ವಿಶ್ವದ ಎಲ್ಲ ಕಡೆಯ ಒಳ್ಳೆಯ ಅಂಶಗಳೂ ನಮಗೆ ಸಿಗಲಿ ಅಥವಾ ನಮ್ಮನ್ನು ಸೇರಿಕೊಳ್ಳಲಿ ಎನ್ನುವುದು ಮೊನ್ನೆ ಬರೆದಿದ್ದೆ. ನಾವು ಯಾವುದನ್ನೂ ನಿರಾಕರಿಸಲಿಲ್ಲ. ನಮಗೆ ಯಾವುದು ಸ್ವೀಕಾರಾರ್ಹವೊ ಅವೆಲ್ಲ ನಮ್ಮನ್ನು ಸೇರಲಿ ಎನ್ನುವವರು ನಾವು. ಅದೇ ರೀತಿ ನಾವು ಎಲ್ಲರಿಗೂ ಒಳಿತನ್ನೆ ಬಯಸಿದವರು. ಜಗತ್ತಿನ ಅನೇಕ ದೇಶಗಳ ರಾಜರುಗಳು ಮತ್ತು ವಂಚಕರು ನಮ್ಮ ದೇಶದ ನಮ್ಮ ಭೂಭಾಗದ ಮೇಲೆ ದಾಳಿ ಮಾಡಿದರು. ಇನ್ನು ಅನೇಕರು ಲೂಟಿ ಮಾಡಿದರು. ಆದರೆ, ನಾವು ಬೇರೆ ದೇಶಗಳ ವಿರುದ್ಧವಾಗಿ ಅಲ್ಲಿನ ಸಂಪತ್ತಿನ ಲೂಟಿಗಾಗಿ ಎಂದೂ ದಾಳಿ ಮಾಡಿದ್ದಿಲ್ಲ. ನಾವು ಎಲ್ಲರಿಗೂ ಒಳಿತನ್ನೇ ಬಯಸಿದ್ದು ಪ್ರಾಚೀನ ಕಾಲದಿಂದ ಕಂಡು ಬರುತ್ತದೆ. ವೇದಾದಿಗಳಲ್ಲಿ ಶುಭವನ್ನು ಕೋರುವುದನ್ನೇ ಸ್ವಸ್ತಿ ಎಂದು ಕರೆಯಲಾಗಿದೆ. ಸಾಯಣಾಚಾರ್ಯರು ಅದನ್ನು ಸ್ವಸ್ತ್ಯವಿನಾಶಂ ಎಂದು ಹೇಳುತ್ತಾರೆ. ಅಂದರೆ ಯಾವುತ್ತೂ ನಾಶ ಹೊಂದದಿರುವ ಅಥವಾ ಅವಿನಾಶಿ ಮಂಗಲ ಅಥವಾ ಚಿರಂತನ ಎನ್ನುವುದು. ಸಮಾರಂಭಾನ್ನವಿಭೂಷೇತ ಹತಸ್ವಸ್ತಿರಕಿಂಚನಃ ಎಂದು ಈ ಶುಭದಾಯಕವಾದುದನ್ನು ಮಹಾಭಾರತದ ಶಾಂತಿಪರ್ವದಲ್ಲಿ ಹೇಳಲಾಗಿದೆ. ಅಲ್ಲಿ ಸ್ವಸ್ತಿಯನ್ನು ಹೇಳದೇ ಸಮಾರಂಭವು ಶೋಭಿಸುವುದಿಲ್ಲ ಎನ್ನಲಾಗಿದೆ. ನಮ್ಮ ದೇಶದಲ್ಲಿ ಸ್ವಸ್ತಿಗಿರುವ ಮಹತ್ವ ತಿಳಿಯುತ್ತದೆ. ಜಿತಂ ತ ಆತ್ಮವಿದ್ಧುರ್ಯ ಸ್ವಸ್ತಯೇ ಸ್ವಸ್ತಿರಸ್ತು ಮೇ ಎಂದು ಭಾಗವತ ಪುರಾಣದ ೪ನೇ ಸ್ಕಂದದಲ್ಲಿ ಬರುತ್ತದೆ. ನನಗೆ ಮಂಗಲವಾಗಲಿ ಎನ್ನುವ ಆಶಯ ಅದು. ಸ್ವಸ್ತಿ ತೇ ಅಸ್ತ್ವಾಂತರಿಕ್ಷೇಭ್ಯಃ ಪಾರ್ಥಿವೇಭ್ಯಶ್ಚ ಭಾರತ ಎಂದು ವನಪರ್ವದಲ್ಲಿ ಸ್ವಸ್ತಿವಾಚನ ಬರುತ್ತದೆ.
ಚಾನ್ವಾಚಯಸಮಾಹಾರೇತರೇತರಸಮುಚ್ಚಯೇ |
ಸ್ವಸ್ತ್ಯಾಶೀಃ ಕ್ಷೇಮಪುಣ್ಯಾದೌ ಪ್ರಕರ್ಷೇ ಲಙ್ಘನೇಽಪ್ಯತಿ || ಎಂದು ಅಮರಕೋಶದಲ್ಲಿ ಸ್ವಸ್ತಿಯ ಕುರಿತು ಹೇಳುತ್ತಾ ಮಂಗಲಕರ, ಶುಭ, ಕ್ಷೇಮ ಎಂದು ಹೇಳಿದ್ದಾರೆ.
ಈ ಸ್ವಸ್ತಿಗಳೆಲ್ಲಾ ಹೇಗೆ ಬರಬೇಕು ಎನ್ನುವುದನ್ನು ಋಗ್ವೇದದಲ್ಲಿ ಬಹಳ ಸೊಗಸಾಗಿ ಹೇಳಲಾಗಿದೆ. ವೃದ್ಧಶ್ರವಾಃ ಎನ್ನಲಾಗಿದೆ. ವೃದ್ಧಶ್ರವಾಃ ಎನ್ನುವುದರಲ್ಲಿ ವೃದ್ಧಃ ಅಂದರೆ ಪ್ರಭೂತವಾದ ಅಥವಾ ಹೇರಳವಾದ ಎಂದು ಅರ್ಥ. ವೃದ್ಧ ಎನ್ನುವುದು ಮಾಗಿದ ಎನ್ನುವ ಅರ್ಥವೇ ಹೊರತು ವಯಸ್ಸಿಗೆ ಅಲ್ಲ. ಶ್ರವಃ ಎಂದರೆ ಶ್ರವಣಂ, ಸ್ತೋತ್ರಂ ಎನ್ನುತ್ತಾರೆ. ಅಂದರೆ ಮಾತು ಅಥವಾ ಸ್ತುತಿರೂಪ ಎಂದು ಅರ್ಥ. ಯಥೇಚ್ಚವಾದ ಹವಿಸ್ಸಿನ ರೂಪವಾದ ಸಂಪತ್ತುಳ್ಳ ಅಥವಾ ಅನ್ನವುಳ್ಳ ಇಂದ್ರನು ನಮಗೆ ಒಳ್ಳೆಯದನ್ನು ಮಾಡಲಿ. ನಮಗೆ ಮಂಗಲವನ್ನು ಮಾಡಲಿ.
ಇದನ್ನೇ ಋಗ್ವೇದದ ಒಂದನೇ ಮಂಡಲದ 89ನೇ ಸೂಕ್ತದಲ್ಲಿ. . . .
ಸ್ವಸ್ತಿನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನಃ ಪೂಷಾ ವಿಶ್ವವೇದಾಃ |
ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದಧಾತು ||
ಎನ್ನುವಲ್ಲಿ ಪೋಷಕನಾದ ನಮ್ಮನ್ನು ಸಲಹುವ ದೇವನಾದ ಪೂಷದೇವನನ್ನು ನಮಗೆ ಒಳ್ಳೆಯದನ್ನು ಮಾಡು ಎಂದು ಸ್ತುತಿಸಲಾಗಿದೆ. ವಿಶ್ವವೇದಾಃ ವಿಶ್ವವನ್ನೇ ಹೊತ್ತಿರುವ ವಿಶ್ವವೇದ, ಅಂದರೆ ವೇದ ಎನ್ನುವುದು ಜ್ಞಾನಕ್ಕೆ, ಲೋಕವನ್ನೇ ಆವರಿಸಿರುವ ಈ ಜ್ಞಾನವು ನಮಗೆ ಶುಭವನ್ನು ಉಂಟುಮಾಡಲಿ. ಇಲ್ಲಿ ಬಂದಿರುವ ಅರಿಷ್ಟನೇಮಿ ಎನ್ನುವುದನ್ನು ನೇಮಿರಿತ್ಯಾಯುಧನಾಮ ನೇಮಿ ಎನ್ನುವುದು ಆಯುಧದ ಹೆಸರು ಎನ್ನುತ್ತಾರೆ. ಅಕುಂಠಿತವಾದ ಆಯುದವುಳ್ಳ ಅಥವಾ ಸವೆಯದಿರುವ ರಥದ ಚಕ್ರವುಳ್ಳ ಎನ್ನುವ ಅರ್ಥ ಕೊಡುತ್ತಾ ತಾರ್ಕ್ಷ್ಯಃ ಎನ್ನುತ್ತಾರೆ. ಅಂದರೆ ಅಕುಂಠಿತವಾದ ಆಯುಧವುಳ್ಳ ಅಥವಾ ಸವೆಯದಿರುವ ರಥದ ಚಕ್ರವುಳ್ಳ ತಾರ್ಕ್ಷ್ಯನು. ತಾರ್ಕ್ಷ್ಯ ಎನ್ನುವುದನ್ನು ಸೂರ್ಯನಿಗೂ ಹೇಳಲಾಗುತ್ತದೆ. ತೃಕ್ಷನ ಮಗ ಸೂರ್ಯ. ದೇವಲೋಕದ ಕುದುರೆಯನ್ನೂ ಹಾಗೆ ಕರೆಯಲಾಗುತ್ತದೆ. ಪಕ್ಷಿಯೊಂದಕ್ಕೆ ಮತ್ತು ತ್ರಸದಸ್ಯುವಿನ ಮಗನೂ ತಾರ್ಕ್ಷ್ಯ ಎಂದು ಹೇಳಲಾಗುತ್ತದೆ. ನಾಶರಹಿತವಾದ ಮಂಗಳವನ್ನು ಇವರೆಲ್ಲರ ಜೊತೆಗೆ ದೇವಗುರು ಬೃಹಸ್ಪತಿಯೂ ಮಾಡಲಿ ಎನ್ನಲಾಗಿದೆ. ಅಂಅದರೆ ನಾವಿಲ್ಲಿ ಇಡೀ ವಿಶ್ವದ ಜ್ಞಾನವು ನಮ್ಮನ್ನು ರಕ್ಷಿಸಲಿ ಎನ್ನುತ್ತೇವೆಯೇ ಹೊರತು ನಮ್ಮಲ್ಲಿ ಮಾತ್ರ ಜ್ಞಾನ ಎನ್ನುವುದಿಲ್ಲ. ಹಾಗೂ ಇಡೀ ವಿಶ್ವದ ಎಲ್ಲಾ ಬಗೆಯ ಜ್ಞಾನ ನಮ್ಮನ್ನು ರಕ್ಷಿಸುತ್ತದೆ ಎನ್ನುವುದು ಎಷ್ಟೊಂದು ವಿಶಾಲವಾದ ಆಶಯವನ್ನು ಕೊಡುತ್ತದೆ. ನಮ್ಮ ರಾಜರುಗಳ ಆಸ್ಥಾನಗಳಲ್ಲಿ ಸ್ವಸ್ತಿವಾಚಕನೆನ್ನುವವನು ದಿನಾ ಸ್ವಸ್ತಿವಾಚನ ಮಾಡಬೇಕಿತ್ತು. ಓಂ ಸ್ವಸ್ತಿ.
#ಓಂ_ಸ್ವಸ್ತಿ
ಸದ್ಯೋಜಾತರು
No comments:
Post a Comment
If you have any doubts. please let me know...