May 10, 2021

ಆ ಪ್ಯಾಯಸ್ವ : ಜಗತ್ತಿನ ಒಳಿತೆಲ್ಲವೂ ನನ್ನೆಡೆಗೆ



ಜಗತ್ತಿನ ಬೇರೆ ಬೇರೆ ದಿಕ್ಕುಗಳಿಂದ ಒದಗಿ ಬರುವ ಶಕ್ತಿಗಳು ನನ್ನಲ್ಲಿ ಬಂದು ಸೆರಿಕೊಳ್ಳಲಿ, ಸೋಮದೇವನೆ ನಿನ್ನ ಶಕ್ತಿಯು ನನಗೆ ಅತ್ಯವಶ್ಯವಾದುದು. ನೀನು ಓಷಧಿಗಳ, ವಸ್ಪತಿಗಳ ರಾಜ ಆದುದರಿಂದ ಎಲ್ಲ ಶಕ್ತಿಯನ್ನು ನನಗೆ ಕೊಡು ಎನ್ನುವುದು ರಾಹೂಗಣನ ಮಗನಾದ ಗೋತಮ ಸೋಮನನ್ನು ಕುರಿತು ಸ್ತುತಿಸುವುದು. ನಮ್ಮ ಆರೋಗ್ಯ ಮತ್ತು ನಮ್ಮ ಜೀವವನ್ನು ಕಾಪಾಡಲು ನೀನು ವರ್ಧಿಸುತ್ತಿರು. ನಿನ್ನ ಶಕ್ತಿ ಒದಗಿ ಬರಲಿ ಎನ್ನುವ ಋಕ್ಕು ಸಿಗುವುದು ಋಗ್ವೇದದ ೧ನೇ ಮಂಡಲದ ೯೧ನೇ ಸೂಕ್ತದಲ್ಲಿ. ಅದನ್ನೇ 
ಆ ಪ್ಯಾಯಸ್ವ ಸಮೇತು ತೇ ವಿಶ್ವತಃ ಸೋಮ ವೃಷ್ಣ್ಯಂ |
ಭವಾ ವಾಜಸ್ಯ ಸಂಗಥೇ || ಸಾಮಾನ್ಯವಾಗಿ ಸೋಮದ ಬಳ್ಳಿಗಳನ್ನು ಜಜ್ಜುವ ಕಲ್ಲುಗಳನ್ನು ಗ್ರಾವ ಎಂದು ಕರೆಯುತ್ತಾರೆ. ಅಂತಹ ಕಲ್ಲುಗಳನ್ನು ಸ್ತೋತ್ರಮಾಡುವ ಸಮಯದಲ್ಲಿ ಈ ಆ ಪ್ಯಾಯಸ್ವ ಸಮೇತು ತೇ ಎನ್ನಲಾಗಿದೆ. ಅಂದರೆ ಎಲ್ಲಾ ವಿಶ್ವತಃ ಎನ್ನುತ್ತಾ ಎಲ್ಲಾ ಕಡೆಯ ಶಕ್ತಿಗಳು ಬಂದು ಸೇರಲಿ ಎನ್ನುವ ಆಶಯ. ಸಮೃದ್ಧವಾಗಿ ಉಕ್ಕಿ ಬರುವ ಬಲವನ್ನು ಅಥವಾ ವೀರ್ಯವನ್ನು ವೃಷ್ಣ್ಯಂ ಎಂದು ಹೇಳಲಾಗಿದೆ. ನಮ್ಮ ಆಹಾರಗಳಲ್ಲಿಯೂ ಸಮೃದ್ಧವಾದ ಬಲವನ್ನು ತುಂಬು ಎನ್ನುವುದನ್ನೇ ವಾಜಸ್ಯ ಸಂಗಥೇ ಎನ್ನಲಾಗಿದೆ. 

ಇದೇ ಋಕ್ಕು ಋಗ್ವೇದ ೯ನೇ ಮಂಡಲದ ೩೧ನೇ ಸೂಕ್ತವಾಗಿ ಪವಮಾನ ಸೋಮನನ್ನು ಸ್ತುತಿಸುತ್ತ ಗೋತಮರು ದೃಷ್ಟಾರರಾಗಿರುವುದು ಸಿಗುತ್ತದೆ. ಇಲ್ಲಿ ಈ ಮಂತ್ರಕ್ಕೆ ಭಾಷ್ಯಕಾರರು ಸ್ವಲ್ಪ ಬೇರೆ ರೀತಿಯಲ್ಲಿ ಹೇಳಿದ್ದಾರೆ. ಹಿತಕರವಾದ ಗಾಳಿಯಿಂದ ಮತ್ತು ಸಮೃದ್ಧವಾಗಿ ತುಂಬಿ ಹರಿಯುವ ನದಿಗಳಿಂದ ಸೋಮದೇವನೇ ನೀನು ತೃಪ್ತನಾಗಿ ಅಭಿವೃದ್ಧಿಯನ್ನು ಹೊಂದು ಎಂದು ಹೇ ಸೋಮ ತ್ವಂ ವಾಯುಭಿರದ್ಭಿಶ್ಚಾ ಪ್ಯಾಯಸ್ವ ಪ್ರವೃದ್ಧೋ ಭವ ಎಂದಿದ್ದಾರೆ. ಎಲ್ಲರ ಅಭಿಷ್ಟಗಳನ್ನು ನೆರವೇರಿಸುವ ಶಕ್ತಿಯು ನಿನ್ನಲ್ಲಿ ತುಂಬಿಕೊಳ್ಳಲಿ. ನಮಗೆ ನಮ್ಮ ಆಹಾರಗಳಿಗೆ ಕೊರತೆಯಾಗದಿರಲಿ ಎಂದು ಕೇಳಿಕೊಳ್ಳುತ್ತಾರೆ. ಅಂದರೆ ಈ ಜಗತ್ತಿನಲ್ಲಿನ ಎಲ್ಲ ಕಡೆಯ ಶಕ್ತಿಗಳೂ ನಮ್ಮಲ್ಲಿ ಸೇರಲಿ ಮತ್ತು ನಮ್ಮೆಲ್ಲರನ್ನೂ ಸಲಹುವ ಶಕ್ತಿ ಬರಲಿ ಎನ್ನುವ ಆಶಯ ಗೋತಮರದ್ದು. 

ಯಜುರ್ವೇದದ ತೈತ್ತಿರೀಯ ಸಂಹಿತೆಯ ೩:೨:೫:೩ ರಲ್ಲಿಯೂ ಇದೇ ಮಂತ್ರವಿದೆ. ಅಲ್ಲಿಯೂ ಸಹ ಹೇಳುವುದು ಜಗತ್ತಿನ ಎಲ್ಲೆಡೆಯಿಂದ ಬಂದಿರುವ ಶಕ್ತಿಯು ಬಲವನ್ನು ವರ್ಧಿಸಲಿ ಎನ್ನುವುದು. ನಮ್ಮಲ್ಲಿ ನಾವು ಜಗತ್ತಿನ ಎಲ್ಲೆಡೆಯ ಶಕ್ತಿಯನ್ನೋ ಇನ್ನೊಂದನ್ನು ಅಪೇಕ್ಷಿಸುತ್ತೇವೆ. ಜಗತ್ತಿನ ಯಾವುದನ್ನೂ ತಿರಸ್ಕರಿಸುವುದಕ್ಕಿಂತ ಅದರಲ್ಲಿನ ಒಳ್ಳೆಯತನವನ್ನು ಸ್ವೀಕರಿಸುವುದು ಆಪ್ಯಾಯವೇ. ನಮ್ಮಲ್ಲಿರುವ ದೋಷಗಳನ್ನು ಸರಿಪಡಿಸಿಕೊಳ್ಳುವ ಮನಸ್ಸೂ ಮುಖ್ಯ. ನಾವೇ ಎಲ್ಲಕ್ಕಿಂತ ಮೊದಲು ಎನ್ನುವ ಭಾವಕ್ಕಿಂತ ಎಲ್ಲರೊಂದಿಗೆ ನಾವು ಅಥವಾ ಎಲ್ಲರಿಗಾಗಿ ನಾವು ಎನ್ನುವುದು ಆಪ್ಯಾಯ ಸ್ವ ಸಮೇತು !

#ಎಲ್ಲರಿಗಾಗಿ_ನಾವು
ಮೂಲ: ಸದ್ಯೋಜಾತರು 

No comments:

Post a Comment

If you have any doubts. please let me know...