May 17, 2021

ರುದ್ರಾಂಶ ಸಂಭೂತ ಹನುಮಂತ ಭಾಗ-೦೪

ರುದ್ರಾಂಶ ಸಂಭೂತ ಹನುಮಂತ  ಭಾಗ-೦೪

ಹನುಮದ್ರಹಸ್ಯ ನಿರ್ಣಯ :- 

ಸೂಚನೆ : ಭಕ್ತಿಯಿಂದ ಬೇಕಾದಾಷ್ಟು ಹಂಚಿಕೊಳ್ಳೀ

ಹನೂಮಂತನು ರುದ್ರಾಂಶ ಸಂಭೂತನೆಂಬುದು ನಿರ್ವಿವಾದ.ಬಹುಷಃ ವೇದಸ್ಮೃತಿಗಳ ಮೂಲಬಲ್ಲವರಿಗೆ ಇದು ಸಮಸ್ಯೆಯಾಗುವದಿಲ್ಲ.ಈ ಬರಹದಲ್ಲಿ ಹಲವಾತು ಗ್ರಂಥಗಳಲ್ಲಿ ಹನುಮಂತನ ಜನ್ಮದ ಬಗ್ಗೆ ಉಲ್ಲೇಖಿಸಿರುವ  ವಿಷಯಗಳನ್ನು ತಿಳಿಸಿಕೊಡುತ್ತೇನೆ.

ಲಿಂಗ ಪುರಾಣ:- 

ಪವನಾತ್ಮಾ ಬುಧೈರ್ದೇವ ಈಶಾನ ಇತಿ ಕೀರ್ತ್ಯತೇ  | ಈಶಾನಸ್ಯ ಜಗತ್ಕರ್ತುರ್ದೇವಸ್ಯ ಪವನಾತ್ಮನಃ  || ೨,೧೩.೯ ||

ಶಿವಾ ದೇವೀ ಬುಧೈರುಕ್ತಾ ಪುತ್ರಶ್ಚಾಸ್ಯ ಮನೋಜವಃ  | ಚರಾಚರಾಣಾಂ ಭೂತಾನಾಂ ಸರ್ವೇಷಾಂ ಸರ್ವಕಾಮದಃ  || ೨,೧೩.೧೦ ||

ಜ್ಞಾನಿಗಳು ಸಕಲಜಗತ್ಕರ್ತೃ,ಸಕಲ ಸೃಷ್ಟಿಯನ್ನೂ ಪ್ರವೇಶಿಸಿ , ಅವುಗಳ ಹೃದಯದೊಳಗಿರುವವನೂ ಆದ ,ಅಷ್ಟಮೂರ್ತಿಗಳಲ್ಲಿ ಒಂದಾದ ಈಶಾನನೂ  ಶ್ರೀ ಮಹಾದೇವನೇ ಆಗಿದ್ದಾನೆ. ಈ ಪವನದೇವ ಎಂದು ಪ್ರಸಿದ್ಧನಾದ ಹನೂಮಂತ ಎಂಬುವನು   ಶಿವೆಯನ್ನು ಪತ್ನಿಯಾಗಿ ಹೊಂದಿರುವ ಈ ಪರಮೇಶ್ವರನ ಮಗನೇ ಆಗಿದ್ದಾನೆ. ಈ ಪವನ ಎಂಬುವಾತನ  ಅಂತರ್ಯಾಮಿಯಾದ ಆತ್ಮನೇ ಶಿವನು. ಈತನೇ ಚರಾಚರಗಳಿಗೂ ಸರ್ವಕಾಮನೆಗಳನ್ನೂ ಕರುಣಿಸುವವನಾಗಿದ್ದಾನೆ. 

ವಾಯುಪುರಾಣ:- 

ಆಶ್ವಿನಸ್ಯಾಽಸಿತೇ ಪಕ್ಷೇ ಸ್ವಾತ್ಯಾಂ ಭೌಮೇ ಚತುರ್ದಶೀ | ಮೇಷಲಗ್ನೇಽಞ್ಜನೀಗರ್ಭಾತ್ ಸ್ವಯಂ ಜಾತೋಹರಃ ಶಿವಃ || 

ಆಶ್ವಯುಜ ಮಾಸದ (ಅಥವಾ ಶುಭಸೂಚನೆಗಳುಳ್ಳ ಎಂಬ ಅರ್ಥವೂ ಬರುತ್ತದೆ ) ಸ್ವಾತೀ ನಕ್ಷತ್ರವುಳ್ಳ  ಕೃಷ್ಣಪಕ್ಷದ ಚತುರ್ದಶೀ ಮೇಷಲಗ್ನದಲ್ಲಿ  ಅಂಜನಿಯ ಗರ್ಭದಲ್ಲಿ ಹರನೂ ಶಿವನೂ ಎನಿಸಿಕೊಳ್ಳುವನು ತನ್ನ ಅಂಶದಿಂದ ಭೂಲೋಕದಲ್ಲಿ ಅವತರಿಸಿದನು.

ಅಗಸ್ತ್ಯ ಸಂಹಿತಾ :- 

ಊರ್ಜೇ ಕೃಷ್ಣಚತುರ್ದಶ್ಯಾಂ  ಭೌಮೇ ಸ್ವಾತ್ಯಾಂ ಕಪೀಶ್ವರಃ |  ಮೇಷಲಗ್ನೇಽಞ್ಜನೀಗರ್ಭಾತ್  ಪ್ರಾದುರ್ಭೂತಂ ಸ್ವಯಂ ಶಿವಃ || 

ಕಾರ್ತೀಕಮಾಸ (ಪುರಾಣದಲ್ಲಿ ಹೇಳಿರುವ ಆಶ್ವಯುಜಮಾಸ ಎನ್ನುವ ವ್ಯತ್ಯಾಸ)  ಸ್ವಾತೀ ನಕ್ಷತ್ರವುಳ್ಳ  ಕೃಷ್ಣಪಕ್ಷದ ಚತುರ್ದಶೀ ಮೇಷಲಗ್ನದಲ್ಲಿ  ಅಂಜನಿಯ ಗರ್ಭದಲ್ಲಿ ಶಿವನು ತನ್ನ ಅಂಶದಿಂದ ಭೂಲೋಕದಲ್ಲಿ ಪ್ರಾದುರ್ಭವಿಸಿದನು.

ಬ್ರಹ್ಮಾಂಡ ಪುರಾಣ: 

ಕೇಸರೀ ಕುಞ್ಜರಸ್ಯಾಥ ಸುತಾಂ ಭಾರ್ಯಾಮವಿನ್ದತ  || ೨,೭.೨೨೩ ||

ಅಞ್ಜನಾ ನಾಮ ಸುಭಾಗಾ ಗತ್ವಾ ಪುಂಸವನೇ ಶುಚಿಃ  | ಪರ್ಯುಪಾಸ್ತೇ ಚ ತಾಂ ವಾಯುರ್ಯೌಂವನಾದೇವ ಗರ್ವಿತಾಮ್  || ೨,೭.೨೨೪ ||

ತಸ್ಯಾಂ ಜಾತಸ್ತು ಹನುಮಾನ್ವಾಯುನಾ ಜಗದಾಯುನಾ  | ಯೇ ಹ್ಯನ್ಯೇ ಕೇಸರಿಸುತಾ ವಿಖ್ಯಾತಾ ದಿವಿ ಚೇಹ ವೈ  || ೨,೭.೨೨೫ ||

ಜ್ಯೇಷ್ಠಸ್ತು ಹನುಮಾಂಸ್ತೇಷಾಂ ಮತಿಮಾಂಸ್ತು ತತಃ ಸ್ಮೃತಃ  | ಶ್ರುತಿಮಾನ್ಕೇತುಮಾಂಶ್ಚೈವ ಮತಿಮಾನ್ಧೃತಿಮಾನಪಿ  || ೨,೭.೨೨೬ ||

ಶ್ಲೋಕ ಭಾವಾರ್ಥ .

ಕೇಸರೀ ಎಂಬುವ ರಾಜನು ಕುಂಜರ ಮಹರ್ಷಿಯ ಮಗಳಾದ ಅಂಜನಾ ಎಂಬುವವಳನ್ನು ಮದುವೆಯಾದನು. ಅತ್ಯಂತ ಸುಂದರಳಾದ ಅಂಜನಾದೇವಿಯಿಂದ ಪುತ್ರಾಕಾಂಕ್ಷೆಯನ್ನು ಹೊಂದಿದ್ದ ವಾಯುದೇವನು  ಅಂಜನಾ ದೇವಿಯ ದೇಹವನ್ನು ಮನಸ್ಸಿನ ಮೂಲಕ ಪ್ರವೇಶಿಸಿದನು. ಅನ್ನದಿಂದ ರುದ್ರಪುತ್ರನಾದ ಅಗ್ನಿಯು ಪ್ರಕರ್ಷಣ ಗುಣವಾದ  ಶುಚಿ ಎಂಬ ರೂಪದಿಂದ (ಶುಚಿ ,ಪಾವಕ ಮತ್ತು ಪವನ ಎಂಬುವದು ಅಗ್ನಿಯ ಮೂರು ಗುಣಗಳು,ಅಗ್ನಿಯ ಮೂರನೇ ಗುಣದಿಂದಲೇ ವಾಯುವಿನ ಉತ್ಪತ್ತಿ ಎಂಬುದಾಗಿ ವೇದಗಳು ಹೇಳುತ್ತಿವೆ. ಅಗ್ನಿಯ ಮೊದಲ ಗುಣ ಪಾವಕ ಎಂಬುವದು ದ್ಯುಲೋಕದಲ್ಲಿ ತೇಜಸ್ಸಿನ ಗುಣದಿಂದ ಇರುತ್ತದೆ. ಶುಚಿ ಎಂಬುವದು ಕ್ಷೇತ್ರ ಅರ್ಥಾತ್ ಭೂಮಿಯಲ್ಲಿ ಇರುವ ಗುಣ , ದ್ಯುಲೋಕ ಮತ್ತು ಭೂಲೋಕದ ನಡುವಿನ ಐಶ್ವರ್ಯಕ್ಕಾಗಿ ವಾಯುವನ್ನು ದ್ಯಾವಾಪೃಥಿವೀಗಳು ಸೃಷ್ಟಿಸಿ ಕೊಂಡವು ಎಂಬುದಾಗಿ ವೇದಗಳು ಹೇಳುತ್ತಿವೆ. ಅಗ್ನಿಯು ತೇಜಸ್ಸು ಎಂಬ ಅಗ್ನಿಯ ಮೂರನೇ ರೂಪದಿಂದ ದ್ಯುಲೋಕ ಮತ್ತು ಭೂಲೋಕವನ್ನೂ ಮೀರಿ ಸೂರ್ಯಲೋಕದವರೆಗೂ ವ್ಯಾಪಿಸಿ ಕೊಂಡಿರುವ ಸೃಷ್ಟಿ ವೈಚಿತ್ರವನ್ನು ಋಗ್ವೇದದ ಬಳಿತ್ಥಾ ಸೂಕ್ತದಲ್ಲಿ ಕಾಣಬರುತ್ತ್ದೆ.ಅಜ್ಞರು ಈ ಮೂರನೆಯ ತತ್ತ್ವವನ್ನು ಪ್ರಾಣಾಗ್ನಿ ಎಂಬುದಾಗ್ನಿ ಕರೆಯುತ್ತಾರಾದರೂ ಇದು ಯಾವ ಭೂಲೋಕದ ಅವತಾರವನ್ನೂ ಹೇಳುತ್ತಿಲ್ಲ ಎಂಬುವದನ್ನು ನಮ್ಮ ರುದ್ರಾವಲೋಕನದಲ್ಲಿ ಈಗಾಗಗಲೇ ಸಾಧಾರ ತೋರಿಸಿಕೊಟ್ಟಿದ್ದೇವೆ )    ಕೇಸರೀ ವೀರ್ಯದಲ್ಲಿ ಸೇರಿಕೊಂಡು ಅಂಜನಾದೇವಿಯ ಯೋನಿಯನ್ನು ಸೇರಿ  ಜಗತ್ತಿಗೆ ಆಯುಃ ಕಾರಕನಾದ ವಾಯುವಿನ ಅಂಶವನ್ನು ಸಮ್ಮಿಲೀಕರಿಸಿಕೊಂಡು ಹನೂಮಾನ್ ಎಂಬುವನಾಗಿ ಹುಟ್ಟಿದನು. ಹನುಂತನಿಗೆ ,ಮತಿಮಾನ್, ಶ್ರುತಿಮಾನ್,ಕೇತುಮಾನ್ ಮತ್ತು ಧೃತಿಮಾನ್ ಎಂಬ ಸಹೋದರರೂ ಇದ್ದಾರೆ.

ಭವಿಷ್ಯ ಪುರಾಣದಲ್ಲಿಯೂ ಬ್ರಹ್ಮಾದಿ ದೇವತೆಗಳು ಶ್ರೀವಿಷ್ಣುವಿನ ಸಹಾಯಕ್ಕಾಗಿ ತ್ರೇತಾಯುಗದಲ್ಲಿ ಅವತರಿಸುವಂತೆ ರುದ್ರನನ್ನು ಪ್ರಾರ್ಥಿಸುತ್ತಾರೆ ಎಂಬವಿಷಯವನ್ನೂ ವ್ಯಾಸರೇ ಹೇಳಿದ್ದಾರೆ.

 

ಹನೂಮಂತನು ರುದ್ರಾಂಶ ಸಂಭೂತನೋ ಅಲ್ಲವೋ ಎಂಬ ಪ್ರಶ್ನೆ.  ಇದಕ್ಕೆ ಪುರಾಣಗಳಲ್ಲಿ ಸಾಕಷ್ಟು ಪ್ರಮಾಣಗಳಿವೆ. ರುದ್ರನೇ ಪ್ರಾಣನು ಎಂಬುದಾಗಿ ವೇದೋಪನಿಷತ್ತುಗಳು ಸಾರುತ್ತಿವೆ. ರುದ್ರನೇ ಮರುದ್ದೇವತೆಗಳ ಪಿತನು *ಆ ತೇ ಪಿತಃ ಮರುತಾಂ* ಎಂಬುದನ್ನೂ ವೇದಗಳೂ ಪುರಾಣೇತಿಹಾಸಗಳೂ ಘಂಟಾಘೋಷವಾಗಿ ಸಾರುತ್ತಿವೆ.

ವಾಲ್ಮೀಕಿ ರಾಮಾಯಣದಲ್ಲಿ ಹನೂಮಂತನು ವಾಯು ಅಂಶದಿಂದ  ಕೇಸರೀ ಅಂಜನಾದೇವಿಯರ ಕ್ಷೇತ್ರದಲ್ಲಿ ಜನಿಸಿದವನೆಂದೂ ಹೇಳುತ್ತಿರುವದರಲ್ಲಿ ಯಾವುದೇ ಸಂಶಯವಿಲ್ಲ. 

ಈಗ ಕೆಲವು ವೇದೋಕ್ತ ಯುಕ್ತಿಗಳನ್ನು ನೋಡೋಣ. ವೇದಗಳು ರುದ್ರನೇ ನಾನಾ ರೂಪಗಳಿಂದ ಅವತರಿಸಿದ್ದಾನೆ ಎಂಬುದಾಗೀ ಸಾರುತ್ತಿರುವದು ಶತರುದ್ರೀಯದಲ್ಲಿ ಸುಪ್ರಸಿದ್ಧವಾಗಿದೆ. ಇಲ್ಲಿ ರುದ್ರನೇ ಜಲವು ,ಆಕಾಶವು,ಓಷಧಿವನಸ್ಪತಿ ,ವಾಯು, ಅಗ್ನಿ , ರುದ್ರನು ಪೂರ್ವವೇ ಮೊದಲಾದ ದಿಕ್ಕುಗಳು ,ಈತನೇ ದೇವಾದಿದೇವತೆಗಳ ಹೃದಯಲ್ಲಿ ಪ್ರವೇಶಿಸಿದ್ದಾನೆ , ಇವನೇ ಕ್ಷೇತ್ರಪತಿಯು, ಗುಣ ಮತ್ತು ಅಭಿಮಾನ ಸಂಬಂಧ ದೈವತ್ವದ ಸಕಲ ಕಕ್ಷೆಗಳಿಗೂ ರುದ್ರನೇ  ಅಧಿಪತಿಯು (ಯಾವುದೇ ತಾರತಮ್ಯವಿದ್ದರೂ ಅಂಥ ಪದವಿಗಳೆಲ್ಲಕ್ಕೂ ಈತನೇ ಅಧಿಪತಿ , ಅರ್ಥಾತ್ ಅವರವರ ಯೋಗ್ಯತೆಗನುಗುಣವಾಗಿ ಬ್ರಹ್ಮ,ಇಂದ್ರ,ಅಗ್ನಿ,ವಾಯು,ವರುಣ ,ಗರುಡ,ಶೇಷ ,ಪ್ರಕೃತಿ ಮುಂತಾದವುಗಳೆಲ್ಲಕ್ಕೂ ಪದವಿಯನ್ನು ಕೊಡುವಂಥವನೇ ರುದ್ರನು ಎಂದರ್ಥ.ಈತನೇ ನಾರಾಯಣನು.  ಈ ಪದವಿಯಲ್ಲಿ ಈತನೇ ಮೊದಲು , ಈತನೇ ಕೊನೆಯಲ್ಲೂ  ಈತನೇ ಮಧ್ಯದಲ್ಲಿಯೂ ಇರುವವನು. ಇರುವನೊಬ್ಬನೇ ರುದ್ರನು ,ಅಸಂಖ್ಯಾತ ಸಹಸ್ರನಾಗಿರುವನು ,ಇವನ ರೂಪಗಳಾಗಲೀ ,ನಾಮಗಳಾಗಲೀ ಯಾರ ಸ್ಮೃತಿಯಲ್ಲಿರಲೂ ಸಾಧ್ಯವೇ ಇಲ್ಲ ಹೀಗೆ ವೇದಗಳು ಸಾರುತ್ತಿವೆ) 

ಪ್ರಾಣ ಎಂದರೇ ಯಾರು ಎಂಬ ಪ್ರಶ್ನೆಗೆ ಏಕಾದಶ ರುದ್ರರೇ ಪ್ರಾಣಗಳು  *ಪ್ರಾಣಾ ವೈ ರುದ್ರಾಃ*  ಎಂದು ವೇದಗಳು ಉತ್ತರ ಹೇಳುತ್ತವೆ. ಆಕಾಶ ಎಂದರೇ ಯಾರು ಎಂಬುದಕ್ಕೂ ರುದ್ರನ ಶರೀರವೇ ಆಕಾಶ *ಆಕಾಶ ಶರೀರಂ ಬ್ರಹ್ಮ*  ಎಂದೂ ಇದೇ ವೇದಗಳು ಘೋಷವನ್ನು ಮಾಡುತ್ತಿವೆ. ರುದ್ರನೇ ಪ್ರಾಣನು,ರುದ್ರನ ಶರೀರವೇ ಆಕಾಶವು ಎಂದ ಮೇಲೇ ಪುರುಷ ಸೂಕ್ತದಲ್ಲಿ *ಪ್ರಾಣಾದ್ವಾಯುರಜಾಯತ* ಎಂದು ಹೇಳಿದರೇ ಉಪನಿಷತ್ತುಗಳು *ಆಕಾಶಾದ್ವಾಯುಃ*  * ಅಗ್ನಿರ್ವಾಯುಃ-ವಾಯೋರಗ್ನಿಃ * ಎಂಬ ಪರಸ್ಪರ ಅನುಲೋಮ ವಿಲೋಮ ತತ್ತ್ವವನ್ನು ಹೇಳುತ್ತಿದೆ. ವಾಯುವಿನ ನೆಲೆ ಮಧ್ಯಲೋಕ ಅರ್ಥಾತ್ ಭೂಲೋಕ ಮತ್ತು ದ್ಯುಲೋಕದಲ್ಲೇ ಮಾತ್ರವೇ ಇವನ ಸಂಚಾರ. ವಾಯುವಿಗೆ ತೇಜೋಗ್ನಿಗಳಿಗಿರುವಂತೆ ಸರ್ವವ್ಯಾಪಕತ್ವ ಇಲ್ಲ,ವೈಜ್ಞಾನಿಕವಾಗಿಯೂ ಇದು ಸತ್ಯವೇ ಆಗಿದೆ. ವಾಯು ಇಲ್ಲದ ನೆಲಯನ್ನು ನಿರ್ವಾತ ಅಥವಾ ವ್ಯಾಕ್ಯೂಮ್ ಎನ್ನುತ್ತಾರೆ.ಹೀಗಾಗಿ ವಾಯು ಎಂದರೇ ಎಲ್ಲಿಯೂ ರುದ್ರಾಂಶದಿಂದ ಬಿಡುಗಡೆಯೇ ಇಲ್ಲ,ಆದ್ದರಿಂದ ಹನುಮಂತನು ವಾಯುಪುತ್ರ ಎಂದರೇ ರುದ್ರಾಂಶ ಸಂಭೂತನೇ ಎಂಬುವದರಲ್ಲಿ ಸಂಶಯವೇ ಇಲ್ಲ. 

ಇನ್ನೊಂದು ಆಯಾಮ ನೋಡೋಣ.

ಹನುಂತನಿಗೆ *ರುದ್ರವೀರ್ಯಸಮುದ್ಭವಃ* ಎಂಬ ನಾಮಧೇಯ  ಪರಾಣದಲ್ಲಿನ ಉಲ್ಲೇಖವನ್ನೂ ಪರೀಕ್ಷಿಸೋಣ.

ವಾಲ್ಮೀಕಿ ರಾಮಾಯಣ.

ಅಹಂ ಕೇಸರಿಣಃ ಕ್ಷೇತ್ರೇ ವಾಯುನಾ ಜಗದಾಯುಷಾ | ಜಾತಃ ಕಮಲಪತ್ರಾಕ್ಷ ಹನೂಮಾನ್ನಾಮ ವಾನರಃ  || ೦೩೧೪೭೦೨೪ ||

ಕೇಸರಿ ಎಂಬ ಕ್ಷೇತ್ರ ಅರ್ಥಾತ್ ವೀರ್ಯದಿಂದ ವಾಯುವಿನ ಅಂಶದಲ್ಲಿ ನಾನು ಹುಟ್ಟಿದೆನು ಎಂಬುದಾಗಿ ಹನುಮಂತನು ಹೇಳುತ್ತಾನೆ. ಇದೇ ವಾಲ್ಮೀಕಿ ರಾಮಾಯಣದಲ್ಲಿ ಕೇಸರೀ ಎಂಬ ವಾನರ ರಾಜನ ಬಗ್ಗೆ ಸ್ವಾರಸ್ಯಕರ ವಿಚಾರವನ್ನೂ ಕೊಟ್ಟಿದೆ.

ವಾಲ್ಮೀಕಿ ರಾಮಾಯಣ.

ಪಿತಾ ಹನುಮತಃ ಶ್ರೀಮಾನ್ ಕೇಸರೀ ಪ್ರತ್ಯದೃಶ್ಯತ || ೪.೦೩೮.೦೧೭|| 

ಗದ್ಗಸ್ಯೈವ ಪುತ್ರೋಽನ್ಯೋ ಗುರುಪುತ್ರಃ ಶತಕ್ರತೋಃ | ಕದನಂ ಯಸ್ಯ ಪುತ್ರೇಣ ಕೃತಮೇಕೇನ ರಕ್ಷಸಾಮ್  || ೬.೦೨೧.೦೨೧ ||

ರಾವಣನು ತನ್ನ ಗೂಢಾಚಾರರನ್ನು ಕಳುಹಿಸಿ ಶತ್ರುಸೈನ್ಯದ ವಿಚಾರವನ್ನು ತಿಳಿದುಕೊಳ್ಳುವಾಗ ಗೂಢಚಾರರು ವಾನರರ ಪರಿಚಯ ಮಾಡಿಕೊಡುತ್ತಾ ಈ ಮಾತುಗಳನ್ನು ಹೇಳುತ್ತಾರೆ. 

ಈ ಕೇಸರೀ ಎಂಬುವವನು ಹನುಮಂತನ ತಂದೆಯಾಗಿರುವನು. ಗದ್ಗದ ಎಂಬ ಬಲಿಷ್ಠ ವಾನರರ ಪುತ್ರರೂ ಇದ್ದಾರೆ.ಇದರಲ್ಲಿ ಪ್ರಮುಖನಾದ ದೇವೇಂದ್ರನ(ಶತಕ್ರತು) ಗುರುವಾದ ಬೃಹಸ್ಪತಿ ಎಂಬುವರ ಮಗನಾದ ಕೇಸರೀ ಎಂಬ ವಾನರನ ಮಗನೇ ಹನುಮಂತನು. ಈ ವಾನರಸಿಂಹನೇ ಏಕಾಂಗಿಯಾಗಿ ಹಿಂದೆ ಅಶೋಕವನವನ್ನು ಭೇದಿಸಿ ಸಹಸ್ರಾರು ರಾಕ್ಷಸರನ್ನು ಕೊಂದುಹಾಕಿದನು.

ಮೇಲೆ ತಿಳಿಯುವ ವಿಷಯ ಏನೆಂದರೇ ಮಹಾಭಾರತದಲ್ಲಾಗಲೀ ,ಪುರಾಣಗಳಲ್ಲಾಗಲೀ ಎಲ್ಲಿಯೂ ಕೇಸರಿಯ ತಂದೆಯ ಹೆಸರು ಉಲ್ಲೇಖವೇ ಆಗಿಲ್ಲ. ಆದರೂ ವಾಲ್ಮೀಕಿ ಮಹರ್ಷಿಗಳು ಹೀಗೆ ಏಕಾ ಏಕಿ  ಕೇಸರೀ ಎಂಬ ವಾನರನಿಗೆ ಬೃಹಸ್ಪತಿಗಳೇ ತಂದೇ ಎಂದು ಹೇಳುವದಕ್ಕೂ ಏನು ಸಂಬಂಧ ಎಂದು ನೋಡಿದಾಗ *ತೈತ್ತಿರೀಯ ಅರಣ್ಯಕದಲ್ಲಿ *ಪುತ್ರೋ ಬೃಹಸ್ಪತೀ ರುದ್ರಃ* ಅರ್ಥಾತ್ ಬೃಹಸ್ಪತಿಯು ರುದ್ರನ ಮಗನೇ ಆಗಿದ್ದಾನೆ ಎಂಬ ವಿಷಯ ತಿಳಿಯುತ್ತದೆ

ಇದೆಲ್ಲಕ್ಕಿಂತ ಸಾಕ್ಷಾತ್  ನಾರಾಯಣ ಪಂಡಿತನೇ ಕೇಸರೀ ಎಂಬುವವನು ಪೂರ್ವದಲ್ಲಿ ಒಂದಾನೊಂದು ಮರುದ್ದೇವತೆಯೇ ಆಗಿದ್ದನು ಎಂಬುದಾಗಿ ಹೇಳಿರುವದು ಸಮಂಜಸವೇ ಆಗಿದೆ. ಹಾಗಾಗಿ ದೇವತಾ ತಾರತಮ್ಯ ಎಂಬ ವೇದವಿರುದ್ಧ ವೈಷಮ್ಯಕ್ಕೆ ಗಂಟು ಬಿದ್ದು ಒಂದು ವೇಳೇ ವಾಯು ರುದ್ರಾಂಶ ಅಲ್ಲ ಎಂಬ ವೇದವಿರುದ್ಧ ಅಭಿಪ್ರಾಯ ಹೇಳಿದರೂ ,ಕೇಸರಿಯೇ ಪುರ್ವದಲ್ಲಿ ಒಂದಾನೊಂದು ಮರುದ್ದೇವತೆ ಆಗಿದ್ದನು ಎಂಬ ವೇದೋಕ್ತ ನೆಲೆಯಲ್ಲೀ ಯಾವ ಸಂಶಯವೂ ಇಲ್ಲದೇ ಹನುಮಂತನು ಮರುದ್ದೇವತೆಯ ಅವತಾರವಾದ ಕೇಸರಿಯ ಪುತ್ರನೇ ಆಗಿದ್ದಾನೆ ಎಂಬುವದೂ ತಾನೇ ಶತಸ್ಸಿದ್ಧವಾಯಿತು.ಮರುದ್ದೇವತೆಗಳಿಗೆ ರುದ್ರನೇ ತಂದೆಯು ಎಂಬುವದೂ ವೇದಸಿದ್ಧವೇ ಆಗಿರುವದರಿಂದ ಇನ್ನು ಸಂಶಯಕ್ಕೆ ಹೆಚ್ಚು ಅವಕಾಶವಿಲ್ಲ. ಒಂದಿವೇಳೆ ಅಂಥಾ ನಿರೂಪಣೆಯು ಇದ್ದರೇ ಅವು ವೇದಶಾಸ್ತ್ರ ವಿರುದ್ಧ ಆಘಿರುವದರಿಂದ ಸರ್ವಥಾ ತಿರಸ್ಕಾರಯೋಗ್ಯವೇ ಆಗಿರುತ್ತದೆ. 

ಆದರೇ ಇಂಥ ಯಾವುದೇ ವಿಷಯಗಳು ಭಕ್ತಿಭಾವಕ್ಕೆ ತೊಡಕಾಗದಂತೆ ನೋಡಿಕೊಳ್ಳುವದೇ ಸರ್ವಧರ್ಮ ಸಮನ್ವಯದ ಭಾವ.ಹನುಮಂತನು ರುದ್ರಾಂಶ ಸಂಭೂತನಾದರೇ ಅವನು  ಮತೀಯನಾಗುವದೂ , ವಾಯುವಿನ ಅವತಾರ ಎಂದರೇ ಅವನ ಶಕ್ತಿಯು ಕುಂದುವದೂ ಇಲ್ಲ. ಇಂಥ ಬರಹವನ್ನು *ಏಕಮ್ ಸತ್* ಎಂಬ ನೆಲೆಯಲ್ಲಿ ಬರೆದಿದ್ದೇನೆ ಹೊರತೂ ಯಾರ ಭಾವವನ್ನೂ ಕೀಳಾಗಿ ಕಾಣಲು ಪ್ರೋತ್ಸಾಹಿಸಲು ಬರೆದಿಲ್ಲ. ಆದರೇ ನಿಮ್ಮ ಭಾವನೆಯನ್ನು ಇನ್ನೊಬ್ಬರ ಮೇಲೆ ಹೇರುವ ಅವಶ್ಯಕೆತೆಯೇ ಇಲ್ಲ. ನಾನೂ ಕೂಡ ಯಾರೊಬ್ಬರ ಮೇಲೂ ಈ ಶಾಸ್ತ್ರೀಯವಾದ ನಿರೂಪಣೆಯನ್ನು ಹೇರುತ್ತಿಲ್ಲ,  *ಏಕಂ ಸತ್*  ಎಂಬ ಸತ್ಯದ ಪರಿಚಯದಲ್ಲಿ ಮಾತ್ರವೇ ಹೆಚ್ಚಿನ ಅಭಿನಿವೇಶ. ದೇವತಾ ತಾರತಮ್ಯ ಪ್ರತಿಪಾದನೆ ಸಮಾಜ ಘಾತುಕ.ಅನುಷ್ಠಾನ ವೈಯಕ್ತಿಕ ವಿಷಯ.

ಹರಿ ಓಮ್ ತತ್ ಸತ್

ಸತ್ಯಪ್ರಕಾಶ.

No comments:

Post a Comment

If you have any doubts. please let me know...