ಋತುಪರ್ಣ ಎನ್ನುವ ಹೆಸರನ್ನು ಕೇಳದವರೇ ಕಡಿಮೆ. ಈತ ಕೇವಲ ರಾಜನಲ್ಲ ರಾಜರ್ಷಿಯಾಗಿದ್ದ ಎನ್ನುವುದು ಈತನ ಹೆಸರನ್ನು ಉಲ್ಲೇಖಿಸುವ ಬೌಧಾಯನ ಶ್ರೌತಸೂತ್ರ ಮತ್ತು ಆಪಸ್ತಂಬ ಶ್ರೌತಸೂತ್ರದಿಂದ ತಿಳಿದು ಬರುತ್ತದೆ. ಮಹಾಭಾರತ, ಹರಿವಂಶ ಮತ್ತು ಭಾಗವತದಲ್ಲಿ ಈತನ ಕುರಿತಾಗಿ ಬಹಳ ರೋಚಕವಾದ ಕಥೆ ದೊರಕುತ್ತದೆ. ಅಶ್ವಹೃದಯವಿದ್ಯೆ ಮತ್ತು ಅಕ್ಷಹೃದಯವಿದ್ಯೆಯನ್ನು ಬಲ್ಲವನಾಗಿದ್ದನೆಂದು ಹೇಳಲಾಗುತ್ತದೆ. ನಾನು ಈತನ ಕುರಿತಾಗಿ ಹೇಳುವುದಿಲ್ಲ ಈತನ ಮಗನಾದ ಭಂಗಾಸ್ವನನ ಕುರಿತಾಗಿ ಹೇಳುತ್ತೇನೆ. ಭೀಷ್ಮರಲ್ಲಿ ಯುಧಿಷ್ಠಿರನ ಸಂವಾದ ಇದು.
ಹಿಂದೆ ಭಂಗಾಸ್ವನ ಎಂಬ ಹೆಸರಿನ ರಾಜರ್ಷಿಯಿದ್ದನು. ಆತನಿಗೆ ಮಕ್ಕಳಿರಲಿಲ್ಲ. ಮಕ್ಕಳನ್ನು ಪಡೆಯಲು ಯಜ್ಞವನ್ನು ಮಾಡುತ್ತಾನೆ. ಭಂಗಾಸ್ವನನು ಇಂದ್ರನಿಗೆ ಪ್ರಾಧಾನ್ಯವಿಲ್ಲದ ಮತ್ತು ಇಂದ್ರ ದ್ವೇಷಿಸುತ್ತಿದ್ದ ಅಗ್ನಿಷ್ಟುತವೆಂಬ ಯಾಗವನ್ನು ಮಾಡುತ್ತಾನೆ. ಆ ಯಾಗ ಮನುಷ್ಯರಿಗೆ ಪ್ರಾಯಶ್ಚಿತ್ತವೂ ಹೌದು, ಪುತ್ರಾರ್ಥವೂ ಹೌದು. ಅಗ್ನಿಷ್ಟುತವೆಂಬ ಯಾಗವನ್ನು ಭಂಗಾಸ್ವನನು ಮಾಡಿರುವುದನ್ನು ಇಂದ್ರ ತಿಳಿದು ಭಂಗಾಸ್ವನನಲ್ಲಿ ನ್ಯೂನತೆಯನ್ನು ಹುಡುಕುತ್ತಾನೆ. ಆದರೆ ಭಂಗಾಸ್ವನನಲ್ಲಿ ನ್ಯೂನತೆಯನ್ನು ಕಾಣಲು ಸಾಧ್ಯವಾಗುವುದಿಲ್ಲ. ಸ್ವಲ್ಪ ಕಾಲದ ನಂತರ ರಾಜನು ಬೇಟೆಗಾಗಿ ಹೊರಡುತ್ತಾನೆ. ತನಗಾಗದ ಯಜ್ಞ ಮಾಡಿದ ರಾಜನಿಗೆ ಪ್ರತೀಕಾರಮಾಡಲು ಅದೇ ಸರಿಯಾದ ಸಮಯವೆಂದು ಭಾವಿಸಿದ ಇಂದ್ರನು ಭಂಗಾಸ್ವನನ ಬುದ್ಧಿ ಭ್ರಮಣೆ ಮಾಡುತ್ತಾನೆ. ಇಂದ್ರನಿಂದ ಬುದ್ಧಿಭ್ರಮಣೆಗೆ ಒಳಗಾದ ರಾಜನು ಕುದುರೆಯ ಮೇಲೆ ಕುಳಿತು ಬೆಂಗಾವಲಿನವರೂ ಇಲ್ಲದೇ ಏಕಾಕಿಯಾಗಿ ಇಲ್ಲಿಂದಲ್ಲಿಗೂ ಅಲ್ಲಿಂದಿಲ್ಲಿಗೂ ಸುತ್ತಾಡುತ್ತಾನೆ. ಯಾವ ದಿಕ್ಕಿಗೆ ಹೋಗುತ್ತಿರುವೆನೆಂಬುದೇ ಅವನಿಗೆ ತಿಳಿಯುವುದಿಲ್ಲ್ಲ. ಅವನು ಹಸಿವು ಬಾಯಾರಿಕೆ ಮತ್ತು ಸುತ್ತಾಟದ ಶ್ರಮದಿಂದ ಬಳಲುತ್ತಾನೆ. ಹೀಗೆ ಸುತ್ತಾಡುತ್ತಿದ್ದಾಗ ರಾಜನು ಒಂದು ಸರೋವರವನ್ನು ನೋಡುತ್ತಾನೆ. ಕೂಡಲೇ ಕುದುರೆಯ ಮೈತೊಳೆದು ನೀರುಕುಡಿಸಿ ಒಂದು ಮರಕ್ಕೆ ಕಟ್ಟುತ್ತಾನೆ. ತಾನೂ ಕೂಡ ಆ ಸರೋವರದಲ್ಲಿ ಸ್ನಾನಮಾಡುತ್ತಾನೆ. ಕೂಡಲೇ ಅವನು ಹೆಂಗಸಾಗುತ್ತಾನೆ. ಇದನ್ನು ಗಮನಿಸಿದ ಭಂಗಾಸ್ವನನು ನಾಚಿಕೊಳ್ಳುತ್ತಾನೆ.
ಅಗ್ನಿಷ್ಟುತಯಾಗದಿಂದ ನನಗೆ ನೂರು ಮಕ್ಕಳು ಹುಟ್ಟಿದ್ದಾರೆ. ನಾನು ಆ ಮಕ್ಕಳಿಗೆ ಏನು ಹೇಳಲಿ? ನನ್ನ ಮಡದಿಯರಲ್ಲಿ ಹೇಗೆ ವ್ಯವಹರಿಸಲಿ? ಈಗ ನನಗೆ ಪುರುಷತ್ವವು ನಷ್ಟವಾಗಿ ಹೋಗಿದೆ. ನನಗೆ ಸ್ತ್ರೀತ್ವವು ಪ್ರಾಪ್ತವಾಗಿಬಿಟ್ಟಿದೆ. ತುಂಬಾ ಪ್ರಯಾಸದಿಂದ ಕುದುರೆಯನ್ನೇರಿ ರಾಜ್ಯಕ್ಕೆ ಹಿಂದಿರುಗುತ್ತಾನೆ. ಭಂಗಾಸ್ವನರಾಜನ ಮಕ್ಕಳು, ಪತ್ನಿಯರು, ಪ್ರಜೆಗಳೆಲ್ಲರೂ ಸ್ತ್ರೀರೂಪನಾಗಿದ್ದ ತಮ್ಮ ರಾಜನನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ. ಪ್ರಜೆಗಳಿಗೆ ನಡೆದ ಸಮಾಚಾರವನ್ನು ತಿಳಿಸುತ್ತಾನೆ. ಸ್ತ್ರೀರೂಪವನ್ನು ಪಡೆದಿದ್ದ ರಾಜನು ಸಮ್ಪ್ರೀತ್ಯಾ ಭುಜ್ಯತಾಂ ರಾಜ್ಯಂ ವನಂ ಯಾಸ್ಯಾಮಿ ಪುತ್ರಕಾಃ ನೀವು ಪ್ರೀತಿ ವಿಶ್ವಾಸಗಳಿಂದ ಅನ್ಯೋನ್ಯರಾಗಿ ರಾಜ್ಯವನ್ನು ಆಳಿ. ನಾನು ಅರಣ್ಯಕ್ಕೆ ಹೋಗುತ್ತೇನೆ.” ಎಂದು ಹೇಳುತ್ತಾನೆ. ಭಂಗಾಸ್ವನರಾಜ ಅರಣ್ಯಕ್ಕೆ ಹೋಗುತ್ತಾನೆ. ಸ್ತ್ರೀ ರೂಪದ ಭಂಗಾಸ್ವನ ತಪಸ್ವಿಯೊಬ್ಬನ ಆಶ್ರಮಕ್ಕೆ ಹೋಗಿ ಅಲ್ಲಿಯೇ ಇರುತ್ತಾಳೆ. ತಪಸಿಯ ಸಮಾಗಮದಿಂದಾಗಿ ಅವಳಿಗೆ ನೂರು ಮಕ್ಕಳು ಹುಟ್ಟುತ್ತಾರೆ. ಆ ನೂರು ಮಕ್ಕಳನ್ನೂ ರಾಜ್ಯಕ್ಕೆ ಕರೆತರುತ್ತಾನೆ. ತಾನು ಪುರುಷನಾಗಿದ್ದಾಗ ಪಡೆದಿದ್ದ ನೂರು ಮಕ್ಕಳನ್ನೂ ಕರೆದು ನಾನು ಪುರುಷನಾಗಿದ್ದಾಗ ನನಗೆ ಹುಟ್ಟಿದ ಮಕ್ಕಳು ನೀವು. ಸ್ತ್ರೀತ್ವದಲ್ಲಿಯೂ ನನಗೆ ಈ ನೂರು ಮಕ್ಕಳು ಹುಟ್ಟಿದ್ದಾರೆ. ನೀವು ಇನ್ನೂರು ಮಂದಿಯೂ ಸಹೋದರರಂತೆ ಇರುತ್ತಾ ಒಗ್ಗಟ್ಟಿನಿಂದ ಈ ರಾಜ್ಯಾಡಳಿತ ಮಾಡಿ ಎನ್ನುತ್ತಾನೆ. ಅವಳು ಹೇಳಿದಂತೆಯೇ ಇನ್ನೂರು ರಾಜ ಪುತ್ರರೂ ಸಹೋದರರಂತೇ ರಾಜ್ಯಸುಖವನ್ನು ಅನುಭವಿಸುತ್ತಿದ್ದರು. ಈಗ ಸಹೋದರರ ಒಗ್ಗಟ್ಟನ್ನು ಕಂಡು ಇಂದ್ರ ಕೋಪಗೊಳ್ಳುತ್ತಾನೆ. ತನ್ನ ಸೇಡು ಅವನಿಗೆ ವರವಾಯಿತು ಎಂದು ತಿಳಿಯುತ್ತದೆ. ಇಂದ್ರನು, ಬ್ರಾಹ್ಮಣವೇಷವನ್ನು ಧರಿಸಿ ಭಂಗಾಸ್ವನನ ರಾಜಧಾನಿಗೆ ಹೋಗಿ ಒಗ್ಗಟ್ಟಿನಿಂದಿದ್ದ ರಾಜಪುತ್ರರಲ್ಲಿ ಭೇದಭಾವವುಂಟಾಗುವಂತೆ ಮಾಡುತ್ತಾನೆ. ಅವರವರೊಳಗೆ ಯುದ್ಧವೇ ನಡೆದು ಎಲ್ಲರೂ ಹತರಾಗುತ್ತಾರೆ. ಅರಣ್ಯದಲ್ಲಿ ತಪಸ್ವಿಯ ಜೊತೆಯಲ್ಲಿದ್ದ ಭಂಗಾಸ್ವನಳು/ನು ಅಳತೊಡಗುತ್ತಾಳೆ. ಬ್ರಾಹ್ಮಣವೇಷವನ್ನು ಧರಿಸಿದ್ದ ಇಂದ್ರನು ಭಂಗಾಸ್ವನಳ ಬಳಿಗೆ ಹೋಗಿ ಅಳುವುದು ಯಾಕೆ ಎಂದು ಅವಳನ್ನು ಕೇಳುತ್ತಾನೆ. ನನ್ನ ಇನ್ನೂರು ಮಂದಿ ಮಕ್ಕಳೂ ಸತ್ತರು. ನಾನು ಹಿಂದೆ ರಾಜನಾಗಿದ್ದೆನು. ಆಗ ನನಗೆ ನನ್ನಂತೆಯೇ ಇದ್ದ ನೂರು ಮಕ್ಕಳು ಹುಟ್ಟಿದರು. ಅಕಸ್ಮಾತ್ತಾಗಿ ನನ್ನಲ್ಲಿ ಸ್ತ್ರೀತ್ವವುಂಟಾಯಿತು. ನನ್ನ ಮಕ್ಕಳಿಗೆ ರಾಜ್ಯ ಒಪ್ಪಿಸಿದೆ. ಆದರೆ ಅನ್ಯೋನ್ಯರಾಗಿದ್ದವರು ಈಗ ಬಡಿದಾಡಿಕೊಂಡು ಸತ್ತರು ಎನ್ನುತ್ತಾಳೆ. ಈ ಹಿಂದೆ ನೀನು ಅಗ್ನಿಷ್ಟುತವೆಂಬ ಯಜ್ಞವನ್ನು ಮಾಡಿದೆ. ಅದು ನನಗೆ ವಿರುದ್ಧವಾದ ಯಾಗ. ನಾನೇ ಇಂದ್ರ ನಿನಗೆ ಈ ದುರವಸ್ಥೆ ಯುಂಟಾಗುವಂತೆ ಮಾಡಿದ್ದೇನೆ ಎನ್ನುತ್ತಾನೆ. ಇಂದ್ರನಲ್ಲಿ ಪ್ರಸನ್ನನಾಗು ಎಂದು ಕೇಳಿಕೊಳ್ಳುತ್ತಾನೆ. ನಿನ್ನನ್ನು ವಿರೋಧಿಸಬೇಕೆಂದಲ್ಲ ಪುತ್ರಾಪೇಕ್ಷೆಯಿಂದ ಯಾಗ ಮಾಡಿದೆ ಎಂದು ಹೇಳಿ ಕ್ಷಮಿಸಿಬಿಡು ಎನ್ನುತ್ತಾನೆ. ಇಂದ್ರನು ವರವನ್ನು ಕೊಡುತ್ತಾ ನಿನ್ನ ಯಾವ ಮಕ್ಕಳು ಬದುಕಬೇಕು ಎನ್ನುತ್ತಾನೆ. ಸ್ತ್ರೀರೂಪವನ್ನು ಹೊಂದಿದನಂತರ ತಪಸ್ವಿಯಿಂದ ನಿನ್ನಲ್ಲಿ ಹುಟ್ಟಿದ ನೂರು ಮಕ್ಕಳು ಬದುಕಬೇಕೇ ಅಥವಾ ನೀನು ಪುರುಷನಾಗಿದ್ದಾಗ ಪತ್ನಿಯರಲ್ಲಿ ನೀನು ಪಡೆದುಕೊಂಡ ನೂರು ಮಕ್ಕಳು ಬದುಕಬೇಕೆ? ಎನ್ನುತ್ತಾನೆ. ಸ್ತ್ರೀಭೂತಸ್ಯ ಹಿ ಯೇ ಪುತ್ರಾಸ್ತೇ ಮೇ ಜೀವನ್ತು ವಾಸವ ನಾನು ಈ ಸ್ತ್ರೀರೂಪವನ್ನು ಧರಿಸಿದನಂತರ ನನ್ನಲ್ಲಿ ಯಾವ ನೂರು ಮಕ್ಕಳು ಹುಟ್ಟಿದರೋ ಅವರೇ ಬದುಕಲಿ ಎನ್ನುತ್ತಾನೆ. ನೀನು ಪುರುಷನಾಗಿದ್ದಾಗ ನಿನ್ನಿಂದಲೇ ಹುಟ್ಟಿದ ಮಕ್ಕಳು ಯಾಕೆ ಬೇಡ ? ಹೆಂಗಸಾದನಂತರ ನಿನ್ನಲ್ಲಿ ಹುಟ್ಟಿದ ಮಕ್ಕಳ ವಿಷಯದಲ್ಲಿ ನಿನಗೆ ಅಧಿಕವಾದ ಪ್ರೀತಿಯು ಹೇಗುಂಟಾಯಿತು? ಅದಕ್ಕೆ ಭಂಗಾಸ್ವನ ಹೇಳುತ್ತಾಳೆ, ಸ್ತ್ರೀಯರಿಗೆ ಸ್ವಾಭಾವಿಕವಾಗಿಯೇ ಮಕ್ಕಳ ಮೇಲೆ ಅಧಿಕವಾದ ಪ್ರೀತಿಯಿರುತ್ತದೆ. ಪುರುಷರಿಗೆ ಅಷ್ಟು ಅಗಾಧವಾದ ಪ್ರೀತಿಯಿರುವುದಿಲ್ಲ. ನಾನೀಗ ಸ್ತ್ರೀಯಾಗಿರುವುದರಿಂದ ಸಹಜವಾಗಿಯೇ ನನ್ನಲ್ಲಿ ಹುಟ್ಟಿದ ಮಕ್ಕಳನ್ನು ಬಹಳವಾಗಿ ಪ್ರೀತಿಸುತ್ತೇನೆ. ಆದುದರಿಂದ ಸ್ತ್ರೀರೂಪವನ್ನು ಹೊಂದಿದನಂತರ ನನ್ನಲ್ಲಿ ಹುಟ್ಟಿದ ಮಕ್ಕಳೇ ಬದುಕಲಿ ಎಂದು ಪ್ರಾರ್ಥಿಸುತ್ತಾಳೆ. ಇಂದ್ರ ಸಂತುಷ್ಟನಾಗಿ ನಿನ್ನ ಎಲ್ಲ ಮಕ್ಕಳೂ ಬದುಕಲಿ. ನೀನು ನನ್ನಿಂದ ನಿನ್ನ ಇಷ್ಟವಿರುವ ಇನ್ನೂ ಒಂದು ವರವನ್ನು ಕೇಳು ಎಂದು ಇಂದ್ರ ಹೇಳುತ್ತಾನೆ. ನೀನು ಪುನಃ ಪುರುಷನಾಗಲು ಇಚ್ಛಿಸುವೆಯಾ? ಹೆಂಗಸಾಗಿಯೇ ಇರುವೆಯಾ? ನೀನು ಯಾವುದನ್ನು ಅಪೇಕ್ಷಿಸುವೆಯೆಂಬುದನ್ನು ಹೇಳು. ನಾನು ಹೆಂಗಸಾಗಿಯೇ ಇರಬೇಕೆನ್ನುವ ವರವನ್ನು ನಿನ್ನಿಂದ ಕೇಳಿಕೊಳ್ಳುತ್ತೇನೆ. ನಾನು ಪುನಃ ಪುರುಷತ್ವವನ್ನು ಇಚ್ಛಿಸುವುದಿಲ್ಲ ಎನ್ನುತ್ತಾಳೆ. ಸ್ತ್ರಿಯಾಃ ಪುರುಷಸಂಯೋಗೇ ಪ್ರೀತಿರಭ್ಯಧಿಕಾ ಸದಾ | ಏತಸ್ಮಾತ್ಕಾರಣಾಚ್ಛಕ್ರ ಸ್ತ್ರೀತ್ವಮೇವ ವೃಣೋಮ್ಯಹಮ್ ಸ್ತ್ರೀಯೊಡನೆ ಪುರುಷನ ಸಮಾಗಮವಾಗುವಾಗ ಪುರುಷನಿಗಿಂತೂ ಸ್ತ್ರೀಗೇ ಅಧಿಕವಾಗಿ ಸುಖ ಸಿಗುತ್ತ್ತದೆ. ಈ ಕಾರಣದಿಂದಲೇ ನಾನು ಹೆಂಗಸಾಗಿಯೇ ಇರಬೇಕೆಂಬ ವರವನ್ನು ನಿನ್ನಿಂದ ಅಪೇಕ್ಷಿಸುತ್ತೇನೆ ಎನ್ನುತ್ತಾನೆ.
ರಮಿತಾಭ್ಯಧಿಕಂ ಸ್ತ್ರೀತ್ವೇ ಸತ್ಯಂ ವೈ ದೇವಸತ್ತಮ |
ಸ್ತ್ರೀಭಾವೇನ ಹಿ ತುಷ್ಯಾಮಿ ಗಮ್ಯತಾಂ ತ್ರಿದಶಾಧಿಪ || ನಾನು ಸತ್ಯವಾಗಿ ಹೇಳುತ್ತೇನೆ. ಸ್ತ್ರೀತ್ವದಲ್ಲಿಯೇ ನಾನು ಹೆಚ್ಚಿನ ರತಿಸುಖವನ್ನು ಅನುಭವಿಸಿದ್ದೇನೆ. ಆದುದರಿಂದ ನಾನು ಸ್ತ್ರೀಭಾವದಿಂದಲೇ ಸಂತುಷ್ಟಳಾಗಿದ್ದೇನೆ ಎನ್ನುತ್ತಾನೆ ಇಂದ್ರ ಆಕೆಯ ವರವನ್ನು ಈಡೇರಿಸುತ್ತಾನೆ. ಲಿಂಗ ಪರಿವರ್ತನೆಯ ನಂತರವೂ ಮಕ್ಕಳನ್ನು ಪಡದ ಉಲ್ಲೇಖ ಒಂದಾದರೆ, ಇಂದ್ರಿಯ ಸುಖದ ಅನುಭವ ಗಂಡಿಗಿಂತ ಹೆಣ್ಣಿಗೆ ಅಧಿಕ ಎನ್ನುವ ಅನುಭವದ ನುಡಿ ಸಿಗುತ್ತದೆ.
#ಗಂಡಾಗಿ_ಹೆಣ್ಣಾದ
ಮೂಲ ಶ್ರೀ ಸದ್ಯೋಜಾತರು..
No comments:
Post a Comment
If you have any doubts. please let me know...