ಚು ಆಪ್ತವಾಗಿರುವುದು ರಾಷ್ಟ್ರೀ ಎನ್ನುವ ಪದ. ನಾವೆಲ್ಲರೂ ದೇಶೀ ಜೊತೆ ರಾಷ್ಟ್ರೀ ಆಗಲು ಪ್ರಯತ್ನಿಸೋಣ. ಎಲ್ಲದರಲ್ಲೂ ರಾಷ್ಟ್ರೀಯ ಭಾವನೆ ಕಾಣಿಸಲಿ ಎಲ್ಲರೂ ಒಂದೇ ಎನ್ನುವ ಭಾವನೆ ಬೆಳೆದರೆ ಅಷ್ಟೇ ಸಾಕು ಜೀವನ ಸಾರ್ಥಕ್ಯಕ್ಕೆ.
#ನುಡಿದರೆ_ಮುತ್ತಿನ_ಹಾರದಂತಿರಬೇಕು
ಸದ್ಯೋಜಾತರು
No comments:
Post a Comment
If you have any doubts. please let me know...